Sunday, January 15, 2023

ಉಕ್ಕಿನ ನಗರದೆಲ್ಲೆಡೆ ಸಂಕ್ರಾಂತಿ ಸಂಭ್ರಮ, ಸಡಗರ

ನ್ಯೂಟೌನ್ ಆಂಜನೇಯ ಅಗ್ರಹಾರ, ಕೂಲಿಬ್ಲಾಕ್ ಶೆಡ್ ಶ್ರೀ ಮಾರಿಯಮ್ಮ ಅಖಾಡ ಪೊಂಗಲ್ ಕಮಿಟಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ೫೪ನೇ ವರ್ಷದ ಸಂಕ್ರಾಂತಿ ಹಾಗು ಪೊಂಗಲ್ ಹಬ್ಬದ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಭಾನುವಾರ ದನಗಳ ಪ್ರದರ್ಶನ ಹಾಗು ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯನ್ನು ವೀಕ್ಷಿಸಲು ಸುತ್ತಮುತ್ತಲ ಪ್ರದೇಶಗಳಿಂದ ಜನರು ಆಗಮಿಸಿದ್ದರು.
    ಭದ್ರಾವತಿ, ಜ. ೧೫ : ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಆಚರಣೆ ನಗರದಲ್ಲೆಡೆ ವಿಜೃಂಭಣೆಯಿಂದ ಕಂಡು ಬಂದಿದ್ದು, ಬೆಳಿಗ್ಗೆಯೇ ಮನೆ ಮನೆಗಳ ಮುಂದೆ ರಂಗುರಂಗಿನ ರಂಗೋಲಿ ಮೂಲಕ ಹಬ್ಬಕ್ಕೆ ಅದ್ದೂರಿ ಸ್ವಾಗತ ಕೋರಿರುವುದು ಕಂಡು ಬಂದಿತು.
    ಸಂಕ್ರಾಂತಿ ಅಂಗವಾಗಿ ವಿವಿಧ ದೇವಾಲಯಗಳಲ್ಲೂ ವಿಶೇಷ ಪೂಜೆ ನಡೆಯಿತು. ಅಲ್ಲದೆ ವಿವಿಧ ಸಂಘ-ಸಂಸ್ಥೆಗಳಿಂದ ಸಹ ವಿಶಿಷ್ಟವಾಗಿ ಹಬ್ಬ ಆಚರಣೆ ನಡೆಸಲಾಯಿತು. ತಿಂಡಿತಿನಿಸುಗಳೊಂದಿಗೆ ಗೋ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.  


