ಮಂಗಳವಾರ, ನವೆಂಬರ್ 22, 2022

೪೦ ಮಂದಿಗೆ ಉಚಿತ ದಂತ ಪಂಕ್ತಿ ಜೋಡಣೆ

ಮಂಗಳೂರಿನ ಯೆನೆಪೋಯ ಡೆಂಟಲ್ ಕಾಲೇಜು ಸಹಯೋಗದೊಂದಿಗೆ ಭದ್ರಾವತಿಯಲ್ಲಿ ರೋಟರಿ ಕ್ಲಬ್ ಮತ್ತು ಜನ್ನಾಪುರ ಕಲಾ ಡಿಜಿಟಲ್ ಸ್ಟುಡಿಯೋ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರಕ್ಕೆ ರೋಟರಿ ಕ್ಲಬ್ ಅಧ್ಯಕ್ಷ ಎಸ್. ಅಡವೀಶಯ್ಯ ಚಾಲನೆ ನೀಡಿದರು.
    ಭದ್ರಾವತಿ, ನ. ೨೨: ಮಂಗಳೂರಿನ ಯೆನೆಪೋಯ ಡೆಂಟಲ್ ಕಾಲೇಜು ಸಹಯೋಗದೊಂದಿಗೆ ನಗರದ ರೋಟರಿ ಕ್ಲಬ್ ಮತ್ತು ಜನ್ನಾಪುರ ಕಲಾ ಡಿಜಿಟಲ್ ಸ್ಟುಡಿಯೋ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರದಲ್ಲಿ ಸುಮಾರು ೪೦ ಮಂದಿ ಪಾಲ್ಗೊಂಡು ಸದುಪಯೋಗ ಪಡೆದುಕೊಂಡರು.
      ಹಿರಿಯ ನಾಗರೀಕರು ಹಾಗು ೧೮ ವರ್ಷ ಮೇಲ್ಪಟ್ಟವರಿಗೆ ರೋಟರಿ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಬಿರದ ಯಶಸ್ವಿಗೆ ಯೆನೆಪೋಯ ಡೆಂಟಲ್ ಕಾಲೇಜಿನ ವೈದ್ಯರು ಮತ್ತು ಸಿಬ್ಬಂದಿಯನ್ನೊಳಗೊಂಡ ಸುಮಾರು ೪೦ ಜನರ ತಂಡ ಹಾಗು ರೋಟರಿ ಪದಾಧಿಕಾರಿಗಳು, ಸದಸ್ಯರು ಮತ್ತು ಕಲಾ ಡಿಜಿಟಲ್ ಸ್ಟುಡಿಯೋ ಸಿಬ್ಬಂದಿಗಳು ಶ್ರಮಿಸಿದರು.
      ಶಿಬಿರಕ್ಕೆ ರೋಟರಿ ಕ್ಲಬ್ ಅಧ್ಯಕ್ಷ ಎಸ್. ಅಡವೀಶಯ್ಯ ಚಾಲನೆ ನೀಡಿದರು.  ಯೆನೆಪೋಯ ಡೆಂಟಲ್ ಕಾಲೇಜಿನ ವಿಭಾಗದ ಮುಖ್ಯಸ್ಥ ಡಾ. ಸನತ್ ಶೆಟ್ಟಿ, ಪ್ರೊಫೆಸರ್‌ಗಳಾದ ಡಾ. ರಾಜೇಶ್‌ಶೆಟ್ಟಿ, ಡಾ. ವಿದ್ಯಾ ಭಟ್, ಕಲಾ ಸ್ಟುಡಿಯೋ ಕೆವಿನ್ ಸೋಲೊಮಾನ್, ರೋಟರಿ ಕ್ಲಬ್  ಕಾರ್ಯದರ್ಶಿ ಕೆ.ಎಚ್ ಶಿವಕುಮಾರ್, ದುಷ್ಯಂತ್‌ರಾಜ್, ತೀರ್ಥಯ್ಯ, ದಯಾ ಸಾಗರ್ ಟ್ರಸ್ಟ್‌ನ ಮೋಸಸ್ ರೋಸಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಮಂಗಳೂರಿನ ಯೆನೆಪೋಯ ಡೆಂಟಲ್ ಕಾಲೇಜು ಸಹಯೋಗದೊಂದಿಗೆ ನಗರದ ರೋಟರಿ ಕ್ಲಬ್ ಮತ್ತು ಜನ್ನಾಪುರ ಕಲಾ ಡಿಜಿಟಲ್ ಸ್ಟುಡಿಯೋ ವತಿಯಿಂದ ಮಂಗಳವಾರ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರ ಆಯೋಜಿಸಲಾಗಿತ್ತು.

