Saturday, October 15, 2022

ವರ್ಷಪೂರ್ತಿ ಕ್ರಿಕೆಟ್ ತರಬೇತಿಗೆ ಅ.೧೬ರಂದು ಚಾಲನೆ

    ಭದ್ರಾವತಿ, ಅ. ೧೫ : ದಿ ವಾಲ್ ಕ್ರಿಕೆಟ್ ಕ್ಲಬ್ ವತಿಯಿಂದ ನಗರದ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಪುಲ್ ಟೈಮ್ ಕ್ರಿಕೆಟ್ ಕೋಚಿಂಗ್ ಕ್ಯಾಂಪ್ ಹಮ್ಮಿಕೊಳ್ಳಲಾಗಿದೆ.
    ೮ ರಿಂದ ೨೫ ವರ್ಷದೊಳಗಿನ ಬಾಲಕ-ಬಾಲಕಿಯರು ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ವರ್ಷಪೂರ್ತಿ ತರಬೇತಿ ನಡೆಯಲಿದ್ದು, ವೃತ್ತಿ ಪರಿಣಿತರಿಂದ ತರಬೇತಿ ನಡೆಯಲಿದೆ. ಮಹಿಳಾ ತರಬೇತಿದಾರರು ಸಹ ಶಿಬಿರದಲ್ಲಿದ್ದು, ಬೆಳವಣಿಗೆಗೆ ಪೂರಕವಾದ ಎಲ್ಲಾ ರೀತಿಯ ತರಬೇತಿ ಸಹ ನಡೆಯಲಿದೆ.
    ಅ.೧೬ರಿಂದ ಆರಂಭ :
    ಶಿಬಿರವನ್ನು ಅ.೧೬ರಂದು ಬಿ.ಎಲ್ ವೆಂಕಟೇಶ್ ಮತ್ತು ಕೆ.ಎಲ್ ಪ್ರಭು ಉದ್ಘಾಟಿಸಲಿದ್ದು, ವಿಐಎಸ್‌ಎಲ್ ಕ್ರೀಡಾಂಗಣದ ವ್ಯವಸ್ಥಾಪಕ ಮೋಹನ್ ರಾಜ್ ಶೆಟ್ಟಿ, ಕೆಎಸ್‌ಸಿಎ ಶಿವಮೊಗ್ಗ ವಲಯ ಸಂಚಾಲಕ ಡಿ.ಎಸ್ ಅರುಣ್, ವಲಯಾಧ್ಯಕ್ಷ ರಾಜೇಂದ್ರ ಕಾಮತ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಹೆಚ್ಚಿನ ಮಾಹಿತಿಗೆ ತರಬೇತಿದಾರರಾದ ಎಸ್. ಮುಬಾರಕ್, ಮೊ: ೯೯೦೦೨೬೩೫೨೪ ಅಥವಾ ಎಂ. ವಾಸು, ಮೊ: ೭೪೮೩೫೭೩೬೩೦ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಸೇತುವೆ ಕುಸಿದು ೧೫ ದಿನ ಕಳೆದರೂ ಗಮನಹರಿಸದ ಅಧಿಕಾರಿಗಳು

