Saturday, September 2, 2023

ಭದ್ರಾ ಜಲಾಶಯದಲ್ಲಿ ನೀರಿನ ಕೊರತೆ : ತಿಂಗಳಿಗೆ 15 ದಿನ ಮಾತ್ರ ನೀರು ಹರಿಸಿ

ನೀರಾವತಿ ತಜ್ಞರು, ರೈತರ ಜೊತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಿ : ಕೆ.ಟಿ ಗಂಗಾಧರ್

ಕಳೆದ 2 ದಿನಗಳಿಂದ ರೈತರು ಭದ್ರಾವತಿ ಬಿ.ಆರ್ ಪ್ರಾಜೆಕ್ಟ್ ನೀರಾವರಿ ಇಲಾಖೆ ಅಧೀಕ್ಷಕ ಇಂಜಿನಿಯರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದು, ರೈತ ಮುಖಂಡ ಕೆ.ಟಿ ಗಂಗಾಧರ್ ಮಾತನಾಡಿದರು.
    ಭದ್ರಾವತಿ : ಮಳೆ ಕೊರತೆಯಿಂದಾಗಿ ಈ ಬಾರಿ ಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದು, ಈ ಹಿನ್ನಲೆಯಲ್ಲಿ ನಾಲೆಗಳಿಗೆ 100 ದಿನಗಳವರೆಗೆ ನೀರು ಹರಿಸುವುದು ಸರಿಯಲ್ಲ. ಜಲಾಶಯದಲ್ಲಿ ನೀರು ಉಳಿಸಿಕೊಳ್ಳುವ ಮೂಲಕ ರೈತರು ಸೇರಿದಂತೆ ಎಲ್ಲರ ಹಿತ ಕಾಪಾಡಬೇಕೆಂದು ರೈತ ಮುಖಂಡ ಕೆ.ಟಿ ಗಂಗಾಧರ್ ಆಗ್ರಹಿಸಿದರು.
    ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದರೂ ಸಹ ನಾಲೆಗಳಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಭದ್ರಾ ಅಚ್ಚುಕಟ್ಟು ರೈತರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಕಳೆದ 2 ದಿನಗಳಿಂದ ರೈತರು ಬಿ.ಆರ್ ಪ್ರಾಜೆಕ್ಟ್ ನೀರಾವರಿ ಇಲಾಖೆ ಅಧೀಕ್ಷಕ ಇಂಜಿನಿಯರ್ ಕಚೇರಿ ಮುಂಭಾಗ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ಮಳೆ ಕೊರತೆಯಿಂದ ಪ್ರಸ್ತುತ ಜಲಾಶಯದಲ್ಲಿ 40 ಟಿಎಂಸಿ ಮಾತ್ರ ನೀರಿದ್ದು, ನಿರಂತರವಾಗಿ.100 ದಿನ ನೀರು ಬಿಟ್ಟಲ್ಲಿ ಜಲಾಶಯ ಸಂಪೂರ್ಣವಾಗಿ ಖಾಲಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ನಿರಂತರವಾಗಿ 100 ದಿನ ನೀರು ಹರಿಸುವ ಬದಲು ತಿಂಗಳಿಗೆ 15 ದಿನ ಮಾತ್ರ ನೀರು ಹರಿಸಬೇಕು. ಈ ಸಂಬಂಧ ನೀರಾವರಿ ತಜ್ಞರು, ರೈತರ ಜೊತೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಭದ್ರಾವತಿ, ತರೀಕೆರೆ ಮತ್ತು ಶಿವಮೊಗ್ಗ ಸೇರಿದಂತೆ ವಿವಿಧೆಡೆಗಳಿಂದ ರೈತರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಹೋರಾಟ ಮುಂದುವರೆಯುತ್ತಿದ್ದು, ಇನ್ನೂ ಹೆಚ್ಚಿನ ರೈತರು ಹೋರಾಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಎಂಪಿಎಂ ಕಾರ್ಖಾನೆ ಪುನಃ ಆರಂಭಗೊಳ್ಳುವ ನಿರೀಕ್ಷೆ