ಟಿಪ್ಪು ಜಯಂತಿ, ಕನ್ನಡ ರಾಜ್ಯೋತ್ಸವ

ಭದ್ರಾವತಿಯಲ್ಲಿ ದೇಶಪ್ರೇಮಿ ಟಿಪ್ಪು ಸುಲ್ತಾನ್ ಯುವಕರ ಸಂಘದ ವತಿಯಿಂದ ನಗರದ ಹೊಳೆಹೊನ್ನೂರು ವೃತ್ತದಲ್ಲಿ ಟಿಪ್ಪು ಜಯಂತಿ ಮತ್ತು ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.
    ಭದ್ರಾವತಿ, ನ. ೨೨: ದೇಶಪ್ರೇಮಿ ಟಿಪ್ಪು ಸುಲ್ತಾನ್ ಯುವಕರ ಸಂಘದ ವತಿಯಿಂದ ನಗರದ ಹೊಳೆಹೊನ್ನೂರು ವೃತ್ತದಲ್ಲಿ ಟಿಪ್ಪು ಜಯಂತಿ ಮತ್ತು ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.
      ಹೊಳೆಹೊನ್ನೂರು ವೃತ್ತದಿಂದ ಸಿ.ಎನ್ ರಸ್ತೆ, ರಂಗಪ್ಪ ವೃತ್ತ, ಮಾಧವಚಾರ್ ವೃತ್ತ ಮೂಲಕ ಬಿ.ಎಚ್ ರಸ್ತೆ ಹಾಲಪ್ಪ ವೃತ್ತ ಮೂಲಕ ಅಂಬೇಡ್ಕರ್ ವೃತ್ತದ ವರೆಗೆ ಟಿಪ್ಪು ಸುಲ್ತಾನ್ ಭಾವಚಿತ್ರದೊಂದಿಗೆ ಕನ್ನಡ ಧ್ವಜ ಹಿಡಿದು ಮೆರವಣಿಗೆ ನಡೆಸಲಾಯಿತು. ನಂತರ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುನಃ ಇದೆ ಮಾರ್ಗದಲ್ಲಿ ಹಿಂದಿರುಗಿ ಹೊಳೆಹೊನ್ನೂರು ವೃತ್ತ ತಲುಪಲಾಯಿತು.