ದಾನವಾಡಿ, ಅರಕೆರೆ ಗ್ರಾಮಸ್ಥರ ಸಂಚಾರಕ್ಕೆ ತೊಂದರೆ

ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿ ದಾನವಾಡಿ ಗ್ರಾಮದ ಮೂಲಕ ಹಾದು ಹೋಗಿರುವ ಭದ್ರಾ ಬಲದಂಡೆ ನಾಲೆ ಸೇತುವೆ ಕಳೆದ ಸುಮಾರು ೧೫ ದಿನಗಳ ಹಿಂದೆ ಮಧ್ಯದಲ್ಲಿ ಕುಸಿದಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಲಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.
    ಭದ್ರಾವತಿ, ಅ. ೧೫: ತಾಲೂಕಿನ ಹೊಳೆಹೊನ್ನೂರು ಹೋಬಳಿ ದಾನವಾಡಿ ಗ್ರಾಮದ ಮೂಲಕ ಹಾದು ಹೋಗಿರುವ ಭದ್ರಾ ಬಲದಂಡೆ ನಾಲೆ ಸೇತುವೆ ಕಳೆದ ಸುಮಾರು ೧೫ ದಿನಗಳ ಹಿಂದೆ ಮಧ್ಯದಲ್ಲಿ ಕುಸಿದಿದ್ದು, ಸಂಬಂಧಪಟ್ಟ ಇಲಾಖೆಯವರು ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಲಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.
    ಚನ್ನಗಿರಿ ಮತ್ತು ಭದ್ರಾವತಿ ಮಾರ್ಗಕ್ಕೆ ಸಂಪರ್ಕಗೊಂಡಿರುವ ಈ ಸೇತುವೆ ದಾನವಾಡಿ ಮತ್ತು ಅರಕೆರೆ ಗ್ರಾಮಸ್ಥರಿಗೆ ಹೆಚ್ಚಿನ ನೆರವಾಗಿದ್ದು, ಸೇತುವೆ ಕುಸಿದಿರುವ ಹಿನ್ನಲೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿದೆ.  ಸೇತುವೆ ಕುಸಿದಿರುವ ಮಾಹಿತಿ ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯತನದಿಂದ ವರ್ತಿಸುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.


    ಸೇತುವೆ ಸಂಪೂರ್ಣವಾಗಿ ಕುಸಿದು ಅವಘಡಗಳು ಸಂಭವಿಸುವ ಮೊದಲು ಎಚ್ಚೆತ್ತುಕೊಂಡು ದುರಸ್ತಿ ಕಾರ್ಯ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಲ್ಲದೆ  ದುರಸ್ತಿ ಕಾರ್ಯ ಕೈಗೊಳ್ಳುವವರೆಗೂ ಯಾವುದೇ ದುರ್ಘಟನೆಗಳು ನಡೆಯದಂತೆ ತಕ್ಷಣ ಮುಂಜಾಗ್ರತೆವಹಿಸುವಂತೆ ಮನವಿ ಮಾಡಿದ್ದಾರೆ.

ಅಪಘಾತ : ಸಯ್ಯದ್ ಇರ್ಫಾನ್ ಖಾದ್ರಿ ಮೃತ

 ಸಯ್ಯದ್ ಇರ್ಫಾನ್ ಖಾದ್ರಿ
    ಭದ್ರಾವತಿ, ಅ. ೧೫: ರಸ್ತೆ ಅಪಘಾತದಲ್ಲಿ ಹಳೇನಗರದ ಕೋಟೆ ಏರಿಯಾ ಖಾಜಿಮೊಹಲ್ಲಾ ನಿವಾಸಿ ಸಯ್ಯದ್ ಇರ್ಫಾನ್ ಖಾದ್ರಿ(೪೮) ಮೃತಪಟ್ಟಿದ್ದಾರೆ.
    ದ್ವಿಚಕ್ರ ವಾಹನದಲ್ಲಿ ಶಿವಮೊಗ್ಗ ನಗರಕ್ಕೆ ತೆರಳುತ್ತಿದ್ದಾಗ ಹರಿಗೆ ಬಳಿ ಅಪಘಾತ ಸಂಭವಿಸಿದ್ದು, ತೀವ್ರ ಗಾಯಗೊಂಡಿದ್ದ ಇವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.