ಸೆ.6ರಂದು ಬೆಳಿಗ್ಗೆ 11.30ಕ್ಕೆ ಸ್ಥಿತಿಗತಿ ಕುರಿತು ಚರ್ಚಿಸಲು ಸಚಿವರ ಅಧ್ಯಕ್ಷತೆಯಲ್ಲಿ ಸಭೆ

ಭದ್ರಾವತಿ ಮೈಸೂರು ಕಾಗದ ಕಾರ್ಖಾನೆ
    ಭದ್ರಾವತಿ: ಕಳೆದ ಸುಮಾರು 8 ವರ್ಷಗಳಿಂದ ಸ್ಥಗಿತಗೊಂಡಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಪುನಃ ಆರಂಭಗೊಳ್ಳುವ ನಿರೀಕ್ಷೆ ಇದೀಗ ಗರಿಕೆದರಿದ್ದು, ಸಿದ್ದರಾಮಯ್ಯ ನೇತೃತ್ವದ ಈಗಿನ ಸರ್ಕಾರ ಕಾರ್ಖಾನೆ ಆರಂಭಿಸಲು ಆಸಕ್ತಿ ತೋರಿಸುತ್ತಿರುವ ಲಕ್ಷಣಗಳು ಕಂಡು ಬರುತ್ತಿವೆ. ಇದಕ್ಕೆ ಪೂರಕವೆಂಬಂತೆ ಸೆ.6ರಂದು ಬೆಳಿಗ್ಗೆ 11.30ಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗು ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ಕಾರ್ಖಾನೆಯ ಪ್ರಸ್ತುತ ಸ್ಥಿತಿಗತಿ ಕುರಿತಂತೆ ಚರ್ಚಿಸಲು ಐ.ಕೆ.ಎಫ್ ಸಭಾಂಗಣ, ಖನಿಜ ಭವನ, ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ.
    ಸುಮಾರು 8 ದಶಕಗಳ ಇತಿಹಾಸ ಹೊಂದಿರುವ ಕಾರ್ಖಾನೆಯಲ್ಲಿ 2015ರಿಂದ ಯಂತ್ರಗಳು ಸ್ಥಗಿತಗೊಂಡಿದ್ದು, ಇಂದಿಗೂ ಚಾಲನೆಗೊಂಡಿಲ್ಲ. ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಅಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರಿಗೆ 2017ರಲ್ಲಿ ವಿಶೇಷ ಪ್ಯಾಕೇಜ್ ರೂಪಿಸಿ ಸ್ವಯಂ ನಿವೃತ್ತಿ ನೀಡಿ ಹೊರ ಹಾಕಲಾಗಿದೆ. ಈ ನಡುವೆ ಸ್ವಯಂ ನಿವೃತ್ತಿ ಪಡೆಯದೆ ಇರುವ ಕಾರ್ಮಿಕರನ್ನು ಸರ್ಕಾರದ ಬೇರೆ ಬೇರೆ ಇಲಾಖೆಗಳಿಗೆ ನಿಯೋಜನೆ ಮೇರೆಗೆ ನೇಮಕಗೊಳಿಸಿ ಕೈತೊಳೆದುಕೊಳ್ಳಲಾಗಿದೆ. ಕಾರ್ಖಾನೆಯ ನಷ್ಟ ನಿರೀಕ್ಷಿಸಲು ಸಾಧ್ಯವಾಗದಿರುವಷ್ಟರಮಟ್ಟಿಗೆ ಏರಿಕೆಯಾಗಿದ್ದು, ಕಾರ್ಮಿಕ ಇಲಾಖೆ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚುವ ಆದೇಶ ಸಹ ಹೊರಡಿಸಿದೆ. ಈ ನಡುವೆ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸಿಕೊಂಡು ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದರು. ಅಲ್ಲದೆ ಈ ಹಿಂದೆ ಕಾರ್ಖಾನೆಗೆ ಗುತ್ತಿಗೆ ಪಡೆದಿದ್ದ ಅರಣ್ಯ ಭೂಮಿಯನ್ನು ಕಾರ್ಖಾನೆಯೇ ಉಳಿಸಿಕೊಳ್ಳುವಂತೆ ಕ್ರಮ ಕೈಗೊಂಡಿದ್ದರು. ಆದರೆ ನಿರೀಕ್ಷೆಯಂತೆ ಕಾರ್ಖಾನೆ ಅಭಿವೃದ್ಧಿಯಾಗಲಿಲ್ಲ.
    ಈ ಬಾರಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ನಗರದ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳನ್ನು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಲಾಗಿತ್ತು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಶಾಸಕ ಬಿ.ಕೆ ಸಂಗಮೇಶ್ವರ್ ಎರಡು ಕಾರ್ಖಾನೆಗಳ ಅಭಿವೃದ್ಧಿಗೆ ಬದ್ಧವಾಗಿರುವುದಾಗಿ ಘೋಷಿಸಿದ್ದರು.
    ಇದೀಗ ಕಾರ್ಖಾನೆ ಪುನಃ ಆರಂಭಗೊಳ್ಳುವ ನಿರೀಕ್ಷೆ ಗರಿಕೆದರಿದ್ದು, ಮುಂದಿನ ಬೆಳವಣಿಗೆಗಳ ಕುರಿತು ಕ್ಷೇತ್ರದ ಜನರು ಎದುರು ನೋಡುತ್ತಿದ್ದಾರೆ. ಒಂದು ವೇಳೆ ಕಾರ್ಖಾನೆ ಪುನಃ ಆರಂಭಗೊಂಡಲ್ಲಿ, ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವ ಜೊತೆ ರೈತರು ಸಹ ನೆಮ್ಮದಿಯ ಬದುಕು ಕಂಡುಕೊಳ್ಳಲು ಸಾಧ್ಯವಾಗಲಿದೆ.