ಭದ್ರಾವತಿಯಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಭಾನುವಾರ ತಿಂಡಿತಿನಿಸುಗಳೊಂದಿಗೆ ಗೋ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.   
     ನ್ಯೂಟೌನ್ ಆಂಜನೇಯ ಅಗ್ರಹಾರ, ಕೂಲಿಬ್ಲಾಕ್ ಶೆಡ್ ಶ್ರೀ ಮಾರಿಯಮ್ಮ ಅಖಾಡ ಪೊಂಗಲ್ ಕಮಿಟಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ೫೪ನೇ ವರ್ಷದ ಸಂಕ್ರಾಂತಿ ಹಾಗು ಪೊಂಗಲ್ ಹಬ್ಬದ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಭಾನುವಾರ ದನಗಳ ಪ್ರದರ್ಶನ ಹಾಗು ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯನ್ನು ವೀಕ್ಷಿಸಲು ಸುತ್ತಮುತ್ತಲ ಪ್ರದೇಶಗಳಿಂದ ಜನರು ಆಗಮಿಸಿದ್ದರು.
    ಸ್ಪರ್ಧೆ ಮಾರಿಯಮ್ಮ ದೇವಸ್ಥಾನ ಬಳಿ ಆಂಜನೇಯ ಆಗ್ರಹಾರದ ಮುಖ್ಯ ರಸ್ತೆಯಲ್ಲಿ ಆಯೋಜಿಸಲಾಗಿತ್ತು. ಸ್ಪರ್ಧೆ ಸಂದರ್ಭದಲ್ಲಿ ಎರಡು ಕಡೆ ಕಬ್ಬಿಣದ ಬ್ಯಾರಿಗೇಡ್‌ಗಳನ್ನು ಅಳವಡಿಸಲಾಗಿತ್ತು.  
    ನಗರದ ಅಪ್ಪರ್ ಹುತ್ತಾ ಗೆಳೆಯರ ಬಳಗ ಟ್ರಸ್ಟ್ ವತಿಯಿಂದ ಈ ಬಾರಿ ವಿಶೇಷವಾಗಿ ಸಂಕ್ರಾಂತಿ ಸಂಭ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀ ನಂದಿ, ಈಶ್ವರ ಮತ್ತು ಸಂಕಷ್ಟಹರ ಗಣಪತಿ ದೇವಸ್ಥಾನದ ಮುಂಭಾಗ ಬೆಳಿಗ್ಗೆ ಪೊಂಗಲ್, ಗೋವಿನ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಸಂಜೆ ವಿಶೇಷ ಆಕರ್ಷಣೆಯಾಗಿ ಹೋರಿಗಳ ಕಿಚ್ಚಾಯಿಸುವ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ಭದ್ರಾವತಿ ಅಪ್ಪರ್ ಹುತ್ತಾ ಗೆಳೆಯರ ಬಳಗ ಟ್ರಸ್ಟ್ ವತಿಯಿಂದ ಈ ಬಾರಿ ವಿಶೇಷವಾಗಿ ಸಂಕ್ರಾಂತಿ ಸಂಭ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀ ನಂದಿ, ಈಶ್ವರ ಮತ್ತು ಸಂಕಷ್ಟಹರ ಗಣಪತಿ ದೇವಸ್ಥಾನದ ಮುಂಭಾಗ ಬೆಳಿಗ್ಗೆ ಪೊಂಗಲ್, ಗೋವಿನ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
    ನಂತರ ಹೊಳೆಹೊನ್ನೂರು ಸರ್ಕಾರಿ ಪ್ರೌಢಶಾಲೆಯ ರವಿಕಿರಣ್ ಅವರಿಂದ ದೈವ ನೃತ್ಯರೂಪಕ, ಚೌಡೇಶ್ವರಿ ಮಹಿಳಾ ಮಂಡಳಿಯಿಂದ ಕೋಲಾಟ, ದಿವಾಕರ ಮತ್ತು ತಂಡದಿಂದ ಹಾಗು ವೀರಾಂಜನೇಯ ಭಜನಾ ಮಂಡಳಿ ವತಿಯಿಂದ ಜಾನಪದ ಗೀತೆ, ಹೊಳೆಗಂಗೂರು ಸರ್ಕಾರಿ ಪ್ರೌಢ ಶಾಲೆ ವತಿಯಿಂದ ಕೋಲಾಟ ಹಾಗು ಸೋಂಪಾನಾಯ್ಕ ಮತ್ತು ತಂಡದವರಿಂದ ಬಣಜಾರ್ ಶೈಲಿಯ ಕೋಲಾಟ ಸೇರಿದಂತೆ ಜಾನಪದ ಕಾರ್ಯಕ್ರಮಗಳು ಜರುಗಿದವು.

ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಎಸ್. ಕುಮಾರ್‌ಗೆ ಅವಕಾಶ ನೀಡಿ

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಭದ್ರಾವತಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಎಸ್. ಕುಮಾರ್ ಸ್ಪರ್ಧಿಸಲು ಅವಕಾಶ ನೀಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಒತ್ತಾಯಿಸಿದೆ.
    ಭದ್ರಾವತಿ, ಜ. ೧೫:  : ಈ ಹಿಂದೆ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಾಬಲ್ಯ ಹೊಂದಿದ್ದ ಒಕ್ಕಲಿಗರು ಇದೀಗ ತಮ್ಮ ಪ್ರಾಬಲ್ಯ ಕಳೆದುಕೊಳ್ಳುತ್ತಿದ್ದಾರೆ. ಎಲ್ಲಾ ರಂಗದಲ್ಲೂ ಶೋಷಣೆಗೆ ಒಳಗಾಗುತ್ತಿದ್ದು, ಈಗಲಾದರೂ ಎಚ್ಚೆತ್ತುಕೊಂಡು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಘಟಿತರಾಗುವುದು ಅನಿವಾರ್ಯವಾಗಿದೆ ಎಂಬ ಸಂದೇಶದೊಂದಿಗೆ ಕಳೆದ ೩ ತಿಂಗಳ ಹಿಂದೆ ನೂತನವಾಗಿ ಅಸ್ತಿತ್ವಕ್ಕೆ ಬಂದ ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ ಇದೀಗ ಮತ್ತಷ್ಟು ಕ್ರಿಯಾಶೀಲವಾಗಿದ್ದು, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಎಸ್. ಕುಮಾರ್ ಸ್ಪರ್ಧಿಸಲು ಅವಕಾಶ ನೀಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಒತ್ತಾಯಿಸಿದೆ.
    ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಎಸ್. ಕುಮಾರ್‌ರವರು ಕ್ಷೇತ್ರದಲ್ಲಿ ತನ್ನದೇ ಆದ ವರ್ಚಸ್ಸನ್ನು ಹೊಂದಿದ್ದು, ೪ ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಅಲ್ಲದೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಗುರುತಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಬಾರಿ ಚುನಾವಣೆಯಲ್ಲಿ ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಸಿಗಬೇಕೆಂಬ ಉದ್ದೇಶದಿಂದ ಒಂದು ಬಾರಿ ಎಸ್. ಕುಮಾರ್‌ಗೆ ಅವಕಾಶ ನೀಡುವಂತೆ ವೇದಿಕೆ ಕೋರಿದೆ.
    ಸಂಸದ ಬಿ.ವೈ ರಾಘವೇಂದ್ರ, ಒಕ್ಕಲಿಗ ಸಮುದಾಯದ ಮುಖಂಡರು, ಮೇದಿಕೆ ಪ್ರಮುಖರು, ಬಿಜೆಪಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.  

