Saturday, September 2, 2023

ಎಂಪಿಎಂ ಕಾರ್ಖಾನೆ ಪುನಃ ಆರಂಭಗೊಳ್ಳುವ ನಿರೀಕ್ಷೆ

ಸೆ.6ರಂದು ಬೆಳಿಗ್ಗೆ 11.30ಕ್ಕೆ ಸ್ಥಿತಿಗತಿ ಕುರಿತು ಚರ್ಚಿಸಲು ಸಚಿವರ ಅಧ್ಯಕ್ಷತೆಯಲ್ಲಿ ಸಭೆ

ಭದ್ರಾವತಿ ಮೈಸೂರು ಕಾಗದ ಕಾರ್ಖಾನೆ
    ಭದ್ರಾವತಿ: ಕಳೆದ ಸುಮಾರು 8 ವರ್ಷಗಳಿಂದ ಸ್ಥಗಿತಗೊಂಡಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಪುನಃ ಆರಂಭಗೊಳ್ಳುವ ನಿರೀಕ್ಷೆ ಇದೀಗ ಗರಿಕೆದರಿದ್ದು, ಸಿದ್ದರಾಮಯ್ಯ ನೇತೃತ್ವದ ಈಗಿನ ಸರ್ಕಾರ ಕಾರ್ಖಾನೆ ಆರಂಭಿಸಲು ಆಸಕ್ತಿ ತೋರಿಸುತ್ತಿರುವ ಲಕ್ಷಣಗಳು ಕಂಡು ಬರುತ್ತಿವೆ. ಇದಕ್ಕೆ ಪೂರಕವೆಂಬಂತೆ ಸೆ.6ರಂದು ಬೆಳಿಗ್ಗೆ 11.30ಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗು ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ಕಾರ್ಖಾನೆಯ ಪ್ರಸ್ತುತ ಸ್ಥಿತಿಗತಿ ಕುರಿತಂತೆ ಚರ್ಚಿಸಲು ಐ.ಕೆ.ಎಫ್ ಸಭಾಂಗಣ, ಖನಿಜ ಭವನ, ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ.
    ಸುಮಾರು 8 ದಶಕಗಳ ಇತಿಹಾಸ ಹೊಂದಿರುವ ಕಾರ್ಖಾನೆಯಲ್ಲಿ 2015ರಿಂದ ಯಂತ್ರಗಳು ಸ್ಥಗಿತಗೊಂಡಿದ್ದು, ಇಂದಿಗೂ ಚಾಲನೆಗೊಂಡಿಲ್ಲ. ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಅಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರಿಗೆ 2017ರಲ್ಲಿ ವಿಶೇಷ ಪ್ಯಾಕೇಜ್ ರೂಪಿಸಿ ಸ್ವಯಂ ನಿವೃತ್ತಿ ನೀಡಿ ಹೊರ ಹಾಕಲಾಗಿದೆ. ಈ ನಡುವೆ ಸ್ವಯಂ ನಿವೃತ್ತಿ ಪಡೆಯದೆ ಇರುವ ಕಾರ್ಮಿಕರನ್ನು ಸರ್ಕಾರದ ಬೇರೆ ಬೇರೆ ಇಲಾಖೆಗಳಿಗೆ ನಿಯೋಜನೆ ಮೇರೆಗೆ ನೇಮಕಗೊಳಿಸಿ ಕೈತೊಳೆದುಕೊಳ್ಳಲಾಗಿದೆ. ಕಾರ್ಖಾನೆಯ ನಷ್ಟ ನಿರೀಕ್ಷಿಸಲು ಸಾಧ್ಯವಾಗದಿರುವಷ್ಟರಮಟ್ಟಿಗೆ ಏರಿಕೆಯಾಗಿದ್ದು, ಕಾರ್ಮಿಕ ಇಲಾಖೆ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚುವ ಆದೇಶ ಸಹ ಹೊರಡಿಸಿದೆ. ಈ ನಡುವೆ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸಿಕೊಂಡು ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದರು. ಅಲ್ಲದೆ ಈ ಹಿಂದೆ ಕಾರ್ಖಾನೆಗೆ ಗುತ್ತಿಗೆ ಪಡೆದಿದ್ದ ಅರಣ್ಯ ಭೂಮಿಯನ್ನು ಕಾರ್ಖಾನೆಯೇ ಉಳಿಸಿಕೊಳ್ಳುವಂತೆ ಕ್ರಮ ಕೈಗೊಂಡಿದ್ದರು. ಆದರೆ ನಿರೀಕ್ಷೆಯಂತೆ ಕಾರ್ಖಾನೆ ಅಭಿವೃದ್ಧಿಯಾಗಲಿಲ್ಲ.
    ಈ ಬಾರಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ನಗರದ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳನ್ನು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಲಾಗಿತ್ತು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಶಾಸಕ ಬಿ.ಕೆ ಸಂಗಮೇಶ್ವರ್ ಎರಡು ಕಾರ್ಖಾನೆಗಳ ಅಭಿವೃದ್ಧಿಗೆ ಬದ್ಧವಾಗಿರುವುದಾಗಿ ಘೋಷಿಸಿದ್ದರು.
    ಇದೀಗ ಕಾರ್ಖಾನೆ ಪುನಃ ಆರಂಭಗೊಳ್ಳುವ ನಿರೀಕ್ಷೆ ಗರಿಕೆದರಿದ್ದು, ಮುಂದಿನ ಬೆಳವಣಿಗೆಗಳ ಕುರಿತು ಕ್ಷೇತ್ರದ ಜನರು ಎದುರು ನೋಡುತ್ತಿದ್ದಾರೆ. ಒಂದು ವೇಳೆ ಕಾರ್ಖಾನೆ ಪುನಃ ಆರಂಭಗೊಂಡಲ್ಲಿ, ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವ ಜೊತೆ ರೈತರು ಸಹ ನೆಮ್ಮದಿಯ ಬದುಕು ಕಂಡುಕೊಳ್ಳಲು ಸಾಧ್ಯವಾಗಲಿದೆ.

No comments:

Post a Comment