Monday, March 20, 2023

ನೂತನ ಕುಲಪತಿಯಾಗಿ ಪ್ರೊ.ಬಿ.ಎಸ್ ಬಿರಾದಾರ್ ವರ್ಗಾವಣೆ

ಪ್ರೊ. ಬಿ.ಎಸ್ ಬಿರಾದಾರ್
    ಭದ್ರಾವತಿ, ಮಾ. ೨೦: ಇಲ್ಲಿನ ಕುವೆಂಪು ವಿಶ್ವ ವಿದ್ಯಾಲಯದ ವಿಜ್ಞಾನ ನಿಕಾಯದ ಡೀನ್ ಪ್ರೊ. ಬಿ.ಎಸ್ ಬಿರಾದಾರ್ ಅವರನ್ನು ಸರ್ಕಾರ ಸೋಮವಾರ ಕುಲಪತಿಗಳಾಗಿ ನೇಮಕಗೊಳಿಸಿ ವರ್ಗಾವಣೆಗೊಳಸಿದೆ.
    ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬೀದರ್ ವಿಶ್ವ ವಿದ್ಯಾಲಯದ ಮೊದಲ ಕುಲಪತಿಯಾಗಿ ಪ್ರೊ. ಬಿ.ಎಸ್ ಬಿರಾದಾರ್‌ರವರು ನೇಮಕಗೊಂಡಿದ್ದು,  ಇವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಸುಮಾರು ೨ ದಶಕಗಳಿಗೂ ಹೆಚ್ಚು ಕಾಲದಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.
    ಬಿರಾದಾರ್‌ರವರು ಕುಲಪತಿಯಾಗಿ ನೇಮಕಗೊಂಡಿರುವುದಕ್ಕೆ ಕುವೆಂಪು ವಿಶ್ವವಿದ್ಯಾನಿಲಯ ಅಧ್ಯಾಪಕೇತರ ನೌಕರರ ಸಂಘ ನೌಕರರ ಪರವಾಗಿ ಅಭಿನಂದಿಸಿದೆ.

ಎಎಪಿ ಅಭ್ಯರ್ಥಿಯಾಗಿ ಆನಂದ್

ಮೆಡಿಕಲ್ ಆನಂದ್
    ಭದ್ರಾವತಿ, ಮಾ. ೨೦ : ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಆಮ್ ಆದ್ಮಿ ಪಾರ್ಟಿ ರಾಜ್ಯದಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದ್ದು, ನಗರದ ಉದ್ಯಮಿ ಆನಂದ್‌ರವರು ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಲಭಿಸಿದೆ.
    ಮೆಡಿಕಲ್ ಆನಂದ್ ಹೆಸರಿನಲ್ಲಿ ಚಿರಪರಿಚಿತರಾಗಿದ್ದು, ಸುಮಾರು ಒಂದು ವರ್ಷದ ಹಿಂದೆ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಗೊಂಡಿದ್ದರು. ನಗರದ ರಂಗಪ್ಪ ವೃತ್ತದಲ್ಲಿ ಪಕ್ಷದ ಅಧಿಕೃತ ಕಛೇರಿ ತೆರೆಯುವ  ಮೂಲಕ ಆಕಾಂಕ್ಷಿ ಅಭ್ಯರ್ಥಿಯಾಗಿ ಕ್ಷೇತ್ರದಾದ್ಯಂತ ಪ್ರಚಾರ ಸಹ ಕೈಗೊಂಡಿದ್ದರು.
    ಆನಂದ್‌ರವರು ಈ ಹಿಂದೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಅವಕಾಶ ಕೋರಿದ್ದರು. ಆದರೆ ಅವಕಾಶ ಲಭಿಸದ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ನಂತರ ಕಾಂಗ್ರೆಸ್ ಪಕ್ಷ ತೊರೆದು ಆಮ್ ಆದ್ಮಿ ಪಾರ್ಟಿ ಪಕ್ಷಕ್ಕೆ ಸೇರ್ಪಡೆಗೊಂಡರು.
    ಈಗಾಗಲೇ ಕ್ಷೇತ್ರದಾದ್ಯಂತ ಪ್ರಚಾರ ನಡೆಸಿರುವ ಆನಂದ್‌ರವರು ಈ ಬಾರಿ ಚುನಾವಣೆಯಲ್ಲಿ ಗೆಲ್ಲುವ ಹುಮ್ಮಸ್ಸು ಹೊಂದಿದ್ದಾರೆ. ಜೆಡಿಎಸ್ ಪಕ್ಷದಿಂದ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪತ್ನಿ ಶಾರದ ಅಪ್ಪಾಜಿ ಅವರನ್ನು ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಉಳಿದಂತೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯನ್ನು ಘೋಷಿಸಿಲ್ಲ.
    ಕಳೆದ ಬಾರಿ ಆಮ್ ಆದ್ಮಿ ಪಾರ್ಟಿಯಿಂದ ಎಚ್. ರವಿಕುಮಾರ್ ಸ್ಪರ್ಧಿಸಿದ್ದರು. ೯ನೇ ಸ್ಥಾನ ಪಡೆದುಕೊಂಡಿದ್ದರು. ಇತ್ತೀಚೆಗೆ ಇವರ ಎಎಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ನೆಟ್ಟಕಲ್ಹಟ್ಟಿ ಗ್ರಾಮದಲ್ಲಿ ಕೋಟ್ಯಾಂತರ ರು. ಮೌಲ್ಯದ ಮರಗಳ ಕಡಿತಲೆ

ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೋಬಳಿ, ನೆಟ್ಟಕಲ್ಹಟ್ಟಿ ಗ್ರಾಮದ ಸ.ನಂ.೮/೨ರಲ್ಲಿ ಒಟ್ಟು ೯ ಎಕರೆ ೦೪ ಗುಂಟೆ ಜಾಗದಲ್ಲಿದ್ದ ವಿವಿಧ ಜಾತಿಯ ಮರಗಳನ್ನು ಅನಧಿಕೃತವಾಗಿ ಕಡಿತಲೆ ಮಾಡಿರುವವರ ವಿರುದ್ಧ ಹಾಗು ಇದಕ್ಕೆ ಅನುಮತಿ ನೀಡಿರುವ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಸಾರ್ವಜನಿಕ ಕುಂದು ಕೊರತೆ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.  
    ಭದ್ರಾವತಿ, ಮಾ. ೨೦ : ತಾಲೂಕಿನ ಕೂಡ್ಲಿಗೆರೆ ಹೋಬಳಿ, ನೆಟ್ಟಕಲ್ಹಟ್ಟಿ ಗ್ರಾಮದ ಸ.ನಂ.೮/೨ರಲ್ಲಿ ಒಟ್ಟು ೯ ಎಕರೆ ೦೪ ಗುಂಟೆ ಜಾಗದಲ್ಲಿದ್ದ ವಿವಿಧ ಜಾತಿಯ ಮರಗಳನ್ನು ಅನಧಿಕೃತವಾಗಿ ಕಡಿತಲೆ ಮಾಡಿರುವವರ ವಿರುದ್ಧ ಹಾಗು ಇದಕ್ಕೆ ಅನುಮತಿ ನೀಡಿರುವ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಸಾರ್ವಜನಿಕ ಕುಂದು ಕೊರತೆ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
    ಪ್ರತಿಭಟನೆ ನೇತೃತ್ವವಹಿಸಿದ್ದ ಸಮಿತಿ ಅಧ್ಯಕ್ಷ, ನಗರಸಭೆ ಮಾಜಿ ಸದಸ್ಯ ಬಾಲಕೃಷ್ಣ ಮಾತನಾಡಿ, ತಾಲೂಕಿನ ಕೂಡ್ಲಿಗೆರೆ ಹೋಬಳಿ, ನೆಟ್ಟಕಲ್ಹಟ್ಟಿ ಗ್ರಾಮದಲ್ಲಿರುವ ಸ.ನಂ. ೯/೨ರಲ್ಲಿ  ೭ ಎಕರೆ ೩೩ ಗುಂಟೆ ಜೊತೆಗೆ ನಕಾಶೆಯಲ್ಲಿ ಕಂಡ ಕೆರೆ ಮತ್ತು ದೇವಸ್ಥಾನ ಮತ್ತು ಸಿದ್ದರಹಳ್ಳಿಗೆ ಹೋಗುವ ಕಾಲು ದಾರಿಗೆ ಸೇರಿದ ೧ ಎಕರೆ ೧೧ ಗುಂಟೆ ಜಾಗದಲ್ಲಿ ಒಟ್ಟು ೯ ಎಕರೆ ೦೪ ಗುಂಟೆ ಜಾಗದಲ್ಲಿದ್ದ ೧೧೪ಕ್ಕೂ ಹೆಚ್ಚಿನ ವಿವಿಧ ಜಾತಿಯ ಕೋಟ್ಯಾಂತರ ರು. ಮೌಲ್ಯದ ಮರಗಳನ್ನು ನಾಗರಾಜ್ ಬಿನ್ ಬೆಟ್ಟೇಗೌಡರವರು ಎಂಬುವರು ಅನಧಿಕೃತವಾಗಿ ಕಡಿತಲೆ ಮಾಡಿದ್ದು, ಈ  ವಿಚಾರ ಈಗಾಗಲೇ ತಮ್ಮ ಗಮನಕ್ಕೆ ತರಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ದೂರಿದರು.
    ೧೯೪೭-೪೮ನೇ ಸಾಲಿನಲ್ಲಿ ಲೇಟ್ ಪಟೇಲ್ ಚಂದ್ರಪ್ಪ ಬಿನ್ ಬಸಪ್ಪ ಇವರ ಹೆಸರಿಗೆ ನೈಸರ್ಗಿಕವಾಗಿ ಹುಲುಸಾಗಿ ಬೆಳೆದಿರುವ ವಿವಿಧ ಜಾತಿಯ ಮರಗಳು ಇರುವಾಗಲೇ ಫೆ.೨, ೨೦೨೨ರಂದು ಅಕ್ರಮವಾಗಿ ಮಂಜೂರು ಮಾಡಲಾಗಿದೆ. ಅಲ್ಲದೆ ೧ ಎಕರೆ ೧೧ ಗುಂಟೆ ಜಾಗ ಸೇರಿದಂತೆ ಒಟ್ಟು ೯ ಎಕರೆ ೦೪ ಗುಂಟೆ ಜಾಗದಲ್ಲಿದ್ದ ವಿವಿಧ ಜಾತಿಯ ಮರಗಳನ್ನು ಅನಧಿಕೃತವಾಗಿ ಕಡಿತಲೆ ಮಾಡಿರುವ ಹಿನ್ನಲೆಯಲ್ಲಿ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
