Thursday, April 27, 2023

ಬಿಜೆಪಿ ಅಭ್ಯರ್ಥಿಗೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ : ಎಸ್. ರುದ್ರೇಗೌಡ

ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ ಮಾತನಾಡಿದರು.
    ಭದ್ರಾವತಿ, ಏ. ೨೮: ಕೇಂದ್ರ ಹಾಗು ರಾಜ್ಯ ಸರ್ಕಾರದ ಯೋಜನೆಗಳು ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಈ ಬಾರಿ ಅಭ್ಯರ್ಥಿ ಗೆಲುವಿಗೆ ಸಹಯಾಗಲಿವೆ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಹೇಳಿದರು.
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಕ್ಷೇತ್ರದಾದ್ಯಂತ ಮತದಾರರಿಂದ ಅಭ್ಯರ್ಥಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರಚಾರ ಕಾರ್ಯದಲ್ಲೂ ವಿಭಿನ್ನವಾದ ರೂಪುರೇಷೆಗಳನ್ನು ಸಿದ್ದಪಡಿಸಲಾಗಿದೆ. ಅದರಂತೆ ಎಲ್ಲರೂ ಒಗ್ಗಟ್ಟಿನಿಂದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂದರು.
    ಅಭ್ಯರ್ಥಿ ಮಂಗೋಟೆ ರುದ್ರೇಶ್ ಮಾತನಾಡಿ, ಮುಖಂಡರು ಮತ್ತು ಕಾರ್ಯಕರ್ತರು ಪಕ್ಷದ ನಿರ್ದೇಶನದಂತೆ ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಚಾರ ಕಾರ್ಯ ಯಶಸ್ವಿಗೊಳಿಸುವ ನಿಟ್ಟಿನಲ್ಲೂ ಸಲಹೆ-ಸೂಚನೆಗಳನ್ನು ನೀಡಲಾಗುತ್ತಿದೆ. ಇನ್ನೂ ಹೆಚ್ಚಿನ ಪ್ರಚಾರ ಕೈಗೊಳ್ಳಲಾಗುವುದು ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಮುಖಂಡರಾದ ಉತ್ತರ ಕಾಂಡ್ ಜಿತೇಂದ್ರಸಿಂಗ್, ಸಿ. ಮಂಜುಳ, ಪವಿತ್ರ ರಾಮಯ್ಯ, ಜಿ. ಆನಂದಕುಮಾರ್, ವಾದಿರಾಜ್, ಚನ್ನೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಂಗಾಂಗ ದಾನ ಮಾಡಿ ಮಗನ ಸಾವಿನ ದುಃಖದಲ್ಲೂ ಸಾರ್ಥಕತೆ ಮೆರೆದ ಪೋಷಕರು

