Wednesday, January 25, 2023

೭ ದಿನ ಪೂರೈಸಿದ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಅನಿರ್ಧಿಷ್ಟಾವಧಿ ಹೋರಾಟ

ಕೆಆರ್‌ಎಸ್ ಪಕ್ಷದಿಂದ ಬೆಂಬಲ, ಜ.೨೮ರಂದು ಪೂರ್ವಭಾವಿ, ಶ್ರೀಗಳಿಗೆ ಒಕ್ಕಲಿಗರ ಸಂಘ ಮನವಿ

ಭದ್ರಾವತಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿ, ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿದರು.
    ಭದ್ರಾವತಿ, ಜ. ೨೫ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ  ಗುತ್ತಿಗೆ ಕಾರ್ಮಿಕರ ಸಂಘ ಕಾರ್ಖಾನೆ ಮುಂಭಾಗ ಕೈಗೊಂಡಿರುವ ಅನಿರ್ಧಿಷ್ಟಾವಧಿ ಹೋರಾಟ ಮಂಗಳವಾರ ೭ನೇ ದಿನಕ್ಕೆ ಕಾಲಿಟ್ಟಿತು.
    ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಳ್ಳುತ್ತಿದೆ. ಹೋರಾಟ ಸ್ಥಳಕ್ಕೆ ಇದುವರೆಗೂ ಜಿಲ್ಲಾಮಟ್ಟದ ಜನಪ್ರತಿನಿಧಿಗಳಾಗಿ, ಸಂಸದರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಿಲ್ಲಾಡಳಿತವಾಗಲಿ ತಿರುಗಿ ನೋಡಿಲ್ಲ. ಈ ನಡುವೆ ಬೃಹತ್ ಹೋರಾಟ ರೂಪಿಸುವ ಸಂಬಂಧ ಗುತ್ತಿಗೆ ಕಾರ್ಮಿಕರು ಹಿರಿಯ ಕಾರ್ಮಿಕ ಹೋರಾಟ ಡಿ.ಸಿ ಮಾಯಣ್ಣ ನೇತೃತ್ವದಲ್ಲಿ ಸಭೆ ನಡೆಸಿ ಎಲ್ಲಾ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಸಹಕಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ತೀವ್ರತೆ ಪಡೆದುಕೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ.  
    ಕೆಆರ್‌ಎಸ್ ಪಕ್ಷ ಬೆಂಬಲ:
    ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಈ ಸಂಬಂಧ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಪ್ರಮುಖರು, ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಕನ್ನಡಿಗರ ಹೆಮ್ಮೆಯ ಪ್ರತೀಕ ವಿಐಎಸ್‌ಎಲ್ ಉಳಿಯಬೇಕು, ಕಾರ್ಮಿಕರ ಹಿತ ಕಾಯಬೇಕು. ರಾಜ್ಯದಲ್ಲಿ ಔದ್ಯೋಗಿಕ ಅಭಿವೃದ್ಧಿಗೆ ಚಾಲನೆ ನೀಡಿದ ನಾಡಿನ ಹೆಮ್ಮೆಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಮುಚ್ಚಲು ನಿರ್ಧರಿಸಿರುವುದು ದುಃಖಕರ ವಿಚಾರ ಮತ್ತು ತಪ್ಪು ನಿರ್ಧಾರವಾಗಿದೆ. ಖಾಸಗಿ ಉದ್ಯಮಿಗಳಿಗೆ ಚಿನ್ನದ ಹರಿವಾಣದಲ್ಲಿ ಇಟ್ಟು ಭೂಮಿ, ಗಣಿ ಹಾಗೂ ಇತರ ಸವಲತ್ತುಗಳನ್ನು ನೀಡುವ ಸರ್ಕಾರಗಳು, ತನ್ನದೇ ಉದ್ಯಮಕ್ಕೆ ತೀರಾ ಅಗತ್ಯವಿರುವ ಸೌಕರ್ಯಗಳನ್ನು ಮತ್ತು ಆಧುನೀಕರಣಕ್ಕೆ ಬಂಡವಾಳ ಹೂಡಲು ನಿರಾಕರಿಸುತ್ತಾ ಬಂದಿವೆ. ವಿಐಎಸ್‌ಎಲ್ ವಿಚಾರದಲ್ಲೂ ಕೂಡ ಇದೇ ರೀತಿ ಆಗಿದ್ದು,  ಇಂದಿನ ದುಸ್ಥಿತಿಗೆ ರಾಜ್ಯಮತ್ತು ಒಕ್ಕೂಟ ಸರ್ಕಾರಗಳು ನೇರವಾಗಿ ಕಾರಣವಾಗಿವೆ. ಇದು ಕೇವಲ ವಿಐಎಸ್‌ಎಲ್ ಒಂದರ ವಿಚಾರವಾಗಿರದೆ, ಮೈಸೂರು ಕಾಗದ ಮತ್ತು ಸಕ್ಕರೆ ಕಾರ್ಖಾನೆ ಮುಚ್ಚುವಲ್ಲಿಯೂ ಕೂಡ ಇದೇ ನಿರ್ಲಕ್ಷ್ಯ, ಭ್ರಷ್ಟಾಚಾರ, ಅಕ್ರಮ ಮತ್ತು ಅವ್ಯವಹಾರಗಳು ಕಾರಣವಾಗಿದೆ ಎಂದು ಆರೋಪಿಸಿದರು.
