Sunday, December 8, 2024

ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಸಮಾಜಕ್ಕೆ ಮಾದರಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಶಾಲಾ ವಾರ್ಷಿಕೋತ್ಸವದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರತಿಭಾವಂತ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿದರು. 
    ಭದ್ರಾವತಿ: ಸೇವಾ ಮನೋಭಾವನೆಯೊಂದಿಗೆ ಆರಂಭಗೊಂಡು ಪ್ರಸ್ತುತ ಬೃಹತ್ ಪ್ರಮಾಣದಲ್ಲಿ ಬೆಳೆದು ವಿದ್ಯೆ ನೀಡುವ ಮೂಲಕ ಸಾವಿರಾರು ಮಕ್ಕಳಿಗೆ ಬೆಳಕಾಗಿರುವ ನಗರದ ನ್ಯೂಟೌನ್ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರಶಂಸೆ ವ್ಯಕ್ತಪಡಿಸಿದರು. 
    ಅವರು ಎರಡು ದಿನಗಳ ಕಾಲ ಜರುಗಿದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ವಿದ್ಯಾಸಂಸ್ಥೆ ಆರಂಭಿಸುವುದು ಮುಖ್ಯವಲ್ಲ. ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಮುನ್ನಡೆಯುವುದು ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಮುಂಚೂಣಿಯಲ್ಲಿದ್ದು, ಸಂಸ್ಥೆಯ ಏಳಿಗೆಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ ಎಂದರು. 
    ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ ಮಾತನಾಡಿ, ಭವಿಷ್ಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯವಿರುವ ಎಲ್ಲಾ ರೀತಿಯ ಆಯಾಮಗಳನ್ನು ಶಿಕ್ಷಣ ಸಂಸ್ಥೆ ಮೈಗೂಡಿಸಿಕೊಂಡಿದೆ ಎಂದರು. 


ಭದ್ರಾವತಿ ನ್ಯೂಟೌನ್ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಶಾಲಾ ವಾರ್ಷಿಕೋತ್ಸವದಲ್ಲಿ ಶಾಲಾ ಮಕ್ಕಳ ರೈತ ಪೋಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಶಿಕ್ಷಣ ಸಂಸ್ಥೆ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ ಮಾತನಾಡಿ, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ಸಾಮಾಜಿಕ, ಆಧ್ಯಾತ್ಮಿಕ ಹಾಗು ಶೈಕ್ಷಣಿಕವಾಗಿ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದೆ. ಇಂದಿನ ಮಕ್ಕಳಿಗೆ ಸಂಸ್ಕಾರಯುತ, ಮೌಲ್ಯಯುತವಾದ ಶಿಕ್ಷಣ ನೀಡುವುದು ಸಂಸ್ಥೆಯ ಗುರಿಯಾಗಿದೆ ಎಂದರು. 
    ಎರಡು ದಿನಗಳ ಕಾಲ ಜರುಗಿದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಹಾಗು ಸಾಕ್ಷರತಾ ಇಲಾಖೆ ಜಿಲ್ಲಾ ಉಪನಿರ್ದೇಶಕ(ಆಡಳಿತ) ಎಸ್.ಆರ್ ಮಂಜುನಾಥ್, ಶಿವಮೊಗ್ಗ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್.ಎನ್ ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಪ್ರಶಾಂತಿ ಸೇವಾ ಟ್ರಸ್ಟ್ ತಾಲೂಕು ಗೌರವಾಧ್ಯಕ್ಷ ಎಂ. ದೇವೇಂದ್ರಪ್ಪ, ಶಿಕ್ಷಣ ಸಂಸ್ಥೆ ಜಂಟಿ ಕಾರ್ಯದರ್ಶಿ ಸೌಮ್ಯ ರೂಪ .ಕೆ, ಶಿಕ್ಷಣ ಸಂಯೋಜಕ ಜಿ.ಪಿ ಪರಮೇಶ್ವರಪ್ಪ, ಮುಖ್ಯೋಪಾಧ್ಯಾಯಿನಿ ಟಿ.ವಿ ಸುಜಾತ, ಪ್ರಾಂಶುಪಾಲ ಮೃತ್ಯುಂಜಯ ಕಾನಿಟ್ಕರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 


