Tuesday, October 8, 2024

ವಾಹನ ಅಡ್ಡಗಟ್ಟಿ ನಗದು ಹಣ, ಮೊಬೈಲ್ ದೋಚಿದ ಪ್ರಕರಣ

೩ ಆರೋಪಿಗಳಿಗೆ ೭ ವರ್ಷ, ೧ ತಿಂಗಳು ಸಾದಾ ಸೆರೆವಾಸ 

ಭದ್ರಾವತಿ ನಗರದ ಬೈಪಾಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಅಡ್ಡಗಟ್ಟಿ ವ್ಯಕ್ತಿಯೊಬ್ಬರನ್ನು ಬೆದರಿಸಿ ನಗದು ಹಣ, ಮೊಬೈಲ್ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೊಳಗಾಗಿರುವ ೩ ಆರೋಪಿಗಳು. 
    ಭದ್ರಾವತಿ: ನಗರದ ಬೈಪಾಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಅಡ್ಡಗಟ್ಟಿ ವ್ಯಕ್ತಿಯೊಬ್ಬರನ್ನು ಬೆದರಿಸಿ ನಗದು ಹಣ, ಮೊಬೈಲ್ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ೭ ವರ್ಷ ೧ ತಿಂಗಳು ಸಾದಾ ಸೆರೆವಾಸ ಶಿಕ್ಷೆ ವಿಧಿಸಿ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. 
    ಶಿವಮೊಗ್ಗ ನಗರದ ನಿವಾಸಿಗಳಾದ ಸಯ್ಯದ್ ಇಬ್ರಾಹಿಂ ಅಲಿಯಾಸ್ ರಹಿಲ್(೨೩), ಮೊಹಮ್ಮದ್ ಮುಸ್ತಫಾ(೨೨) ಮತ್ತು ಮೊಹಮ್ಮದ್ ಅಲ್ಲಾಭಕ್ಷಿ (೨೨) ಶಿಕ್ಷೆಗೊಳಗಾದ ಆರೋಪಿಗಳು. 
    ಅನ್ವರ್ ಕಾಲೋನಿಯ ನಿವಾಸಿ ಮೊಹಮ್ಮದ್ ಖಾಲೀದ್(೨೧) ಬೈಪಾಸ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಯಾರೋ ಅಪರಿಚಿತ ವ್ಯಕ್ತಿಗಳು ಬಂದು ಅವರನ್ನು ತಡೆದು ಅಡ್ಡಗಟ್ಟಿ ಬೆದರಿಸಿ ನಗದು ಹಣ, ಮೊಬೈಲ್ ಮತ್ತು ವಾಚ್ ಕಿತ್ತು ಕೊಂಡು ಪರಾರಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಅಂದಿನ ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. 
    ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್‌ರವರು ವಿಚಾರಣೆ ನಡೆಸಿ ಆರೋಪ ದೃಢಪಟ್ಟ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಪಿ. ರತ್ನಮ್ಮ  ಪ್ರಕರಣದ ವಾದ ಮಂಡಿಸಿದ್ದರು. 

ಶ್ರೀ ಶ್ರೀನಿವಾಸ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ : ಅ.೧೨ರಂದು ಸ್ವಾಮಿಯ ರಥೋತ್ಸವ