    ಈ ಎರಡು ಕಾರ್ಖಾನೆಗಳು ರಾಜ್ಯದಲ್ಲಿ ಔದ್ಯೋಗಿಕ ಅಭಿವೃದ್ಧಿಗೆ ಮಹತ್ವದ ಕಾಣಿಕೆ ನೀಡಿದ್ದು, ರಾಜ್ಯಕ್ಕೆ ಹೆಮ್ಮೆಯ ವಿಚಾರವಾಗಿದೆ. ಈ ಕಾರ್ಖಾನೆಗಳು ಶಿವಮೊಗ್ಗ ಮತ್ತು ಸುತ್ತಲಿನ ಪ್ರದೇಶಗಳ ಆರ್ಥಿಕ ಅಭಿವೃದ್ಧಿಗೆ ಮತ್ತು ನಾಡಿನ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದು, ಇವನ್ನು ಅಭಿವೃದ್ಧಿಗೊಳಿಸದೆ ನಿರ್ಲಕ್ಷಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ರಾಜ್ಯ ಸರ್ಕಾರ ತಕ್ಷಣ ವಿಐಎಸ್‌ಎಲ್ ಕಾರ್ಖಾನೆಯನ್ನು ಹಿಂಪಡೆದು ಅಗತ್ಯವಿರುವ ಬಂಡವಾಳ ತೊಡಗಿಸಿ ಅಭಿವೃದ್ಧಿಗೊಳಿಸಬೇಕು. ಈ ನಿಟ್ಟಿನಲ್ಲಿ ಪಕ್ಷ ಹೋರಾಟ ನಡೆಸುತ್ತಿದ್ದು, ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಬೆಂಗಳೂರು ಜಿಲ್ಲಾಧ್ಯಕ್ಷ ಎಸ್. ಮಂಜುನಾಥ್, ತಾಲೂಕು ಅಧ್ಯಕ್ಷ ನಾಗರಾಜರಾವ್ ಸಿಂಧೆ, ತಾಲೂಕು ಕಾರ್ಯದರ್ಶಿ ಶಬರೀಷ್, ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಜಿಲ್ಲಾಧ್ಯಕ್ಷ ಎಸ್.ಕೆ ಪ್ರಭು, ಸುಮಿತ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಬೃಹತ್ ಹೋರಾಟಕ್ಕೆ ಶಾಸಕರ ನೇತೃತ್ವದಲ್ಲಿ ಜ.೨೮ರಂದು ಪೂರ್ವಭಾವಿ ಸಭೆ:
    ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಸರ್ವ ಸಮಾಜದ ಮತ್ತು ಸಂಘ-ಸಂಸ್ಥೆಗಳಿಂದ, ಕಾರ್ಮಿಕ ಬಂಧುಗಳಿಂದ ಜ.೨೮ರಂದು ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ.
    ಅಂದು ಬೆಳಿಗ್ಗೆ ೧೧ ಗಂಟೆಗೆ ಹಳೇನಗರದ ವೀರಶೈವ ಸಭಾ ಭವನದಲ್ಲಿ ಸಭೆ ನಡೆಯಲಿದ್ದು, ಕ್ಷೇತ್ರದ ಸಮಸ್ತ ನಾಗರೀಕರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಯಶಸ್ವಿಗೊಳಿಸುವಂತೆ ಕೋರಲಾಗಿದೆ.
      ಶ್ರೀ ಪ್ರಸನ್ನನಾಥಸ್ವಾಮೀಜಿಗೆ ಒಕ್ಕಲಿಗರ ಸಂಘ ಮನವಿ :
    ವಿಐಎಸ್‌ಎಲ್ ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಾಲೂಕು ಒಕ್ಕಲಿಗರ ಸಂಘ ಶ್ರೀ ಕ್ಷೇತ್ರ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ. ನಿರ್ಮಲನಂದನಾಥ ಸ್ವಾಮೀಜಿಯವರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಒತ್ತಡ ತರಲು ಮುಂದಾಗಿದೆ.
    ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರದ ಕಾರ್ಯದರ್ಶಿ, ಶಿವಮೊಗ್ಗ ಶಾಖಾ ಮಠದ ಪೀಠಾಧಿಪತಿಗಳಾದ ಶ್ರೀ ಪ್ರಸನ್ನನಾಥಸ್ವಾಮೀಜಿಯವರನ್ನು ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಭೇಟಿ ಮಾಡಿ ಕಾರ್ಖಾನೆಯ ಸ್ಥಿತಿಗತಿಗಳ ಕುರಿತು ಸಂಪೂರ್ಣ ಮಾಹಿತಿ ನೀಡುವ ಮೂಲಕ ಮನವಿ ಸಲ್ಲಿಸಿದೆ


ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಾಲೂಕು ಒಕ್ಕಲಿಗರ ಸಂಘ ಶ್ರೀ ಕ್ಷೇತ್ರ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ. ನಿರ್ಮಲನಂದನಾಥ ಸ್ವಾಮೀಜಿಯವರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಒತ್ತಡ ತರಲು ಮುಂದಾಗಿದೆ. ಈ ಸಂಬಂಧ ಶ್ರೀ ಪ್ರಸನ್ನನಾಥಸ್ವಾಮೀಜಿಯವರಿಗೆ ಮನವಿ ಸಲ್ಲಿಸಿತು.

ವಿಐಎಸ್‌ಎಲ್ ಉಳಿಸಿಕೊಳ್ಳಲು ಪಕ್ಷಾತೀತ ಹೋರಾಟಕ್ಕೆ ತೀರ್ಮಾನ

ವಿವಿಧ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳ ಬೆಂಬಲ  

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಪಕ್ಷಾತೀತ ಹೋರಾಟ ನಡೆಸುವ ಸಂಬಂಧ ಬುಧವಾರ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
    ಭದ್ರಾವತಿ, ಜ. ೨೫: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಪಕ್ಷಾತೀತ ಹೋರಾಟ ನಡೆಸುವ ಸಂಬಂಧ ಬುಧವಾರ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
    ಗುತ್ತಿಗೆ ಕಾರ್ಮಿಕರ ಸಂಘದ ವತಿಯಿಂದ ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ ನೇತೃತ್ವದಲ್ಲಿ ನ್ಯೂಟೌನ್ ಶಾರದ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಮುಖಂಡರ ಸಭೆಯಲ್ಲಿ ಮಾತನಾಡಿ, ಪ್ರಸ್ತುತ ಕಾರ್ಖಾನೆ ಮುಚ್ಚುವ ಆದೇಶವನ್ನು ಹಿಂಪಡೆಯಬೇಕು. ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರೆಸಬೇಕು. ಈಗಾಗಲೇ ಎಂಪಿಎಂ ಕಾರ್ಖಾನೆ ಸ್ಥಗಿತಗೊಂಡು ಸಾವಿರಾರು ಕಾರ್ಮಿಕರು, ಕುಟುಂಬ ವರ್ಗದವರು ಬೀದಿ ಪಾಲಾಗಿದ್ದಾರೆ. ಇದೀಗ ವಿಐಎಸ್‌ಎಲ್ ಸಹ ಮುಚ್ಚಿ ಹೋಗುತ್ತಿದ್ದು, ನಾವೆಲ್ಲರೂ ಇದೀಗ ಎಚ್ಚೆತ್ತುಕೊಂಡು ಪಕ್ಷಾತೀತ ಹೋರಾಟಕ್ಕೆ ಮುಂದಾಗಬೇಕು. ರಾಜಕೀಯ ಬೇರೆ, ಹೋರಾಟ ಬೇರೆ. ನಾವೆಲ್ಲರೂ ಈ ಊರು ಹಾಗು ಜನರ ಭವಿಷ್ಯದ ಬಗ್ಗೆ ಚಿಂತಿಸಬೇಕಾಗಿದೆ. ಹೋರಾಟ ಮಾತ್ರ ಕಾರ್ಖಾನೆ ಉಳಿಸಿಕೊಳ್ಳಲು ನಮ್ಮೆಲ್ಲರ ಮುಂದಿರುವುದು ಏಕೈಕ ದಾರಿಯಾಗಿದ್ದು, ಯಾವುದೇ ರೀತಿಯ ಹೋರಾಟ ಕೈಗೊಂಡರೂ ಸಹ ಸಂಪೂರ್ಣವಾಗಿ ಸಹಕಾರ ನೀಡಲು ಬದ್ಧವಾಗಿದ್ದೇವೆ ಎಂದರು.


    ಸಭೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಜನಪ್ರತಿನಿಧಿಗಳು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಜೆಡಿಯು, ಕೆಆರ್‌ಎಸ್ ಪಕ್ಷಗಳ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಕಾರ್ಮಿಕ ಸಂಘಟನೆಗಳ, ಮಹಿಳಾ ಸಂಘಟನೆಗಳ ಮುಖಂಡರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
  ಈ ಹಿಂದೆ ಸಹ ಇದೆ ರೀತಿಯ ಹೋರಾಟ ರೂಪಿಸಲಾಗಿತ್ತು. ಹೋರಾಟದ ಪರಿಣಾಮ ಉಕ್ಕು ಪ್ರಾಧಿಕಾರ ಕಾರ್ಖಾನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಮುನ್ನಡೆಸುವ ನಿರ್ಧಾರದಿಂದ ಹಿಂದೆ ಸರಿದಿತ್ತು. ಅಲ್ಲದೆ ರಾಜ್ಯ ಸರ್ಕಾರ ಕಾರ್ಖಾನೆಗೆ ಅಗತ್ಯವಿರುವ ಗಣಿ ಮಂಜೂರಾತಿ ಮಾಡಿ ಕೇಂದ್ರಕ್ಕೆ ಸರ್ಕಾರಕ್ಕೆ ಶಿಫಾರಸ್ತು ಮಾಡಿತ್ತು. ಇದೀಗ ಪುನಃ ಹೋರಾಟ ತೀವ್ರಗೊಳ್ಳುತ್ತಿದ್ದು, ಸರ್ಕಾರ ಹೋರಾಟಕ್ಕೆ ಬೆಲೆ ನೀಡಿ ತನ್ನ ನಿಲುವು ಬದಲಿಸಿಕೊಳ್ಳಬೇಕಾಗಿದೆ.

ಧರ್ಮಪೀಠವಿದ್ದಲ್ಲಿ ಸಮಾಜದಲ್ಲಿ ಸಮೃದ್ಧಿ, ಎಲ್ಲಾ ಧರ್ಮಗಳಲ್ಲೂ ಸಮಾನತೆ ಕಂಡುಕೊಳ್ಳಿ


 ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಲೋಕಾರ್ಪಣೆ ಸಮಾರಂಭದಲ್ಲಿ ಬಾಳೆಹೊನ್ನೂರು ಜಗದ್ಗುರುಗಳು


