Thursday, November 24, 2022

ಉಮಾದೇವಿ ರಾಯ್ಕರ್ ನಿಧನ


 ಉಮಾದೇವಿ ರಾಯ್ಕರ್
    ಭದ್ರಾವತಿ, ನ. ೨೪: ನಗರದ ಬಿ.ಎಚ್ ರಸ್ತೆ, ಹಾಲಪ್ಪ ವೃತ್ತ ರಾಯ್ಕರ್ ಜ್ಯೂಯಲರ‍್ಸ್ ಮಾಲೀಕ ಅರವಿಂದ ರಾಯ್ಕರ್ ಅವರ ತಾಯಿ ಉಮಾದೇವಿ ರಾಯ್ಕರ್(೮೭)ಗುರುವಾರ ಬೆಳಗಿನ ಜಾವ ಅನಾರೋಗ್ಯದಿಂದ ನಿಧನರಾದರು.
    ಓರ್ವ ಪುತ್ರ ಹಾಗು ಮೂವರು ಪುತ್ರಿಯರನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಸಂಜೆ ಹುತ್ತಾಕಾಲೂನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
    ಉಮಾದೇವಿ ರಾಯ್ಕರ್ ನಿಧನಕ್ಕೆ ವರ್ತಕರು, ವ್ಯಾಪಾರಸ್ಥರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.  

ನಗರಸಭೆ ಮಾಜಿ ಸದಸ್ಯ ಸುಬ್ಬಾರೆಡ್ಡಿ ನಿಧನ

ಸುಬ್ಬಾರೆಡ್ಡಿ

    ಭದ್ರಾವತಿ, ನ. ೨೪ : ನಗರದ ಜನ್ನಾಪುರ ರಾಜಪ್ಪ ಬಡಾವಣೆ ನಿವಾಸಿ, ಗುತ್ತಿಗೆದಾರ, ನಗರಸಭೆ ಮಾಜಿ ಸದಸ್ಯ ಸುಬ್ಬಾರೆಡ್ಡಿ(೮೦) ಬುಧವಾರ ರಾತ್ರಿ ನಿಧನ ಹೊಂದಿದರು.
    ಪುತ್ರಿ ಹಾಗು ಇಬ್ಬರು ಪುತ್ರರನ್ನು ಹೊಂದಿದ್ದರು. ಒಂದು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಹಾಗು ಮತ್ತೊಂದು ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ನಗರಸಭೆಗೆ ಎರಡು ಬಾರಿ ಆಯ್ಕೆಯಾಗಿದ್ದರು.
    ಸುಬ್ಬಾರೆಡ್ಡಿಯವರು ನಗರದ ಪ್ರಮುಖ ಗುತ್ತಿಗೆದಾರರಲ್ಲಿ ಒಬ್ಬರಾಗಿ ಗುರುತಿಸಿ ಕೊಂಡಿದ್ದರು. ನಗರದಲ್ಲಿ ಪ್ರಮುಖ ಕಟ್ಟಡಗಳನ್ನು  ನಿರ್ಮಿಸಿರುವ ಕೀರ್ತಿ ಇವರದ್ದಾಗಿದೆ. ತೆಲುಗು ರೆಡ್ಡಿ ಸಮುದಾಯದ ಮುಖಂಡರಾಗಿ ಸಹ ಗುರುತಿಸಿಕೊಂಡಿದ್ದರು. ಇವರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Wednesday, November 23, 2022

೯ ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ಶಿಕ್ಷಕ ಬಂಧನ

    ಭದ್ರಾವತಿ, ನ. ೨೩: ಶಾಲಾ ಶಿಕ್ಷಕನೊಬ್ಬ ಸುಮಾರು ೯ ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
      ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯ ಕುಟುಂಬಸ್ಥರು ನೀಡಿರುವ ದೂರಿನ ಆನ್ವಯ ಪೊಲೀಸರು ಉರ್ದು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ , ಖಲಂದರ್ ನಗರದ ನಿವಾಸಿ ಅಕ್ಬರ್ ಎಂಬಾತನನ್ನು ಬಂಧಿಸಿ ಶಿವಮೊಗ್ಗ ಪೋಕ್ಸೋ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಟಿಪ್ಪು ಪ್ರತಿಮೆ, ಮುಖ್ಯದ್ವಾರ ನಿರ್ಮಾಣ ಕುರಿತು ಸಿ.ಎಂ ಖಾದರ್ ಭಾಷಣ