Saturday, January 14, 2023

ಸಂಕ್ರಾಂತಿ-ಪೊಂಗಲ್ ಹಬ್ಬದ ಆಚರಣೆ : ಕ್ರೀಡಾ ಸ್ಪರ್ಧೆಗಳು


ಭದ್ರಾವತಿಯಲ್ಲಿ ಶ್ರೀಮಾರಿಯಮ್ಮ ಅಖಾಡ ಪೊಂಗಲ್ ಕಮಿಟಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ೫೪ನೇ ವರ್ಷದ ಸಂಕ್ರಾಂತಿ ಹಾಗು ಪೊಂಗಲ್ ಹಬ್ಬದ ಆಚರಣೆ ಹಮ್ಮಿಕೊಳ್ಳಲಾಗಿದ್ದು, ಶನಿವಾರ ಮಕ್ಕಳಿಗೆ ಮತ್ತು ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
    ಭದ್ರಾವತಿ, ಜ. ೧೪ : ನ್ಯೂಟೌನ್ ಆಂಜನೇಯ ಅಗ್ರಹಾರ, ಕೂಲಿಬ್ಲಾಕ್ ಶೆಡ್ ಶ್ರೀ ಮಾರಿಯಮ್ಮ ಅಖಾಡ ಪೊಂಗಲ್ ಕಮಿಟಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ೫೪ನೇ ವರ್ಷದ ಸಂಕ್ರಾಂತಿ ಹಾಗು ಪೊಂಗಲ್ ಹಬ್ಬದ ಆಚರಣೆ ಹಮ್ಮಿಕೊಳ್ಳಲಾಗಿದ್ದು, ಶನಿವಾರ ಮಕ್ಕಳಿಗೆ ಮತ್ತು ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
    ಕ್ರೀಡಾ ಸ್ಪರ್ಧೆಗಳಿಗೂ ಮೊದಲು ಮಾರಿಯಮ್ಮ ದೇವಿಗೆ ವಿಶೇಷ ಪೂಜೆ, ಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಿತು. ಲೆಮನ್ ಅಂಡ್ ಸ್ಪೂನ್, ಸೈಕಲ್ ರೈಸಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಿದವು. ಮಕ್ಕಳು, ಮಹಿಳೆಯರು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
    ಜ.೧೫ರ ಭಾನುವಾರ ಮಧ್ಯಾಹ್ನ ೧೨ ಗಂಟೆಗೆ ದನಗಳ ಪ್ರದರ್ಶನ ಸ್ಪರ್ಧೆ ಏರ್ಪಡಿಸಲಾಗಿದೆ. ೧೬ರಂದು ಸಂಜೆ ೭ ಗಂಟೆಗೆ ಬಹುಮಾನ ವಿತರಣೆ ನಡೆಯಲಿದೆ. ಶ್ರೀ ಮಾರಿಯಮ್ಮ ಅಖಾಡ ಪೊಂಗಲ್ ಕಮಿಟಿ ಪದಾಧಿಕಾರಿಗಳು, ಮುಖಂಡರು, ಸ್ಥಳೀಯರು ಉಪಸ್ಥಿತರಿದ್ದರು.

ವಿಐಎಸ್‌ಎಲ್ ಉಳಿಸಲು ದೇವೇಗೌಡರಿಗೆ ಜೆಡಿಎಸ್ ನಿಯೋಗದಿಂದ ಮನವಿ

ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಮುಚ್ಚುವ ಹುನ್ನಾರ ನಡೆಸುತ್ತಿದೆ ಎಂಬ ಸುದ್ದಿ ಕ್ಷೇತ್ರದಾದ್ಯಂತ ಹರಿದಾಡುತ್ತಿದ್ದು, ಈ ನಡುವೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಮೂಲಕ ವಿಐಎಸ್‌ಎಲ್ ಕಾರ್ಖಾನೆ ಉಳಿಸಿ ಕೊಡುವಂತೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ಜೆಡಿಎಸ್ ಪಕ್ಷದ ನಿಯೋಗ ಶನಿವಾರ ಮನವಿ ಸಲ್ಲಿಸಿತು.
    ಭದ್ರಾವತಿ, ಜ. ೧೪: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಮುಚ್ಚುವ ಹುನ್ನಾರ ನಡೆಸುತ್ತಿದೆ ಎಂಬ ಸುದ್ದಿ ಕ್ಷೇತ್ರದಾದ್ಯಂತ ಹರಿದಾಡುತ್ತಿದ್ದು, ಈ ನಡುವೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಮೂಲಕ ವಿಐಎಸ್‌ಎಲ್ ಕಾರ್ಖಾನೆ ಉಳಿಸಿ ಕೊಡುವಂತೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ಜೆಡಿಎಸ್ ಪಕ್ಷದ ನಿಯೋಗ ಶನಿವಾರ ಮನವಿ ಸಲ್ಲಿಸಿತು.
    ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಶಾರದ ಅಪ್ಪಾಜಿ ನೇತೃತ್ವದಲ್ಲಿ  ಕಾರ್ಖಾನೆಯ ಕಾರ್ಮಿಕರ ಸಂಘಟನೆಗಳ ಪ್ರಮುಖರೊಂದಿಗೆ ಸಂಜೆ ಬೆಂಗಳೂರಿನಲ್ಲಿ ದೇವೇಗೌಡರನ್ನು ಭೇಟಿ ಮಾಡಿದ ನಿಯೋಗ ಮನವಿ ಸಲ್ಲಿಸಿ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚಲು ಅವಕಾಶ ನೀಡಬಾರದು. ಒಂದು ವೇಳೆ ಕಾರ್ಖಾನೆ ಮುಚ್ಚಲ್ಪಟ್ಟಲ್ಲಿ ಸಾವಿರಾರು ಕಾರ್ಮಿಕರು ಹಾಗು ಅವರನ್ನು ಅವಲಂಬಿಸಿರುವ ಕುಟುಂಬದವರು ಬೀದಿಪಾಲಾಗುವ ಆತಂಕ ವ್ಯಕ್ತಪಡಿಸಿದರು.