ಭದ್ರಾವತಿ ತಾಲೂಕಿನ ಸೀತಾರಾಮಪುರ(ಮುಳ್ಕೆರೆ) ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಲೋಕಾರ್ಪಣೆ ಹಾಗು ಕಳಶಾರೋಹಣ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಬೇಕೆಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಶ್ರೀ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರಿಗೆ ದೇವಸ್ಥಾನ ಸಮಿತಿ ವತಿಯಿಂದ ಗೌರವ ಸಮರ್ಪಣೆ ಸಲ್ಲಿಸಲಾಯಿತು.
     ಭದ್ರಾವತಿ, ಜ. ೨೫ : ಧರ್ಮಪೀಠವಿದ್ದಲ್ಲಿ ಸಮಾಜದಲ್ಲಿ ಸಮೃದ್ಧಿ ತುಂಬಿರುತ್ತದೆ. ಎಲ್ಲೆಡೆ ಧರ್ಮದ ಬೆಳಕು ವ್ಯಾಪಿಸಬೇಕು. ಅವರವರ ಧರ್ಮ ಅವರಿಗೆ ಶ್ರೇಷ್ಠ. ಎಲ್ಲಾ ಧರ್ಮಗಳನ್ನು ಪ್ರೀತಿ, ವಿಶ್ವಾಸ, ಸಮಾನತೆಯಿಂದ ಕಾಣುವ ಮನೋಭಾವ ಪ್ರತಿ ಬೆಳಸಿಕೊಳ್ಳಬೇಕೆಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಶ್ರೀ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
   ಜಗದ್ಗುರುಗಳು ತಾಲೂಕಿನ ಸೀತಾರಾಮಪುರ(ಮುಳ್ಕೆರೆ) ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಲೋಕಾರ್ಪಣೆ ಹಾಗು ಕಳಶಾರೋಹಣ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.  
    ಧರ್ಮ ಎಂಬುದು ನಮ್ಮ ಬದುಕಿನ ದಿಕ್ಸೂಚಿಯಾಗಿದ್ದು, ನಾವು ಧರ್ಮ ಮಾರ್ಗದಲ್ಲಿ ಸಾಗಿದಾಗ ಉತ್ತಮ ಸಮಾಜ ನಿರ್ಮಾಣ ಮಾಡಿಕೊಳ್ಳಲು ಸಾಧ್ಯ. ಜ್ಞಾನ ಬಾಧೆಯಿಂದ ಧರ್ಮದ ಮೂಲ ಆಶಯಗಳಿಗೆ ಧಕ್ಕೆಯಾಗಬಾರದು. ಇಂದಿನ ಪೀಳಿಯವರು ದೇವರು ಮತ್ತು ಅಸ್ತಿತ್ವದ ಪರಿಕಲ್ಪನೆ ಬಗ್ಗೆ ಚಿಂತಿಸಬೇಕಾಗಿದೆ ಎಂದರು.
    ಸಮಾಜದಲ್ಲಿ ಎಲ್ಲರೂ ಒಂದೇ ಶ್ರೀ ರೇಣುಕಾಚಾರ್ಯರ ಸಂದೇಶಗಳನ್ನು ೧೨ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ. ಎಲ್ಲರನ್ನು ನಮ್ಮವರು ಎಂಬ ಭಾವನೆಯಿಂದ ಕಾಣಬೇಕಾಗಿದೆ. ಬಾಳೆಹೊನ್ನೂರು ಪೀಠಕ್ಕೂ ಶ್ರೀ ವೀರಭದ್ರೇಶ್ವರ ಸ್ವಾಮಿಗೂ ಅವಿನಾಭಾವ ಸಂಬವಿದ್ದು, ದುಷ್ಟ ಶಕ್ತಿಗಳನ್ನು ಧಮನ ಮಾಡಿ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ವೀರಭದ್ರನ ಆರಾಧನೆ ಅಗತ್ಯವಾಗಿದೆ. ಭಕ್ತರು ವೀರಭದ್ರೇಶ್ವರ ಸ್ವಾಮಿಯನ್ನು ಶ್ರದ್ದೆ, ಭಕ್ತಿಯಿಂದ ಆರಾಧಿಸಿಕೊಂಡು ಬರಬೇಕೆಂದರು.  
   ಶಾಸಕ ಬಿ.ಕೆ ಸಂಗಮೇಶ್ವರ್ ದೇವಸ್ಥಾನ ಲೋಕಾರ್ಪಣೆಗೊಳಿಸಿದರು. ಹಿರಿಯ ಸಾಹಿತಿ ಜೆ.ಎನ್ ಬಸವರಾಜಪ್ಪ ಉಪನ್ಯಾಸ ನಡೆಸಿಕೊಟ್ಟರು. ಯಡಿಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ತರೀಕೆರೆ ಹಿರೇಮಠದ ಶ್ರೀ ಜಗದೀಶ್ವರ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟ ಹಾಲಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಮಳಲಿಮಠದ ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮತ್ತು ಚನ್ನಗಿರಿ ಕೇದಾರ ಶಾಖಾ ಹಿರೇಮಠದ ಶ್ರೀ ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಹಟ್ಟಿ ಚಿನ್ನದ ಗಣಿ ಕಂಪನಿ ನಿರ್ದೇಶಕ ಕೂಡ್ಲಿಗೆರೆ ಹಾಲೇಶ್, ರ‍್ಯಾಮ್ಕೋಸ್ ನಿರ್ದೇಶಕ ಮಹೇಶ್ವರಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  
   ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾಕರ್ತರು, ದಾನಿಗಳು, ಗ್ರಾಮದ ಮುಖಂಡರು, ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ಹೋಮ-ಹವನ, ದೇವರ ಪಲ್ಲಕ್ಕಿ ಉತ್ಸವ ಮೆರವಣಿಗೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.

