Wednesday, January 1, 2025

ಗುತ್ತಿಗೆದಾರನಿಂದ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿ ಬಿದ್ದ ಕಂಪ್ಯೂಟರ್ ಆಪರೇಟರ್ ಮತ್ತು ಸೆಕ್ಷನ್ ಆಫೀಸರ್

ಕೊಟ್ರಪ್ಪ
    ಭದ್ರಾವತಿ:  ತಾಲೂಕಿನ ಗೊಂದಿ ಬಲದಂಡೆ ನಾಲೆ ಕಾಮಗಾರಿಗೆ ಸಂಬಂಧಿಸಿಂತೆ ಇ-ಟೆಂಡರ್ ವಿಚಾರದಲ್ಲಿ ಕಾಮಗಾರಿ ಬಿಲ್ ಮಂಜೂರು ಮಾಡುವ ಸಂಬಂಧ ಗುತ್ತಿಗೆದಾರನಿಂದ ಲಂಚದ ಹಣ ಪಡೆಯುವಾಗ ಕಂಪ್ಯೂಟರ್ ಆಪರೇಟರ್ ಮತ್ತು ಸೆಕ್ಷನ್ ಆಫೀಸರ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
  ಕರ್ನಾಟಕ ನೀರಾವರಿ ನಿಗಮ ನಿಯಮಿತ ಭದ್ರಾ ಯೋಜನಾ ವೃತ್ತ, ಬಿಆರ್‌ಪಿ ವ್ಯಾಪ್ತಿಯ ತಾಲೂಕಿನ ಗೊಂದಿ ಬಲದಂಡೆ ನಾಲೆಯಲ್ಲಿ ಶಿಲ್ಟ್ ತಗೆಯಲು ಇ-ಟೆಂಡರ್ ಕರೆದಿದ್ದು, ಅದರಂತೆ ಲೋಕೋಪಯೋಗಿ ದ್ವಿತೀಯ ದರ್ಜೆ ಗುತ್ತಿಗೆದಾರ (ಪಿಡಬ್ಲ್ಯೂಡಿ ಕ್ಲಾಸ್-೦೨) ವಿ. ರವಿ ಎಂಬುವರು ೨೦೨೩ನೇ ಸಾಲಿನ ಡಿಸೆಂಬರ್ ತಿಂಗಳಲ್ಲಿ ಇ-ಟೆಂಡರ್ ಪಡೆದಿರುತ್ತಾರೆ. ಈ  ಕಾಮಗಾರಿ ಒಟ್ಟು ಮೊತ್ತ ಜಿಎಸ್‌ಟಿ ಸೇರಿ ೯,೧೬,೯೯೯ ರು. ಗಳಾಗಿದ್ದು, ೨೦೨೩ನೇ ಡಿಸೆಂಬರ್ ತಿಂಗಳಲ್ಲಿ ಕೆಲಸ ಪ್ರಾರಂಭಿಸಿ, ೨೦೨೪ನೇ ಜನವರಿ ತಿಂಗಳಲ್ಲಿ  ಕಾಮಗಾರಿ ಮುಕ್ತಾಯ ಮಾಡಿದ್ದರು. 
    ಕಾಮಗಾರಿ ಬಿಲ್ ಮಂಜೂರು ಮಾಡುವಂತೆ ಕಚೇರಿಗೆ ಹಲವಾರು ಬಾರಿ ರವಿಯವರು ಅಲೆದಾಡಿದ್ದು,  ಆದರೆ ಟೆಂಡರ್ ಹಣ ಬಿಡುಗಡೆ ಆಗಿರುವುದಿಲ್ಲ. ಡಿ.೨೭ ರಂದು  ಡಿ.ಬಿ ಹಳ್ಳಿಯ ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಛೇರಿಗೆ ಹೋಗಿ ಕಛೇರಿಯಲ್ಲಿದ್ದ ಸೆಕ್ಷನ್ ಆಫೀಸರ್ ಟಿ. ಕೊಟ್ರಪ್ಪರವರನ್ನು ಭೇಟಿ ಮಾಡಿ, ತಮ್ಮ ಕಾಮಗಾರಿ ಬಿಲ್ ಮಂಜೂರು ಮಾಡುವಂತೆ ರವಿಯವರು ಕೇಳಿದ್ದಾರೆ. ಆದರೆ ಕೊಟ್ರಪ್ಪರವರು ಬಿಲ್ ಮಂಜೂರು ಮಾಡಲು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.  