ವಿಶೇಷ ಅಲಂಕಾರದ ಮೂಲಕ ಶ್ರೀ ಮನ್ನಾರಾಯಣನ ದಶಾವತಾರ ಕಿರು ಪರಿಚಯ 

ಭದ್ರಾವತಿ ನಗರದ ಬೈಪಾಸ್ ರಸ್ತೆ, ಮಿಲ್ಟ್ರಿ ಕ್ಯಾಂಪ್ ಶ್ರೀ ಶ್ರೀನಿವಾಸ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಶರನ್ನವರಾತ್ರಿ ಉತ್ಸವ ವಿಜೃಂಭಣೆಯಿಂದ ಜರುಗುತ್ತಿದ್ದು, ಅ.೮ರ ಮಂಗಳವಾರದ ವರೆಗೆ ೬ ದಿನಗಳ ಕಾಲ ಸ್ವಾಮಿಗೆ ಕೈಗೊಂಡಿರುವ ವಿಶೇಷ ಅಲಂಕಾರಗಳು. 
    ಭದ್ರಾವತಿ: ನಗರದ ಬೈಪಾಸ್ ರಸ್ತೆ, ಮಿಲ್ಟ್ರಿ ಕ್ಯಾಂಪ್ ಶ್ರೀ ಶ್ರೀನಿವಾಸ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಶರನ್ನವರಾತ್ರಿ ಉತ್ಸವ ವಿಜೃಂಭಣೆಯಿಂದ ಜರುಗುತ್ತಿದ್ದು, ಅ.೧೨ರಂದು ಸ್ವಾಮಿಯ ರಥೋತ್ಸವ ನಡೆಯಲಿದೆ. 
ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಮನ್ನಾರಾಯಣನ ದಶಾವತಾರ ಕಿರು ಪರಿಚಯ ಮಾಡುವ ನಿಟ್ಟಿನಲ್ಲಿ ಶ್ರೀನಿವಾಸ ಸ್ವಾಮಿಗೆ ಪ್ರತಿದಿನ ವಿಶೇಷ ಅಲಂಕಾರ ಕೈಗೊಳ್ಳುವ ಮೂಲಕ ಭಕ್ತರ ಗಮನ ಸೆಳೆಯಲಾಗುತ್ತಿದೆ. 
   ಬ್ರಹ್ಮದೇವ ಸೃಷ್ಟಿಕರ್ತನಾದರೆ, ವಿಷ್ಣು ಸ್ಥಿತಿಸ್ಥಾಪಕ, ಶಿವ ಲಯಕರ್ತ. ತ್ರಿಮೂರ್ತಿಗಳಲ್ಲಿ ಸ್ಥಿತಿಸ್ಥಾಪಕ ಶ್ರೀಮನ್ನಾರಾಯಣ ದುಷ್ಟರನ್ನು ಸಂಹರಿಸಲು ಮತ್ತು ಶಿಷ್ಟರನ್ನು ಸಂರಕ್ಷಿಸುವ ಸಲುವಾಗಿ ಧರೆಯಲ್ಲಿ ಹತ್ತು ಅವತಾರಗಳನ್ನೆತ್ತಿಹನು. ಲೋಕ ಕಲ್ಯಾರ್ಥವಾಗಿ ವಿಷ್ಣು ಎತ್ತಿದ ಈ ಎಲ್ಲಾ ಅವತಾರಗಳ ಹಾಗು ಈ  ಅವತಾರಗಳಿಗೆ ಕಾರಣವಾದ ಜಯ ವಿಜಯದ ಶಾಪ ವೃತ್ತಾಂತದ ಕಿರುಪರಿಚಯ ಮಾಡಲಾಗುತ್ತಿದೆ. 
     ಮೊದಲ ದಿನ ಮತ್ಸ್ಯಾವತಾರ : 
    ಪ್ರಳಯ ಕಾಲದಲ್ಲಿ ಅಪೌರುಷೇಯಗಳಾದ ವೇದಗಳನ್ನು ನಾಶವಾಗದಂತೆ ಸಂರಕ್ಷಿಸುವ ಸಲುವಾಗಿ ಹಾಗು ಪ್ರಳಯದ ನಂತರ ಮಹಾನ್ವೇದಗಳನ್ನು ಋಷಿ ಮುನಿಗಳಿಗೆ ಪುನಃ ನೀಡುವ ಸಲುವಾಗಿ ನಾರಾಯಣನು ಎತ್ತಿದ ಅವತಾರವೇ ಮತ್ಸ್ಯಾವತಾರ. ಮೊದಲ ದಿನ ಈ ಅಲಂಕಾರ ಕೈಗೊಳ್ಳಲಾಗಿತ್ತು. 
    ಎರಡನೇ ದಿನ ಕೂರ್ಮಾವತಾರ :
    ಕೂರ್ಮ ಅರ್ಥಾತ್ ಆಮೆಯ ಅವತಾರವನ್ನು ವಿಷ್ಣು ಎತ್ತಿದ್ದು ಲೋಕ ಕಲ್ಯಾಣಾರ್ಥವಾಗಿಯೇ. ಕಲ್ಪವೃಕ್ಷ, ಕಾಮಧೇನು, ಐರಾವತ, ಅಮೃತವೇ ಮೊದಲಾದ ಅತ್ಯಮೂಲ್ಯಗಳನ್ನು ಪಡೆಯಲು ಮಂದಾರ ಪರ್ವತವನ್ನು ಕಡಗೋಲು ಮಾಡಿ ವಾಸುಕಿ ಎಂಬ ಸರ್ಪವನ್ನು ಹಗ್ಗವನ್ನಾಗಿ ಮಾಡಿಕೊಂಡು ಸಮುದ್ರ ಮಂಥನ ಮಾಡುತ್ತಿದ್ದ ಕಾಲದಲ್ಲಿ ಮಂದಾರ ಪರ್ವತವು ಸಮುದ್ರದಲ್ಲಿ ಮುಳುಗದಂತೆ ತಡೆಯಲು ವಿಷ್ಣು ಎತ್ತಿದ ಎರೆಡನೇ ಅವತಾರವೇ ಕೂರ್ಮಾವತಾರ. ಎರಡನೇ ಈ ಅಲಂಕಾರ ಕೈಗೊಳ್ಳಲಾಗಿತ್ತು. 