Tuesday, January 24, 2023

ಮನೆ ಕಾಂಪೌಂಡ್‌ನಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು

    ಭದ್ರಾವತಿ, ಜ. ೨೪: ಮನೆಯ ಕಾಂಪೌಂಡ್‌ನಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ.
    ಖಲಂದರ್ ನಗರದ ಅಬ್ದುಲ್ ರೆಹಮಾನ್ ಎಂಬುವರು ರಾತ್ರಿ ಮನೆಯ ಕಾಂಪೌಂಡ್‌ನಲ್ಲಿ ರಾಯಲ್ ಎನ್ ಫೀಲ್ಡ್ ಬೈಕನ್ನು ನಿಲ್ಲಿಸಿದ್ದು, ಬೆಳಿಗ್ಗೆ ಬೈಕ್ ಕಳುವಾಗಿರುವುದು ಕಂಡು ಬಂದಿದೆ. ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಪಘಾತ : ವೃದ್ಧೆ ಸ್ಥಳದಲ್ಲಿಯೇ ಸಾವು

     ಭದ್ರಾವತಿ, ಜ. ೨೪ :  ರಸ್ತೆಯಲ್ಲಿ ಹೋಗುತ್ತಿದ್ದಾಗ ವೃದ್ಧೆಯೊಬ್ಬರು ಟ್ರ್ಯಾಕ್ಟರ್ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ತಾಲೂಕಿನ ಭದ್ರಾವತಿ-ಚನ್ನಗಿರಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
  ಅರಳಿಹಳ್ಳಿ ಗ್ರಾಮದ ನಿವಾಸಿ ಮಹಮ್ಮದ್ ಸಾಧಿಕ್‌ರವರ  ಮುತ್ತಜ್ಜಿ ಸುಮಾರು ೯೨ ವರ್ಷ ವಯೋಮಾನದ ಚಮನ್ ಬೀ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಟ್ರ್ಯಾಕ್ಟರ್ ಚಾಲಕ ನಾಗರಾಜ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.

೬ ದಿನ ಪೂರೈಸಿದ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಅನಿರ್ಧಿಷ್ಟಾವಧಿ ಹೋರಾಟ

