Tuesday, October 15, 2024

ಅ.೧೭ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ

    ಭದ್ರಾವತಿ: ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗು ಮಹರ್ಷಿ ವಾಲ್ಮೀಕಿ ನಾಯಕ ಸಮಾಜ ಮತ್ತು ವಿವಿಧ ಸಂಘಟನೆಗಳ ವತಿಯಿಂದ ಅ.೧೭ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಶೈವ ಸಭಾಭವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆವಹಿಸಲಿದ್ದು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದಾ ಪೂರ್‍ಯಾನಾಯ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಚಳ್ಳಕೆರೆ, ತಳುಕು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಫೈಜ್ ನಟರಾಜ್ ಉಪನ್ಯಾಸ ನೀಡಲಿದ್ದಾರೆ. 
    ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಬಾನು, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ನಗರಸಭೆ ಅಧ್ಯಕ್ಷ ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ವಾಲ್ಮೀಕಿ ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ್ ಬಿ. ಆನೇಕೊಪ್ಪ, ತಹಸೀಲ್ದಾರ್ ಕೆ.ಆರ್ ನಾಗರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ, ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸವಿತ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. 
 

ಭದ್ರಾ ಜಲಾಶಯ ಪುನಃ ಭರ್ತಿ : ರೈತರ ಸಂತಸ ಇಮ್ಮುಡಿ

ಭದ್ರಾವತಿ ತಾಲೂಕಿನ ಜೀವ ನದಿ ಭದ್ರಾ ಜಲಾಶಯ ವ್ಯಾಪ್ತಿಯ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಜಲಾಶಯ ಪುನಃ ಭರ್ತಿಯಾಗಿದೆ. 
    ಭದ್ರಾವತಿ: ತಾಲೂಕಿನ ಜೀವ ನದಿ ಭದ್ರಾ ಜಲಾಶಯ ವ್ಯಾಪ್ತಿಯ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಜಲಾಶಯ ಪುನಃ ಭರ್ತಿಯಾಗಿದೆ. 