    ಭದ್ರಾವತಿ, ಏ. ೨೭ : ಮಗನ ಸಾವಿನ ದುಃಖದಲ್ಲೂ ಕುಟುಂಬವೊಂದು ೭ ಜನರಿಗೆ ಆತನ ಅಂಗಾಂಗ ದಾನ ಮಾಡಿ ಮಾದರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
    ತಾಲೂಕಿನ ಕೆಂಚನಹಳ್ಳಿ ನೀರಗುಂಡಿ ಗ್ರಾಮದ ನಿವಾಸಿಯಾಗಿರುವ ಉಲ್ಲಾಸ್(೨೧) ಇತ್ತೀಚೆಗೆ ನಗರದ ಚನ್ನಗಿರಿ ರಸ್ತೆಯಲ್ಲಿ ಸಂಭವಿಸಿದ  ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು,  ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ವೈದ್ಯರು ಈತನ ಜೀವ ಉಳಿಸಲು ಶಕ್ತಿಮೀರಿ ಪ್ರಯತ್ನಿಸಿದ್ದು, ಕೊನೆ ಹಂತದಲ್ಲಿ ಈತನ ಮೆದುಳು ನಿಷ್ಕ್ರಿಯಗೊಂಡಿರುವುದು ತಿಳಿದು ಬಂದಿದೆ.
    ಅಧಿಕೃತವಾಗಿ ಪರಿಣಿತ ವೈದ್ಯರ ತಂಡ  ಮೆದುಳು ನಿಷ್ಕ್ರೀಯತೆ ಬಗ್ಗೆ ಈತನ ಪೋಷಕರು ಮಾಹಿತಿ ನೀಡಿದ್ದು, ತಕ್ಷಣ ಪೋಷಕರು ಮಗನ ಅಂಗಾಂಗ ದಾನ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಪೋಷಕರ ಇಚ್ಚೆಯಂತೆ ಏಳು ಮಂದಿಗೆ ಅಂಗಾಂಗ ದಾನ ಮಾಡಿದ್ದು, ಉಲ್ಲಾಸ್ ಇವರ ಬದುಕಿಗೆ ಬೆಳಕಾಗಿ ಸಾವಿನಲ್ಲೂ ಸಾರ್ಥಕತೆ ಕಂಡುಕೊಂಡಿದ್ದಾರೆ.
    ಉಲ್ಲಾಸ್ ಶ್ವಾಸಕೋಶ ಚೆನ್ನೈನ ಅಪೊಲೊ ಆಸ್ಪತ್ರೆಗೆ, ಯಕೃತ್ ಬೆಂಗಳೂರಿನ ಅಸ್ಟರ್ ಸಿಎಂಐ ಆಸ್ಪತ್ರೆಗೆ, ಒಂದು ಮೂತ್ರಪಿಂಡ ಎಜೆ ಆಸ್ಪತ್ರೆ ಮಂಗಳೂರು ಮತ್ತು ಎರಡು ಕಾರ್ನಿಯಾಗಳು ಹಾಗೂ ಇನ್ನೊಂದು ಮೂತ್ರಪಿಂಡ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿನ ನೋಂದಾಯಿತ ರೋಗಿಗಳಿಗೆ ಕಸಿಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. 
--

ವಿಧಾನಸಭಾ ಚುನಾವಣೆ : ಜೆಡಿಎಸ್ ಅಭ್ಯರ್ಥಿಯಿಂದ ಗ್ರಾಮಾಂತರ ಭಾಗದಲ್ಲಿ ಅಬ್ಬರದ ಪ್ರಚಾರ

ಹಣದ ಮುಂದೆ ಸ್ವಾಭಿಮಾನಕ್ಕೆ ಗೆಲುವಾಗಲಿ : ಶಾರದ ಅಪ್ಪಾಜಿ

ಭದ್ರಾವತಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಗ್ರಾಮಾಂತರ ಭಾಗದಲ್ಲಿ ಕಳೆದ ೩-೪ ದಿನಗಳಿಂದ ಅಬ್ಬರದ ಪ್ರಚಾರದಲ್ಲಿ ತೊಡಗಿರುವ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿಯವರನ್ನು ಬಹುತೇಕ ಗ್ರಾಮಗಳಲ್ಲಿ ಗ್ರಾಮಸ್ಥರು ಆರತಿ ಬೆಳಗುವ ಮೂಲಕ ಸ್ವಾಗತಿಸಿದರು.
    ಭದ್ರಾವತಿ, ಏ. ೨೭ : ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಳೆದ ೩-೪ ದಿನಗಳಿಂದ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಕ್ಷೇತ್ರದ ಗ್ರಾಮಾಂತರ ಭಾಗದಲ್ಲಿ ಅದ್ದೂರಿಯಾಗಿ ಪ್ರಚಾರ ಕಾರ್ಯ ಕೈಗೊಳ್ಳುತ್ತಿದ್ದು, ಬಹುತೇಕ ಗ್ರಾಮಗಳಲ್ಲಿ ಗ್ರಾಮಸ್ಥರು ಅವರಿಗೆ ಆರತಿ ಬೆಳಗುವ ಮೂಲಕ ಅದ್ದೂರಿ ಸ್ವಾಗತ ಕೋರುತ್ತಿರುವುದು ಕಂಡು ಬರುತ್ತಿದೆ.
    ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರು ಗ್ರಾಮಾಂತರ ಭಾಗದಲ್ಲಿ ಹೆಚ್ಚಿನ ಜನ ಬೆಂಬಲ ಹೊಂದುವ ಜೊತೆಗೆ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಇಂದಿಗೂ ಸ್ಮರಿಸಿಕೊಳ್ಳುವ ಜೊತೆಗೆ ಈ ಬಾರಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ ಶಾರದ ಅಪ್ಪಾಜಿಯವರಿಗೆ ಬೆಂಬಲ ನೀಡುವ ಭರವಸೆ ನೀಡುತ್ತಿದ್ದಾರೆ. ಪ್ರತಿಯಾಗಿ ಶಾರದ ಅಪ್ಪಾಜಿ ಗ್ರಾಮಸ್ಥರು ತೋರುತ್ತಿರುವ ಪ್ರೀತಿಗೆ ಚಿರಋಣಿ ವ್ಯಕ್ತಪಡಿಸುವ ಮೂಲಕ ಮತಯಾಚಿಸುತ್ತಿದ್ದಾರೆ.


