ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಪರಿಸರ ಮಾಸಾಚರಣೆ
ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಮಂಗಳವಾರ ಪರಿಸರ ಮಾಸಾಚರಣೆಗೆ ಚಾಲನೆ ನೀಡಲಾಯಿತು.
ಭದ್ರಾವತಿ: ಪರಿಸರ ನಾಶದಿಂದ ಭೂಮಿಯ ಅವನತಿ, ಮರುಭೂಮಿ ಮತ್ತು ಬರಗಾಲದ ಸಮಸ್ಯೆಗಳು ಉಲ್ಬಣಗೊಳ್ಳುವುದರಿಂದ ಸಾಕಷ್ಟು ಸಮಸ್ಯೆಗಳು ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಎಚ್ಚರಿಸಿದರು.
ಅವರು ಮಂಗಳವಾರ ಪರಿಸರ ಮಾಸಾಚರಣೆ ಹಿನ್ನಲೆಯಲ್ಲಿ ಕಾರ್ಖಾನೆ ವತಿಯಿಂದ ಇಸ್ಪಾತ್ ಭವನದ ಮುಂಭಾಗ ಹಮ್ಮಿಕೊಳ್ಳದ್ದ ಕಾರ್ಯಕ್ರಮದಲ್ಲಿ ಪರಸರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಪರಿಸರ ನಾಶದಿಂದ ನೈಸರ್ಗಿಕ ಪರಿಸರ ವ್ಯವಸ್ಥೆಗೆ ಧಕ್ಕೆ ಮಾತ್ರವಲ್ಲದೆ ಪ್ರಪಂಚದಾದ್ಯಂತ ಸಮುದಾಯಗಳ ಜೀವನೋಪಾಯ, ಆರೋಗ್ಯ ಮತ್ತು ಯೋಗಕ್ಷೇಮಕ್ಕೂ ಸಂಕಷ್ಟ ಎದುರಾಗುತ್ತದೆ. ಈ ಹಿನ್ನಲೆಯಲ್ಲಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಕುರಿತು ಹೆಚ್ಚಿನ ತಿಳುವಳಿಕೆ ಮೂಡಿಸುವ ಅಗತ್ಯವಿದೆ ಎಂದರು.
ಮುಖ್ಯ ಮಹಾಪ್ರಬಂಧಕ(ಸ್ಥಾವರ) ಕೆ.ಎಸ್ ಸುರೇಶ್, ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್ ಮತ್ತು ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರಾ, ಉಪಸ್ಥಿತರಿದ್ದರು.
ಮಹಾಪ್ರಬಂಧಕ(ಸುರಕ್ಷತೆ) ಹರಿಶಂಕರ್ ಪರಿಸರ ನೀತಿ ವಾಚಿಸಿದರು. ಮಹಾಪ್ರಬಂಧಕ(ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕಿ(ಹಣಕಾಸು ಮತ್ತು ಲೆಕ್ಕ) ಶೋಭಾ ಶಿವಶಂಕರನ್, ಮತ್ತು ಸಹಾಯಕ ಮಹಾಪ್ರಬಂಧಕ(ವಿಜಿಲೆನ್ಸ್) ಎಲ್. ಕುಥಲನಾಥನ್ ಪರಿಸರ ಪ್ರತಿಜ್ಞೆ ಬೋಧಿಸಿದರು.
ಸಹಾಯಕ ಮಹಾಪ್ರಬಂಧಕ(ಹಣಕಾಸು) ಉನ್ನೀಕೃಷ್ಣನ್ ಪ್ರಾರ್ಥಿಸಿದರು. ಸಹಾಯಕ ಮಹಾಪ್ರಬಂಧಕ(ನೀರು ಸರಬರಾಜು ಮತ್ತು ಪರಿಸರ ನಿರ್ವಹಣೆ) ವಿಕಾಸ ಬಸೇರ್ ಸ್ವಾಗತಿಸಿ, ಕಿರಿಯ ಪ್ರಬಂಧಕ ನಂದನ ವಂದಿಸಿದರು.
ಪರಿಸರ ಮಾಸಾಚರಣೆ : ವಿವಿಧ ಸ್ಪರ್ಧೆಗಳು:
ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ಪರಿಸರ ಮಾಸಾಚರಣೆ ನ.೧೯ ರಿಂದ ಡಿ.೧೮ರ ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಬಂಧ ಸ್ಪರ್ಧೆ, ಪರಿಸರ ರಸಪ್ರಶ್ನೆ ಮತ್ತು ಘೋಷವಾಕ್ಯ ಬರೆಯುವ ಸ್ಪರ್ಧೆಗಳನ್ನು ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಮತ್ತು ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿದೆ.
ಶಾಲಾ ವಿಧ್ಯಾರ್ಥಿಗಳಿಗಾಗಿ ಆಯೋಜಿಸಿರುವ ಸ್ಪರ್ಧೆಗಳ ವಿವರ :
೫ನೇ ತರಗತಿಯಿಂದ ೭ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ (ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ) ಹಾಗು ೮ನೇ ತರಗತಿಯಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ (ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ) ನ.೨೩ರಂದು ಮಧ್ಯಾಹ್ನ ೩ ಗಂಟೆಗೆ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: ೯೪೮೦೮೨೯೦೬೨ / ೯೪೮೦೮೨೯೨೦೨ ಸಂಪರ್ಕಿಸಬಹುದಾಗಿದೆ.