ವ್ಯಾಪಕವಾಗಿ ಹರಿದಾಡುತ್ತಿದೆ ೩ ದಿನಗಳ ಹಿಂದಿನ ವಿಡಿಯೋ


    ಭದ್ರಾವತಿ, ನ. ೨೩ : ನಗರದ ಅನ್ವರ್ ಕಾಲೋನಿ ಹೊಳೆಹೊನ್ನೂರು ವೃತ್ತದಲ್ಲಿ ಟಿಪ್ಪು ಸುಲ್ತಾನ್ ಪ್ರತಿಮೆ ಹಾಗು ಮುಖ್ಯದ್ವಾರ ನಿರ್ಮಿಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಸಹೋದರ, ಕಾಂಗ್ರೆಸ್ ಮುಖಂಡ ಸಿ.ಎಂ ಖಾದರ್ ಭಾಷಣದ ವಿಡಿಯೋ ಇದೀಗ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದೆ.
    ಕಳೆದ ೩ ದಿನಗಳ ಹಿಂದೆ ನಗರದ ಹೊಳೆಹೊನ್ನೂರು ವೃತ್ತದಲ್ಲಿ ದೇಶಪ್ರೇಮಿ ಟಿಪ್ಪು ಸುಲ್ತಾನ್ ಯುವಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಟಿಪ್ಪು ಜಯಂತಿ ಹಾಗು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿರುವ ಭಾಷಣದ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ.
    ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ನಾವು ಬಿ.ಕೆ ಸಂಗಮೇಶ್ವರನ್ನು ಪುನಃ ಕ್ಷೇತ್ರದ ಶಾಸಕರನ್ನಾಗಿ ಆಯ್ಕೆಮಾಡುತ್ತೇವೆ. ಸರ್ಕಾರದಲ್ಲಿ  ಮಂತ್ರಿಯನ್ನಾಗಿ ಮಾಡುತ್ತೇವೆ. ಅವರು ಮಂತ್ರಿಯಾದ ನಂತರ  ಸುಮಾರು ೨೨ ಅಡಿ ಎತ್ತರದ ಟಿಪ್ಪು ಸುಲ್ತಾನ್ ಪ್ರತಿಮೆ ಹಾಗು ಟಿಪ್ಪು ಹೆಸರಿನ ಮುಖ್ಯದ್ವಾರ ನಿರ್ಮಿಸುವುದು ಖಚಿತ  ಎಂದು ಭಾಷಣದಲ್ಲಿ ಹೇಳಿದ್ದು, ಇದಕ್ಕೂ ಮೊದಲು ವೀರಸಾರ್ವಕರ್ ಕುರಿತು ಮಾತನಾಡಿದ್ದಾರೆ. ಈ ವಿಡಿಯೋ ಇದೀಗ ವ್ಯಾಪಕವಾಗಿ ಹರಿದಾಡುತ್ತಿದೆ.