ಭದ್ರಾವತಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಗ್ರಾಮಾಂತರ ಭಾಗದಲ್ಲಿ ಕಳೆದ ೩-೪ ದಿನಗಳಿಂದ  ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಅಬ್ಬರದ ಪ್ರಚಾರದಲ್ಲಿ ತೊಡಗಿರುವುದು.
    ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೊಮ್ಮೇನಹಳ್ಳಿ, ಬೊಮ್ಮೇನಹಳ್ಳಿ ಹೊಸ ಬಡಾವಣೆ, ಕಾರೇಹಳ್ಳಿ, ಕೆಂಪೇಗೌಡನಗರ, ಬಾರಂದೂರು, ಕುಂಬಾರಗುಂಡಿ, ಹಳೇಬಾರಂದೂರು, ಬಾರಂದೂರು(ಬಿ.ಎಚ್ ರಸ್ತೆ), ಹಳ್ಳಿಕೆರೆ, ಅಪ್ಪಾಜಿ ಬಡಾವಣೆ, ಕಾಳಿಂಗಹಳ್ಳಿ, ಕೆಂಚೇನಹಳ್ಳಿ ಕಾಲೋನಿ, ನೀರುಗುಂಡಿ-ಕೆಂಚೇನಹಳ್ಳಿ, ಮಾವಿನಕೆರೆ, ಮಾವಿನಕೆರೆ ಕಾಲೋನಿ, ಹಡ್ಲಘಟ್ಟ, ಶಿವಪುರ, ಶ್ರೀನಿವಾಸಪುರ, ಕೆಂಚಮ್ಮನಹಳ್ಳಿ, ಉಕ್ಕುಂದ, ರತ್ನಾಪುರ, ಎರೇಹಳ್ಳಿ, ಭೋವಿಕಾಲೋನಿ, ಗಾಂಧಿನಗರ ತಾಷ್ಕೆಂಟ್‌ನಗರ, ಎರೇಹಳ್ಳಿ, ಮೊಸರಹಳ್ಳಿ, ಬಸಾಪುರ, ಗುಣಿ ನರಸೀಪುರ, ಮಾರತಿನಗರ, ಶಿವನಿಕ್ರಾಸ್, ಗೌರಾಪುರ, ಬಸವನಗುಡಿ, ಕೆ.ಎಚ್ ನಗರ, ದೇವರನರಸಿಪುರ, ಮೈಸೂರಮ್ಮನ ಕ್ಯಾಂಪ್, ಕಾಚಗೊಂಡನಹಳ್ಳಿ, ಅಂತರಗಂಗೆ, ಅಂತರಗಂಗೆ ಕ್ಯಾಂಪ್, ರಂಗನಾಥಪುರ, ಬಿಸಿಲುಮನೆ, ಸಿಕಂದರ್ ಕ್ಯಾಂಪ್, ಬಾಳೇಕಟ್ಟೆ, ದೊಡ್ಡೇರಿ, ನೆಟ್ಟಕಲ್ಲಹಟ್ಟಿ, ಗಂಗೂರು, ಶಿವಾಜಿಕ್ಯಾಂಪ್, ಉದಯನಗರ, ಬದನೆಹಾಳ್, ಬಂಡಿಗುಡ್ಡ, ಬೆಳ್ಳಿಗೆರೆ, ಸಾಬರಹಟ್ಟಿ, ಭೈರವನ ಕ್ಯಾಂಪ್, ನಂಜಾಪುರ, ಹೊಸ ನಂಜಾಪುರ, ಹಿರಿಯೂರು, ಹಳೇ ಹಿರಿಯೂರು, ಬಾಳೆ ಮಾರನಹಳ್ಳಿ, ಲಕ್ಷ್ಮೀಸಾಗರ-ರಬ್ಬರ್‌ಕಾಡು, ಸುಲ್ತಾನ್ ಮಟ್ಟಿ, ಹೊಳೆಗಂಗೂರು, ಚಿಕ್ಕಗೊಪ್ಪೇನಹಳ್ಳಿ, ಗೊಂದಿ, ತಾರೀಕಟ್ಟೆ, ಅರಳಿಕೊಪ್ಪ, ಕಾಳನಕಟ್ಟೆ, ಸಿದ್ದರಹಳ್ಳಿ, ಕಂಬದಾಳ್ ಹೊಸೂರು-ಹೊನ್ನಹಟ್ಟಿ, ಗೋಣಿಬೀಡು, ಮಲ್ಲಿಗೇನಹಳ್ಳಿ ಕ್ಯಾಂಪ್, ಕುವೆಂಪು ನಗರ, ದೊಡ್ಡಿ ಬೀಳು, ತಾವರಘಟ್ಟ, ಮಾಳೇನಹಳ್ಳಿ ನೆಲ್ಲಿಸರ, ಅಜೀಜ್ ಕ್ಯಾಂಪ್ ಕಾಲೋನಿ, ಶಂಕರಘಟ್ಟ-ಕುವೆಂಪು ವಿ.ವಿ, ಶಾಂತಿನಗರ, ಸಿಂಗಮನೆ, ಗ್ಯಾರೇಜ್ ಕ್ಯಾಂಪ್, ತಮ್ಮಡಿಹಳ್ಳಿ, ಹುಣಸೇಕಟ್ಟೆ-ಜಂಕ್ಷನ್, ಹುಳಿಯಾರು ರಾಮೇನಕೊಪ್ಪ ಮತ್ತು ಸಂಕ್ಲಿಪುರ ಸೇರಿದಂತೆ ಇನ್ನಿತರ ಗ್ರಾಮಾಂತರ ಪ್ರದೇಶಗಳಲ್ಲಿ  ಕಳೆದ ೩-೪ ದಿನಗಳಿಂದ ಮತಯಾಚನೆ ನಡೆಸಿದ್ದಾರೆ.
    ಶಾರದ ಅಪ್ಪಾಜಿಯೊಂದಿಗೆ ಪಕ್ಷದ ಹಿರಿಯರು, ಮಹಿಳೆಯರು, ಯುವಕರು ಸಹ ಕೈಜೋಡಿಸಿದ್ದು, ಮತಯಾಚನೆ ಕಾರ್ಯಕ್ಕೆ ಶಕ್ತಿ ತುಂಬುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕೆಂಬ ಆಶಯದೊಂದಿಗೆ ಒಗ್ಗಟ್ಟಿನಿಂದ ಶ್ರಮಿಸುತ್ತಿರುವುದು ಕಂಡು ಬರುತ್ತಿದೆ.