    ನಿಯೋಗದಲ್ಲಿ ಪಕ್ಷದ ಪ್ರಮುಖರಾದ ಆರ್. ಕರುಣಾಮೂರ್ತಿ, ಡಿ.ಟಿ ಶ್ರೀಧರ್, ಉಮೇಶ್, ಭಾಗ್ಯಮ್ಮ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Friday, January 13, 2023

ವಿಐಎಸ್‌ಎಲ್ ಮುಚ್ಚುವ ಹುನ್ನಾರದ ವಿರುದ್ಧ ಕ್ಷೇತ್ರದಲ್ಲಿ ಆಕ್ರೋಶ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ
    ಭದ್ರಾವತಿ, ಜ. ೧೩: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಮುಚ್ಚುವ ಹುನ್ನಾರ ನಡೆಸುತ್ತಿದೆ ಎಂಬ ಸುದ್ದಿ ಕ್ಷೇತ್ರದಾದ್ಯಂತ ಹರಿದಾಡುತ್ತಿದ್ದು, ಈ ಸಂಬಂಧ ಕಾರ್ಮಿಕ ಸಂಘಟನೆಗಳು, ರಾಜಕೀಯ ಪಕ್ಷಗಳು ಉಗ್ರ ಹೋರಾಟಕ್ಕೆ ಮುಂದಾಗಿವೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಪ್ರತಿಕ್ರಿಯಿಸಿ, ಈ ಹಿಂದೆ ಕಾಂಗ್ರೆಸ್ ಪಕ್ಷ ನೀಡಿದ ಭರವಸೆಯಂತೆ ವಿಐಎಸ್‌ಎಲ್ ಕಾರ್ಖಾನೆಗೆ ಗಣಿಯನ್ನು ಮಂಜೂರಾತಿ ಮಾಡಿಕೊಟ್ಟಿದೆ. ಆದರೆ ಬಿಜೆಪಿ ಆಡಳಿತದ ಕೇಂದ್ರ ಸರ್ಕಾರ ತನ್ನ ನಿಲುವನ್ನು ಬದಲಿಸಿ ನೀಡಿದ ಭರವಸೆಯನ್ನು ಈಡೇರಿಸದೆ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಹೊರಟಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
    ವಿಐಎಸ್‌ಎಲ್ ಕಾರ್ಖಾನೆ ಕ್ಷೇತ್ರದ ಆರ್ಥಿಕ ಬೆನ್ನಲುಬಾಗಿದ್ದು, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸುಮಾರು ೨೦ ಸಾವಿರ ಕುಟುಂಬ ಕಾರ್ಖಾನೆಯನ್ನು ಅವಲಂಬಿಸಿ ಬದುಕುತ್ತಿದ್ದಾರೆ. ಜನರ ಜೀವನಾಧಾರವಾಗಿರುವ ಕಾರ್ಖಾನೆಯನ್ನು ಯಾವುದೇ ಕಾರಣದಿಂದಲೂ ಮುಚ್ಚಲು ಬಿಡುವುದಿಲ್ಲ. ಒಂದು ವೇಳೆ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಮುಂದಾದಲ್ಲಿ ಪಕ್ಷದ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
    ಸಮಾಜ ಸೇವಕ ಪೊಲೀಸ್ ಉಮೇಶ್ ಪ್ರತಿಕ್ರಿಯಿಸಿ, ಈಗಾಗಲೇ ಎಂಪಿಎಂ ಕಾರ್ಖಾನೆ ಮುಚ್ಚಿ ಹೋಗಿದೆ. ಇದೀಗ ವಿಐಎಸ್‌ಎಲ್ ಕಾರ್ಖಾನೆ ಸಹ ಮುಚ್ಚಿ ಹೋಗುತ್ತಿದ್ದು, ಇದರಿಂದಾಗಿ ಕ್ಷೇತ್ರದಲ್ಲಿ ಸಾವಿರಾರು ಕಾರ್ಮಿಕರು ಬೀದಿಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ. ಕ್ಷೇತ್ರದಲ್ಲಿ ನಿರುದ್ಯೋಗ ಬಹುದೊಡ್ಡ ಸಮಸ್ಯೆಯಾಗಲಿದ್ದು, ಇದೀಗ ಕ್ಷೇತ್ರದ ಜನರನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಎಲ್ಲರೂ ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ಹೋರಾಟ ನಡೆಸುವಂತೆ ಕರೆ ನೀಡಿದ್ದಾರೆ.
ಜೆಡಿಎಸ್ ಪಕ್ಷದಿಂದ ಜ.೧೪ರಂದು ದೇವೇಗೌಡರ ಭೇಟಿ:
    ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಮೂಲಕ ವಿಐಎಸ್‌ಎಲ್ ಕಾರ್ಖಾನೆ ಉಳಿಸಿ ಕೊಡುವಂತೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ಜೆಡಿಎಸ್ ಪಕ್ಷದ ನಿಯೋಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಶಾರದ ಅಪ್ಪಾಜಿ ನೇತೃತ್ವದಲ್ಲಿ ಜ.೧೪ರಂದು ಸಂಜೆ ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಿದೆ.
    ಈಗಾಗಲೇ ಕಾರ್ಮಿಕ ಸಂಘಟನೆಗಳು ಸಂಸದ ಬಿ.ವೈ ರಾಘವೇಂದ್ರ ಜೊತೆ ಚರ್ಚಿಸಿದ್ದು, ಸಂಸದ ಮುಂದಿನ ನಿಲುವು ಇನ್ನೂ ತಿಳಿದು ಬಂದಿಲ್ಲ.

