Saturday, February 25, 2023

ಫೆ.೨೬ರಂದು ಶೃಂಗೇರಿ ಶಂಕರ ಮಠದಲ್ಲಿ ಶ್ರೀ ಸರಸ್ವತಿ ಪೂಜಾ

    ಭದ್ರಾವತಿ, ಫೆ. ೨೫ : ಸಿದ್ದಾರೂಢನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಫೆ.೨೬ರಂದು ಬೆಳಿಗ್ಗೆ ೧೦ ಗಂಟೆಗೆ ಶ್ರೀ ಸರಸ್ವತಿ ಪೂಜಾ ಮತ್ತು ಹೋಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಪ್ರತಿ ವರ್ಷದಂತೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳಿಂದ ಸಹಸ್ರನಾಮ ಅರ್ಚನೆ ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳು ಸೇರಿದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಧರ್ಮಾಧಿಕಾರಿ ಕೆ.ಆರ್ ಸುಬ್ಬರಾವ್ ಮೊ: ೯೯೪೫೮೪೬೯೦೫ ಅಥವಾ ೯೯೦೦೨೪೯೩೦೨ ಸಂಖ್ಯೆಗೆ ಕರೆ ಮಾಡಬಹುದಾಗಿದೆ. 
--

ಫೆ.೨೭ರಂದು ಗುತ್ತಿಗೆ ಕಾರ್ಮಿಕರ ಸಂಘದಿಂದ ಬೈಕ್ ರ್‍ಯಾಲಿ : ಪ್ರಧಾನಿಗೆ ಮನವಿ


ಭದ್ರಾವತಿ  ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಫೆ.೨೭ರಂದು ಮನವಿ ಸಲ್ಲಿಸುವುದಾಗಿ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಎಚ್.ಜಿ ಸುರೇಶ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 
ಭದ್ರಾವತಿ, ಫೆ. ೨೫ : ನಗರದ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಫೆ.೨೭ರಂದು ಮನವಿ ಸಲ್ಲಿಸುವುದಾಗಿ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಎಚ್.ಜಿ ಸುರೇಶ್ ಹೇಳಿದರು.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೋಗಾನೆಯಲ್ಲಿ ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯುವುದು, ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಈಗಾಗಲೇ ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಮೋದಿಯವರಿಗೆ ಖುದ್ದಾಗಿ ಮನವಿ ಸಲ್ಲಿಸಲು ಅವಕಾಶ ನೀಡುವಂತೆ ಕೋರಲಾಗಿದೆ. ಆದರೆ ಜಿಲ್ಲಾಧಿಕಾರಿಗಳು ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದು, ಅಲ್ಲಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು. 
ಫೆ.೨೭ರಂದು ಬೆಳಿಗ್ಗೆ ೭ ಗಂಟೆಗೆ ಕಾರ್ಖಾನೆ ಮುಂಭಾಗದಿಂದ ಬೈಕ್ ರ್‍ಯಾಲಿ ನಡೆಸಲಿದ್ದು, ನಂತರ ವಿಮಾನ ನಿಲ್ದಾಣ ತಲುಪಿ ಮನವಿ ಸಲ್ಲಿಸಲಾಗುವುದು. ಈ ಹಿನ್ನಲೆಯಲ್ಲಿ ಕ್ಷೇತ್ರದ ವಿವಿಧ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು ಸೇರಿದಂತೆ ಸಮಸ್ತ ನಾಗರೀಕರು ಪಕ್ಷಾತೀತವಾಗಿ ಬೆಂಬಲಿಸಿ ಪಾಲ್ಗೊಳ್ಳುವಂತೆ ಕೋರಿದರು.
ಫೆ.೨೪ರಂದು ಕರೆ ನೀಡಲಾಗಿದ್ದ ಭದ್ರಾವತಿ ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು, ಈ ಹಿನ್ನಲೆಯಲ್ಲಿ ಗುತ್ತಿಗೆ ಕಾರ್ಮಿಕರ ಸಂಘಟನೆಗಳು ಕೃತಜ್ಞತೆ ಸಲ್ಲಿಸಲಿವೆ ಎಂದರು.  
ಉಪಾಧ್ಯಕ್ಷ ಎಸ್. ವಿನೋದ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಪಿ. ರಾಕೇಶ್, ಕಾರ್ಯದರ್ಶಿ ಅಂತೋಣಿದಾಸ್, ಖಜಾಂಚಿ ಜಿ. ಆನಂದ್, ಆರ್. ಅರುಣ್‌ಕುಮಾರ್, ಜೆ. ಕಿರಣ್, ಎಐಟಿಯುಸಿ ಅಧ್ಯಕ್ಷ ಕುಮಾರಸ್ವಾಮಿ, ಉಪಾಧ್ಯಕ್ಷ ಧನಂಜಯ, ಕಾರ್ಯದರ್ಶಿ ಐಸಾಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ವಿಐಎಸ್‌ಎಲ್ ಉಳಿಸಲು ಎಲ್ಲಾ ರಾಜಕೀಯ ಪಕ್ಷಗಳು ಇಚ್ಛಾಶಕ್ತಿ ಪ್ರದರ್ಶಿಸಲಿ : ಎಚ್. ವಿಶ್ವನಾಥ್