ಹಣದ ಮುಂದೆ ಸ್ವಾಭಿಮಾನಕ್ಕೆ ಗೆಲುವಾಗಲಿ : ಶಾರದ ಅಪ್ಪಾಜಿ

    ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರು ಇಲ್ಲದೆ ಚುನಾವಣೆ ಎದುರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಈ ಬಾರಿ ಅಪ್ಪಾಜಿ ಅಭಿಮಾನಿಗಳಿಗೆ, ಪಕ್ಷದ ಕಾರ್ಯಕರ್ತರಿಗೆ ಪ್ರತಿಷ್ಠೆ ಚುನಾವಣೆಯಾಗಿದೆ. ಹಣದ ಮುಂದೆ ಸ್ವಾಭಿಮಾನ ಗೆಲ್ಲಬೇಕಾಗಿದೆ ಶಾರದ ಅಪ್ಪಾಜಿ ಹೇಳಿದರು.


ಭದ್ರಾವತಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಗ್ರಾಮಾಂತರ ಭಾಗದಲ್ಲಿ ಕಳೆದ ೩-೪ ದಿನಗಳಿಂದ  ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಅಬ್ಬರದ ಪ್ರಚಾರದಲ್ಲಿ ತೊಡಗಿರುವುದು.
    ಕ್ಷೇತ್ರದ ಗೋಣಿಬೀಡು, ಮಲ್ಲಿಗೇನಹಳ್ಳಿ ಕ್ಯಾಂಪ್, ಕುವೆಂಪು ನಗರ, ದೊಡ್ಡಿ ಬೀಳು, ತಾವರಘಟ್ಟ, ಮಾಳೇನಹಳ್ಳಿ ನೆಲ್ಲಿಸರ, ಅಜೀಜ್ ಕ್ಯಾಂಪ್ ಕಾಲೋನಿ, ಶಂಕರಘಟ್ಟ-ಕುವೆಂಪು ವಿ.ವಿ, ಶಾಂತಿನಗರ, ಸಿಂಗಮನೆ, ಗ್ಯಾರೇಜ್ ಕ್ಯಾಂಪ್, ತಮ್ಮಡಿಹಳ್ಳಿ, ಹುಣಸೇಕಟ್ಟೆ-ಜಂಕ್ಷನ್ ಸೇರಿದಂತೆ ಇನ್ನಿತರ ಗ್ರಾಮಾಂತರ ಭಾಗದಲ್ಲಿ ಗುರುವಾರ ಮತಯಾಚನೆ ನಡೆಸಿ ಮಾತನಾಡಿದ ಅವರು, ಮಾಜಿ ಶಾಸಕರಾದ ದಿವಂಗತ ಎಂ.ಜೆ ಅಪ್ಪಾಜಿಯವರು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದರು. ದೀನದಲಿತರು, ಬಡವರು, ಶೋಷಿತರ ಪರವಾಗಿ ಧ್ವನಿಯಾಗಿದ್ದರು. ಸದಾ ಕಾಲ ಜನರ ಸೇವೆಯಲ್ಲಿ ತೊಡಗಿದ್ದರು. ಅವರ ದಾರಿಯಲ್ಲಿ ನಾನು ಸಹ ಸಾಗುವ ಭರವಸೆ ನೀಡುತ್ತಿದ್ದೇನೆ. ಪ್ರತಿಯೊಬ್ಬರಿಗೂ ಸ್ವಾಭಿಮಾನದ ಬದುಕು ಕಟ್ಟಿಕೊಡಬೇಕೆಂಬ ಆಶಯ ಹೊಂದಿದ್ದೇನೆ. ಈ ಹಿನ್ನಲೆಯಲ್ಲಿ ಹಣ ಬಲದ ಮುಂದೆ ಸ್ವಾಭಿಮಾನ ಗೆಲ್ಲಬೇಕು. ಅಪ್ಪಾಜಿಯವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು. ಈ ನಿಟ್ಟಿನಲ್ಲಿ ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.
    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ ಯೋಗೇಶ್, ಮಾಜಿ ಉಪಮೇಯರ್ ಮಹಮದ್ ಸನ್ನಾವುಲ್ಲಾ, ಮುಖಂಡರಾದ ಕರಿಯಪ್ಪ, ಎನ್. ಕೃಷ್ಣಪ್ಪ, ತಿಮ್ಮೇಗೌಡ, ತ್ಯಾಗರಾಜ್ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.

Wednesday, April 26, 2023

ಆರೋಗ್ಯ ಸ್ವಾಮಿ ನಿಧನ

ಆರೋಗ್ಯ ಸ್ವಾಮಿ
    ಭದ್ರಾವತಿ, ಏ. ೨೬: ನ್ಯೂಟೌನ್ ನಿವಾಸಿ, ವಿಐಎಸ್‌ಎಲ್ ನಿವೃತ್ತ ಕಾರ್ಮಿಕ ಆರೋಗ್ಯ ಸ್ವಾಮಿ(೭೬) ಬುಧವಾರ ಮಧ್ಯಾಹ್ನ ನಿಧನ ಹೊಂದಿದರು.
    ಪತ್ನಿ ಹಾಗು ಭದ್ರಾವತಿ ಪೀಪಲ್ ಲಿಬರೇಷನ್(ಬಿಪಿಎಲ್) ಸಂಘದ ಉಪಾಧ್ಯಕ್ಷ ವಿಲಿಯಂ ಸಂಪತ್‌ಕುಮಾರ್ ಸೇರಿದಂತೆ ಮೂವರು ಪುತ್ರರು, ಓರ್ವ ಪುತ್ರಿ ಇದ್ದರು. ಇವರ ಅಂತ್ಯಕ್ರಿಯೆ ಗುರುವಾರ ನಡೆಯಲಿದ್ದು, ಇವರ ನಿಧನಕ್ಕೆ ಬಿಪಿಎಲ್ ಸಂಘ ಸಂತಾಪ ಸೂಚಿಸಿದೆ.

