![](https://blogger.googleusercontent.com/img/a/AVvXsEgfYCcKeXQmDtIAtruXoHtBHFXlJlKa2u9uhQ9NmY-0qyo3FO4VzYj7WEo2dB3OOw3HYcTGw4btjvL6-ZuJzHV0-wTGwWhM2UR55pM2U3N98uygSX3H-ftDQVZUrqcCgAfwDbnft1aC4GUae4hp-HMKwAjCUga25Rg1Pa6hvuQh706uw9WSlOEc3hcPaOCQ=w400-h200-rw)
ಭದ್ರಾವತಿ ತಾಲೂಕಿನ ಅರೆಬಿಳಿಚಿ ಗ್ರಾಮದ ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಹಾಗು ಅರೆಬಿಳಿಚಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಒಕ್ಕೂಟದ ಸಹಯೋಗದೊಂದಿಗೆ ಸ್ವಾಸ್ಥ್ಯ ಸಂಕಲ್ಪ ಹಾಗು ಅಯೋಡಿನ್ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭದ್ರಾವತಿ: ಅಯೋಡಿನ್ ಮನುಷ್ಯನ ದೈಹಿಕ ಹಾಗು ಬುದ್ಧಿ ಬೆಳವಣಿಗೆಯಲ್ಲಿ ಅತಿ ಅವಶ್ಯಕವಾದ ಸೂಕ್ಷ್ಮ ಪೋಷಕಾಂಶವಾಗಿದ್ದು, ಇದು ನೈಸರ್ಗಿಕವಾಗಿ ಅಯೋಡಿನ್‌ಯುಕ್ತ ಉಪ್ಪಿನಲ್ಲಿ ದೊರೆಯುತ್ತದೆ ಎಂದು ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ. ಸುಶೀಲಬಾಯಿ ಹೇಳಿದರು.
ಅವರು ತಾಲೂಕಿನ ಅರೆಬಳಿಚಿಯಲ್ಲಿರುವ ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಹಾಗು ಅರೆಬಿಳಿಚಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಒಕ್ಕೂಟದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸ್ವಾಸ್ಥ್ಯ ಸಂಕಲ್ಪ ಹಾಗು ಅಯೋಡಿನ್ ಸಪ್ತಾಹ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾಹಿತಿ ನೀಡಿದರು.
ನಿರಂತರ ಮಳೆಯಿಂದಾಗಿ ಭೂಮಿಯ ಮೇಲ್ಮೈಯಲ್ಲಿರುವ ಅಯೋಡಿನ್ ಅಂಶ ಕೊಚ್ಚಿ ಹೋಗಿ ಹಳ್ಳ-ಕೊಳ್ಳ, ನದಿಗಳ ಸಮುದ್ರ ಸೇರುತ್ತದೆ. ಈ ಹಿನ್ನಲೆಯಲ್ಲಿ ಗೆಡ್ಡೆ ರೂಪದಲ್ಲಿರುವ ಮೂಲಂಗಿ, ಗೆಣಸು, ಕ್ಯಾರೇಟ್, ಬೀಟ್‌ರೋಟ್, ಕೋಸು ಇತ್ಯಾದಿ ತರಕಾರಿಗಳಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ದೊರೆಯುತ್ತದೆ. ಸಮುದ್ರದ ಮೀನು ಇತ್ಯಾದಿಗಳಲ್ಲಿ ಇದು ಹೆಚ್ಚಾಗಿ ದೊರೆಯುತ್ತದೆ ಎಂದರು.
ಅಯೋಡಿನ್ ಪೋಷಕಾಂಶ ಕೊರತೆಯಿಂದ ಗರ್ಭಿಣಿ ಮಹಿಳೆಯರಲ್ಲಿ ಗರ್ಭಪಾತ, ಬುದ್ಧಿಮಾಂಧ್ಯ, ಕಿವುಡತನ, ಮೂಕತನ ಹಾಗು ಮೆಳ್ಳೆ ಕಣ್ಣು ಶಿಶುವಿನ ಜನನ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ ಮಕ್ಕಳಲ್ಲಿ ಕುಬ್ಜತನ, ಗ್ರಹಣ ಶಕ್ತಿಯ ಕೊರತೆ, ಕುಂಠಿತ ಬುದ್ಧಿ ಬೆಳವಣಿಗೆ, ವಯಸ್ಕರಲ್ಲಿ ಅತಿಯಾದ ಆಯಾಸ, ಹೆಣ್ಣು ಮಕ್ಕಳ ಋತು ಚಕ್ರದಲ್ಲಿ ಸಮಸ್ಯೆಗಳು ಕಂಡು ಬರುತ್ತವೆ. ಸ್ಥೂಲಕಾಯ ಹಾಗು ಥೈರಾಯಿಡ್ ಗ್ರಂಥಿಯ ಗಳಗಂಡ ಅಥವಾ ಗಾಯಿಟರ್ ಎಂಬ ಕೊರತೆ ಕಾಯಿಲೆಯು ಕಾಡುತ್ತದೆ ಎಂದರು.
ಸರ್ಕಾರ ಎಲ್ಲರಿಗೂ ಅಯೋಡಿನ್ ಪೋಷಕಾಂಶ ವಿತರಿಸುವ ಉದ್ದೇಶದಿಂದ ಉಪ್ಪಿನಲ್ಲಿ ಅಯೋಡಿನ್ ಅಂಶ ಸೇರಿಸಿ `ಅಯೋಡಿನ್‌ಯುಕ್ತ ಉಪ್ಪು' ಮಾರಾಟಕ್ಕೆ ಅವಕಾಶ ನೀಡಿದೆ. ನಾವುಗಳು ಅಯೋಡಿನ್‌ಯುಕ್ತ ಉಪ್ಪನ್ನು ಖರೀದಿಸಬೇಕು. ಅಲ್ಲದೆ ಗಾಳಿಯಲ್ಲಿ ಅಯೋಡಿನ್ ಅಂಶ ಹಾಳಾಗದಂತೆ ಭದ್ರವಾದ ಮುಚ್ಚಳವಿರುವ ಡಬ್ಬದಲ್ಲಿ ಸಂಗ್ರಹಿಸಿ ಬಳಸಬೇಕೆಂದರು.
ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ಶುಚಿ, ಪೋಷಕಾಂಶಯುಕ್ತ ಆಹಾರ ಹಾಗು ಶುದ್ಧ ನೀರಿನ ಸೇವನೆ, ಪರಿಸರ ಸ್ವಚ್ಛತೆಯ ಕಾಳಜಿ ಮತ್ತು ಪರಿಸರ ರಕ್ಷಣೆ ಅತಿ ಮುಖ್ಯ ಎಂದರು.
ಶಾಲಾ ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು, ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಒಕ್ಕೂಟದ ಪ್ರತಿನಿಧಿಗಳು, ವಿದ್ಯಾಥಿಗಳು ಉಪಸ್ಥಿತರಿದ್ದರು.