Wednesday, November 8, 2023

ಪ್ರೊ. ಬಿ. ಕೃಷ್ಣಪ್ಪನವರ ೮೬ನೇ ಜನ್ಮದಿನ

ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ತಾಲೂಕು ಶಾಖೆ ವತಿಯಿಂದ ದಲಿತ ಚಳುವಳಿಯ ರೂವಾರಿ, ಸಮಿತಿ ಸಂಸ್ಥಾಪಕ ಪ್ರೊ. ಬಿ. ಕೃಷ್ಣಪ್ಪನವರ ೮೬ನೇ ಜನ್ಮದಿನ ಭದ್ರಾವತಿ ಹಳೇನಗರದ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಆಚರಿಸಲಾಯಿತು. ಪರಿಶಿಷ್ಟ ಜಾತಿ/ಪಂಗಡದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ತಾಲೂಕು ಶಾಖೆ ವತಿಯಿಂದ ದಲಿತ ಚಳುವಳಿಯ ರೂವಾರಿ, ಸಮಿತಿ ಸಂಸ್ಥಾಪಕ ಪ್ರೊ. ಬಿ. ಕೃಷ್ಣಪ್ಪನವರ ೮೬ನೇ ಜನ್ಮದಿನ ಹಳೇನಗರದ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಆಚರಿಸಲಾಯಿತು.
    ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಎಚ್ ಹಾಲೇಶಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಹಿರಿಯ ಸದಸ್ಯ ಬಿ.ಕೆ ಮೋಹನ್, ಪ್ರಗತಿಪರ ಹೋರಾಟಗಾರ ಸುರೇಶ್, ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮತ್ತು ದಲಿತ ಮುಖಂಡ ಹನುಮಂತಪ್ಪ ಕಲ್ಲಿಹಾಳ್, . ಸಮಿತಿ ಜಿಲ್ಲಾ ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಎಸ್. ಗೋವಿಂದರಾಜು, ಸಮಿತಿ ರಾಜ್ಯ ಮಹಿಳಾ ಸಂಘಟನಾ ಸಂಚಾಲಕಿ ರುದ್ರಮ್ಮ, ಸಮಿತಿ ಹಿರಿಯೂರು ಹೋಬಳಿ ಸಂಚಾಲಕ ಅಣ್ಣಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಆರ್. ಹರೀಶ್, ಶಿವಮೊಗ್ಗ ತಾಲೂಕು ಪ್ರಧಾನ ಸಂಚಾಲಕರಾದ  ಶೇಷಪ್ಪ ಹುಣುಸೂಡು, ಪರಮೇಶ್ ಸೂಗೂರು, ಮಂಜಣ್ಣ, ಸಂತೋಷ್ ಹಿರಿಯೂರು, ಗೋವಿಂದ್ ಕಾಶಿಪುರ, ಟಿ. ಮಹೇಶ್ ಅತ್ತಿಗುಂದ, ಡಿ. ನರಸಿಂಹಮೂರ್ತಿ, ರಾಮನಾಯ್ಕ, ಪ್ರಭು, ಹನುಮಂತು, ದುರ್ಗಪ್ಪ, ನವೀನ, ಈಶ್ವರಪ್ಪ, ರಾಜು, ರಮೇಶ್, ನಿಂಗಣ್ಣ, ಬಸವರಾಜ್, ಮನು  ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಸಮಿತಿ ತಾಲೂಕು ಪ್ರಧಾನ ಸಂಚಾಲಕ ಎಸ್. ಪುಟ್ಟರಾಜು ಅಧ್ಯಕ್ಷತೆ ವಹಿಸಿದ್ದರು. ತಾಲೂಕಿನ ಪರಿಶಿಷ್ಟ ಜಾತಿ/ಪಂಗಡದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಇದಕ್ಕೂ ಮೊದಲು ನಗರದ ಅಂಬೇಡ್ಕರ್ ವೃತ್ತದಿಂದ ಅಕ್ಕಮಹಾದೇವಿ ಸಮುದಾಯ ಭವನದವರೆಗೂ ಡಾ. ಬಿ.ಆರ್ ಅಂಬೇಡ್ಕರ್ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು.