      ಶಾಸಕ ಬಿ.ಕೆ ಸಂಗಮೇಶ್ವರ್, ಮಾಜಿ ಉಪಮೇಯರ್ ಮಹಮದ್ ಸನ್ನಾವುಲ್ಲಾ, ಪ್ರಮುಖರಾದ ಸಿ.ಎಂ ಖಾದರ್, ಫೀರ್‌ಷರೀಫ್, ಅಮೀರ್‌ಜಾನ್, ಜಹೀರ್ ಜಾನ್, ಅಮೋಸ್, ಕೃಷ್ಣನಾಯ್ಕ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ದುಶ್ಚಟಗಳಿಂದ ದೂರವಿರುವಂತೆ ಎಚ್ಚರವಹಿಸಿ : ಬಿ.ಕೆ ಸಂಗಮೇಶ್ವರ್

ಅಪೇಕ್ಷ ನೃತ್ಯ ಕಲಾ ವೃಂದ ಹಾಗು ಶ್ರೀ ಬಸವೇಶ್ವರ ಧರ್ಮಸಂಸ್ಥೆ ವತಿಯಿಂದ ಭದ್ರಾವತಿ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ, ಸಂಗೀತ ನೃತ್ಯ ಸಂಭ್ರಮ, ವಿವಿಧ ಕ್ಷೇತ್ರದ ಸಾಧಕರಿಗೆ ಪುರಸ್ಕಾರ ಮತ್ತು ಸನ್ಮಾನ ಹಾಗು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಕುವರ/ಕುವರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ನ. ೨೨: ಪೋಷಕರು ತಮ್ಮ ಮಕ್ಕಳು ಕಲೆ, ಸಾಹಿತ್ಯ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ದುಶ್ಚಟಗಳಿಂದ ದೂರವಿರುವಂತೆ ಎಚ್ಚರವಹಿಸಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
      ಅವರು ಮಂಗಳವಾರ ಅಪೇಕ್ಷ ನೃತ್ಯ ಕಲಾ ವೃಂದ ಹಾಗು ಶ್ರೀ ಬಸವೇಶ್ವರ ಧರ್ಮಸಂಸ್ಥೆ ವತಿಯಿಂದ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ, ಸಂಗೀತ ನೃತ್ಯ ಸಂಭ್ರಮ, ವಿವಿಧ ಕ್ಷೇತ್ರದ ಸಾಧಕರಿಗೆ ಪುರಸ್ಕಾರ ಮತ್ತು ಸನ್ಮಾನ ಹಾಗು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಕುವರ/ಕುವರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
      ಮಕ್ಕಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಹ ತೊಡಗಿಸಿಕೊಂಡು ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಪ್ರತಿಯೊಬ್ಬರು ಸಹ ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕೆಂದರು.
       ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್ ಪರಮೇಶ್ವರಪ್ಪ ಮಾತನಾಡಿ, ಮಕ್ಕಳ ಮುಂದಿನ ಭವಿಷ್ಯದ ಬೆಳವಣಿಗೆಯಲ್ಲಿ ಆಂಗ್ಲ ಭಾಷೆ ಹೆಚ್ಚಿನ ಪ್ರಾಮುಖ್ಯತೆ ವಹಿಸಲಿದೆ ಎಂಬ ಭಾವನೆಯಲ್ಲಿ ಕನ್ನಡ ಭಾಷೆ ಕಲಿಕೆಯಿಂದ ದೂರ ಉಳಿಯುವುದು ಸರಿಯಲ್ಲ. ಎಲ್ಲಾ ಭಾಷೆ ಮೇಲೆ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆ ಮೇಲಿನ ಅಭಿಮಾನ ಬೆಳೆಸಿಕೊಳ್ಳುವುದು ಪ್ರಸ್ತುತ ಅನಿವಾರ್ಯವಾಗಿದೆ. ಹೊಸ ಶಿಕ್ಷಣ ನೀತಿಯಲ್ಲಿ ಮಕ್ಕಳು ಕಡ್ಡಾಯವಾಗಿ ೫ನೇ ತರಗತಿವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವಂತೆ ಸೂಚಿಸಲಾಗಿದೆ. ಅಲ್ಲದೆ ಭಾಷಾ ತಜ್ಞರು ಸಹ ಮಾತೃಭಾಷೆ ಶಿಕ್ಷಣ ಕಲಿಕೆ ಕುರಿತು ಸಲಹೆ ನೀಡಿದ್ದಾರೆ. ಮಾತೃಭಾಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಇತರರಿಗೆ ಪ್ರೇರಣೆಯಾಗಿದೆ ಎಂದರು.
      ಸಮಾಜ ಸೇವಕ ಸ್ನೇಹಜೀವಿ ಉಮೇಶ್ ಮಾತನಾಡಿ, ಅತಿಹೆಚ್ಚು ಅಂಕಪಡೆದ ಮಕ್ಕಳನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯವಾಗಿದೆ. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆ ಕಾಯಿಯಂತೆ ಸಾಧನೆ ಮಾಡಿರುವ ಸಾಧಕರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿರುವುದು ಭವಿಷ್ಯದಲ್ಲಿ ಮಕ್ಕಳು ಕಲೆ, ಸಾಹಿತ್ಯ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಿದೆ ಎಂದರು.
