Sunday, April 16, 2023

ಹೋರಾಟಗಾರ ಬಿ.ಎನ್ ರಾಜು ಏ.೧೭ರಂದು ನಾಮಪತ್ರ ಸಲ್ಲಿಕೆ

ಬಿ.ಎನ್ ರಾಜು
    ಭದ್ರಾವತಿ, ಏ. ೧೬ : ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.
    ಸುಮಾರು ೫೦ ವರ್ಷ ವಯಸ್ಸಿನ ವೇಲೂರು ಶೆಡ್ ನಿವಾಸಿಯಾಗಿರುವ ಬಿ.ಎನ್ ರಾಜು ೨ನೇ ಬಾರಿ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅನ್ಯಾಯದ ವಿರುದ್ಧ, ಶೋಷಿತರ ಪರವಾಗಿ ಸುಮಾರು ೩೦ ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ.
    ಕಳೆದ ಬಾರಿ ೨೦೧೮ರ ಚುನಾವಣೆಯಲ್ಲಿ ೧೨ನೇ ಸ್ಥಾನ ಕಾಯ್ದುಕೊಂಡಿದ್ದರು. ಇದೀಗ ೨ನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಮಿನಿವಿಧಾನಸೌಧ ತಾಲೂಕು ಕಛೇರಿ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.  

ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭ

 ಭದ್ರಾವತಿ, ಏ. 16:  ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭ ಭಾನುವಾರ ಸಂಜೆ  ನಡೆಯಿತು.
ಬೆಂಗಳೂರಿನ ಹಿರಿಯ ಕವಿ ಎಚ್. ದುಂಡಿರಾಜ್ ಸಮಾರೋಪ ನುಡಿಗಳನ್ನಾಡಿದರು.  ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಅಭಿನಂದನಾ ನುಡಿಗಳನ್ನಾಡಿದರು.   ಸಮ್ಮೇಳನಾಧ್ಯಕ್ಷ,  ಸಾಹಿತಿ, ಹೊಸಹಳ್ಳಿ ದಾಳೇಗೌಡ,   ಕಸಾಪ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಮಾಜಿ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಕೂಡ್ಲಿಗೆರೆ ಹೋಬಳಿ ಘಟಕ ಅಧ್ಯಕ್ಷ ಕೆ.ಎಸ್. ರೇವಪ್ಪ ಮತ್ತು ನಿವೃತ್ತ ಮುಖ್ಯ ಶಿಕ್ಷಕ ಸಿ.ಜಯಪ್ಪ ಉಪಸ್ಥಿತರಿದ್ದರು.  
    ಅನ್ನಪೂರ್ಣ ಸತೀಶ್ ನಿರೂಪಿಸಿದರು.  ಜೆ.ಎನ್ ಬಸವರಾಜಪ್ಪ ವಂದಿಸಿದರು. ಸಮ್ಮೇಳನಾಧ್ಯಕ್ಷ,  ಸಾಹಿತಿ, ಹೊಸಹಳ್ಳಿ ದಾಳೇಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು.

