Monday, February 20, 2023

‎ ಐ.ವಿ ಸಂತೋಷ್, ಸ್ಟೀವನ್ ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಸೇರ್ಪಡೆ

   ಭದ್ರಾವತಿ, ಜ. 21:  ನ್ಯೂಕಾಲೋನಿ ಭಾಗದ ಯುವ ಮುಖಂಡರು, ಸಮಾಜ ಸೇವಕರುಗಳಾದ ರಾಷ್ಟ್ರೀಯ ಮಾನವ ಹಕ್ಕು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ತಾಲೂಕು ಅಧ್ಯಕ್ಷ  ಐ.ವಿ ಸಂತೋಷ್ ಕುಮಾರ್ ಮತ್ತು ಹಾಗೂ ಕಾಲ್ವರಿ ಕಾರುಣ್ಯ ಟ್ರಸ್ಟ್ ಸಂಸ್ಥಾಪಕ ಸ್ಟೀವನ್ ಜೋನಾಥನ್  ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.      
 ಬೆಣ್ಣೆಕೃಷ್ಣ ವೃತ್ತದಲ್ಲಿ ಮಹಾಶಿವರಾತ್ರಿ ಅಂಗವಾಗಿ ಆಯೋಜಿಸಲಾಗಿದ್ದ  ಕಬಡ್ಡಿ ಪಂದ್ಯಾವಳಿಯಲ್ಲಿ ಯುವ ಮುಖಂಡ ಬಿ.ಎಸ್ ಗಣೇಶ್ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ತೊರೆದು  ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. 
    ನಗರಸಭೆ ಮಾಜಿ ಸದಸ್ಯರಾದ ಬಾಲಕೃಷ್ಣ ಫ್ರಾನ್ಸಿಸ್,  ಎಸ್.ಎಸ್ ಭೈರಪ್ಪ, ಹಾವು ಮಂಜ, ದಾಸ್, ನಾಸೀರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
 

ಪರವಾನಿಗೆ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ : ಸೂಕ್ತ ಕ್ರಮಕ್ಕೆ ಆಗ್ರಹ

