Wednesday, January 18, 2023

ನೂತನ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ, ಸ್ಥಳೀಯರಿಗೆ ಉದ್ಯೋಗ ಮೀಸಲಿಡಲು ಆಗ್ರಹಿಸಿ ಮನವಿ

ಜಿಲ್ಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡು ಲೋಕಾರ್ಪಣೆಗೆ ಎದುರು ನೋಡುತ್ತಿರುವ ವಿಮಾನ ನಿಲ್ದಾಣದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಿಡಲು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನೇತೃತ್ವದಲ್ಲಿ ಬುಧವಾರ ಭದ್ರಾವತಿಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜ. ೧೮: ಜಿಲ್ಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡು ಲೋಕಾರ್ಪಣೆಗೆ ಎದುರು ನೋಡುತ್ತಿರುವ ವಿಮಾನ ನಿಲ್ದಾಣದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಿಡಲು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನೇತೃತ್ವದಲ್ಲಿ ಬುಧವಾರ ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಈ ಸಂದರ್ಭದಲ್ಲಿ ಪ್ರಮುಖರು ಮಾತನಾಡಿ, ಫೆ.೧೨ರಂದು ಜಿಲ್ಲೆಗೆ ಆಗಮಿಸುತ್ತಿರುವ ಪ್ರಧಾನಿಗಳು ವಿಮಾನ ನಿಲ್ದಾಣ ಲೋಕಾರ್ಪಣೆಗೆ ಮುಂದಾಗಿರುವುದು ಶ್ಲಾಘನೀಯ. ಆದರೆ ಕನ್ನಡಿಗರಿಗೆ, ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆ ಇರುವುದಿಲ್ಲ. ರಾಜ್ಯದಲ್ಲಿರುವ ಎಲ್ಲಾ ವಿಮಾನ ನಿಲ್ದಾಣ ಹಾಗೂ ಎಲ್ಲಾ ಕ್ಷೇತ್ರಗಳಲ್ಲಿ ಹೊರ ರಾಜ್ಯದವರೇ ಆವರಿಸಿ ಕೊಂಡಿದ್ದಾರೆ. ಇದರಿಂದಾಗಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
    ತಕ್ಷಣ ಎಚ್ಚೆತ್ತುಕೊಂಡು ಕನ್ನಡಿಗರಿಗೆ, ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಲಾಯಿತು.
    ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ತಾಲೂಕು ಅಧ್ಯಕ್ಷ ನಾಗರಾಜ್ ರಾವ್ ಶಿಂಧೆ, ಯುವ ಘಟಕದ ಅಧ್ಯಕ್ಷ ಆರ್. ತ್ಯಾಗರಾಜ್ ಅರಳಿಹಳ್ಳಿ, ಕಾರ್ಯದರ್ಶಿ ಚಿಂಪಯ್ಯ,  ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ ಉಪಾಧ್ಯಕ್ಷ ಮುರಳಿ, ಜಿಲ್ಲಾ ಉಪಾಧ್ಯಕ್ಷ ಸಂತೋಷ್(ಶಾಮಿಯಾನ),  ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು,  ಶರತ್ ಕುಮಾರ್, ಸುರೇಶ್, ವಿನೋದ್‌ಕುಮಾರ್, ತೀರ್ಥಕುಮಾರ್, ರಾಜೇಂದ್ರ, ಆನಂದ್, ಮಲ್ಲಿಕಾರ್ಜುನ, ವೆಂಕಟೇಶ್, ಸಿಕಂದರ್, ಸುಮಿತ್ರಮ್ಮ, ವಾಣಿ, ಬಾನುಪ್ರಿಯ, ಲಲಿತಮ್ಮ ಮತ್ತು ಐಶ್ವರ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜಗಳ ಬಿಡಿಸಲು ಹೋದವನ ಮೇಲೆ ಮಾರಣಾಂತಿಕ ಹಲ್ಲೆ : ಆರೋಪಿಗೆ ೪ ವರ್ಷ ಸಾದಾ ಕಾರಾವಾಸ ಶಿಕ್ಷೆ

ಶಿಕ್ಷೆಗೊಳಗಾದ ಮನುಸಿಂಗ್ ಅಲಿಯಾಸ್ ಮನು
    ಭದ್ರಾವತಿ, ಜ. ೧೮ : ಜಗಳ ಬಿಡಿಸಲು ಬಂದ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಯುವಕನಿಗೆ ೪ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ೪ ವರ್ಷ ಸಾದಾ ಕಾರಾವಾಸ ಮತ್ತು ೨೫ ಸಾವಿರ ರು.ದಂಡ, ಒಂದು ವೇಳೆ ದಂಡ ಕಟ್ಟಲು ವಿಫಲನಾದಲ್ಲಿ ೬ ತಿಂಗಳು ಕಾರಾವಾಸ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
    ೨೪-೦೯-೨೦೧೮ ರಂದು ಮಧ್ಯಾಹ್ನ ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೇಬಾಗಿ ಗ್ರಾಮದ ಚೇತನ್(೨೧) ಇವರ ದೊಡ್ಡಮ್ಮನೊಂದಿಗೆ ಶಿವರುದ್ರಪ್ಪ ಅಲಿಯಾಸ್ ಶಿವು ಎಂಬುವವನು ಹಳೆಯ ದ್ವೇಷದಿಂದ ಜಗಳ ಮಾಡುತ್ತಿದ್ದಾಗ ಬಿಡಿಸಲು ಹೋಗಿದ್ದು, ಈ ಸಂದರ್ಭದಲ್ಲಿ ಚೇತನ್ ಮೇಲೆ ಮನುಸಿಂಗ್ ಅಲಿಯಾಸ್ ಮನು(೨೦) ಎಂಬುವವನು ಮಚ್ಚಿನಿಂದ ತಲೆಗೆ ಮತ್ತು ಕೈಬೆರಳಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿತ್ತು.
    ಆಗಿನ ತನಿಖಾಧಿಕಾರಿಯಾಗಿದ್ದ ಡಿ.ಆರ್ ಭರತ್ ಕುಮಾರ್ ಪ್ರಕರಣದ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ  ಸರ್ಕಾರಿ ಅಭಿಯೋಜಕರಾದ ರತ್ನಮ್ಮ, ವಾದ ಮಂಡಿಸಿದ್ದು, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಧೀಶರಾದ ಆರ್.ವೈ ಶಶಿಧರ್ ಆರೋಪ ದೃಢಪಟ್ಟ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.  