ಸರ್ ಎಂ.ವಿ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ೧೬೦ನೇ ಜಯಂತಿ ಆಚರಣೆ

ಭದ್ರಾವತಿ ಬೊಮ್ಮನಕಟ್ಟೆ ಸರ್ ಎಂ.ವಿ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ೧೬೦ನೇ ಜಯಂತಿ ಆಚರಿಸಲಾಯಿತು.  
    ಭದ್ರಾವತಿ, ಜ. ೧೩ : ನಗರದ ಬೊಮ್ಮನಕಟ್ಟೆ ಸರ್ ಎಂ.ವಿ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ೧೬೦ನೇ ಜಯಂತಿ ಆಚರಿಸಲಾಯಿತು.  
     ಪ್ರೊ. ಬಿ.ಪಿ ಮಹದೇವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರದ ವಿವೇಕ ಜಾಗ್ರತಿ ಬಳಗದ ಲೀಲಾವತಿ ಸದಾಶಿವ ಮಾತನಾಡಿ, ವಿವೇಕಾನಂದರ ಆದರ್ಶಗಳು ಪ್ರಸ್ತುತ ಜೀವನಕ್ಕೆ ಬಹಳ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು.
    ಪೊ. ಡಿ. ರಮೇಶ್, ಪ್ರೊ. ಬಿ. ವಸಂತ ಕುಮಾರ್, ಪ್ರೊ. ಅರಸಯ್ಯ, ಡಾ. ಎಂ.ಸಿ ಪ್ರಭಾಕರ್ ಸೇರಿದಂತೆ ಅಧ್ಯಾಪಕ ಹಾಗು ಅಧ್ಯಾಪಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.  ಸಿ. ಸೋಮಶೇಖರ್ ಸ್ವಾಗತಿಸಿ, ಪ್ರೊ. ಡಿ. ಉಮೇಶ್ ವಂದಿಸಿದರು.

