Thursday, May 11, 2023

ಭಾರಿ ಗಾಳಿ ಮಳೆಗೆ ಧರೆಗುರುಳಿ ಬಿದ್ದ ಮರಗಳು, ಹಾರಿ ಹೋದ ತಗಡಿನ ಮೇಲ್ಛಾವಣಿ

ಭದ್ರಾವತಿಯಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಡಬಲ್ ರಸ್ತೆಯಲ್ಲಿ ಮರ ಉರುಳಿ ಬಿದ್ದಿದ್ದು, ಕೊಂಬೆಗಳು ಮುರಿದು ಬಿದ್ದಿವೆ.
ಭದ್ರಾವತಿ, ಮೇ. ೧೧: ಕ್ಷೇತ್ರದಲ್ಲಿ ಬುಧವಾರ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಕೆಲವೆಡೆ ಮರಗಳು ಧರೆಗುರುಳಿದ್ದು, ಮತ್ತೆ ಕೆಲವೆಡೆ  ಮರದ ಕೊಂಬೆಗಳು ಮುರಿದು ಬಿದ್ದಿರುವ ಘಟನೆ ನಡೆದಿದೆ.
ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಡಬಲ್ ರಸ್ತೆಯಲ್ಲಿ ಮರ ಉರುಳಿ ಬಿದ್ದಿದ್ದು, ಕೊಂಬೆಗಳು ಮುರಿದು ಬಿದ್ದಿವೆ. ಹುಡ್ಕೋ ಕಾಲೋನಿಯಲ್ಲಿ ಮನೆಯೊಂದರ ಮುಂಭಾಗ ತೆಂಗಿನ ಮರ ಉರುಳಿ ಬಿದ್ದಿದ್ದು, ಇದೆ ರೀತಿ ಹಲವೆಡೆ ಗಾಳಿ ಮಳೆಗೆ ಮರಗಳು ಧರೆಗುರುಳಿ ಬಿದ್ದಿವೆ. ಉಜ್ಜನಿಪುರದಲ್ಲಿ ಮನೆಯೊಂದರ ತಗಡಿನ ಮೇಲ್ಛಾವಣಿ ಹಾರಿ ಹೋಗಿರುವ ಘಟನೆ ನಡೆದಿದೆ.


ಭದ್ರಾವತಿ ಉಜ್ಜನಿಪುರದಲ್ಲಿ ಮನೆಯೊಂದರ ತಗಡಿನ ಮೇಲ್ಛಾವಣಿ ಹಾರಿ ಹೋಗಿರುವುದು.
    ಸಂಜೆ ೪.೩೦ ರಿಂದ ಸುಮಾರ ೧ ತಾಸು ಸುರಿದ ಗಾಳಿಮಳೆಯಿಂದಾಗಿ ಮತದಾರರು ಮತದಾನ ಮಾಡಲು ಪರದಾಡುವಂತಾಯಿತು. ಕೆಲವು ಮತಗಟ್ಟೆಗಳಲ್ಲಿ ಗಾಳಿ ಮಳೆಯಿಂದ ಸೋರಿಕೆ ಉಂಟಾಗಿದ್ದು, ಮಳೆಯಲ್ಲಿಯೇ ಮತದಾರರು ಮತದಾನ ಮಾಡುವ ಸ್ಥಿತಿ ಕಂಡು ಬಂದಿತು. ಗುರುವಾರ ಸಂಜೆ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ.

