![](https://blogger.googleusercontent.com/img/a/AVvXsEhFqyvDFa9nOkTf5kIQIst8q4s_nYKzgFx5YdM6OnRDVKWRiTZz04K567VA9JBSS4AVvDDW9yfAu69L5cAvBkfUnxfxbjpGFEWR65yhjTF_asPP7XN44ZCYM6eD_Fxsvi3X-1fUmwbw3OCs1a6puumdPH6I4jkuv_K6EYUFzxcxEAq7vvPSfaoVFkYCfhyb=w400-h225-rw)
ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ದಲಿತ ನೌಕರರ ಒಕ್ಕೂಟ ತಾಲೂಕು ಶಾಖೆ ವತಿಯಿಂದ ಭದ್ರಾವತಿ ನಗರದ ಮಿಲ್ಟಿಕ್ಯಾಂಪ್ ಪ್ರೊ. ಬಿ. ಕೃಷ್ಣಪ್ಪ ವೃತ್ತದ ಸಮೀಪದಲ್ಲಿರುವ ಲೋಕೋಪಯೋಗಿ ಇಲಾಖೆ ಅತಿಥಿಗೃಹದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ೬೮ನೇ ಮಹಾ ಪರಿನಿರ್ವಾಣ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ: `ವೇದ, ಉಪನಿಷತ್ತು, ಶಾಸ್ತ್ರ, ಪುರಾಣಗಳಿಂದ ದಲಿತರು ಕಲಿಯಬೇಕಾಗಿದ್ದು ಏನು ಇಲ್ಲ. ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳೇ ದಲಿತರ ಉದ್ಧಾರಕ್ಕೆ ಮಾರ್ಗ ಸೂಚಿಗಳು' ಎಂದು ನಿವೃತ್ತ ಪ್ರಾಂಶುಪಾಲ ಶಿವಬಸಪ್ಪ ಹೇಳಿದರು.
ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ದಲಿತ ನೌಕರರ ಒಕ್ಕೂಟ ತಾಲೂಕು ಶಾಖೆ ವತಿಯಿಂದ ನಗರದ ಮಿಲ್ಟಿಕ್ಯಾಂಪ್ ಪ್ರೊ. ಬಿ. ಕೃಷ್ಣಪ್ಪ ವೃತ್ತದ ಸಮೀಪದಲ್ಲಿರುವ ಲೋಕೋಪಯೋಗಿ ಇಲಾಖೆ ಅತಿಥಿಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್ ಅಂಬೇಡ್ಕರ್ ಅವರ ೬೮ನೇ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದೂ ಧರ್ಮದ ಒಡಲಾಳದಲ್ಲಿ ಸಾವಿರಾರು ವರ್ಷಗಳಿಂದ ಹುದುಗಿದ್ದ ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ಹಾಗೂ ವರ್ಣವ್ಯವಸ್ಥೆಯಿಂದಾಗಿ ಭಾರತ ವಿಶ್ವದ ಮುಂದೆ ತಲೆತಗ್ಗಿಸುವಂತಾಗಿತ್ತು. ಆದರೆ ಅಂಬೇಡ್ಕರ್ ಅವರ ಸಂವಿಧಾನದ ಜಾರಿಯಿಂದಾಗಿ ಸ್ವಾತಂತ್ರ್ಯ, ಸಮಾನತೆಗಳಿಂದ ಕೂಡಿದ ಜಾತ್ಯಾತೀತ ರಾಷ್ಟ್ರವಾಗಿ ಭಾರತ ಹೊರಹೊಮ್ಮಲು ಕಾರಣವಾಯಿತು ಎಂದರು.
ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ಮೇಲು ಕೀಳುಗಳಿಂದಾಗಿ ಹಿಂದೂ ಧರ್ಮ ತೊರೆದ ಅಂಬೇಡ್ಕರ್ ಅವರು ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತೆಗಳಿಂದ ಕೂಡಿದ ಬೌದ್ಧ ಧರ್ಮವನ್ನು ಸ್ವೀಕರಿಸಿದರು ಎಂದರು.
ಜಿಲ್ಲಾ ಸಂಚಾಲಕ ಎಂ.ಏಳುಕೋಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಆರ್. ತಮ್ಮಯ್ಯ, ಗ್ರಾಮಾಂತರ ಜಿಲ್ಲಾ ಸಂಘಟನಾ ಸಂಚಾಲಕ ಬಿ. ಕೃಷ್ಣಪ್ಪ, ತಾಲೂಕು ಸಂಚಾಲಕ ಕಾಚಗೊಂಡನಹಳ್ಳಿ ನಾಗರಾಜ್, ತಾಲೂಕು ದಲಿತ ನೌಕರರ ಒಕ್ಕೂಟದ ತಾಲೂಕು ಸಂಚಾಲಕ ಲಿಂಗರಾಜು, ಕಾರ್ಯದರ್ಶಿ ಚನ್ನಪ್ಪ, ದಸಂಸ ಹಿರಿಯ ಮುಖಂಡ ಮುತ್ತು, ಸಿರಿಯೂರು ಜಯಣ್ಣ, ಪ್ರೌಢಶಾಲಾ ನಿವೃತ್ತ ಶಿಕ್ಷಕ ಬೊಮ್ಮೇನಹಳ್ಳಿ ಶ್ರೀನಿವಾಸ್, ಎಸ್.ಜೆ.ಎಂ ಕಾಲೇಜಿನ ಕಡದಕಟ್ಟೆ ರಾಜಶೇಖರ್, ಶಿಕ್ಷಕ ನರಸಿಂಹಮೂರ್ತಿ, ಮಾಚೇನಹಳ್ಳಿ ಮಲ್ನಾಡ್ ಕಂಪನಿಯ ಉದ್ಯೋಗಿ ಶಿವಣ್ಣ ಮತ್ತು ತಾಲೂಕು ದಸಂಸ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ತಾಲೂಕು ಸಂಚಾಲಕ ಕಾಂಚಗೊಂಡನಹಳ್ಳಿ ನಾಗರಾಜ್ ಸ್ವಾಗತಿಸಿದರು. ಎಸ್ ಮುತ್ತು ವಂದಿಸಿದರು.