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಶನಿವಾರ ಬೆಂಬಲ ಸೂಚಿಸಿ ಮಾತನಾಡಿದರು.
       
    ಭದ್ರಾವತಿ, ಫೆ. ೨೫ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ಆಡಳಿತ ಮತ್ತು ವಿರೋಧ ಪಕ್ಷಗಳು ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದು ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.
    ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಅವರು ಶನಿವಾರ ಬೆಂಬಲ ಸೂಚಿಸಿ ಮಾತನಾಡಿದರು.
    ಮೈಸೂರು ಮಹಾರಾಜರು ದುಡಿಯುವ ಕೈಗಳಿಗೆ ಉದ್ಯೋಗ ನೀಡಿ ಲಕ್ಷಾಂತರ ಜನರ ಬದುಕಿಗೆ ಆಧಾರವಾಗುವಂತೆ ಆ ಮೂಲಕ ನಾಡಿನ, ದೇಶದ ಅಭಿವೃದ್ಧಿಗಾಗಿ ನಿರ್ಮಿಸಿರುವ ಕೈಗಾರಿಕೆ ಇದಾಗಿದೆ. ಈ ಕೈಗಾರಿಕೆ ಉಳಿಯಬೇಕಾಗಿದ್ದು, ಇದು ನಾಡಿನ ಆಸ್ತಿ, ನಮ್ಮೆಲ್ಲರ ಅಸ್ಮಿತೆಯ ಸಂಕೇತವಾಗಿದೆ. ಪ್ರಸ್ತುತ ಈ ಕಾರ್ಖಾನೆಯ ಶತಮಾನೋತ್ಸವ ಸಂಭ್ರಮದಲ್ಲಿ ಶೋಕೋತ್ಸವ ಮಾಡುವಂತಾಗಿರುವುದು ವಿಷಾದನೀಯ ಬೆಳವಣಿಗೆಯಾಗಿದೆ ಎಂದರು.
    ಜನರ ಬದುಕು ಬೇರೆ, ರಾಜಕಾರಣ ಬೇರೆಯಾಗಿದೆ. ರಾಜಕಾರಣಿಗಳು ಮೊದಲು ಜನರಿಗೆ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ. ಈ ಕಾರ್ಖಾನೆ ವಿಚಾರ ನಮಗೆ ಸಂಬಂಧಿಸಿದ್ದಲ್ಲ ಎಂಬ ಧೋರಣೆ ಸರಿಯಲ್ಲ. ವಿರೋಧ ಪಕ್ಷದವರು ನಮಗೆ ಅಧಿಕಾರ ನೀಡಿ ಎನ್ನುವ ಬದಲು ನೀಡಿರುವ ಅಧಿಕಾರದ ಮಹತ್ವ ಅರಿತುಕೊಂಡು ಆಡಳಿತ ಪಕ್ಷದೊಂದಿಗೆ ಈ ಕಾರ್ಖಾನೆ ಉಳಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
    ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ ಕುಮಾರಸ್ವಾಮಿ ಅವರಿಗೂ ಅಧಿಕಾರವಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೂ ಅಧಿಕಾರವಿದೆ. ಎಲ್ಲರೂ ಸೇರಿ ಈ ಕಾರ್ಖಾನೆ ಉಳಿವಿಗೆ ಪ್ರಯತ್ನಿಸಬೇಕು. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರರವರು ಹೆಚ್ಚಿನ ವಿಶೇಷ ಕಾಳಜಿವಹಿಸಿ ಕಾರ್ಖಾನೆ ಇಂದಿನ ಪರಿಸ್ಥಿತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಗಮನಕ್ಕೆ ತರಬೇಕೆಂದು ಮನವಿ ಮಾಡಿದರು.
    ರಾಜ್ಯದಲ್ಲಿರುವ ಬಿಜೆಪಿ ಡಬ್ಬಲ್ ಇಂಜಿನ್ ಸರ್ಕಾರ ಬಜೆಟ್‌ನಲ್ಲಿ ಅನ್ಯಗತ್ಯವಾಗಿ ಸಾವಿರಾರು ಕೋಟಿ ಬಂಡವಾಳ ವ್ಯಯಮಾಡಲು ಮುಂದಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಕಾರ್ಮಿಕರ ಬದುಕಿಗಾಗಿ, ನಾಡಿನ ಅಭಿವೃದ್ಧಿಗಾಗಿ ಕನಿಷ್ಠ ೫೦೦ ಕೋ. ರು ಬಂಡವಾಳ ಹೂಡಲು ಮುಂದೆ ಬರುತ್ತಿಲ್ಲ. ಖಾಸಗಿ ಕಂಪನಿಗಳು, ಬಂಡವಾಳ ಶಾಹಿಗಳ ಮೇಲೆ ತೋರಿಸುತ್ತಿರುವ ಕಾಳಜಿ ಈ ಕಾರ್ಖಾನೆ ಮೇಲೆ ಏಕೆ ತೋರಿಸುತ್ತಿಲ್ಲ ಎಂದು ಪ್ರಶ್ನಿಸಿದರು.
    ಫೆ.೨೭ರಂದು ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಮಿಕರ ಬವಣೆ ಕೇಳಬೇಕು. ಈ ನಿಟ್ಟಿನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಒಗ್ಗಟ್ಟಾಗಿ ಗಮನ ಸೆಳೆಯುವಂತಾಗಬೇಕು. ನಾನು ಸಹ ಈ ಕಾರ್ಖಾನೆ ಉಳಿವಿಗಾಗಿ ಪ್ರಧಾನಿ ಮೋದಿಯವರಿಗೆ ಮನವಿ ಮಾಡುತ್ತೇನೆ ಎಂದರು.
    ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾಯಂ ಹಾಗು ನಿವೃತ್ತ ಕಾರ್ಮಿಕ ಮುಖಂಡರು, ಗುತ್ತಿಗೆ ಕಾರ್ಮಿಕರು ಉಪಸ್ಥಿತರಿದ್ದರು. ಎಚ್. ವಿಶ್ವನಾಥ್ ಅವರಿಗೆ ಕಾರ್ಮಿಕ ಸಂಘಟನೆಗಳಿಂದ ಮನವಿ ಸಲ್ಲಿಸಲಾಯಿತು.