ವಿಧಾನಸಭಾ ಚುನಾವಣೆ : ಕಳೆದ ಬಾರಿಗಿಂತ ಕಡಿಮೆ ಮತದಾನ, ಫಲ ನೀಡದ ಜಾಗೃತಿ

೭೫,೭೧೫ ಪುರುಷ, ೭೮,೧೪೮ ಮಹಿಳಾ 

ಒಟ್ಟು ೧,೫೩,೯೦೦ ಮತದಾರರು ಹಕ್ಕು ಚಲಾವಣೆ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ ಎಸ್. ಮಹಾದೇವರವರು ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
    ಭದ್ರಾವತಿ, ಮೇ. ೧೧ : ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಒಟ್ಟು ೨,೧೨,೧೬೫ ಮತದಾರರಲ್ಲಿ ೧,೫೩,೯೦೦ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು,  ಒಟ್ಟಾರೆ ೭೨.೫೪ರಷ್ಟು ಮತದಾನವಾಗಿದೆ.
    ೧,೦೩,೧೯೮ ಪುರುಷ ಮತದಾರರ ಪೈಕಿ ೭೫,೭೧೫ ಮಂದಿ ಶೇ.೭೩.೩೭ರಷ್ಟು ಮತ್ತು ೧,೦೮,೯೬೨ ಮಹಿಳಾ ಮತದಾರರ ಪೈಕಿ ೭೮,೧೮೪ ಮಂದಿ ಶೇ.೭೧.೭೫ರಷ್ಟು ಹಾಗು ಇತರೆ ೧ ಸೇರಿ ಒಟ್ಟು ೧,೫೩,೯೦೦ ಮಂದಿ ಶೇ.೭೨.೫೪ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತದಾನದಲ್ಲಿ ಪುರುಷ ಮತದಾರರು ಮೇಲುಗೈ ಸಾಧಿಸಿದ್ದಾರೆ.
    ಕಳೆದ ಬಾರಿಗಿಂತ ಕಡಿಮೆ ಮತದಾನ :
    ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಮತದಾನವಾಗಿದ್ದು, ೨೦೧೮ರಲ್ಲಿ  ಚುನಾವಣೆಯಲ್ಲಿ ೭೩.೫೯ರಷ್ಟು ಮತದಾನ ನಡೆದಿದ್ದು, ಈ ಬಾರಿ ೭೨.೫೪ರಷ್ಟು ಕಡಿಮೆ ಮತದಾನ ನಡೆದಿದೆ.  
ಈ ಹಿಂದಿನ ೪ ಚುನಾವಣೆಗಳು ಹಾಗು ಪ್ರಸ್ತುತ ಚುನಾವಣೆ ಸೇರಿದಂತೆ ಒಟ್ಟು ೫ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಶೇ.೭೫ರ ಗುರಿ ತಲುಪಿಲ್ಲ. ಈ ಬಾರಿ ಹೆಚ್ಚಿನ ಗುರಿ ಸಾಧಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹೆಚ್ಚಿನ ಗಮನ ಹರಿಸಿತ್ತು. ಕಳೆದ ಕೆಲವು ತಿಂಗಳಿನಿಂದ ನಿರಂತರವಾಗಿ ವಿವಿಧ ಕಾರ್ಯಕ್ರಮಗಳ ಆಯೋಜನೆ ಮೂಲಕ ಮತದಾನ ಜಾಗೃತಿ ಮೂಡಿಸಿತ್ತು. ಆದರೆ ನಿರೀಕ್ಷೆಯಂತೆ ಹೆಚ್ಚಿನ ಗುರಿ ತಲುಪಿಲ್ಲ.
    ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ.೭೯.೫೯ರಷ್ಟು ಮತದಾನ :
    ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೫ ಮತಗಟ್ಟೆಗಳ ಒಟ್ಟು ೩,೮೯೬ ಮತದಾರರ ಪೈಕಿ ೩೧೦೧ ಮತದಾರರು ಒಟ್ಟು ಶೇ.೭೯.೫೯ರಷ್ಟು ಮತದಾನವಾಗಿದೆ ಎನ್ನಲಾಗಿದೆ.
    ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ ಎಸ್. ಮಹಾದೇವರವರು ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಮೇ.೧೨ರಂದು ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯಸ್ವಾಮಿ ಮಹಾರಥೋತ್ಸವ

    ಭದ್ರಾವತಿ, ಮೇ. ೧೧: ತಾಲೂಕು ಕಛೇರಿ ರಸ್ತೆಯಲ್ಲಿರುವ ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮೇ.೧೨ರಂದು ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯ ಸ್ವಾಮಿ ಮಹಾರಥೋತ್ಸವ ನಡೆಯಲಿದೆ.
    ಗುರುವಾರ ಬೆಳಿಗ್ಗೆ ಗುರು ಗಣಪತಿ ಪೂಜೆ, ಪುಣ್ಯಾಹ ದೇವನಾಂದಿ ಪಣ್ಣಾರಿಕೇಳ ಗಣಯಾಗ ಧ್ವಜಾರೋಹಣ, ಕೌತುಕ ಬಂಧನ, ಅಂಕುರಾರ್ಪಣ, ಸಂಜೆ ಬೇರಿತಾಡನ, ಅಗ್ನಿಜನನ ಹೋಮ, ಆಧಿವಾಸ ಹೋಮ, ಉತ್ಸವ, ಬಲಿದಾನ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಮೇ.೧೨ರ ಬೆಳಿಗ್ಗೆ ನವಗ್ರಹ ಹೋಮ, ಆದಿವಾಸ ಹೋಮ, ರಥ ಶುದ್ಧಿ ಹೋಮ, ರಥಾಧಿವಾಸ ಹೋಮ, ಶ್ರೀ ಸ್ವಾಮಿಯ ರಥಾರೋಹಣ, ಮಧ್ಯಾಹ್ನ ೧೨ ಗಂಟೆಗೆ ದೇವಸ್ಥಾನ ಮುಂಭಾಗದಿಂದ ಮಹಾರಥೋತ್ಸವ ಆರಂಭಗೊಂಡು ರಂಗಪ್ಪ ವೃತ್ತ ಹಾಗು ಅಂಬೇಡ್ಕರ್ ವೃತ್ತದವರೆಗೂ ಸಾಗಲಿದೆ. ಸಂಜೆ ರಥಾವರೋಹಣ, ಅಷ್ಟಾವಧಾನ ಸೇವೆ, ಶಯನೋತ್ಸವ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ. ಮಧ್ಯಾಹ್ನ ೧೨.೩೦ಕ್ಕೆ ಅನ್ನಸಂತರ್ಪಣೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ದೇವಸ್ಥಾನ ಸೇವಾ ಸಮಿತಿ ಕೋರಿದೆ.

Wednesday, May 10, 2023

ಅಭ್ಯರ್ಥಿಗಳಿಂದ ಕೃತಜ್ಞತೆ


ಭದ್ರಾವತಿ, ಮೇ. ೧೦ : ಈ ಬಾರಿ ವಿಧಾನಸಭಾ ಚುನಾವಣೆ ಮತದಾನದಲ್ಲಿ ಪಾಲ್ಗೊಂಡು ಮತದಾನ ಮಾಡುವ ಮೂಲಕ ಹಕ್ಕು ಚಲಾಯಿಸಿದ ಮತದಾರರಿಗೆ ಹಾಗು ಚುನಾವಣೆಯಲ್ಲಿ ಶ್ರಮಿಸಿರುವ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಹಾಗು ಅಭಿಮಾನಿಗಳಿಗೆ ಅಭ್ಯರ್ಥಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.
ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ, ಕಾಂಗ್ರೆಸ್ ಅಭ್ಯರ್ಥಿ ಶಾಸಕ ಬಿ.ಕೆ ಸಂಗಮೇಶ್ವರ್ ಕ್ಷೇತ್ರದ ಸಮಸ್ತ ಮತದಾರರಿಗೆ ಹಾಗು ಮತದಾನ ಶಾಂತಿಯುತವಾಗಿ ಮುಕ್ತಾಯಗೊಳ್ಳಲು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ವಿಧಾನಸಭಾ ಚುನಾವಣೆ ಮತದಾನ : ಬೆಳಿಗ್ಗೆ ನೀರಸ, ಮಧ್ಯಾಹ್ನ ಏರಿಕೆ

ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಂದ ಮತ ಚಲಾವಣೆ : ಶೇ.೭೦ರಷ್ಟು ಮತದಾನ

ಭದ್ರಾವತಿಯಲ್ಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬುಧವಾರ ಗ್ರಾಮಾಂತರ ಭಾಗದಲ್ಲಿ ಮತದಾರರು ಸರದಿ ಸಾಲಿನಲ್ಲಿ ನಿಂತು ಮತಚಲಾಯಿಸಿದರು.
    ಭದ್ರಾವತಿ, ಮೇ. ೧೦: ಈ ಬಾರಿ ವಿಧಾನಸಭಾ ಚುನಾವಣೆ ಮತದಾನ ಬುಧವಾರ ಕ್ಷೇತ್ರದಾದ್ಯಂತ ಶಾಂತಿಯುತವಾಗಿ ನಡೆದಿದ್ದು, ಬೆಳಿಗ್ಗೆ ೭ ಗಂಟೆಯಿಂದ ಆರಂಭಗೊಂಡ ಮತದಾನ ೧೧ ಗಂಟೆವರೆಗೂ ಮಂದಗತಿಯಲ್ಲಿ ನಡೆದಿದ್ದು, ನಂತರ ಮತಗಟ್ಟೆಗಳಲ್ಲಿ ಜನಸಂದಣಿ ಕಂಡು ಬಂದಿತು. ಸಂಜೆ ವೇಳೆಗೆ ಶೇ.೭೦ರಷ್ಟು ಮತದಾರರು ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. 
    ನಗರಸಭೆ ವ್ಯಾಪ್ತಿಯಲ್ಲಿ ಬೆಳಿಗ್ಗೆ ೧೧ ಗಂಟೆವರೆಗೆ ಮತಗಟ್ಟೆಗಳಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕಂಡ ಬಂದಿದ್ದು, ಆದರೆ ಗ್ರಾಮಾಂತರ ಭಾಗದಲ್ಲಿ ಬೆಳಿಗ್ಗೆಯಿಂದಲೇ ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.


ಭದ್ರಾವತಿಯಲ್ಲಿ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿಯವರು ತಮ್ಮ ನಿವಾಸದ ಸಮೀಪದಲ್ಲಿರುವ ಹುತ್ತಾಕಾಲೋನಿ ಮತಗಟ್ಟೆ ೧೩೬ರಲ್ಲಿ ಬೆಳಿಗ್ಗೆ ೯ ಗಂಟೆ ಸಮಯದಲ್ಲಿ ಮತ ಚಲಾಯಿಸಿದರು. ಇವರ ಪುತ್ರಿ ಅರ್ಪಿತಾ ಹಾಗು ಪಕ್ಷದ ಏಜೆಂಟ್ ಎನ್. ರಾಮಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
     ಈ ನಡುವೆ ಸಂಜೆ ೪ ಗಂಟೆ ಸುಮಾರಿಗೆ ಏಕಾಏಕ ಗಾಳಿ ಮಳೆಯಾಗಿದ್ದು, ಕೆಲವೆಡೆ ಮಳೆಗೆ ಮರಗಳು ನೆಲಕ್ಕುರುಳಿ ಬಿದ್ದಿವೆ. ೫ ಗಂಟೆ ವೇಳೆಗೆ ಮಳೆ ಕಡಿಮೆಯಾಗಿದ್ದು, ಕೊನೆ ಘಳಿಗೆಯಲ್ಲಿ ಮತಗಟ್ಟೆಗಳಿಗೆ ಮತದಾರರು ಆಗಮಿಸಿ ಮತ ಚಲಾಯಿಸಿದರು. 


ಭದ್ರಾವತಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ನಗರಸಭೆ ಕಛೇರಿ ಮತಗಟ್ಟೆ ೧೦೬ರಲ್ಲಿ ಸಂಜೆ ೪.೩೦ರ ಸಮಯದಲ್ಲಿ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಮತ ಚಲಾಯಿಸಿದರು. 
    ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿಯವರು ತಮ್ಮ ನಿವಾಸದ ಸಮೀಪದಲ್ಲಿರುವ ಹುತ್ತಾಕಾಲೋನಿ ಮತಗಟ್ಟೆ ೧೩೬ರಲ್ಲಿ ಬೆಳಿಗ್ಗೆ ೯ ಗಂಟೆ ಸಮಯದಲ್ಲಿ ಮತ ಚಲಾಯಿಸಿದರು. ಇವರ ಪುತ್ರಿ ಅರ್ಪಿತಾ ಹಾಗು ಪಕ್ಷದ ಏಜೆಂಟ್ ಎನ್. ರಾಮಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಂಗೋಟೆ ರುದ್ರೇಶ್ ನಗರಸಭೆ ಕಛೇರಿ ಮತಗಟ್ಟೆ ೧೦೬ರಲ್ಲಿ ಬೆಳಿಗ್ಗೆ ೯.೩೦ರ ಸಮಯದಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು. ಇವರ ತಾಯಿ ರತ್ನಮ್ಮ ಮುರಿಗೆಪ್ಪ, ಪತ್ನಿ ಶಾಂತಲಾ ಹಾಗು ಸಹೋದರಿ ಶೈಲಜಾ ಉಪಸ್ಥಿತರಿದ್ದರು.