ಭಾರತ್ ಜೋಡೋ ಯಾತ್ರೆಯಲ್ಲಿ ಎಂಪಿಎಂ, ವಿಐಎಸ್‌ಎಲ್ ಕಾರ್ಖಾನೆಗಳ ಅಭಿವೃದ್ಧಿಗೆ ಆಗ್ರಹ


ಕಳೆದ ಕೆಲವು ವರ್ಷಗಳಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಭದ್ರಾವತಿ ಎಂಪಿಎಂ ಕಾರ್ಖಾನೆ ಪುನಃ ಆರಂಭಿಸಬೇಕು. ವಿಐಎಸ್‌ಎಲ್ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಬೇಕೆಂದು ಬಳ್ಳಾರಿ ಬಿಷಪ್ ಹೌಸ್ ಮುಂಭಾಗದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕಥ್ರುಫಲಕಗಳನ್ನು ಪ್ರದರ್ಶಿಸಿ ಆಗ್ರಹಿಸಲಾಯಿತು.
    ಭದ್ರಾವತಿ, ಅ. ೧೫ : ಬಳ್ಳಾರಿಯಲ್ಲಿ ಒಂದೆಡೆ ರಾಹುಲ್‌ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು, ಮತ್ತೊಂದೆಡೆ ಯಾತ್ರೆಯಲ್ಲಿ ಪಾಲ್ಗೊಂಡಿರುವ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ಹಾಗು ಕೇಂದ್ರ ಉಕ್ಕು ಪ್ರಾಧಿಕಾರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿದ್ದಾರೆ.
    ಕಳೆದ ಕೆಲವು ವರ್ಷಗಳಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಎಂಪಿಎಂ ಕಾರ್ಖಾನೆ ಪುನಃ ಆರಂಭಿಸಬೇಕು. ವಿಐಎಸ್‌ಎಲ್ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಬೇಕೆಂದು ಬಳ್ಳಾರಿ ಬಿಷಪ್ ಹೌಸ್ ಮುಂಭಾಗದಲ್ಲಿ ಫಲಕಗಳನ್ನು ಪ್ರದರ್ಶಿಸಿ ಆಗ್ರಹಿಸಲಾಯಿತು.
    ವಿಧಾನಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜಾ,  ರಾಜ್ಯ ಯುವ ಕಾಂಗ್ರೆಸ್ ಸಮಿತಿ ವಕ್ತಾರ ಅಮೋಸ್, ಹಿಂದುಳಿದ ವರ್ಗದಗಳ ಘಟಕದ ನಗರ ಅಧ್ಯಕ್ಷ ಬಿ. ಗಂಗಾಧರ್, ಅಸಂಘಟಿತ ಗ್ರಾಮಾಂತರ ಘಟಕದ ಅಧ್ಯಕ್ಷ ಕೃಷ್ಣನಾಯ್ಕ, ದಲಿತ ಮುಖಂಡ ನರಸಿಂಹ ಮೂರ್ತಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸತೀಶ್, ಹಿಂದುಳಿದ ವರ್ಗಗಳ ಘಟಕದ ಪದಾಧಿಕಾರಿಗಳಾದ ಜಗದೀಶ್, ಹರ್ಷ, ಹರೀಶ್, ಸಂತೋಷ್, ಕುಪೇಂದ್ರ, .ಗಣೇಶ್ ಮುಂತಾದವರು ಉಪಸ್ಥಿತರಿದ್ದರು.