ಬಾಯಿ ಬಡಿದುಕೊಂಡು ಪ್ರತಿಭಟನೆ, ಮಾಜಿ ಸೈನಿಕರ ಸಂಘ ಬೆಂಬಲ, ಮೋದಿಗೆ ಎಚ್‌ಡಿಡಿ ಪತ್ರ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ  ಗುತ್ತಿಗೆ ಕಾರ್ಮಿಕರ ಸಂಘ ಕಾರ್ಖಾನೆ ಮುಂಭಾಗ ಕೈಗೊಂಡಿರುವ ಅನಿರ್ಧಿಷ್ಟಾವಧಿ ಹೋರಾಟ ಮಂಗಳವಾರ ೬ನೇ ದಿನಕ್ಕೆ ಕಾಲಿಟ್ಟಿತು. ಗುತ್ತಿಗೆ ಕಾರ್ಮಿಕರು ಬಾಯಿ ಬಡಿದುಕೊಂಡು ಪ್ರತಿಭಟಿಸಿದರು.
    ಭದ್ರಾವತಿ, ಜ. ೨೪ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ  ಗುತ್ತಿಗೆ ಕಾರ್ಮಿಕರ ಸಂಘ ಕಾರ್ಖಾನೆ ಮುಂಭಾಗ ಕೈಗೊಂಡಿರುವ ಅನಿರ್ಧಿಷ್ಟಾವಧಿ ಹೋರಾಟ ಮಂಗಳವಾರ ೬ನೇ ದಿನಕ್ಕೆ ಕಾಲಿಟ್ಟಿತು.
   ಮಧ್ಯಾಹ್ನ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಗುತ್ತಿಗೆ ಕಾರ್ಮಿಕರು ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ದರಿದ್ದಾರೆ. ಬೇಡಿಕೆ ಈಡೇರುವವರೆಗೂ ಹೋರಾಟ ನಡೆಯಲಿದೆ. ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ. ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸುವಂತೆ ಮನವಿ ಮಾಡಿದರು.
    ಬಾಯಿ ಬಡಿದುಕೊಂಡು ಪ್ರತಿಭಟನೆ :
    ಗುತ್ತಿಗೆ ಕಾರ್ಮಿಕರು ಕೇಂದ್ರ ಸರ್ಕಾರ ಹಾಗು ಉಕ್ಕು ಪ್ರಾಧಿಕಾರ ಮತ್ತು ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಧಿಕ್ಕಾರ ಕೂಗುವ ಜೊತೆಗೆ ಬಾಯಿ ಬಡಿದುಕೊಂಡು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
       ಉಕ್ಕಿನ ನಗರ ಮಾಜಿ ಸೈನಿಕರ ಸಂಘ ಬೆಂಬಲ :
   ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಉಕ್ಕಿನ ನಗರ ಮಾಜಿ ಸೈನಿಕರ ಸಂಘ ಬೆಂಬಲ ಸೂಚಿಸಿದೆ. 
    ಹೋರಾಟದ ಸ್ಥಳಕ್ಕೆ ಆಗಮಿಸಿದ ಸಂಘದ ಪದಾಧಿಕಾರಿಗಳು ಮಾತನಾಡಿ,  ಕಾರ್ಖಾನೆ ಮುಚ್ಚುವ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು. ಕೇಂದ್ರ ಸರ್ಕಾರ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಅಭಿವೃದ್ಧಿಪಡಿಸಬೇಕು. ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಸಂಘ ಸಂಪೂರ್ಣವಾಗಿ ಬೆಂಬಲ ನೀಡುತ್ತದೆ ಎಂದು ಸಂಘದ ಕಾರ್ಯದರ್ಶಿ ವಿನೋದ್ ಪೂಜಾರಿ ಭರವಸೆ ನೀಡಿದರು.
     ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಪ್ರಧಾನಿ ಮೋದಿಗೆ ಪತ್ರ :
   ಪ್ರಧಾನಮಂತ್ರಿ ನಗರೇಂದ್ರ ಮೋದಿಯವರಿಗೆ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚದಿರುವಂತೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಪತ್ರ ಬರೆದಿದ್ದಾರೆ. ಇತ್ತೀಚೆಗೆ ಕಾರ್ಖಾನೆಯ ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರು, ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ ನೇತೃತ್ವದಲ್ಲಿ ದೇವೇಗೌಡರಿಗೆ ಮನವಿ ಸಲ್ಲಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಒತ್ತಾಯಿಸುವಂತೆ ಕೋರಿದ್ದರು. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ದೇವೇಗೌಡರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
   ಕಾರ್ಖಾನೆ ಮುಚ್ಚುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈ ಬಿಡಬೇಕು. ದೇಶಕ್ಕೆ ಅತ್ಯುನ್ನತ ಕೊಡುಗೆಯಾಗಿರುವ ಕಾರ್ಖಾನೆಯ ಮುಚ್ಚುವ ತೀರ್ಮಾನ ಸಮಂಜಸವಲ್ಲ. ರಾಜ್ಯದ ಏಕೈಕ ಸಾರ್ವಜನಿಕ ಸ್ವಾಮ್ಯದ ಉದ್ದಿಮೆ ಇದಾಗಿದೆ. ಕಾರ್ಖಾನೆ ಮರು ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
     ಆತ್ಮನಿರ್ಭರ ಭಾರತದ ಪರಿಕಲ್ಪನೆಗೆ ಪೂರಕವಾಗಿ ಈ ಕಾರ್ಖಾನೆ ಅನೇಕ ಕೊಡುಗೆಗಳನ್ನು ನೀಡುವ ಸಾಮರ್ಥ್ಯ ಹೊಂದಿದೆ. ರಕ್ಷಣಾ ವಲಯ, ನ್ಯೂಕ್ಲಿಯರ್, ರೈಲ್ವೆ ಮುಂತಾದ ವಿಭಾಗದಲ್ಲಿ ಈ ಕಾರ್ಖಾನೆಯಿಂದ ಮಹತ್ವದ ಸಹಕಾರ ದೊರೆಯಲಿದೆ. ಮುಖ್ಯವಾಗಿ ೨೦ ಸಾವಿರಕ್ಕೂ ಹೆಚ್ಚು ಕುಟುಂಬಗಳು ಇದೇ ಕಾರ್ಖಾನೆಯನ್ನು ಅವಲಂಬಿಸಿವೆ. ಈ ಹಿನ್ನಲೆಯಲ್ಲಿ ಕಾರ್ಖಾನೆ ಮುಚ್ಚುವ ನಿರ್ಧಾರ ಕೈಬಿಡುವಂತೆ ಮನವರಿಕೆ ಮಾಡಿದ್ದಾರೆ.