ಭದ್ರಾವತಿ ನ್ಯೂಟೌನ್ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಶಾಲಾ ವಾರ್ಷಿಕೋತ್ಸವದಲ್ಲಿ ವಿದ್ಯಾಸಂಸ್ಥೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿರುವ ಪ್ರಾಂಶುಪಾಲ ಶಾಮರಾಯ ಆಚಾರ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ವಿಶೇಷ ಎಂದರೆ ಶಾಲಾ ಮಕ್ಕಳಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಲ್ಲದೆ ಮತ್ತೊಂದು ವಿಶೇಷತೆ ಎಂದರೆ ಪ್ರತಿವರ್ಷ ಶಾಲಾ ಮಕ್ಕಳು ವೈಯಕ್ತಿಕವಾಗಿ ಇಷ್ಟಪಡುವ ವಸ್ತುಗಳನ್ನು ಬಹುಮಾನವಾಗಿ ವಿತರಿಸಲಾಗುತ್ತಿದೆ.  ಇನ್ನೊಂದು ವಿಶೇಷತೆ ಎಂದರೆ ಪ್ರತಿವರ್ಷ ಶಾಲಾ ಮಕ್ಕಳ ರೈತ ಪೋಷಕರು ಮತ್ತು ಯೋಧ ಪೋಷಕರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ. ಈ ಬಾರಿ ಶಿಕ್ಷಣ ಸಂಸ್ಥೆಯಲ್ಲಿ ಸುಧೀರ್ಘವಾಗಿ ಸೇವೆ ಸಲ್ಲಿಸಿರುವ ಪ್ರಾಂಶುಪಾಲ ಶಾಮರಾಯ ಆಚಾರ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರತಿವರ್ಷ ವಾರ್ಷಿಕೋತ್ಸವದ ವೇದಿಕೆಯನ್ನು ಕಾಗದನಗರ ಸಂತೋಷ್ ಶಾಮಿಯಾನ ಮಾಲೀಕ ಸಂತೋಷ್‌ರವರು ನಿರ್ಮಿಸಿಕೊಡುತ್ತಿದ್ದು, ಈ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
    ಶಾಲಾ ಮಕ್ಕಳಿಂದ ಮೌಲ್ಯಾಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಮಗ್ರ ಶಿಕ್ಷಣ ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು, ಶಾಲಾ ಮಕ್ಕಳು, ಪೋಷಕರು, ಸುತ್ತಮುತ್ತಲಿನ ಸ್ಥಳೀಯರು ಪಾಲ್ಗೊಂಡಿದ್ದು, ಸಾಂಸ್ಕೃತಿಕ ಕಾರ್ಯಕ್ರಮ ಮನಸೂರೆಗೊಂಡವು. 