ವಿಜೃಂಭಣೆಯಿಂದ ಜರುಗಿದ ಶ್ರೀ ಸತ್ಯ ಸಾಯಿ ಬಾಬಾರವರ ೯೭ನೇ ಜನ್ಮದಿನೋತ್ಸವ

ಭದ್ರಾವತಿ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು ಮತ್ತು ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಬುಧವಾರ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ೯೭ನೇ ಜನ್ಮದಿನೋತ್ಸವ ಹಿನ್ನಲೆಯಲ್ಲಿ ಶಾಲಾ ಮಕ್ಕಳಿಂದ ಪಲ್ಲಕ್ಕಿ ಸೇವೆ ನಡೆಯಿತು.
ಭದ್ರಾವತಿ, ನ. ೨೩ : ನಗರದ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು ಮತ್ತು ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಬುಧವಾರ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ೯೭ನೇ ಜನ್ಮದಿನೋತ್ಸವ ಹಲವು ಧಾರ್ಮಿಕ ಹಾಗು ಸೇವಾ ಕಾರ್ಯಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
      ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರದಲ್ಲಿ ಬೆಳಿಗ್ಗೆ ಓಂಕಾರ, ಜ್ಯೋತಿರ್ಧ್ಯಾನ, ಸುಪ್ರಭಾತ, ನಗರಸಂಕೀರ್ತನೆ, ಪ್ರಶಾಂತಿ ಧ್ವಜಾರೋಹಣ, ಶ್ರೀ ಸಾಯಿ ಸತ್ಯ ನಾರಾಯಣ ಪೂಜೆ, ಸಹಸ್ರ ನಾಮಾರ್ಚನೆ, ಶಿವಮೊಗ್ಗ ಮಿಡ್‌ಟೌನ್ ರೋಟರಿ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಾಗು ಶ್ರೀ ಸತ್ಯ ಸಾಯಿ ಶಾಲಾ ಮಕ್ಕಳಿಂದ ಪಲ್ಲಕ್ಕಿ ಸೇವೆ, ಮಹಾಮಂಗಳಾರತಿ, ಶಾಲಾ ಮಕ್ಕಳಿಗೆ ಮಹಾಪ್ರಸಾದ ವಿನಿಯೋಗ ಜರುಗಿತು.     ಮಧ್ಯಾಹ್ನ ನಾರಾಯಣರಿಗೆ ವಸ್ತ್ರದಾನ ಮತ್ತು ನಾರಾಯಣ ಸೇವೆ, ಭಕ್ತಾಧಿಗಳಿಗೆ ಮಹಾಪ್ರಸಾದ ವಿನಿಯೋಗ, ಸಂಜೆ ಕಲಾವಾದ್ಯಗಳೊಂದಿಗೆ ಹಾಡುಗಾರಿಕೆ ಹಾಗು ಭಜನೆ, ಚಿಂತನೆ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಜರುಗಿದವು.


ಭದ್ರಾವತಿ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು ಮತ್ತು ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಬುಧವಾರ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ೯೭ನೇ ಜನ್ಮದಿನೋತ್ಸವ ಹಿನ್ನಲೆಯಲ್ಲಿ ರಕ್ತದಾನ ಶಿಬಿರ ನಡೆಯಿತು.
      ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಕಾರ್ಯದರ್ಶಿ ಡಿ. ಪ್ರಭಾಕರ ಬೀರಯ್ಯ, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಶಿಕ್ಷಣ ಸಂಯೋಜಕ ಪರಮೇಶ್ವರಪ್ಪ, ಪ್ರಾಂಶುಪಾಲರಾದ ಮೃತ್ಯುಂಜಯ ಕಾನಿಟ್ಕರ್, ಶಾಮರಾಯಚಾರ್, ಉಪಪಾಂಶುಪಾಲ ಪ್ರಸನ್ನ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗು ಸಿಬ್ಬಂದಿ ವರ್ಗದವರು, ಉದ್ಯಮಿ ಬಿ.ಕೆ ಜಗನ್ನಾಥ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಭಕ್ತಾಧಿಗಳು ಪಾಲ್ಗೊಂಡಿದ್ದರು.


ಭದ್ರಾವತಿ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು ಮತ್ತು ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಬುಧವಾರ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ೯೭ನೇ ಜನ್ಮದಿನೋತ್ಸವ ಹಿನ್ನಲೆಯಲ್ಲಿ ಶ್ರೀ ಸಾಯಿ ಸತ್ಯನಾರಾಯಣ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.