       ಅಪೇಕ್ಷ ನೃತ್ಯ ಕಲಾ ವೃಂದ ಅಧ್ಯಕ್ಷೆ ಭಾರತಿ ಗೋವಿಂದಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.  ತಹಸೀಲ್ದಾರ್ ಆರ್. ಪ್ರದೀಪ್, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ. ಸಿದ್ದಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ಡಿ.ಎಸ್ ಶಿವಪ್ರಕಾಶ್, ಉದ್ಯಮಿಗಳಾದ ಸುಧಾಕರ ಶೆಟ್ಟಿ, ಬಿ.ಕೆ ಜಗನ್ನಾಥ ಮತ್ತು ಬಸವೇಶ್ವರ ಧರ್ಮಸಂಸ್ಥೆ ಅಧ್ಯಕ್ಷ ಶಿವಕುಮಾರ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
      ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತ ವಿಭಾಗದ ಉಪನಿರ್ದೇಶಕ ಸಿ.ಆರ್ ಪರಮೇಶ್ವರಪ್ಪರವರಿಗೆ ಶಿಕ್ಷಣ ಸಂಜೀವಿನಿ ರಾಜ್ಯ ಪ್ರಶಸ್ತಿ, ಸರ್ಕಾರಿ ಆಸ್ಪತ್ರೆ ಹಿರಿಯ ವೈದ್ಯ ಡಾ. ಎಚ್.ಆರ್ ವೀರಭದ್ರಪ್ಪರವರಿಗೆ ವೈದ್ಯಕೀಯ ರತ್ನ ರಾಜ್ಯ ಪ್ರಶಸ್ತಿ, ಅಂತರಾಷ್ಟ್ರೀಯ ಯೋಗಪಟು ಎನ್.ಪಿ ವೆಂಕಟೇಶ್‌ರವರಿಗೆ ಯೋಗ ಸಾಮ್ರಾಟ್ ರಾಜ್ಯ ಪ್ರಶಸ್ತಿ, ಬೆಂಗಳೂರಿನ ಸಂಗೀತ ಶಿಕ್ಷಕಿ ವಿದೂಷಿ ಎಸ್.ಎ ಛಾಯಾರವರಿಗೆ ಸಂಗೀತ ರತ್ನ ರಾಜ್ಯ ಪ್ರಶಸ್ತಿ, ಪೊಲೀಸ್ ನಿರೀಕ್ಷಕ ಬಿ. ಮಹಮದ್ ಸಲೀಂರವರಿಗೆ ಆರಕ್ಷಕ ರತ್ನ ರಾಜ್ಯ ಪ್ರಶಸ್ತಿ, ಹಿರಿಯ ಗಾಯಕ ಶ್ರೀವತ್ಸರಿಗೆ ಜಯಶೀಲನ್ ರಾಜ್ಯ ಪ್ರಶಸ್ತಿ, ಹುಬ್ಬಳ್ಳಿ ಜಾನಪದ ಕಲಾವಿದ ಮುತ್ತಪ್ಪ ಯಮನಪ್ಪ ಭೂತಪ್ಪಗೋಳ ಹಾಗು ಶಿವಮೊಗ್ಗ ನಿವೃತ್ತ ಶಿಕ್ಷಕ, ಜಾನಪದ ಕಲಾವಿದ ನಿಸಾರ್ ಖಾನ್ ಕೆಂಚಾಯಿಕೊಪ್ಪರಿಗೆ ಜಾನಪದ ರತ್ನ ರಾಜ್ಯ ಪ್ರಶಸ್ತಿ, ಸುರಕ್ಷಾ ವೃದ್ಧಾಶ್ರಮ ಹಾಗು ಸುರಕ್ಷಾ ಅನಾಥಶ್ರಮ ಅಧ್ಯಕ್ಷೆ ಜ್ಯೋತಿ ಸೋಮಶೇಖರ್, ಬೆಂಗಳೂರಿನ ಸಮಾಜ ಸೇವಕ ದಾಮೋದರ ರೆಡ್ಡಿ, ಸರ್ಕಾರಿ ಆಸ್ಪತ್ರೆ ನಿವೃತ್ತ ನೌಕರ ಗೋವಿಂದಪ್ಪ ಮತ್ತು ಎನ್‌ಆರ್ ಪುರದ ಅಭಿನವ ಪ್ರತಿಭಾ ವೇದಿಕೆ ಮುಖ್ಯಸ್ಥ ಅಭಿನವ ಗಿರಿರಾಜ್‌ರವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಹಾಗು ವೈ.ಎಂ ಧರ್ಮಪ್ಪ, ಆರ್. ಅನಿತ, ಬಿ.ಎಚ್ ನಿರಂಜನಮೂರ್ತಿ, ಜಿ.ಎಚ್ ಪ್ರಭು, ಡಾ. ಎನ್. ತ್ರಿವೇಣಿ, ಎಸ್.ಎನ್ ಸಿದ್ದಯ್ಯ ಮತ್ತು ಸಿ ಶೇಖರಪ್ಪರವರಿಗೆ ಶಿಕ್ಷಣ ಸೇವಾ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