ಭದ್ರಾವತಿಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಂಗೋಟೆ ರುದ್ರೇಶ್ ನಗರಸಭೆ ಕಛೇರಿ ಮತಗಟ್ಟೆ ೧೦೬ರಲ್ಲಿ ಬೆಳಿಗ್ಗೆ ೯.೩೦ರ ಸಮಯದಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು. ಇವರ ತಾಯಿ ರತ್ನಮ್ಮ ಮುರಿಗೆಪ್ಪ, ಪತ್ನಿ ಶಾಂತಲಾ ಹಾಗು ಸಹೋದರಿ ಶೈಲಜಾ ಉಪಸ್ಥಿತರಿದ್ದರು.
    ಇಬ್ಬರು ಅಭ್ಯರ್ಥಿಗಳು ಮತ ಚಲಾಯಿಸಿದ ನಂತರ ಮಾತನಾಡಿ, ಕ್ಷೇತ್ರದಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ. ಎಲ್ಲರೂ ಕಡ್ಡಾಯ ಮತದಾನ ಮಾಡುವಂತೆ ಮನವಿ ಮಾಡಿದರು.
    ಸಂಯುಕ್ತ(ಕರ್ನಾಟಕ) ಜನತಾದಳ ಅಭ್ಯರ್ಥಿ ಶಶಿಕುಮಾರ್ ಎಸ್. ಗೌಡ ಜನ್ನಾಪುರ ಜಯಶ್ರೀ ವೃತ್ತದಲ್ಲಿರುವ ಲೇಡಿಸ್ ಕ್ಲಬ್ ಮತಗಟ್ಟೆ ೧೫೭ರಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು.


ಭದ್ರಾವತಿಯಲ್ಲಿ ಸಂಯುಕ್ತ(ಕರ್ನಾಟಕ) ಜನತಾದಳ ಅಭ್ಯರ್ಥಿ ಶಶಿಕುಮಾರ್ ಎಸ್. ಗೌಡ ಜನ್ನಾಪುರ ಜಯಶ್ರೀ ವೃತ್ತದಲ್ಲಿರುವ ಲೇಡಿಸ್ ಕ್ಲಬ್ ಮತಗಟ್ಟೆ ೧೫೭ರಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು.
    ಈ ಬಾರಿ ಶಾಸಕ ಬಿ.ಕೆ ಸಂಗಮೇಶ್ವರ್ ನಗರಸಭೆ ಕಛೇರಿ ಮತಗಟ್ಟೆ ೧೦೬ರಲ್ಲಿ ಸಂಜೆ ೪.೩೦ರ ಸಮಯದಲ್ಲಿ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಮತ ಚಲಾಯಿಸಿ ಗೆಲುವಿನ ಸಂಕೇತ ಪ್ರದರ್ಶಿಸಿದರು. 


ಜಾತ್ಯತೀತ ಜನತಾದಳ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ರಾಜ್ಯಾಧ್ಯಕ್ಷರಾದ ನಂತರ ಭದ್ರಾವತಿ ಅನ್ವರ್ ಕಾಲೋನಿಯಲ್ಲಿರುವ ಮತಗಟ್ಟೆಯಲ್ಲಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದರು.
ಜಾತ್ಯತೀತ ಜನತಾದಳ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ರಾಜ್ಯಾಧ್ಯಕ್ಷರಾದ ನಂತರ ಮೊದಲ ಬಾರಿಗೆ ಅನ್ವರ್ ಕಾಲೋನಿಯಲ್ಲಿರುವ ಮತಗಟ್ಟೆಯಲ್ಲಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತ ಚಲಾಯಿಸಿದರು. ನಂತರ ತಮ್ಮ ಬೆಂಬಲಿಗರಿಂದ ಕ್ಷೇತ್ರದ ಮತದಾನದ ಮಾಹಿತಿ ಪಡೆದುಕೊಂಡರು. ಈ ಹಿಂದೆ ೨೦೧೩ರ ಚುನಾವಣೆಯಲ್ಲಿ ಸಿ.ಎಂ ಇಬ್ರಾಹಿಂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಂ.ಜೆ ಅಪ್ಪಾಜಿ ಗೆಲುವು ಸಾಧಿಸಿದ್ದರು. ಈ ಬಾರಿ ಚುನಾವಣೆಯಲ್ಲಿ ಅಪ್ಪಾಜಿಯವರ ಪತ್ನಿ ಶಾರದ ಅಪ್ಪಾಜಿ ಅಭ್ಯರ್ಥಿಯಾಗಿದ್ದು, ಸಿ.ಎಂ ಇಬ್ರಾಹಿಂ ಇದೆ ಪಕ್ಷದ ರಾಜ್ಯಾಧ್ಯಕ್ಷರಾಗಿರುವುದು ವಿಶೇಷವಾಗಿದೆ
    ಬಿಳಿಕಿ ಶ್ರೀಗಳಿಂದ ಮತದಾನ:
    ತಾಲೂಕಿನ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಗ್ರಾಮದ ಸರ್ಕಾರಿ ಶಾಲೆಯ ಮತಗಟ್ಟೆ ೨೨ರಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.


