Friday, November 1, 2024

ಯಲ್ಲಮ್ಮ ನಿಧನ

ಯಲ್ಲಮ್ಮ
    ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದಲ್ಲಿರುವ ನಂದಿನಿ ಹೋಟೆಲ್ ಮಾಲೀಕ ಮಹದೇವರವರ ಮಾತೃಶ್ರೀ ಯಲ್ಲಮ್ಮ (೮೫) ಶುಕ್ರವಾರ ಸಂಜೆ ನಿಧನ ಹೊಂದಿದರು. 
    ಪತಿ ಎಂ. ವಜ್ರಪ್ಪ, ಓವ ಪುತ್ರಿ, ಇಬ್ಬರು ಪುತ್ರರು ಇದ್ದರು. ಇವರ ಕ್ರಿಯೆ ನ.೨ರಂದು ಬೆಳಿಗ್ಗೆ ೧೧ ಗಂಟೆಗೆ ಹಗರಿಬೊಮ್ಮನಹಳ್ಳಿ, ಗದ್ದಿಕೇರಿ, ಹನುಮಗೊಂಡನಹಳ್ಳಿ ಗ್ರಾಮದಲ್ಲಿ ನಡೆಯಲಿದೆ. ಯಲ್ಲಮ್ಮ ನಿಧನಕ್ಕೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಉಕ್ಕಿನ ಎಲ್ಲೆಡೆ ನರಕ ಚತುರ್ದಶಿ, ಲಕ್ಷ್ಮೀಪೂಜೆ ಸಂಭ್ರಮಾಚರಣೆ

ಭದ್ರಾವತಿ ಮನೆಯೊಂದರಲ್ಲಿ ಲಕ್ಷ್ಮೀಪೂಜೆ ಸಂಭ್ರಮದಲ್ಲಿ ತೊಡಗಿರುವುದು. 
    ಭದ್ರಾವತಿ : ಕ್ಷೇತ್ರದಾದ್ಯಂತ ನರಕ ಚತುರ್ದಶಿ ಮತ್ತು ಲಕ್ಷ್ಮೀ ಪೂಜೆ ಹಬ್ಬ ವಿಜೃಂಭಣೆಯಿಂದ ಜರುಗುತ್ತಿದ್ದು, ಈ ಬಾರಿ ವಿಶೇಷ ಎಂದರೆ ಲಕ್ಷ್ಮೀ ಪೂಜೆ ಮತ್ತು ನರಕ ಚತುರ್ದಶಿ ಎರಡು ಒಂದೇ ದಿನ ಬಂದ ಹಿನ್ನಲೆಯಲ್ಲಿ ಹಬ್ಬದ ಸಂಭ್ರಮ ಮತ್ತಷ್ಟು ರಂಗೇರಿದೆ. 
    ಮನೆಗಳಲ್ಲಿ ಸಂಪ್ರದಾಯದಂತೆ ಲಕ್ಷ್ಮೀ ಆರಾಧನೆ ಸಾಮಾನ್ಯವಾಗಿ ಕಂಡಬಂದರೆ, ದೊಡ್ಡ ದೊಡ್ಡ ಮಳಿಗೆಗಳಲ್ಲಿ, ಮಾಲ್‌ಗಳಲ್ಲಿ, ಪೆಟ್ರೋಲ್ ಬಂಕ್, ಚಿತ್ರಮಂದಿರ, ಹೋಟೆಲ್ ಹಾಗು ಸಣ್ಣಪುಟ್ಟ ಅಂಗಡಿಮುಂಗಟ್ಟುಗಳಲ್ಲಿ ಈ ಬಾರಿ ಲಕ್ಷ್ಮೀ ಆರಾಧನೆ ವಿಜೃಂಭಣೆಯಿಂದ ಜರುಗಿತು. ಬಹುತೇಕ ಮಂದಿ ಗುರುವಾರ ಲಕ್ಷ್ಮೀ ಆರಾಧನೆ ನೆರವೇರಿಸಿದರೇ, ಕೆಲವು ಶುಕ್ರವಾರ ಆರಾಧಿಸಿದರು. 
    ಎಲ್ಲೆಡೆ ವಾಣಿಜ್ಯ ರಸ್ತೆಗಳಲ್ಲಿ ವಿದ್ಯುತ್ ದೀಪಾಂಲಕಾರ ಕಂಗೊಳಿಸಿದ್ದು, ಈ ನಡುವೆ ಸರ್ಕಾರ ಪಟಾಕಿ ಮಾರಾಟ ಹಾಗು ಬಳಕೆಗೆ ಸಂಬಂಧಿಸಿದಂತೆ ಹಲವಾರು ಷರತ್ತುಗಳನ್ನು ವಿಧಿಸಿದ್ದರು ಸಹ ಪಟಾಕಿ ಸದ್ದು ಈ ಬಾರಿ ಸಹ ಮಾಮೂಲಿಯಾಗಿ ಕಂಡು ಬಂದಿತು. 
    ಮನೆಗಳಲ್ಲಿ ಬಣ್ಣ ಬಣ್ಣದ ಹೊಸ ಬಟ್ಟೆ ಧರಿಸಿ ಕುಟುಂಬಸ್ಥರು, ನೆರೆಹೊರೆಯವರೊಂದಿಗೆ ಸಂಭ್ರಮಿಸುವ ಜೊತೆಗೆ ಹಬ್ಬದ ಸಾಂಪ್ರದಾಯಕ  ಆಚರಣೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ನಡೆದಿರುವಂತೆ ಕಂಡು ಬಂದಿತು. 
ಬೆಲೆ ಏರಿಕೆಗೂ ಕಡಿಮೆಯಾಗದ ಸಂಭ್ರಮ : 
    ಹೂ, ಹಣ್ಣು, ತರಕಾರಿ, ದಿನಸಿ ಸಾಮಾಗ್ರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡೆವೆಯೂ ಹಬ್ಬದ ಸಂಭ್ರಮ ಕಂಡು ಬಂದಿತು. ವ್ಯಾಪಾರಸ್ಥರು ಕೇಳಿದಷ್ಟು ಹಣ ನೀಡಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿರುವುದು ಕಂಡು ಬಂದಿತು. ನಗರದ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೂ ಜನಸಂದಣಿ ಕಂಡು ಬಂದಿತು. 