ಭದ್ರಾವತಿ ನಗರಸಭೆ : ಹಲವು ಹೊಸ ಘೋಷಣೆಗಳೊಂದಿಗೆ ೧.೨೨ ಕೋ. ರು. ಉಳಿತಾಯ ಬಜೆಟ್

ಮೊದಲ ಬಾರಿಗೆ ಬಜೆಟ್ ಮಂಡಿಸಿದ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ 

ಭದ್ರಾವತಿ ನಗರಸಭೆವತಿಯಿಂದ ಪ್ರಸಕ್ತ ಸಾಲಿನ ೧.೨೨ ಕೋ.ರು. ಉಳಿತಾಯ ಬಜೆಟ್ ಬುಧವಾರ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಮಂಡಿಸಿದರು

    ಭದ್ರಾವತಿ, ಜ. ೧೮: ನಗರಸಭೆವತಿಯಿಂದ ಪ್ರಸಕ್ತ ಸಾಲಿನ ೧.೨೨ ಕೋ.ರು. ಉಳಿತಾಯ ಬಜೆಟ್ ಬುಧವಾರ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಮಂಡಿಸಿದರು.
    ಪ್ರಾರಂಭರಂಭ ಶಿಲ್ಕು-೪೩೪೫.೫೧ ಲಕ್ಷ, ಒಟ್ಟು ಜಮಾ-೧೦೧೨೨.೨೬ ಲಕ್ಷ, ಒಟ್ಟು ಖರ್ಚು- ೯೯೯೯.೫೦ ಲಕ್ಷ ಹಾಗು ಅಖೈರು ಶಿಲ್ಕು-೧೨೨.೭೬ ಲಕ್ಷ ರು. ನಿರೀಕ್ಷಿಸಲಾಗಿದೆ ಎಂದರು.
    ಹೊಸ ಘೋಷಣೆಗಳು :
    ಆಡಳಿತ ವಿಭಾಗ : ಕಛೇರಿಯ ಅಭಿಲೇಖಾಲಯವನ್ನು ಆಧುನೀಕರಣಗೊಳಿಸಿ ಕಡತಗಳನ್ನು ಡಿಜಿಟಲೀಕರಣಗೊಳಿಸಿ ಕಡತಗಳನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಿಸಲು ಕ್ರಮವಹಿಸಲಾಗುತ್ತಿದ್ದು, ಸದರಿ ಆರ್ಥಿಕ ವರ್ಷದಲ್ಲಿ ಶೇ.೮೦ ರಷ್ಟು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.
    ನಗರಸಭೆ ವ್ಯಾಪ್ತಿಯ ಸಂತೆ ಮೈದಾನದಲ್ಲಿ ನಡೆಯುವ ವಾರದ ಸಂತೆಯನ್ನು ಎಲ್ಲರ ಅಭಿಪ್ರಾಯ ಪಡೆದು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಿ ಸಂತೆ ಮೈದಾನದ ಜಾಗದಲ್ಲಿ ನಗರಸಭೆಯ ನೂತನ ಕಟ್ಟಡವನ್ನು ನಿರ್ಮಾಣ ಮಾಡಲು ಉದ್ದೇಶಿಸಿದ್ದು, ವಿಸ್ತ್ರತ ಯೋಜನಾ ವರದಿ (ಡಿ.ಪಿ.ಆರ್) ತಯಾರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ ಎಂದರು.
    ಇ-ಆಡಳಿತ ತಂತ್ರಜ್ಞಾನ ಅನುಷ್ಠಾನ:
    ಭದ್ರಾವತಿ ನಗರಸಭೆಯು ಕಛೇರಿ ಆಡಳಿತವನ್ನು ಪಾರದರ್ಶಕ, ನಾಗರೀಕ ಸ್ನೇಹಿಯನ್ನಾಗಿಸುವ ನಿಟ್ಟಿನಲ್ಲಿ ಈ ಹಿಂದೆ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಗಣಕೀಕೃತ ಕಾಗದರಹಿತ ಕಛೇರಿಯನ್ನಾಗಿ ಪರಿವರ್ತಿಸಿ ಆಡಳಿತ ನಡೆಸುತ್ತಿದ್ದು, ಈಗಾಗಲೇ ಕಛೇರಿಯ ಎಲ್ಲಾ ಆಡಳಿತ ಅಧಿಕಾರಿಗಳು ಮತ್ತು ಸಿಬ್ಬಂದಿ ಸರ್ಕಾರದ ಸುತ್ತೋಲೆಯನುಸಾರ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದರಿಂದ ಪರಿಣಿತ ಸಿಬ್ಬಂದಿಯನ್ನು ನಗರಸಭೆಯು ಹೊಂದಿರುವುದು ದೃಢಪಟ್ಟಿರುವುದರಿಂದ ಈ ಕಾಗದರಹಿತ ಆಡಳಿತವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಪರಿಣಾಮಕಾರಿಯಾಗಿ ವಿವಿಧ ಇಲಾಖೆಗಳ ಸಮನ್ವಯತೆಯೊಂದಿಗೆ ಅತ್ಯಂತ ಹೆಚ್ಚಿನ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಲನುವಾಗುವಂತೆ ನಗರಸಭೆಯ ಸಮಗ್ರ ಆಡಳಿತ ನಿರ್ವಹಣೆಯನ್ನು ಇ-ಆಫೀಸ್ ತಂತ್ರಾಂಶವನ್ನು ಅಳವಡಿಸಿ ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
    ನ್ಯೂಟೌನ್ ಭಾಗದ ಎನ್.ಟಿ.ಬಿ ಕಛೇರಿಯಲ್ಲಿ ಶಾಖೆಯ ಪ್ರಾರಂಭ :
    ನಗರಸಭೆಯ ಆಡಳಿತ ಕಾರ್ಯ ನಿರ್ವಹಣೆಯನ್ನು ಜನ ಸ್ನೇಹಿಯನ್ನಾಗಿಸುವ ನಿಟ್ಟಿನಲ್ಲಿ ಹಾಗೂ ನ್ಯೂ ಟೌನ್ ಭಾಗದ ನಾಗರೀಕರ ಬಹುದಿನಗಳ ಬೇಡಿಕೆಯಂತೆ ಕೇಂದ್ರಿಕೃತ ಆಡಳಿತ ವ್ಯವಸ್ಥೆಯನ್ನು ವಿಕೇಂದ್ರಿಕರಣಗೊಳಿಸಿ ಸುಗಮ ಆಡಳಿತ ನಿರ್ವಹಣೆಗೆ ಅನುವಾಗುವಂತೆ ನಗರಸಭೆ ಕಛೇರಿಯ ವಿವಿಧ ಅಗತ್ಯ ಸೇವೆಗಳಾದ ಆಸ್ತಿ ತೆರಿಗೆ ಪಾವತಿ, ನೀರಿನ ಶುಲ್ಕ ಪಾವತಿ, ಮತ್ತು ನ್ಯೂ ಟೌನ್ ಭಾಗದ ಸ್ವಚ್ಛತೆಯನ್ನು ವ್ಯವಸ್ಥಿತವಾಗಿ ಮತ್ತು ತ್ವರಿತಗತಿಯಲ್ಲಿ ಕೈಗೊಳ್ಳಲನುವಾಗುವಂತೆ ಎನ್.ಟಿ.ಬಿ ಕಛೇರಿ ಕಟ್ಟಡದಲ್ಲಿ ಶಾಖೆಯನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದರು.
    ಕಂದಾಯ ವಿಭಾಗ :
    ೨೦೨೩-೨೪ ನೇ ಸಾಲಿನಲ್ಲಿ ತೆರಿಗೆಗಳಾದ ಆಸ್ತಿ ತೆರಿಗೆ, ಕುಡಿಯುವ ನೀರಿನ ಶುಲ್ಕ, ಉದ್ದಿಮೆ ಪರವಾನಿಗೆ ಶುಲ್ಕ, ಕಟ್ಟಡ ಪರವಾನಿಗೆ ಶುಲ್ಕ ಹಾಗೂ ಇತರೆ ಜಮೆಗಳನ್ನು ಸರ್ಕಾರದಿಂದ ಅಭಿವೃದ್ಧಿ ಪಡಿಸಿರುವ ತಂತ್ರಾಂಶಗಳ ಮೂಲಕ ಚಲನ್‌ಗಳನ್ನು ಸಿದ್ಧಪಡಿಸಿ ನಗರಸಭೆ ಆವರಣದಲ್ಲಿರುವ ಬ್ಯಾಂಕ್ ಕೌಂಟರ್‌ನಲ್ಲಿ ಜಮೆ ಮಾಡಬಹುದಾಗಿದ್ದು, ಪ್ರಸ್ತುತ  Google pay/Phone pay/Ptym/Bhim ಇತರೆ ಬಿ.ಬಿ.ಪಿ.ಎಸ್ ಪಾವತಿ ವ್ಯವಸ್ಥೆಗಳ ಮೂಲಕ ಪಾರದರ್ಶಕ ಪಾವತಿಗೆ ಕ್ರಮವಹಿಸಿ ನಗದು ರಹಿತ ವ್ಯವಸ್ಥೆ ಅನುಷ್ಠಾನಗೊಳಿಸಲಾಗುವುದು.