ಆರವಿಂದ್ 
    ೧,೨೦,೦೦೦ ರು. ಗಳನ್ನು ನೀಡಿದರೆ ಮಾತ್ರ ಮಂಜೂರು ಮಾಡುವುದಾಗಿ ಕೊಟ್ರಪ್ಪ ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಈ ಸಂಬಂಧ ಲೋಕಾಯುಕ್ತರ ತಂಡ ರಚಿಸಲಾಗಿತ್ತು.  ಬುಧವಾರ  ಸಂಜೆ  ಸುಮಾರು ೪.೩೦ರ ಸಮಯದಲ್ಲಿ ಕೊಟ್ರಪ್ಪ(ಪ್ರಬಾರ ಎ.ಇ.ಇ) ಮತ್ತು ಅವರ ಕಛೇರಿಯ ಕಂಪ್ಯೂಟರ್ ಆಪರೇಟರ್ ಅರವಿಂದ್‌ರವರು  ೧,೨೦,೦೦೦ ರು. ಲಂಚದ ಹಣ ಕಚೇರಿಯಲ್ಲಿ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.  
    ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಚ್ ಮಂಜುನಾಥ ಚೌದರಿ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡಿತ್ತು. ಲೋಕಾಯುಕ್ತ ಪೊಲೀಸ್ ಠಾಣೆ ನಿರೀಕ್ಷಕರಾದ ವೀರಬಸಪ್ಪ.ಎಲ್.ಕುಸಲಾಪುರ, ಎಚ್.ಎಸ್ ಸುರೇಶ್, ಪ್ರಕಾಶ್, ಸಿಬ್ಬಂದಿಗಳಾದ ಯೋಗೇಶ್, ಟೀಕಪ್ಪ, .ಸುರೇಂದ್ರ, ಎಂ. ಮಂಜುನಾಥ್, ಪ್ರಶಾಂತ್ ಕುಮಾರ್, ಚೆನ್ನೇಶ್, ಅರುಣ್ ಕುಮಾರ್, ದೇವರಾಜ್, ಪ್ರಕಾಶ್,  ಆದರ್ಶ, ಎನ್. ಪುಟ್ಟಮ್ಮ., ಅಂಜಲಿ, ಗಂಗಾಧರ ಮತ್ತು  ಪ್ರದೀಪ್‌ರವರು ಪಾಲ್ಗೊಂಡಿದ್ದರು. 

ಭೀಮಾ ಕೊರೆಗಾವ್ ವಿಜಯೋತ್ಸವ ಘಟನೆ ತಿಳಿಸುವ ಪ್ರಯತ್ನ ಶ್ಲಾಘನೀಯ ಕಾರ್ಯ : ಶಿವಬಸಪ್ಪ

ಭದ್ರಾವತಿ ನಗರದ ಬಿ.ಎಚ್ ರಸ್ತೆ, ಅಂಬೇಡ್ಕರ್ ವೃತ್ತದಲ್ಲಿ ನಿರ್ಮಿಸಲಾಗಿರುವ ಭೀಮಾ ಕೊರೆಗಾವ್ ವಿಜಯೋತ್ಸವ ಸ್ತಂಭ ಮಾದರಿಯನ್ನು ದಲಿತ ಮುಖಂಡರಾದ ನಿವೃತ್ತ ಪ್ರಾಂಶುಪಾಲ ಶಿವಬಸಪ್ಪ ಉದ್ಘಾಟಿಸಿ ಮಾತನಾಡಿದರು.  
    ಭದ್ರಾವತಿ: ಇತಿಹಾಸದಲ್ಲಿ ಮುಚ್ಚಿಹೋಗಿದ್ದ ಭೀಮಾ ಕೊರೆಗಾವ್ ವಿಜಯೋತ್ಸವ ಘಟನೆ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಹೊಲಯ-ಮಾದಿಗರ ಸಮನ್ವಯ ಸಮಿತಿ ಮುಂದಾಗಿರುವುದು ಶ್ಲಾಘನೀಯ ಎಂದು ದಲಿತ ಮುಖಂಡರಾದ ನಿವೃತ್ತ ಪ್ರಾಂಶುಪಾಲ ಶಿವಬಸಪ್ಪ ಪ್ರಶಂಸೆ ವ್ಯಕ್ತಪಡಿಸಿದರು. 
    ಭೀಮಾ ