Friday, December 6, 2024

ಡಿ.೭ರಂದು ಶಾಲಾ ವಾರ್ಷಿಕೋತ್ಸವ ಸಂಭ್ರಮ




    ಭದ್ರಾವತಿ: ನಗರದ ನ್ಯೂಟೌನ್  ಈಶ್ವರಮ್ಮ ಪ್ರೌಢಶಾಲೆ ಮತ್ತು ಪ್ರಶಾಂತಿ ಹಿರಿಯ ಪ್ರಾಥಮಿಕ ಶಾಲೆ (ಕನ್ನಡ ಮತ್ತು ಆಂಗ್ಲ ಮಾಧ್ಯಮ) ವಾರ್ಷಿಕೋತ್ಸವ ಸಂಭ್ರಮ ಡಿ.೭ರಂದು ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. 
    ಸಂಜೆ ೬ ಗಂಟೆಗೆ ಆರಂಭಗೊಳ್ಳಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯಾದೇವಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ರಾಜ್ಯ ಸಂಯೋಜಕ ಡಾ. ಡಿ. ಪ್ರಭಾಕರ ಬೀರಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. 
    ಪ್ರಮುಖರಾದ ಸೌಮ್ಯ ರೂಪ ಕೆ., ಎಂ. ದೇವೇಂದ್ರಪ್ಪ, ಶಾಮರಾಯ ಆಚಾರ್, ಟಿ.ವಿ ಸುಜಾತ ಮತ್ತು ಜಿ.ಪಿ ಪರಮೇಶ್ವರಪ್ಪ ಉಪಸ್ಥಿತರಿರುವರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಶಾಲಾ ಮಕ್ಕಳು, ಪೋಷಕರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಾರ್ಷಿಕೋತ್ಸವ ಸಂಭ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಗರಸಭೆಗೆ ಮನವಿ

 

ಭದ್ರಾವತಿ: ಜನ್ನಾಪುರ ಮತ್ತು ಹುತ್ತಾ ಕಾಲೋನಿ ವ್ಯಾಪ್ತಿಯಲ್ಲಿನ ನಾಗರಿಕರ ಬೇಡಿಕೆಗಳನ್ನು ಈಡೇರಿಸಿ ಕೊಡುವಂತೆ ಒತ್ತಾಯಿಸಿ ಜನ್ನಾಪುರ-ಹುತ್ತಾ ತೆರಿಗೆದಾರರ ಸಂಘದ ವತಿಯಿಂದ ನಗರಸಭೆ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿದೆ. 
    ಯು.ಜಿ.ಡಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಟಾಯ್ಲೆಟ್ ಪಿಟ್‌ಗಳು (ಶೌಚಾಲಯ ಗುಂಡಿಗಳು) ತುಂಬಿ ತುಳುಕುತ್ತಿವೆ. ತಕ್ಷಣವೇ ಸ್ಥಗಿತಗೊಂಡಿರುವ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸುವುದು. ಮೀಟರ್ ಅಳವಡಿಕೆಯಿಂದ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಸರಿಯಾಗಿ ಬಾರದೆ ತೊಂದರೆಯುಂಟಾಗಿದೆ ತಕ್ಷಣ ಸರಿಪಡಿಸುವುದು. ಜನ್ನಾಪುರ ಕೆರೆ ಶುದ್ದೀಕರಣ ಕಾರ್ಯ ತ್ವರಿತವಾಗಿ ಕೈಗೊಳ್ಳುವುದು. ಈ ವ್ಯಾಪ್ತಿಯಲ್ಲಿ ನಿರಂತರವಾಗಿ ಬೀದಿ ನಾಯಿಗಳ ಹಾವಳಿ, ಸೊಳ್ಳೆಕಾಟ, ಬಿಡಾಡಿ ದನಗಳ ಕಾಟ ಹೆಚ್ಚಾಗಿವೆ ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. 
    ಕಂದಾಯ ಪಾವತಿಸಲು ಜನ್ನಾಪುರ ಎನ್‌ಟಿಬಿ ಕಛೇರಿಯಲ್ಲಿ ಕಂಪ್ಯೂಟರ್ ವಿಭಾಗ ತೆರೆಯುವುದು. ಕಸ ತೆಗೆಯುವಾಗ ವಯೋವೃದ್ಧರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ಆದ್ಯತೆ ನೀಡಿ ತಂದಿಟ್ಟ ಕಸವನ್ನು ತೆಗೆಯಲು ಸಹಕರಿಸುವುದು ಹಾಗು ಕಳಪೆ ಕಾಮಗಾರಿಗಳನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಲಾಗಿದೆ. 