    ನಗರದ ನಾಗರೀಕರ ಆಸ್ತಿ ಮಾಹಿತಿಗಳ ದಾಖಲೆಗಳನ್ನು ಗಣಕೀಕರಣಗೊಳಿಸಿ ಆನ್‌ಲೈನ್ ತಂತ್ರಾಂಶದ ಮೂಲಕ ಕೆ.ಎಂ.ಎಫ್-೨೪ ರನ್ನು ಡಿಜಿಟಲೀಕರಣಗೊಳಿಸಿ ಆಸ್ತಿ ಮಾಹಿತಿಯು ಸಂಬಂಧಿತ ಆಸ್ತಿ ಮಾಲೀಕರುಗಳಿಗೆ ಸರಳ ರೀತಿಯಲ್ಲಿ ಸಿಗುವ ವ್ಯವಸ್ಥೆ ಕೈಗೊಂಡಿದ್ದು, ಆ ಮೂಲಕ ಆಸ್ತಿ ತೆರಿಗೆ ಪಾವತಿಯನ್ನು ಆನ್‌ಲೈನ್ ಮೂಲಕ ಪಾವತಿಸಲು, ಆಸ್ತಿ ವಿವರಗಳನ್ನು ತಮ್ಮ ಹಂತದಲ್ಲಿಯೇ ಪರಿಶೀಲಿಸಿಕೊಳ್ಳಲು ಅನುಕೂಲವಾಗುವುದರ ಜೊತೆಗೆ ಕಂದಾಯ ಶಾಖೆಯಲ್ಲಿ ನಿರ್ವಹಿಸುತ್ತಿರುವ ನಾಗರೀಕರ ಎಲ್ಲಾ ಆಸ್ತಿ ಮಾಹಿತಿಗಳು ಸುಲಭವಾಗಿ ಮತ್ತು ಸರಳವಾಗಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರ ಅರ್ಜಿ ವಿಲೇಪಡಿಸುವಲ್ಲಿ ಅನವಶ್ಯಕವಾಗಿ ವಿಳಂಬವಾಗುವುದನ್ನು ತಪ್ಪಿಸಬಹುದಾಗಿದೆ ಮತ್ತು ನಗರ ವ್ಯಾಪ್ತಿಯ ಸಮಗ್ರ ಆಸ್ತಿಗಳ ಸಮೀಕ್ಷೆ ನಡೆಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸಿ ನಗರಸಭೆಯ ಆರ್ಥಿಕ ಸಂಪನ್ಮೂಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಯನುಸಾರ ಕ್ರಮವಹಿಸಲಾಗುವುದು ಎಂದರು.
    ಆರೋಗ್ಯ ವಿಭಾಗ:
    ಹಿರಿಯೂರು ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗುವ ತ್ಯಾಜ್ಯ ವಸ್ತುಗಳನ್ನು ಸಂಸ್ಕರಿಸಿ ವಿಲೇವಾರಿ ಮಾಡಲು ಅಂದಾಜು ರೂ ೧೦೦.೦೦ ಲಕ್ಷ ಅನುದಾನದಲ್ಲಿ ಯಂತ್ರೋಪಕರಣಗಳನ್ನು ಅಳವಡಿಸಲು ಕ್ರಮವಹಿಸಲಾಗಿದೆ. ಸದರಿ ಘಟಕದಲ್ಲಿ ಉತ್ಪತ್ತಿಯಾಗುವ ಸಾವಯವ ಗೊಬ್ಬರವನ್ನು ರೈತರಿಗೆ ರಿಯಾಯಿತಿ ದರದಲ್ಲಿ ನೀಡಲಾಗುವುದು.
    ನಗರದ ಸಂತೆ ಮೈದಾನದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಆಹಾರ ತಯಾರಿಕೆಗೆ ಎಲ್.ಪಿ.ಜಿ ಗ್ಯಾಸ್ ಬದಲಾಗಿ ನಗರದಲ್ಲಿ ಉತ್ಪತ್ತಿಯಾಗುವ ಹಸಿ ಕಸದಿಂದ ಬಯೋ ಗ್ಯಾಸ್ ಉತ್ಪಾದಿಸಲು ಬಯೋ ಮಿಥನೈಜಶನ್ ಪ್ಲಾಂಟ್‌ನ್ನು ಅಳವಡಿಸಲು ಹಾಗು ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರಿಗೆ ವಿಶ್ರಾಂತಿ ತೆಗೆದುಕೊಳ್ಳಲು ೦೨ ಸಂಖ್ಯೆಯ ಫ್ಯಾಬ್ರಿಕೇಟೆಡ್ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲು
ಕ್ರಮವಹಿಸಲಾಗುವುದು ಎಂದರು.
    ಕಾಮಗಾರಿ ವಿಭಾಗ:
    ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ (ಮುನಿಸಿಪಾಲಿಟಿ) ಯೋಜನೆ ಹಂತ-೪ರಡಿ ಭದ್ರಾವತಿ ನಗರಸಭೆಗೆ ರೂ ೩೪೦೦.೦೦ ಲಕ್ಷ ಅನುದಾನಕ್ಕೆ ಕ್ರಿಯಾಯೋಜನೆ ಮಂಜೂರಾಗಿದ್ದು, ಪೌರಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ರೂ ೧೬೩.೮೮ ಲಕ್ಷ, ಪರಿಶಿಷ್ಟ ಜಾತಿ ಕಲ್ಯಾಣ ಕಾರ್ಯಕ್ರಮಗಳಿಗೆ ರೂ. ೪೬೬.೪೮ ಲಕ್ಷ, ಪರಿಶಿಷ್ಟ ಪಂಗಡ ಕಲ್ಯಾಣ ಕಾರ್ಯಕ್ರಮಗಳಿಗೆ ರೂ ೧೮೯,೦೪ ಲಕ್ಷ ಇತರೆ ಬಡವರ್ಗದವರ ಕಲ್ಯಾಣ ಕಾರ್ಯಕ್ರಮಗಳಿಗೆ ರೂ. ೨೪೬.೫೦ ಲಕ್ಷ, ದಿವ್ಯಾಂಗ ಕಲ್ಯಾಣ ಕಾರ್ಯಕ್ರಮಗಳಿಗೆ ರೂ ೧೭೦.೦೦ ಲಕ್ಷ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ರೂ ೨೧೬೪.೧೦ ಲಕ್ಷಗಳನ್ನು ಮೀಸಲಿರಿಸಲಾಗಿದ್ದು, ವೈಯಕ್ತಿಕ ಕಾರ್ಯಕ್ರಮಗಳ ಸೌಲಭ್ಯಕ್ಕಾಗಿ ಫಲಾನುಭವಿಗಳ ಆಯ್ಕೆಗೆ ಕ್ರಮವಹಿಸಲಾಗಿದೆ. ಹಾಗೂ ಒಟ್ಟಾರೆಯಾಗಿ ರಸ್ತೆ, ಚರಂಡಿ, ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ರೂ. ೨೧೪೮ ಲಕ್ಷಗಳ ಕಾಮಗಾರಿಗಳಿಗೆ ಹಾಗೂ ನಗರದ ಪ್ರಮುಖ ರಸ್ತೆಗಳಿಗೆ Decorative Conical Electrical Pole  ಅಳವಡಿಸಿ ಬೀದಿ ದೀಪಗಳನ್ನು ಅಳವಡಿಸುವ ರೂ ೪೪೭.೯೦ ಲಕ್ಷದ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.
    ೨೦೨೩-೨೪ ನೇ ಸಾಲಿಗೆ ಕೇಂದ್ರ ಮತ್ತು ರಾಜ್ಯ ಪುರಸ್ಕೃತ ಯೋಜನೆಯಾದ “ಅಮೃತ್-೨ ಯೋಜನೆಯಡಿ ಕೆರೆ ಅಭಿವೃದ್ಧಿ ಮತ್ತು ಉದ್ಯಾನವನ ಅಭಿವೃದ್ಧಿಗಾಗಿ ೧೮.೦೦ ಕೋಟಿ ಅನುದಾನ ಮಂಜೂರಾತಿ ನಿರೀಕ್ಷಣೆಯಲ್ಲಿದ್ದು, ಹಾಗು ನಗರದ ಹಳೇನಗರ ಭಾಗದಲ್ಲಿ ಈ ಹಿಂದೆ ಕೆ.ಎಂ.ಆರ್.ಪಿ ಯೋಜನೆಯಡಿ ಕೈಗೊಂಡ ಒಳಚರಂಡಿ ಕಾಮಗಾರಿ ಅಪೂರ್ಣಗೊಂಡಿದ್ದು, ಬಾಕಿ ಇರುವ ಒಳಚರಂಡಿ ಕಾಮಗಾರಿ ಒಳಗೊಂಡಂತೆ ಹಳೇನಗರ ವ್ಯಾಪ್ತಿಯ ಪೂರ್ಣ ಬಡಾವಣೆಗಳಿಗೆ ರೂ ೩೦.೦೦ ಕೋಟಿ ಅನುದಾನದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದ್ದು, ಪ್ರಸ್ತಾವನೆ ಚಾಲನೆಯಲ್ಲಿರುತ್ತದೆ ಎಂದರು.