    ನಾಗರಾಜ್ ಬಿನ್ ಬೆಟ್ಟೇಗೌಡರವರಿಗೆ ಜ.೭, ೨೦೨೩ರಂದು ಮರಗಳನ್ನು ಕಡಿತಲೆ ಮಾಡಲು ಇಲಾಖೆ ವತಿಯಿಂದ ಅನುಮತಿ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಅನುಮತಿ ನೀಡಿರುವ ವಲಯ ಅರಣ್ಯಾಧಿಕಾರಿ ಕೆ.ಆರ್ ರಾಜೇಶ್ ಹಾಗು ಉಪವಲಯ ಅರಣ್ಯಾಧಿಕಾರಿಗಳು ಮತ್ತು ಬೀಟ್ ಫಾರೆಸ್ಟರ್‌ಗಳ ಮೇಲೆ ಇಲಾಖಾ ಶಿಸ್ತು ಕ್ರಮಕ್ಕೆ ಒಳಪಡಿಸಿ ಅವರ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅಲ್ಲದೆ ಮರಗಳನ್ನು ಅನಧಿಕೃತವಾಗಿ ಕಡಿತಲೆ ಮಾಡಿರುವ ನಾಗರಾಜ್ ಬಿನ್ ಬೆಟ್ಟೇಗೌಡರ ವಿರುದ್ಧ ಸಹ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಕಡಿತಲೆ ಮಾಡಿರುವ ಎಲ್ಲಾ ಮರಗಳನ್ನು ಇಲಾಖೆ ವಶಕ್ಕೆ ಪಡೆದುಕೊಳ್ಳಬೇಕೆಂದು ಆಗ್ರಹಿಸಿದರು.
    ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ ಮಾತನಾಡಿ, ಜಾಗ ಒಂದು ವೇಳೆ ಅರಣ್ಯ ಪ್ರದೇಶವಾಗಿದ್ದಲ್ಲಿ ಯಾವುದೇ ಕಾರಣಕ್ಕೂ ಮರಗಳನ್ನು ಕಡಿತಲೆ ಮಾಡಲು ಅವಕಾಶವಿಲ್ಲ. ೭ ಎಕರೆ ೩೩ ಗುಂಟೆ ಖಾಸಗಿ ಜಾಗದಲ್ಲಿ ಬೆಳೆದಿರುವ ಮರಗಳನ್ನು ಮಾತ್ರ ಕಡಿತಲೆ ಮಾಡಲು ಅವಕಾಶವಿದೆ. ಖಾಸಗಿ ಜಾಗ ಹೊರತುಪಡಿಸಿ ೧ ಎಕರೆ ೧೧ ಗುಂಟೆ ಜಾಗದಲ್ಲಿ ಬೆಳೆದಿರುವ ಮರಗಳನ್ನು ಕಡಿತಲೆ ಮಾಡಿರುವ ಕುರಿತು ದೂರು ಸಲ್ಲಿಕೆಯಾಗಿರುವ ಹಿನ್ನಲೆಯಲ್ಲಿ ಈ ಸಂಬಂಧ ತನಿಖೆ ನಡೆಸಲಾಗುವುದು. ಒಂದು ವೇಳೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿಂದ ತಪ್ಪಾಗಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
    ಪ್ರತಿಭಟನೆಯಲ್ಲಿ ಪ್ರಮುಖರಾದ ವಕೀಲರ ಸಂಘದ ಮಾಜಿ ಅಧ್ಯಕ್ಷ ವಿ. ವೆಂಕಟೇಶ್, ಪ್ರಗತಿಪರ ಸಂಘಟನೆಗಳ ಪ್ರಮುಖರಾದ ಸುರೇಶ್, ಚಂದ್ರಶೇಖರ್, ನಗರಸಭೆ ಮಾಜಿ ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಮಾಜಿ ಸದಸ್ಯ ರಮೇಶ್, ರಾಜೇಂದ್ರ, ಹಾವು ಮಂಜ ಹಾಗು ನೆಟ್ಟಕಲ್ಹಟ್ಟಿ ಗ್ರಾಮದ ನಿವಾಸಿಗಳು, ಮಹಿಳೆಯರು, ದೇವಸ್ಥಾನದ ಭಕ್ತರು ಪಾಲ್ಗೊಂಡಿದ್ದರು.