ಡಿ.೯ರಂದು ಕಾವ್ಯ, ಕಥೆ, ಪ್ರಬಂಧ ರಚನಾ ಕಮ್ಮಟ


    ಭದ್ರಾವತಿ: ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಸಮಿತಿ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಕಾರದೊಂದಿಗೆ ಡಿ.೯ರ ಸೋಮವಾರ ಬೆಳಿಗ್ಗೆ ೧೦ ಗಂಟೆಗೆ ನ್ಯೂಟೌನ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕಾವ್ಯ, ಕಥೆ ಹಾಗು ಪ್ರಬಂಧ ರಚನಾ ಕಮ್ಮಟ ಹಮ್ಮಿಕೊಳ್ಳಲಾಗಿದೆ. 
    ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಉದ್ಘಾಟಿಸಲಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಸಮಿತಿ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಶಿವಮೊಗ್ಗ ನಿವೃತ್ತ ಪ್ರಾಂಶುಪಾಲ, ಸಾಹಿತಿ ಡಾ.ಎಚ್.ಟಿ ಕೃಷ್ಣಮೂರ್ತಿ, ಸಹ ಪ್ರಾಧ್ಯಾಪಕ ಡಾ. ಜಿ.ಆರ್ ಲವ, ಸಾಹಿತಿ, ಅಂಕಣಕಾರ ಟಿ. ಚಂದ್ರೇಗೌಡ, ನ್ಯೂಟೌನ್ ಸರ್ಕಾರಿ ಬಾಲಾಕಿಯರ ಪ್ರೌಢಶಾಲೆ ಉಪಪ್ರಾಂಶುಪಾಲರಾದ ಟಿ.ಎಸ್ ಸುಮನ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಡ್ಲುಯಜ್ಞಯ್ಯ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಶಾಖೆ ಅಧ್ಯಕ್ಷ ಎಂ.ಆರ್ ರೇವಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. 

Saturday, December 7, 2024

ಛಲವಾದಿಗಳ ಸಮಾಜ, ಮೆಸ್ಕಾಂನಲ್ಲಿ ಮಹಾಪರಿನಿರ್ವಾಣ ದಿನ ಆಚರಣೆ

ಭದ್ರಾವತಿ ನ್ಯೂಟೌನ್ ಜಯಶ್ರೀ ವೃತ್ತದ ಛಲವಾದಿಗಳ ಸಮಾಜ(ಪ.ಜಾ)ದಲ್ಲಿ ಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೬೮ನೇ ಮಹಾಪರಿನಿರ್ವಾಣ ದಿನ ಆಚರಿಸಲಾಯಿತು. 
    ಭದ್ರಾವತಿ: ನ್ಯೂಟೌನ್ ಜಯಶ್ರೀ ವೃತ್ತದಲ್ಲಿರುವ ತಾಲೂಕು ಛಲವಾದಿ ಸಮಾಜ(ಪ.ಜಾ) ಹಾಗು ಜೆಪಿಎಸ್ ಕಾಲೋನಿ ಮೆಸ್ಕಾಂ ಕಛೇರಿ ಸೇರಿದಂತೆ ನಗರದ ವಿವಿಧೆಡೆ ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೬೮ನೇ ಮಹಾಪರಿನಿರ್ವಾಣ ದಿನ ಆಚರಿಸಲಾಯಿತು.
    ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಲಾಯಿತು. ಅಂಬೇಡ್ಕರ್‌ರವರ ಆಶಯ, ಸಂವಿಧಾನ ಮಹತ್ವ ಕುರಿತು ತಿಳಿಸಲಾಯಿತು. 
    ಜೆಪಿಎಸ್ ಮೆಸ್ಕಾಂ ಕಛೇರಿ: 
    ಮೆಸ್ಕಾಂ ವಿಭಾಗೀಯ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಾಶ್ ಬಳ್ಳಾಪುರ, ಲೆಕ್ಕಾಧಿಕಾರಿ ಅಶ್ವಿನ್‌ಕುಮಾರ್, ಆಂತರಿಕ ಲೆಕ್ಕಾಧಿಕಾರಿ ಮಲ್ಲೇಶ್ ನಾಯ್ಕ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಾದ ಗಿರೀಶ್, ಬೀರಪ್ಪ ಮತ್ತು ಮುನಾಫ್, ಹೇಮಣ್ಣ, ಗುರುಪ್ರಸಾದ್ ಸೇರಿದಂತೆ ಉಪವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. 
    ತಾಲೂಕು ಛಲವಾದಿಗಳ ಸಮಾಜ: 
    ತಾಲೂಕು ಛಲವಾದಿಗಳ ಸಮಾಜ(ಪ.ಜಾ)ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಎಸ್.ಎಸ್ ಭೈರಪ್ಪ, ಡಿ. ನರಸಿಂಹಮೂರ್ತಿ, ಬದರಿನಾರಾಯಣ ಸೇರಿದಂತೆ ಸಮಾಜದ ಇನ್ನಿತರರು ಪಾಲ್ಗೊಂಡಿದ್ದರು. 
 