Friday, October 14, 2022

ಪ್ರೊ. ಬಿ. ಕೃಷ್ಣಪ್ಪನವರ ಹೋರಾಟದ ದಾರಿ ಇಂದಿನ ಪೀಳಿಗೆಗೆ ಅವಶ್ಯಕ : ಬಿ.ಕೆ ಸಂಗಮೇಶ್ವರ್

ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಭದ್ರಾವತಿ ತಾಲೂಕು ಶಾಖೆ ವತಿಯಿಂದ ಹಳೇನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೊ. ಬಿ.ಕೃಷ್ಣಪ್ಪನವರ ೮೫ನೇ ಜನ್ಮದಿನ ಸಾಮಾಜಿಕ ನ್ಯಾಯದ ದಿನ ಹಾಗು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ಅ. ೧೪: ಶೋಷಿತರಪರವಾದ ಹೋರಾಟಗಳಿಗೆ ಧ್ವನಿಯಾಗಿ ನ್ಯಾಯ ಒದಗಿಸಿಕೊಟ್ಟ ಪ್ರೊ. ಬಿ. ಕೃಷ್ಣಪ್ಪನವರ ಹೋರಾಟದ ದಾರಿ ಇಂದಿನ ಯುವ ಪೀಳಿಗೆಗೆ ತಿಳಿಸಿಕೊಡುವ ಅನಿವಾರ್ಯತೆ ಇದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಶುಕ್ರವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ತಾಲೂಕು ಶಾಖೆ ವತಿಯಿಂದ ಹಳೇನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೊ. ಬಿ.ಕೃಷ್ಣಪ್ಪನವರ ೮೫ನೇ ಜನ್ಮದಿನ ಸಾಮಾಜಿಕ ನ್ಯಾಯದ ದಿನ ಹಾಗು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಪ್ರೊ. ಬಿ. ಕೃಷ್ಣಪ್ಪನವರು ದಲಿತರ ಪರವಾದ ಹೋರಾಟಗಳಿಗೆ ಮುನ್ನುಡಿ ಬರೆದವರು. ದಲಿತರನ್ನು ಸಂಘಟಿಸಿ ರಾಜ್ಯಾದ್ಯಂತ ಹಲವಾರು ಚಳುವಳಿಗಳನ್ನು ರೂಪಿಸಿ ಅನ್ಯಾಯದ ವಿರುದ್ಧ ನ್ಯಾಯ ಒದಗಿಸಿಕೊಟ್ಟರು. ಇವರ ಹೋರಾಟಗಳು, ಆದರ್ಶತನಗಳು ಎಂದಿಗೂ ಮಾದರಿಯಾಗಿದ್ದು, ಇಂದಿನ ಯುವ ಪೀಳಿಗೆ ಇವರ ದಾರಿಯಲ್ಲಿ ಸಾಗುವಂತಾಗಬೇಕೆಂದರು.
    ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಟಿ.ಎಚ್ ಹಾಲೇಶಪ್ಪ, ತಾಲೂಕು ಪ್ರಧಾನ ಸಂಚಾಲಕ ಎಂ. ಪಳನಿರಾಜ್, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಪ್ರಮುಖರಾದ ಮಂಗೋಟೆ ರುದ್ರೇಶ್, ಬಸವರಾಜ್ ಬಿ. ಅನೇಕೊಪ್ಪ, ಮಹಾದೇವಸ್ವಾಮಿ, ಶೇಷಪ್ಪ, ಪುಟ್ಟರಾಜ್, ಗೋಕುಲ್‌ಕೃಷ್ಣನ್, ಆನಂದಪ್ಪ, ಗೋವಿಂದರಾಜು, ಹರೀಶ್, ಗೋಪಾಲಪ್ಪ, ರುದ್ರೇಶ್, ಪ್ರಭು, ನಿಂಗಣ್ಣ, ಮೂರ್ತಿ, ಕಲ್ಲೇಶಪ್ಪ ಮತ್ತು ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಇದಕ್ಕೂ ಮೊದಲು ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಲಾಯಿತು.