ಭದ್ರಾವತಿ ತಾಲೂಕಿನ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಗ್ರಾಮದ ಸರ್ಕಾರಿ ಶಾಲೆಯ ಮತಗಟ್ಟೆ ೨೨ರಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.
    ಇವಿಎಂ ತಾಂತ್ರಿಕ ಸಮಸ್ಯೆ : ಅರ್ಧ ತಾಸು ಕಾದ ಮತದಾರರು 
ಜನ್ನಾಪುರ ಜಯಶ್ರೀ ವೃತ್ತದಲ್ಲಿರುವ ಮತಗಟ್ಟೆ ೧೪೯ರಲ್ಲಿ ಮಧ್ಯಾಹ್ನ ಸುಮಾರು ೩ ಗಂಟೆ ಸಮಯದಲ್ಲಿ ಇವಿಎಂ ತಾಂತ್ರಿಕ ಸಮಸ್ಯೆ ಕಂಡು ಬಂದಿದ್ದು, ಇದರಿಂದಾಗಿ ಸುಮಾರು ಅರ್ಧ ತಾಸು ಮತದಾರರು ಮತಗಟ್ಟೆಯಲ್ಲಿ ಕಾಯುವಂತಾಯಿತು. 
ಈ ನಡುವೆ ಮತಗಟ್ಟೆ ಬಳಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ತಕ್ಷಣ ಪೊಲೀಸರು ಮಧ್ಯ ಪ್ರವೇಶಿಸಿ ನಿಯಂತ್ರಿಸುವಲ್ಲಿ ಯಶಸ್ವಿಯಾದರು. 
ಗ್ರಾಮಾಂತರ ಭಾಗದಲ್ಲೂ ಇವಿಎಂ ತಾಂತ್ರಿಕ ಸಮಸ್ಯೆ : 
ತಾಲೂಕಿನ ಸಿಂಗನಮನೆ ವ್ಯಾಪ್ತಿ ಗ್ಯಾರೇಜ್ ಕ್ಯಾಂಪ್‌ನಲ್ಲಿ ಮತಗಟ್ಟೆ ೨೫೩ರಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾದರು. ಮತದಾರರು ಸುಮಾರು ೧ ಗಂಟೆವರೆಗೂ ಮತಗಟ್ಟೆಯಲ್ಲಿ ಕಾಯುವಂತಾಯಿತು. 