    ಜಲಾಶಯದ ಗರಿಷ್ಠ ಮಟ್ಟ ೧೮೬ ಅಡಿಯಾಗಿದ್ದು, ಮಂಗಳವಾರ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದೆ. ಒಳ ಹರಿವು ೭೮೬೯ ಕ್ಯೂಸೆಕ್ ಇದ್ದು, ಜಲಾಶಯದ ಸುರಕ್ಷತೆ ಹಿನ್ನಲೆಯಲ್ಲಿ ಇಷ್ಟೆ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ.  ಭದ್ರಾ ಬಲದಂಡೆ ನಾಲೆ(ಆರ್.ಬಿ.ಸಿ)ಗೆ ೧,೪೦೦ ಕ್ಯೂಸೆಕ್ ಮತ್ತು ಭದ್ರಾ ಎಡದಂಡೆ ನಾಲೆ(ಎಲ್.ಬಿ.ಸಿ)ಗೆ ೧೮೦ ಕ್ಯೂಸೆಕ್ ಹಾಗು ಭದ್ರಾ ಮೇಲ್ದಂಡೆ ಯೋಜನೆ(ಯು.ಬಿ.ಪಿ)ಗೆ ೭೦೦ ಕ್ಯೂಸೆಕ್ ನೀರು ಮತ್ತು ನದಿಗೆ ೨೦೦೦ ಸಾವಿರ ಕ್ಯೂಸೆಕ್ ಹರಿದು ಬಿಡಲಾಗುತ್ತಿದೆ. 
    ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಶೃಂಗೇರಿ ಎನ್‌ಆರ್ ಪುರ ಪ್ರದೇಶಗಳಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ಎರಡು ದಿನಗಳ ಹಿಂದೆ ನೀರಿನ ಮಟ್ಟ ೧೮೫.೧೧ ಅಡಿ ಇತ್ತು. ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದ ಕಾರಣ ಜಲಾಶಯ ಭರ್ತಿಯಾಗುವವರೆಗೂ  ಕಾದಿದ್ದು, ಈಗ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನಷ್ಟೇ ಹೊರ ಹರಿವು ಹರಿಸಲಾಗುತ್ತಿದೆ. ೪ ಕ್ರಸ್ಟ್ ಗೇಟ್‌ಗಳ ಮೂಲಕ ನದಿಗೆ ಹರಿಸಲಾಗುತ್ತಿರುವ ನೀರು ಹಾಲಿನ ನೊರೆಯಂತೆ ರಭಸದಿಂದ ಚಿಮ್ಮುದಿದ್ದು, ಮನೋಹಕವಾಗಿ ಕಂಡು ಬರುತ್ತಿದೆ.
    ಈ ವರ್ಷ ಅತ್ಯಧಿಕ ಮಳೆಯಾಗಿದ್ದು, ಜುಲೈ ತಿಂಗಳಿನಿಂದ ಆರಂಭವಾದ ಮಳೆ ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್‌ನಲ್ಲಿಯೂ  ಮುಂದುವರೆದಿದ್ದು, ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ ೧೫೬.೮ ಅಡಿ ಇತ್ತು. ಬರಗಾಲವೂ ತಲೆದೋರಿತ್ತು. ಈ ಬಾರಿ ಉತ್ತಮ ಮಳೆಯಾಗಿದ್ದು, ಈಗಾಗಲೇ ಕೆರೆಕಟ್ಟೆಗಳು, ನದಿಗಳು ತುಂಬಿ ಹರಿದಿವೆ. ಭದ್ರಾ ಜಲಾಶಯ ಪುನಃ ಸಂಪೂರ್ಣವಾಗಿ ಭರ್ತಿಯಾಗಿರುವುದು ಭದ್ರಾ ಅಚ್ಚುಕಟ್ಟುದಾರ ಪ್ರದೇಶದ ರೈತರ ಸಂತಸ ಇಮ್ಮುಡಿಯಾಗುವಂತೆ ಮಾಡಿದೆ.

ಸರ್ಕಾರಿ ನೌಕರರ ಸಂಘದ ಚುನಾವಣೆ : ೯ ನಾಮಪತ್ರ ಸಲ್ಲಿಕೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಕಛೇರಿ. 
    ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಯ ೨೦೨೪-೨೯ನೇ ಸಾಲಿನ ಕಾರ್ಯಕಾರಿ ಸಮಿತಿ ಚುನಾವಣೆ ನಡೆಯುತ್ತಿದ್ದು, ವಿವಿಧ ಮತ ಕ್ಷೇತ್ರಗಳಿಂದ ಒಟ್ಟು ೯ ಅಭ್ಯರ್ಥಿಗಳು ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದಾರೆ. 
    ಪಶುಪಾಲನಾ ಮತ್ತು ವೈದ್ಯ ಸೇವಾ ಇಲಾಖೆಯಿಂದ ಆನವೇರಿ ಪಶು ಚಿಕಿತ್ಸಾಲಯದ ಡಾ. ಸಿ.ಬಿ ರಮೇಶ್, ಸರ್ಕಾರಿ ಪ್ರಾಥಮಿಕ ಶಾಲೆಯಿಂದ ತಾಲೂಕಿನ ತಳ್ಳಿಕಟ್ಟೆ ನಾಗತಿಬೆಳಗಲು ತಾಂಡ ಸ.ಕಿ.ಪ್ರಾ.ಶಾಲೆಯ ಎಚ್.ಎನ್ ನರಸಿಂಹಮೂರ್ತಿ, ಸರ್ಕಾರಿ ಪ್ರೌಢ ಶಾಲೆಯಿಂದ ಹಳೇನಗರ ಸರ್ಕಾರಿ ಸಂಚಿಯ ಹೊನ್ನಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಬಿ. ಸಿದ್ದಬಸಪ್ಪ, ಸರ್ಕಾರಿ ಪದವಿಪೂರ್ವ ಕಾಲೇಜುಗಳು ಮತ್ತು ಪದವಿ ಕಾಲೇಜಿಯಿಂದ ಹಳೇನಗರ ಸರ್ಕಾರಿ ಸಂಚಿಯ ಹೊನ್ನಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಬಿ. ಚನ್ನಯ್ಯ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಹಾಗು ಅಲ್ಪ ಸಂಖ್ಯಾತರ ಇಲಾಖೆಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಕಲ್ಯಾಣಾಧಿಕಾರಿ ಆರ್. ಅಶೋಕ್ ರಾವ್, ಅರಣ್ಯ ಇಲಾಖೆಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿಯ ಡಿ. ವೆಂಕಟೇಶ್ ಮತ್ತು ವಲಯ ಅರಣ್ಯಾಧಿಕಾರಿಗಳ ಕಛೇರಿಯ ಎಸ್. ಕಾಂತೇಶ್ ನಾಯ್ಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತಾಲೂಕಿನ ಅಂತರಗಂಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎಚ್.ಎಸ್ ಡಾ. ಗಿರೀಶ್ ಹಾಗು ಖಜಾನೆ ಇಲಾಖೆಯಿಂದ ಉಪ ಖಜಾನೆ ಸಹಾಯಕ ನಿರ್ದೇಶಕರ ಕಾರ್ಯಾಲಯದ ಎ.ಸಿ ಮಮತ ನಾಮಪತ್ರ ಸಲ್ಲಿಸಿದ್ದಾರೆಂದು 
    ತಾಲೂಕಿನ ೨೪ ಮತ ಕ್ಷೇತ್ರಗಳಿಂದ ೩೪ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅ.೯ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ೧೮ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. ೧೯ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ೨೧ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮತದಾನ ಅಗತ್ಯವಿದ್ದಲ್ಲಿ ೨೮ರಂದು ಚುನಾವಣೆ ನಡೆಯಲಿದೆ. ಸಹಾಯಕ ಚುನಾವಣಾಧಿಕಾರಿಯಾಗಿ ಕಂದಾಯ ಇಲಾಖೆ ನಿವೃತ್ತ ನೌಕರ ಎಲ್.ಸಿ ಶಂಕರ್ ಜೋಯಿಸ್ ಕರ್ತವ್ಯ ನಿರ್ವಹಿಸಲಿದ್ದು, ಅಲ್ಲದೆ ಇದೆ ಮತ ಎಣಿಕೆ ನಡೆದು ಫಲಿತಾಂಶ ಸಹ ಘೋಷಣೆಯಾಗಲಿದೆ ಎಂದು ಚುನಾವಣಾಧಿಕಾರಿಯಾಗಿರುವ ನಿವೃತ್ತ ಉಪ ತಹಸೀಲ್ದಾರ್ ಬಿ.ಎಸ್ ಮೈಲಾರಯ್ಯ ತಿಳಿಸಿದ್ದಾರೆ. 