ನಾಡಿನ ಭಾಷೆ, ಸಂಸ್ಕೃತಿ, ಪರಂಪರೆ ಉಳಿಸಲು ಕಟಿಬದ್ದರಾಗಿ : ಕೆ.ಆರ್ ನಾಗರಾಜು

ಭದ್ರಾವತಿ ಕನಕಮಂಟಪ ಮೈದಾನದಲ್ಲಿ ನಡೆದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್ ನಾಡಧ್ವಜಾರೋಹಣ ನೆರವೇರಿಸಿದರು.  
    ಭದ್ರಾವತಿ; ಕನ್ನಡ ನಾಡಿನಲ್ಲಿ ಹುಟ್ಟಿದ ನಾವೆಲ್ಲರು ಈ ನಾಡಿನ ಭಾಷೆ, ಸಂಸ್ಕೃತಿ, ಪರಂಪರೆ ಉಳಿಸಲು ಕಟಿಬದ್ದರಾಗಬೇಕಿದೆ ಎಂದು  ತಹಶೀಲ್ದಾರ್ ಕೆ.ಆರ್ ನಾಗರಾಜು ಹೇಳಿದರು. 
    ಅವರು ಹಳೇನಗರದ ಕನಕಮಂಟಪ ಮೈದಾನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಆಯೋಜಿಸಲಾಗಿದ್ದ ೬೯ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು. 
ಹಚ್ಚ ಹಸುರಿನ ಸುಂದರಬೆಟ್ಟ, ಗುಡ್ಡಗಳು ಹರಿಯುವ ನದಿಗಳು ಸಾಧುಸಂತರು, ದಾಸರುಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡಿಗೆ ಧೀಮಂತಶಕ್ತಿ ಇದೆ. ಭವ್ಯ ಪರಂಪರೆ ಹೊಂದಿರುವ ಕನ್ನಡ ನಾಡಿನಲ್ಲಿ ನಾವುಗಳು ಜನಿಸಿರುವುದು ಪುಣ್ಯ.  ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಅನ್ಯಭಾಷಿಗರಿಕೆ, ಯುವಪೀಳಿಗೆಗೆ  ತಿಳಿಸಬೇಕಾದ ಹೆಚ್ಚಿನ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ನಾವು ಮರೆಯಬಾರದು ಎಂದರು.
    ನಾಡಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ಕನ್ನಡ ಭಾಷೆಯನ್ನು ನಮ್ಮ ತಾಯಿ ಎಂದು ತಿಳಿದು ಗೌರವಿಸಿ ಬೆಳಸಬೇಕು. ಕನ್ನಡ ರಾಜ್ಯೋತ್ಸವ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು ಅದು ನಿತ್ಯೋತ್ಸವವಾಗಬೇಕು. ಕನ್ನಡದ ಮೇಲಿನ ಗೌರವ ಕೇವಲ ಬಾಯಿಯಿಂದ ಬಂದರೆ ಸಾಲದು ಅದು ಅಂತರಾಳದಿಂದ ಬರಬೇಕು. ತಾಯಿ ಕನ್ನಡಾಂಬೆಗೆ ಗೌರವಿಸುವ ಕೆಲಸ ಸರ್ಕಾರ ಸಹ ಮಾಡುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳಲ್ಲಿಯೂ ಕನ್ನಡ ಭಾಷೆ ಕಡ್ಡಾಯಗೊಳಿಸಿದೆ. ಕನ್ನಡ ಭಾಷೆಯನ್ನು ನಾವು ಹೆಚ್ಚು ಹೆಚ್ಚು ಮಾತನಾಡುವ ಮೂಲಕ ಅನ್ಯಭಾಷಿಗರಿಗೂ ಕಲಿಸಬೇಕು ಎಂದರು.
    ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಮಾತನಾಡಿ, ಕನ್ನಡನಾಡಿನಲ್ಲಿ ಜನಿಸಿದ ನಾವೆಲ್ಲರೂ ಪುಣ್ಯವಂತರು ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳನ್ನು ಈ ನಾಡಿನ ಕವಿಗಳು, ಸಾಹಿತಿಗಳು ತಿಳಿಸಿಕೊಟ್ಟಿದ್ದಾರೆ. ಕನ್ನಡಕ್ಕೆ ವಿಶೇಷ ಸ್ಥಾನಮಾನಗಳು ಸಹ ಲಭಿಸಿದೆ. ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆಗಳಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳನ್ನು ಸನ್ಮಾನಿಸಿ ಗೌರವಿಸುವ ಕೆಲಸ ನಮ್ಮ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು.
    ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಸನ್ಮಾನಿಸಲಾಯಿತು. 
    ವಿವಿಧ ಶಾಲಾ ಮಕ್ಕಳು ಕನ್ನಡ ನಾಡಿಗಾಗಿ ಶ್ರಮಿಸಿದ ಒನಕೆ ಓಬವ್ವ, ಕಿತ್ತೂರು ರಾಣಿಚನ್ನಮ್ಮ, ಕನಕದಾಸ, ನೇಗಿಲು ಹೊತ್ತ ರೈತ ಸೇರಿದಂತೆ ಹಲವು ಗಣ್ಯರ ವೇಷ ಭೂಷಣಗಳು ಧರಿಸಿದ್ದು ಕಾರ್ಯಕ್ರಮಕ್ಕೆ ಮೆರಗು ತಂದಿತು. ಶಾಲಾ ಬಾಲಕ-ಬಾಲಕಿಯರು ಕನ್ನಡದ ಹಾಡುಗಳಿಗೆ ನೃತ್ಯ ಪ್ರದರ್ಶಿಸಿದರು.
    ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಪೌರಾಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಕಸಾಪ ತಾಲೂಕು ಅಧ್ಯಕ್ಷ ಕೋಡ್ಲುಯಜ್ಞಯ್ಯ, ಬಿ.ಕೆ.ಮೋಹನ್, ಚನ್ನಪ್ಪ, ಅನುಸುಧಾ ಮೋಹನ್, ಗೀತಾ ರಾಜ್‌ಕುಮಾರ್, ಬಸವರಾಜ್ ಬಿ. ಆನೆಕೊಪ್ಪ, ಶಶಿಕಲಾ ನಾರಾಯಣಪ್ಪ, ಜಾರ್ಜ್, ರಿಯಾಜ್ ಅಹಮದ್, ಬಿ.ಎಸ್.ಗೋಪಾಲ್, ಪೊಲೀಸ್ ನಗರ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್, ಟಿ. ಪೃಥ್ವಿರಾಜ್, ಶ್ರೀಧರ ಗೌಡ, ಉಮಾ, ಅಪೇಕ್ಷ ಮಂಜುನಾಥ್, ಶಿವಲಿಂಗೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
 