ನ.೯ರಂದು ಮ್ಯಾಮೊಗ್ರಫಿ ಸ್ತನ ಕ್ಯಾನ್ಸರ್ ತಪಾಸಣೆ ಶಿಬಿರ

    ಭದ್ರಾವತಿ: ನಗರದ ಕಲ್ಪವೃಕ್ಷ ಸೇವಾ ಟ್ರಸ್ಟ್ ವತಿಯಿಂದ ಶಿವಮೊಗ್ಗ ನಾರಾಯಣ ಹೆಲ್ತ್‌ಕೇರ್, ನಾರಾಯಣ ಹೃದಯಾಲಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ನ.೯ರಂದು ಬೆಳಿಗ್ಗೆ ೧೦ ಗಂಟೆಗೆ ಉಚಿತ ಮ್ಯಾಮೊಗ್ರಫಿ-ಸ್ತನಕ್ಯಾನ್ಸರ್ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.
    ಜನ್ನಾಪುರ ಜಯಶ್ರೀ ವೃತ್ತದ ಸಮೀಪದ ಲೇಡಿಸ್ ಕ್ಲಬ್ ಮುಂಭಾಗದಲ್ಲಿರುವ ಟ್ರಸ್ಟ್ ಕಛೇರಿಯಲ್ಲಿ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಟ್ರಸ್ಟ್ ಅಧ್ಯಕ್ಷ ಲಾಜರ್ ಕೋರಿದ್ದಾರೆ.

ಪಿ. ಈಶ್ವರ್‌ರಾವ್ ನಿಧನ

ಪಿ. ಈಶ್ವರ್‌ರಾವ್
    ಭದ್ರಾವತಿ : ಹಿಂದೂ ಮಹಾಸಭಾ ಹಾಗು ಬಿಜೆಪಿ ಮುಖಂಡ, ಹೊಸಮನೆ ನಿವಾಸಿ ಪಿ. ಈಶ್ವರರಾವ್(೬೦) ಬುಧವಾರ ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ ಹಾಗು ಇಬ್ಬರು ಪುತ್ರಿಯರು ಇದ್ದರು. ಈಶ್ವರರಾವ್ ಮೂಲತಃ ಹಿಂದೂ ಮಹಾಸಭಾ ಕಾರ್ಯಕರ್ತರಾಗಿದ್ದು, ಬಿಜೆಪಿ ಪಕ್ಷದಲ್ಲೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಇವರ ನಿಧನಕ್ಕೆ ಹಿಂದೂ ಮಹಾಸಭಾ ಪ್ರಮುಖರು ಹಾಗು ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಸಹೋದರ ಪಿ. ಗಣೇಶ್‌ರಾವ್ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ನ.೯ರಂದು ಶುದ್ಧ, ಸುರಕ್ಷಿತ ಕುಡಿಯುವ ನೀರು ಪೂರೈಕೆ ಕುರಿತು ಅರಿವು

    ಭದ್ರಾವತಿ: ನಗರಸಭೆ ವತಿಯಿಂದ `ವುಮೆನ್ ಆಫ್ ವಾಟರ್, ವಾಟರ್ ಆಫ್ ವುಮೆನ್ ಕ್ಯಾಂಪೇನ್' ಜಲ್ ದಿವಾಳಿ ಅಭಿಯಾನದ ಅಂಗವಾಗಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ನ. ೯ರಂದು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಬೈಪಾಸ್ ರಸ್ತೆ, ಆನೇಕೊಪ್ಪದಲ್ಲಿರುವ ನಗರಸಭೆ ಜಲ ಶುದ್ಧೀಕರಣ ಘಟಕದಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೧ ಗಂಟೆವರೆಗೆ ಕಾರ್ಯಕ್ರಮ ನಡೆಯಲಿದ್ದು, ನಗರಸಭೆ ವ್ಯಾಪ್ತಿಯ ೩೦ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಪೂರೈಕೆಯ ಪ್ರಕ್ರಿಯೆ ಹಾಗು ಮಾಲೀಕತ್ವದ ಭಾವನೆ ಕುರಿತು ಅರಿವು ಮೂಡಿಸಲಾಗುವುದು. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪೌರಾಯುಕ್ತ ಎಚ್.ಎಂ ಮನುಕುಮಾರ್ ಕೋರಿದ್ದಾರೆ.

Tuesday, November 7, 2023

ಸಂಬಂಧಿಕನಿಂದಲೇ ಚಿನ್ನದ ಮಾಂಗಲ್ಯ ಸರ ಅಪಹರಣ

೨೪ ಗಂಟೆಯೊಳಗೆ ಪ್ರಕರಣ ಭೇದಿಸಿದ ನ್ಯೂಟೌನ್ ಪೊಲೀಸರು

ಘಟನೆ ನಡೆದ ೨೪ ಗಂಟೆಯೊಳಗೆ ಪ್ರಕರಣ ಭೇದಿಸಿ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ.
    ಭದ್ರಾವತಿ: ಘಟನೆ ನಡೆದ ೨೪ ಗಂಟೆಯೊಳಗೆ ಪ್ರಕರಣ ಭೇದಿಸಿ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ.
    ಕಡದಕಟ್ಟೆಯ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರ ಅಪಹರಿಸಿರುವ ಘಟನೆಗೆ ಸಂಬಂಧಿಸಿದ ಮಂಡ್ಯ ಮಳವಳ್ಳಿ ತಾಲೂಕಿನ ಕುರುಬನಪುರ ಗ್ರಾಮದ ನಿವಾಸಿ ಕೆ.ಎನ್ ನಾಗರಾಜ(೩೨) ಎಂಬಾತನನ್ನು ಬಂಧಿಸಿ ೮೮ ಗ್ರಾಂ. ತೂಕದ ಸುಮಾರು ೪.೫ ಲಕ್ಷ ರು. ಮೌಲ್ಯದ ಚಿನ್ನದ ಮಾಂಗಲ್ಯ ಸರ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
    ಘಟನೆ ವಿವರ:  ನ.೬ ರಂದು ಬೆಳಗ್ಗೆ ಕಡದಕಟ್ಟೆಯ ಮಹಿಳೆಯೊಬ್ಬರ ಮನೆಗೆ ಆಕೆಯ ಗಂಡನ ಅಣ್ಣನ ಮಗ ಕೆ.ಎನ್ ನಾಗರಾಜ ಬಂದಿದ್ದು, ಆತನು ತನ್ನ ಹತ್ತಿರ ಇದ್ದ ಟವಲ್ ತೆಗೆದುಕೊಂಡು ಮಹಿಳೆಯ ಕುತ್ತಿಗೆಗೆ ಬಿಗಿದು ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆಂದು ದೂರು ದಾಖಲಾಗಿತ್ತು.
    ಈ ಸಂಬಂಧ ಮಹಿಳೆ ನೀಡಿದ ದೂರಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ ಮಿಥುನ್ ಕುಮಾರ್,  ಹೆಚ್ಚುವರಿ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜ್‌ರವರ ಮೇಲ್ವಿಚಾರಣೆಯಲ್ಲಿ,  ನಗರ ಪೊಲೀಸ್ ವೃತ್ತ ನಿರೀಕ್ಷಕ ಜೆ. ಶ್ರೀಶೈಲ ಕುಮಾರ ನೇತೃತ್ವದಲ್ಲಿ  ಠಾಣಾಧಿಕಾರಿ ಟಿ. ರಮೇಶ್ ಮತ್ತು ಸಿಬ್ಬಂದಿಗಳಾದ  ನವೀನ್, ಮಲ್ಲಿಕಾರ್ಜುನ, ರಾಕೇಶ, ಗಿರೀಶ್ ಮತ್ತು ವಿನೋದ್‌ರವರುಗಳನ್ನೊಳಗೊಂಡ ತಂಡ ರಚಿಸಲಾಗಿತ್ತು.
    ತನಿಖಾ ತಂಡ ಪ್ರಕರಣ ದಾಖಲಾದ ೨೪ ಗಂಟೆಯೊಳಗಾಗಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ತನಿಖಾ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಪ್ರಶಂಸಿಸಿ ಅಭಿನಂದಿಸಿದೆ.  

ಸಮಾಜಮುಖಿ ಕಾರ್ಯಗಳಿಗೆ ಹೆಚ್ಚಿನ ಸಹಕಾರ : ಮನುಕುಮಾರ್

ರುದ್ರಭೂಮಿಯಲ್ಲಿ ಕಾಗೆಗೆ ಎಡೆ ಇಡುವ ಕಟ್ಟೆ, ಆಸನಗಳ ಉದ್ಘಾಟನೆ

ಭಾವಸಾರ ಕ್ಷತ್ರಿಯ ಸಮಾಜ ಹಾಗೂ ಭಾವಸಾರ ಕೋ ಆಪರೇಟಿವ್ ಸೊಸೈಟಿ ಅಂಗ ಸಂಸ್ಥೆಯಾದ ಭಾವಸಾರ ವಿಷನ್ ಇಂಡಿಯಾ ವತಿಯಿಂದ ಭದ್ರಾವತಿ ನಗರದ ಹುತ್ತಾ ಕಾಲೋನಿ ಹಾಗೂ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಕೈಗೊಂಡಿರುವ ಕಾಗೆಗೆ ಎಡೆ ಇಡುವ ಕಟ್ಟೆ ಹಾಗೂ ಕಾಂಕ್ರೀಟ್ ಆಸನಗಳ ಉದ್ಘಾಟನೆ ಕಾರ್ಯಕ್ರಮ ಮಂಗಳವಾರ ನಡೆಯಿತು.
    ಭದ್ರಾವತಿ : ಸಮಾಜಮುಖಿ ಕಾರ್ಯಗಳಿಗೆ ನಗರಸಭೆ ಆಡಳಿತ ಹೆಚ್ಚಿನ ಸಹಕಾರ ನೀಡಲಿದೆ ಎಂದು ಪೌರಾಯುಕ್ತ ಮನುಕುಮಾರ್ ಹೇಳಿದರು.
    ಅವರು ಮಂಗಳವಾರ ಭಾವಸಾರ ಕ್ಷತ್ರಿಯ ಸಮಾಜ ಹಾಗೂ ಭಾವಸಾರ ಕೋ ಆಪರೇಟಿವ್ ಸೊಸೈಟಿ ಅಂಗ ಸಂಸ್ಥೆಯಾದ ಭಾವಸಾರ ವಿಷನ್ ಇಂಡಿಯಾ ವತಿಯಿಂದ ನಗರದ ಹುತ್ತಾ ಕಾಲೋನಿ ಹಾಗೂ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಕೈಗೊಂಡಿರುವ ಕಾಗೆಗೆ ಎಡೆ ಇಡುವ ಕಟ್ಟೆ ಹಾಗೂ ಕಾಂಕ್ರೀಟ್ ಆಸನಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ವಿಶೇಷವಾಗಿ ರುದ್ರಭೂಮಿ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವುದು ಶ್ಲಾಘನೀಯವಾಗಿದ್ದು, ಸಮಾಜದಲ್ಲಿ ಮಾದರಿ ಕಾರ್ಯ ಇದಾಗಿದೆ. ಈ ರೀತಿಯ ಸಮಾಜಮುಖಿ ಕಾರ್ಯಗಳಿಗೆ ಸಂಪೂರ್ಣ ಸಹಕಾರವಿದೆ ಎಂದರು.
    ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಬಿವಿಐ ಸಂಸ್ಥಾಪಕ ಸಂಯೋಜಕ ಗಜೇಂದ್ರನಾಥ ಮಾಳೋದೆ, ರಾಷ್ಟ್ರೀಯ ಕಾರ್ಯದರ್ಶಿ ಸಚಿನ್ ಸಾಕ್ರೆ,  ಏರಿಯಾ ೧೦೩ರ ಗೌರ್‍ನರ್ ಸುರೇಶ್ ಶೇರ್‌ಖರ್, ಹಿರಿಯ ಮುತ್ಸದಿಗಳಾದ ಅಶೋಕ್ ಡೋಯಿಜೋಡೆ, ದಿನಕರ್ ಡೋಯಿಜೋಡೆ, ಬದ್ರಿನಾಥ್ ಉತ್ತರಕರ್, ಸತೀಶ್ ಕುಮಾರ್ ಉತ್ತರ್‌ಕರ್,  ಮುರಳಿಧರ್ ಉತ್ತರ್‌ಕರ್, ನರೇಂದ್ರ ಡೋಯಿಜೋಡೆ, ರಾಮ್‌ರಾವ್ ಡೋಯಿಜೋಡೆ , ಹನುಮಂತ್‌ರಾವ್ ಗುಜ್ಜರ್,  ಅಂಬಾಜಿರಾವ್ ರಂಗದೊಳ್, ವಿಠಲನಾಥ್ ತೇಲ್ಕರ್, ರಾಘವೇಂದ್ರ ಚಿಕ್ಕೋಡೆ , ಹಿರಿಯ ಪರ್ತಕ ಕೆ.ಎನ್ ರವೀಂದ್ರನಾಥ್(ಬ್ರದರ್) ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು
    ಭಾವಸಾರ ವಿಜನ್ ಇಂಡಿಯಾ ಏರಿಯಾ ೧೦೩ರ ತಾಲೂಕು ಅಧ್ಯಕ್ಷ ರಾಕೇಶ್ ಡೋಯಿಜೋಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿವಿಐ ಕಾರ್ಯದರ್ಶಿ ಆನಂದ್ ಉತ್ತರಕರ್ ಸ್ವಾಗತಿಸಿದರು. ಶಿಲ್ಪಾ ಜಗದೀಶ್ ನಿರೂಪಿಸಿದರು.

ಸವಿತಾ ಸಮಾಜಕ್ಕೆ ಮೀಸಲಾತಿ ನೀಡಿ, ಜಾತಿ ನಿಂದನೆ ಕಾಯ್ದೆ ಜಾರಿಗೊಳಿಸಿ

ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಸವಿತಾ ಸಮಾಜ ಮನವಿ

ರಾಜಕೀಯ, ಆರ್ಥಿಕ ಹಾಗು ಸಾಮಾಜಿಕವಾಗಿ ಹಿಂದುಳಿದಿರುವ ಸವಿತಾ ಸಮಾಜಕ್ಕೆ ಸರ್ಕಾರ ತಕ್ಷಣ ಮೀಸಲಾತಿ ನೀಡುವ ಜೊತೆಗೆ ಜಾತಿ ನಿಂದನೆ ಕಾಯ್ದೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ: ರಾಜಕೀಯ, ಆರ್ಥಿಕ ಹಾಗು ಸಾಮಾಜಿಕವಾಗಿ ಹಿಂದುಳಿದಿರುವ ಸವಿತಾ ಸಮಾಜಕ್ಕೆ ಸರ್ಕಾರ ತಕ್ಷಣ ಮೀಸಲಾತಿ ನೀಡುವ ಜೊತೆಗೆ ಜಾತಿ ನಿಂದನೆ ಕಾಯ್ದೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಪ್ರಮುಖರು ಮಾತನಾಡಿ, ಸಮಾಜದಲ್ಲಿ ಕ್ಷೌರಿಕ ವೃತ್ತಿ ಹಾಗು ಮಂಗಳವಾದ್ಯ ಮತ್ತು ಪಾರಂಪರಿಕ ವೈದ್ಯ ಪದ್ದತಿ ನಂಬಿ ಬದುಕುತ್ತಿರುವ ಸವಿತಾ ಸಮಾಜದವರು ಶೋಷಣೆಗೆ ಒಳಗಾಗಿದ್ದಾರೆ. ರಾಜಕೀಯ, ಆರ್ಥಿಕ ಹಾಗು ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಈಗಾಗಲೇ ಪಾರಂಪರಿಕ ವೈದ್ಯ ಪದ್ದತಿ ಕಸಿದುಕೊಳ್ಳಲಾಗಿದ್ದು, ಪ್ರಸ್ತುತ ಕ್ಷೌರಿಕ ವೃತ್ತಿ ಸಹ ಅನ್ಯರ ಪಾಲಾಗುತ್ತಿದೆ. ಇದರಿಂದಾಗಿ ಬದುಕುವುದು ಕಷ್ಟಕರವಾಗಿದ್ದು, ಈ ನಡುವೆ ಜಾತಿ ನಿಂದನೆ ಕಾಯ್ದೆ ಜಾರಿಗೊಳಿಸದಿರುವುದು ನೋವುಂಟು ಮಾಡಿದೆ ಎಂದು ಅಳಲು ತೋರ್ಪಡಿಸಿಕೊಂಡರು.
    ಸರ್ಕಾರ ತಕ್ಷಣ ಮುಂದಿನ ವರ್ಷ ಜ.೧೫ರೊಳಗಾಗಿ ಸಮಾಜದ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಸಮಾಜದ ಶ್ರೀ ಸವಿತಾನಂದನಾಥ ಸ್ವಾಮೀಜಿಯವರು ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೂ ಪಾದಯಾತ್ರೆ ನಡೆಸಿ ನಂತರ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ. ಸವಿತಾ ಸಮುದಾಯದವರು ಇದಕ್ಕೆ ಸಂಪೂರ್ಣ ಬೆಂಬಲ ನೀಡಲಿದ್ದಾರೆಂದು ಎಚ್ಚರಿಸಿದರು.
    ಸವಿತಾ ಸಹಕಾರ ಸಂಘದ ಅಧ್ಯಕ್ಷ ಎಂ. ಪರಮೇಶ್, ಸವಿತಾ ಸಮಾಜದ ಉಪಾಧ್ಯಕ್ಷರಾದ ಎನ್. ವೆಂಕಟೇಶ್, ಕೆ. ಓಬಳೇಶ್, ಜಿ. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ರಾಜು ರೆಡ್‌ಸನ್, ಸಹಕಾರ್ಯದರ್ಶಿ ಬಿ.ಎನ್ ಮಹೇಶ್‌ಕುಮಾರ್, ಖಜಾಂಚಿ ಎಸ್.ವಿ ನರಸಿಂಹಮೂರ್ತಿ, ಸಹಕಾರ್ಯದರ್ಶಿಗಳಾದ ಎನ್. ರಮೇಶ್, ಪಿ.ವಿ ಸುರೇಶ್, ಸಲಹೆಗಾರ ಗಣೇಶಣ್ಣ, ನಿರ್ದೇಶಕರಾದ ಶಿವಶಂಕರ್, ವಾಸು, ಅನಿಲ್‌ಕುಮಾರ್, ಲೋಕೇಶ್, ಹರೀಶ್, ನಾಗರಾಜ್, ರವಿಚಂದ್ರ, ಕುಮಾರ್ ಹಾಗು ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಮಧುಮಾಲತಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.