ಚುನಾವಣೆಯಲ್ಲಿ ಶಾಸಕ ಸಂಗಮೇಶ್ವರ್‌ಗೆ ಬೆಂಬಲವಿಲ್ಲ : ಸುರೇಶ್

ಭದ್ರಾವತಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮಾಜ ಸೇವಕ, ಛಲವಾದಿ ಸಮಾಜದ ಜಿಲ್ಲಾಧ್ಯಕ್ಷ ಸುರೇಶ್ ಮಾತನಾಡಿದರು. 
    ಭದ್ರಾವತಿ, ಏ. ೨೬ : ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಈ ಹಿಂದೆ ಶಾಸಕ ಬಿ.ಕೆ ಸಂಗಮೇಶ್ವರ್ ಅವರಿಗೆ ಬೆಂಬಲ ನೀಡಲಾಗಿತ್ತು. ಆದರೆ ನನ್ನ ನಿರೀಕ್ಷೆಯಂತೆ ಅವರು ನಡೆದುಕೊಂಡಿಲ್ಲ. ಈ ಹಿನ್ನಲೆಯಲ್ಲಿ ಈ ಬಾರಿ ಚುನಾವಣೆಯಲ್ಲಿ ಅವರಿಗೆ ಬೆಂಬಲ ನೀಡುವುದಿಲ್ಲ ಎಂದು ಸಮಾಜ ಸೇವಕ, ಛಲವಾದಿ ಸಮಾಜದ ಜಿಲ್ಲಾಧ್ಯಕ್ಷ ಸುರೇಶ್ ಹೇಳಿದರು.
    ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಗಮೇಶ್ವರ್‌ರವರು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಈ ಹಿನ್ನಲೆಯಲ್ಲಿ ಅವರಿಗೆ ಬೆಂಬಲ ಸೂಚಿಸಲಾಯಿತು. ಸುಮಾರು ೪ ಚುನಾವಣೆಯಲ್ಲಿ ಅವರಿಗೆ ನೀಡಿದರೂ ಸಹ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಕ್ಷೇತ್ರದಲ್ಲಿ ಇಂದಿಗೂ  ರೌಡಿಗಳ ಹಾವಳಿ ಇದ್ದು, ಇಸ್ಪೀಟ್, ಮಟ್ಕಾ ಸೇರಿದಂತೆ ಜೂಜಾಟ ದಂಧೆ ಮಿತಿ ಮೀರಿದೆ. ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳು ಅವನತಿ ದಾರಿ ಹಿಡಿದಿವೆ. ಕ್ಷೇತ್ರದಲ್ಲಿ ಹೆಚ್ಚಿನ ವೈದ್ಯಕೀಯ ಸೇವೆ ಲಭ್ಯವಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಬೆಳವಣಿಗೆಯಾಗಿಲ್ಲ. ನಾನು ನಿರೀಕ್ಷಿಸಿದಂತೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯಾಗಿಲ್ಲ. ಈ ಹಿನ್ನಲೆಯಲ್ಲಿ ಸಂಗಮೇಶ್ವರ್ ಅವರಿಗೆ ನೀಡಿರುವ ಬೆಂಬಲ ಹಿಂಪಡೆಯುವುದಾಗಿ ಸ್ಪಷ್ಟಪಡಿಸಿದರು.
    ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸುವ ಅಭ್ಯರ್ಥಿಗೆ ಈ ಬಾರಿ ನನ್ನ ಬೆಂಬಲವಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಚುನಾವಣೆಯಲ್ಲಿ ಆಯ್ಕೆಮಾಡಿದ್ದಲ್ಲಿ ನಾನೇ ಮುಖ್ಯಮಂತ್ರಿ : ಪಕ್ಷೇತರ ಅಭ್ಯರ್ಥಿ ಬಿ.ಎನ್ ರಾಜು