ಭದ್ರಾವತಿ ಜೆಪಿಎಸ್ ಕಾಲೋನಿ ಮೆಸ್ಕಾಂ ಕಛೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೬೮ನೇ ಮಹಾಪರಿನಿರ್ವಾಣ ದಿನ ಆಚರಿಸಲಾಯಿತು 

ಸಾಮಾಜಿಕ ಸಾಮರಸ್ಯ ದಿನ : ಅಂಬೇಡ್ಕರ್ ಭಾವಚಿತ್ರಕ್ಕೆ ಗೌರವ ಸಮರ್ಪಣೆ

ಸಿಟಿಜನ್ ಫಾರ್ ಸೋಷಿಯಲ್ ಜಸ್ಟೀಸ್ ಫೋರಂ ವತಿಯಿಂದ ಭದ್ರಾವತಿ ತಾಲೂಕಿನ ಕಾಗೆಕೋಡಮಗ್ಗೆ ಗ್ರಾಮ ಪಂಚಾಯಿತಿ ಜಯನಗರ ಗ್ರಾಮದಲ್ಲಿ ಸಾಮಾಜಿಕ ಸಾಮರಸ್ಯ ದಿನದ ಅಂಗವಾಗಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಣೆ ಸಲ್ಲಿಸಲಾಯಿತು. 
    ಭದ್ರಾವತಿ: ಸಿಟಿಜನ್ ಫಾರ್ ಸೋಷಿಯಲ್ ಜಸ್ಟೀಸ್ ಫೋರಂ ವತಿಯಿಂದ ತಾಲೂಕಿನ ಕಾಗೆಕೋಡಮಗ್ಗೆ ಗ್ರಾಮ ಪಂಚಾಯಿತಿ ಜಯನಗರ ಗ್ರಾಮದಲ್ಲಿ ಸಾಮಾಜಿಕ ಸಾಮರಸ್ಯ ದಿನದ ಅಂಗವಾಗಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಣೆ ಸಲ್ಲಿಸಲಾಯಿತು. 
    ಪೋರಂ ಸಂಚಾಲಕ ಕೆ.ಎನ್ ಶ್ರೀಹರ್ಷ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಅವರು ಮಾತನಾಡಿ, ಸಂವಿಧಾನದ ಮಹತ್ವವನ್ನು ತಿಳಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ನುಡಿನಮನಗಳನ್ನು ಅರ್ಪಿಸಿದರು. ಪ್ರಧಾನಿ ನರೇಂದ್ರ  ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನದ ಮಹತ್ವ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆ, ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಲು ನಾವೆಲ್ಲರೂ ಶ್ರಮಿಸೋಣ ಎಂಬುದಾಗಿ ಮನವಿ ಮಾಡಿದರು.
ಎಸ್.ಸಿ ಮೋರ್ಚಾ ಅಧ್ಯಕ್ಷ  ಹನುಮಂತ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಓಬಿಸಿ ಮೋರ್ಚಾ ಅಧ್ಯಕ್ಷ ರಾಜಶೇಖರ್ ಉಪ್ಪಾರ್ ಸಂವಿಧಾನ ಪ್ರತಿಜ್ಞಾ ವಿಧಿ ಭೋದಿಸಿದರು.
    ಗ್ರಾಮದ ಪ್ರಮುಖರಾದ ಚಂದ್ರಪ್ಪ, ನಂಜೇಗೌಡ್ರು, ಅಶೋಕ, ಪಾಪಣ್ಣ, ಶಂಕ್ರನಾಯ್ಕ, ಸ್ವಾಮಿನಾಯ್ಕ, ರೆಡ್ಡಿನಾಯ್ಕ,  ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ  ಮೊಸರಳ್ಳಿ ಅಣ್ಣಪ್ಪ, ರವಿಕುಮಾರ್, ಶಿವಮೂರ್ತಿ, ನಟರಾಜ್, ಶಕುಂತಲಾ, ಲೋಲಾಕ್ಷಿ, ರಾಜಗುರು, ಉಮಾದೇವಿ, ಜಯಲಕ್ಷ್ಮಿ, ಕವಿತಾ ರಾವ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. 