    ನಗರಸಭೆಯಿಂದ ೨೦೨೨-೨೩ನೇ ಸಾಲಿನಲ್ಲಿ ಬಿ.ಹೆಚ್.ರಸ್ತೆಯಲ್ಲಿ ನಗರ ಭೂ ಸಾರಿಗೆ ಅನುದಾನದಡಿ ರೂ. ೨೧೭.೦೦ ಲಕ್ಷಗಳಲ್ಲಿ ಸುಸಜ್ಜಿತ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಮತ್ತು ನಗರಸಭೆಯಿಂದ ೨೦೨೨-೨೩ನೇ ಸಾಲಿನಲ್ಲಿ ಎಸ್.ಎಫ್.ಸಿ ನಿಧಿಯಡಿ ರೂ ೧೮೦.೨೩ ಲಕ್ಷಗಳಲ್ಲಿ ಕನಕ ಮಂಟಪ ಸಮೀಪ ನಗರಸಭಾ ಅಧಿಕಾರಿ ಮತ್ತು ನೌಕರರಿಗೆ ಜಿ+೩ ಮಾದರಿಯಲ್ಲಿ ೧೨ ವಸತಿ ಗೃಹಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುತ್ತದೆ ಎಂದರು.
    ನಗರಸಭೆಯಿಂದ ಜೈಭೀಮ್ ನಗರದಲ್ಲಿ ಖಾಯಂ ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ಜಿ+೩ ಮಾದರಿಯಲ್ಲಿ ೦೫ ಬ್ಲಾಕ್ ಗಳಲ್ಲಿ ಒಟ್ಟು ೧೪ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಮುಕ್ತಾಯದ ಹಂತದಲ್ಲಿರುತ್ತದೆ. ಹಾಗು ನಗರದ ಬಿ.ಹೆಚ್.ರಸ್ತೆ ಡಾ|| ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಹಾಲಿ ಇರುವ ೮ ಅಡಿ ಎತ್ತರ ಕಂಚಿನ ಪ್ರತಿಮೆಯನ್ನು ಬದಲಾಯಿಸಿ ೧೨ ಅಡಿ ಎತ್ತರದ ಡಾ| ಬಿ.ಆರ್.ಅಂಬೇಡ್ಕರ್ ರವರ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಲು
ಕ್ರಮವಹಿಸಲಾಗುತ್ತಿದೆ ಎಂದರು.
    ನಗರ ಭೂ ಸಾರಿಗೆ ನಿರ್ದೇಶನಾಲಯ ಇಲಾಖೆವತಿಯಿಂದ ತರೀಕೆರೆ ರಸ್ತೆಯ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನ ಹಿಂಬದಿಯಲ್ಲಿರುವ ಕನ್ಸರ್‌ವೆನ್ಸಿ ಜಾಗದಲ್ಲಿ ಸುಮಾರು ರೂ. ೪೪.೦೦ ಲಕ್ಷ ಅನುದಾನದಲ್ಲಿ ಸುಸಜ್ಜಿತ Two wheeler Stand ನಿರ್ಮಾಣ ಕಾಮಗಾರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ರಸ್ತೆಯಿಂದ ಬಸವೇಶ್ವರ ವೃತ್ತದವರೆಗೆ ರಸ್ತೆಯ ಎರಡು ಬದಿಯಲ್ಲಿ ಸುಮಾರು ರೂ ೯೩.೦೦ ಲಕ್ಷ ಅನುದಾನದಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಾಣ ಕಾಮಗಾರಿ ಹಾಗೂ ನಗರದ ಬಿ.ಹೆಚ್.ರಸ್ತೆ ಪದ್ಮನಿಲಯ ಹೋಟೆಲ್ ನಿಂದ ಹಳೇ ಸೇತುವೆ ಸ್ವಸ್ತಿಕ್ ಹಾರ್ಡ್‌ವೇರ್ ವರೆಗೆ ರಸ್ತೆಯ ಎರಡು ಬದಿಯಲ್ಲಿ ಸುಮಾರು ರೂ ೩೧೫.೦೦ ಲಕ್ಷಗಳ ಅನುದಾನದಲ್ಲಿ ಪುಟ್ ಪಾತ್ (ಪಾದಚಾರಿ ಮಾರ್ಗ) ಅಭಿವೃದ್ಧಿ ಕಾಮಗಾರಿ ಮತ್ತು ಕೆ.ಎಸ್.ಆರ್.ಟಿ.ಸಿ ಡಿಪೋ ವೃತ್ತದಿಂದ ಹೊಸ ಸೇತುವೆವರೆಗೆ ರಸ್ತೆಯ ಎರಡು ಬದಿಯಲ್ಲಿ ಸುಮಾರು ರೂ ೨೩೮.೦೦ ಲಕ್ಷಗಳ ಅನುದಾನದಲ್ಲಿ ಪುಟ್ ಪಾತ್ (ಪಾದಚಾರಿ ಮಾರ್ಗ) ಅಭಿವೃದ್ಧಿ ಕಾಮಗಾರಿ ಮಂಜೂರಾತಿ ದೊರೆತಿದ್ದು, ಅನುಷ್ಠಾನ ಕಾರ್ಯ ಪ್ರಗತಿಯಲ್ಲಿರುತ್ತದೆ ಎಂದರು.
    ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಪೌರಾಯುಕ್ತ ಎಚ್.ಎಂ. ಮನುಕುಮಾರ್ ಉಪಸ್ಥಿತರಿದ್ದರು.