ಭದ್ರಾವತಿ ಕನಕಮಂಟಪ ಮೈದಾನದಲ್ಲಿ ನಡೆದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳು ಕನ್ನಡ ನಾಡಿಗಾಗಿ ಶ್ರಮಿಸಿದ ಒನಕೆ ಓಬವ್ವ, ಕಿತ್ತೂರು ರಾಣಿಚನ್ನಮ್ಮ, ಕನಕದಾಸ, ನೇಗಿಲು ಹೊತ್ತ ರೈತ ಸೇರಿದಂತೆ ಹಲವು ಗಣ್ಯರ ವೇಷ ಭೂಷಣಗಳು ಧರಿಸಿದ್ದು ಕಾರ್ಯಕ್ರಮಕ್ಕೆ ಮೆರಗು ತಂದಿತು.

ಚಾಲಕನ ಕನ್ನಡಾಭಿಮಾನ : ಕಣ್ಮನ ಸೆಳೆದ ಆಟೋ

    ಭದ್ರಾವತಿ : ಆಟೋ ಚಾಲಕರೊಬ್ಬರು ತಮ್ಮ ಆಟೋಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಶಿಷ್ಟವಾಗಿ ಅಲಂಕಾರ ಮಾಡುವ ಮೂಲಕ ಕನ್ನಡಾಭಿಮಾನಿ ಪ್ರದರ್ಶಿಸಿದ್ದಾರೆ. 
    ಜನ್ನಾಪುರ ನಿವಾಸಿ, ಆಟೋ ಚಾಲಕ ಶಂಕರ್ ಇತ್ತೀಚಿಗೆ ಸುಮಾರು ೩ ಲಕ್ಷ ರು. ವೆಚ್ಚದಲ್ಲಿ ಹೊಸ ಆಟೋ ಖರೀದಿಸಿದ್ದಾರೆ. ಆಟೋ ನಂಬಿ ಬದುಕು ಸಾಗಿಸುತ್ತಿರುವ ಇವರು ಕನ್ನಡಾಭಿಮಾನಿಯಾಗಿದ್ದು, ಹೊಸ ಆಟೋಗೆ ಈ ಬಾರಿ ವಿಶೇಷವಾಗಿ ಹಿಂಬದಿಯಲ್ಲಿ ಹೂವಿನ ಕರ್ನಾಟಕ ಭೂಪಟ, ಆಟೋ ಒಂದು ಬದಿಯಲ್ಲಿ ಬೃಹತ್ ಕನ್ನಡ ಧ್ವಜ, ಒಳಭಾಗದಲ್ಲಿ ಕೆಂಪು, ಹಳದಿಯೊಂದಿಗೆ ಆಲಂಕರಿಸಲಾಗಿದೆ. ಮುಂಭಾಗದಲ್ಲಿ ಬೃಹತ್ ಗಾತ್ರದ ಕನ್ನಡದ ಪುಷ್ಪ ಮಾಲೆ, ಬಿಳಿ ಗುಲಾಬಿ ಹೂಗಳಿಂದ ಹಾಗು ಕೆಂಪು, ಹಳದಿಗಳಿಂದ ಅಲಂಕರಿಸಲಾಗಿದೆ. ಒಟ್ಟಾರೆ ಆಟೋ ಎಲ್ಲರ ಕಣ್ಮನ ಸೆಳೆದಿದೆ. 
    ಆಟೋ ಶಂಕರ್ ಪ್ರತಿಕ್ರಿಯಿಸಿ, ನಾನು ಯಾವ ಚಲನಚಿತ್ರ ನಟರ ಅಭಿಮಾನಿಯಲ್ಲ. ಬದಲಿಗೆ ಕನ್ನಡದ ಅಭಿಮಾನಿಯಾಗಿದ್ದು, ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ನಾನೇ ಸ್ವಯಂ ಪ್ರೇರಣೆಯಿಂದ ಆಟೋ ವಿಶೇಷವಾಗಿ ಅಲಂಕರಿಸಿದ್ದೇನೆ ಎಂದರು. 
    ಜನ್ನಾಪುರ ವ್ಯಾಪ್ತಿಯಲ್ಲಿ ದಿನವಿಡೀ ಈ ಆಟೋ ಸಂಚಾರ ಬಹುತೇಕ ಜನರಲ್ಲಿ ತಮ್ಮಲ್ಲಿನ ಕನ್ನಡದ ಅಸ್ಮಿತೆಯನ್ನು ಪ್ರಶ್ನಿಸಿಕೊಳ್ಳುವಂತೆ ಮಾಡಿದೆ. ಸಾಮಾನ್ಯ ಆಟೋ ಚಾಲಕನ ಕನ್ನಡಾಭಿಮಾನಕ್ಕೆ ಒಂದು ನಮನವಿರಲಿ. 