ಅಂಧ ವಿಕಲಚೇತನರ ಸ್ವಾಭಿಮಾನದ ಬದುಕು ಸಮಾಜಕ್ಕೆ ಮಾದರಿ


ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಮತ್ತು ಸಿದ್ದಾರ್ಥ ಅಂಧರ ಕೇಂದ್ರದ ವತಿಯಿಂದ ವಿಶ್ವ ದೃಷ್ಟಿ ದಿನಾಚರಣೆ ಹಾಗೂ ಸೇವಾ ದಿವಸ್ ಕಾರ್ಯಕ್ರಮ ಆಯೋಜಿಲಾಗಿತ್ತು.  
    ಭದ್ರಾವತಿ: ಪ್ರಸ್ತುತ ಸಮಾಜದಲ್ಲಿ ಕಣ್ಣಿದ್ದು ಕುರುಡರಾಗಿರುವ, ಕೈಕಾಲು ಚೆನ್ನಾಗಿದ್ದು ಸೋಮಾರಿಗಳಾಗಿರುವವರ ಮಧ್ಯೆ ಉತ್ತಮ ಶಿಕ್ಷಣ, ತರಬೇತಿ ಪಡೆದು ಸ್ವಾಭಿಮಾನದಿಂದ ಜೀವನ ಕಟ್ಟಿಕೊಳ್ಳುತ್ತಿರುವ ಅಂಧರು ನಮಗೆ ಆದರ್ಶ ಪ್ರಾಯರಾಗಿ ಕಾಣಿಸುತ್ತಾರೆ ಎಂದು ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಹಾಗು ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ, ಬಿ.ಎಸ್ ಮಹೇಶ್ ಕುಮಾರ್ ಹೇಳಿದರು.          
    ಅವರು ನಗರದ ನ್ಯೂಟೌನ್ ಲಯನ್ಸ್ ಕ್ಲಬ್ ಮತ್ತು ಸಿದ್ದಾರ್ಥ ಅಂಧರ ಕೇಂದ್ರದ ವತಿಯಿಂದ ವಿಶ್ವ ದೃಷ್ಟಿ ದಿನಾಚರಣೆ ಹಾಗೂ ಸೇವಾ ದಿವಸದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
     ಕಣ್ಣುಗಳ ದೋಷ ಮತ್ತು ಅವುಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ ಎರಡನೇ ಗುರುವಾರದಂದು ವಿಶ್ವದೃಷ್ಟಿ ದಿನಾಚರಣೆ ಆಚರಿಸಲಾಗುತ್ತಿದೆ. ಅಂಧರು ಸಹ ತಮ್ಮ ಪ್ರತಿಭೆಗಳ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡು ಮಾದರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಅಂಧರಿಗೆ ಉನ್ನತ ಶಿಕ್ಷಣ ಕೌಶಲ್ಯ ಅಭಿವೃದ್ಧಿ ತರಬೇತಿ ಹಾಗೂ ಸಂಗೀತ ತರಬೇತಿ ನೀಡುವ ಮೂಲಕ ಅವರ ಸ್ವಾವಲಂಬನೆಯ ಜೀವನೋಪಾಯಕ್ಕೆ ದಾರಿಯಾಗಿರುವ ಸಿದ್ದಾರ್ಥ ಅಂಧರ ಕೇಂದ್ರದ ಕಾರ್ಯ ಶ್ಲಾಘನೀಯ ಎಂದರು.
     ಲಯನ್ಸ್ ಕ್ಲಬ್ ಅಧ್ಯಕ್ಷ ರಾಮೂರ್ತಿ ಲಯನ್ಸ್ ಕ್ಲಬ್ ಸೇವಾ ದಿವಸ್ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಲಯನ್ಸ್ ಕ್ಲಬ್ ಖಜಾಂಚಿ ರಾಜಕುಮಾರ್, ಸಿದ್ದಾರ್ಥ್ ಅಂಧರ ಕೇಂದ್ರದ ನಿರ್ದೇಶಕಿ ಹಾಗೂ ಉಪನ್ಯಾಸಕಿ ಸೃಷ್ಟಿ ಸಭೆಯಲ್ಲಿ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಶಿವಕುಮಾರ್ ಸ್ವಾಗತಿಸಿ ವಂದಿಸಿದರು. ಅಂಧರ ಕೇಂದ್ರದ ಮಂಜುನಾಥ್ ಪ್ರಾರ್ಥಿಸಿದರು. 

