Friday, September 27, 2024

ಮಂಜುಳ ನಿಧನ

ಮಂಜುಳ 
    ಭದ್ರಾವತಿ : ಹಳೇನಗರದ ನಿವಾಸಿ, ಉದ್ಗೀತ ಆಯುರ್ವೇದ ವೈದ್ಯ ಡಾ. ಸುದರ್ಶನ ಆಚಾರ್‌ರವರ ಮಾತೃಶ್ರೀ ಎಸ್. ಮಂಜುಳ (೭೦) ನಿಧನ ಹೊಂದಿದರು. 
    ಪತಿ ಶೇಷಗಿರಿ ಆಚಾರ್ ಹಾಗೂ ಪುತ್ರ ಡಾ. ಸುದರ್ಶನ್ ಆಚಾರ್ ಸೇರಿದಂತೆ ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
    ಇವರ ನಿಧನಕ್ಕೆ ಆಯುಷ್ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕ ಶಾಖೆ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ. 

ಸ್ವಚ್ಛತೆಯೇ ಸೇವೆ ಶೀರ್ಷಿಕೆಯಡಿ ಪರಿಸರ ದಿನ

ಭದ್ರಾವತಿ ನಗರಸಭೆ ವ್ಯಾಪ್ತಿಯ ಹಳೇ ಸೀಗೆಬಾಗಿ ಡಾ. ಬಿ.ಆರ್ ಅಂಬೇಡ್ಕರ್ ಎಜುಕೇಷನಲ್ ಟ್ರಸ್ಟ್, ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ ಕಾಲೇಜಿನ  ಸ್ವಚ್ಛತೆಯೇ ಸೇವೆ ಎಂಬ ಶೀರ್ಷಿಕೆಯಡಿ ಪರಿಸರ ದಿನ ಆಚರಿಸಲಾಯಿತು. 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಹಳೇ ಸೀಗೆಬಾಗಿ ಡಾ. ಬಿ.ಆರ್ ಅಂಬೇಡ್ಕರ್ ಎಜುಕೇಷನಲ್ ಟ್ರಸ್ಟ್, ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ ಕಾಲೇಜಿನ  ಸ್ವಚ್ಛತೆಯೇ ಸೇವೆ ಎಂಬ ಶೀರ್ಷಿಕೆಯಡಿ ಪರಿಸರ ದಿನ ಆಚರಿಸಲಾಯಿತು. 
    ಕಾಲೇಜಿನ ಪ್ರಾಂಶುಪಾಲ ಡಾ. ಸಿದ್ದರಾಜು, ಉಪ ಪ್ರಾಂಶುಪಾಲ ಎಸ್. ಹನುಮಂತಪ್ಪ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪೂರ್ಣಿಮಾ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. 