Tuesday, January 17, 2023

ಸಂಘಟನೆಯಲ್ಲಿ ಒಗ್ಗಟ್ಟು ಬಹಳ ಮುಖ್ಯ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ಹಳೇನಗರದ ಶ್ರೀ ವೀರಶೈವ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದ ೪ನೇ ವರ್ಷದ ವಾರ್ಷಿಕೋತ್ಸವ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ಜ. ೧೭ : ಸಂಘಟನೆಯಲ್ಲಿ ಒಗ್ಗಟ್ಟು ಬಹಳ ಮುಖ್ಯವಾಗಿದ್ದು, ವೀರಶೈವ ಲಿಂಗಾಯತ ಮಹಿಳೆಯರು ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದರು.
    ಅವರು ಮಂಗಳವಾರ ಹಳೇನಗರದ ಶ್ರೀ ವೀರಶೈವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದ ೪ನೇ ವರ್ಷದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
    ಎಲ್ಲರೂ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು.  ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧವಾಗಿದ್ದೇನೆ ಎಂದರು.
    ಸಮಾಜದ ಅಧ್ಯಕ್ಷೆ ಆರ್.ಎಸ್ ಶೋಭಾ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಎಚ್. ಭುವನೇಶ್ವರ್, ನಗರಸಭೆ ಸ್ಥಾಯಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಸದಸ್ಯರಾದ ಬಿ.ಕೆ ಮೋಹನ್, ಅನುಪಮ ಚನ್ನೇಶ್, ಟಿಪ್ಪುಸುಲ್ತಾನ್, ಸಮಾಜದ ಗೌರವಾಧ್ಯಕ್ಷೆ ಗೌರಮ್ಮ ಶಂಕ್ರಯ್ಯ, ಉಪಾಧ್ಯಕ್ಷೆ ಭಾಗ್ಯ ನಿಜಗುಣ, ನಿರ್ದೇಶಕಿ ಎಸ್. ಗುಣ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಪ್ರಧಾನ ಕಾರ್ಯದರ್ಶಿ ನಾಗರತ್ನ ವಾಗೀಶ್‌ಕೋಠಿ ವಾರ್ಷಿಕ ವರದಿ ಮಂಡಿಸಿದರು. ರೂಪ ನಾಗರಾಜ್ ಸ್ವಾಗತಿಸಿದರು.  ಉಷಾ ವೀರಶೇಖರ್ ನಿರೂಪಿಸಿದರು. ವೀರಶೈವ ಲಿಂಗಾಯತ ಮಹಿಳಾ ಸಮಾಜದ ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಸಮಾಜದ ಸದಸ್ಯರು ಪಾಲ್ಗೊಂಡಿದ್ದರು.

ಹಳೇ ಸಂತೆಮೈದಾನ ಸ್ಥಳಾಂತರ ಸುದ್ದಿ : ರೈತರು, ವ್ಯಾಪಾರಸ್ಥರಲ್ಲಿ ಆತಂಕ

ನಿರ್ಧಾರ ಕೈಗೊಳ್ಳುವ ಮೊದಲೇ ಹೋರಾಟ ಎಚ್ಚರಿಕೆ

ಭದ್ರಾವತಿ ಹೊಸಮನೆ ಮುಖ್ಯ ರಸ್ತೆಯಲ್ಲಿರುವ ಸುಮಾರು ೬ ದಶಕಗಳಿಗೂ ಹೆಚ್ಚಿನ ಕಾಲದ ಇತಿಹಾಸ ಹೊಂದಿರುವ ಹಳೇ ಸಂತೆಮೈದಾನ.

