ಬಂಡವಾಳ ತೊಡಗಿಸಿ ಉದ್ಯೋಗ ನೀಡಿ, ಇಲ್ಲವಾದಲ್ಲಿ ದಯಾಮರಣಕ್ಕೆ ಅರ್ಜಿ
![](https://blogger.googleusercontent.com/img/a/AVvXsEixaSU_-cpmr9Ao_ZrMoW7GgyXeCWMQsAxyGgnjV8QdgyUi-FD2Ap7KDi7RauavPnH8l5XeQBMTYfY7EfylxnQdo1Bq4klDLu25Ikdq5nWE-ylKwzplWM2Bbxn0zFQn8ObuBueQfL_bzLCPyJDHNZ-of1hdO3rb-8aIusNZdQOtBrEAHE654NJcYkTPJA=w400-h164-rw)
ಭದ್ರಾವತಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಶನಿವಾರ ೩ನೇ ದಿನಕ್ಕೆ ಕಾಲಿಟ್ಟಿದೆ.
ಭದ್ರಾವತಿ, ಜ.೨೧: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸದಿರುವುದೇ ಪ್ರಸ್ತುತ ಕಾರ್ಖಾನೆ ಮುಚ್ಚುವ ಸ್ಥಿತಿಗೆ ಕಾರಣ ಎಂದು ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಎಚ್.ಜಿ ಸುರೇಶ್ ಆರೋಪಿಸಿದರು.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಆಧುನೀಕರಣಗೊಳಿಸಿದಲ್ಲಿ ಕಾರ್ಖಾನೆಯನ್ನು ಲಾಭದಾಯಕವಾಗಿ ಮುನ್ನಡೆಸಿಕೊಂಡು ಹೋಗಲು ಸಾಧ್ಯ. ಕೇಂದ್ರ ಸರ್ಕಾರ ಬಂಡವಾಳ ಹೂಡುವುದಾಗಿ ಕೇವಲ ಭರವಸೆಗಳನ್ನು ನೀಡಿತು ಹೊರತು ಅದನ್ನು ಕಾರ್ಯಗತಗೊಳಿಸಲಿಲ್ಲ. ಇದರಿಂದಾಗಿ ಪ್ರಸ್ತುತ ಕಾರ್ಖಾನೆ ಮುಚ್ಚುವ ಸ್ಥಿತಿಗೆ ತಲುಪಿದೆ ಎಂದರು.
ಬಿಎಸ್‌ವೈ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ:
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಕಾರ್ಖಾನೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಚ್ಛಾಶಕ್ತಿ ತೋರಿಸುತ್ತಿಲ್ಲ. ಕಾರ್ಖಾನೆ ಸ್ಥಿತಿಗತಿ ಕುರಿತ ಮಾಹಿತಿ ಕೊರತೆಯು ಕಾರಣವಿರಬಹುದು. ಈಗಲೂ ಸಹ ಮನಸ್ಸು ಮಾಡಿದರೆ ಕಾರ್ಖಾನೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.
ಕಾರ್ಖಾನೆ ಮುಚ್ಚುವ ಸುದ್ದಿಯಿಂದ ಆತಂಕ: ಓರ್ವ ಕಾರ್ಮಿಕ ಹೃದಯಾಘಾತದಿಂದ ಸಾವು
ಪ್ರಸ್ತುತ ಕಾರ್ಖಾನೆ ಮುಚ್ಚುವ ಸುದ್ದಿಯಿಂದ ಕಾರ್ಮಿಕ ವಲಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಗುತ್ತಿಗೆ ಕಾರ್ಮಿಕರಿಗೆ ದಿಕ್ಕು ಕಾಣದಂತಾಗಿದೆ. ಕಾರ್ಖಾನೆಯ ಕ್ರೇನ್ಸ್ ವಿಭಾಗದಲ್ಲಿ ಕೆಲಸ ಮಾಡುವ ಸುಮಾರು ೪೦ ವರ್ಷದ ಹೇಮಗಿರಿ ಎಂಬ ಗುತ್ತಿಗೆ ಕಾರ್ಮಿಕ ಕಾರ್ಖಾನೆ ಮುಚ್ಚುವ ಸುದ್ದಿಯಿಂದ ಹೃದಯಘಾತಗೊಂಡು ಮೃತಪಟ್ಟಿದ್ದಾನೆ. ಇದೀಗ ಈತನ ಕುಟುಂಬ ಬೀದಿಗೆ ಬಿದ್ದಿದೆ ಎಂದು ಅಳಲು ತೋರ್ಪಡಿಸಿಕೊಂಡರು.