ಉಕ್ಕಿನ ನಗರದ ವಿವಿಧ ಕ್ಷೇತ್ರಗಳ ಗಣ್ಯರಿಗೆ ಡಾ. ವಿಷ್ಣುವರ್ಧನ್ ರಾಜ್ಯ ಪ್ರಶಸ್ತಿ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಮತ್ತು ಬೆಂಗಳೂರಿನ ನಿಸರ್ಗ ಚಾರಿಟೇಬಲ್ ಟ್ರಸ್ಟ್, ನಿರಾಶ್ರಿತರ ವೃದ್ಧಾಶ್ರಮ ಹಾಗೂ ಮೈಸೂರು ಶ್ರೀ ಅನಂತೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ, ಹೂಟಗಳ್ಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ. ವಿಷ್ಣುವರ್ಧನ್‌ರವರ ೭೪ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ನಗರದ ವಿವಿಧ ಕ್ಷೇತ್ರಗಳ ಗಣ್ಯರಿಗೆ ಡಾ. ವಿಷ್ಣುವರ್ಧನ್ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
    ಭದ್ರಾವತಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಮತ್ತು ಬೆಂಗಳೂರಿನ ನಿಸರ್ಗ ಚಾರಿಟೇಬಲ್ ಟ್ರಸ್ಟ್, ನಿರಾಶ್ರಿತರ ವೃದ್ಧಾಶ್ರಮ ಹಾಗೂ ಮೈಸೂರು ಶ್ರೀ ಅನಂತೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ, ಹೂಟಗಳ್ಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ. ವಿಷ್ಣುವರ್ಧನ್‌ರವರ ೭೪ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ನಗರದ ವಿವಿಧ ಕ್ಷೇತ್ರಗಳ ಗಣ್ಯರಿಗೆ ಡಾ. ವಿಷ್ಣುವರ್ಧನ್ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
    ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ನೌಕರ, ಹಿರಿಯ ರಂಗಭೂಮಿ ಕಲಾವಿದ ವೈ.ಕೆ ಹನುಮಂತಯ್ಯ, ಹಲವಾರು ವರ್ಷಗಳಿಂದ ರೈಫಲ್ ಅಸೋಸಿಯೇಷನ್ (ಸಿಆರ್‌ಟಿಸಿ) ಮೂಲಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಎಂ.ಎಸ್ ರವಿ, ಅಡುಗೆ ಅನಿಲ ವಿತರಕರಾಗಿ ಕರ್ತವ್ಯ ಸಲ್ಲಿಸುವ ಜೊತೆಗೆ ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ಸೆಲ್ವರಾಜ್ ಹಾಗು ಉದ್ಯಮಿ ಹಾಗು ಸಮಾಜ ಸೇವಕ ಜಿ.ಎನ್ ಸತ್ಯಮೂರ್ತಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
    ಪ್ರಶಸ್ತಿ ಪಡೆದುಕೊಂಡಿರುವ ಗಣ್ಯರಿಗೆ ನಗರದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಹಾಗು ಜನಪ್ರತಿನಿಧಿಗಳು ಅಭಿನಂದಿಸಿದ್ದಾರೆ.

Thursday, September 26, 2024

ಪ್ರಭಾಕರ ಬೀರಯ್ಯರಿಗೆ ಕಸಾಪ ಕಟ್ಟಡ ಸಮಿತಿಯಿಂದ ಸನ್ಮಾನ, ಗೌರವ

