![](https://blogger.googleusercontent.com/img/a/AVvXsEj7G_B3g1-3dmFer5J0rgIS5GQ7Y_EhxA1mIGRuYzUDRf8v6vwZCLp_U7dbNriurCiXPIfAWqvb2RyjDD-ZaL_MRT4AhuJ2QNUmDkFfOkIHAmrZKGHyziHh1hVGHvZeVxihwZ3_JtC7ccU5d-21lFadeWetDTmNrON1aSVIPXFCwu7uQHv-P7En5LUyGg=w400-h200-rw)
ಭದ್ರಾವತಿ ಹಳೇನಗರದ ಪತ್ರಿಕಾ ಭವನ ಟ್ರಸ್ಟ್ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನವೀಕೃತ ಪತ್ರಿಕಾ ಭವನ ಕಟ್ಟಡ ಶನಿವಾರ ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.
ಭದ್ರಾವತಿ, ಮಾ. ೧೧ : ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಪೈಪೋಟಿ ಎದುರಾಗಿದ್ದು, ಇಂತಹ ಸಂದರ್ಭದಲ್ಲಿ ಪತ್ರಕರ್ತರು ಮತ್ತಷ್ಟು ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಅವರು ಶನಿವಾರ ಹಳೇನಗರದ ಪತ್ರಿಕಾ ಭವನ ಟ್ರಸ್ಟ್ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನವೀಕೃತ ಪತ್ರಿಕಾ ಭವನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಪತ್ರಿಕಾ ಕ್ಷೇತ್ರ ಸಹ ಪೈಪೋಟಿ ಎದುರಿಸುತ್ತಿದೆ. ಪತ್ರಕರ್ತರು ಮತ್ತಷ್ಟು ಕ್ರಿಯಾಶೀಲರಾಗಬೇಕು ಹೊರತು ಪ್ರಚಾರದ ದೃಷ್ಟಿಯಿಂದ ವೈಯಕ್ತಿಕ ದ್ವೇಷದ ಸುದ್ದಿ ಬಿಂಬಿಸುವುದು ಸರಿಯಲ್ಲ ಎಂದರು.
ಜನರ ತೆರಿಗೆ ಹಣದಿಂದ ಸಮುದಾಯ ಭವನಗಳಿಗೆ ಅನುದಾನ ನೀಡಿದ್ದೇನೆ. ಕೆಲವು ಭಾಗಗಳಲ್ಲಿ ನಿರ್ಮಾಣಗೊಂಡಿರುವ ಭವನಗಳು ಧೂಳು ಹಿಡಿದಿವೆ. ಇವುಗಳ ನಿರ್ವಹಣೆಗೆ ಯಾರು ಇಲ್ಲದಂತಾಗಿದೆ. ಸಮುದಾಯ ಭವನಗಳು ಸದ್ಬಳಕೆಯಾಗಬೇಕೆಂದರು.
ನಗರದಲ್ಲಿ ಈಗಾಗಲೇ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಆರ್‌ಎಎಫ್ ಕಾರ್ಯಾರಂಭಗೊಂಡಿದೆ. ಸೈನಿಕರ ಶಾಲೆ ನಿರ್ಮಾಣಕ್ಕೆ ಭೂಮಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಸಾಕಷ್ಟು ಅಭಿವೃದ್ದಿ ಕೆಲಸಗಳು ನಡೆದಿವೆ. ಸುಂದರ ಹಾಗು ಮಾದರಿ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಎಂಪಿಎಂ ಮತ್ತು ವಿಐಎಸ್‌ಎಲ್ ಕಾರ್ಖಾನೆಗಳ ಉಳಿಸುವ ವಿಚಾರದಲ್ಲಿ ನನ್ನ ಕರ್ತವ್ಯ ಮರೆತಿಲ್ಲ. ಕೈಚೆಲ್ಲಿಯೂ ಇಲ್ಲ. ಮಾ. ೩೦ರಂದು ವಿಐಎಸ್‌ಎಲ್ ಸ್ಥಗಿತ ವಿಚಾರ ಗೊತ್ತಾಗಿದೆ. ಹೇಗಾದರೂ ಮಾಡಿ ಉಳಿಸಿಕೊಳ್ಳಲು ಸೋಮವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗುತ್ತಿದ್ದೇನೆ. ಜನರಿಗೆ ನ್ಯಾಯ ಸಿಗುವ ಕೆಲಸದಲ್ಲಿ ನಾವು ಶಾಸಕರು ಮಾಡುತ್ತಿದ್ದೇವೆ ಎಂದರು.