Sunday, March 19, 2023

ಇಬ್ಬರ ಸೆರೆ : ೨೩೦ ಗ್ರಾಂ. ತೂಕದ ಗಾಂಜಾ ವಶ


    ಭದ್ರಾವತಿ, ಮಾ. ೧೯ : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ಸುಮಾರು ೨೩೦ ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
    ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ದಾಳಿ ನಡೆಸಿದ್ದು, ಸುಮಾರು ೬,೦೦೦ ರು. ಮೌಲ್ಯದ ೨೩೦ ಗ್ರಾಂ. ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಬಂಜಾರ ಸಮುದಾಯದವರು ಹೆಚ್ಚು ಸಂಘಟಿತರಾಗಿ ಅಭಿವೃದ್ಧಿಗೆ ಕೈಜೋಡಿಸಿ : ಬಿ.ಕೆ ಮೋಹನ್

ಭದ್ರಾವತಿ ಬುಳ್ಳಾಪುರ ಗ್ರಾಮದಲ್ಲಿ ಮಿಲ್ಟ್ರಿಕ್ಯಾಂಪ್ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನ ಸಮೀಪ ಬಂಜಾರ ಭವನ ನಿರ್ಮಾಣಕ್ಕೆ ಮಂಜೂರಾತಿಯಾಗಿರುವ ಸುಮಾರು ೧ ಎಕರೆ ಜಾಗದಲ್ಲಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ಹಾಗು ತಾಲೂಕು ಬಂಜಾರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾಂಪೌಂಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ಹಾಗು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಉದ್ಘಾಟಿಸಿ ಮಾತನಾಡಿದರು.
    ಭದ್ರಾವತಿ, ಮಾ. ೧೯ : ಬಂಜಾರ ಸಮುದಾಯದವರು ಹೆಚ್ಚು ಸಂಘಟಿತರಾಗುವ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕೆಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹೇಳಿದರು.
    ನಗರದ ಬುಳ್ಳಾಪುರ ಗ್ರಾಮದಲ್ಲಿ ಮಿಲ್ಟ್ರಿಕ್ಯಾಂಪ್ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನ ಸಮೀಪ ಬಂಜಾರ ಭವನ ನಿರ್ಮಾಣಕ್ಕೆ ಮಂಜೂರಾತಿಯಾಗಿರುವ ಸುಮಾರು ೧ ಎಕರೆ ಜಾಗದಲ್ಲಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ಹಾಗು ತಾಲೂಕು ಬಂಜಾರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾಂಪೌಂಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ಹಾಗು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂಜಾರ ಸಮಾಜದವರಿದ್ದು, ಆದರೂ ಸಹ ಸಂಘಟನೆ ಕೊರತೆಯಿಂದಾಗಿ ಸಮಾಜದ ಅಭಿವೃದ್ಧಿ ಕಾರ್ಯಗಳು ಹಿಂದುಳಿದಿವೆ. ಶ್ರಮಜೀವಿಗಳಾದ ಬಂಜಾರರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹಾಗು ಸಮುದಾಯ ಸಮಾಜದ ಮುಖ್ಯ ವಾಹಿನಿಯಲ್ಲಿ     ಗುರುತಿಸಿಕೊಳ್ಳಲು ಹೆಚ್ಚು ಸಂಘಟಿತರಾಗಬೇಕಾದ ಅವಶ್ಯಕತೆ ಇದೆ ಎಂದರು.
    ಸಮಾಜದ ಪ್ರಮುಖರು ಹಾಗು ಶಾಸಕರು ಕೈಗೊಂಡ ಪ್ರಯತ್ನದಿಂದಾಗಿ ನಗರದ ಹೃದಯ ಭಾಗದಲ್ಲಿ ಸುಮಾರು ೫ ರಿಂದ ೬ ಕೋ. ರು. ಮೌಲ್ಯದ ಭೂಮಿ ಸಮುದಾಯಕ್ಕೆ ಲಭಿಸಿರುವುದು ಸಂತಸದ ಸಂಗತಿಯಾಗಿದೆ. ಈ ಭೂಮಿ ಸದ್ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ಸಮುದಾಯದಲ್ಲಿ ಉಳ್ಳವರು ಸೇರಿದಂತೆ ಎಲ್ಲರೂ ಸಹ ತಮ್ಮ ಕೈಲಾದಷ್ಟು ನೆರವನ್ನು ನೀಡುವ ಮೂಲಕ ಸುಸಜ್ಜಿತವಾದ ಭವನ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
    ಉದ್ಯಮಿ ಬಿ.ಕೆ ಜಗನ್ನಾಥ್ ಮಾತನಾಡಿ, ಶಾಸಕರು ಹಾಗು ಸಮುದಾಯದವರ ಪ್ರಯತ್ನದಿಂದ, ಸೇವಾಲಾಲ್ ಕೃಪೆಯಿಂದಾಗಿ ನಗರದ ಹೃದಯ ಭಾಗದಲ್ಲಿ ಭೂಮಿ ಲಭಿಸಿರುವುದು ಇಂದು ಬಂಜಾರ ಸಮುದಾಯವರು ಸುವರ್ಣ ಅಕ್ಷರಗಳಲ್ಲಿ ಬರೆದಿಡಬೇಕಾದ ದಿನವಾಗಿದೆ. ಇದನ್ನು ನೆನಪಿನಲ್ಲಿಟ್ಟುಕೊಂಡು ಸಮುದಾಯದ ಎಲ್ಲರೂ ಈ ಭೂಮಿ ಸದ್ಬಳಕೆಯಾಗುವ ನಿಟ್ಟಿನಲ್ಲಿ ಸಮುದಾಯದ ಅಭಿವೃದ್ಧಿಗೆ ಎಲ್ಲಾ ರೀತಿಯಿಂದಲೂ ಕೈಜೋಡಿಸಬೇಕೆಂದರು.
    ಬಂಜಾರ ಸಂಘದ ಅಧ್ಯಕ್ಷ ಪ್ರೇಮ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಉಪತಹಸೀಲ್ದಾರ್ ಮಂಜಾನಾಯ್ಕ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕಾಂತರಾಜ್, ಬಂಜಾರ ರೈತರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಾನಾಯ್ಕ, ಈ ಭಾಗದ ನಗರಸಭಾ ಸದಸ್ಯ ಉದಯ್‌ಕುಮಾರ್, ಕಾಂಗ್ರೆಸ್ ಪಕ್ಷದ ಮುಖಂಡ ಎಚ್. ರವಿಕುಮಾರ್, ಪ್ರವೀಣ್‌ನಾಯ್ಕ, ರವಿನಾಯ್ಕ ಸೇರಿದಂತೆ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮೋತಿನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ಹಿರಿಯರು ಮಕ್ಕಳಿಗೆ ಧಾರ್ಮಿಕ ಆಚರಣೆ ಹೇಳಿಕೊಟ್ಟಾಗ ಮಾತ್ರ ಧರ್ಮ, ಸಂಸ್ಕೃತಿ ಉಳಿಸಿಕೊಳ್ಳಲು ಸಾಧ್ಯ

ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಶಾಖಾ ಮಠ ಯಡೆಯೂರು ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ

ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಹಾಗು ಜೇಡಿಕಟ್ಟೆ ಮರುಳ ಸಿದ್ದೇಶ್ವರ ಧಾರ್ಮಿಕ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯನವರ ತಾಯಿ ನಾಗಮ್ಮನವರ ಪುಣ್ಯಸ್ಮರಣೆ ಅಂಗವಾಗಿ ಭದ್ರಾವತಿ ಸಿದ್ದಾರೂಢ ನಗರದ ಶ್ರೀ ಶಂಕರಮಠದ ಮಿನಿಹಾಲ್‌ನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಶಾಖಾ ಮಠ ಯಡೆಯೂರು ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಅಶೀರ್ವಚನ ನೀಡಿದರು.
    ಭದ್ರಾವತಿ, ಮಾ. ೧೯ : ಮನೆಯ ಹಿರಿಯರು ಮಕ್ಕಳಿಗೆ ಧಾರ್ಮಿಕ ಆಚರಣೆಗಳನ್ನು ಹೇಳಿಕೊಡುವ ಮೂಲಕ ಅವುಗಳ ಅನುಷ್ಠಾನಕ್ಕೆ ತರಲುಪ್ರಯತ್ನಿಸಬೇಕು. ಆಗ ಮಾತ್ರ ಧರ್ಮ, ಸಂಸ್ಕೃತಿ ಉಳಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಲಿಂಗಾಯತರು ಲಿಂಗಧಾರಣೆ ಮಹತ್ವ ಅರಿತುಕೊಳ್ಳಬೇಕೆಂದು  ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಶಾಖಾ ಮಠ ಯಡೆಯೂರು ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಹಾಗು ಜೇಡಿಕಟ್ಟೆ ಮರುಳ ಸಿದ್ದೇಶ್ವರ ಧಾರ್ಮಿಕ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯನವರ ತಾಯಿ ನಾಗಮ್ಮನವರ ಪುಣ್ಯಸ್ಮರಣೆ ಅಂಗವಾಗಿ ಸಿದ್ದಾರೂಢ ನಗರದ ಶ್ರೀ ಶಂಕರಮಠದ ಮಿನಿಹಾಲ್‌ನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ಶ್ರೀಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.
    ಕುಟುಂಬದ ಹಿರಿಯರು ಮರಣ ಹೊಂದಿದಾಗ ದುಃಖಿಸುವ ಬದಲು ಅವರ ಆತ್ಮಕ್ಕೆ ಗೌರವ ತಂದು ಕೊಡುವ ರೀತಿಯಲ್ಲಿ ನಡೆದುಕೊಳ್ಳಬೇಕು. ಪ್ರತಿಯೊಬ್ಬರಿಗೂ ಸಾವು ಖಚಿತ. ಆದರೆ ನಮ್ಮ ಬದುಕಿನಲ್ಲಿ ರೂಢಿಸಿಕೊಳ್ಳುವ ಧರ್ಮ, ಸಂಸ್ಕಾರ ಬಹಳ ಮುಖ್ಯ. ಲಿಂಗಾಯತರು ಲಿಂಗಧಾರಣೆ ಮಾಡಿದರೆ ಸಾಲದು ಅದರ ಮಹತ್ವ, ಶಕ್ತಿ ಅರಿತು ಕೊಳ್ಳಬೇಕು. ಪ್ರತಿದಿನ ಅದರ ಆರಾಧನೆಯಲ್ಲಿ ತೊಡಗಬೇಕೆಂದರು.
    ಕುಟುಂಬದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಅದರಲ್ಲೂ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಸಮಾಜದಲ್ಲಿ ಹಣ, ಆಸ್ತಿ ಯಾವುದೂ ಮುಖ್ಯವಲ್ಲ. ನೆಮ್ಮದಿ ಬಹಳ ಮುಖ್ಯ. ಇದನ್ನು ಕಂಡುಕೊಳ್ಳುವ ಮಾರ್ಗ ತಿಳಿದುಕೊಳ್ಳಬೇಕೆಂದರು.
    ಹಿರೇಮಠ ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಂಬಲದೇವನಹಳ್ಳಿ ಶ್ರೀ ಉಜ್ಜಿನೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೀರೂರು ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಸುರೇಶಯ್ಯ, ಯುವ  ಘಟಕದ ಅಧ್ಯಕ್ಷ ಮಂಜುನಾಥ್, ಶ್ರೀ ಶಂಕರಮಠದ ವ್ಯವಸ್ಥಾಪಕ ಶಾಂತಕುಮಾರ್, ಓಂಕಾರಪ್ಪ, ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪೂರ್ಣಿಮಾ ಸಿದ್ದಲಿಂಗಯ್ಯ ನಿರೂಪಿಸಿದರು.