ಜಯ ಕರ್ನಾಟಕ ಸಂಘಟನೆವತಿಯಿಂದ ನಗರಸಭೆ ಮುಂಭಾಗ ಪ್ರತಿಭಟನೆ

ಭದ್ರಾವತಿ ನಗರಸಭೆ ವಾರ್ಡ್ ನಂ.೨ರ ಬಿ.ಹೆಚ್ ರಸ್ತೆಯಲ್ಲಿ ನಿಯಮ ಉಲ್ಲಂಘನೆಮಾಡಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಅದನ್ನು ತೆರವುಗೊಳಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಸೋಮವಾರ ನಗರಸಭೆ ಮುಂಭಾಗ ಜಯ ಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.  
    ಭದ್ರಾವತಿ, ಫೆ. ೨೦ : ನಗರಸಭೆ ವಾರ್ಡ್ ನಂ.೨ರ ಬಿ.ಹೆಚ್ ರಸ್ತೆಯಲ್ಲಿ ನಿಯಮ ಉಲ್ಲಂಘನೆಮಾಡಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಅದನ್ನು ತೆರವುಗೊಳಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಸೋಮವಾರ ನಗರಸಭೆ ಮುಂಭಾಗ ಜಯ ಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.  
    ಬಿ.ಹೆಚ್ ರಸ್ತೆ ಖಾತೆ ನಂ. ೧೬೭-೧೮೦, ಪಿ.ಐ.ಡಿ: ೨-೨-೧-೨೮೬ರಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ನಿರ್ಮಾಣ ಹಂತದಲ್ಲಿರುವ ಕಟ್ಟಡ ಪರವಾನಿಗೆ ಪ್ರಕಾರ ನಿರ್ಮಾಣಗೊಳ್ಳುತ್ತಿಲ್ಲ. ನಿಯಮ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಕಂಡು ಬಂದಿರುತ್ತದೆ.  ಕೆರೆ-ಕಟ್ಟೆ ಮೊದಲಾದ ಜಲಕಾಯಗಳಲ್ಲಿನ ಹಾಗೂ ನಿರ್ಬಂಧಿತ ಪ್ರದೇಶದಲ್ಲಿನ (ಬಫರ್ ಝೋನ್) ಅಕ್ರಮ ಕಟ್ಟಡ/ಸಂರಚನೆಗಳನ್ನು ತೆರವುಗೊಳಿಸುವ ಕುರಿತು ಸರ್ಕಾರದ ಸುತ್ತೋಲೆ ದಿನಾಂಕ : ೧೧-೦೮-೨೦೨೧
ಹೊರಡಿಸಿದ್ದು, ಇದರ ಪ್ರಕಾರ ಕೆರೆ-ಕಟ್ಟೆ ಜಲಕಾಯಗಳ ಅಂಚಿನಿಂದ ೩೦ ಮೀಟರ್‌ವರೆಗಿನ ವಲಯದಲ್ಲಿ (ಬಫರ್ ಝೋನ್) ನಿರ್ಮಾಣವಾಗಿರುವ ಅಕ್ರಮ ಕಟ್ಟಡ/ಸಂರಚನೆಗಳನ್ನು ಸಹ ಕಟ್ಟುನಿಟ್ಟಾಗಿ ತೆರವು ಗೊಳಿಸುವಂತೆ ನಿರ್ದೇಶಿಸಿದೆ. ಆದರೆ ಪ್ರಸ್ತುತ ಕಟ್ಟಡ ನಿರ್ಮಾಣದಾರರು ದಿನಾಂಕ : ೨೦-೧೨-೨೦೨೧ರಂದು ಪರವಾನಿಗೆ ಪಡೆದಿರುತ್ತಾರೆ. ಅದರ ಪ್ರಕಾರ ಇವರು ೧೫ ಮೀಟರ್‌ಗಳು ಮಾತ್ರ ಬಫರ್ ಝೋನ್ ಬಿಟ್ಟಿರುತ್ತಾರೆ. ಅಲ್ಲದೆ ದಿನಾಂಕ: ೨೪-೦೧-೨೦೨೦ರ ಕಟ್ಟಡ ಪರವಾನಿಗೆಯ ಪ್ರಕಾರ ಇದು ಪಾರ್ಕಿಂಗ್ ಸ್ಥಳವಾಗಿದ್ದು, ಈ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುತ್ತಿರುವುದು ಕಂಡುಬಂದಿರುತ್ತದೆ ಎಂದು ದೂರಿದರು.
    ಈ ಹಿಂದೆ ವಿಶಾಲ್ ಮಾರ್ಟ್ ಕಟ್ಟಡವನ್ನು ಸಹ ಯಾವುದೇ ಸೆಟ್‌ಬ್ಯಾಕ್ ಜಾಗ ಹಾಗು ಪಾರ್ಕಿಂಗ್ ಜಾಗ ಬಿಡದೆ ಹಾಗೂ ಪರವಾನಿಗೆ ಕಾನೂನುಗಳನ್ನು ದುರುಪಯೋಗ ಮಾಡಿಕೊಂಡು ನಿರ್ಮಿಸಿದ್ದು, ಅಲ್ಲದೆ ನದಿ ಜಾಗ ಒತ್ತುವರಿ ಮಾಡಿಕೊಂಡಿರುತ್ತಾರೆಂದು ಆರೋಪಿಸಿದರು.
    ಈ ಹಿಂದೆ ಸಂಘಟನೆ ವತಿಯಿಂದ ದೂರು ನೀಡಿದ ಹಿನ್ನಲೆಯಲ್ಲಿ ನಗರಸಭೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಕಟ್ಟಡ ನಿರ್ಮಾಣದ ಸರ್ವೆಯನ್ನು ಪೂರ್ಣಗೊಳಿಸಿ ನಮಗೆ ಹಿಂಬರಹದಲ್ಲಿ ಸೆಟ್‌ಬ್ಯಾಕ್ ನಿರ್ಮಾಣದಲ್ಲಿ ಉಲ್ಲಂಘನೆಯಾಗಿರುತ್ತದೆ ಮತ್ತು ನದಿ ಜಾಗ ಒತ್ತುವರಿಯಾಗಿದೆ ಎಂದು ಹಿಂಬರಹ ನೀಡಿರುತ್ತಾರೆ.
    ಈ ಹಿನ್ನಲೆಯಲ್ಲಿ ವಿಶಾಲ್ ಮಾರ್ಟ್ ಕಟ್ಟಡ ಮತ್ತು ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡ ಕಾಮಗಾರಿ ತಕ್ಷಣ ಸ್ಥಗಿತಗೊಳಿಸುವ ಜೊತೆಗೆ ಆಕ್ರಮ ಕಟ್ಟಡ ತೆರವುಗೊಳಿಸಬೇಕು. ಅಲ್ಲದೆ ಈ ಆಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಅಮನಾತುಗೊಳಿಸಬೇಕೆಂದು ಆಗ್ರಹಿಸಿದರು.
    ಸಂಘಟನೆ ಜಿಲ್ಲಾ ಕಾರ್ಯಾಧ್ಯಕ್ಷ ಎಂ. ಮುಕುಂದ, ಗೌರವಾಧ್ಯಕ್ಷ ಶರವಣ, ತಾಲೂಕು ಅಧ್ಯಕ್ಷ ಆರ್. ಅರುಣ, ತಾಲೂಕು ಕಾರ್ಯಾಧ್ಯಕ್ಷ ಚೇತನ್‌ಕುಮಾರ್, ಪ್ರಧಾನ ಕಾರ್ಯಧರ್ಶಿ ಸಿ. ಜೀವನ್‌ಕುಮಾರ್, ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥ್, ಪ್ರಮುಖರಾದ ಡಿ.ಟಿ ಶಶಿಕುಮಾರ್, ಆಟೋ ಶಂಕರ್, ವರಲಕ್ಷ್ಮೀ, ಬಿ.ಆರ್ ಜಯ, ಚಂದ್ರಶೇಖರ್, ಯೋಗೇಶ್, ತ್ಯಾಗರಾಜ್, ಶಿವಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟ : ಫೆ.೨೪ರಂದು ಭದ್ರಾವತಿ ಸಂಪೂರ್ಣ ಬಂದ್‌ಗೆ ಕರೆ


ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಮುಚ್ಚುವ ಕೇಂದ್ರ ಸರ್ಕಾರದ ತೀರ್ಮಾನ ಖಂಡಿಸಿ ಫೆ. ೨೪ರಂದು ಭದ್ರಾವತಿ ಸಂಪೂರ್ಣ ಬಂದ್ ಮಾಡುವ ಕರೆ ನೀಡಲಾಗುತ್ತಿದ್ದು, ನಮ್ಮ ಹೋರಾಟಕ್ಕೆ ಸಮಸ್ತ ನಾಗರೀಕರು ಬೆಂಬಲ ಸೂಚಿಸುವ ಮೂಲಕ ಬಂದ್ ಯಶಸ್ವಿಗೆ ಸಹಕರಿಸುವಂತೆ ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಪ್ರಮುಖರು ಮನವಿ ಮಾಡಿದ್ದಾರೆ.
    ಭದ್ರಾವತಿ, ಫೆ. ೨೦: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಮುಚ್ಚುವ ಕೇಂದ್ರ ಸರ್ಕಾರದ ತೀರ್ಮಾನ ಖಂಡಿಸಿ ಫೆ. ೨೪ರಂದು ಭದ್ರಾವತಿ ಸಂಪೂರ್ಣ ಬಂದ್ ಮಾಡುವ ಕರೆ ನೀಡಲಾಗುತ್ತಿದ್ದು, ನಮ್ಮ ಹೋರಾಟಕ್ಕೆ ಸಮಸ್ತ ನಾಗರೀಕರು ಬೆಂಬಲ ಸೂಚಿಸುವ ಮೂಲಕ ಬಂದ್ ಯಶಸ್ವಿಗೆ ಸಹಕರಿಸುವಂತೆ ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಪ್ರಮುಖರು ಮನವಿ ಮಾಡಿದ್ದಾರೆ.
    ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಗಳ ಪ್ರಮುಖರು, ನಾಡಿನ ಪ್ರತಿಷ್ಠಿತ, ತಾಲೂಕಿನ ಜೀವನಾಡಿಯಾದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಅಂದಿನ ಮೈಸೂರು ಮಹಾರಾಜರು ಹಾಗೂ ವಿಶ್ವೇಶ್ವರಾಯರ ದೂರದೃಷ್ಠಿಯ ಪ್ರತೀಕವಾಗಿದೆ. ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ಹಾಗೂ ಭಾರತೀಯ ಉಕ್ಕು ಪ್ರಾಧಿಕಾರದ ಮಲತಾಯಿ ದೋರಣೆಯಿಂದ ನಷ್ಟದ ಹಾದಿ ಹಿಡಿದು, ಮುಚ್ಚುವ ಹಂತಕ್ಕೆ ಬಂದಿದೆ ಎಂದು ಆರೋಪಿಸಿದರು.
    ಜ.೧೬ ರಂದು ನಡೆದ ಭಾರತೀಯ ಉಕ್ಕು ಪ್ರಾಧಿಕಾರದ ಆಡಳಿತ ಮಂಡಳಿಯ ಸಭೆಯ ತೀರ್ಮಾನದಂತೆ ಮಾ.೩೧ರಿಂದ ಕಾರ್ಖಾನೆಯಲ್ಲಿ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಮುಚ್ಚಲು ಕಾರ್ಖಾನೆ ಆಡಳಿತ ವರ್ಗಕ್ಕೆ ಆದೇಶ ನೀಡಲಾಗಿರುತ್ತದೆ.  ಈ ನಿರ್ಧಾರ ಖಂಡಿಸಿ ಜ.೧೯ ರಿಂದ ಗುತ್ತಿಗೆ ಕಾರ್ಮಿಕರ ಸಂಘದ ನೇತ್ರತ್ವದಲ್ಲಿ ಕಾರ್ಖಾನೆ ಉಳಿಸಲು ಹೋರಾಟ ನಡೆಸುತ್ತಿದ್ದು, ಹೋರಾಟಕ್ಕೆ ವಿವಿಧ ಮಠಾಧೀಶರು, ಎಲ್ಲಾ ರಾಜಕೀಯ ಮುಖಂಡರುಗಳು, ಸಂಘ-ಸಂಸ್ಥೆಗಳು ಸಂಪೂರ್ಣ ಬೆಂಬಲವನ್ನು ಸೂಚಿಸಿರುತ್ತಾರೆ. ಹಲವು ರೀತಿಯ ಹೋರಾಟಗಳನ್ನು ನಡೆಸಲಾಗಿದೆ. ಇಷ್ಟೆಲ್ಲಾ ಹೋರಾಟಗಳು ನಡೆಯುತ್ತಿದ್ದರೂ, ಉಕ್ಕು ಪ್ರಾಧಿಕಾರದ ಆಡಳಿತ ವರ್ಗ ಮತ್ತು ಕೇಂದ್ರ ಸರ್ಕಾರ ತನ್ನ ನಿಲುವು ಬದಲಿಸಿದಂತೆ ಕಾಣುತ್ತಿಲ್ಲ, ಈ ಹಿನ್ನಲೆಯಲ್ಲಿ ಫೆ.೨೪ ರಂದು ಭದ್ರಾವತಿ ಸಂಪೂರ್ಣವಾಗಿ ಬಂದ್ ಮಾಡುವ ಮೂಲಕ ಗಮನ ಸೆಳೆಯಲು ನಿರ್ಧರಿಸಲಾಗಿದೆ ಎಂದರು.
    ಕಾರ್ಖಾನೆ ಉಳಿದರೆ ಮಾತ್ರ ಭದ್ರಾವತಿ ಉಳಿದಂತೆ, ಈ ಹಿನ್ನಲೆಯಲ್ಲಿ ಸ್ವಯಂ ಪ್ರೇರಣೆಯಿಂದ ವರ್ತಕರು, ವ್ಯಾಪಾರಸ್ಥರು ತಮ್ಮ ವ್ಯವಹಾರ, ವಹಿವಾಟುಗಳನ್ನು  ಸ್ಥಗಿತಗೊಳಿಸುವ ಮೂಲಕ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸುವಂತೆ ಕೋರಿದರು. ಅಲ್ಲದೆ ಸಮಸ್ತ ನಾಗರೀಕರು ಸಹ ಹೋರಾಟ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದರು.
    ವಿಐಎಸ್‌ಪಿ ಕಾಂಟ್ರಾಕ್ಟ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಎಚ್.ಜಿ ಸುರೇಶ್, ಉಪಾಧ್ಯಕ್ಷರಾದ ಆರ್. ಮಂಜುನಾಥ್, ಎಸ್. ವಿನೋದ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಪಿ. ರಾಕೇಶ್, ಕಾರ್ಯದರ್ಶಿಗಳಾದ ಗುಣಶೇಖರ್, ವಿನಯ್ ಕುಮಾರ್, ಆರ್. ಅರುಣ್‌ಕುಮಾರ್, ಬಿ.ಟಿ ವಾಸುದೇವ್, ಎಸ್.ಕೆ ಮಂಜುನಾಥ್, ಎಐಟಿಯುಸಿ ಉಪಾಧ್ಯಕ್ಷ ಸಂಜಯ್, ಸತೀಶ್, ಶಿವನಾಗ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಪಘಾತ : ಚಿಕಿತ್ಸೆ ಫಲಕಾರಿಯಾಗದೆ ದ್ವಿಚಕ್ರ ವಾಹನ ಸವಾರ ಸಾವು