      ನೃತ್ಯ ಕಲಾವಿದ, ದೈಹಿಕ ಶಿಕ್ಷಕ ಅಪೇಕ್ಷ ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಿ. ಚನ್ನಪ್ಪ ಸ್ವಾಗತಿಸಿ, ಅರಳೇಹಳ್ಳಿ ಅಣ್ಣಪ್ಪ ನಿರೂಪಿಸಿದರು. ಜಾನಪದ ಕಲಾವಿದ, ಶಿಕ್ಷಕ ರೇವಣಪ್ಪ ಸಂಗಡಿಗರು ಪ್ರಾರ್ಥಿಸಿದರು.
      ಶಿಕ್ಷಕರಾದ ಯು. ಮಹಾದೇವಪ್ಪ, ಕೋಕಿಲ, ವೈ.ಕೆ ಹನುಮಂತಯ್ಯ, ಕವಿತಾರಾವ್, ಎಲ್. ದೇವರಾಜ್, ಸುಧಾಮಣಿ, ಕವಿತಾ ಸೇರಿದಂತೆ ವಿವಿಧ ಶಾಲೆಗಳ ಮಕ್ಕಳು, ಶಿಕ್ಷಕರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಅಪೇಕ್ಷ ನೃತ್ಯ ಕಲಾ ವೃಂದ ಹಾಗು ಶ್ರೀ ಬಸವೇಶ್ವರ ಧರ್ಮಸಂಸ್ಥೆ ವತಿಯಿಂದ ಭದ್ರಾವತಿ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ, ಸಂಗೀತ ನೃತ್ಯ ಸಂಭ್ರಮ, ವಿವಿಧ ಕ್ಷೇತ್ರದ ಸಾಧಕರಿಗೆ ಪುರಸ್ಕಾರ ಮತ್ತು ಸನ್ಮಾನ ಹಾಗು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಕುವರ/ಕುವರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ , ಸುರಕ್ಷಾ ವೃದ್ಧಾಶ್ರಮ ಹಾಗು ಸುರಕ್ಷಾ ಅನಾಥಶ್ರಮ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ದಂಪತಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸೋಮವಾರ, ನವೆಂಬರ್ 21, 2022

ನ.೨೨ರಂದು ಪ್ರೌಢಶಾಲಾ ಮಕ್ಕಳಿಗೆ ತಾಲೂಕು ಮಟ್ಟದ ಸ್ಪರ್ಧೆಗಳು

ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ
    ಭದ್ರಾವತಿ, ನ. ೨೧ : ತಾಲೂಕಿನ ಪ್ರೌಢಶಾಲಾ ಮಕ್ಕಳಿಗೆ ನಗರದ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನ.೨೨ರಂದು ಬೆಳಿಗ್ಗೆ ೧೦ ಗಂಟೆಗೆ ತಾಲೂಕು ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ತಿಳಿಸಿದರು.