ಭದ್ರಾವತಿ ಜನ್ನಾಪುರ ಜಯಶ್ರೀ ವೃತ್ತದಲ್ಲಿರುವ ಮತಗಟ್ಟೆ ೧೪೯ರಲ್ಲಿ ಮಧ್ಯಾಹ್ನ ಸುಮಾರು ೩ ಗಂಟೆ ಸಮಯದಲ್ಲಿ ಇವಿಎಂ ತಾಂತ್ರಿಕ ಸಮಸ್ಯೆ ಕಂಡು ಬಂದಿದ್ದು, ಇದರಿಂದಾಗಿ ಸುಮಾರು ಅರ್ಧ ತಾಸು ಮತದಾರರು ಮತಗಟ್ಟೆಯಲ್ಲಿ ಕಾಯುವಂತಾಯಿತು. 
    ಬಿಸಿಲು ಏರಿಕೆಯಾಗುತ್ತಿದ್ದಂತೆ ಮತದಾನ ಪ್ರಮಾಣ ಸಹ ಏರಿಕೆಯಾಗಿದ್ದು, ಸುಡು ಬಿಸಿಲಿನಲ್ಲೂ ಸರದಿ ಸಾಲಿನಲ್ಲಿ ನಿಂತು ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಮತಗಟ್ಟೆಗಳ ಸಮೀಪ ಅಭ್ಯರ್ಥಿಗಳ ಪರವಾಗಿ ಆಯಾ ಪಕ್ಷದ ಮುಖಂಡರು, ಕಾರ್ಯಕರ್ತರು ಬೀಡುಬಿಟ್ಟು ಮತ ಸೆಳೆಯಲು ನಾನಾ ರೀತಿಯ ಕಸರತ್ತು ನಡೆಸುತ್ತಿರುವುದು ಕಂಡು ಬಂದಿತು. ಮತದಾರರಿಗೆ ಚಿತ್ರನ್ನ, ಮೊಸರನ್ನ, ಮಜ್ಜಿಗೆ ವಿತರಿಸುತ್ತಿರುವುದು ಕಂಡು ಬಂದಿತು. ಮತಗಟ್ಟೆಗಳ ಬಳಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

Tuesday, May 9, 2023

ಕಡ್ಡಾಯ ಮತದಾನ ಕುರಿತು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ

ಭದ್ರಾವತಿ ನಗರಸಭೆ ವ್ಯಾಪ್ತಿಯ ಹೊಸಮನೆ ಭಾಗದಲ್ಲಿ ಮತದಾರರಿಗೆ ಮತದಾನ ಕುರಿತು ಜಾಗೃತಿ ಮೂಡಿಸಲು ಹೊಸಮನೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವತಿಯಿಂದ ಜಾಥಾ ನಡೆಸಲಾಯಿತು.
    ಭದ್ರಾವತಿ, ಮೇ. ೯: ನಗರಸಭೆ ವ್ಯಾಪ್ತಿಯ ಹೊಸಮನೆ ಭಾಗದಲ್ಲಿ ಮತದಾರರಿಗೆ ಮತದಾನ ಕುರಿತು ಜಾಗೃತಿ ಮೂಡಿಸಲು ಹೊಸಮನೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವತಿಯಿಂದ ಜಾಥಾ ನಡೆಸಲಾಯಿತು.
    ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವ ಬಲಪಡಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಮತದಾನ ಮಹತ್ವ ಕುರಿತ ಜಾಗೃತಿ ಫಲಕಗಳನ್ನು ಹಿಡಿದು ಕಾಲೇಜಿನ ಆವರಣದಿಂದ ಜಾಥಾ ಆರಂಭಿಸಿದ ವಿದ್ಯಾರ್ಥಿಗಳು ಹೊಸಮನೆ ಪ್ರಮುಖ ರಸ್ತೆಗಳಲ್ಲಿ ಸಾಗಿದರು. ಕುಸುಮ ಮತ್ತು ನಿಸರ್ಗ ಮತದಾನ ಜಾಗೃತಿ ಘೋಷಣೆಗಳನ್ನು ಹಾಕಿದರು.
    ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಸಕಲೇಶ್ ನೇತೃತ್ವ ವಹಿಸಿದ್ದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಪೋಷಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಭದ್ರಾವತಿ ವಿಧಾನಸಭಾ ಕ್ಷೇತ್ರ : ಕಳೆದ ೪ ಚುನಾವಣೆಗಳಲ್ಲಿ ಶೇ.೭೫ರ ಗುರಿ ತಲುಪದ ಮತದಾನ