ವಿಐಎಸ್‌ಎಲ್ ಖಾಸಗಿಕರಣ ಪ್ರಕ್ರಿಯೆ ಕೈಬಿಟ್ಟಿರುವುದು ತಾತ್ಕಾಲಿಕ : ಮುಂದಿನ ಹೋರಾಟ ಅಗತ್ಯ

ಪ್ರಧಾನಿ, ಕೇಂದ್ರ ಸಚಿವರು, ಸಂಸದರಿಗೆ ಕೃತಜ್ಞತೆ  : ಜಿ. ಧರ್ಮಪ್ರಸಾದ್

ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮಾತನಾಡಿದರು.
    ಭದ್ರಾವತಿ, ಅ. ೧೪: ಬಿ.ವೈ ರಾಘವೇಂದ್ರ ಸೇರಿದಂತೆ ರಾಜ್ಯದ ಎಲ್ಲಾ ಸಂಸದರು ಹಾಗು ಸ್ಥಳೀಯ ಮುಖಂಡರ ಪ್ರಯತ್ನದ ಫಲವಾಗಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಖಾಸಗಿಕರಣಗೊಳಿಸುವ ಪ್ರಕ್ರಿಯೆಯನ್ನು ತಾತ್ಕಾಲಿಕ ಕೈಬಿಟ್ಟಿದ್ದು, ಇದೀಗ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ಹೂಡುವ ಸಮಯ ಎದುರಾಗಿದೆ ಎಂದು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹೇಳಿದರು.
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗಲು ಬಂಡವಾಳಶಾಹಿಗಳು ಯಾರು ಸಹ ಮುಂದೆ ಬಾರದಿರುವ ಹಿನ್ನಲೆಯಲ್ಲಿ ಸರ್ಕಾರ ತಾತ್ಕಾಲಿಕವಾಗಿ ಖಾಸಗಿಕರಣಗೊಳಿಸುವ ಪ್ರಕ್ರಿಯೆಯನ್ನು ಕೈಬಿಟ್ಟಿದ್ದು, ಇದರಿಂದಾಗಿ ಮುಂದಿನಗಳಲ್ಲಿ ಉಕ್ಕು ಪ್ರಾಧಿಕಾರ ಬಂಡವಾಳ ಹೂಡುವ ನಿರೀಕ್ಷೆಯನ್ನು ಕ್ಷೇತ್ರದ ಜನರು ಎದುರು ನೋಡುವಂತಾಗಿದೆ ಎಂದರು.
    ಈ ಬೆಳವಣಿಗೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ರಾಜ್ಯದ ಎಲ್ಲಾ ಸಂಸದರ ಹಾಗು ಸ್ಥಳೀಯ ಮುಖಂಡರು ನಡೆಸಿದ ಪ್ರಯತ್ನ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಕೇಂದ್ರ ಸರ್ಕಾರದ ಕ್ರಮ ಕೇವಲ ತಾತ್ಕಾಲಿಕವಾಗಿದ್ದು, ಈ ಅವಧಿಯಲ್ಲಿ ನಮ್ಮ ಮುಂದಿನ ಹೋರಾಟ ರೂಪಿಸಿಕೊಳ್ಳಬೇಕಾಗಿದೆ. ಕೇಂದ್ರ ಉಕ್ಕು ಪ್ರಾಧಿಕಾರ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ಹೂಡುವಂತೆ ಒತ್ತಾಯಿಸಬೇಕಾಗಿದೆ. ಇಲ್ಲವಾದಲ್ಲಿ ಪುನಃ ಖಾಸಗಿಕರಣ ಭೀತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
    ಪ್ರಸ್ತುತ ಕಾರ್ಖಾನೆಯನ್ನು ಖಾಸಗಿಕರಣ ಪ್ರಕ್ರಿಯೆಯಿಂದ ಕೈಬಿಟ್ಟಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಹಾಗು ಉಕ್ಕು ಸಚಿವರಿಗೆ ಮತ್ತು ರಾಜ್ಯದ ಎಲ್ಲಾ ಸಂಸದರಿಗೆ ಕ್ಷೇತ್ರದ ನಾಗರೀಕರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಚನ್ನೇಶ್, ಜಿಲ್ಲಾ ಪ್ರಮುಖರಾದ ಎಂ. ಮಂಜುನಾಥ್, ಆರ್.ಎಸ್ ಶೋಭಾ, ದೇವರನರಸೀಪುರ ಚಂದ್ರು, ಕವಿತಾರಾವ್, ಬಿ.ಎಸ್ ಶ್ರೀನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಧರ್ಮಲಿಂಗಂ ನಿಧನ

ಧರ್ಮಲಿಂಗಂ
    ಭದ್ರಾವತಿ, ಅ. ೧೪ : ನಗರದ ಸೆವೆನ್ಸ್ ಕಬಡ್ಡಿ ತಂಡದ ಹಿರಿಯ ಆಟಗಾರ, ಸುರುಗಿತೋಪು ನಿವಾಸಿ ಧರ್ಮಲಿಂಗಂ(೬೫) ನಿಧನ ಹೊಂದಿದರು.
    ಓರ್ವ ಪುತ್ರ, ಓರ್ವ ಪುತ್ರಿ ಇದ್ದರು. ಧರ್ಮಲಿಂಗಂ ಎಂಪಿಎಂ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಕಬಡ್ಡಿ ಕ್ರೀಡೆಯಲ್ಲಿ ತೊಡಗಿಸಿಕೊಂಡು ಯುವ ಕ್ರೀಡಾಪಟುಗಳಿಗೆ ಮಾರ್ಗದರ್ಶಕರಾಗಿದ್ದರು.
    ಇವರ ಅಂತ್ಯಕ್ರಿಯೆ ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಶುಕ್ರವಾರ ಸಂಜೆ ನೆರವೇರಿತು. ಇವರ ನಿಧನಕ್ಕೆ ಕಬಡ್ಡಿ ಕೇಸರಿ ಪ್ರಶಸ್ತಿ ವಿಜೇತ ಎಚ್.ಆರ್ ರಂಗನಾಥ್ ಸೇರಿದಂತೆ ಕಬಡ್ಡಿ ಕ್ರೀಡಾಪಟುಗಳು ಸಂತಾಪ ಸೂಚಿಸಿದ್ದಾರೆ.