ಭದ್ರಾವತಿ ಜನ್ನಾಪುರ ನಿವಾಸಿ, ಆಟೋ ಚಾಲಕ ಶಂಕರ್ ಇತ್ತೀಚಿಗೆ ಸುಮಾರು ೩ ಲಕ್ಷ ರು. ವೆಚ್ಚದಲ್ಲಿ ಹೊಸ ಆಟೋ ಖರೀದಿಸಿದ್ದಾರೆ. ಈ ಬಾರಿ ಕನ್ನಡ ರಾಜ್ಯೋತ್ಸವ ಅಂಗವಾಗಿ ವಿಶೇಷವಾಗಿ ಅಲಂಕಾರಗೊಳಿಸಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. 
 

ಉಚಿತ ಆರೋಗ್ಯ ತಪಾಸಣಾ ಶಿಬಿರ : ೧೩೦ಕ್ಕೂ ಮಂದಿಗೆ ತಪಾಸಣೆ

ಭದ್ರಾವತಿ ನಗರದ ಅಪ್ಪರ್ ಹುತ್ತಾ ಶ್ರೀ ಭೈರವೇಶ್ವರ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ಶುಕ್ರವಾರ ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ, ಮಲ್ಲೇಶ್ವರ ಸಮುದಾಯ ಭವನ ಟ್ರಸ್ಟ್, ರೋಟರಿ ಕ್ಲಬ್, ತಾಲೂಕು ಒಕ್ಕಲಿಗರ ಸಂಘ, ಶುಗರ್ ಟೌನ್, ಕಾಲಭೈರವೇಶ್ವರ ಚಾರಿಟಬಲ್ ಟ್ರಸ್ಟ್ ಮತ್ತು ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘ ವತಿಯಿಂದ ಜನ್ನಾಪುರ ಮಲ್ಲೇಶ್ವರ ಸಭಾ ಭವನದಲ್ಲಿ ರಕ್ತದಾನ ಹಾಗು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.
    ಭದ್ರಾವತಿ : ನಗರದ ಅಪ್ಪರ್ ಹುತ್ತಾ ಶ್ರೀ ಭೈರವೇಶ್ವರ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ಶುಕ್ರವಾರ ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ, ಮಲ್ಲೇಶ್ವರ ಸಮುದಾಯ ಭವನ ಟ್ರಸ್ಟ್, ರೋಟರಿ ಕ್ಲಬ್, ತಾಲೂಕು ಒಕ್ಕಲಿಗರ ಸಂಘ, ಶುಗರ್ ಟೌನ್, ಕಾಲಭೈರವೇಶ್ವರ ಚಾರಿಟಬಲ್ ಟ್ರಸ್ಟ್ ಮತ್ತು ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘ ವತಿಯಿಂದ ಜನ್ನಾಪುರ ಮಲ್ಲೇಶ್ವರ ಸಭಾ ಭವನದಲ್ಲಿ ರಕ್ತದಾನ ಹಾಗು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. 
    ಮಧುಮೇಹ ವಿಭಾಗ, ಶ್ವಾಸಕೋಶ ವಿಭಾಗ, ಹೃದಯ ರೋಗ ವಿಭಾಗ, ಕೀಲು ಮತ್ತು ಮೂಳೆ ವಿಭಾಗ, ಕಿವಿ, ಮೂಗು ಗಂಟಲು ವಿಭಾಗ, ಚರ್ಮರೋಗ ವಿಭಾಗ, ನರರೋಗ ವಿಭಾಗ, ದಂತ ಚಿಕಿತ್ಸಾ ವಿಭಾಗ, ಪ್ರಸೂತಿ, ಸ್ತ್ರೀ ರೋಗ ವಿಭಾಗ ಮತ್ತು ಮಕ್ಕಳ ವಿಭಾಗಗಳಲ್ಲಿ ತಪಾಸಣೆ ನಡೆಯಲಿದೆ. ವೈದ್ಯರ ಸಲಹೆ ಮೇರೆಗೆ ಇ.ಸಿ.ಜಿ, ಶ್ವಾಸಕೋಶ ಸ್ಕ್ಯಾನಿಂಗ್(ಉಸಿರಾಟ), ಹೃದಯ ಪರೀಕ್ಷೆ(ಇಕೋ), ಬಿ.ಪಿ, ಶುಗರ್, ಮೂಳೆ ಸಾಂದ್ರತೆ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಯಿತು. ಸುಮಾರು ೧೩೦ಕ್ಕೂ ಹೆಚ್ಚು ಮಂದಿ ಶಿಬಿರದ ಸದುಪಯೋಗಪಡೆದುಕೊಂಡರು. 


    ಶ್ರೀ ಭೈರವೇಶ್ವರ ಪತ್ತಿನ ಸಹಕಾರ ಸಂಘದ  ಅಧ್ಯಕ್ಷ ಬಿ.ಎಸ್ ಮಲ್ಲೇಶ್, ಉಪಾಧ್ಯಕ್ಷ ಎಲ್. ದೇವರಾಜ್, ಕುಮಾರ್, ಗಾಯಿತ್ರಿ, ಕೆಂಪಯ್ಯ, ಪರಮಶಿವ, ಲಯನ್ಸ್ ಕ್ಲಬ್ ಶುಗರ್ ಟೌನ್ ಅಧ್ಯಕ್ಷ ಆರ್. ಉಮೇಶ್, ತಮ್ಮೇಗೌಡ, ಎಂ.ಸಿ ಯೋಗೇಶ್, ಮಧುಸೂಧನ್,  ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್, ಗೌರವಾಧ್ಯಕ್ಷ ಬಿ. ಲೋಕನಾಥ್, ಪ್ರಧಾನ ಕಾರ್ಯದರ್ಶಿ ಚರಣ್ ಕವಾಡ್, ವೈ.ಕೆ ಹನುಮಂತಯ್ಯ, ಶಂಕರ್ ಬಾಬು, ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಮೂರ್ತಿ, ರಾಜ್‌ಕುಮಾರ್ ಹಾಗು ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ತಜ್ಞ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
 

ಭದ್ರಾವತಿ : ನಗರದ ಅಪ್ಪರ್ ಹುತ್ತಾ ಶ್ರೀ ಭೈರವೇಶ್ವರ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ಶುಕ್ರವಾರ ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ, ಮಲ್ಲೇಶ್ವರ ಸಮುದಾಯ ಭವನ ಟ್ರಸ್ಟ್, ರೋಟರಿ ಕ್ಲಬ್, ತಾಲೂಕು ಒಕ್ಕಲಿಗರ ಸಂಘ, ಶುಗರ್ ಟೌನ್, ಕಾಲಭೈರವೇಶ್ವರ ಚಾರಿಟಬಲ್ ಟ್ರಸ್ಟ್ ಮತ್ತು ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘ ವತಿಯಿಂದ ಜನ್ನಾಪುರ ಮಲ್ಲೇಶ್ವರ ಸಭಾ ಭವನದಲ್ಲಿ ರಕ್ತದಾನ ಹಾಗು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