Saturday, March 18, 2023

ಮುಂದುವರೆದ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಠಾಧೀಶರ ಭೇಟಿ

ಭದ್ರಾವತಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ಸಂಸದರ ಸಲಹೆ ಮೇರೆಗೆ ಶನಿವಾರ ಶಿವಮೊಗ್ಗದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಭೇಟಿಯಾಗಿ ಕಾರ್ಖಾನೆಯ ಪ್ರಸ್ತುತ ಸ್ಥಿತಿಗತಿಗಳ ಕುರಿತು ಚರ್ಚಿಸಿದರು.
    ಭದ್ರಾವತಿ, ಮಾ. ೧೮ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಸುಮಾರು ೨ ತಿಂಗಳು ಪೂರೈಸುತ್ತಿದ್ದು, ಈ ನಡುವೆ ಹೋರಾಟದಲ್ಲಿ ಯಾವುದೇ ರೀತಿ ಬದಲಾವಣೆ ಕಂಡು ಬಂದಿಲ್ಲ. ಗುತ್ತಿಗೆ ಕಾರ್ಮಿಕರು ತಮ್ಮ ಹೋರಾಟದಲ್ಲಿ ದೃಢತೆ ಕಾಯ್ದುಕೊಂಡು ಬಂದಿರುವುದು ವಿಶೇಷತೆಯಾಗಿದೆ.
    ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಆಡಳಿತ ಮಂಡಳಿ ಇದುವರೆಗೂ ಯಾವುದೇ ರೀತಿ ಸ್ಪಂದಿಸಿಲ್ಲದಿರುವುದು ಕಾರ್ಮಿಕರನ್ನು ಮತ್ತಷ್ಟು ಕಂಗೆಡಿಸಿದೆ. ಮಾರ್ಚ್ ತಿಂಗಳ ಅಂತ್ಯಕ್ಕೆ ಉತ್ಪಾದನೆ ಸ್ಥಗಿತಗೊಳ್ಳುವ ಆತಂಕ ಕಾಡುತ್ತಿದ್ದು, ಒಂದು ವೇಳೆ ಉತ್ಪಾದನೆ ಸ್ಥಗಿತಗೊಂಡಲ್ಲಿ ಕಾರ್ಖಾನೆ ಮುಚ್ಚುವುದು ಬಹುತೇಕ ಖಾತರಿಯಾಗಲಿದೆ.
    ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ:
    ಗುತ್ತಿಗೆ ಕಾರ್ಮಿಕರು ತಮ್ಮ ಹೋರಾಟ ಮುಂದುವರೆಸಿದ್ದು, ಶನಿವಾರ ವಿಜಯ ಸಂಕಲ್ಪ ಯಾತ್ರೆ ಮೂಲಕ ನಗರಕ್ಕೆ ಆಗಮಿಸಿದ್ದ ಸಂಸದ ಬಿ.ವೈ ರಾಘವೇಂದ್ರರವರಿಗೆ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಉಳಿಸುವಂತೆ ಪುನಃ ಮನವಿ ಸಲ್ಲಿಸಿದ್ದಾರೆ.
    ಈ ನಡುವೆ ಗುತ್ತಿಗೆ ಕಾರ್ಮಿಕರು ಸಂಸದರ ಸಲಹೆ ಮೇರೆಗೆ ಶಿವಮೊಗ್ಗದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಭೇಟಿಯಾಗಿ ಕಾರ್ಖಾನೆಯ ಪ್ರಸ್ತುತ ಸ್ಥಿತಿಗತಿಗಳ ಕುರಿತು ಚರ್ಚಿಸಿದ್ದು, ಇದಕ್ಕೆ ಸ್ಪಂದಿಸಿರುವ ಪ್ರಹ್ಲಾದ್ ಜೋಶಿಯವರು ಮಾ.೨೦ರ ಸೋಮವಾರ ಕೇಂದ್ರ ಉಕ್ಕು ಸಚಿವರನ್ನು ಭೇಟಿಯಾಗಿ ಕಾರ್ಖಾನೆ ಉಳಿಸುವ ಸಂಬಂಧ ಚರ್ಚಿಸುವುದಾಗಿ ಭರವಸೆ ನೀಡಿದರು.
ಕಾರ್ಮಿಕ ಪ್ರಮುಖರಾದ ರಾಕೇಶ್, ನರಸಿಂಹಚಾರ್, ಅಮೃತ್, ಮಂಜುನಾಥ್, ಕುಮಾರಸ್ವಾಮಿ, ವಿನೋದ್, ವಿನಯ್, ಚನ್ನಬಸಪ್ಪ, ಗುಣಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ತುಮಕೂರು ಸಿದ್ದಗಂಗಾಮಠಕ್ಕೆ ಗುತ್ತಿಗೆ ಕಾರ್ಮಿಕರ ನಿಯೋಗ ತೆರಳಿ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರಿಗೆ ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಸ್ಥಿತಿಗತಿಗಳನ್ನು ವಿವರಿಸಿತು.