    ಮೂರನೇ ದಿನ ವರಾಹಾವತಾರ : 
  ದಾನವನಾದ ಹಿರಣ್ಯಾಕ್ಷನು ತನ್ನ ಶಕ್ತಿ, ಬಲ, ವರಬಲ, ಗರ್ವದಿಂದ ಭೂದೇವಿಯನ್ನು ಸಮುದ್ರದಲ್ಲಿ ಬಚ್ಚಿಟ್ಟ ಸಂದರ್ಭದಲ್ಲಿ ಭೂದೇವಿಯನ್ನು ರಕ್ಷಿಸುವ ಸಲುವಾಗಿ ಹಾಗು ದುಷ್ಟನಾಗಿದ್ದ ಹಿರಣ್ಯಾಕ್ಷನನ್ನು ಸಂಹರಿಸುವ ಸಲುವಾಗಿ ವಿಷ್ಣು ಎತ್ತಿದ ಅವತಾರವೇ ವರಹಾವಾತಾರ. ಮೂರನೇ ದಿನ ಈ ಅಲಂಕಾರ ಕೈಗೊಳ್ಳಲಾಗಿತ್ತು. 
    ನಾಲ್ಕನೇ ದಿನ ನರಸಿಂಹಾವತಾರ : 
  ಹಿರಣ್ಯಾಕ್ಷನ ಸೋದರನಾದ ಹಿರಣ್ಯ ಕಶಿಪು ವರಬಲದಿಂದ, ಬುಜಭಲದಿಂದ ನರನನ್ನೂ, ದೇವಾನುದೇವತೆಗಳನ್ನು ಕಾಡಿ, ಮಹಾ ಗರ್ವಿಷ್ಟನಾಗಿ  ಧರ್ಮವನ್ನು ಮರೆತು ದುರಾಚಾರಿಯಾದಾಗ, ಆತನ ಮಗ ಪರಮ ವಿಷ್ಣು ಭಕ್ತನಾದ ಬಾಲ ಪ್ರಹ್ಲಾದನ ಭಕ್ತಿಯ ಕೋರಿಕೆಗೆ ಕಂಬದಿಂದ ಅವತರಿಸಿ ಹಿರಣ್ಯ ಕಶಿಪುವನ್ನು ಸಂಹರಿಸಲು ವಿಷ್ಣು ಎತ್ತಿದ ಅವತಾರವೇ ನರಸಿಂಹಾವತಾರ. ೪ನೇ ದಿನ ಈ ಅಲಂಕಾರ ಕೈಗೊಳ್ಳಲಾಗಿತ್ತು. 
    ಐದನೇ ದಿನ ವಾಮಾನಾವತಾರ : 
ಇಂದ್ರ ಪದವಿಯ ಮೇಲೆ ಕಣ್ಣಿಟ್ಟಿದ್ದ ದಾನ ವಾಸುರನಾದ ಬಲಿಚಕ್ರವರ್ತಿಯಿಂದ ಮೂರು ಅಡಿ ಜಾಗವನ್ನು ದಾನವಾಗಿ ಪಡೆದು ಒಂದು ಅಡಿಯಲ್ಲಿ ಭೂಮಿಯನ್ನು, ಮತ್ತೊಂದು ಅಡಿಯಲ್ಲಿ ಆಕಾಶವನ್ನು ಅಳೆದ ವಾಮನ ಮೂರನೇ ಅಡಿಯನ್ನು ಬಳಿಕ ತಲೆಯ ಮೇಲಿಟ್ಟು ಪಾತಾಳಕ್ಕೆ ತುಳಿದ. ಬಲಿಯ ಸಂಹಾರಕ್ಕಾಗಿ ವಿಷ್ಣು ಎತ್ತಿದ ಅವತಾರವೇ ವಾಮಾನಾವತಾರ. ಐದನೇ ದಿನ ಈ ಅಲಂಕಾರ ಕೈಗೊಳ್ಳಲಾಗಿತ್ತು. 
    ಆರನೇ ದಿನ ಪರಶುರಾಮವತಾರ : 
ಲೋಕ ಕಂಟಕರಾಗಿ ಮುಗ್ಧ ಜನರ ಮೇಲೆ ದಾಳಿ ಮಾಡುತ್ತಿದ್ದ ಕ್ಷತ್ರಿಯ ಕುಲವನ್ನೇ ನಾಶ ಮಾಡಲು ವಿಷ್ಣು ಎತ್ತಿದ ಅವತಾರವೇ ಪರಶುರಾಮವತಾರ. ಈ ಅವತಾರದಲ್ಲಿ ಪರಶುರಾಮರು ೨೧ ಬಾರಿ ಭೂ ಪ್ರದಕ್ಷಣೆ ಮಾಡಿ ದುಷ್ಠರಾದ ಎಲ್ಲ ಕ್ಷತ್ರಿಯರನ್ನು ಸಂಹರಿಸುವ ಮೂಲಕ ಧರ್ಮ ಸಂಸ್ಥಾಪನೆ ಮಾಡಿದರು. ಆರನೇ ದಿನ ಈ ಅಲಂಕಾರ ಕೈಗೊಳ್ಳಲಾಗಿತ್ತು. 
    ಅ.೧೨ರಂದು ಸ್ವಾಮಿಯ ರಥೋತ್ಸವ : 
    ಶ್ರೀ ಶೀನಿವಾಸ ದೇವರ ರಥೋತ್ಸವ ಅ.೧೨ರ ಮಧ್ಯಾಹ್ನ ೧೨ ಗಂಟೆಗೆ ನಡೆಯಲಿದ್ದು, ಇದಕ್ಕೂ ಮೊದಲು ಕಲಾಹೋಮ ಜರುಗಲಿದೆ. ರಥೋತ್ಸವದ ನಂತರ ಪ್ರಸಾದ ವಿನಿಯೋಗ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ದೇವಸ್ಥಾನ ಆಡಳಿತ ಮಂಡಳಿ ಕೋರಿದೆ. 