 
    ಭದ್ರಾವತಿ, ಫೆ. ೨೦: ದ್ವಿಚಕ್ರ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಡೆದಿದೆ.
    ದೊಡ್ಡಗೊಪ್ಪೇನಹಳ್ಳಿ ನಿವಾಸಿ ಬಿ. ಜಗದೀಶ್‌ರವರ ಪುತ್ರ ಭರತ್ ಮೃತಪಟ್ಟಿದ್ದು, ಈತ ಫೆ. ೧೭ರಂದು ರಾತ್ರಿ ಪಲ್ಸರ್ ದ್ವಿಚಕ್ರ ವಾಹನದಲ್ಲಿ ರಾಷ್ಟ್ರೀಯ ಹೆದ್ದಾರಿ ೬೯ರಲ್ಲಿ  ಸಂಚರಿಸುವಾಗ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಭರತ್ ತೀವ್ರ ಗಾಯಗೊಂಡಿದ್ದು, ಅಲ್ಲದೆ ಹಿಂಭಾಗದಲ್ಲಿ ಕುಳಿತಿದ್ದ ಸುಜಿತ್ ಮತ್ತು ಚಂದನರವರುಗಳಿಗೂ ಸಹ ಗಾಯಗಳಾಗಿವೆ. ತಕ್ಷಣ ಇವರನ್ನು ಶಿವಮೊಗ್ಗ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಫೆ.೧೮ರಂದು ರಾತ್ರಿ ಭರತ್ ಮೃತಪಟ್ಟಿದ್ದಾನೆ. ಈ ಸಂಬಂಧ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಐಎಸ್‌ಎಲ್ ಉಳಿವಿಗಾಗಿ ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಮನವಿ

೩೩ನೇ ದಿನದ ಹೋರಾಟಕ್ಕೆ ಪೇಜಾವರ ಶ್ರೀ, ಬಿಳಿಕಿ ಶ್ರೀ ಬೆಂಬಲ

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ೩೩ನೇ ದಿನದ ಹೋರಾಟಕ್ಕೆ ಸೋಮವಾರ ಅಯೋಧ್ಯೆ ರಾಮಮಂದಿರ ನಿರ್ಮಾಣ ಸಮಿತಿ ಸದಸ್ಯರು, ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗು ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಬೆಂಬಲ ಸೂಚಿಸಿದರು. 
    ಭದ್ರಾವತಿ, ಫೆ. ೨೦: ಬಡವರ್ಗದ  ಕಾರ್ಮಿಕರ ಹಿತಕಾಪಾಡುವ ಹಿನ್ನೆಲೆಯಿಂದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚದಂತೆ ಕೇಂದ್ರ ಸರ್ಕಾರಕ್ಕೆ ಪುನಃ  ಮನವಿ ಮಾಡುವುದಾಗಿ ಅಯೋಧ್ಯೆ ರಾಮಮಂದಿರ ನಿರ್ಮಾಣ ಸಮಿತಿ ಸದಸ್ಯರು, ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
    ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ೩೩ನೇ ದಿನದ ಹೋರಾಟಕ್ಕೆ ಸೋಮವಾರ ಸ್ವಾಮೀಜಿಯವರು ಬೆಂಬಲ ಸೂಚಿಸಿ ಮಾತನಾಡಿದರು.


