ನೀರಾವತಿ ತಜ್ಞರು, ರೈತರ ಜೊತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಿ : ಕೆ.ಟಿ ಗಂಗಾಧರ್
ಕಳೆದ 2 ದಿನಗಳಿಂದ ರೈತರು ಭದ್ರಾವತಿ ಬಿ.ಆರ್ ಪ್ರಾಜೆಕ್ಟ್ ನೀರಾವರಿ ಇಲಾಖೆ ಅಧೀಕ್ಷಕ ಇಂಜಿನಿಯರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದು, ರೈತ ಮುಖಂಡ ಕೆ.ಟಿ ಗಂಗಾಧರ್ ಮಾತನಾಡಿದರು.
ಭದ್ರಾವತಿ : ಮಳೆ ಕೊರತೆಯಿಂದಾಗಿ ಈ ಬಾರಿ ಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದು, ಈ ಹಿನ್ನಲೆಯಲ್ಲಿ ನಾಲೆಗಳಿಗೆ 100 ದಿನಗಳವರೆಗೆ ನೀರು ಹರಿಸುವುದು ಸರಿಯಲ್ಲ. ಜಲಾಶಯದಲ್ಲಿ ನೀರು ಉಳಿಸಿಕೊಳ್ಳುವ ಮೂಲಕ ರೈತರು ಸೇರಿದಂತೆ ಎಲ್ಲರ ಹಿತ ಕಾಪಾಡಬೇಕೆಂದು ರೈತ ಮುಖಂಡ ಕೆ.ಟಿ ಗಂಗಾಧರ್ ಆಗ್ರಹಿಸಿದರು.
ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದರೂ ಸಹ ನಾಲೆಗಳಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಭದ್ರಾ ಅಚ್ಚುಕಟ್ಟು ರೈತರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಕಳೆದ 2 ದಿನಗಳಿಂದ ರೈತರು ಬಿ.ಆರ್ ಪ್ರಾಜೆಕ್ಟ್ ನೀರಾವರಿ ಇಲಾಖೆ ಅಧೀಕ್ಷಕ ಇಂಜಿನಿಯರ್ ಕಚೇರಿ ಮುಂಭಾಗ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮಳೆ ಕೊರತೆಯಿಂದ ಪ್ರಸ್ತುತ ಜಲಾಶಯದಲ್ಲಿ 40 ಟಿಎಂಸಿ ಮಾತ್ರ ನೀರಿದ್ದು, ನಿರಂತರವಾಗಿ.100 ದಿನ ನೀರು ಬಿಟ್ಟಲ್ಲಿ ಜಲಾಶಯ ಸಂಪೂರ್ಣವಾಗಿ ಖಾಲಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಿರಂತರವಾಗಿ 100 ದಿನ ನೀರು ಹರಿಸುವ ಬದಲು ತಿಂಗಳಿಗೆ 15 ದಿನ ಮಾತ್ರ ನೀರು ಹರಿಸಬೇಕು. ಈ ಸಂಬಂಧ ನೀರಾವರಿ ತಜ್ಞರು, ರೈತರ ಜೊತೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಭದ್ರಾವತಿ, ತರೀಕೆರೆ ಮತ್ತು ಶಿವಮೊಗ್ಗ ಸೇರಿದಂತೆ ವಿವಿಧೆಡೆಗಳಿಂದ ರೈತರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಹೋರಾಟ ಮುಂದುವರೆಯುತ್ತಿದ್ದು, ಇನ್ನೂ ಹೆಚ್ಚಿನ ರೈತರು ಹೋರಾಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
No comments:
Post a Comment