ನಾಡಹಬ್ಬ ದಸರಾ ಕಬಡ್ಡಿ ಪಂದ್ಯಾವಳಿ : ಸೊರಬ ತಂಡ ಪ್ರಥಮ, ಬಿವೈಕೆ ದ್ವಿತೀಯ ಬಹುಮಾನ

ನಾಡಹಬ್ಬ ದಸರಾ ಅಂಗವಾಗಿ ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಸೊರಬ ತಾಲೂಕಿನ ಕಬಡ್ಡಿ ತಂಡ ಮೊದಲ ಬಹುಮಾನ ಪಡೆದುಕೊಂಡಿದೆ. 
    ಭದ್ರಾವತಿ: ನಾಡಹಬ್ಬ ದಸರಾ ಅಂಗವಾಗಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಸೊರಬ ತಾಲೂಕಿನ ಕಬಡ್ಡಿ ತಂಡ ಮೊದಲ ಬಹುಮಾನ ಪಡೆದುಕೊಂಡಿದೆ. 
    ನಗರದ ಬಿವೈಕೆ ತಂಡ ಎರಡನೇ ಬಹುಮಾನ ಪಡೆದುಕೊಂಡಿದ್ದು, ಮೊದಲನೇ ಬಹುಮಾನ ಪಡೆದುಕೊಂಡ ಸೊರಬ ತಂಡ ೨೦ ಸಾವಿರ ರು. ನಗದು, ಟ್ರೋಫಿ ಹಾಗು ಪ್ರಶಸ್ತಿ ಪತ್ರ ಮತ್ತು ಎರಡನೇ ಬಹುಮಾನ ಪಡೆದ ಬಿವೈಕೆ ತಂಡ ೧೫ ಸಾವಿರ ರು. ನಗದು, ಟ್ರೋಫಿ ಹಾಗು ಪ್ರಶಸ್ತಿ ಪತ್ರ ತಮ್ಮದಾಗಿಸಿಕೊಂಡಿವೆ. ಅತ್ಯುತ್ತಮ ಆಟಗಾರರಾದ ಓಂಪ್ರಕಾಶ್ ಹಾಗೂ ಮಂಜುನಾಯ್ಕ್‌ರವರಿಗೆ ವೈಯಕ್ತಿಕವಾಗಿ ಪ್ರೋತ್ಸಾಹಧನ ನೀಡಲಾಯಿತು.
    ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಚನ್ನಪ್ಪ ಹಾಗು ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು ಹಾಗು ನಗರಸಭೆ ಸದಸ್ಯರು, ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ಮುಖಂಡರಾದ ಎಸ್. ಕುಮಾರ್, ಬದರಿನಾರಾಯಣ, ಎಸ್.ಎಸ್ ಭೈರಪ್ಪ, ಮೋಹನ್ ಪಳನಿ, ಹಿರಿಯ ಕಬಡ್ಡಿ ಕ್ರೀಡಾಪಟುಗಳಾದ ರಂಗನಾಥ್, ಸಿದ್ದಯ್ಯ ಸೇರಿದಂತೆ ಇನ್ನಿತರರು ಬಹುಮಾನ ವಿತರಿಸಿದರು.  