    ಉಕ್ಕಿನ ನಗರದ ಜನರು ಶಾಶ್ವತವಾಗಿ ಉಳಿಯಬೇಕು. ಈ ನಿಟ್ಟಿನಲ್ಲಿ ನಿಮ್ಮಲ್ಲರ ಪ್ರಯತ್ನ, ಸಂಕಲ್ಪ ಹಾಗು ಭಗವಂತನ ಅನುಗ್ರಹ ದೊರೆಯಬೇಕು. ಭಾನುವಾರ ಕಾರ್ಮಿಕರ ನಿಯೋಗ ನನ್ನನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಉಡುಪಿಗೆ ಆಗಮಿಸಿದ್ದ ಕೇಂದ್ರ ಸರ್ಕಾರದ ಜನಪ್ರತಿನಿಧಿಗಳ ಗಮನಕ್ಕೆ ತರುವ ಮೂಲಕ ಮನವರಿಕೆ ಮಾಡಿಕೊಡಲಾಗಿದೆ. ಇಲ್ಲಿನ ಬಡ ಕಾರ್ಮಿಕರ ಬದುಕು ಮೂರಾಬಟ್ಟೆಯಾಗದಂತೆ ಅವರಿಗೆ ಉತ್ತಮ ಬದುಕು ಕಲ್ಪಿಸಿಕೊಡಬೇಕೆಂದು ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.
    ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪೇಜಾವರ ಶ್ರೀಗಳು ನಾಡಿನ ಓರ್ವ ಸಂತರಾಗಿದ್ದಾರೆ. ಶ್ರೀಗಳು ಹೋರಾಟಕ್ಕೆ ಬೆಂಬಲ ಸೂಚಿಸಿ ಆಗಮಿಸಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಈ ಕಾರ್ಖಾನೆ ಉಳಿವಿಗಾಗಿ ಸುಮಾರು ೧೦ ವರ್ಷಗಳ ಹಿಂದೆ ಬೃಹತ್ ಹೋರಾಟ ರೂಪಿಸಲಾಗಿತ್ತು. ಈ ಕಾರ್ಖಾನೆಯನ್ನು ಅಭಿವೃದ್ಧಿಗೊಳಿಸುವಲ್ಲಿ ನಿರ್ಲಕ್ಷ್ಯತನವಹಿಸಿರುವುದು ವಿಷಾದನೀಯ ಬೆಳವಣಿಗೆಯಾಗಿದೆ. ಈ ಕಾರ್ಖಾನೆಯಿಂದ ಕೇವಲ ಕಾರ್ಮಿಕರ ಬದುಕು ಮಾತ್ರವಲ್ಲ. ಇಡೀ ಭದ್ರಾವತಿ ನಗರದ ಜನತೆಯ ಬದುಕು ಅವಲಂಬಿತವಾಗಿದೆ. ಕಾರ್ಖಾನೆ ಉಳಿವಿಗಾಗಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲು ಸಿದ್ದವಿದ್ದೇನೆ. ಅಲ್ಲದೆ ಮುಂದಿನ ದಿನಗಳಲ್ಲಿ ಶಿವಮೊಗ್ಗ ಮಠಾಧೀಶರ ಪರಿಷತ್‌ನಲ್ಲಿರುವ ಎಲ್ಲಾ ಮಠಾಧೀಶರನ್ನು ಸಹ ಹೋರಾಟಕ್ಕೆ ಕರೆತರುವ ಮೂಲಕ ಮತ್ತಷ್ಟು ಬಲ ತುಂಬುವ ಪ್ರಯತ್ನ ಕೈಗೊಳ್ಳುವುದಾಗಿ ತಿಳಿಸಿದರು.