    ಅವರು ತಾಲೂಕು ಕಛೇರಿ ತಹಸೀಲ್ದಾರ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಪಾಲ್ಗೊಂಡು ಈ ಸಂಬಂಧ ಮಾಹಿತಿ ನೀಡಿದರು.
    ಶಾಲಾಮಟ್ಟದಲ್ಲಿ ಪ್ರಥಮ ಹಾಗು ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ. ಪ್ರಬಂಧ ಸ್ಪರ್ಧೆ ಕನ್ನಡ ಭಾಷೆಯಲ್ಲಿ 'ಭಾರತ ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು' ವಿಷಯ ಕುರಿತು ಮತ್ತು ಆಂಗ್ಲ ಭಾಷೆಯಲ್ಲಿ 'ಫಂಡಮೆಂಟಲ್ ರೈಟ್ಸ್ ಅಂಡ್ ಡ್ಯೂಟಿಸ್ ಆಫ್ ಇಂಡಿಯನ್ ಕಾನ್‌ಸ್ಟಿಟ್ಯೂಷನ್' ವಿಷಯ ಕುರಿತು ಹಾಗು ಮಾದರಿ ಮತದಾನ ಕೇಂದ್ರ ಕುರಿತು ಭಿತ್ತಿ ಚಿತ್ರ ಮತ್ತು ಚುನಾವಣೆಗೆ ಸಂಬಂಧಿಸಿದ ವಿಷಯಗಳು ರಸ ಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
    ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ನಗರಸಭೆ ಪೌರಾಯುಕ್ತ ಎಚ್.ಎಂ ಮನುಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಹಾಗು ತಾಲೂಕು ನೋಡಲ್ ಅಧಿಕಾರಿ ನವೀದ್ ಅಹಮದ್ ಪರ್ವೀಜ್ ಮೊ: ೯೮೮೬೨೧೪೧೬೦ ಕರೆ ಮಾಡಬಹುದಾಗಿದೆ  ಎಂದರು.

ದಿನಪತ್ರಿಕೆ ಏಜೆಂಟರ್ ಕೃಷ್ಣಮೂರ್ತಿ ಸಹೋದರನ ಪುತ್ರಿ ವಿವಾಹ : ಅನೇಕ ಗಣ್ಯರಿಂದ ಶುಭ ಹಾರೈಕೆ

ಭದ್ರಾವತಿ ಹುಡ್ಕೋ ಕಾಲೋನಿ ನಿವಾಸಿ, ದಿನಪತ್ರಿಕೆ ಏಜೆಂಟರ್ ಕೃಷ್ಣಮೂರ್ತಿಯವರ ಸಹೋದರ ಎನ್. ದೊಡ್ಡಸ್ವಾಮಿ -ಶ್ಯಾಮಲರವರ ಪುತ್ರಿ ಡಿ. ನಿಸರ್ಗ(ಮಧುಶ್ರೀ) ಹಾಗು ತುಮಕೂರು ಮಧುಗಿರಿ ದಿವಂಗತ ಮಹೇಂದ್ರಚಾರ್-ಪ್ರೇಮಕುಮಾರಿಯವರ ಪುತ್ರ ಎ.ಎಂ ಅಭಿಷೇಕ್(ಲೋಕೇಶ್)ರವರ ವಿವಾಹ ಸೋಮವಾರ ನಡೆಯಿತು.
    ಭದ್ರಾವತಿ, ನ. ೨೧ : ನಗರದ ಹುಡ್ಕೋ ಕಾಲೋನಿ ನಿವಾಸಿ, ದಿನಪತ್ರಿಕೆ ಏಜೆಂಟರ್ ಕೃಷ್ಣಮೂರ್ತಿಯವರ ಸಹೋದರ ಎನ್. ದೊಡ್ಡಸ್ವಾಮಿ -ಶ್ಯಾಮಲರವರ ಪುತ್ರಿ ಡಿ. ನಿಸರ್ಗ(ಮಧುಶ್ರೀ) ಹಾಗು ತುಮಕೂರು ಮಧುಗಿರಿ ದಿವಂಗತ ಮಹೇಂದ್ರಚಾರ್-ಪ್ರೇಮಕುಮಾರಿಯವರ ಪುತ್ರ ಎ.ಎಂ ಅಭಿಷೇಕ್(ಲೋಕೇಶ್)ರವರ ವಿವಾಹ ಸೋಮವಾರ ನಡೆಯಿತು.