Friday, February 24, 2023

ಭದ್ರಾವತಿ ಬಂದ್ ಬೆಂಬಲಿಸಿ ಹೋರಾಟದಲ್ಲಿ ಪಾಲ್ಗೊಂಡ ಶಾರದ ಅಪ್ಪಾಜಿ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಗುತ್ತಿಗೆ ಕಾರ್ಮಿಕರು ಶುಕ್ರವಾರ ಹಮ್ಮಿಕೊಂಡಿದ್ದ ಭದ್ರಾವತಿ ಬಂದ್ ಹೋರಾಟಕ್ಕೆ ಜೆಡಿಎಸ್ ಪಕ್ಷ ಸಂಪೂರ್ಣ ಬೆಂಬಲ ಸೂಚಿಸುವ ಜೊತೆಗೆ ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಪುನಶ್ಚೇತನಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
    ಭದ್ರಾವತಿ, ಫೆ. ೨೪: ವಿಐಎಸ್‌ಎಲ್ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಗುತ್ತಿಗೆ ಕಾರ್ಮಿಕರು ಶುಕ್ರವಾರ ಹಮ್ಮಿಕೊಂಡಿದ್ದ ಭದ್ರಾವತಿ ಬಂದ್ ಹೋರಾಟಕ್ಕೆ ಜೆಡಿಎಸ್ ಪಕ್ಷ ಸಂಪೂರ್ಣ ಬೆಂಬಲ ಸೂಚಿಸುವ ಜೊತೆಗೆ ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಪುನಶ್ಚೇತನಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
    ಕಾರ್ಖಾನೆ ಮುಂಭಾಗದಿಂದ ತಾಲೂಕು ಕಛೇರಿವರೆಗೂ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಶಾರದ ಅಪ್ಪಾಜಿ ಸಾಗುವ ಮೂಲಕ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಿದರು.
ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಮೂರ್ತಿ, ತಾಲೂಕು ಯುವ ಘಟಕದ ಅಧ್ಯಕ್ಷ ಎಂ.ಜೆ ಅಜಿತ್, ನಗರಸಭೆ ಸದಸ್ಯರಾದ ಬಸವರಾಜ್ ಬಿ ಆನೆಕೊಪ್ಪ, ಕೋಟೇಶ್ವರರಾವ್, ಉದಯಕುಮಾರ್, ರೂಪಾವತಿ ಗುಣಿಶೇಖರ್, ನಾಗರತ್ನ ಅನಿಲ್ ಕುಮಾರ್, ಸವಿತಾ ಉಮೇಶ್, ಮಂಜುಳಮ್ಮ ಸುಬ್ಬಣ್ಣ, ಆರ್. ಮೋಹನ್ ಕುಮಾರ್, ಭಾಗ್ಯಮ್ಮ, ತಾಲೂಕು ಕಾರ್ಯಾಧ್ಯಕ್ಷ ಡಿ.ಟಿ ಶ್ರೀಧರ್, ಪರಿಶಿಷ್ಟ ಜಾತಿ ವಿಭಾಗದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಉಜ್ಜನಿಪುರ ಮತ್ತು ವಿವೇಕ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.  