ಲಾಡ್ಜ್‌ನಲ್ಲಿ ವ್ಯಕ್ತಿಯ ಕತ್ತುಸೀಳಿ ಬರ್ಬರ ಹತ್ಯೆ

ಭದ್ರಾವತಿ ಬಿ.ಎಚ್ ರಸ್ತೆ, ನಗರಸಭೆ ಮಾರುಕಟ್ಟೆ ಮುಂಭಾಗ ಹೆರಿಟೇಜ್ ಲಾಡ್ಜ್‌ನಲ್ಲಿ ವ್ಯಕ್ತಿಯೊಬ್ಬರ ಕತ್ತು ಸೀಳಿ ಬರ್ಬರವಾಗಿ ಹತ್ಯೆಯಾಗಿರುವ ಜಾವಗಲ್‌ನ ಪರ್ವೇಜ್ ಖಾನ್ ಮತ್ತು ಮಾಧ್ಯಮಗಳ ಮುಂದೆ ಅಳಲು ತೋರ್ಪಡಿಸಿಕೊಳ್ಳುತ್ತಿರುವ ಆತನ ತಾಯಿ ಶಕೀಲಾ
    ಭದ್ರಾವತಿ, ಜ. ೧೩: ನಗರದ ಬಿ.ಎಚ್ ರಸ್ತೆ, ನಗರಸಭೆ ಮಾರುಕಟ್ಟೆ ಮುಂಭಾಗ ಹೋಟೆಲ್ ಹೆರಿಟೇಜ್ ಲಾಡ್ಜ್‌ನಲ್ಲಿ ವ್ಯಕ್ತಿಯೊಬ್ಬರ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ.
     ಹಾಸನ ಮೂಲದ ಪರ್ವೇಜ್ ಖಾನ್ ಎಂಬಾತನ ಕೊಲೆಯಾಗಿದೆ. ಪ್ರೇಯಸಿಯೇ ಈ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಮೂಲಃ ಹಾಸನ ಚನ್ನರಾಯಪಟ್ಟಣದ  ಆಯೇಷಾ ಮತ್ತು ಮೂಲಃ ಜಾವಗಲ್‌ನ ಪರ್ವೇಜ್ ಖಾನ್  ಇಬ್ಬರು ಕಳೆದ ೩-೪ ವರ್ಷಗಳಿಂದ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
     ಇದೇ ವಿಚಾರಕ್ಕೆ ಪತಿ ಆಯೇಷಾರನ್ನು ಬಿಟ್ಟಿದ್ದ ಎನ್ನಲಾಗಿದೆ. ಈ ನಡುವೆ ಗುರುವಾರ ಪರ್ವೇಜ್ ಹಾಗೂ ಆಯೇಷಾ ನಗರಕ್ಕೆ ಬಂದಿದ್ದಾರೆ.  ಲಾಡ್ಜ್‌ನಲ್ಲಿ ರೂಂ ಮಾಡಿಕೊಂಡಿದ್ದು, ರೂಂನಲ್ಲಿದ್ದ ಆಯೇಷಾ ಹಾಗೂ ಪರ್ವೇಜ್ ನಡುವೆ ಜಗಳವಾಗಿದೆ ಎನ್ನಲಾಗಿದ್ದು,  ಈ ವೇಳೆ ಪರ್ವೇಜ್ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