ಭದ್ರಾವತಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ, ಪಕ್ಷೇತರ ಅಭ್ಯರ್ಥಿ ಬಿ.ಎನ್ ರಾಜು ಮಾತನಾಡಿದರು.
    ಭದ್ರಾವತಿ, ಏ. ೨೬ : ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಮತದಾರರು ನನ್ನನ್ನು ಆಯ್ಕೆಮಾಡಿದ್ದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುವ ವಿಶ್ವಾಸವಿದೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎನ್ ರಾಜು ಹೇಳಿದರು.
    ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನನ್ನ ಗುರುತು ಕ್ರಮ ಸಂ. ೧೦ ಟಿ.ವಿ(ದೂರದರ್ಶನ) ಆಗಿದ್ದು, ಕಳೆದ ಸುಮಾರು ೩೦ ವರ್ಷಗಳಿಂದ ದೀನದಲಿತರ, ರೈತರ, ಕಾರ್ಮಿಕರ, ಬಡವರ ಬೆನ್ನೆಲುಬಾಗಿ ನಿರಂತರ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದೇನೆ. ಹೋರಾಟ ಎಂದಿಗೂ ದುರ್ಬಳಕೆ ಮಾಡಿಕೊಂಡಿಲ್ಲ. ರಾಜೀರಹಿತ ಹೋರಾಟ ನನ್ನದಾಗಿದೆ ಎಂದರು.  
    ೨೦೧೩ರಲ್ಲಿ ಶಿವಮೊಗ್ಗದಿಂದ ಬೆಂಗಳೂರಿನವರೆಗೆ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಹಾಗು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪಾದಯಾತ್ರೆ ನಡೆಸಲಾಗಿದ್ದು, ಡಿ.೧೦, ೨೦೨೨ರಿಂದ ಮಾನವಹಕ್ಕುಗಳ ದಿನಾಚರಣೆ ಅಂಗವಾಗಿ ಉಪ್ಪಿನ ರುಣಕ್ಕಾಗಿ ಪಾದಯಾತ್ರೆ ಕೈಗೊಂಡಿದ್ದೇನೆ. ಕ್ಷೇತ್ರದ ನೂರಾರು ಹಳ್ಳಿಗಳಲ್ಲಿ ಹಾಗೂ ನಗರಸಭೆ ವ್ಯಾಪ್ತಿಯ ೩೫ ವಾರ್ಡ್‌ಗಳಲ್ಲಿ ಪ್ರತಿ ಮನೆ ಮನೆಗೆ ತೆರಳಿ ಉಪ್ಪನ್ನು ಸಂಗ್ರಹಿಸಿ ಸುಮಾರು ೪೭ ದಿನಗಳ ಕಾಲ ೫೧೦ಕಿ.ಮೀ. ಪಾದಯಾತ್ರೆ  ಮೂಲಕ ಹೋರಾಟ ನಡೆಸಿದ್ದೇನೆ ಎಂದರು.