ಭದ್ರಾವತಿ ಬಂದ್ ಬೆಂಬಲಿಸಿ ನಗರಸಭೆ ಉಪಾಧ್ಯಕ್ಷರ ಚುನಾವಣೆ ಬಹಿಷ್ಕಾರ

ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಭದ್ರಾವತಿ ಬಂದ್ ಹಿನ್ನಲೆಯಲ್ಲಿ ನಗರಸಭೆ ಸದಸ್ಯರು ಉಪಾಧ್ಯಕ್ಷರ ಚುನಾವಣೆಯನ್ನು ಬಹಿಷ್ಕರಿಸಿ ಹೋರಾಟ ಬೆಂಬಲಿಸಿದರು. 
    ಭದ್ರಾವತಿ, ಫೆ. ೨೪ : ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಭದ್ರಾವತಿ ಬಂದ್ ಹಿನ್ನಲೆಯಲ್ಲಿ ನಗರಸಭೆ ಸದಸ್ಯರು ಉಪಾಧ್ಯಕ್ಷರ ಚುನಾವಣೆಯನ್ನು ಬಹಿಷ್ಕರಿಸಿರುವ ಘಟನೆ ನಡೆದಿದೆ.
    ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಅಧಿಕಾರವನ್ನು ಆಂತರಿಕವಾಗಿ ಹಂಚಿಕೆ ಮಾಡಿಕೊಂಡಿದ್ದು, ಒಪ್ಪಂದದ ಪ್ರಕಾರ ಉಪಾಧ್ಯಕ್ಷ ಸ್ಥಾನವನ್ನು ವಾರ್ಡ್ ನಂ.೨೬ರ ಸದಸ್ಯೆ ಸರ್ವಮಂಗಳ ಭೈರಪ್ಪರಿಗೆ ಬಿಟ್ಟುಕೊಡಬೇಕಾಗಿತ್ತು. ಈ ಹಿನ್ನಲೆಯಲ್ಲಿ ಹಾಲಿ ಉಪಾಧ್ಯಕ್ಷ ಚನ್ನಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅದರಂತೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು.
    ಚುನಾವಣಾಧಿಕಾರಿಯಾಗಿರುವ ಶಿವಮೊಗ್ಗ ಉಪವಿಭಾಗಾಧಿಕಾರಿಗಳು ಬೆಳಿಗ್ಗೆ ಚುನಾವಣೆ ಪ್ರಕ್ರಿಯೆ ಆರಂಭಿಸಿದ್ದರು. ಸರ್ವಮಂಗಳ ಭೈರಪ್ಪರವರು ನಾಮಪತ್ರ ಸಲ್ಲಿಸಿದ್ದರು. ಆದರೆ ಗುತ್ತಿಗೆ ಕಾರ್ಮಿಕರ ಹೋರಾಟದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಮುಖಂಡರು ಚುನಾವಣೆ ಬಹಿಷ್ಕರಿಸುವುದಾಗಿ ಭರವಸೆ ನೀಡಿದ್ದರು. ಇದಕ್ಕೆ ಜೆಡಿಎಸ್ ಪಕ್ಷ ಸಹ ಬೆಂಬಲ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಸದಸ್ಯರೆಲ್ಲರೂ ಚುನಾವಣೆ ಬಹಿಷ್ಕರಿಸಿ ಹೊರಬಂದು ಹೋರಾಟವನ್ನು ಬೆಂಬಲಿಸಿದರು. ಕೊನೆಗೆ ಚುನಾವಣಾಧಿಕಾರಿಗಳು ಚುನಾವಣೆ ಮುಂದೂಡುವುದಾಗಿ ಘೋಷಿಸಿದರು.