    ನಗರದ ಜನ್ನಾಪುರ ಶ್ರೀ ಮಲ್ಲೇಶ್ವರ ಸಮುದಾಯ ಭವನದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಅನೇಕ ಗಣ್ಯರು ಪಾಲ್ಗೊಂಡು ನೂತನ ದಂಪತಿಗೆ ಶುಭ ಹಾರೈಸಿದರು.

ನ.೨೩ರಂದು ಶ್ರೀ ಸತ್ಯ ಸಾಯಿ ಬಾಬಾರವರ ೯೭ನೇ ಜನ್ಮದಿನೋತ್ಸವ

ಭದ್ರಾವತಿ, ನ. ೨೧ : ನಗರದ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು ಮತ್ತು ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ನ.೨೩ರ ವರೆಗೆ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ೯೭ನೇ ಜನ್ಮದಿನೋತ್ಸವ ಹಮ್ಮಿಕೊಳ್ಳಲಾಗಿದೆ.
      ಹಿರಿಯೂರು ಗ್ರಾಮ ಹಾಗು ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ ಸೋಮವಾರ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು. ಅಲ್ಲದೆ ಶ್ರೀ ಸತ್ಯಸಾಯಿ ಯುವ ಯುವ ವಿಭಾಗದವರಿಂದ ಸ್ವಾಮಿಗೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು. ಸೀಗೆಬಾಗಿ ಶ್ರೀ ಸತ್ಯಸಾಯಿ ಗ್ರಾಮ ಸೇವಾ ಕೇಂದ್ರದಲ್ಲಿ ನ.೨೨ರಂದು ಬೆಳಿಗ್ಗೆ ೯.೩೦ಕ್ಕೆ ಚಿಂತನ, ಸ್ವಾಮಿಗೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.
      ನ.೨೩ರಂದು ಶ್ರೀ ಸತ್ಯಸಾಯಿ ಬಾಬಾರವರ ಹುಟ್ಟುಹಬ್ಬ ಆಚರಣೆ ನಡೆಯಲಿದ್ದು, ನ್ಯೂಟೌನ್ ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರದಲ್ಲಿ ಬೆಳಿಗ್ಗೆ ೫ ರಿಂದ ೬ ಗಂಟೆವರೆಗೆ ಓಂಕಾರ, ಜ್ಯೋತಿರ್ಧ್ಯಾನ, ಸುಪ್ರಭಾತ, ನಗರಸಂಕೀರ್ತನೆ, ೬.೧೫ಕ್ಕೆ ಪ್ರಶಾಂತಿ ಧ್ವಜಾರೋಹಣ, ೯.೩೦ಕ್ಕೆ ಶ್ರೀ ಸಾಯಿ ಸತ್ಯ ನಾರಾಯಣ ಪೂಜೆ, ಸಹಸ್ರ ನಾಮಾರ್ಚನೆ, ಶಿವಮೊಗ್ಗ ಮಿಡ್‌ಟೌನ್ ರೋಟರಿ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಲಿದೆ.