ಬಂಜಾರ ರೈತರ ಸಂಘ ಅಸ್ತಿತ್ವಕ್ಕೆ : ರಾಜ್ಯಾಧ್ಯಕ್ಷರಾಗಿ ಕೃಷ್ಣನಾಯ್ಕ

ನೂತನವಾಗಿ ರಾಜ್ಯ ಬಂಜಾರ ರೈತರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಭದ್ರಾವತಿ ನಗರದಲ್ಲಿ ಆಯೋಜಿಸಲಾಗಿದ್ದ ಪದಗ್ರಹಣ ಸಮಾರಂಭವನ್ನು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಉದ್ಘಾಟಿಸಿದರು.
    ಭದ್ರಾವತಿ, ನ. ೨೩ : ನೂತನವಾಗಿ ರಾಜ್ಯ ಬಂಜಾರ ರೈತರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ನಗರದಲ್ಲಿ ಆಯೋಜಿಸಲಾಗಿದ್ದ ಪದಗ್ರಹಣ ಸಮಾರಂಭವನ್ನು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಉದ್ಘಾಟಿಸಿದರು.
      ಸಮಾರಂಭದಲ್ಲಿ ಮಾತನಾಡಿದ ಪ್ರಮುಖರು, ಹೆಚ್ಚು ಸಂಘಟಿತರಾಗಿ ರೈತರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಹೆಚ್ಚು ಗಮನ ಹರಿಸಬೇಕೆಂದರು.
      ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ದಲಿತ ಮುಖಂಡ ಕುಬೇಂದ್ರಪ್ಪ, ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆನಂದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
      ನೂತನ ಪದಾಧಿಕಾರಿಗಳು: ರಾಜ್ಯಾಧ್ಯಕ್ಷರಾಗಿ ಕೃಷ್ಣನಾಯ್ಕ, ಉಪಾಧ್ಯಕ್ಷರಾಗಿ ಸುನಿಲ್‌ಕುಮಾರ್(ದಾವಣಗೆರೆ) ಮತ್ತು ರಮೇಶ್‌ನಾಯ್ಕ(ತುಮಕೂರು), ಪ್ರಧಾನ ಕಾರ್ಯದರ್ಶಿಯಾಗಿ ಶಂಕರನಾಯ್ಕ, ಕಾರ್ಯಾಧ್ಯಕ್ಷರಾಗಿ ರಮೇಶ್‌ನಾಯ್ಕ(ಕೊಪ್ಪಳ), ಮಹಿಳಾ ಘಟಕದ ರಾಜ್ಯಾಧ್ಯಕ್ಷರಾಗಿ ಉಷಾನಾಯ್ಕ, ರಾಜ್ಯ ಯುವ ಘಟಕದ ಅಧ್ಯಕ್ಷರಾಗಿ ಮಂಜಾನಾಯ್ಕ, ಸಲಹೆಗಾರರಾಗಿ ಅಮೋಸ್, ಕಾನೂನು ಸಲಹೆಗಾರರಾಗಿ ಎಚ್.ಆರ್ ಲಮಾಣಿ(ಹಾವೇರಿ), ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಮಂಜಾನಾಯ್ಕ ಮತ್ತು ಬಾಗಲಕೋಟೆ ಜಿಲ್ಲಾಧ್ಯಕ್ಷರಾಗಿ ಶಿವರಾಜ ಸೇರಿದಂತೆ ಇನ್ನಿತರರು ಪದಗ್ರಹಣ ಸ್ವೀಕರಿಸಿದರು.
      ಸಂಘದ ರಾಜ್ಯಾಧ್ಯಕ್ಷ ಕೃಷ್ಣನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಗಣೇಶ್ ಪ್ರಾರ್ಥಿಸಿ, ಮಂಜನಾಯ್ಕ ಸ್ವಾಗತಿಸಿದರು.  