    ವಿವಿಧ ಮಠಾಧಿಪತಿಗಳ ಭೇಟಿ :
    ತುಮಕೂರು ಸಿದ್ದಗಂಗಾಮಠಕ್ಕೆ ಗುತ್ತಿಗೆ ಕಾರ್ಮಿಕರ ನಿಯೋಗ ತೆರಳಿ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರಿಗೆ ವಿಐಎಸ್‌ಎಲ್ ಕಾರ್ಖಾನೆ ಸ್ಥಿತಿಗತಿಗಳನ್ನು ವಿವರಿಸಿತು. ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವಂತೆ ಶ್ರೀಗಳಿಗೆ ಮನವಿ ಮಾಡಲಾಯಿತು.
ನಿಯೋಗದಲ್ಲಿ ಕಾರ್ಮಿಕ ಮುಖಂಡರಾದ ಬಾವಿಕಟ್ಟೆ ನಾಗಣ್ಣ, ಶ್ರೀಕಾಂತ್, ರಾಘವೇಂದ್ರ, ಗುಣಕರ ಮತ್ತು ಅಮೃತ್‌ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಮಂಗಳೂರಿನ ವಜ್ರದೇಹಿ ಮಠದ ಪೀಠಾಧಿಪತಿಗಳಾದ ಶ್ರೀ ರಾಜಶೇಖರನಂದ ಸ್ವಾಮೀಜಿಯವರನ್ನು ಕಾರ್ಮಿಕರ ನಿಯೋಗ ಭೇಟಿಯಾಗಿ ವಿಐಎಸ್‌ಎಲ್ ಕಾರ್ಖಾನೆ ಉಳಿಸುವ ಸಂಬಂಧ ಚರ್ಚಿಸಿತು.
ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಕಾರ್ಮಿಕ ಮುಖಂಡ ಉಮೇಶ್, ಅಮೋಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಮಂಗಳೂರಿನ ವಜ್ರದೇಹಿ ಮಠದ ಪೀಠಾಧಿಪತಿಗಳಾದ ಶ್ರೀ ರಾಜಶೇಖರನಂದ ಸ್ವಾಮೀಜಿಯವರನ್ನು ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಗುತ್ತಿಗೆ ಕಾರ್ಮಿಕರ ನಿಯೋಗ ಭೇಟಿಯಾಗಿ  ಕಾರ್ಖಾನೆ ಉಳಿಸುವ ಸಂಬಂಧ ಚರ್ಚಿಸಿತು.