    ನಗರದ ಬಿ.ಹೆಚ್ ರಸ್ತೆ ತಿಮ್ಮಯ್ಯ ಮಾರ್ಕೆಟ್ ಅಕ್ರಮ ನೆಲ ಸಮ ಖಂಡಿಸಿ ೨೦೦೯ರಲ್ಲಿ ಸುಮಾರು ೫೨೩ ದಿನಗಳು ಹಗಲು-ರಾತ್ರಿ ಸತ್ಯಾಗ್ರಹ ನಡೆಸಿದ್ದೇನೆ. ಡಾ. ಬಿ.ಆರ್ ಅಂಬೇಡ್ಕರ್ ಭವನ ನಗರದ ಕೇಂದ್ರ ಭಾಗವಾದ ಕನಕ ಮಂಟಪ ಸಮೀಪ ನಿರ್ಮಾಣಗೊಳ್ಳಲು ಪ್ರಮುಖ ಕಾರಣಕರ್ತನಾಗಿದ್ದೇನೆ. ೧೦೦ ದಿನ ಉದ್ಯೋಗ ಖಾತ್ರಿ ಕೆಲಸ ನೀಡದ ಎಲ್ಲಾ ಪಂಚಾಯಿತಿಗಳ ವಿರುದ್ಧ, ನಿವೇಶನ ರಹಿತರ ಬಡ ಜನರ ಬಗ್ಗೆ ಪಡಿತರ ಚೀಟಿ ಇತರೆ ಸಮಸ್ಯೆಗಳ ಬಗ್ಗೆ ನಿರಂತರ ಹೋರಾಟ ನಡೆಸಿದ್ದೇನೆ. ಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ದಿಗಾಗಿ ನಿರಂತರ ಹೋರಾಟ ಹಾಗು ಮಾನವ ಹಕ್ಕುಗಳ ಸಂವಿಧಾನ ಹಕ್ಕುಗಳ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದು, ೨೦೧೮ರಲ್ಲಿ ವಿಧಾನಸಭೆ ಚುನಾವಣಿಯಲ್ಲಿ ಸ್ಪರ್ಧಿಸಿದ್ದು, ಇದೀಗ ೨ನೇ ಬಾರಿಗೆ ಚುನಾವಣಿಗೆ ಸ್ಪರ್ಧಿಸಿದ್ದೇನೆ ಎಂದರು.
    ಕ್ಷೇತ್ರದಲ್ಲಿ ಅನೇಕ ಮಹನೀಯರು ಶಾಸಕರಾಗಿ ಸೇವೆ ಸಲ್ಲಿಸಿದ್ದು, ಇದುವರೆಗೂ ಯಾರು ಸಹ ಮಂತ್ರಿಯಾಗದೆ ಅವಮಾನಗೊಂಡಿರುವುದು ದುರ್ದೈವದ ಸಂಗತಿಯಾಗಿದೆ. ಈ ಬಾರಿ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಕಂಡು ಬರುತ್ತಿದ್ದು, ಯಾವುದೇ ಪಕ್ಷ ಪೂರ್ಣ ಬಹುಮತ ಪಡೆಯಲು ಸಾಧ್ಯವಿಲ್ಲದಿರುವ ಕಾರಣದಿಂದ ಸ್ವಂತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಾನು ಆಯ್ಕೆಯಾದರೆ ಎಲ್ಲಾ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಸಾಧ್ಯವಾದರೆ ರಾಜ್ಯದ ಮುಖ್ಯ ಮಂತ್ರಿ ಸ್ಥಾನ ಪಡೆಯಲು ಪ್ರಯತ್ನಿಸಲಾಗುವುದು. ಇದು ಆಶ್ಚರ್ಯಪಡುವ ಸಂಗತಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವೂ ಸಾಧ್ಯ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಪ್ರಧಾನ ಸಂಚಾಲಕ ಶ್ರೀನಿವಾಸ್, ಸಂಚಾಲಕ ವೀರೇಶ್, ಕಾರ್ಯದರ್ಶಿ ಅಜಿತ್, ಅಜಯ್ ಉಪಸ್ಥಿತರಿದ್ದರು.

