ವಿವಿಧ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳ ಬೆಂಬಲ
ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಪಕ್ಷಾತೀತ ಹೋರಾಟ ನಡೆಸುವ ಸಂಬಂಧ ಬುಧವಾರ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಭದ್ರಾವತಿ, ಜ. ೨೫: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಪಕ್ಷಾತೀತ ಹೋರಾಟ ನಡೆಸುವ ಸಂಬಂಧ ಬುಧವಾರ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಗುತ್ತಿಗೆ ಕಾರ್ಮಿಕರ ಸಂಘದ ವತಿಯಿಂದ ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ ನೇತೃತ್ವದಲ್ಲಿ ನ್ಯೂಟೌನ್ ಶಾರದ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಮುಖಂಡರ ಸಭೆಯಲ್ಲಿ ಮಾತನಾಡಿ, ಪ್ರಸ್ತುತ ಕಾರ್ಖಾನೆ ಮುಚ್ಚುವ ಆದೇಶವನ್ನು ಹಿಂಪಡೆಯಬೇಕು. ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರೆಸಬೇಕು. ಈಗಾಗಲೇ ಎಂಪಿಎಂ ಕಾರ್ಖಾನೆ ಸ್ಥಗಿತಗೊಂಡು ಸಾವಿರಾರು ಕಾರ್ಮಿಕರು, ಕುಟುಂಬ ವರ್ಗದವರು ಬೀದಿ ಪಾಲಾಗಿದ್ದಾರೆ. ಇದೀಗ ವಿಐಎಸ್‌ಎಲ್ ಸಹ ಮುಚ್ಚಿ ಹೋಗುತ್ತಿದ್ದು, ನಾವೆಲ್ಲರೂ ಇದೀಗ ಎಚ್ಚೆತ್ತುಕೊಂಡು ಪಕ್ಷಾತೀತ ಹೋರಾಟಕ್ಕೆ ಮುಂದಾಗಬೇಕು. ರಾಜಕೀಯ ಬೇರೆ, ಹೋರಾಟ ಬೇರೆ. ನಾವೆಲ್ಲರೂ ಈ ಊರು ಹಾಗು ಜನರ ಭವಿಷ್ಯದ ಬಗ್ಗೆ ಚಿಂತಿಸಬೇಕಾಗಿದೆ. ಹೋರಾಟ ಮಾತ್ರ ಕಾರ್ಖಾನೆ ಉಳಿಸಿಕೊಳ್ಳಲು ನಮ್ಮೆಲ್ಲರ ಮುಂದಿರುವುದು ಏಕೈಕ ದಾರಿಯಾಗಿದ್ದು, ಯಾವುದೇ ರೀತಿಯ ಹೋರಾಟ ಕೈಗೊಂಡರೂ ಸಹ ಸಂಪೂರ್ಣವಾಗಿ ಸಹಕಾರ ನೀಡಲು ಬದ್ಧವಾಗಿದ್ದೇವೆ ಎಂದರು.
ಸಭೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಜನಪ್ರತಿನಿಧಿಗಳು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಜೆಡಿಯು, ಕೆಆರ್‌ಎಸ್ ಪಕ್ಷಗಳ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಕಾರ್ಮಿಕ ಸಂಘಟನೆಗಳ, ಮಹಿಳಾ ಸಂಘಟನೆಗಳ ಮುಖಂಡರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಈ ಹಿಂದೆ ಸಹ ಇದೆ ರೀತಿಯ ಹೋರಾಟ ರೂಪಿಸಲಾಗಿತ್ತು. ಹೋರಾಟದ ಪರಿಣಾಮ ಉಕ್ಕು ಪ್ರಾಧಿಕಾರ ಕಾರ್ಖಾನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಮುನ್ನಡೆಸುವ ನಿರ್ಧಾರದಿಂದ ಹಿಂದೆ ಸರಿದಿತ್ತು. ಅಲ್ಲದೆ ರಾಜ್ಯ ಸರ್ಕಾರ ಕಾರ್ಖಾನೆಗೆ ಅಗತ್ಯವಿರುವ ಗಣಿ ಮಂಜೂರಾತಿ ಮಾಡಿ ಕೇಂದ್ರಕ್ಕೆ ಸರ್ಕಾರಕ್ಕೆ ಶಿಫಾರಸ್ತು ಮಾಡಿತ್ತು. ಇದೀಗ ಪುನಃ ಹೋರಾಟ ತೀವ್ರಗೊಳ್ಳುತ್ತಿದ್ದು, ಸರ್ಕಾರ ಹೋರಾಟಕ್ಕೆ ಬೆಲೆ ನೀಡಿ ತನ್ನ ನಿಲುವು ಬದಲಿಸಿಕೊಳ್ಳಬೇಕಾಗಿದೆ.
No comments:
Post a Comment