ಪಡಿತರ ಅಕ್ಕಿ ಅಕ್ರಮ ಸಾಗಾಟ : 3,550 ಕೆ.ಜಿ ಅಕ್ಕಿ ವಶ

ಪೇಪರ್ ಟೌನ್ ಪೊಲೀಸರ ಕಾರ್ಯಾಚರಣೆ

ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಭದ್ರಾವತಿ ಪೇಪರ್ ಟೌನ್ ಠಾಣೆ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
    ಭದ್ರಾವತಿ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಪೇಪರ್ ಟೌನ್ ಠಾಣೆ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
    ಗೂಡ್ಸ್ ಟೆಂಪೋ ವಾಹನದಲ್ಲಿ ವ್ಯಕ್ತಿಯೋರ್ವ ಶಿವಮೊಗ್ಗದಿಂದ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೇಪರ್ ಟೌನ್ ಪೊಲೀಸ್ ಠಾಣೆ ಠಾಣಾಧಿಕಾರಿ ಕವಿತರವರ ನೇತೃತ್ವದಲ್ಲಿ ಸಿಬ್ಬಂದಿಗಳು ನಗರದ ಬೈಪಾಸ್ ರಸ್ತೆಯಲ್ಲಿ ವಾಹನ ತಡೆದು ವಶಕ್ಕೆ ಪಡೆದಿದ್ದಾರೆ.
       ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ ಒಟ್ಟು ಸುಮಾರು 3,550 ಕೆ.ಜಿ ಅಕ್ಕಿ ವಶಕ್ಕೆ ಪಡೆಯಲಾಗಿದ್ದು, ಅಕ್ಕಿಯನ್ನು ಕಡೂರಿನಲ್ಲಿ ಪಾಲಿಸ್ ಮಾಡಿಸಲು ತೆಗೆದುಕೊಂಡು ಹೋಗುತ್ತಿರುವುದಾಗಿ ವಶದಲ್ಲಿರುವ ವ್ಯಕ್ತಿ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
    ಆಹಾರ ಇಲಾಖೆ ಅಧಿಕಾರಿಗಳಿಗೆ ವಶಪಡಿಸಿಕೊಂಡಿರುವ ಅಕ್ಕಿಯನ್ನು ಪೊಲೀಸರು ಹಸ್ತಾಂತರಿಸಿದ್ದಾರೆ. ಠಾಣಾಧಿಕಾರಿ ಕವಿತ, ಅಹಾರ ಇಲಾಖೆ ನಿರೀಕ್ಷಕ ರಾಜು, ಸಹಾಯಕ ನಿರೀಕ್ಷಕ ಅಂಕಯ್ಯ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದ ಗೋದಾಮು ವ್ಯವಸ್ಥಾಪಕ ಈಶ್ವರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಒಕ್ಕಲಿಗರ ಸಂಘದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ


    ಭದ್ರಾವತಿ : ಪ್ರತಿ ವರ್ಷದಂತೆ ಈ ಬಾರಿ ಸಹ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಎಸ್‌ಎಸ್‌ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಹಾಗು ಅಂತಿಮ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವೃತ್ತಿಪರ ವಿಷಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿ ವಿದ್ಯಾರ್ಥಿ ವೇತನ ನೀಡಲು ತೀರ್ಮಾನಿಸಲಾಗಿದೆ.
    ಅರ್ಹ ವಿದ್ಯಾರ್ಥಿಗಳು ಅಂಕಪಟ್ಟಿ, ಆಧಾರ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರ ದಾಖಲೆಗಳ ನಕಲು ಪ್ರತಿಗಳೊಂದಿಗೆ ಸೆ.30ರೊಳಗಾಗಿ ಅರ್ಜಿ ಸಲ್ಲಿಸುವುದು. ಅರ್ಜಿಗಳು ಸಂಘದ ಕಛೇರಿಯಲ್ಲಿ ದೊರೆಯು ತ್ತವೆ. ಹೆಚ್ಚಿನ ಮಾಹಿತಿ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ಮೊ: 9110457125 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

Friday, September 1, 2023

ಮಾನವೀಯತೆ ಮೆರೆದ ಆಟೋ ಚಾಲಕರು, ಪೊಲೀಸರು

ಸಂಜೀವಿನಿ ವೃದ್ಧಾಶ್ರಮ ಸೇರಿದ ಮಹಿಳೆ

ಭದ್ರಾವತಿ ನಗರದ ಉಂಬ್ಳೆಬೈಲು ರಸ್ತೆ ರೈಲ್ವೆ ಅಂಡರ್ ಬ್ರಿಡ್ಜ್ ಸಮೀಪದ ಆಟೋನಿಲ್ದಾಣದಲ್ಲಿ ಕಳೆದ ಸುಮಾರು 6 ತಿಂಗಳಿಂದ ಆಶ್ರಯ ಪಡೆದಿದ್ದ ಅಪರಿಚಿತ ಮಹಿಳೆಯೊಬ್ಬರನ್ನು ಎಂಪಿಎಂ ಬಡಾವಣೆಯಲ್ಲಿರುವ ಸಂಜೀವಿನಿ ವೃದ್ಧಾಶ್ರಮಕ್ಕೆ ದಾಖಲಿಸುವ ಮೂಲಕ ಆಟೋ ಚಾಲಕರು ಹಾಗು ಪೊಲೀಸರು ಮಾನವೀಯತೆ ಮೆರದಿದ್ದಾರೆ.
    ಭದ್ರಾವತಿ: ನಗರದ ಉಂಬ್ಳೆಬೈಲು ರಸ್ತೆ ರೈಲ್ವೆ ಅಂಡರ್ ಬ್ರಿಡ್ಜ್ ಸಮೀಪದ ಆಟೋನಿಲ್ದಾಣದಲ್ಲಿ ಕಳೆದ ಸುಮಾರು 6 ತಿಂಗಳಿಂದ ಆಶ್ರಯ ಪಡೆದಿದ್ದ ಅಪರಿಚಿತ ಮಹಿಳೆಯೊಬ್ಬರಿಗೆ ಆಟೋ ಚಾಲಕರು ಹಾಗು ಪೊಲೀಸರು ನೆರವಾಗುವ ಮೂಲಕ ಮಾನವೀಯತೆ ಮೆರದಿದ್ದಾರೆ.
    ಆಟೋ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದ ಮಹಿಳೆ ಯಾರ ಬಳಿಯೂ ಭಿಕ್ಷೆ ಬೇಡುತ್ತಿರಲಿಲ್ಲ. ಯಾರಾದರೂ ತಾವೇ ಏನಾದರೂ ನೀಡಿದರೆ ಮಾತ್ರ ಸ್ವೀಕರಿಸುತ್ತಿದ್ದರು. ಅಲ್ಲದೆ ತಮ್ಮ ವಿವರಗಳನ್ನು ಕೇಳಿದರೆ ಮೌನವಾಗಿರುತ್ತಿದ್ದರು. ಇದನ್ನು ಗಮನಿಸಿದ ಆಟೋಚಾಲಕರು ನ್ಯೂಟೌನ್ ಪೊಲೀಸರ ಗಮನಕ್ಕೆ ವಿಷಯ ತಂದಿದ್ದು, ನಂತರ ಆಟೋ ಚಾಲಕರು ಮತ್ತು ಪೊಲೀಸರು ಈ ಮಹಿಳೆಗೆ ನೆರವಾಗುವ ಮೂಲಕ ನಗರದ ಎಂಪಿಎಂ ಬಡಾವಣೆಯಲ್ಲಿರುವ ಸಂಜೀವಿನಿ ವೃದ್ಧಾಶ್ರಮಕ್ಕೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
    ಸಂಜೀವಿನಿ ವೃದ್ಧಾಶ್ರಮದ ಸಂಸ್ಥಾಪಕಿ ಹಾಗು ಅಧ್ಯಕ್ಷೆ ಸುನೀತಾ ಮತ್ತು ಸವಿತಾ, ಸಿಬ್ಬಂದಿ ರಮೇಶ್ ಹಾಗು ಪ್ರಿಯಾರವರು ಮಹಿಳೆಯನ್ನು ಆಶ್ರಮಕ್ಕೆ ಬರಮಾಡಿಕೊಂಡಿದ್ದು, ನ್ಯೂಟೌನ್ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಮಂಜಪ್ಪ, ಮುಖಂಡರಾದ ಬಾಲಕೃಷ್ಣ ಹಾಗು ಆಟೋ ಚಾಲಕರು ಉಪಸ್ಥಿತರಿದ್ದರು.