    * ಅನಂತಕುಮಾರ್
    ಭದ್ರಾವತಿ : ನಗರದ ಹೊಸಮನೆ ಮುಖ್ಯ ರಸ್ತೆಯಲ್ಲಿರುವ ಸುಮಾರು ೬ ದಶಕಗಳಿಗೂ ಹೆಚ್ಚಿನ ಕಾಲದ ಇತಿಹಾಸ ಹೊಂದಿರುವ ಹಳೇ ಸಂತೆಮೈದಾನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಗೊಳ್ಳಲಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡ ತೊಡಗಿದೆ. ಈ ನಡುವೆ ಸ್ಥಳಾಂತರಕ್ಕೆ ಅವಕಾಶ ನೀಡದಂತೆ ಜಾಗೃತಿ ಮೂಡಿಸುವ ಕಾರ್ಯ ಸಹ ನಡೆದಿದೆ.
      'ಭದ್ರಾವತಿ ಭಾನುವಾರ ಸಂತೆ' ನಾಡಿನಾದ್ಯಂತ ತನ್ನದೇ ಆದ ಪ್ರಸಿದ್ದಿ ಪಡೆದುಕೊಂಡಿದ್ದು, ಒಂದು ಕಾಲದಲ್ಲಿ ಸಂತೆಗೆ ಹೋಗುವುದೇ ಒಂದು ರೀತಿಯ ಹಬ್ಬದ ಸಂಭ್ರಮವಾಗಿತ್ತು. ನಗರಸಭೆ ಅಸ್ತಿತ್ವಕ್ಕೆ ಬರುವ ಮೊದಲೇ ಪುರಸಭೆ ಅಧೀನದಲ್ಲಿ ಈ ಸಂತೆ ಮೈದಾನದಲ್ಲಿ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದವು. ತಾಲೂಕಿನ ವಿವಿಧೆಡೆಗಳಿಂದ ರೈತರು, ನಗರ ಪ್ರದೇಶದ ವರ್ತಕರು, ಬೀದಿಬದಿ ವ್ಯಾಪಾರಿಗಳು ನಿರಾಂತಕವಾಗಿ ತಮ್ಮ ವ್ಯಾಪಾರ ವಹಿವಾಟು ನಡೆಸಿಕೊಂಡು ಬರುತ್ತಿದ್ದಾರೆ. ಗ್ರಾಮ ಮತ್ತು ನಗರ ಪ್ರದೇಶದ ಸಾವಿರಾರು ಜನ ಸಂತೆಯಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ. ಕೆಲವು ಕಠಿಣ ಸಂದರ್ಭದ ಸಮಯದಲ್ಲಿ ಮಾತ್ರ ಸಂತೆ ಸ್ಥಗಿತಗೊಂಡಿರುವುದು ಬಿಟ್ಟರೇ ಉಳಿದಂತೆ ಯಾವುದೇ ಕಾರಣಕ್ಕೂ ಸಂತೆ ಸ್ಥಗಿತಗೊಂಡಿರುವ ಉದಾಹರಣೆಗಳಿಲ್ಲ. ದವಸ ಧಾನ್ಯ, ತರಕಾರಿ, ತಿಂಡಿತಿನಿಸುಗಳು, ಕುರಿ, ಕೋಳಿ, ಕೃಷಿ ಪರಿಕರಗಳು, ಗೃಹಪಯೋಗಿ ಬಳಕೆ ವಸ್ತುಗಳ ವ್ಯಾಪಾರ ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ. ಜನರು ೧ ವಾರಕ್ಕೆ ಅಗತ್ಯವಿರುವಷ್ಟನ್ನು ಖರೀದಿಸಿಕೊಂಡು ಹೋಗುತ್ತಿದ್ದರು. ನಗರದ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಕಾರ್ಮಿಕ ಕುಟುಂಬ ವರ್ಗದವರು ಈ ಸಂತೆಯನ್ನು ಅವಲಂಬಿಸಿದ್ದರು.
      ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳು ಅವನತಿ ದಾರಿ ಹಿಡಿಯುತ್ತಿದ್ದಂತೆ ಸಂತೆ ಸಹ ತನ್ನ ವೈಭವ ಕಳೆದುಕೊಂಡಿದೆ. ಈ ನಡುವೆ ಈ ಜಾಗದಲ್ಲಿ ಹಂತ ಹಂತವಾಗಿ ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ. ವಿಶಾಲವಾದ ಜಾಗ ಕಿರಿದಾಗ ತೊಡಗಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಸುಮಾರು ೨೭ ಲಕ್ಷ ರು. ವೆಚ್ಚದಲ್ಲಿ ರೈತರ ಸಂತೆ ಕಟ್ಟಡ ನಿರ್ಮಿಸಿದ್ದು, ಪ್ರಸ್ತುತ ಅಂಗನವಾಡಿವಾಗಿ ಮಾರ್ಪಾಡಾಗಿದೆ. ಸುಮಾರು ೧೫ ವರ್ಷಗಳ ಹಿಂದೆ ನಗರಸಭೆ ವತಿಯಿಂದ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ಸುಮಾರು ೭೩ ಲಕ್ಷ ರು. ವೆಚ್ಚದಲ್ಲಿ ತರಕಾರಿ ಮಾರುಕಟ್ಟೆ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಂಡಿದ್ದು, ಆದರೆ ಇದುವರೆಗೂ ಮಾರುಕಟ್ಟೆ ಸದ್ಬಳಕೆಯಾಗದೆ ಪಾಳು ಬಿದ್ದಿದೆ. ಈ ಕಟ್ಟಡದಿಂದ ನಗರಸಭೆಗೆ ಯಾವುದೇ ಆದಾಯ ಬರುತ್ತಿಲ್ಲ. ಈ ಕಟ್ಟಡದ ಸಮೀಪದಲ್ಲಿಯೇ ಕೆಲವು ವರ್ಷಗಳ ಹಿಂದೆ ನಗರಸಭೆ ಪಂಪ್‌ಹೌಸ್ ನಿರ್ಮಿಸಲಾಗಿದೆ. ಮತ್ತೊಂದು ಕಡೆ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗಿದೆ. ಇನ್ನೊಂದು ಕಡೆ ಶೌಚಾಲಯ ನಿರ್ಮಾಣಗೊಳ್ಳುತ್ತಿದೆ. ಈ ನಡುವೆ ಬೃಹತ್ ನೀರಿನ ಟ್ಯಾಂಕ್ ಸಹ ನಿರ್ಮಾಣಗೊಂಡಿದೆ. ಈ ಹಿಂದೆ ಈ ಜಾಗದಲ್ಲಿಯೇ ಖಾಸಗಿ ಬಸ್ ನಿಲ್ದಾಣ ನಿರ್ಮಿಸಬೇಕೆಂಬ ಪ್ರಸ್ತಾಪ ಸಹ ಮಾಡಲಾಗಿತ್ತು. ಅಲ್ಲದೆ ಅಂಬೇಡ್ಕರ್ ಭವನ ನಿರ್ಮಿಸುವ ಸಂಬಂಧ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ಆದರೆ ಇವು ಕಾರ್ಯಗತಗೊಳ್ಳಲಿಲ್ಲ. ಇದೀಗ ನಗರಸಭೆ ಸ್ಥಳಾಂತರಿಸಲಾಗುತ್ತಿದೆ ಎಂಬ ಸುದ್ದಿ ಹರಿದಾಡ ತೊಡಗಿದೆ.
      ಕಳೆದ ೩ ದಿನಗಳ ಹಿಂದೆ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸಂತೆ ಸ್ಥಳಾಂತರಿಸುವ ಸಂಬಂಧ ರೈತರು ಮತ್ತು ವ್ಯಾಪಾರಸ್ಥರಲ್ಲಿ ಜಾಗೃತಿ ಮೂಡಿಸಲಾಯಿತು. ಯಾವುದೇ ಕಾರಣಕ್ಕೂ ಸ್ಥಳಾಂತರಕ್ಕೆ ಅವಕಾಶ ನೀಡದೆ ಹೋರಾಟ ನಡೆಸುವಂತೆ ಕರೆ ನೀಡಲಾಯಿತು.
      ಒಂದು ವೇಳೆ ಹಳೇ ಸಂತೆಮೈದಾನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಗೊಂಡಲ್ಲಿ ಅನುಕೂಲಕ್ಕಿಂತ ಅನಾಕೂಲವೇ ಹೆಚ್ಚು. ರೈತರು, ವ್ಯಾಪಾರಸ್ಥರು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ವ್ಯಾಪಾರ ವಹಿವಾಟು ಕುಸಿಯುತ್ತದೆ ಎಂಬುದು ಬಹುತೇಕ ಜನರ ಅಭಿಪ್ರಾಯವಾಗಿದೆ. ಈ ನಡುವೆ ನಗರಸಭೆ ಸಾಮಾನ್ಯಸಭೆಯಲ್ಲಿ ಹಳೇ ಸಂತೆಮೈದಾನ ಸ್ಥಳಾಂತರಿಸುವ ವಿಚಾರ ಇದುವರೆಗೂ ಪ್ರಸ್ತಾಪವಾಗಿಲ್ಲ. ಆದರೆ ನಗರಸಭೆ ಕಟ್ಟಡ ವಿಸ್ತರಿಸುವ ಸಂಬಂಧ ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಆದರೆ ಅಧಿಕಾರಿಗಳು ತೆರೆಮರೆಯಲ್ಲಿ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.


