ವಿಶ್ವಸಂಸ್ಥೆ ಧ್ಯಾನದ ಮಹತ್ವ ಅರಿತು ಅದನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶದಿಂದ ಪ್ರತಿ ವರ್ಷ ಡಿ.೨೧ ವಿಶ್ವ ಧ್ಯಾನ ದಿನಾಚರಣೆ ಆಚರಿಸಬೇಕೆಂದು ಘೋಷಿಸಿದ್ದು, ಈ ಹಿನ್ನಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ಗುರೂಜಿಯವರಾದ ಶ್ರೀ ರವಿಶಂಕರ್ ಗುರೂಜಿಯವರಿಗೆ ಸುದರ್ಶನ ಕ್ರಿಯೆ ಸಾಧನೆ ಸಿದ್ದಿಸಿದ ಸ್ಥಳವಾದ ಭದ್ರಾವತಿ ತಾಲೂಕಿನ ಬಿಆರ್‌ಪಿ ಭದ್ರಾ ಜಲಾಶಯದ ಬಳಿ ಈಶ್ವರ ದೇವಸ್ಥಾನದಲ್ಲಿ ಶನಿವಾರ ವಿಶ್ವ ಧ್ಯಾನ ದಿನಾಚರಣೆ ಸಮಾರಂಭ ಆಯೋಜಿಸಲಾಗಿತ್ತು.
ಭದ್ರಾವತಿ : ಧ್ಯಾನ ಎಂದರೆ ಕೇವಲ ಏಕಾಗ್ರತೆಯಲ್ಲ. ಎಚ್ಚರಿಕೆ ಸ್ಥಿತಿಯಲ್ಲಿ ವಿಶ್ರಾಂತಿ ಪಡೆಯುವುದೇ ಧ್ಯಾನ ಸ್ಥಿತಿ. ಇದರಿಂದ ಬಳಲಿದ ದೇಹ, ಮನಸ್ಸಿಗೆ, ತಂಪು, ನೆಮ್ಮದಿ ಶಾಂತಿ ನೀಡುತ್ತದೆ. ಅಲ್ಲದೆ ಒತ್ತಡ ಮುಕ್ತ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಆರ್ಟ್ ಆಫ್ ಲಿವಿಂಗ್ ಶಿವಮೊಗ್ಗ ಜ್ಞಾನ ಕ್ಷೇತ್ರದ ಶ್ರೀ ಬ್ರಹ್ಮಪಾದ್ ಸ್ವಾಮೀಜಿ ಹೇಳಿದರು.
ವಿಶ್ವಸಂಸ್ಥೆ ಧ್ಯಾನದ ಮಹತ್ವ ಅರಿತು ಅದನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶದಿಂದ ಪ್ರತಿ ವರ್ಷ ಡಿ.೨೧ ವಿಶ್ವ ಧ್ಯಾನ ದಿನಾಚರಣೆ ಆಚರಿಸಬೇಕೆಂದು ಘೋಷಿಸಿದ್ದು, ಈ ಹಿನ್ನಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ಗುರೂಜಿಯವರಾದ ಶ್ರೀ ರವಿಶಂಕರ್ ಗುರೂಜಿಯವರಿಗೆ ಸುದರ್ಶನ ಕ್ರಿಯೆ ಸಾಧನೆ ಸಿದ್ದಿಸಿದ ಸ್ಥಳವಾದ ಬಿಆರ್‌ಪಿ ಭದ್ರಾ ಜಲಾಶಯದ ಬಳಿ ಈಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ವಿಶ್ವ ಧ್ಯಾನ ದಿನಾಚರಣೆ ಸಮಾರಂಭದಲ್ಲಿ ಶ್ರೀಗಳು ಪಾಲ್ಗೊಂಡು ಮಾತನಾಡಿದರು.