ಯೂನಿವರ್ಸಿಟಿ ಆಫ್ ಸೆಂಟ್ರಲ್ ಅಮೆರಿಕ ವಿಶ್ವವಿದ್ಯಾಲಯ ಭದ್ರಾವತಿ ನಗರದ ಜನ್ನಾಪುರ ನಿವಾಸಿ, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯರವರಿಗೆ ಡಾಕ್ಟರ್ ಆಫ್ ಲೆಟರ್‍ಸ್-ಡಿ.ಲಿಟ್ ಗೌರವ ಪದವಿ ನೀಡಿದೆ. ಈ ಹಿನ್ನಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಟ್ಟಡ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ: ಯೂನಿವರ್ಸಿಟಿ ಆಫ್ ಸೆಂಟ್ರಲ್ ಅಮೆರಿಕ ವಿಶ್ವವಿದ್ಯಾಲಯ ನಗರದ ಜನ್ನಾಪುರ ನಿವಾಸಿ, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯರವರಿಗೆ ಡಾಕ್ಟರ್ ಆಫ್ ಲೆಟರ್‍ಸ್-ಡಿ.ಲಿಟ್ ಗೌರವ ಪದವಿ ನೀಡಿದೆ. ಈ ಹಿನ್ನಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಟ್ಟಡ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಸಮಿತಿ ಅಧ್ಯಕ್ಷರಾದ ಡಾ. ವಿಜಯಾದೇವಿ ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗು ಸದಸ್ಯರು ಸನ್ಮಾನಿಸಿ ಗೌರವಿಸಿದರು. ಪ್ರಭಾಕರ ಬೀರಯ್ಯರವರು ಕಟ್ಟಡ ಸಮಿತಿ ಉಪಾಧ್ಯಕ್ಷರಾಗಿದ್ದು, ಅವರ ಬಹುಮುಖ ಸಾಮಾಜಿಕ ಸೇವೆಯನ್ನು ಗುರುತಿಸಿ ಗೌರವ ಡಿ ಲಿಟ್ ಪದವಿ ನೀಡಿರುವುದು ಹೆಮ್ಮೆಯ ವಿಷಯವಾಗಿದೆ. ಅಲ್ಲದೆ ಇದು ಸಮಿತಿಗೆ ಸಂದ ಗೌರವಾಗಿದ್ದು, ಪ್ರಭಾಕರ ಬೀರಯ್ಯರವರು ಮತ್ತಷ್ಟು ಸೇವಾ ಕಾರ್ಯಗಳನ್ನು ಕೈಗೊಳ್ಳಲು ಸ್ಪೂರ್ತಿ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು. 
      ಸನ್ಮಾನ ಸ್ವೀಕರಿಸಿದ ಪ್ರಭಾಕರ ಬೀರಯ್ಯರವರು ಅಭಿನಂದನಾ ನುಡಿಗಳನ್ನಾಡಿ, ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಸಮಿತಿ ಪ್ರಮುಖರಾದ ಸಿ. ಜಯಪ್ಪ ಹೆಬ್ಬಳಗೆರೆ, ಕಸಾಪ ಕಾರ್ಯದರ್ಶಿ ಎಂ.ಈ  ಜಗದೀಶ್, ಮೋಹನ್ ಕುಮಾರ್, ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ನಿರ್ದೇಶಕ ಬಿ.ಎಸ್ ಪ್ರಕಾಶ್, ಕರ್ನಾಟಕ ಸಾಹಿತ್ಯ ಸಾಂಸ್ಕೃತಿ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಪ್ರಮುಖರಾದ ಜಂಟಿ ಕಾರ್ಯದರ್ಶಿ ಸೌಮ್ಯ ಡಿ. ಪ್ರಭಾಕರ ಬೀರಯ್ಯ, ನಿರ್ದೇಶಕ ಜಿ. ಸುರೇಶ್, ಶಿಕ್ಷಣ ಸಂಯೋಜಕ ಪರಮೇಶ್ವರಪ್ಪ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಗುದ್ದಲಿಗೆ ಪೂಜೆ ನೆರವೇರಿಸಿ, ಯೋಜನಾ ವರದಿಗೆ ಸೂಚನೆ ನೀಡಿ

ಜನಸ್ಪಂದನ ಸೇವಾ ಟ್ರಸ್ಟ್, ಸುವರ್ಣ ಮಹಿಳಾ ವೇದಿಕೆಯಿಂದ ಮುಖ್ಯ ಅಭಿಯಂತರ ಎಜಾಜ್ ಹುಸೇನ್ ಸಾಹೇಬ್ರಿಗೆ ಮನವಿ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಭದ್ರಾವತಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಾಮಗಾರಿ ಕೈಗೊಳ್ಳಲು ಗುದ್ದಲಿ ಪೂಜೆ ಕೈಗೊಳ್ಳುವುದು ಹಾಗು ಭದ್ರಾ ನದಿಯಿಂದ ಪೈಪ್‌ಲೈನ್ ಮೂಲಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಅಗತ್ಯವಿರುವ ಕಾಮಗಾರಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನೊಳಗೊಂಡ ಯೋಜನಾ ವರದಿ(ಡಿಪಿಆರ್) ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಶ್ರೀ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಇಲಾಖೆಯ ಮುಖ್ಯ ಅಭಿಯಂತರ ಎಜಾಜ್ ಹುಸೇನ್ ಸಾಹೇಬ್ರಿಗೆ ಮನವಿ ಸಲ್ಲಿಸಲಾಗಿದೆ. 
    ಭದ್ರಾವತಿ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಾಮಗಾರಿ ಕೈಗೊಳ್ಳಲು ಗುದ್ದಲಿ ಪೂಜೆ ಕೈಗೊಳ್ಳುವುದು ಹಾಗು ಭದ್ರಾ ನದಿಯಿಂದ ಪೈಪ್‌ಲೈನ್ ಮೂಲಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಅಗತ್ಯವಿರುವ ಕಾಮಗಾರಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನೊಳಗೊಂಡ ಯೋಜನಾ ವರದಿ(ಡಿಪಿಆರ್) ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಶ್ರೀ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಇಲಾಖೆಯ ಮುಖ್ಯ ಅಭಿಯಂತರ ಎಜಾಜ್ ಹುಸೇನ್ ಸಾಹೇಬ್ರಿಗೆ ಮನವಿ ಸಲ್ಲಿಸಲಾಗಿದೆ. 
    ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಂಬ್ಲೆಬೈಲು, ಕಲ್ಲಹಳ್ಳಿ, ತಡಸ, ದೊಣಬಘಟ್ಟ, ಸಿಂಗನಮನೆ, ಕೂಡ್ಲಿಗೆರೆ, ಬಿಳಿಕಿ, ಬಾರಂದೂರು, ಕಂಬದಾಳ್ ಹೊಸೂರು, ಗ್ರಾಮಪಂಚಾಯತಿ ವ್ಯಾಪ್ತಿಯ ಹಳ್ಳಿಗಳ ಗ್ರಾಮಸ್ಥರಿಗೆ ಪರಿಶುದ್ಧವಾದ ಕುಡಿಯುವ ನೀರನ್ನು ಸರಬರಾಜು ಮಾಡುವ ಯೋಜನೆಗಳ ಟೆಂಡರ್ ಪ್ರಕ್ರಿಯೆ ಈಗಾಗಲೇ ಮುಕ್ತಾಯಗೊಂಡಿದೆ. ಈ ಹಿನ್ನಲೆಯಲ್ಲಿ ಶಿಷ್ಟಾಚಾರ ಪಾಲನೆ (ಪ್ರೋಟೋಕಾಲ್) ಪ್ರಕಾರ ಗುದ್ದಲಿ ಪೂಜೆ ನೆರವೇರಿಸುವ ಕುರಿತು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಲಾಗಿದೆ. 
    ದೊಣಬಘಟ್ಟ, ಬಿಳಿಕಿ, ತಡಸ, ಕಾಗೆಕೋಡಮಗ್ಗಿ ಮತ್ತು ನಾಗತಿಬೆಳಗಲು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಪರಿಶುದ್ಧವಾದ ಹಾಗೂ ಸಮರ್ಪಕವಾಗಿ ಕುಡಿಯುವ ನೀರನ್ನು ಸರಬರಾಜು ಮಾಡಲು ಪ್ರಸ್ತುತ ಕೆರೆಯ ನೀರಿನ ಸರಬರಾಜು ಬದಲಿಗೆ ನಗರಸಭೆ ವ್ಯಾಪ್ತಿಯ ಕಾಗದನಗರದ ಬಳಿ ಭದ್ರಾ ನದಿಯಿಂದ ನೀರನ್ನು ಪೈಪ್‌ಲೈನ್ ಮೂಲಕ ಒದಗಿಸಲು ಹಾಗೂ ಅವಶ್ಯಕವಿರುವ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಹೆಚ್ಚುವರಿ ಕುಡಿಯುವ ನೀರಿನ ಟ್ಯಾಂಕ್‌ಗಳ ನಿರ್ಮಾಣ ಮಾಡಲು ಸಂಪೂರ್ಣ ವಿವರಗಳನ್ನೊಳಗೊಂಡ ಯೋಜನಾ ವರದಿ(ಡಿಪಿಆರ್) ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಮನವಿ ಮಾಡಲಾಗಿದೆ. 
    ಶ್ರೀ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಛೇರ್ಮನ್, ಮಾಜಿ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್.ವೇಣುಗೋಪಾಲ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದ್ದು, ಈ ನಡುವೆ ಮುಖ್ಯ ಅಭಿಯಂತರ ಎಜಾಜ್ ಹುಸೇನ್ ಸಾಹೇಬ್ರ ಕಾರ್ಯವೈಖರಿ ಹಾಗು ಭದ್ರಾವತಿ ಹಾಗು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಹೆಚ್ಚಿನ ಶ್ರಮವಹಿಸಿರುವ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
    ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬಿ.ವಿ ಗಿರಿನಾಯ್ಡು, ದೊಣಬಘಟ್ಟ ಗ್ರಾಮಪಂಚಾಯತಿ ಅಧ್ಯಕ್ಷರಾದ ನಜೀಬಾಸುಲ್ತಾನ್, ಉಪಾಧ್ಯಕ್ಷ ಜೋಹರ್‌ಬಾನು, ಮುಖಂಡರಾದ ಯೂನಸ್‌ಬೇಗ್, ಮಹಮ್ಮದ್ ಪಾರೂಕ್, ಖಾಸಿಂಸಾಬ್, ದೇವೇಂದ್ರಪ್ಪ ಮತ್ತು ಕಲ್ಲಹಳ್ಳಿ ಗ್ರಾಮಪಂಚಾಯತಿ ಸದಸ್ಯ ಧರ್ಮಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ದಾನಿಗಳ ಕೊಡುಗೆ ಮಕ್ಕಳ ಶಿಕ್ಷಣಕ್ಕೆ ದಾರಿ ದೀಪವಾಗಲಿ : ಸತ್ಯನಾರಾಯಣ

ಭದ್ರಾವತಿ ತಾಲೂಕಿನ ದೊಡ್ಡೇರಿ ಕ್ಲಸ್ಟರ್ ವ್ಯಾಪ್ತಿಯ ಗಂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಳೆ ಗಂಗೂರು ವೆಂಕಣ್ಣರವರು ದೇಣಿಗೆಯಾಗಿ ನೀಡಿದ ಸೌಂಡ್ ಸಿಸ್ಟಂ ಉಪವಿಭಾಗಾಧಿಕಾರಿ ಸತ್ಯನಾರಾಯಣ ಹಾಗು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ಇನ್ನಿತರರು ಶಾಲೆಗೆ ಹಸ್ತಾಂತರಿಸಿದರು.  
    ಭದ್ರಾವತಿ: ಶಾಲೆಗಳಿಗೆ ದಾನವಾಗಿ ಪಡೆದ ವಸ್ತುಗಳು ಮಕ್ಕಳ ಕಲಿಕೆಗೆ ದಾರಿ ದೀಪವಾಗಬೇಕು. ಈ ನಿಟ್ಟಿನಲ್ಲಿ ಅವುಗಳ ಸದ್ಬಳಕೆಯಾಗಬೇಕೆಂದು ಉಪವಿಭಾಗಾಧಿಕಾರಿ ಸತ್ಯನಾರಾಯಣ ಹೇಳಿದರು. 
    ಅವರು ತಾಲೂಕಿನ ದೊಡ್ಡೇರಿ ಕ್ಲಸ್ಟರ್ ವ್ಯಾಪ್ತಿಯ ಗಂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಳೆ ಗಂಗೂರು ವೆಂಕಣ್ಣರವರು  ದೇಣಿಗೆಯಾಗಿ ನೀಡಿದ ಸೌಂಡ್ ಸಿಸ್ಟಂ ಶಾಲೆಗೆ ಹಸ್ತಾಂತರಿಸಿ ಹಾಗು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು. 
    ಮಕ್ಕಳು ಕಲಿಕೆಗೆ ಹೆಚ್ಚಿನ ಗಮನ ನೀಡುವ ಜೊತೆಗೆ ಶಿಕ್ಷಕರು ಹಾಗು ಪೋಷಕರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಭವಿಷ್ಯದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕೆಂದರು. 
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮಾತನಾಡಿ, ಪ್ರಸ್ತುತ ಮಕ್ಕಳ ಕಲಿಕೆ ಸರಳಗೊಳಿಸುವ ನಿಟ್ಟಿನಲ್ಲಿ ಇಲಾಖೆ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಲ್ಲದೆ ಶಿಕ್ಷಕರು ಕಲಿಕೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಾರೆ. ಈ ಹಿನ್ನಲೆಯಲ್ಲಿ ಕಲಿಕೆ ಕಷ್ಟವಾಗಲಾರದು. ಮಕ್ಕಳು ಪೋಷಕರಿಗೆ ಹೊರೆಯಾಗದಂತೆ ನಡೆದುಕೊಳ್ಳಬೇಕು. ಉತ್ತಮ ಸಹವಾಸದೊಂದಿಗೆ ಮುಂದಿನ ಭವಿಷ್ಯ ರೂಪಿಸಿಕೊಳ್ಳುವ ಕಡೆ ಗಮನ ಹರಿಸಬೇಕೆಂದರು. 
    ಶಾಲೆಯ ಮುಖ್ಯ ಶಿಕ್ಷಕ ಮಂಜಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಹಳೇಯ ವಿದ್ಯಾರ್ಥಿಗಳು, ದಾನಿಗಳು, ಸಂಘ-ಸಂಸ್ಥೆಗಳು ಸಹ ಕೈಜೋಡಿಸುತ್ತಿರುವ ಪರಿಣಾಮ ಸರ್ಕಾರಿ ಶಾಲೆಗಳು ಸಹ ಸಬಲೀಕರಣಗೊಳ್ಳುತ್ತಿವೆ. ಈ ನಡುವೆ ಸಮಾಜದಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಒಲವು ಮೂಡಿಸುವ ಕಾರ್ಯ ಸಹ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಶಾಲೆಗಳ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ ಎಂದರು. 
    ಕಾವ್ಯ ಪ್ರಾರ್ಥಿಸಿ, ಶಿಕ್ಷಕಿಯರಾದ ಸವಿತಾ ಸ್ವಾಗತಿಸಿ, ಫಾತೀಮಾಬೀ ನಿರೂಪಿಸಿದರು. ಶಿಕ್ಷಕ ಕಿರಣ್ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

Wednesday, September 25, 2024

ಬಿಜೆಪಿ ಒಬಿಸಿ ವತಿಯಿಂದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನ

ಭದ್ರಾವತಿ ತಾಲೂಕು ಬಿಜೆಪಿ ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಅಪ್ರತಿಮ ಸಂಘಟಕ, ರಾಷ್ಟ್ರವಾದಿ ದಾರ್ಶನಿಕ, ಮಾರ್ಗದರ್ಶಕರಾದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನ ಆಚರಿಸಲಾಯಿತು. 
    ಭದ್ರಾವತಿ: ತಾಲೂಕು ಬಿಜೆಪಿ ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಅಪ್ರತಿಮ ಸಂಘಟಕ, ರಾಷ್ಟ್ರವಾದಿ ದಾರ್ಶನಿಕ, ಮಾರ್ಗದರ್ಶಕರಾದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನ ಆಚರಿಸಲಾಯಿತು. 
    ಪಂಡಿತ್ ದೀನದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸುವ ಮೂಲಕ ಬಿಜೆಪಿ ಸದಸ್ಯತ್ವ ಅಭಿಯಾನ ಸಭೆ ನಡೆಸಲಾಯಿತು. ಮಂಡಲ ಒಬಿಸಿ ಅಧ್ಯಕ್ಷ ರಾಜಶೇಖರ್ ಉಪ್ಪಾರ ಅಧ್ಯಕ್ಷತೆ ವಹಿಸಿದ್ದರು.
    ಮಂಡಲ ಅಧ್ಯಕ್ಷರಾದ ಧರ್ಮ ಪ್ರಸಾದ್ ಅವರು ಮಾತನಾಡಿ ದೀನ್ ದಯಾಳ್ ಉಪಾಧ್ಯಾಯ ಅವರ ಮಹತ್ವದ ಸಂದೇಶಗಳಾದ ಏಕಾತ್ಮ ಮಾನವದರ್ಶನ, ಅಂತ್ಯೋದಯದ ಅದ್ಭುತ ಪರಿಕಲ್ಪನೆ, ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸಮಸ್ತ ಎಂಬ ತತ್ವಗಳ ದೃಷ್ಟಿಕೋನವನ್ನು ಬೆಳೆಸಿಕೊಂಡು ಈ ತತ್ವಗಳನ್ನು ಉಸಿರಾಗಿಸಿಕೊಂಡ ಮಹಾತ್ಮರಿಗೆ ನಮಿಸಿದರು.   
    ಒಬಿಸಿ ಜಿಲ್ಲಾಧ್ಯಕ್ಷ ಎಂ.ಎನ್ ಸುಧಾಕರ್, ಅಭಿಯಾನದ ಜಿಲ್ಲಾ ಪ್ರಭಾರಿ ಭವಾನಿರಾವ್ ಮೋರೆ ಮಾತನಾಡಿ, ಪ್ರತಿಯೊಬ್ಬ ಕಾರ್ಯಕರ್ತ ಗರಿಷ್ಠ ೧೦೦ ಸದಸ್ಯತ್ವದ ಗುರಿ ಹೊಂದಬೇಕೆಂದು ವಿನಂತಿಸಿಕೊಂಡರು. 
    ಜಿಲ್ಲಾ ಒಬಿಸಿ ಉಪಾಧ್ಯಕ್ಷ ಪ್ರದೀಪ್ ಹೊನ್ನಪ್ಪ, ಕೆ.ಎನ್ ವಿಕಾಸ್, ಎಂ. ಪ್ರಭಾಕರ್, ಎನ್. ರಂಗನಾಥ್ ಹಾಗು ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.