ನಗರಸಭೆ ಮಾಜಿ ಸದಸ್ಯನ ಮೇಲೆ ಮಚ್ಚಿನಿಂದ ಹಲ್ಲೆ

    ಭದ್ರಾವತಿ: ವಾರ್ಡ್ ನಂ. ೨೯ರ ನಗರಸಭೆ ಮಾಜಿ ಸದಸ್ಯರೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿರುವುದಾಗಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ನಗರಸಭೆ ಮಾಜಿ ಸದಸ್ಯ ೪೬ ವರ್ಷದ ಅನಿಲ್ ಕುಮಾರ್ ಹೊಸ ಸಿದ್ದಾಪುರ ಗ್ರಾಮದವರಾಗಿದ್ದು, ಅವರ ಮನೆಯ ಪಕ್ಕದ ನಿವಾಸಿಯಾಗಿರುವ ಆನಿ ಯಾನೆ ಅನಿಲ್ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
    ಹಲ್ಲೆ ನಡೆಯುವ ಹಿಂದಿನ ದಿನ ರಾತ್ರಿ ಅನಿ ಮದ್ಯಪಾನ ಮಾಡಿಕೊಂಡು ರಸ್ತೆಯಲ್ಲಿ ಇದ್ದಂತಹ ಬೀದಿ ದೀಪಗಳ ವೈಯರ್ ಗಳನ್ನು ಕಿತ್ತು ಹಾಕಿ ದೀಪಗಳನ್ನು ಒಡೆದು ಹಾಕಿದ್ದನು. ಅಲ್ಲದೆ ಅಮಲಿನಲ್ಲಿ ಅವಾಚ್ಯ ಶಬ್ದಗಳಿಂದ ರಸ್ತೆಯಲ್ಲಿ ಕೂಗಾಡುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದನು. ಈ ಹಿನ್ನೆಲೆಯಲ್ಲಿ ಅನಿಲ್ ಕುಮಾರ್ ಯಾಕೆ ಈ ರೀತಿ ಪದೇ ಪದೇ ಏರಿಯಾದಲ್ಲಿ ಗಲಾಟೆ ಮಾಡುತ್ತೀಯಾ ಎಂದು ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿದ್ದರು.
    ಇದಾದ ಮರುದಿನ ಬೆಳಿಗ್ಗೆ ೯.೪೦ರ ಸಮಯದಲ್ಲಿ ತೋಟಕ್ಕೆ ಹೋಗಲು ಬೈಕ್ ತೆಗೆಯುತ್ತಿರುವಾಗ ಅನಿ ಅಲಿಯಾಸ್ ಅನಿಲ್ ಈತನು ಏಕಾಏಕಿ ಬಂದವನೇ ನಿನ್ನೆ ನನಗೆ ಬುದ್ಧಿ ಹೇಳಲು ಬರುತ್ತೀಯಾ ಎಂದು ಆರೋಪಿಸಿ ಏಕಾಏಕಿ ಮಚ್ಚಿನಿಂದ ಅನಿಲ್ ಕುಮಾರ್ ಅವರ ತಲೆಯ ಎಡಭಾಗಕ್ಕೆ ಹೊಡೆದಿದ್ದಾನೆ ಎನ್ನಲಾಗಿದೆ.
    ತಕ್ಷಣವೇ ಸ್ಥಳೀಯರು ಗಲಾಟೆ ಬಿಡಿಸಿರುತ್ತಾರೆ, ನಂತರ ಅನಿಲ್ ಕುಮಾರ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನ್ಯೂಟೌನ್ ಠಾಣೆಯಲ್ಲಿ ದೂರು ದಾಖಲಾಗಿದೆ.
 