ನಾವು ಪೂರ್ವ ತಯಾರಿ ಮಾಡಿಕೊಂಡು ಕ್ರಮ ಬದ್ದವಾಗಿ ಧ್ಯಾನ ಮಾಡಿದರೆ ಅದರಿಂದ ಹೆಚ್ಚಿನ ಪ್ರತಿಫಲ ದೊರೆಯುತ್ತದೆ. ಈ ಸ್ಥಳ ಇಂದು ಗುರೂಜಿಯವರ ಭಕ್ತರಿಗೆ ಅತ್ಯಂತ ಮಹತ್ವವಾದ ಸ್ಥಳವಾಗಿದೆ. ಕಾರಣ ೪೨ ವರ್ಷಗಳ ಹಿಂದೆ ತಮ್ಮ ೨೬ನೇ ವಯಸ್ಸಿನಲ್ಲಿ ಇದೇ ಸ್ಥಳದಲ್ಲಿ ಅವರಿಗೆ ಸುದರ್ಶನ ಕ್ರಿಯೆ ಸಾಧನೆ ಸಿದ್ದಿಸಿದ ಸ್ಥಳವಾಗಿದೆ. ಅವರ ಸಾಧನೆ ಸಿದ್ದಿ ಇಂದು ವಿಶ್ವಕ್ಕೆ ಪರಿಚಯವಾಗುತ್ತಿರುವುದು ಹೆಮ್ಮೆಯ ಸಂಗತಿ. ಇಂತಹ ಧಾರ್ಮಿಕ ಗುರುಗಳು ಪ್ರತಿಪಾದಿಸಿದ ಸಿದ್ದಾಂತಗಳು, ತತ್ವಗಳು, ಸಾಧನೆಗಳು ನೀಡಿದ ಕೊಡುಗೆಗಳು ಇಂದು ವಿಶ್ವ ಸಂಸ್ಥೆ ಮನ್ನಣೆ ನೀಡಿ ಅವುಗಳನ್ನು ಪ್ರಪಂಚಕ್ಕೆ ಪರಿಚಯಿಸುತ್ತಿದೆ. ಇದಕ್ಕೆ ಭಾರತೀಯರಾದ ನಾವುಗಳು ಹೆಮ್ಮೆ ಪಡಬೇಕು ಎಂದರು.
ಜಿಲ್ಲಾ ಸಂಯೋಜನಾಧಿಕಾರಿ ಬಿ. ಮೂರ್ತಿ ಮಾತನಾಡಿ, ಇಂದು ವಿಶ್ವದಲ್ಲಿ ಶಾಂತಿಗೋಸ್ಕರ ಯುಧ್ಧಗಳು ನಡೆಯುತ್ತಿದೆ. ಇದಕ್ಕಾಗಿ ಕೋಟ್ಯಾಂತರ ರು. ಗಳನ್ನು ವ್ಯಯಿಸಲಾಗುತ್ತಿದೆ. ಆದರೆ ಇದರಿಂದ ಶಾಂತಿ, ನೆಮ್ಮದಿ ಇಲ್ಲ. ಯಾವುದರಿಂದ ನಮಗೆ ಶಾಂತಿ, ನೆಮ್ಮದಿ ದೊರೆಯುತ್ತದೆಯೋ ಅದಕ್ಕೆ ಯಾವ ದೇಶ ಸಹ ಪ್ರೋತ್ಸಾಹ ನೀಡುತ್ತಿಲ್ಲ. ಯೋಗ, ಧ್ಯಾನ, ಪ್ರಾಣಾಯಾಮಗಳನ್ನು ಮಾಡಲು ಯಾವ ದೇಶಗಳು ದೃಢನಿರ್ಧಾರ ಮಾಡದಿರುವುದು ಇಂದಿನ ಆಶಾಂತಿಯ ವಾತಾವರಣಕ್ಕೆ ಮೂಲ ಕಾರಣ ಎಂದರು.
ಇಂದು ನಾವು ಯಾವುದೇ ರೀತಿಯ ಸಾಧನೆ ಅಥವಾ ಕೆಲಸ ಮಾಡಬೇಕಾದರೆ ಮೊದಲು ನಮ್ಮಲ್ಲಿ ಶಾಂತಿ ಇದ್ದರೆ ಮಾತ್ರ ಏನಾದರೂ ಸಾಧಿಸಲು ಸಾಧ್ಯ. ಇದಕ್ಕೆ ಧ್ಯಾನವೇ ಮೂಲವಾಗಿರುತ್ತದೆ. ಇದರಿಂದ ನಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಶಾಂತಿ ನೆಲೆಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇದಕ್ಕೆ ಪ್ರಕೃತಿ ಸಹ ಸಹಕರಿಸುತ್ತದೆ. ಪ್ರತಿಯೊಬ್ಬರೂ ಪ್ರತಿ ದಿವಸ ೧೫ ರಿಂದ ೨೦ ನಿಮಿಷ ಧ್ಯಾನ ಮಾಡಿದರೆ ಅನುಕೂಲವಾಗುತ್ತದೆ ಎಂದರು.
ಯೋಗ ಶಿಕ್ಷಕಿ ಭಾಗ್ಯ ಮೂರ್ತಿ, ಪ್ರಾಣಾಯಾಮ, ಯೋಗ ಮತ್ತು ಧ್ಯಾನ ನಡೆಸಿಕೊಟ್ಟರು. ಆರ್ಟ್ ಆಫ್ ಲಿವಿಂಗ್ ಜಿಲ್ಲಾ ಅಭಿವೃಧ್ಧಿ ಸದಸ್ಯರಾದ ಬಿಆರ್‌ಪಿ ನಾಗರಾಜ್, ಪ್ರಕಾಶ್, ಸಂದೀಪ್ ಹಾಗು ಇನ್ನಿತರ ಸೇವಾಕರ್ತರು ಪಾಲ್ಗೊಂಡಿದ್ದರು.