    ಭದ್ರಾವತಿ, ಮೇ. ೯ : ಕಳೆದ ೪ ವಿಧಾನಸಭಾ ಚುನಾವಣೆ ಮತದಾನ ಪ್ರಮಾಣ ಶೇ.೭೫ರ ಗುರಿ ತಲುಪಿಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಕ್ಷೇತ್ರದಲ್ಲಿ ಹೆಚ್ಚಿನ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಅರಿವು ಮೂಡಿಸಿದೆ. ಈಗಲಾದರೂ ಮತದಾರರು ಎಚ್ಚೆತ್ತುಕೊಂಡು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
    ವಿಧಾನಸಭಾ ಕ್ಷೇತ್ರ ರಾಜ್ಯದಲ್ಲಿಯೇ ವಿಶಿಷ್ಟತೆಯಿಂದ ಕೂಡಿದ್ದು, ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಕಾಯಂ ಹಾಗು ಗುತ್ತಿಗೆ ಕಾರ್ಮಿಕರು, ಕುಟುಂಬ ವರ್ಗದವರು, ಅಸಂಘಟಿತ ಕಾರ್ಮಿಕರು, ಕೃಷಿಕರು, ವ್ಯಾಪಾರಿಗಳು ಹೆಚ್ಚಾಗಿದ್ದಾರೆ. ಬಹುತೇಕ ಮಧ್ಯಮ ಹಾಗು ಬಡ ವರ್ಗದ ಕುಟುಂಬದವರಾಗಿದ್ದು, ಶೈಕ್ಷಣಿಕವಾಗಿ ಸಹ ಸ್ವಲಮಟ್ಟಿ ಹಿಂದುಳಿದಿದ್ದಾರೆ. ಕಳೆದ ೪ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಶೇ.೭೫ರ ಗುರಿ ತಲುಪಿಲ್ಲ.
    ೨೦೦೪ರ ಚುನಾವಣೆಯಲ್ಲಿ ಒಟ್ಟು ೭ ಅಭ್ಯರ್ಥಿಗಳಿದ್ದು, ಶೇ.೬೭.೭೬ರಷ್ಟು ಮತ್ತು ೨೦೦೮ರ ಚುನಾವಣೆಯಲ್ಲೂ ಒಟ್ಟು ೭ ಅಭ್ಯರ್ಥಿಗಳಿದ್ದು, ಶೇ.೬೩.೮೧ರಷ್ಟು ಮತದಾನವಾಗಿದೆ. ೨೦೧೩ರ ಚುನಾವಣೆಯಲ್ಲಿ ಒಟ್ಟು ೧೭ ಮಂದಿ ಅಭ್ಯರ್ಥಿಗಳಿದ್ದು, ಶೇ. ೭೨.೦೧ರಷ್ಟು ಹಾಗು ೨೦೧೮ರ ಚುನಾವಣೆಯಲ್ಲಿ  ಒಟ್ಟು ೧೫ ಅಭ್ಯರ್ಥಿಗಳಿದ್ದು, ಶೇ.೭೩.೫೯ರಷ್ಟು ಮತದಾನವಾಗಿದೆ. ಚುನಾವಣಾ ಆಯೋಗ ಈ ಬಾರಿ ಹೆಚ್ಚಿನ ಗುರಿ ಸಾಧಿಸಬೇಕೆಂದು ಕಳೆದ ಕೆಲವು ತಿಂಗಳಿನಿಂದ ನಿರಂತರವಾಗಿ ವಿವಿಧ ಕಾರ್ಯಕ್ರಮಗಳ ಆಯೋಜನೆ ಮೂಲಕ ಮತದಾನ ಜಾಗೃತಿ ಮೂಡಿಸುತ್ತಿದೆ. ಅಲ್ಲದೆ ಈ ಕಾರ್ಯಕ್ಕೆ ಹಲವು ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು, ಸ್ವಯಂ ಸೇವಕರು ಸಹ ಕೈಜೋಡಿಸಿದ್ದಾರೆ. ಈ ಬಾರಿ ಹೆಚ್ಚಿನ ಮತದಾನ ನಿರೀಕ್ಷಿಸಲಾಗಿದೆ.
ಮಳೆ ಆತಂಕ :
    ಈ ಬಾರಿ ಚುನಾವಣೆಗೆ ಮಳೆ ಅಡ್ಡಿಯಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಮಂಗಳವಾರ ಸಂಜೆಯಿಂದ ಮಳೆಯಾಗುತ್ತಿದೆ. ಬುಧವಾರ ಮಳೆ ಪ್ರಮಾಣ ಹೆಚ್ಚಾಗುವ ಲಕ್ಷಣಗಳು ಕಂಡು ಬರುತ್ತಿವೆ. ಈ ಹಿನ್ನಲೆಯಲ್ಲಿ ಮತದಾನಕ್ಕೆ ಅಡ್ಡಿಯಾಗುವ ಆತಂಕ ಎದುರಾಗಿದೆ.