ತುಂಗಭದ್ರಾ ಜಲಾಶಯಕ್ಕೆ ಭದ್ರಾ ಜಲಾಶಯದಿಂದ ೭ ಟಿಎಂಸಿ ನೀರು ಹರಿಸುವ ಸರ್ಕಾರದ ಆದೇಶ ಕುರಿತು ಭದ್ರಾವತಿಯಲ್ಲಿ ತಾಲೂಕು ರೈತ ಸಂಘದ ಸಭೆಯಲ್ಲಿ ಚರ್ಚಿಸಲಾಯಿತು.
ಭದ್ರಾವತಿ, ಫೆ. ೨೭ : ತುಂಗಭದ್ರಾ ಜಲಾಶಯಕ್ಕೆ ಭದ್ರಾ ಜಲಾಶಯದಿಂದ ೭ ಟಿಎಂಸಿ ನೀರು ಹರಿಸುವ ಸರ್ಕಾರದ ಆದೇಶಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.
ತಾಲೂಕು ರೈತ ಸಂಘದ ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಸಾಮೂಹಿಕ ನಾಯಕತ್ವ ) ವರಿಷ್ಠರಾದ ಕೆ ಟಿ ಗಂಗಾಧರ್, ಭದ್ರಾ ಜಲಾಶಯದ ಅಚ್ಚುಕಟ್ಟು ೧ ಲಕ್ಷ ಹೆಕ್ಟರ್ ಪ್ರದೇಶದಲ್ಲಿ ದೀರ್ಘಾವಧಿ ಹಾಗು ಅಲ್ಪಾವಧಿ ಬೇಸಿಗೆ ಬೆಳೆ ಹಂಗಾಮಿಗೆ ನೀರಾವರಿ ಸಲಹಾ ಸಮಿತಿ ನಿರ್ಣಯ ಆದೇಶ ಹೊರಡಿಸಿ ಎಡದಂಡೆ, ಬಲದಂಡೆ, ಮಲೆಬೆನ್ನೂರು, ಗೊಂದಿ ಜಲಾಶಯಕ್ಕೆ ೧೩೬ ದಿನಗಳಿಗೆ ನೀರಿನ ಪ್ರಮಾಣ ನಿರ್ಧರಿಸಿ ನೀರನ್ನು ಬೆಳೆಗಳಿಗೆ ಈಗಾಗಲೇ ೪೭ ದಿನಗಳ ನೀರನ್ನು ಒದಗಿಸಲಾಗಿದೆ. ಇನ್ನು ೮೯ ದಿನಗಳ ನೀರನ್ನು ರೈತರ ಬೆಳೆಗೆ ಒಟ್ಟು ೩೬.೭೧ ಟಿಎಂಸಿ ನೀರನ್ನು ಹರಿಸಬೇಕಾಗಿದೆ. ಬೃಹತ್ ನಗರಗಳಿಗೆ ಕುಡಿಯುವ ನೀರು, ಕೈಗಾರಿಕೆಗಳಿಗೆ ಮಾತ್ರವಲ್ಲದೆ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ೭.೦೪೮ ಟಿಎಂಸಿ ನೀರನ್ನು ಜೋಪಾನ ಮಾಡಬೇಕಾಗಿದೆ. ಪ್ರಸ್ತುತ ನೀರಿನ ಪ್ರಮಾಣ ಗಮನಿಸಿದರೆ ಉಪಯೋಗಕ್ಕೆ ಅಗತ್ಯವಿರುವ ನೀರಿನ ಪ್ರಮಾಣ ೩೭.೫೮೬ ಟಿಎಂಸಿ ಇದ್ದು, ಆದರೆ ಜಲಾಶಯದಲ್ಲಿ ಬಳಸಬಹುದಾದ ನೀರಿನ ಪ್ರಮಾಣ ಲಭ್ಯತೆ ೩೫.೩೬೮ ಟಿಎಂಸಿ ಆಗಿದೆ. ೨.೨೧೮ ಟಿಎಂಸಿ ಪ್ರಮಾಣದ ನೀರಿನ ಕೊರತೆ ಎದುರಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ಭದ್ರಾ ಜಲಾಶಯದಿಂದ ೭ ಟಿಎಂಸಿ ನೀರನ್ನು ತುಂಗಭದ್ರಾ ಜಲಾಶಯಕ್ಕೆ ಯಾವುದೇ ಕಾರಣಕ್ಕೂ ಹರಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನಲೆಯಲ್ಲಿ ಸರ್ಕಾರ ೭ ಟಿಎಂಸಿ ನೀರು ಹರಿಸುವ ಆದೇಶ ಹಿಂಪಡೆಯಬೇಕೆಂದರು.
ಜಿಲ್ಲಾ ರೈತ ಸಂಘದ ಕಾರ್ಯಧ್ಯಕ್ಷ ಯಶವಂತರಾವ್ ಘೋರ್ಪಡೆ ಮಾತನಾಡಿ, ಭದ್ರಾ ಜಲಾಶಯದಿಂದ ತುಂಗಭದ್ರಾ ಜಲಾಶಯಕ್ಕೆ ಯಾವುದೇ ಕಾರಣಕ್ಕೂ ೭ ಟಿಎಂಸಿ ನೀರು ಹರಿಸಬಾರದು. ಸರ್ಕಾರದ ಪ್ರಸ್ತುತ ಹೊರಡಿಸಿರುವ ಆದೇಶದ ವಿರುದ್ಧ ಚಳುವಳಿ ರೂಪಿಸಬೇಕೆಂದರು.
ಶಿವಮೊಗ್ಗ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಪುಟ್ಟಪ್ಪ ಮಾತನಾಡಿ, ನೀರಾವರಿ ಸಲಹಾ ಸಮಿತಿ ನಿರ್ಣಯದಂತೆ ನೀರು ಪಡೆದುಕೊಳ್ಳುವುದು ನಮ್ಮ ಹಕ್ಕು. ಮೊದಲು ಅಚ್ಚುಕಟ್ಟುದಾರರ ಬೆಳೆಗಳನ್ನು ಸಂರಕ್ಷಿಸುವುದು ಸರ್ಕಾರದ ಕರ್ತವ್ಯ ಹಾಗೂ ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಈ ಹಿನ್ನಲೆಯಲ್ಲಿ ಯಾವುದೇ ಕಾರಣಕ್ಕೂ ಜಲಾಶಯದಿಂದ ನೀರು ಹರಿಸಬಾರದು ಎಂದರು.
ತಾಲೂಕು ರೈತ ಸಂಘದ ಅಧ್ಯಕ್ಷ ಹಿರಣ್ಣಯ್ಯ, ಅಗಸನಹಳ್ಳಿ ಹಿರಿಯ ರೈತ ಮುಖಂಡರಾದ ಯಲ್ಲಪ್ಪ, ಮೂರ್ತಣ್ಣ ಸೇರಿದಂತೆ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.