ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಠಾಧೀಶರ ಭೇಟಿ
![](https://blogger.googleusercontent.com/img/a/AVvXsEhdAvq7UAu1ovnfGaZelEUpYZJeVfAHC0U047H1ub6uBiIuKD-6Ca7aLOWclB3mswk7qnSt87C7IwJ1NHwJevArcHk5KhAyIkN1Oxxr0n4BmVbZVt1XJzqIbZi0vJTKz5X5F8YQV7lzGTsqTMqtpMoLlAsm4H7wPtlWcJBixf4XeoQVqsFf7KbdZn6rXA=w400-h266-rw)
ಭದ್ರಾವತಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ಸಂಸದರ ಸಲಹೆ ಮೇರೆಗೆ ಶನಿವಾರ ಶಿವಮೊಗ್ಗದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಭೇಟಿಯಾಗಿ ಕಾರ್ಖಾನೆಯ ಪ್ರಸ್ತುತ ಸ್ಥಿತಿಗತಿಗಳ ಕುರಿತು ಚರ್ಚಿಸಿದರು.
ಭದ್ರಾವತಿ, ಮಾ. ೧೮ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಸುಮಾರು ೨ ತಿಂಗಳು ಪೂರೈಸುತ್ತಿದ್ದು, ಈ ನಡುವೆ ಹೋರಾಟದಲ್ಲಿ ಯಾವುದೇ ರೀತಿ ಬದಲಾವಣೆ ಕಂಡು ಬಂದಿಲ್ಲ. ಗುತ್ತಿಗೆ ಕಾರ್ಮಿಕರು ತಮ್ಮ ಹೋರಾಟದಲ್ಲಿ ದೃಢತೆ ಕಾಯ್ದುಕೊಂಡು ಬಂದಿರುವುದು ವಿಶೇಷತೆಯಾಗಿದೆ.
ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಆಡಳಿತ ಮಂಡಳಿ ಇದುವರೆಗೂ ಯಾವುದೇ ರೀತಿ ಸ್ಪಂದಿಸಿಲ್ಲದಿರುವುದು ಕಾರ್ಮಿಕರನ್ನು ಮತ್ತಷ್ಟು ಕಂಗೆಡಿಸಿದೆ. ಮಾರ್ಚ್ ತಿಂಗಳ ಅಂತ್ಯಕ್ಕೆ ಉತ್ಪಾದನೆ ಸ್ಥಗಿತಗೊಳ್ಳುವ ಆತಂಕ ಕಾಡುತ್ತಿದ್ದು, ಒಂದು ವೇಳೆ ಉತ್ಪಾದನೆ ಸ್ಥಗಿತಗೊಂಡಲ್ಲಿ ಕಾರ್ಖಾನೆ ಮುಚ್ಚುವುದು ಬಹುತೇಕ ಖಾತರಿಯಾಗಲಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ:
ಗುತ್ತಿಗೆ ಕಾರ್ಮಿಕರು ತಮ್ಮ ಹೋರಾಟ ಮುಂದುವರೆಸಿದ್ದು, ಶನಿವಾರ ವಿಜಯ ಸಂಕಲ್ಪ ಯಾತ್ರೆ ಮೂಲಕ ನಗರಕ್ಕೆ ಆಗಮಿಸಿದ್ದ ಸಂಸದ ಬಿ.ವೈ ರಾಘವೇಂದ್ರರವರಿಗೆ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಉಳಿಸುವಂತೆ ಪುನಃ ಮನವಿ ಸಲ್ಲಿಸಿದ್ದಾರೆ.