ಶಾಸಕ ಬಿ.ಕೆ ಸಂಗಮೇಶ್ವರ್ ಭವನದ ಪದಾಧಿಕಾರಿಗಳ ನಾಮಫಲಕ ಅನಾವರಣ ಮಾಡಿ ಮಾತನಾಡಿ, ಪತ್ರಕರ್ತರು ಸತ್ಯ ಬರೆದು ಘನತೆ ಮತ್ತು ಮೌಲ್ಯ ಹೆಚ್ಚಿಸಿಕೊಳ್ಳಬೇಕು. ಸಾರ್ವಜನಿಕರ ಕುಂದು ಕೊರತೆಗಳಿಗೆ ಬೆಳಕು ಚೆಲ್ಲಬೇಕೆಂದರು.
ಸಂಘದ ಮಾಜಿ ಅಧ್ಯಕ್ಷ ಎನ್. ಬಾಬು ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಿಕಾ ಭವನಕ್ಕಾಗಿ ಸಾಕಷ್ಟು ಶ್ರಮಿಸಲಾಯಿತು. ಎಲ್ಲರ ಸಹಕಾರದಿಂದ ಬೃಹತ್ ಕಟ್ಟಡ ನಿರ್ಮಾಣಗೊಂಡಿದೆ. ರಾಜ್ಯದಲ್ಲಿಯೇ ಮೊದಲ ಪತ್ರಿಕಾಭವನ ನಮ್ಮದು ಎಂಬ ಹೆಗ್ಗಳಿಕೆ ಇದೆ. ಅಲ್ಲದೆ ನಾವು ರೂಪಿಸಿದ ಹಲವಾರು ಕಾರ್ಯಕ್ರಮಗಳು ಇದೀಗ ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಧರ್ಮ, ಜಾತಿ, ಸಮುದಾಯ ಮೀರಿದ ಭವನ ಇದಾಗಿದೆ. ಈ ಭವನ ನಿರ್ಮಾಣಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪತ್ರಿಕಾಭವನ ಟ್ರಸ್ಟ್ ಟ್ರಸ್ಟಿಗಳಾದ ಗಣೇಶ್‌ರಾವ್ ಸಿಂಧ್ಯಾ, ಎಚ್.ಕೆ ಶಿವಶಂಕರ್, ಕೆ.ಎನ್ ರವೀಂದ್ರನಾಥ್(ಬ್ರದರ್), ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಉಪಾಧ್ಯಕ್ಷ ಕೂಡ್ಲಿಗೆರೆ ಮಂಜುನಾಥ್, ಖಜಾಂಚಿ ಅನಂತಕುಮಾರ್, ಸಹ ಕಾರ್ಯದರ್ಶಿ ಫಿಲೋಮಿನಾ, ಸದಸ್ಯರಾದ ಟಿ.ಎಸ್ ಆನಂದಕುಮಾರ್, ಸುದರ್ಶನ್, ಶೈಲೇಶ್ ಕೋಠಿ, ಸೈಯೀದ್ ಖಾನ್, ಕೆ.ಆರ್ ಶಂಕರ್, ಪ್ರಶಾಂತ್, ರಾಬರ್ಟ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.
ಕಲಾವಿದ ಸುಬ್ರಹ್ಮಣ್ಯ ಪ್ರಾರ್ಥಿಸಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ಶ್ರೀಹರ್ಷ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಬಸವರಾಜ್ ವಂದಿಸಿದರು. ಗಂಗಾನಾಯ್ಕ್ ಮತ್ತು ಸುಭಾಷ್‌ರಾವ್ ಸಿಂಧ್ಯಾ ನಿರೂಪಿಸಿದರು.
ಭದ್ರಾವತಿ ಹಳೇನಗರದ ಪತ್ರಿಕಾ ಭವನ ಟ್ರಸ್ಟ್ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನವೀಕೃತ ಪತ್ರಿಕಾ ಭವನ ಕಟ್ಟಡ ಉದ್ಘಾಟನೆ ವೇದಿಕೆ ಕಾರ್ಯಕ್ರಮ ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ.ಸಂಗಮೇಶ್ವರ್, ಕೆ.ಎನ್.ಶ್ರೀಹರ್ಷ, ಕಣ್ಣಪ್ಪ, ಅನುಸುಧಾ ಮೋಹನ್, ಸರ್ವಮಂಗಳ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.