Monday, October 14, 2024

`ಸ್ವಚ್ಛತಾ ಹಿ ಸೇವಾ-೨೦೨೪' ಅಭಿಯಾನ : ವಿಐಎಸ್‌ಎಲ್ ಅಧಿಕಾರಿಗಳು, ಕಾರ್ಮಿಕರಿಗೆ ಸಸಿ ವಿತರಣೆ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ `ಸ್ವಚ್ಛತಾ ಹಿ ಸೇವಾ-೨೦೨೪' ಅಭಿಯಾನದ ಅಂಗವಾಗಿ ಕಾರ್ಖಾನೆ ಆವರಣ ಮತ್ತು ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ನೌಕರರು ಮತ್ತು ಗುತ್ತಿಗೆ ಕಾರ್ಮಿಕರಿಗೆ ಸಸಿಗಳನ್ನು ವಿತರಿಸಲಾಯಿತು.
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ `ಸ್ವಚ್ಛತಾ ಹಿ ಸೇವಾ-೨೦೨೪' ಅಭಿಯಾನದ ಅಂಗವಾಗಿ ಕಾರ್ಖಾನೆ ಆವರಣ ಮತ್ತು ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ನೌಕರರು ಮತ್ತು ಗುತ್ತಿಗೆ ಕಾರ್ಮಿಕರಿಗೆ ಸಸಿಗಳನ್ನು ವಿತರಿಸಲಾಯಿತು.
    ಕಾರ್ಖಾನೆ ವತಿಯಿಂದ ಸೆಪ್ಟಂಬರ್ ಮತ್ತು ಅಕ್ಟೋಬರ್ ಎರಡು ತಿಂಗಳ ಅವಧಿಯಲ್ಲಿ ಸಾವಿರ ಸಸಿಗಳನ್ನು ವಿತರಿಸುವ ಗುರಿ ಹೊಂದಲಾಗಿದ್ದು,   ಈ ಅಭಿಯಾನದ ಭಾಗವಾಗಿ ಹೊಂಗೆ, ಅಶೋಕ, ಹಲಸು, ಅಡಕೆ ಮತ್ತು ತುಳಸಿ ತಳಿಯ ಸುಮಾರು ೭೦೦ ಸಸಿಗಳನ್ನು ಈಗಾಗಲೇ ನೌಕರರಿಗೆ ಮತ್ತು ಗುತ್ತಿಗೆ ಕಾರ್ಮಿಕರಿಗೆ ವಿತರಿಸಲಾಗಿದೆ. ತಾಲೂಕು ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಹಸಿರು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. 
    ಈ ನಡುವೆ ಅಭಿಯಾನದ ಸಂದರ್ಭದಲ್ಲಿ ಶಿವಮೊಗ್ಗ ಪರಿಸರ ಅಧಿಕಾರಿ ವಿ. ರಮೇಶ್ ಮತ್ತು ಉಪ ಪರಿಸರ ಅಧಿಕಾರಿ ಕೆ. ಶಿಲ್ಪಾ ಕಾರ್ಖಾನೆ ಹಾಗು ವಿಐಎಸ್‌ಎಲ್ ಅತಿಥಿ ಗೃಹ ಆವರಣದಲ್ಲಿರುವ ಸರ್.ಎಂ ವಿಶ್ವೇಶ್ವರಾಯ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ವೀಕ್ಷಿಸಿದರು. 
    ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಾಂದ್ವಾನಿ,   ಪ್ರಭಾರ ಮುಖ್ಯ ಪ್ರಧಾನ ವ್ಯವಸ್ಥಾಪಕ(ಕಾರ್ಯಗಳು) ಟಿ. ರವಿಚಂದ್ರನ್, ಮುಖ್ಯ ಪ್ರಧಾನ ವ್ಯವಸ್ಥಾಪಕ(ಎಚ್.ಆರ್ ಮತ್ತು ಸಾರ್ವಜನಿಕ ಸಂಪರ್ಕಗಳು) ಎಲ್. ಪ್ರವೀಣ್ ಕುಮಾರ್, ಮುಖ್ಯ ಪ್ರಧಾನ ವ್ಯವಸ್ಥಾಪಕ (ಇಎಂಡಿ ಮತ್ತು ಸಿಇ-ಸ್ಥಾವರ) ಎಂ. ಸುಬ್ಬರಾವ್ ಹಾಗು ಸಹಾಯಕ ಪ್ರಧಾನ ವ್ಯವಸ್ಥಾಪಕ ವಿಕಾಸ್ ಬಾಸರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ವಿಐಎಸ್‌ಎಲ್ ನಿವೃತ್ತ ನೌಕರರ ಬಿ.ಪಿ ಪಾಲಾಕ್ಷಪ್ಪ ನಿಧನ