ಜ.೨೫ರಂದು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಲೋಕಾರ್ಪಣೆ

    ಭದ್ರಾವತಿ, ಜ. ೨೫ : ತಾಲೂಕಿನ ಸೀತಾರಾಮಪುರ(ಮುಳ್ಕೆರೆ) ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಲೋಕಾರ್ಪಣೆ ಹಾಗು ಕಳಶಾರೋಹಣ ಕಾರ್ಯಕ್ರಮ ಜ.೨೫ರಂದು ನಡೆಯಲಿದೆ.
    ಬೆಳಿಗ್ಗೆ ೧೦.೩೦ಕ್ಕೆ ಜನ ಜಾಗೃತಿ ಧಾರ್ಮಿಕ ಸಮಾರಂಭದಲ್ಲಿ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಶ್ರೀ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ದಿವ್ಯ ಸಾನಿಧ್ಯ ವಹಿಸಲಿದ್ದು, ಯಡಿಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ತರೀಕೆರೆ ಹಿರೇಮಠದ ಶ್ರೀ ಜಗದೀಶ್ವರ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟ ಹಾಲಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಮಳಲಿಮಠದ ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮತ್ತು ಚನ್ನಗಿರಿ ಕೇದಾರ ಶಾಖಾ ಹಿರೇಮಠದ ಶ್ರೀ ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿರುವರು.
    ಸಂಸದ ಬಿ.ವೈ ರಾಘವೇಂದ್ರ ಜನ ಜಾಗೃತಿ ಧಾರ್ಮಿಕ ಸಮಾರಂಭ ಉದ್ಘಾಟಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆವಹಿಸಲಿದ್ದಾರೆ. ಪ್ರಮುಖರಾದ ಶಾರದ ಅಪ್ಪಾಜಿ, ಎಸ್, ಮಣಿಶೇಖರ್, ಎಚ್.ಎಲ್ ಷಡಾಕ್ಷರಿ, ಜೆ. ಗೀತಾ ಜಗದೀಶ್, ಬೇಬಿ ಶಾಲಿನಿ, ಡಿ. ಪ್ರಭಾಕರ್, ಗೋಣಿ ಮಂಜುನಾಥ್ ಮತ್ತು ಪುಷ್ಪ ಆರ‍್ಮುಗಂ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
    ಹಿರಿಯ ಸಾಹಿತಿ ಜೆ.ಎನ್ ಬಸವರಾಜಪ್ಪ ಉಪನ್ಯಾಸ ನಡೆಸಿಕೊಡಲಿದ್ದು, ಮಧ್ಯಾಹ್ನ ೧೨ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.