Thursday, December 5, 2024

ತುರ್ತು ಚಿಕಿತ್ಸೆಗೆ ಆಗಮಿಸಿದ ಯುವಕನಿಗೆ ಚಿಕಿತ್ಸೆ ನೀಡದೆ ಕರ್ತವ್ಯ ಲೋಪ

ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಶುಶ್ರೂಷಕಿ ಅಧಿಕಾರಿ ವಿರುದ್ಧ ದೂರು 

ತುರ್ತು ಚಿಕಿತ್ಸೆಗಾಗಿ ಭದ್ರಾವತಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ ಯುವಕನಿಗೆ ಸೂಕ್ತ ಚಿಕಿತ್ಸೆ ನೀಡದೆ ಕರ್ತವ್ಯ ಲೋಪವೆಸಗಿರುವ ಘಟನೆ ಗುರುವಾರ ಸಂಜೆ ನಡೆದಿದೆ. 
    ಭದ್ರಾವತಿ: ತುರ್ತು ಚಿಕಿತ್ಸೆಗಾಗಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ ಯುವಕನಿಗೆ ಸೂಕ್ತ ಚಿಕಿತ್ಸೆ ನೀಡದೆ ಕರ್ತವ್ಯ ಲೋಪವೆಸಗಿರುವ ಘಟನೆ ಗುರುವಾರ ಸಂಜೆ ನಡೆದಿದೆ. 
    ಅನಿಲ ಎಂಬ ಯುವಕನಿಗೆ ಎಂಎಲ್‌ಸಿ ಪ್ರಕರಣದಡಿಯಲ್ಲಿ ಚಿಕಿತ್ಸೆಗಾಗಿ ಸಂಜೆ ೪ ಗಂಟೆ ಸಮಯದಲ್ಲಿ ಆಸ್ಪತ್ರೆಗೆ ಕರೆ ತಂದಾಗ ಸೂಕ್ತ ಚಿಕಿತ್ಸೆಯನ್ನೂ ನೀಡದೆ, ವೈದ್ಯರಿಗೂ ತಿಳಿಸದೆ ಉದಾಸೀನವಾಗಿ ವರ್ತಿಸುವ ಜೊತೆಗೆ ಮನೆಗೆ ತೆರಳುವಂತೆ ಏರು ಧ್ವನಿಯಲ್ಲಿ ಮಾತನಾಡಿ ಕರ್ತವ್ಯ ಲೋಪವೆಸಗಿದ್ದಾರೆಂದು ಆರೋಪಿಸಲಾಗಿದೆ. 
    ಘಟನೆ ಸಂಬಂಧ ಕುಟುಂಬಸ್ಥರು ಸಮಾಜ ಸೇವಕ, ನಗರಸಭೆ ಮಾಜಿ ಸದಸ್ಯ ಬಾಲಕೃಷ್ಣರವರಿಗೆ ಮಾಹಿತಿ ನೀಡಿದ್ದು, ತಕ್ಷಣ ಆಸ್ಪತ್ರೆಗೆ ಆಗಮಿಸಿ ವಿಚಾರಿಸಿದಾಗ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. 
    ಸುಮಾರು ೨ ಗಂಟೆ ಸಮಯ ಚಿಕಿತ್ಸೆ ಇಲ್ಲದೆ ಯುವಕ ನರಳಾಡುವಂತೆ ಮಾಡಿದ್ದು, ಈ ಹಿನ್ನಲೆಯಲ್ಲಿ ಕರ್ತವ್ಯ ಲೋಪವೆಸಗಿ ಉದಾಸೀನವಾಗಿ ವರ್ತಿಸಿರುವ ಆಸ್ಪತ್ರೆಯ ಶುಶ್ರೂಷಕಿ ಅಧಿಕಾರಿಯಾಗಿರುವ ಸುರಾಜ್‌ಮತಿ ಎಲಿಜಬೆತ್ ಸ್ಯಾಂಡ್ರ ಪಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಅಲ್ಲದೆ ಈ ಕುರಿತು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪರವರಿಗೆ ದೂರು ಸಲ್ಲಿಸಲಾಗಿದೆ.
    ಕಾರಣ ಕೇಳಿ ನೋಟಿಸ್ : 
ತುರ್ತು ಚಿಕಿತ್ಸೆಗೆ ಆಗಮಿಸಿದ ಯುವಕನಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೆ ಹಾಗು ಉದಾಸೀನವಾಗಿ ವರ್ತಿಸಿ ಕರ್ತವ್ಯಲೋಪವೆಗಿರುವ ಸಂಬಂಧ ದೂರು ಬಂದಿದ್ದು, ಈ ಹಿನ್ನಲೆಯಲ್ಲಿ ಉತ್ತರಿಸುವಂತೆ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪ ಸುರಾಜ್‌ಮತಿ ಎಲಿಜಬೆತ್ ಸ್ಯಾಂಡ್ರ ಪಾರವರಿಗೆ ಸೂಚಿಸಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಈ ರೀತಿ ಪ್ರಕರಣಗಳು ಮರುಕಳುಹಿಸಿದ್ದಲ್ಲಿ ಶಿಸ್ತು ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಸಿದ್ದಾರೆ. 