ಸರ್ಕಾರಿ ಶಾಲೆ ಅಡುಗೆ ಸಹಾಯಕಿಗೆ ಜಾತಿ ನಿಂದನೆ, ಕೊಲೆ ಬೆದರಿಕೆ ಆರೋಪ

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಿ : ಪ್ರತಿಭಟನೆ

ಭದ್ರಾವತಿ ತಾಲೂಕಿನ ಅರಳಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಗೊಪ್ಪೇನಹಳ್ಳಿ(ಗೊಂದಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಸಹಾಯಕಿಗೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿ ಅಪಪ್ರಚಾರದಲ್ಲಿ ತೊಡಗಿರುವ ಶಾಲಾಭಿವೃದ್ಧಿ ಸಮಿತಿ ವಿರುದ್ಧ ಕಾನೂನು ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಪೊಲೀಸ್‌ ಉಪಾಧೀಕ್ಷಕರ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಸೆ. ೧ : ತಾಲೂಕಿನ ಅರಳಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಗೊಪ್ಪೇನಹಳ್ಳಿ(ಗೊಂದಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಸಹಾಯಕಿಗೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿ ಅಪಪ್ರಚಾರದಲ್ಲಿ ತೊಡಗಿರುವ ಶಾಲಾಭಿವೃದ್ಧಿ ಸಮಿತಿ ವಿರುದ್ಧ ಕಾನೂನು ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಪೊಲೀಸ್‌ ಉಪಾಧೀಕ್ಷಕರ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಗ್ರಾಮದ ಎ.ಕೆ ಕಾಲೋನಿ ನಿವಾಸಿ, ಪರಿಶಿಷ್ಟ ಜಾತಿ ಮಾದಿಗ ಸಮುದಾಯದ ರೂಪರವರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಲಿಯಾಗಿದ್ದ ಅಡುಗೆ ಸಹಾಯಕಿ ಹುದ್ದೆಗೆ ನಿಯಮಾನುಸಾರ ಅರ್ಜಿ ಸಲ್ಲಿಸಿದ್ದು, ೨೦೦೮ರ ಅಕ್ಷರ ದಾಸೋಹ ಮಾರ್ಗ ಸೂಚಿಯನ್ವಯ, ಆಯುಕ್ತರು,  ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು  ೨೦೦೩-೦೪ರ ಸುತ್ತೋಲೆ, ಜಂಟಿ ನಿರ್ದೇಶಕರು, ಮಧ್ಯಾಹ್ನ ಉಪಹಾರ ಯೋಜನೆ, ಬೆಂಗಳೂರುರವರ ಪತ್ರ ಹಾಗು ಗ್ರಾಮ ಪಂಚಾಯಿತಿ ಕಾರ್ಯಾಲಯ, ಅರಳಿಕೊಪ್ಪ ಮತ್ತು ತಾಲೂಕು ಪಂಚಾಯಿತಿ  ಅನುಮೋದನೆಯಂತೆ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.