ಈ ನಡುವೆ ಗುತ್ತಿಗೆ ಕಾರ್ಮಿಕರು ಸಂಸದರ ಸಲಹೆ ಮೇರೆಗೆ ಶಿವಮೊಗ್ಗದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಭೇಟಿಯಾಗಿ ಕಾರ್ಖಾನೆಯ ಪ್ರಸ್ತುತ ಸ್ಥಿತಿಗತಿಗಳ ಕುರಿತು ಚರ್ಚಿಸಿದ್ದು, ಇದಕ್ಕೆ ಸ್ಪಂದಿಸಿರುವ ಪ್ರಹ್ಲಾದ್ ಜೋಶಿಯವರು ಮಾ.೨೦ರ ಸೋಮವಾರ ಕೇಂದ್ರ ಉಕ್ಕು ಸಚಿವರನ್ನು ಭೇಟಿಯಾಗಿ ಕಾರ್ಖಾನೆ ಉಳಿಸುವ ಸಂಬಂಧ ಚರ್ಚಿಸುವುದಾಗಿ ಭರವಸೆ ನೀಡಿದರು.
ಕಾರ್ಮಿಕ ಪ್ರಮುಖರಾದ ರಾಕೇಶ್, ನರಸಿಂಹಚಾರ್, ಅಮೃತ್, ಮಂಜುನಾಥ್, ಕುಮಾರಸ್ವಾಮಿ, ವಿನೋದ್, ವಿನಯ್, ಚನ್ನಬಸಪ್ಪ, ಗುಣಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ತುಮಕೂರು ಸಿದ್ದಗಂಗಾಮಠಕ್ಕೆ ಗುತ್ತಿಗೆ ಕಾರ್ಮಿಕರ ನಿಯೋಗ ತೆರಳಿ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರಿಗೆ ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಸ್ಥಿತಿಗತಿಗಳನ್ನು ವಿವರಿಸಿತು.
ವಿವಿಧ ಮಠಾಧಿಪತಿಗಳ ಭೇಟಿ :
ತುಮಕೂರು ಸಿದ್ದಗಂಗಾಮಠಕ್ಕೆ ಗುತ್ತಿಗೆ ಕಾರ್ಮಿಕರ ನಿಯೋಗ ತೆರಳಿ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರಿಗೆ ವಿಐಎಸ್‌ಎಲ್ ಕಾರ್ಖಾನೆ ಸ್ಥಿತಿಗತಿಗಳನ್ನು ವಿವರಿಸಿತು. ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವಂತೆ ಶ್ರೀಗಳಿಗೆ ಮನವಿ ಮಾಡಲಾಯಿತು.
ನಿಯೋಗದಲ್ಲಿ ಕಾರ್ಮಿಕ ಮುಖಂಡರಾದ ಬಾವಿಕಟ್ಟೆ ನಾಗಣ್ಣ, ಶ್ರೀಕಾಂತ್, ರಾಘವೇಂದ್ರ, ಗುಣಕರ ಮತ್ತು ಅಮೃತ್‌ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಮಂಗಳೂರಿನ ವಜ್ರದೇಹಿ ಮಠದ ಪೀಠಾಧಿಪತಿಗಳಾದ ಶ್ರೀ ರಾಜಶೇಖರನಂದ ಸ್ವಾಮೀಜಿಯವರನ್ನು ಕಾರ್ಮಿಕರ ನಿಯೋಗ ಭೇಟಿಯಾಗಿ ವಿಐಎಸ್‌ಎಲ್ ಕಾರ್ಖಾನೆ ಉಳಿಸುವ ಸಂಬಂಧ ಚರ್ಚಿಸಿತು.
ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಕಾರ್ಮಿಕ ಮುಖಂಡ ಉಮೇಶ್, ಅಮೋಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮಂಗಳೂರಿನ ವಜ್ರದೇಹಿ ಮಠದ ಪೀಠಾಧಿಪತಿಗಳಾದ ಶ್ರೀ ರಾಜಶೇಖರನಂದ ಸ್ವಾಮೀಜಿಯವರನ್ನು ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಗುತ್ತಿಗೆ ಕಾರ್ಮಿಕರ ನಿಯೋಗ ಭೇಟಿಯಾಗಿ ಕಾರ್ಖಾನೆ ಉಳಿಸುವ ಸಂಬಂಧ ಚರ್ಚಿಸಿತು.