ಕಾಳೇಗೌಡರು ನಿಧನ

ಕಾಳೇಗೌಡರು 
    ಭದ್ರಾವತಿ : ನಗರದ ಅಪ್ಪರ್ ಹುತ್ತಾ ನಿವಾಸಿ, ತಾಲೂಕು ಒಕ್ಕಲಿಗರ ಸಂಘದ ಮಹಾಪೋಷಕರಾದ ಕಾಳೇಗೌಡರು(೯೪) ವಯೋಸಹಜವಾಗಿ ಗುರುವಾರ ನಿಧನ ಹೊಂದಿದರು. 
    ಇವರಿಗೆ ಪುತ್ರ ಹಾಗು ೮ ಜನ ಪುತ್ರಿಯರು ಇದ್ದಾರೆ. ಇವರ ಅಂತ್ಯಕ್ರಿಯೆ ಶುಕ್ರವಾರ ಲೋಯರ್ ಹುತ್ತಾ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದ್ದು, ಕಾಳೇಗೌಡರು ಬೊಂಬು ಗುತ್ತಿಗೆದಾರರಾಗಿ ಜನಪ್ರಿಯರಾಗಿದ್ದರು. ತಾಲೂಕು ಒಕ್ಕಲಿಗರ ಸಂಘವನ್ನು ಮುಂಚೂಣಿಗೆ ತರುವಲ್ಲಿ ಸಾಕಷ್ಟು ಶ್ರಮಿಸಿದ್ದರು. ಇವರು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಕುಟುಂಬ ಸಂಬಂಧಿಯಾಗಿದ್ದಾರೆ. 
    ಇವರ ನಿಧನಕ್ಕೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಮುಖಂಡರಾದ ಆರ್. ಕರುಣಾಮೂರ್ತಿ, ಟಿ. ಚಂದ್ರೇಗೌಡ, ಕರಿಯಪ್ಪ, ಸಿ. ರಾಮಕೃಷ್ಣ, ಮಧುಸೂಧನ್ ಹಾಗು ತಾಲೂಕು ಒಕ್ಕಲಿಗರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಕೋಮಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆರೆ ಒತ್ತುವರಿ ಕಾರ್ಯಾಚರಣೆ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೋಬಳಿ ಕೋಮಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ವೆ ನಂಬರ್ ೮೨ರಲ್ಲಿರುವ ಸುಮಾರು ೨೬ ಗುಂಟೆ ವಿಸ್ತೀರ್ಣ ಹೊಂದಿರುವ ಕೆರೆ ಒತ್ತುವರಿ ಕಾರ್ಯಾಚರಣೆ ಗುರುವಾರ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ನೆರವಿನೊಂದಿಗೆ ಕೈಗೊಂಡರು. 
    ಭದ್ರಾವತಿ: ತಾಲೂಕಿನ ಕೂಡ್ಲಿಗೆರೆ ಹೋಬಳಿ ಕೋಮಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ವೆ ನಂಬರ್ ೮೨ರಲ್ಲಿರುವ ಸುಮಾರು ೨೬ ಗುಂಟೆ ವಿಸ್ತೀರ್ಣ ಹೊಂದಿರುವ ಕೆರೆ ಒತ್ತುವರಿ ಕಾರ್ಯಾಚರಣೆ ಗುರುವಾರ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ನೆರವಿನೊಂದಿಗೆ ಕೈಗೊಂಡರು. 
    ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಜಗನ್ನಾಥ್, ಗ್ರಾಮ ಲೆಕ್ಕಾಧಿಕಾರಿ ಜ್ಞಾನೇಶ್ ಸಹಾಯಕ ರಂಗನಾಥ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇಶವಮೂರ್ತಿ ಹಾಗೂ ಸಿಬ್ಬಂದಿ ವರ್ಗ, ಸರ್ವೆ ಇಲಾಖೆಯ ರಾಜಶೇಖರಯ್ಯ ಮತ್ತು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಧಾನ ಕಾರ್ಯದರ್ಶಿ ತೀರ್ಥೇಶ್, ಕಾರ್ತಿಕ್, ಡಿಎಸ್‌ಎಸ್ ಮುಖಂಡ ನಾಗರಾಜ್ ಹಾಗೂ ಕಬಳಿಕಟ್ಟೆ ಮಂಜುನಾಥ್, ಭಂಡಾರಹಳ್ಳಿ ಕಿರಣ್, ಜೈ ಕರ್ನಾಟಕ ಸಂಘದ ಮುಕುಂದ, ಸಾಮಾಜಿಕ ಹೋರಾಟಗಾರ ಕೆಂಚೇನಹಳ್ಳಿ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನೂತನ ವರ್ಷಕ್ಕೆ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆ

ಭದ್ರಾವತಿ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಗುರುವಾರ ಸಂಸದ ಬಿ.ವೈ ರಾಘವೇಂದ್ರ ಪರಿಶೀಲನೆ ನಡೆಸಿದರು. 
    ಭದ್ರಾವತಿ: ನಗರದ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಕ್ತಾಯ ಹಂತಕ್ಕೆ ತಲುಪಿದ್ದು, ಜನವರಿ ೨೦೨೫ ನೂತನ ವರ್ಷಕ್ಕೆ ಲೋಕಾರ್ಪಣೆ ಗೊಳಿಸಲಾಗುವುದು ಎಂದು ಸಂಸದ ಬಿ .ವೈ ರಾಘವೇಂದ್ರ ಹೇಳಿದರು. 
    ಅವರು ಗುರುವಾರ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದರು. ೨೦೨೨ ಜನವರಿಯಲ್ಲಿ ಸುಮಾರು ೨೩ಕೋ.ರು. ವೆಚ್ಚದಲ್ಲಿ ಆರಂಭಗೊಂಡ ಎಲ್.ಸಿ-೩೪ ರೈಲ್ವೆ ಮೇಲ್ಸೇತುವೆ ಸೇತುವೆ ಕಾಮಗಾರಿ ಇದೀಗ ಸುಮಾರು ಎರಡು ವರ್ಷಗಳ ಅವಧಿಯಲ್ಲಿ ಮುಕ್ತಾಯಗೊಳ್ಳುತ್ತಿದೆ. ಈ  ಹಿನ್ನೆಲೆಯಲ್ಲಿ  ಅಧಿಕಾರಿಗಳ ವರ್ಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. 
    ಸುಮಾರು ಎರಡು ವರ್ಷಗಳವರೆಗೆ ಶಿವಮೊಗ್ಗ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಹೊಂದಿರುವ ಪ್ರಮುಖ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡು ವಾಹನ ಸವಾರರು, ಪಾದಚಾರಿಗಳು ಹಾಗೂ ಸ್ಥಳೀಯರು  ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಸುಮಾರು ೧೫ ಕಿ.ಮೀ ಬಳಸಿಕೊಂಡು ನಗರ ಪ್ರವೇಶಿಸಬೇಕಾಗಿದೆ. ಒಟ್ಟಾರೆ ಕಾಮಗಾರಿಗೆ ಸಹಕರಿಸಿರುವ ಎಲ್ಲರಿಗೂ ಹಾಗೂ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.


    ಅಧಿಕಾರಿಗಳು ಈಗಾಗಲೇ ಜನವರಿಯಲ್ಲಿ ಮೇಲ್ಸೇತುವೆ ಲೋಕಾರ್ಪಣೆಗೊಳಿಸುವ ಸಂಬಂಧ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡಿದ್ದು, ಸಾರ್ವಜನಿಕರು ಸೇತುವೆ ಉಪಯೋಗಿಸಿಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.
   ರೈಲ್ವೆ ಇಲಾಖೆ ಎಂಜಿನಿಯರ್ ರಾಜ್‌ಕುಮಾರ್(ಎಇಇ), ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಎಂಜಿನಿಯರ್‌ಗಳಾದ ಬಿ.ಬಿ ಶಿವಪ್ರಸಾದ್, ಕೆ. ಪ್ರಸಾದ್ ಸೇರಿದಂತೆ ಇನ್ನಿತರ ಅಧಿಕಾರಿಗಳು,  ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಮುಖಂಡರಾದ ಮಂಗೋಟೆ ರುದ್ರೇಶ್, ರಾಜು ತಲ್ಲೂರು, ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, December 4, 2024