Tuesday, November 22, 2022

೪೦ ಮಂದಿಗೆ ಉಚಿತ ದಂತ ಪಂಕ್ತಿ ಜೋಡಣೆ

ಮಂಗಳೂರಿನ ಯೆನೆಪೋಯ ಡೆಂಟಲ್ ಕಾಲೇಜು ಸಹಯೋಗದೊಂದಿಗೆ ಭದ್ರಾವತಿಯಲ್ಲಿ ರೋಟರಿ ಕ್ಲಬ್ ಮತ್ತು ಜನ್ನಾಪುರ ಕಲಾ ಡಿಜಿಟಲ್ ಸ್ಟುಡಿಯೋ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರಕ್ಕೆ ರೋಟರಿ ಕ್ಲಬ್ ಅಧ್ಯಕ್ಷ ಎಸ್. ಅಡವೀಶಯ್ಯ ಚಾಲನೆ ನೀಡಿದರು.
    ಭದ್ರಾವತಿ, ನ. ೨೨: ಮಂಗಳೂರಿನ ಯೆನೆಪೋಯ ಡೆಂಟಲ್ ಕಾಲೇಜು ಸಹಯೋಗದೊಂದಿಗೆ ನಗರದ ರೋಟರಿ ಕ್ಲಬ್ ಮತ್ತು ಜನ್ನಾಪುರ ಕಲಾ ಡಿಜಿಟಲ್ ಸ್ಟುಡಿಯೋ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರದಲ್ಲಿ ಸುಮಾರು ೪೦ ಮಂದಿ ಪಾಲ್ಗೊಂಡು ಸದುಪಯೋಗ ಪಡೆದುಕೊಂಡರು.
      ಹಿರಿಯ ನಾಗರೀಕರು ಹಾಗು ೧೮ ವರ್ಷ ಮೇಲ್ಪಟ್ಟವರಿಗೆ ರೋಟರಿ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಬಿರದ ಯಶಸ್ವಿಗೆ ಯೆನೆಪೋಯ ಡೆಂಟಲ್ ಕಾಲೇಜಿನ ವೈದ್ಯರು ಮತ್ತು ಸಿಬ್ಬಂದಿಯನ್ನೊಳಗೊಂಡ ಸುಮಾರು ೪೦ ಜನರ ತಂಡ ಹಾಗು ರೋಟರಿ ಪದಾಧಿಕಾರಿಗಳು, ಸದಸ್ಯರು ಮತ್ತು ಕಲಾ ಡಿಜಿಟಲ್ ಸ್ಟುಡಿಯೋ ಸಿಬ್ಬಂದಿಗಳು ಶ್ರಮಿಸಿದರು.
      ಶಿಬಿರಕ್ಕೆ ರೋಟರಿ ಕ್ಲಬ್ ಅಧ್ಯಕ್ಷ ಎಸ್. ಅಡವೀಶಯ್ಯ ಚಾಲನೆ ನೀಡಿದರು.  ಯೆನೆಪೋಯ ಡೆಂಟಲ್ ಕಾಲೇಜಿನ ವಿಭಾಗದ ಮುಖ್ಯಸ್ಥ ಡಾ. ಸನತ್ ಶೆಟ್ಟಿ, ಪ್ರೊಫೆಸರ್‌ಗಳಾದ ಡಾ. ರಾಜೇಶ್‌ಶೆಟ್ಟಿ, ಡಾ. ವಿದ್ಯಾ ಭಟ್, ಕಲಾ ಸ್ಟುಡಿಯೋ ಕೆವಿನ್ ಸೋಲೊಮಾನ್, ರೋಟರಿ ಕ್ಲಬ್  ಕಾರ್ಯದರ್ಶಿ ಕೆ.ಎಚ್ ಶಿವಕುಮಾರ್, ದುಷ್ಯಂತ್‌ರಾಜ್, ತೀರ್ಥಯ್ಯ, ದಯಾ ಸಾಗರ್ ಟ್ರಸ್ಟ್‌ನ ಮೋಸಸ್ ರೋಸಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಮಂಗಳೂರಿನ ಯೆನೆಪೋಯ ಡೆಂಟಲ್ ಕಾಲೇಜು ಸಹಯೋಗದೊಂದಿಗೆ ನಗರದ ರೋಟರಿ ಕ್ಲಬ್ ಮತ್ತು ಜನ್ನಾಪುರ ಕಲಾ ಡಿಜಿಟಲ್ ಸ್ಟುಡಿಯೋ ವತಿಯಿಂದ ಮಂಗಳವಾರ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರ ಆಯೋಜಿಸಲಾಗಿತ್ತು.