    ಗುತ್ತಿಗೆ ಕಾರ್ಮಿಕ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾಯಂ, ನಿವೃತ್ತ ಹಾಗು ಗುತ್ತಿಗೆ ಕಾರ್ಮಿಕರು, ಮಹಿಳೆಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಶ್ರೀಗಳು ಕಾರ್ಖಾನೆ ಮುಂಭಾಗದಲ್ಲಿರುವ ಶ್ರೀ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

Sunday, February 19, 2023

ಜೇಡಿಕಟ್ಟೆ ಶ್ರೀ ಮರುಳಸಿದ್ದೇಶ್ವರ ಗದ್ದಿಗೆಯಲ್ಲಿ ವಿಜೃಂಭಣೆಯಿಂದ ಮಹಾಶಿವರಾತ್ರಿ ಆಚರಣೆ

ಭದ್ರಾವತಿ ತಾಲೂಕಿನ ಜೇಡಿಕಟ್ಟೆ ಶ್ರೀ ಮರುಳಸಿದ್ದೇಶ್ವರ ಗದ್ದಿಗೆ ಮಠ ಹಾಗು ಶ್ರೀ ಶಕ್ತಿ ಮಹಾಗಣಪತಿ ದೇವಾಲಯದಲ್ಲಿ ಮಹಾಶಿವರಾತ್ರಿ ವಿಜೃಂಭಣೆಯಿಂದ ಜರುಗಿತು.
 ಜೇಡಿಕಟ್ಟೆ ಶ್ರೀ ಮರುಳಸಿದ್ದೇಶ್ವರ ಗದ್ದಿಗೆಯಲ್ಲಿ ವಿಜೃಂಭಣೆಯಿಂದ ಮಹಾಶಿವರಾತ್ರಿ ಆಚರಣೆ
ಭದ್ರಾವತಿ, ಫೆ. ೧೯ : ತಾಲೂಕಿನ ಜೇಡಿಕಟ್ಟೆ ಶ್ರೀ ಮರುಳಸಿದ್ದೇಶ್ವರ ಗದ್ದಿಗೆ ಮಠ ಹಾಗು ಶ್ರೀ ಶಕ್ತಿ ಮಹಾಗಣಪತಿ ದೇವಾಲಯದಲ್ಲಿ ಮಹಾಶಿವರಾತ್ರಿ ವಿಜೃಂಭಣೆಯಿಂದ ಜರುಗಿತು. 
ಮಠದಲ್ಲಿರುವ ಶ್ರೀ ಮರುಳಸಿದ್ದೇಶ್ವರ ಗದ್ದಿಗೆಗೆ ಹಾಗು ಶ್ರೀ ಶಕ್ತಿ ಮಹಾಗಣಪತಿ ಮತ್ತು ಶಿವನ ವಿಗ್ರಹಗಳಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಹೋಮ-ಹವನ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಶಿವಲಿಂಗಕ್ಕೆ ಕ್ಷೀರಾಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ವಿವಿಧ ಧಾರ್ಮಿಕ ಆಚರಣೆಗಳು ಜರುಗಿದವು. 

ಭದ್ರಾವತಿ ತಾಲೂಕಿನ ಜೇಡಿಕಟ್ಟೆ ಶ್ರೀ ಮರುಳಸಿದ್ದೇಶ್ವರ ಗದ್ದಿಗೆ ಮಠ ಹಾಗು ಶ್ರೀ ಶಕ್ತಿ ಮಹಾಗಣಪತಿ ದೇವಾಲಯದಲ್ಲಿ ಮಹಾಶಿವರಾತ್ರಿ ವಿಜೃಂಭಣೆಯಿಂದ ಜರುಗಿತು. ಭಾನುವಾರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು. 
    ಭಾನುವಾರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ದೇವಸ್ಥಾನದ ಮುಖ್ಯ ಅರ್ಚಕ ತಿಪ್ಪೇಸ್ವಾಮಿ(ರುದ್ರೇಶ್ ಶಾಸ್ತ್ರಿ), ಶ್ರೀ ಮರುಳಸಿದ್ದೇಶ್ವರ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ಕಾರ್ಯದರ್ಶಿ ವಾಗೀಶ್, ಶಿವಣ್ಣ(ಹೋಟೆಲ್), ಪ್ರಕಾಶ್, ಧನರಾಜ್, ಮೇಘನಾಥನ್, ಶಿವಕುಮಾರ್, ರಾಮಲಿಂಗಮ್, ಶಾರದಬಾಯಿ, ದೇವರಾಜ್, ಉಮೇಶ್ವರಪ್ಪ(ಮಾಸ್ಟರ್), ಪಾಪುರಾವ್, ಜಿಂಗಯ್ಯ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಮುಖಂಡರು, ಗಣ್ಯರು, ಜೇಡಿಕಟ್ಟೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು. 