ಯಾವುದೇ ಕಾರ್ಯವನ್ನು ಕದ್ದುಮುಚ್ಚಿ ಅಥವಾ ತರಾತುರಿಯಲ್ಲಿ ಕೈಗೊಳ್ಳುವುದಿಲ್ಲ. ಇತ್ತೀಚೆಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ನಗರಸಭೆ ಕಟ್ಟಡ ವಿಸ್ತರಿಸುವ ಸಂಬಂಧ ಚರ್ಚೆಗಳು ನಡೆದಿವೆ. ಪ್ರಸ್ತುತ ಇರುವ ಕಟ್ಟಡವನ್ನು ವಿಸ್ತರಿಸುವುದರಿಂದ ಮುಂದೆ ಸಮಸ್ಯೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಹೊಸ ಜಾಗ ಹುಡುಕಾಟ ನಡೆಸಲಾಗಿದೆ. ಹಳೇಸಂತೆಮೈದಾನ ಜಾಗ ಪ್ರಸ್ತಾಪವಾಗಿದೆ ಹೊರತು ಸ್ಥಳಾಂತರಿಸುವ ಸಂಬಂಧ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರೊಂದಿಗೂ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.

                                                                                     - ಎಚ್.ಎಂ ಮನುಕುಮಾರ್, ಪೌರಾಯುಕ್ತರು, ನಗರಸಭೆ, ಭದ್ರಾವತಿ.
------------------------------------------------------------------------------------------

ಹಳೇ ಸಂತೆಮೈದಾನ ಪುರಸಭೆ ಕಾಲದಿಂದಲೂ ಅಸ್ತಿತ್ವದಲ್ಲಿದ್ದು, ಗ್ರಾಮೀಣ ಹಾಗು ನಗರ ಭಾಗದ ರೈತರು, ವ್ಯಾಪಾರಸ್ಥರಿಗೆ ಹೆಚ್ಚಿನ ಅನುಕೂಲವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಜಾಗದಲ್ಲಿ ನಗರಸಭೆಗೆ ಆದಾಯವಿಲ್ಲದ ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ. ಮತ್ತೊಂದೆಡೆ ವಿಶಾಲವಾದ ಜಾಗ ಕಿರುದಾಗುತ್ತಿದೆ. ಈ ಜಾಗವನ್ನು ಬೇರೆಡೆಗೆ ಸ್ಥಳಾಂತರಿಸುವುದು ಸೂಕ್ತವಲ್ಲ.
- ಆರ್. ಕರುಣಾಮೂರ್ತಿ, ಮಾಜಿ ಅಧ್ಯಕ್ಷರು, ನಗರಸಭೆ, ಭದ್ರಾವತಿ.

                                    --------------------------------------------------------------------------------------------------

ರೈತರು, ವ್ಯಾಪಾರಸ್ಥರು ಕಂದಾಯ ಪಾವತಿಸಿದರೂ ಸಹ ಈ ಜಾಗದಲ್ಲಿ ನಗರಸಭೆ ವತಿಯಿಂದ ಯಾವುದೇ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿಲ್ಲ. ಆದರೂ ಸಹ ಸಂಕಷ್ಟದಲ್ಲಿಯೇ ವ್ಯಾಪಾರ ವಹಿವಾಟು ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಈ ಜಾಗವನ್ನು ಸ್ಥಳಾಂತರಿಸುವ ಹುನ್ನಾರ ನಡೆಸಲಾಗುತ್ತಿದೆ. ಎಲ್ಲರೂ ಎಚ್ಚೆತ್ತುಕೊಂಡು ಇದರ ವಿರುದ್ಧ ಹೋರಾಟ ನಡೆಸುವುದು ಅಗತ್ಯವಾಗಿದೆ.
  - ಬಿ.ಎನ್ ರಾಜು, ಅಧ್ಯಕ್ಷರು, ಮಾನವ ಹಕ್ಕುಗಳ ಹೋರಾಟ ಸಮಿತಿ, ಭದ್ರಾವತಿ.



ಸುಮಾರು ೧೫ ವರ್ಷಗಳ ಹಿಂದೆ ಭದ್ರಾವತಿ ನಗರಸಭೆ ವತಿಯಿಂದ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ಸುಮಾರು ೭೩ ಲಕ್ಷ ರು. ವೆಚ್ಚದಲ್ಲಿ ತರಕಾರಿ ಮಾರುಕಟ್ಟೆ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಂಡಿದ್ದು, ಆದರೆ ಇದುವರೆಗೂ ಮಾರುಕಟ್ಟೆ ಸದ್ಬಳಕೆಯಾಗದೆ ಪಾಳು ಬಿದ್ದಿದೆ.