ಯುವ ಕಾಂಗ್ರೆಸ್ ರಾಜ್ಯ ವಕ್ತಾರ ವರುಣ್‌ಗೌಡರಿಗೆ ಜೀವಬೆದರಿಕೆ ; ದೂರು ದಾಖಲು

ವರುಣ್‌ಗೌಡ
    ಭದ್ರಾವತಿ, ಫೆ. ೨೪ : ಯುವ ಕಾಂಗ್ರೆಸ್ ರಾಜ್ಯ ವಕ್ತಾರ, ಕಾಗದನಗರ ನಿವಾಸಿ ವರುಣ್‌ಗೌಡರಿಗೆ ವ್ಯಕ್ತಿಯೋರ್ವ ಮೊಬೈಲ್‌ಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
    ಈ ಸಂಬಂಧ ವರುಣ್‌ಗೌಡ ಪೇಪರ್‌ಟೌನ್ ಪೊಲೀಸ್ ಠಾಣೆಗೆ ಶುಕ್ರವಾರ ಸಂಜೆ ದೂರು ನೀಡಿದ್ದಾರೆ. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಬಿ.ವಿ ಶ್ರೀನಿವಾಸ್ ಹಾಗು ಶಾಸಕ ಬಿ.ಕೆ ಸಂಗಮೇಶ್ವರ್‌ರವರು ನನ್ನನ್ನು ರಾಜ್ಯ ವಕ್ತಾರಾಗಿ ನನ್ನನ್ನು ಆಯ್ಕೆ ಮಾಡಿರುತ್ತಾರೆ. ಕಳೆದ ಸುಮಾರು ಒಂದು ತಿಂಗಳಿನಿಂದ ಅಧಿಕಾರ ಪಡೆದು ಪಕ್ಷ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಫೆ.೨೩ರ ಗುರುವಾರ ರಾತ್ರಿ ಸುಮಾರು ೧೦.೩೦ರ ಸಮಯದಲ್ಲಿ ಗಗನ್ ಎಂಬ ವ್ಯಕ್ತಿ ಜೆಡಿಎಸ್ ಪಕ್ಷ ಎಂದು ಹೇಳಿಕೊಂಡು ಕರೆ ಮಾಡಿದ್ದು, ಜೀವ ಬೆದರಿಕೆ ಹಾಕಿರುತ್ತಾರೆಂದು ದೂರಿದ್ದಾರೆ.
    ಈ ಹಿನ್ನಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ನಾನು ಹೊರಗಡೆ ತಿರುಗಾಡುವಾಗ ದ್ವಿಚಕ್ರ ವಾಹನದಲ್ಲಿ ಅಡ್ಡಗಟ್ಟಿ ಹಿಂಬಾಲಿಸಿ ನಿಂದಿಸುತ್ತಾರೆ. ನನಗೆ ರಕ್ಷಣೆ ಅವಶ್ಯಕತೆ ಇದ್ದು, ಈ ಹಿನ್ನಲೆಯಲ್ಲಿ ರಕ್ಷಣೆ ನೀಡುವಂತೆ ಕೋರಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕೈಗೊಂಡಿದ್ದಾರೆ.

ಓ.ಸಿ-ಮಟ್ಕಾ ಜೂಜಾಟ ಅಡ್ಡೆ ಮೇಲೆ ದಾಳಿ : ಓರ್ವನ ವಿರುದ್ಧ ಪ್ರಕರಣ ದಾಖಲು



    ಭದ್ರಾವತಿ, ಫೆ. ೨೪ : ಓ.ಸಿ-ಮಟ್ಕಾ ಜೂಜಾಟ ಅಡ್ಡೆಯೊಂದರ ಮೇಲೆ ದಾಳಿ ನಡೆಸಿ ಓರ್ವನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.
    ಪೇಪರ್‌ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ೨ನೇ ಡಿವಿಜನ್ ಅಂಗನವಾಡಿ ಎದುರಿನ ರಸ್ತೆಯಲ್ಲಿ ಬೊಮ್ಮನಕಟ್ಟೆ ನಿವಾಸಿ ಸಾಧಿಕ್ ಎಂಬಾತ ಗುರುವಾರ ಸಂಜೆ ಜನರನ್ನು ಗುಂಪು ಸೇರಿಸಿಕೊಂಡು ಓ.ಸಿ-ಮಟ್ಕಾ ಜೂಜಾಟದಲ್ಲಿ ತೊಡಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.