      ೧೦.೧೫ಕ್ಕೆ ಶ್ರೀ ಸತ್ಯ ಸಾಯಿ ಶಾಲಾ ಮಕ್ಕಳಿಂದ ಪಲ್ಲಕ್ಕಿ ಸೇವೆ, ಮಹಾಮಂಗಳಾರತಿ, ಶಾಲಾ ಮಕ್ಕಳಿಗೆ ಮಹಾಪ್ರಸಾದ ವಿನಿಯೋಗ, ಮಧ್ಯಾಹ್ನ ೧ ಗಂಟೆಗೆ ನಾರಾಯಣರಿಗೆ ವಸ್ತ್ರದಾನ ಮತ್ತು ನಾರಾಯಣ ಸೇವೆ, ಭಕ್ತಾಧಿಗಳಿಗೆ ಮಹಾಪ್ರಸಾದ ವಿನಿಯೋಗ, ಸಂಜೆ ೬ರಿಂದ ೬.೩೦ರವರೆಗೆ ಕಲಾವಾದ್ಯಗಳೊಂದಿಗೆ ಹಾಡುಗಾರಿಕೆ ಹಾಗು ೬.೩೦ ರಿಂದ ೭.೩೦ರ ವರೆಗೆ ಭಜನೆ, ಚಿಂತನೆ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ನ.೨೨ರಂದು ಕನ್ನಡ ರಾಜ್ಯೋತ್ಸವ, ಸಂಗೀತ ನೃತ್ಯ ಸಂಭ್ರಮ

    ಭದ್ರಾವತಿ, ನ. ೨೧: ಅಪೇಕ್ಷ ನೃತ್ಯ ಕಲಾ ವೃಂದ ಹಾಗು ಶ್ರೀ ಬಸವೇಶ್ವರ ಧರ್ಮಸಂಸ್ಥೆ ವತಿಯಿಂದ ನ.೨೨ರಂದು ಬೆಳಿಗ್ಗೆ ೧೦.೩೦ಕ್ಕೆ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಕನ್ನಡ ರಾಜ್ಯೋತ್ಸವ, ಸಂಗೀತ ನೃತ್ಯ ಸಂಭ್ರಮ, ವಿವಿಧ ಕ್ಷೇತ್ರದ ಸಾಧಕರಿಗೆ ಪುರಸ್ಕಾರ ಮತ್ತು ಸನ್ಮಾನ ಹಾಗು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಕುವರ/ಕುವರಿ ಪ್ರಶಸ್ತಿ ಪ್ರದಾನ ನಡೆಯಲಿದೆ.


ಅಪೇಕ್ಷ ಮಂಜುನಾಥ್
    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಪೇಕ್ಷ ನೃತ್ಯ ಕಲಾ ವೃಂದ ಅಧ್ಯಕ್ಷೆ ಭಾರತಿ ಗೋವಿಂದಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು, ತಹಸೀಲ್ದಾರ್ ಆರ್. ಪ್ರದೀಪ್ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ನೆರವೇರಿಸಲಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಸಿ.ಆರ್ ಪರಮೇಶ್ವರಪ್ಪ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಎಚ್.ಎಂ ಮನುಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಚ್. ಉಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ನಗರಸಭಾ ಸದಸ್ಯರಾದ ಮಣಿ ಎ.ಎನ್.ಎಸ್, ಆರ್. ಶ್ರೇಯಸ್(ಚಿಟ್ಟೆ), ಸಮಾಜ ಸೇವಕ ಸ್ನೇಹಜೀವಿ ಉಮೇಶ್, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಶಸ್ತ್ರ ಚಿಕಿತ್ಸಕ ಡಾ.ಡಿ.ಎಸ್ ಶಿವಪ್ರಕಾಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಿ.ಬಿ ಶಂಕರಪ್ಪ, ಉದ್ಯಮಿ ಸುಧಾಕರ ಶೆಟ್ಟಿ, ಡಾ. ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಎಂ. ಶ್ರೀನಿವಾಸ್ ಮತ್ತು ಬಸವೇಶ್ವರ ಧರ್ಮಸಂಸ್ಥೆ ಟ್ರಸ್ಟಿ ಎಂ. ಶಶಿಕಲಾ ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಕನ್ನಡಾಭಿಮಾನಿಗಳು, ವಿವಿಧ ಸಂಘ-ಸಂಸ್ಥೆಗಳು ಸೇರಿದಂತೆ ಸಮಸ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅಪೇಕ್ಷ ಮಂಜುನಾಥ್ ಕೋರಿದ್ದಾರೆ.