ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಲೋಕಾರ್ಪಣೆ ಸಮಾರಂಭದಲ್ಲಿ ಬಾಳೆಹೊನ್ನೂರು ಜಗದ್ಗುರುಗಳು
ಭದ್ರಾವತಿ ತಾಲೂಕಿನ ಸೀತಾರಾಮಪುರ(ಮುಳ್ಕೆರೆ) ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಲೋಕಾರ್ಪಣೆ ಹಾಗು ಕಳಶಾರೋಹಣ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಬೇಕೆಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಶ್ರೀ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರಿಗೆ ದೇವಸ್ಥಾನ ಸಮಿತಿ ವತಿಯಿಂದ ಗೌರವ ಸಮರ್ಪಣೆ ಸಲ್ಲಿಸಲಾಯಿತು.
ಭದ್ರಾವತಿ, ಜ. ೨೫ : ಧರ್ಮಪೀಠವಿದ್ದಲ್ಲಿ ಸಮಾಜದಲ್ಲಿ ಸಮೃದ್ಧಿ ತುಂಬಿರುತ್ತದೆ. ಎಲ್ಲೆಡೆ ಧರ್ಮದ ಬೆಳಕು ವ್ಯಾಪಿಸಬೇಕು. ಅವರವರ ಧರ್ಮ ಅವರಿಗೆ ಶ್ರೇಷ್ಠ. ಎಲ್ಲಾ ಧರ್ಮಗಳನ್ನು ಪ್ರೀತಿ, ವಿಶ್ವಾಸ, ಸಮಾನತೆಯಿಂದ ಕಾಣುವ ಮನೋಭಾವ ಪ್ರತಿ ಬೆಳಸಿಕೊಳ್ಳಬೇಕೆಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಶ್ರೀ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಜಗದ್ಗುರುಗಳು ತಾಲೂಕಿನ ಸೀತಾರಾಮಪುರ(ಮುಳ್ಕೆರೆ) ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಲೋಕಾರ್ಪಣೆ ಹಾಗು ಕಳಶಾರೋಹಣ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಧರ್ಮ ಎಂಬುದು ನಮ್ಮ ಬದುಕಿನ ದಿಕ್ಸೂಚಿಯಾಗಿದ್ದು, ನಾವು ಧರ್ಮ ಮಾರ್ಗದಲ್ಲಿ ಸಾಗಿದಾಗ ಉತ್ತಮ ಸಮಾಜ ನಿರ್ಮಾಣ ಮಾಡಿಕೊಳ್ಳಲು ಸಾಧ್ಯ. ಜ್ಞಾನ ಬಾಧೆಯಿಂದ ಧರ್ಮದ ಮೂಲ ಆಶಯಗಳಿಗೆ ಧಕ್ಕೆಯಾಗಬಾರದು. ಇಂದಿನ ಪೀಳಿಯವರು ದೇವರು ಮತ್ತು ಅಸ್ತಿತ್ವದ ಪರಿಕಲ್ಪನೆ ಬಗ್ಗೆ ಚಿಂತಿಸಬೇಕಾಗಿದೆ ಎಂದರು.
ಸಮಾಜದಲ್ಲಿ ಎಲ್ಲರೂ ಒಂದೇ ಶ್ರೀ ರೇಣುಕಾಚಾರ್ಯರ ಸಂದೇಶಗಳನ್ನು ೧೨ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ. ಎಲ್ಲರನ್ನು ನಮ್ಮವರು ಎಂಬ ಭಾವನೆಯಿಂದ ಕಾಣಬೇಕಾಗಿದೆ. ಬಾಳೆಹೊನ್ನೂರು ಪೀಠಕ್ಕೂ ಶ್ರೀ ವೀರಭದ್ರೇಶ್ವರ ಸ್ವಾಮಿಗೂ ಅವಿನಾಭಾವ ಸಂಬವಿದ್ದು, ದುಷ್ಟ ಶಕ್ತಿಗಳನ್ನು ಧಮನ ಮಾಡಿ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ವೀರಭದ್ರನ ಆರಾಧನೆ ಅಗತ್ಯವಾಗಿದೆ. ಭಕ್ತರು ವೀರಭದ್ರೇಶ್ವರ ಸ್ವಾಮಿಯನ್ನು ಶ್ರದ್ದೆ, ಭಕ್ತಿಯಿಂದ ಆರಾಧಿಸಿಕೊಂಡು ಬರಬೇಕೆಂದರು.
ಶಾಸಕ ಬಿ.ಕೆ ಸಂಗಮೇಶ್ವರ್ ದೇವಸ್ಥಾನ ಲೋಕಾರ್ಪಣೆಗೊಳಿಸಿದರು. ಹಿರಿಯ ಸಾಹಿತಿ ಜೆ.ಎನ್ ಬಸವರಾಜಪ್ಪ ಉಪನ್ಯಾಸ ನಡೆಸಿಕೊಟ್ಟರು. ಯಡಿಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ತರೀಕೆರೆ ಹಿರೇಮಠದ ಶ್ರೀ ಜಗದೀಶ್ವರ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟ ಹಾಲಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಮಳಲಿಮಠದ ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮತ್ತು ಚನ್ನಗಿರಿ ಕೇದಾರ ಶಾಖಾ ಹಿರೇಮಠದ ಶ್ರೀ ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಹಟ್ಟಿ ಚಿನ್ನದ ಗಣಿ ಕಂಪನಿ ನಿರ್ದೇಶಕ ಕೂಡ್ಲಿಗೆರೆ ಹಾಲೇಶ್, ರ‍್ಯಾಮ್ಕೋಸ್ ನಿರ್ದೇಶಕ ಮಹೇಶ್ವರಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾಕರ್ತರು, ದಾನಿಗಳು, ಗ್ರಾಮದ ಮುಖಂಡರು, ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ಹೋಮ-ಹವನ, ದೇವರ ಪಲ್ಲಕ್ಕಿ ಉತ್ಸವ ಮೆರವಣಿಗೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
No comments:
Post a Comment