ಬಿ.ಪಿ ಪಾಲಾಕ್ಷಪ್ಪ 
    ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರ ಬಿ.ಪಿ ಪಾಲಾಕ್ಷಪ್ಪ(೭೮) ನಿಧನ ಹೊಂದಿದರು. 
    ಪತ್ನಿ, ಇಬ್ಬರು ಗಂಡು ಮಕ್ಕಳು ಇದ್ದಾರೆ. ಇವರ ಅಂತ್ಯಕ್ರಿಯೆ ದಾವಣಗೆರೆ ಗ್ರಾಸ್ ಹೌಸ್ ರುದ್ರಭೂಮಿಯಲ್ಲಿ ಅ.೧೫ರ ಮಂಗಳವಾರ ಬೆಳಿಗ್ಗೆ ೧೧ ಗಂಟೆಗೆ ನೆರವೇರಲಿದೆ. ಪಾಲಾಕ್ಷಪ್ಪರವರು ಈ ಹಿಂದೆ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆಯವರ ಜನತಾ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಇವರ ನಿಧನಕ್ಕೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರ ಸಂತಾಪ ಸೂಚಿಸಿದೆ. 

೨ನೇ ಹಂತದ ಕಾಮಗಾರಿಗೆ ಸಂಸದರ ನಿಧಿಯಿಂದ ೩೦ ಲಕ್ಷ ರು. ಅನುದಾನ : ಬಿವೈಆರ್

ಭದ್ರಾವತಿ ಹಳೇನಗರದ ವೀರಶೈವ ಸೇವಾ ಸಮಿತಿವತಿಯಿಂದ ಶ್ರೀ ಬನಶಂಕರಿ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದುರ್ಗಾಸಪ್ತಶತಿ ಪಾರಾಯಣ ಹೋಮ ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ ರಾಘವೇಂದ್ರ ಪಾಲ್ಗೊಂಡಿದ್ದರು. 
    ಭದ್ರಾವತಿ : ಹಳೆನಗರದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನಿರ್ಮಿಸಲಾಗಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದ ಶ್ರೀಮಾತಾ ಬನಶಂಕರಿ ದೇವಿ ಸಭಾಂಗಣದ ೨ನೇ ಹಂತದ ಕಾಮಗಾರಿಗೆ ಮುಂದಿನ ದಿನಗಳಲ್ಲಿ ೫೦ ಲಕ್ಷ ರು. ಸಂಸದರ ಅನುದಾನದಿಂದ ನೀಡಲಾಗುವುದು ಎಂದು ಸಂಸದ ಬಿ.ವೈ ರಾಘವೇಂದ್ರ ಭರವಸೆ ನೀಡಿದರು. 
    ಅವರು ಹಳೇ ನಗರದ ವೀರಶೈವ ಸೇವಾ ಸಮಿತಿವತಿಯಿಂದ  ಶ್ರೀ ಬನಶಂಕರಿ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದುರ್ಗಾಸಪ್ತಶತಿ ಪಾರಾಯಣ ಹೋಮ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಶ್ರೀ ವೀರಭದ್ರೇಶ್ವರಿ ಸ್ವಾಮಿ ಸಮುದಾಯ ಭವನ ಸುಸಜ್ಜಿತವಾಗಿ ನಿರ್ಮಿಸಿರುವುದು ಹೆಮ್ಮೆಯ ವಿಚಾರವಾಗಿದ್ದು, ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳುವ ನಿಟ್ಟಿನಲ್ಲಿ ಸಹಕಾರ ನೀಡುತ್ತೇನೆ ಎಂದರು. 
       ಸಮಿತಿ ಪ್ರಮುಖರಾದ ಅಧ್ಯಕ್ಷ ಆರ್. ಮಹೇಶ್ ಕುಮಾರ್, ಎಂ. ವಾಗೀಶ್ ಕುಮಾರ್ ಕೋಠಿ, ಮಲ್ಲಿಕಾರ್ಜುನ್, ನಂಜಪ್ಪ, ಷಣ್ಮುಖಪ್ಪ, ಉದಯ್ ಕುಮಾರ್, ನಾಗಾನಂದ, ಶೋಭಾ ಮತ್ತು ನಾಗರತ್ನ ಹಾಗು ಮುಖಂಡರಾದ ಎಚ್. ತೀರ್ಥಯ್ಯ, ಜಿ. ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.