    ರೂಪ ಅವರು ಪರಿಶಿಷ್ಟ ಜಾತಿಗೆ ಸೇರಿರುವ ಹಿನ್ನಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೈಯದ್‌ ಶಫಿ ಉಲ್ಲಾ, ಸದಸ್ಯರಾದ ಅರುಣ್‌, ಅಸ್ಮಾಬಾನು, ಸಮೀನ ಬಾನು, ಎಸ್. ನಾಗರಾಜ್‌, ಜಯಮ್ಮ, ಕೆ. ನಾಗರಾಜ, ಮಂಜುಳ ಮತ್ತು ಬಾಲು ನಾಯ್ಕ ಸೇರಿದಂತೆ ಇನ್ನಿತರರು ಕರ್ತವ್ಯ ನಿರ್ವಹಿಸದಂತೆ ಬೆದರಿಕೆ ಹಾಕುತ್ತಿದ್ದು, ಅಲ್ಲದೆ ಜಾತಿ ನಿಂದನೆ ಮಾಡಿ ಎಲ್ಲೆಡೆ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆಂದು ಆರೋಪಿಸಲಾಯಿತು.
     ಈ ಸಂಬಂಧ ೩ ದಿನಗಳ ಹಿಂದೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಲಾಯಿತು. ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ಹೋರಾಟ ಮುಂದುವರೆಸುವುದಾಗಿ ಎಚ್ಚರಿಸಲಾಯಿತು.
    ಸ್ಥಳಕ್ಕೆ ಆಗಮಿಸಿದ ಪೊಲೀಸ್‌ ಉಪಾಧೀಕ್ಷಕ ನಾಗರಾಜ್‌ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೂ ಪ್ರತಿಭಟನೆ ಮುಂದುವರೆಸಿ ತಕ್ಷಣ ಬಂಧಿಸಬೇಕೆಂದು ಆಗ್ರಹಿಸಲಾಯಿತು. ಈ ನಡುವೆ ಪೊಲೀಸರು ಪ್ರತಿಭಟನೆ ಕೈಬಿಡುವಂತೆ ಮನವೊಲಿಸಲು ಯತ್ನಿಸಿದರಾದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ.
    ಪ್ರತಿಭಟನೆಯಲ್ಲಿ ಪ್ರಮುಖರಾದ ಬಾಲಕೃಷ್ಣ, ಸುರೇಶ್‌(ಪ್ರಜಾಪ್ರತಿನಿಧಿ), ಕೃಷ್ಣಪ್ಪ, ಎಸ್.ಕೆ ಸುಧೀಂದ್ರ, ಚನ್ನಪ್ಪ, ಸಿ. ಜಯಪ್ಪ, ಜಿ. ರಾಜು, ವಿಲ್ಸನ್‌ ಬಾಬು ಸೇರಿದಂತೆ ಗ್ರಾಮದ ಮುಖಂಡರು, ಗ್ರಾಮಸ್ಥರು ಹಾಗು ರೂಪ ಕುಟುಂಬಸ್ಥರು ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Thursday, August 31, 2023

ಚರಂಡಿ‌ ಕಾಮಗಾರಿಗೆ ಗುದ್ದಲಿಪೂಜೆ

ಭದ್ರಾವತಿ ನಗರಸಭೆ 19ನೇ ವಾರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪಶ್ಚಿಮ)ಯಲ್ಲಿ ಆಯೋಜಿಸಲಾಗಿದ್ದ ಚರಂಡಿ ಕಾಮಗಾರಿಗೆ ನಗರಸಭೆ ಸದಸ್ಯ ಬಸವರಾಜ್ ಬಿ. ಆನೇಕೊಪ್ಪ ಗುದ್ದಲಿಪೂಜೆ ನರವೇರಿಸಿದರು.
    ಭದ್ರಾವತಿ: ನಗರಸಭೆ 19ನೇ ವಾರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪಶ್ಚಿಮ)ಯಲ್ಲಿ ಆಯೋಜಿಸಲಾಗಿದ್ದ ಚರಂಡಿ ಕಾಮಗಾರಿಗೆ ನಗರಸಭೆ ಸದಸ್ಯ ಬಸವರಾಜ್ ಬಿ. ಆನೇಕೊಪ್ಪ ಗುದ್ದಲಿಪೂಜೆ ನರವೇರಿಸಿದರು.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್, ಶಾಲಾ ಅಭಿವೃದ್ಧಿ ಸಮಿತಿಯ ವೆಂಕಟೇಶ್ ಉಜ್ಜೀನಿಪುರ, ಸ್ಥಳೀಯ ಮುಖಂಡರಾದ ನಾಗೇಶ್, ಶ್ಯಾಮ್, ಭಾಸ್ಕರ್, ವೆಂಕಟಯ್ಯ, ರವಿ, ಗುತ್ತಿಗೆದಾರ ಲೋಕೇಶ್ ಸೇರಿದಂತೆ ಶಾಲೆಯ ಶಿಕ್ಷಕರು ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.