ವಿಐಎಸ್‌ಎಲ್ ಉಳಿಸಲು ಪೇಜಾವರ ಶ್ರೀಗಳಿಗೆ ಕಾರ್ಮಿಕರ ನಿಯೋಗ ಮೊರೆ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಸುವ ಸಂಬಂಧ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಭಾನುವಾರ ೩೨ನೇ ದಿನ ಪೂರೈಸಿತು. ಈ ನಡುವೆ ಕಾರ್ಮಿಕರ ನಿಯೋಗ ಪ್ರಧಾನಿ ಮಂತ್ರಿಗಳ ಮನವೊಲಿಸಲು ಉಡುಪಿ ಪೇಜಾವರ ಶ್ರೀಗಳ ಮೊರೆ ಹೋಗಿದ್ದಾರೆ.
    ಭದ್ರಾವತಿ, ಫೆ. ೧೯ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಸುವ ಸಂಬಂಧ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಭಾನುವಾರ ೩೨ನೇ ದಿನ ಪೂರೈಸಿತು. ಈ ನಡುವೆ ಕಾರ್ಮಿಕರ ನಿಯೋಗ ಪ್ರಧಾನಿ ಮಂತ್ರಿಗಳ ಮನವೊಲಿಸಲು ಉಡುಪಿ ಪೇಜಾವರ ಶ್ರೀಗಳ ಮೊರೆ ಹೋಗಿದ್ದಾರೆ.
    ಈಗಾಗಲೇ ಶ್ರೀ ಕ್ಷೇತ್ರ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲನಂದನಾಥ ಸ್ವಾಮೀಜಿಯವರಿಗೂ, ಚಿಕ್ಕಮಗಳೂರು ಗೌರಿಗದ್ದೆ ದತ್ತಾಶ್ರಮದ ಶ್ರೀ ವಿನಯ ಗುರೂಜೀಯವರಿಗೂ ಮನವಿ ಸಲ್ಲಿಸಲಾಗಿದೆ.
    ಭಾನುವಾರ ಉಡುಪಿ ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಗಳು ಪ್ರತಿಕ್ರಿಯಿಸಿ ಸೋಮವಾರ ಉಡುಪಿಗೆ ಆಗಮಿಸುತ್ತಿರುವ ಭಾರತೀಯ ಜನತಾಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾ(ಜೆ.ಪಿ ನಡ್ಡಾ)ರವರೊಂದಿಗೆ ಚರ್ಚಿಸುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
    ಕಾರ್ಮಿಕರ ನಿಯೋಗದಲ್ಲಿ ಪ್ರಮುಖರಾದ ನರಸಿಂಹಚಾರ್, ಅಮೃತ್, ಚಂದ್ರಕಾಂತ್, ರಾಕೇಶ್, ಅರುಣ್, ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಗುತ್ತಿಗೆ ಕಾರ್ಮಿಕರ ೩೩ನೇ ದಿನದ ಹೋರಾಟಕ್ಕೆ ಉಡುಪಿ ಪೇಜಾವರ ಶ್ರೀಗಳ ಬೆಂಬಲ :
ಉಡುಪಿ ಪೇಜಾವರ ಶ್ರೀಗಳು ಸೋಮವಾರ ನಗರಕ್ಕೆ ಆಗಮಿಸುತ್ತಿದ್ದು, ಮಧ್ಯಾಹ್ನ ೩ ಗಂಟೆಗೆ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಆಗಮಿಸಲಿದ್ದಾರೆ. ಗುತ್ತಿಗೆ ಕಾರ್ಮಿಕರಿಗೆ ಬೆಂಬಲ ಸೂಚಿಸಿ ಮಾತನಾಡಲಿದ್ದಾರೆ.