    ಕೊಲೆ ಬಳಿಕ ಆಯೇಷಾ ಹಿಂದಿರುಗಿ ಹಾಸನ ಪೊಲೀಸರ ಬಳಿ ಶರಣಾಗಿದ್ದಾಳೆ.  ಅಲ್ಲಿಂದ ಮಾಹಿತಿ ಪಡೆದಿರುವ ಹಳೇನಗರ ಠಾಣೆ ಪೊಲೀಸರು, ಆಯೇಷಾಳನ್ನು ಕರೆತಂದು, ಸ್ಥಳ ಮಹಜರ್ ನಡೆಸಿ ಶುಕ್ರವಾರ ಸಂಜೆ ವೇಳೆ ಸ್ಥಳದಿಂದ ಮೃತದೇಹವನ್ನು ತೆಗೆದಿದ್ದಾರೆ. ಕೊಲೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಗರ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಹಳೇನಗರ ಪೊಲೀಸ್ ಠಾಣಾಧಿಕಾರಿ ಕವಿತಾ ಹಾಗು ಶ್ವಾನದಳ ಮತ್ತು ದಾವಣಗೆರೆ ಎಫ್‌ಎಸ್‌ಎಲ್ ತಂಡ ಪರಿಶೀಲನೆ ನಡೆಸಿತು. ಸುದ್ದಿ ತಿಳಿಯುತ್ತಿದ್ದಂತೆ ಜನರು ಲಾಡ್ಜ್ ಬಳಿ ಜಮಾಯಿಸಿದ್ದರು.
    ನಂಬಿಸಿ ಕರೆತಂದು ಕೊಲೆ : ತಾಯಿ ಆರೋಪ
    ಹತ್ಯೆಯಾಗಿರುವ ಪರ್ವೇಜ್ ಖಾನ್ ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದು, ಈತನ ತಾಯಿ ಶಕೀಲಾ ಹತ್ಯೆ ಕುರಿತು ಪ್ರತಿಕ್ರಿಯಿಸಿ ಬೇರೆ ಮನೆ ಮಾಡುವುದಾಗಿ ನಂಬಿಸಿ ಕರೆದುಕೊಂಡು ಬಂದು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದರು.
ಆಯೇಷಾ 'ನನ್ನ ಬಳಿ ಸುಮಾರು ೧.೫ ಲಕ್ಷ ರು.ಗಳಿದ್ದು, ಬೇರೆ ಮನೆ ಮಾಡ್ತೀನಿ. ನನ್ನ ಜೊತೆ ಬಂದು ಬಿಡು.' ಎಂದು ಹೇಳಿ ನಂಬಿಸಿ ಕರೆದುಕೊಂಡು ಬಂದು ಕೊಲೆ ಮಾಡಿಸಲಾಗಿದೆ. ಅಲ್ಲದೆ ಬರುವ ಮುಂಚೆ ಪರ್ವೇಜ್ ಮೊಬೈಲ್ ಸಿಮ್ ಕಾರ್ಡ್ ತುಂಡು ಮಾಡಲಾಗಿದೆ ಎಂದು ಆರೋಪಿಸಿ ಕುಟುಂಬ ಆರ್ಥಿಕವಾಗಿ ಸಾಕಷ್ಟು ಸಂಕಷ್ಟದಲ್ಲಿದೆ. ಮನೆ ತುಂಬ ಸಾಲ ಮಾಡಲಾಗಿದೆ ಎಂದು ಅಳಲು ತೋರ್ಪಡಿಸಿಕೊಂಡರು.


ಭದ್ರಾವತಿ ಬಿ.ಎಚ್ ರಸ್ತೆ, ನಗರಸಭೆ ಮಾರುಕಟ್ಟೆ ಮುಂಭಾಗ ಹೆರಿಟೇಜ್ ಲಾಡ್ಜ್‌ನಲ್ಲಿ ವ್ಯಕ್ತಿಯೊಬ್ಬರ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶುಕ್ರವಾರ ಸಂಜೆ ವೇಳೆಗೆ ಸ್ಥಳದಿಂದ ಮೃತದೇಹ ತೆಗೆಯಲಾಯಿತು.