ಡಿ.5ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ: ನಗರದ ಜೆ.ಪಿ.ಎಸ್ ಕಾಲೋನಿ ಮೆಸ್ಕಾಂ110/33/11 ಕೆವಿ ಹಾಗೂ ಮಾಚೇನಹಳ್ಳಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಡಿ.5 ರ ಬೆಳಗ್ಗೆ 9 ಘಂಟೆಯಿಂದ ಸಂಜೆ 6 ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    ನ್ಯೂಟೌನ್, ನ್ಯೂಕಾಲೋನಿ, ಐ.ಟಿ.ಐ, ಆಕಾಶವಾಣಿ, ಕಾಗದನಗರ, ಸುರಗಿತೋಪು, ಅನೆಕೊಪ್ಪ, ಉಜ್ಜನೀಪುರ, ಬುಳ್ಳಾಪುರ, ಹುಡ್ಕೋ ಕಾಲೋನಿ, ಬೊಮ್ಮನಕಟ್ಟೆ, ಹೊಸ ಸಿದ್ದಾಪುರ, ಎನ್.ಟಿ.ಬಿ ಬಡಾವಣೆ, ಹಳೇಸಿದ್ದಾಪುರ, ಹೊಸೂರು, ಹೊಸೂರು ತಾಂಡ, ಸಂಕ್ಲಿಪುರ, ಹುತ್ತಾ ಕಾಲೋನಿ, ಜನ್ನಾಪುರ, ಬಿ.ಹೆಚ್.ರಸ್ತೆ, ಅಪ್ಪರ್ ಹುತ್ತಾ, ಲೋಯರ್ ಹುತ್ತಾ, ಜಿಂಕ್‌ ಲೈನ್, ಸಿರಿಯೂರು, ತರೀಕೆರೆ ರಸ್ತೆ, ಸಾದತ್ ಕಾಲೋನಿ, ನೆಹರು ನಗರ, ಸುಣ್ಣದಹಳ್ಳಿ, ಬಸವನಗುಡಿ, ಶಿವನಿ ವೃತ್ತ, ಹಿರಿಯೂರು, ಹೊಸ ನಂಜಾಪುರ, ಸಿದ್ದರಹಳ್ಳಿ, ಗೊಂದಿ, ತಾರೀಕಟ್ಟೆ, ಬಿಳಕಿ, ಬಿಳಕಿ ತಾಂಡ, ಹೊಳೆ ಗಂಗೂರು, ರಬ್ಬರ್ ಕಾಡು, ಸುಲ್ತಾನ ಮಟ್ಟಿ, ಕಾರೇಹಳ್ಳಿ, ಬಾಳೆಮಾರನಹಳ್ಳಿ, ಕಂಬದಾಳ್ ಹೊಸೂರು, ಹೊನ್ನಹಟ್ಟಿ ಹೊಸೂರು, ಹುಣಸೇಕಟ್ಟೆ ಕಾಳನಕಟ್ಟೆ, ಹೊಳೆ ನೇರಳೇಕೆರೆ, ಅಂತರಗಂಗೆ, ದೊಣಬಘಟ್ಟ, ತಡಸ, ಚಿಕ್ಕಗೊಪ್ಪೇನ ಹಳ್ಳಿ, ಬಾರಂದೂರು, ಕಲ್ಲಹಳ್ಳಿ, ಯರೇಹಳ್ಳಿ, ಮಾವಿನಕೆರೆ, ದೊಡ್ಡೆ ರಿ, ಮಜ್ಜಿಗೇನಹಳ್ಳಿ, ಪದ್ಮೇನ ಹಳ್ಳಿ, ಲಕ್ಷ್ಮಿಪುರ, ಕೆಂಪೇಗೌಡನಗರ, ಬೊಮ್ಮನಹಳ್ಳಿ, ದೇವನರಸೀಪುರ, ಶಿವಪುರ, ಅಡ್ಲಘಟ್ಟ, ಅಂಬುದಹಳ್ಳಿ, ಅರಳಿಕೊಪ್ಪ, ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ, ಜೇಡಿಕಟ್ಟೆ, ಹಳೆಜೇಡಿ ಕಟ್ಟೆ, ಡೈರಿ ವೃತ್ತ, ಮಲವಗೊಪ್ಪ, ನಿದಿಗೆ ಕೈಗಾರಿಕಾ ಪ್ರದೇಶ, ಹೊನ್ನವಿಲೆ, ಮಜ್ಜಿಗೇನಹಳ್ಳಿ, ಕಲ್ಲಹಳ್ಳಿ ಗ್ರಾ.ಪಂ. ವ್ಯಾಪ್ತಿ, ಶಿವರಾಂನಗರ, ವಿಶ್ವೇಶ್ವರಾಯ ನಗರ, ಜೇಡಿಕಟ್ಟೆ ಹೊಸೂರು, ಜಯಂತಿ ಗ್ರಾಮ, ವೀರಾಪುರ, ಹುಲಿ ರಾಮನಕೊಪ್ಪ, ಹಾಗಲಮನೆ, ಸಂಕ್ಷಿಪುರ, ಸಿರಿಯೂರು, ಸಿರಿಯೂರು ತಾಂಡ, ಸಿರಿಯೂರು ಕ್ಯಾಂಪ್, ವೀರಾಪುರ, ಮತ್ತಿಘಟ್ಟ, ಹಾತಿಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದ್ದು ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.