Thursday, October 31, 2024

ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಜನ್ಮದಿನ

ಭದ್ರಾವತಿಯಲ್ಲಿ ಕಾಂಗ್ರೆಸ್ ಭಾರತ್ ಸೇವಾದಳ ಹಾಗು ಭದ್ರಾವತಿ ಅಭಿವೃದ್ಧಿ ವೇದಿಕೆ ವತಿಯಿಂದ ಗುರುವಾರ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಜನ್ಮದಿನ ವಿಶೇಷವಾಗಿ ಆಚರಿಸಲಾಯಿತು. 
    ಭದ್ರಾವತಿ : ಕಾಂಗ್ರೆಸ್ ಭಾರತ್ ಸೇವಾದಳ ಹಾಗು ಭದ್ರಾವತಿ ಅಭಿವೃದ್ಧಿ ವೇದಿಕೆ ವತಿಯಿಂದ ಗುರುವಾರ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಜನ್ಮದಿನ ವಿಶೇಷವಾಗಿ ಆಚರಿಸಲಾಯಿತು. 
    ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದಲ್ಲಿರುವ ತಾಲೂಕು ಛಲವಾದಿಗಳ(ಪ.ಜಾ)ಸಮಾಜದ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ವಿಶೇಷವಾಗಿ ಆಚರಿಸಿ ಅವರ ಆಡಳಿತ ಅವಧಿಯಲ್ಲಿನ ಜನಪರ ಯೋಜನೆಗಳು ಹಾಗು ಅವರ ಕಾರ್ಯವೈಖರಿಗಳನ್ನು ಸ್ಮರಿಸಲಾಯಿತು. 
    ಪ್ರಮುಖರಾದ ಡಿ. ನರಸಿಂಹಮೂರ್ತಿ, ಜಿ.ಟಿ ಬಸವರಾಜ್, ಹನುಮಂತಯ್ಯ, ಚಂದ್ರಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಬಸ್‌ನಲ್ಲಿ ಮರೆತು ಬಿಟ್ಟು ಹೋಗಿದ್ದ ಕಿಟ್ ಬ್ಯಾಗ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕೆಎಸ್‌ಆರ್‌ಟಿಸಿ ಸಿಬ್ಬಂದಿ

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಭದ್ರಾವತಿ ನಿವಾಸಿ ಶಿವಾನಂದಪ್ಪರವರು ಮರೆತು ಬಿಟ್ಟು ಹೋಗಿದ್ದ ಕಿಟ್‌ಬ್ಯಾಗ್ ಪುನಃ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿರುವ ಬಸ್ಸಿನ ಸಿಬ್ಬಂದಿ ಬಾಬು ದೊಡ್ಮನೆಯವರಿಗೆ ಪುಷ್ಪಮಾಲೆ ಹಾಕುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. 
    ಭದ್ರಾವತಿ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಮರೆತು ಬಿಟ್ಟು ಹೋಗಿದ್ದ ಕಿಟ್‌ಬ್ಯಾಗ್ ಪುನಃ ಆ ವ್ಯಕ್ತಿಗೆ ತಲುಪಿಸುವ ಮೂಲಕ ಬಸ್ಸಿನ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿರುವ ಘಟನೆ ಇತ್ತೀಚೆಗೆ ನಡೆದಿದೆ. 
    ನಗರಸಭೆ ವ್ಯಾಪ್ತಿಯ ಕಡದಕಟ್ಟೆ ನಿವಾಸಿ, ನಿವೃತ್ತ ಕೆಇಬಿ ನೌಕರ ಪಿ.ಎಲ್ ಶಿವಾನಂದಪ್ಪ ಚಿಕ್ಕೋಡಿಯಿಂದ ಶಿವಮೊಗ್ಗಕ್ಕೆ ಕೆಎಸ್‌ಆರ್‌ಟಿಸಿ  ಕೆಎ ೧೪ ಎಫ್೦೦೮೪ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಿಟ್ ಬ್ಯಾಗ್ ಮರೆತುಹೋಗಿದ್ದರು. ಶಿವಮೊಗ್ಗ ತಲುಪಿದ ನಂತರ ನೋಡಿದಾಗ ಕಿಟ್ ಬ್ಯಾಗ್ ಇರಲಿಲ್ಲ. ಇವರು ಪುನಃ ಹಿಂದಿರುಗಿ ಭದ್ರಾವತಿ ನಿಲ್ದಾಣದಲ್ಲಿ ಬಂದು ವಿಚಾರಿಸಿದ್ದು, ಬಸ್ ಸಿಬ್ಬಂದಿ ಬಾಬು ದೊಡ್ಮನೆಯವರು ಕಿಟ್‌ಬ್ಯಾಗ್ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. 
    ಶಿವಾನಂದಪ್ಪರವರು ಬಾಬು ದೊಡ್ಮನೆಯವರ ಪ್ರಾಮಾಣಿಕತೆ ಕಂಡು ಬೆರಗಾಗಿದ್ದು, ಅವರಿಗೆ ಪುಷ್ಪಮಾಲೆ ಹಾಕುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.