೧೨ನೇ ಶತಮಾನದ ಬದುಕು ನಮ್ಮೆಲ್ಲರಿಗೂ ದಾರಿ ದೀಪ : ಹರೋನಹಳ್ಳಿ ಸ್ವಾಮಿ

ಭದ್ರಾವತಿ ಹಳೇನಗರದ ಸರ್ಕಾರಿ ಸಂಚಿ ಹೊನ್ನಮ್ಮ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಮೈಸೂರು ಹಾಗು ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೬೩೨ನೇ ವಚನ ಮಂಟಪ ಮತ್ತು ದತ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು 'ವಚನ ಸಾಹಿತ್ಯ-ವೈಚಾರಿಕತೆ' ವಿಷಯ ಕುರಿತು ಶಿಕ್ಷಕ ಹಾಗು ಹವ್ಯಾಸಿ ಖಗೋಳ ಶಾಸ್ತ್ರಜ್ಞ ಹರೋನಹಳ್ಳಿ ಸ್ವಾಮಿ ಮಾತನಾಡಿದರು.
    ಭದ್ರಾವತಿ, ಜ. ೧೭ : ಇಂದಿನ ಬದುಕಿಗೂ, ೧೨ನೇ ಶತಮಾನದ ಬದುಕಿಗೂ ಸಾಕಷ್ಟು ವ್ಯತ್ಯಾಸಗಳಿವೆ. ವಚನಕಾರರ, ಶರಣರ ಬದುಕು ನಮ್ಮೆಲ್ಲರೂ ದಾರಿದೀಪವಾಗಿದೆ ಎಂದು ಶಿಕ್ಷಕ ಹಾಗು ಹವ್ಯಾಸಿ ಖಗೋಳ ಶಾಸ್ತ್ರಜ್ಞ ಹರೋನಹಳ್ಳಿ ಸ್ವಾಮಿ ಹೇಳಿದರು.
    ಅವರು ಮಂಗಳವಾರ ಹಳೇನಗರದ ಸರ್ಕಾರಿ ಸಂಚಿಯ ಹೊನ್ನಮ್ಮ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಮೈಸೂರು ಹಾಗು ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೬೩೨ನೇ ವಚನ ಮಂಟಪ ಮತ್ತು ದತ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು 'ವಚನ ಸಾಹಿತ್ಯ-ವೈಚಾರಿಕತೆ' ವಿಷಯ ಕುರಿತು ಮಾತನಾಡಿದರು.
    ೧೨ನೇ ಶತಮಾನದ ಬದುಕು ವಚನಗಳಾಗಿವೆ. ಮೂಡನಂಬಿಕೆ, ಅಜ್ಞಾನ, ಅಸಮಾನತೆ ಸೇರಿದಂತೆ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸಿ ಮೌಲ್ಯಯುತವಾದ ಸಮಾಜ ರೂಪುಗೊಳ್ಳುವಲ್ಲಿ ವಚನಕಾರರ ಕೊಡುಗೆ ಮಹತ್ವದಾಗಿದೆ. ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಅಂದಿನ ಸಮಾಜಕ್ಕೂ, ಇಂದಿನ ಸಮಾಜಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ನಾವೆಲ್ಲರೂ ವಚನಕಾರರ, ಶರಣರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಅದರಲ್ಲೂ ಇಂದಿನ ಯುವ ಪೀಳಿಗೆಗೆ ಆದರ್ಶ ಮತ್ತು ಗುರಿಗಳು ಬಹಳ ಮುಖ್ಯವಾಗಿವೆ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ತಮ್ಮತನ ಮೈಗೂಡಿಸಿಕೊಂಡು ಸಾಧನೆ ದಾರಿಯಲ್ಲಿ ಸಾಗಬೇಕೆಂದರು.
    ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಸ್ ಸಿದ್ದಲಿಂಗಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ಕಾರ್ಯಕ್ರಮ ಉದ್ಘಾಟಿಸಿದರು. ಪರಿಷತ್ ತಾಲೂಕು ಕಾರ್ಯದರ್ಶಿ ನಂದಿನಿ ಮಲ್ಲಿಕಾರ್ಜುನ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಸವ ಕೇಂದ್ರದ ಅಧ್ಯಕ್ಷ ಜಗದೀಶ್ ಕವಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷ ಮಲ್ಲಿಕಾಂಬ ವಿರೂಪಾಕ್ಷಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಉಪನ್ಯಾಸಕ ಬಿ. ಚೆನ್ನಯ್ಯ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಹಾಗು ಕದಳಿ ಮಹಿಳಾ ವೇದಿಕೆ ಸದಸ್ಯರಿಂದ ವಚನ ಗಾಯನ ನಡೆಯಿತು.

Monday, January 16, 2023

ನಿರ್ಮಾಣಗೊಂಡು ೪ ವರ್ಷ ಕಳೆದರೂ ಸಹ ಉದ್ಘಾಟನೆಗೊಳ್ಳದ ಪ್ರಾಥಮಿಕ ಆರೋಗ್ಯ ಕೇಂದ್ರ

ಕರ್ನಾಟಕ ರಾಷ್ಟ್ರ ಸಮಿತಿ ನೇತೃತ್ವದಲ್ಲಿ ಸ್ಥಳೀಯರ ಪ್ರತಿಭಟನೆ : ತಕ್ಷಣ ಉದ್ಘಾಟಿಸಲು ಆಗ್ರಹ


ಭದ್ರಾವತಿ ನಗರಸಭೆ ವಾರ್ಡ್ ನಂ.೯ರ ಭದ್ರಾ ಕಾಲೋನಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಗೊಂಡು ಸುಮಾರು ೪ ವರ್ಷ ಕಳೆದರೂ ಸಹ ಉದ್ಘಾಟನೆಗೊಳ್ಳದೆ ಪಾಳು ಬಿದ್ದಿದ್ದು, ತಕ್ಷಣ ಅಗತ್ಯವಿರುವ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಿ ಉದ್ಘಾಟಿಸಬೇಕೆಂದು ಆಗ್ರಹಿಸಿ ಸೋಮವಾರ ಸ್ಥಳೀಯರು ಕರ್ನಾಟಕ ರಾಷ್ಟ್ರ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದರು.
    ಭದ್ರಾವತಿ, ಜ. ೧೬ : ನಗರಸಭೆ ವಾರ್ಡ್ ನಂ.೯ರ ಭದ್ರಾ ಕಾಲೋನಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಗೊಂಡು ಸುಮಾರು ೪ ವರ್ಷ ಕಳೆದರೂ ಸಹ ಉದ್ಘಾಟನೆಗೊಳ್ಳದೆ ಪಾಳು ಬಿದ್ದಿದ್ದು, ತಕ್ಷಣ ಅಗತ್ಯವಿರುವ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಿ ಉದ್ಘಾಟಿಸಬೇಕೆಂದು ಆಗ್ರಹಿಸಿ ಸೋಮವಾರ ಸ್ಥಳೀಯರು ಕರ್ನಾಟಕ ರಾಷ್ಟ್ರ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದರು.
    ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆಗೊಳ್ಳದ ಕಾರಣ ಇಲ್ಲಿನ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದ್ದು, ನೂತನ ಕಟ್ಟಡ ನಿರ್ಮಾಣಗೊಂಡು ೪ ವರ್ಷ ಕಳೆದರೂ ಸಹ ಉದ್ಘಾಟನೆಗೊಳ್ಳದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಸ್ವತಃ ವೈದ್ಯರಾಗಿರುವ ಆರೋಗ್ಯ ಸಚಿವರಾದ ಡಾ. ಸುಧಾಕರ್‌ರವರು ತಕ್ಷಣ ಈ ಬಗ್ಗೆ ಗಮನ ಹರಿಸಬೇಕು.
    ಕಟ್ಟಡ ಉದ್ಘಾಟನೆಗೊಳ್ಳದ ಕಾರಣ ಪುಂಡರು-ಪೋಕರಿಗಳ ಅಡ್ಡೆಗಳ ಸ್ಥಳವಾಗಿದ್ದು, ದನ-ಕರು, ಹಂದಿ, ನಾಯಿ, ಹಾವು-ಮುಂಗುಸಿಗಳ ಆಶ್ರಯ ತಾಣವಾಗಿದೆ. ಈಗಾಗಲೇ ಕಟ್ಟಡ ಪಾಳು ಬಿದ್ದಿದ್ದು, ತಕ್ಷಣ ಸಂಬಂಧಪಟ್ಟ ಇಲಾಖೆಯವರು ಎಚ್ಚುತ್ತುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಲಾಯಿತು.
    ಪಕ್ಷದ ಪ್ರಮುಖರಾದ ಯುವ ಘಟಕದ ಅಧ್ಯಕ್ಷ ಅರಳಿಹಳ್ಳಿ ತ್ಯಾಗರಾಜ್, ತೀರ್ಥಕುಮಾರ್, ರಾಜೇಂದ್ರ, ಚಿನ್ನಯ್ಯ, ಆನಂದ್, ಮಲ್ಲಿಕಾರ್ಜುನ್, ವಿನೋದ್‌ಕುಮಾರ್, ಅಣ್ಣಪ್ಪ, ಸಿಖಂದರ್ ಹಾಗು ಸ್ಥಳೀಯರು ಉಪಸ್ಥಿತರಿದ್ದರು.