ವಿಜೃಂಭಣೆಯಿಂದ ಜರುಗಿದ ಶ್ರೀ ಸುಬ್ರಮಣ್ಯ ಷಷ್ಠಿ ಉತ್ಸವ

ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ಹಳೇನಗರದ ಶ್ರೀ ರಾಮೇಶ್ವರ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಶ್ರೀ ಸುಬ್ರಮಣ್ಯ ಷಷ್ಠಿ ಉತ್ಸವ ವಿಜೃಂಭಣೆಯಿಂದ ಜರಗಿತು. 
    ಭದ್ರಾವತಿ: ಪ್ರತಿ ವರ್ಷದಂತೆ ಈ ಬಾರಿ ಸಹ ಹಳೇನಗರದ ಶ್ರೀ ರಾಮೇಶ್ವರ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಶ್ರೀ ಸುಬ್ರಮಣ್ಯ ಷಷ್ಠಿ ಉತ್ಸವ ವಿಜೃಂಭಣೆಯಿಂದ ಜರಗಿತು. 
    ಉತ್ಸವದ ಅಂಗವಾಗಿ ಕೃಷ್ಣಮೂರ್ತಿ ಸೋಮಯಾಜಿ ನೇತೃತ್ವದಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಸುಬ್ರಮಣ್ಯ ಮೂಲಮಂತ್ರದಿಂದ ಹೋಮ ಹಾಗೂ ಶ್ರೀ ರಾಮೇಶ್ವರ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಿಂದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದವರೆಗೆ ನಾದಸ್ವರ ವಾದ್ಯಗಳೊಂದಿಗೆ ರಾಜಬೀದಿ ಉತ್ಸವ ಮೆರವಣಿಗೆ ನಡೆಯಿತು. ನಂತರ ಪೂರ್ಣಾವತಿ, ಬ್ರಹ್ಮಚಾರಿಗಳ ಪೂಜೆ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. 
    ದೇವಸ್ಥಾನ ಆಡಳಿತ ಮಂಡಳಿಯರು ಸೇರಿದಂತೆ ಹಳೇನಗರ, ಹೊಸಮನೆ, ಜನ್ನಾಪುರ, ನ್ಯೂಟೌನ್ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಭಕ್ತರು ಪಾಲ್ಗೊಂಡಿದ್ದರು.  
 

Friday, December 6, 2024

ಡಿ.೭ರಂದು ಶಾಲಾ ವಾರ್ಷಿಕೋತ್ಸವ ಸಂಭ್ರಮ




    ಭದ್ರಾವತಿ: ನಗರದ ನ್ಯೂಟೌನ್  ಈಶ್ವರಮ್ಮ ಪ್ರೌಢಶಾಲೆ ಮತ್ತು ಪ್ರಶಾಂತಿ ಹಿರಿಯ ಪ್ರಾಥಮಿಕ ಶಾಲೆ (ಕನ್ನಡ ಮತ್ತು ಆಂಗ್ಲ ಮಾಧ್ಯಮ) ವಾರ್ಷಿಕೋತ್ಸವ ಸಂಭ್ರಮ ಡಿ.೭ರಂದು ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. 
    ಸಂಜೆ ೬ ಗಂಟೆಗೆ ಆರಂಭಗೊಳ್ಳಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯಾದೇವಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ರಾಜ್ಯ ಸಂಯೋಜಕ ಡಾ. ಡಿ. ಪ್ರಭಾಕರ ಬೀರಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. 
    ಪ್ರಮುಖರಾದ ಸೌಮ್ಯ ರೂಪ ಕೆ., ಎಂ. ದೇವೇಂದ್ರಪ್ಪ, ಶಾಮರಾಯ ಆಚಾರ್, ಟಿ.ವಿ ಸುಜಾತ ಮತ್ತು ಜಿ.ಪಿ ಪರಮೇಶ್ವರಪ್ಪ ಉಪಸ್ಥಿತರಿರುವರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಶಾಲಾ ಮಕ್ಕಳು, ಪೋಷಕರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಾರ್ಷಿಕೋತ್ಸವ ಸಂಭ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.