ದಯಾಮರಣಕ್ಕೆ ಅರ್ಜಿ:
ಪ್ರಸ್ತುತ ಕಾರ್ಖಾನೆಯಲ್ಲಿ ಸುಮಾರು ೧೫೦೦ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಒಂದು ವೇಳೆ ಕಾರ್ಖಾನೆ, ಮುಚ್ಚಲ್ಪಟ್ಟಲ್ಲಿ ಕಾರ್ಮಿಕರು ಉದ್ಯೋಗವಿಲ್ಲದೆ ಬೀದಿ ಪಾಲಾಗುವುದು ಖಚಿತವಾಗಿದೆ. ಭವಿಷ್ಯದಲ್ಲಿ ನಮಗೆ ಉದ್ಯೋಗ ಸಿಗುವ ಯಾವುದೇ ಭರವಸೆಗಳು ಸಹ ಇಲ್ಲವಾಗಿದೆ ಈ ಹಿನ್ನಲೆಯಲ್ಲಿ ನಾವೆಲ್ಲರೂ ಸರ್ವೋಚ್ಚ ನ್ಯಾಯಾಲಯಕ್ಕೆ ದಯಾಮರಣ ಕೋರಿ ಅರ್ಜಿ ಸಲ್ಲಿಸಲಿದ್ದೇವೆ. ಈಗಲಾದರೂ ಸರ್ಕಾರ ಕಾರ್ಖಾನೆಗೆ ಬಂಡವಾಳ ತೊಡಗಿಸಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಆರ್. ಮಂಜುನಾಥ್, ಪಿ. ರಾಕೇಶ್, ವಿ. ಗುಣಶೇಖರ್, ಎನ್.ಆರ್ ವಿನಯ್‌ಕುಮಾರ್, ಅಂತೋಣಿದಾಸ್, ಜಿ. ಆನಂದ್, ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಜೆ ವಾಸುದೇವ, ಶಂಕರಲಿಂಗೇಗೌಡ, ಎನ್.ಕೆ ಮಂಜುನಾಥ್, ಪ್ರಸನ್ನಬಾಬು, ನಂಜೇಗೌಡ, ಜೆ. ಕಿರಣ, ಶಿವಣ್ಣಗೌಡ, ಬಿ. ದೇವರಾಜ, ಆರ್. ಅರುಣ, ಪಿ. ಅವಿನಾಶ್, ಶೇಷಪ್ಪಗೌಡ, ಸುಬ್ರಮಣಿ, ಹಿರಿಯ ಕಾರ್ಮಿಕ ಮುಖಂಡ ಎಂ. ನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಅನಿರ್ಧಿಷ್ಟಾವಧಿ ಹೋರಾಟ ೩ನೇ ದಿನಕ್ಕೆ :
ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಶನಿವಾರ ೩ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ವಿವಿಧ ಸಂಘ-ಸಂಸ್ಥೆಗಳು ಕಾರ್ಮಿಕರ ಹೋರಾಟ ಬೆಂಬಲ ವ್ಯಕ್ತಪಡಿಸಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಿವೆ. ಬೇಡಿಕೆ ಈಡೇರುವವರೆಗೂ ಹೋರಾಟ ನಡೆಸುವುದಾಗಿ ಗುತ್ತಿಗೆ ಕಾರ್ಮಿಕರ ಸಂಘ ಸ್ಪಷ್ಟಪಡಿಸಿದೆ.
ಕಾರ್ಖಾನೆಯ ಕ್ರೇನ್ಸ್ ವಿಭಾಗದಲ್ಲಿ ಕೆಲಸ ಮಾಡುವ ಸುಮಾರು ೪೦ ವರ್ಷದ ಹೇಮಗಿರಿ ಎಂಬ ಗುತ್ತಿಗೆ ಕಾರ್ಮಿಕ ಕಾರ್ಖಾನೆ ಮುಚ್ಚುವ ಸುದ್ದಿಯಿಂದ ಹೃದಯಘಾತಗೊಂಡು ಮೃತಪಟ್ಟಿದ್ದಾನೆ.