Monday, October 7, 2024

ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಅಮ್ಮನವರಿಗೆ ನವದುರ್ಗಿಯರ ವಿಶೇಷ ಅಲಂಕಾರ

ಭದ್ರಾವತಿ ನಗರದ ಹೊಸಸೇತುವೆ ರಸ್ತೆಯ ಭದ್ರಾ ನದಿ ದಡದಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಪ್ರತಿ ವರ್ಷ ನಾಡಹಬ್ಬ ದಸರಾ ಆಚರಣೆ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಸೋಮವಾರ ಮಹಾಕಾಳಿ ಅಲಂಕಾರ ಕೈಗೊಳ್ಳಲಾಗಿತ್ತು. 
    ಭದ್ರಾವತಿ : ನಗರದ ಹೊಸಸೇತುವೆ ರಸ್ತೆಯ ಭದ್ರಾ ನದಿ ದಡದಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಪ್ರತಿ ವರ್ಷ ನಾಡಹಬ್ಬ ದಸರಾ ಆಚರಣೆ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಸೋಮವಾರ ಅಮ್ಮನವರಿಗೆ ಮಹಾಕಾಳಿ ಅಲಂಕಾರ ಕೈಗೊಳ್ಳಲಾಗಿತ್ತು. 
    ಪ್ರತಿ ದಿನ ನವದುರ್ಗಿಯರ ವಿಶೇಷ ಅಲಂಕಾರ ಭಕ್ತರ ಕಣ್ಮನ ಸೆಳೆಯುತ್ತಿದೆ. ಸಂಜೆ ವಿಶೇಷ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗು ಅನ್ನಸಂತರ್ಪಣೆ ನೆರವೇರಿಸಿಕೊಂಡು ಬರಲಾಗುತ್ತಿದೆ. 
ದೇವಸ್ಥಾನ ಸೇವಾ ಸಮಿತಿ ಹಾಗು ದೇವಾಂಗ ಸಮಾಜದ ಪ್ರಮುಖರು, ನಗರದ ದಾನಿಗಳು, ಸೇವಾಕರ್ತರು ಹಾಗು ಗಣ್ಯರು ಸೇರಿದಂತೆ ನಗರದ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ಅಮ್ಮನವರ ಅಲಂಕಾರ ಕಣ್ತುಂಬಿಕೊಳ್ಳುತ್ತಿದ್ದಾರೆ. 

ಗಾಂಜಾ ಸೇವೆನೆ : ಪ್ರಕರಣ ದಾಖಲು

 ಸಾಂದರ್ಬಿಕ  ಚಿತ್ರ
    ಭದ್ರಾವತಿ: ನಗರದ ತರೀಕೆರೆ ರಸ್ತೆ ಗಾಂಧಿ ವೃತ್ತದ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿ ಅನುಮಾನಸ್ಪದವಾಗಿ ವರ್ತಿಸುತ್ತಿದ್ದ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
    ಹಳೇನಗರ ಪೊಲೀಸ್ ಠಾಣೆ ಉಪ ನಿರೀಕ್ಷಕ ಕೆ. ಚಂದ್ರಶೇಖರ್‌ರವರು ಅ.೫ರಂದು ರಾತ್ರಿ ೭ರ ಸಮಯದಲ್ಲಿ ಗಸ್ತಿನಲ್ಲಿದ್ದಾಗ ಅನುಮಾನಸ್ಪದವಾಗಿ ವರ್ತಿಸುತ್ತಿದ್ದ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದು ಆತನನ್ನು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಮನೆಯ ಪಕ್ಕದ ಖಾಲಿ ಸೈಟ್‌ನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು



    ಭದ್ರಾವತಿ: ಮನೆಯ ಪಕ್ಕದ ಖಾಲಿ ಸೈಟ್‌ನಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನ ಕಳವು ಮಾಡಿರುವ ಘಟನೆ ನಗರಸಭೆ ವ್ಯಾಪ್ತಿಯ ಭದ್ರಾ ಕಾಲೋನಿ ಕಣಕಟ್ಟೆಯಲ್ಲಿ ನಡೆದಿದೆ. 
    ಸ್ಪ್ಲೆಂಡರ್ ದ್ವಿಚಕ್ರ ವಾಹನ ಮನೆಯ ಪಕ್ಕದ ಖಾಲಿ ಸೈಟ್‌ನಲ್ಲಿ ರಾತ್ರಿ ೧೦.೩೦ ಸಮಯದಲ್ಲಿ ನಿಲ್ಲಿಸಿದ್ದು, ಬೆಳಿಗ್ಗೆ ೪ ಗಂಟೆ ಸಮಯದಲ್ಲಿ ನೋಡಿದಾಗ ಸ್ಥಳದಲ್ಲಿ ಇಲ್ಲದಿರುವುದು ಕಂಡು ಬಂದಿದೆ. ಈ ಸಂಬಂಧ ಸಿ.ಎಲ್ ಶಿವಲಿಂಗಪ್ಪ ಎಂಬುವರು ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ನಿರಂತರ ಅಭ್ಯಾಸದಿಂದ ಉತ್ತಮ ಸಾಧನೆ : ಮಹೇಶ್ವರಪ್ಪ

ಭದ್ರಾವತಿ ಹಳೇನಗರದ ಕನಕಮಂಪ ಮೈದಾನದಲ್ಲಿ ನಾಡಹಬ್ಬ ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ 
ಭದ್ರಾವತಿ: ಯಾವುದಾದರೂ ಗುರಿ ಹೊಂದಿ ನಿರಂತರ  ತೊಡಗಿದಾಗ ಮಾತ್ರ ಭವಿಷ್ಯದಲ್ಲಿ ಉತ್ತಮ ಸ್ಥಾನ ಪಡೆಯಲು ಸಾಧ್ಯ. ಕುಸ್ತಿಪಟುಗಳು ವರ್ಷದ ಎಲ್ಲಾ ದಿನ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು. ಯಾರು ಬೇಕಾದರೂ ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಂಡಾಗ ಉತ್ತಮ ಪ್ರದರ್ಶನ ನೀಡಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಹಿರಿಯ ಕುಸ್ತಿಪಟು ಮಹೇಶ್ವರಪ್ಪ ಹೇಳಿದರು. 
ಅವರು ಸೋಮವಾರ ಹಳೇನಗರದ ಕನಕಮಂಪ ಮೈದಾನದಲ್ಲಿ ನಾಡಹಬ್ಬ ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. 
ಕುಸ್ತಿಪಟುಗಳು ದೈಹಿಕವಾಗಿ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಜೊತೆಗೆ ಏಕಾಗ್ರತೆ, ಸಾಮರಸ್ಯ ಬೆಳೆಸಿಕೊಳ್ಳಬಹುದಾಗಿದೆ. ಕುಸ್ತಿ ಕ್ರೀಡೆಗೆ ಹೆಚ್ಚಿನ ಮಹತ್ವವಿದ್ದು, ಅಲ್ಲದೆ ಕುಸ್ತಿಪಟುಗಳಿಗೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನವಿದೆ ಎಂದರು. 
ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ದಸರಾ ನಾಡಹಬ್ಬ ಕ್ರೀಡಾ ಸಮಿತಿ ಅಧ್ಯಕ್ಷ ಚನ್ನಪ್ಪ, ನಾಡಹಬ್ಬ ದಸರಾ ಆಚಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ನಗರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಪೌರ ಸೇವಾ ಕಾರ್ಮಿಕರ ಸೇವಾ ಸಂಘದ ಅಧ್ಯಕ್ಷ ಚೇತನ್ ಕುಮಾರ್, ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್ ಸೇರಿದಂತೆ ಇನ್ನಿತರರು. ಉಪಸ್ಥಿತರಿದ್ದರು. 
ನಗರದ ಹಿರಿಯ ಕುಸ್ತಿ ಪಟುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ ಸ್ವಾಗತಿಸಿದರು.