Tuesday, April 25, 2023

ತುಮಕೂರಿನ ಯುವಕ ಭದ್ರಾನದಿಯಲ್ಲಿ ಮುಳುಗಿ ಸಾವು

    ಭದ್ರಾವತಿ, ಏ. ೨೫: ಸೋದರ ಮಾವ ನಿಧನರಾದ ಹಿನ್ನೆಲೆಯಲ್ಲಿ ತುಮಕೂರಿನಿಂದ ನಗರಕ್ಕೆ ಬಂದಿದ್ದ ಯುವಕ ಭದ್ರಾನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
    ಸಮೀರ್ (೨೦) ಮೃತ ಯುವಕ ಈತ ಕಳೆದ ೧೫ ದಿನಗಳ ಹಿಂದೆ ಸೋದರ ಮಾವ ನಿಧನರಾದ ಕಾರಣ ನಗರದ ಖಾಜೀ ಮೊಹಲ್ಲಾದಲ್ಲಿರುವ ಅಜ್ಜಿ ಮನೆಗೆ ಬಂದಿದ್ದ. ರಂಜಾನ್ ಹಬ್ಬ ಮುಗಿಸಿಕೊಂಡು ಊರಿಗೆ ಹೋಗುವಂತೆ ಮನೆಯವರೆಲ್ಲ ಹೇಳಿದ್ದರಿಂದ ಇಲ್ಲಿಯೇ ಉಳಿದಿದ್ದ. ಸೋಮವಾರ ಮಧ್ಯಾಹ್ನ ೩.೪೦ಕ್ಕೆ ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುವ ರೈಲಿನಲ್ಲಿ ತುಮಕೂರಿಗೆ ಪ್ರಯಾಣಿಸಬೇಕಿತ್ತು. ಆದರೆ ಬೆಳಗ್ಗೆ ಸ್ನೇಹಿತರೊಂದಿಗೆ ಮನೆಯ ಹತ್ತಿರವಿದ್ದ ಭದ್ರಾನದಿಗೆ ಈಜಲು ತೆರಳಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.