ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಪೇಪರ್‌ಟೌನ್ ಪೊಲೀಸರು
ಭದ್ರಾವತಿ ತಾಲೂಕಿನ ಇತಿಹಾಸ ಪ್ರಸಿದ್ದ ಸುಣ್ಣದಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಭಕ್ತರಿಂದ ಭಿಕ್ಷೆ ಬೇಡಿ ಬದುಕು ಸಾಗಿಸುತ್ತಿದ್ದ ವೃದ್ಧೆಯೊಬ್ಬರ ಕೊಲೆ ಪ್ರಕರಣ ಬೇಧಿಸುವಲ್ಲಿ ಪೇಪರ್‌ಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಭದ್ರಾವತಿ, ಡಿ. ೧೮: ತಾಲೂಕಿನ ಇತಿಹಾಸ ಪ್ರಸಿದ್ದ ಸುಣ್ಣದಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಭಕ್ತರಿಂದ ಭಿಕ್ಷೆ ಬೇಡಿ ಬದುಕು ಸಾಗಿಸುತ್ತಿದ್ದ ವೃದ್ಧೆಯೊಬ್ಬರ ಕೊಲೆ ಪ್ರಕರಣ ಬೇಧಿಸುವಲ್ಲಿ ಪೇಪರ್‌ಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುಣ್ಣದಹಳ್ಳಿ ಗ್ರಾಮದ ನಿವಾಸಿ ಸುಮಾರು ೭೦ ವರ್ಷ ವಯಸ್ಸಿನ ವೃದ್ಧೆ ಶಂಕ್ರಮ್ಮ ಕೊಲೆಯಾಗಿದ್ದು, ಈ ಸಂಬಂಧ ಓರ್ವನನ್ನು ಬಂಧಿಸಿದ್ದಾರೆ. ಶಂಕ್ರಮ್ಮ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಭಕ್ತರಿಂದ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು. ರಾತ್ರಿ ವೇಳೆ ದೇವಸ್ಥಾನ ಎದುರಿನ ಅಂತರಘಟ್ಟಮ್ಮ ದೇವರ ಗುಡಿಯ ಕಾಂಪೌಂಡ್ ಒಳಭಾಗದಲ್ಲಿ ಮಲಗುತ್ತಿದ್ದರು. ಡಿ.೩ ರಂದು ಬೆಳಿಗ್ಗೆ ಇವರು ಮೃತಪಟ್ಟಿರುವುದಾಗಿ ಪೊಲೀಸರಿಗೆ ದೇವಸ್ಥಾನದ ಅರ್ಚಕರು ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಎರಡೂ ಕಿವಿಯಲ್ಲಿದ್ದ ಚಿನ್ನದ ಓಲೆಗಳು ಮತ್ತು ಮೂಗು ಬಟ್ಟನ್ನು ಕಿತ್ತುಕೊಂಡು ಕೊಲೆ ಮಾಡಿ ಹೋಗಿರುತ್ತಾರೆಂದು ಈ ನಡುವೆ ಶಂಕ್ರಮ್ಮರವರ ಮೊಮ್ಮಗಳು ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಪ್ರಕರಣ ಬೇಧಿಸಲು ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ ದಯಾಮ ಮಾರ್ಗದರ್ಶನದಲ್ಲಿ ಠಾಣೆಯ ಪೊಲೀಸ್ ನಿರೀಕ್ಷಕ ಈ.ಓ ಮಂಜುನಾಥ್‌ರವರ ನೇತೃತ್ವದಲ್ಲಿ ಠಾಣಾಧಿಕಾರಿ ಶಿಲ್ಪಾ ನಾಯನೇಗಲಿ ಮತ್ತು ಸಿಬ್ಬಂದಿಗಳಾದ ರತ್ನಾಕರ, ವಾಸುದೇವ, ಚಿನ್ನನಾಯ್ಕ, ಹನಮಂತ ಅವಟಿ, ಆದರ್ಶ ಶೆಟ್ಟಿ, ಮೌನೇಶ ಶೀಖಲ್, ಆರ್. ಅರುಣ್ ಮತ್ತು ವಿಕ್ರಮ್ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.
ಡಿ.೧೭ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿ ಕೊಲೆಯಾದ ಶಂಕ್ರಮ್ಮರವರ ಮೈಮೇಲಿಂದ ಕಿತ್ತುಕೊಂಡಿದ್ದ ಅಂದಾಜು ೧೪,೦೦೦ ರು. ಮೌಲ್ಯದ ಒಂದು ಜೊತೆ ಬಂಗಾರದ ಕಿವಿ ಓಲೆ ಮತ್ತು ಮೂಗುತಿಯನ್ನು ವಶಪಡಿಸಿಕೊಳ್ಳಲಾಗಿದೆ. ಡಿ.೨ ರಂದು ರಾತ್ರಿ ಶಂಕ್ರಮ್ಮ ರವರ ಕಿವಿಯಲ್ಲಿದ್ದ ಬಂಗಾರದ ಓಲೆ ಮತ್ತು ಮೂಗಿನಲ್ಲಿದ್ದ ಮೂಗು ಬಟ್ಟನ್ನು ಕಿತ್ತುಕೊಳ್ಳುವ ಸಂಬಂಧ ಆಕೆಯ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬುದು ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ. ಯಾವುದೇ ಸುಳಿವು ಇಲ್ಲದ ಜಟಿಲವಾದ ಕೊಲೆ ಪ್ರಕರಣವನ್ನು ಪತ್ತೆ ಮಾಡಿದ ತನಿಖಾ ತಂಡದ ಉತ್ತಮ ಕಾರ್ಯಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.