Saturday, April 15, 2023

ಕೆಆರ್‌ಎಸ್ ಪಕ್ಷದ ಅಭ್ಯರ್ಥಿಯಿಂದ ಮೊದಲ ನಾಮಪತ್ರ

ಮಹಿಳಾ ಅಭ್ಯರ್ಥಿ ಸುಮಿತ್ರ ಬಾಯಿ ಸ್ಪರ್ಧೆ  

ಭದ್ರಾವತಿಯಲ್ಲಿ ರವಿ ಕೃಷ್ಣಾರೆಡ್ಡಿ ನೇತೃತ್ವದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(ಕೆಆರ್‌ಎಸ್)ದ ಅಧಿಕೃತ ಅಭ್ಯರ್ಥಿ ಸುಮಿತ್ರ ಬಾಯಿ ಈ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಶನಿವಾರ ನಾಮಪತ್ರ ಸಲ್ಲಿಸಿದರು.
    ಭದ್ರಾವತಿ, ಏ. ೧೫ : ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಲು ೨ನೇ ದಿನವಾದ ಶನಿವಾರ ಒಂದೇ ಒಂದು ನಾಮಪತ್ರ ಮಾತ್ರ ಸಲ್ಲಿಕೆಯಾಗಿದೆ.
    ರವಿ ಕೃಷ್ಣಾರೆಡ್ಡಿ ನೇತೃತ್ವದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(ಕೆಆರ್‌ಎಸ್)ದ ಅಧಿಕೃತ ಅಭ್ಯರ್ಥಿ ಸುಮಿತ್ರ ಬಾಯಿ ಗುರುವಾರ ನಾಮಪತ್ರ ಸಲ್ಲಿಸಲು ವಿಳಂಬವಾದ ಹಿನ್ನಲೆಯಲ್ಲಿ ಶನಿವಾರ ನಾಮಪತ್ರ ಸಲ್ಲಿಸಿದರು.  ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಮೊದಲ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅದರಲ್ಲೂ ವಿಶೇಷ ಎಂದರೆ ಮಹಿಳಾ ಅಭ್ಯರ್ಥಿಯಾಗಿರುವುದು.
ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ರವಿಚಂದ್ರನಾಯಕ ನಾಮಪತ್ರ ಸ್ವೀಕರಿಸಿದರು. ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್ ಸುರೇಶ ಆಚಾರ್ ಉಪಸ್ಥಿತರಿದ್ದರು.
    ಸುಮಿತ್ರ ಬಾಯಿ ನಾಮಪತ್ರ  ಸಲ್ಲಿಸುವ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ನಾಗರಾಜ್‌ರಾವ್ ಸಿಂಧೆ, ಯುವ ಘಟಕದ ಅಧ್ಯಕ್ಷ ಅರಳಿಹಳ್ಳಿ ತ್ಯಾಗರಾಜ್, ಉಪಾಧ್ಯಕ್ಷ ಆನಂದ್ ಛಲಪತಿ, ಯುವ ಘಟಕದ ಸಂಘಟನಾ ಕಾರ್ಯದರ್ಶಿ ರಾಜೇಂದ್ರ, ಉಪಾಧ್ಯಕ್ಷ ವಿನೋದ್, ಮಲ್ಲಿಕಾರ್ಜುನ್, ಸುರೇಶ್, ಸಂತೋಷ್, ಮಹೇಶ್, ಚಂದನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸುಮಿತ್ರ ಬಾಯಿ ಬಳಿ ೨ ಎಕರೆ, ೩೯ ಗುಂಟೆ ತೋಟ :
    ಕೆಆರ್‌ಎಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸುಮಾರು ೫೫ ವರ್ಷ ವಯಸ್ಸಿನ ಸುಮಿತ್ರ ಬಾಯಿ ಉಜ್ಜನಿಪುರ ನಿವಾಸಿಯಾಗಿದ್ದು, ಎಂಪಿಎಂ ಕಾರ್ಖಾನೆ ನಿವೃತ್ತ ಉದ್ಯೋಗಿ ನಾಗರಾಜ್‌ರಾವ್ ಸಿಂಧೆಯವರ ಪತ್ನಿಯಾಗಿದ್ದಾರೆ.  
    ಇವರ ಬಳಿ ೨ ಎಕರೆ ೩೯ ಗುಂಟೆ ತೋಟವಿದ್ದು, ಒಟ್ಟು ಸುಮಾರು ೬೦ ಗ್ರಾಂ. ಚಿನ್ನಾಭರಣಗಳನ್ನು ಹೊಂದಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಪುತ್ರ  ಇದ್ದು, ೪ನೇ ತರಗತಿ ವ್ಯಾಸಂಗ ಮಾಡಿದ್ದಾರೆ. ಉಳಿದಂತೆ ಇವರ ಪತಿ ನಾಗರಾಜ್‌ರಾವ್ ಸಿಂಧೆ ಅವರ ಹೆಸರಿನಲ್ಲಿ ಬ್ಯಾಂಕಿನಲ್ಲಿ ೧೫ ಲಕ್ಷ ರೂ. ಠೇವಣಿ ಹಣ ಇದ್ದು, ಇದರ ಜೊತೆಗೆ ಬ್ಯಾಂಕ್ ಖಾತೆಯಲ್ಲಿ ಹೆಚ್ಚುವರಿಯಾಗಿ ೩ ಲಕ್ಷ ರು. ಇದೆ.
    ಏ.೧೮ರಂದು ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ :
    ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಮತ್ತು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಂಗೋಟೆ ರುದ್ರೇಶ್‌ರವರು ಏ.೧೮ರ ಮಂಗಳವಾರ ನಾಮಪತ್ರ ಸಲ್ಲಿಸುತ್ತಿದ್ದಾರೆ.
    ಅಂದು ನಾಮಪತ್ರ ಸಲ್ಲಿಕೆಗೆ ಎರಡು ಪಕ್ಷಗಳ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಶಾರದ ಅಪ್ಪಾಜಿ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪತ್ನಿಯಾಗಿದ್ದಾರೆ. ಪ್ರಮುಖ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ. ಮಂಗೋಟೆ ರುದ್ರೇಶ್ ಸಮಾಜವಾದಿ ನಾಯಕ, ನ್ಯಾಯವಾದಿ ದಿವಂಗತ ಮಂಗೋಟೆ ಮುರಿಗೆಪ್ಪನವರ ಪುತ್ರರಾಗಿದ್ದಾರೆ. ಪ್ರಮುಖ ಸಾಧು ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ.

ಐಪಿಎಲ್ ಟಿ-೨೦ ಕ್ರಿಕೆಟ್ ಬೆಟ್ಟಿಂಗ್ : ಪ್ರಕರಣ ದಾಖಲು

    ಭದ್ರಾವತಿ, ಏ. ೧೫ : ಕ್ಷೇತ್ರದಲ್ಲಿ ಪುನಃ ಕ್ರಿಕೆಟ್ ಬೆಟ್ಟಿಂಗ್ ದಂಧೆ ಹೆಚ್ಚಾಗುತ್ತಿದ್ದು, ಐಪಿಎಲ್ ಟಿ-೨೦ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಸಂಬಂಧ ಪ್ರಕರಣ ದಾಖಲಾಗಿದೆ.
    ಹೊಸಮನೆ ಮುಖ್ಯ ರಸ್ತೆ ಸಂತೆ ಮೈದಾನ ನಂದಿನಿ ಮಿಲ್ಕ್ ಪಾರ್ಲರ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಗಗನ್ ಮತ್ತಿತರರು ಐಪಿಎಲ್ ಟಿ-೨೦ ಕ್ರಿಕೆಟ್ ಜೂಜಾಟದಲ್ಲಿ ತೊಡಗಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಸೇವನೆ : ಎರಡು ಪ್ರತ್ಯೇಕ ಪ್ರಕರಣ ದಾಖಲು

    ಭದ್ರಾವತಿ, ಏ. ೧೫: ನಗರದ ಎರಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಸೇವನೆ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಾಗಿವೆ.
    ಮಾವಿನಕೆರೆ ಗ್ರಾಮದ ನಿವಾಸಿ ಕೆ. ಸಂದೀಪ್ ಎಂಬಾತ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಒಟ್ಟು ೧೮೦೦ ಎಂ.ಎಲ್ ಪ್ರಮಾಣದ ಅಂದಾಜು ೭೦೨ ರು. ಮೌಲ್ಯದ ಒಟ್ಟು ೨೦ ಮದ್ಯದ ಪೌಚ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
    ಮತ್ತೊಂದು ಪ್ರಕರಣದಲ್ಲಿ ಬೊಮ್ಮನಕಟ್ಟೆ ೨ನೇ ಡಿವಿಜನ್ ಟಿಪ್ಪು ಸರ್ಕಲ್ ಬಳಿ ಟೀ ಕ್ಯಾಂಟೀನ್ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಪೇಪರ್‌ಟೌನ್ ಠಾಣೆ ಪೊಲೀಸರು ದಾಳಿ ನಡೆಸಿ ೭ ಮದ್ಯ ತುಂಬಿದ ಪೌಚ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಪಪ್ರಚಾರಗಳಿಗೆ ಕಿವಿಗೊಡದೆ, ಬಿಜೆಪಿ ಅಭ್ಯರ್ಥಿ ಬೆಂಬಲಿಸಿ : ಬಿ.ವೈ ರಾಘವೇಂದ್ರ

ಭದ್ರಾವತಿ ತಾಲೂಕು ಭಾರತೀಯ ಜನತಾ ಪಕ್ಷದ ಮಂಡಲ ಕಛೇರಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿದರು.
    ಭದ್ರಾವತಿ, ಏ. ೧೫ : ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿವೆ. ಆದರೂ ಸಹ ಅಪಪ್ರಚಾರ ನಡೆಸಲಾಗುತ್ತಿದೆ. ಮತದಾರರು ಇವುಗಳಿಗೆ ಕಿವಿಗೊಡದೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಸಂಸದ ಬಿ.ವೈ ರಾಘವೇಂದ್ರ ಮನವಿ ಮಾಡಿದರು.
    ಅವರು ಶನಿವಾರ ಪಕ್ಷದ ತಾಲೂಕು ಮಂಡಲ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಕಳೆದ ೫ ವರ್ಷಗಳಲ್ಲಿ ಪಕ್ಷದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಎಲ್ಲರೂ ಸಹ ತಮ್ಮ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ನೂತನವಾಗಿ ತಾಲೂಕು ಮಂಡಲ ಕಛೇರಿ ನಿರ್ಮಾಣಗೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದರು.
    ಪಕ್ಷದವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಹಳಷ್ಟು ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಅಲ್ಲದೆ ಪಕ್ಷದ ಕಾರ್ಯಕರ್ತರ ಸಂಖ್ಯೆ ಸಹ ಹೆಚ್ಚಳವಾಗಿದ್ದು, ಸಂಘಟನಾತ್ಮಕವಾಗಿ ಕ್ರಿಯಾವಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಬಹಳ ಮಂದಿ ಪೈಪೋಟಿಗೆ ಮುಂದಾಗಿದ್ದರು. ಪಕ್ಷ ಅಧಿಕೃತವಾಗಿ ಮಂಗೋಟೆ ರುದ್ರೇಶ್‌ರವರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ. ಇವರ ಗೆಲುವಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ ಎಂದರು.
    ಕ್ಷೇತ್ರದಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಂದ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಯಾಚನೆ ನಡೆಸಬೇಕಾಗಿದೆ. ವಿಐಎಸ್‌ಎಲ್ ಮತ್ತು ಎಂಪಿಎಂ ಈ ಕಾರ್ಖಾನೆಗಳ ವಿಚಾರವಾಗಿರಲಿ ಪೂರಕವಾಗಿ ಸ್ಪಂದಿಸಲಾಗಿದೆ. ಇದರ ಕುರಿತು ಮತದಾರರಿಗೆ ಸರಿಯಾಗಿ ಮನವರಿಕೆ ಮಾಡಬೇಕಾಗಿದೆ.  ಕ್ಷೇತ್ರದಾದ್ಯಂತ ಕಾರ್ಯಕರ್ತರ ಪಡೆ ಈ ಬಾರಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಜಿಲ್ಲೆಯ ೭ ವಿಧಾನಸಭಾ ಕ್ಷೇತ್ರಗಳ ಪೈಕಿ ಈ  ವಿಧಾನಸಭಾ ಕ್ಷೇತ್ರದಲ್ಲೂ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.
    ಪಕ್ಷದ ಅಭ್ಯರ್ಥಿ ಮಂಗೋಟೆ ರುದ್ರೇಶ್ ಮಾತನಾಡಿ, ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿರುವುದಕ್ಕೆ ಪಕ್ಷದ ಮುಖಂಡರುಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಬಾರಿ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದು, ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
    ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಪಕ್ಷದ ಪ್ರಮುಖರಾದ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಚುನಾವಣಾ ಪ್ರಭಾರಿ ಅಶೋಕ್ ಮೂರ್ತಿ, ಚುನಾವಣಾ ಸಂಚಾಲಕ ಎಂ. ಮಂಜುನಾಥ್, ಸಹ ಸಂಚಾಲಕ ಎಂ.ಎಸ್ ಸುರೇಶಪ್ಪ, ಮುಖಂಡರಾದ ಕೆ.ಪಿ ಪವಿತ್ರ ರಾಮಯ್ಯ, ತೀರ್ಥಯ್ಯ, ಜಿ. ಆನಂದಕುಮಾರ್, ಕೆ.ವಿ ಸತೀಶ್‌ಗೌಡ, ಉಷಾ ಸತೀಶ್‌ಗೌಡ, ಅನುಪಮ, ಶಶಿಕಲಾ, ಚನ್ನೇಶ್, ಚಂದ್ರು, ಗೋಕುಲ್ ಕೃಷ್ಣ, ಧನುಷ್ ಬೋಸ್ಲೆ, ಬಿ.ಎಸ್ ಶ್ರೀನಾಥ್ ಆಚಾರ್, ಸಿ. ರಾಘವೇಂದ್ರ, ಕವಿತಾ ಸುರೇಶ್, ಕವಿತಾ ರಾವ್, ಸಂಪತ್‌ರಾಜ್ ಬಾಂಟಿಯಾ, ಅವಿನಾಶ್, ಸುನಿಲ್ ಗಾಯಕ್ವಾಡ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Friday, April 14, 2023

ಮೇಣದ ಬತ್ತಿ, ಪಂಜು ಬೆಳಗಿಸಿ ಜಾಥಾ ಮೂಲಕ ಮತದಾನ ಜಾಗೃತಿ, ಅರಿವು

ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಸೂಚನೆ ಮೇರೆಗೆ ಶುಕ್ರವಾರ ಸಂಜೆ ಭದ್ರಾವತಿ ನಗರಸಭೆ ಮುಂಭಾಗದಿಂದ ರಂಗಪ್ಪ ವೃತ್ತದವರೆಗೆ ಜಾಥಾ ಮೂಲಕ ಮತದಾರರಿಗೆ ಮತದಾನದ ಜಾಗೃತಿ ಮತ್ತು ಅರಿವು ಮೂಡಿಸುವ ಸ್ವೀಪ್ ಕಾರ್ಯಕ್ರಮ ನಡೆಯಿತು.
    ಭದ್ರಾವತಿ, ಏ. ೧೪ : ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಸೂಚನೆ ಮೇರೆಗೆ ಶುಕ್ರವಾರ ಸಂಜೆ ನಗರಸಭೆ ಮುಂಭಾಗದಿಂದ ರಂಗಪ್ಪ ವೃತ್ತದವರೆಗೆ ಜಾಥಾ ಮೂಲಕ ಮತದಾರರಿಗೆ ಮತದಾನದ ಜಾಗೃತಿ ಮತ್ತು ಅರಿವು ಮೂಡಿಸುವ ಸ್ವೀಪ್ ಕಾರ್ಯಕ್ರಮ ನಡೆಯಿತು.
    ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ರವಿಚಂದ್ರ ನಾಯಕ ನೇತೃತ್ವದಲ್ಲಿ ಮೇಣದ ಬತ್ತಿ ಹಾಗು ಪಂಜು ಬೆಳಗುವ ಮೂಲಕ ಜಾಥಾ ನಡೆಸಿ ಜಾಗೃತಿ ಮತ್ತು ಅರಿವು ಮೂಡಿಸಲಾಯಿತು.
    ಜಾಥಾದಲ್ಲಿ ನಗರಸಭೆ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಮತದಾನ ಜಾಗೃತಿ ಮೂಡಿಸುವ ಫಲಕಗಳನ್ನು ಹಿಡಿದು ಸಾಗಿದರು. ತಹಸೀಲ್ದಾರ್ ಸುರೇಶ್ ಆಚಾರ್, ಪೌರಾಯುಕ್ತ ಮನುಕುಮಾರ್,  ಪೊಲೀಸ್ ನಗರ ವೃತ್ತ ನಿರೀಕ್ಷಕ ಬಿ.ಪಿ ಶಾಂತಿನಾಥ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.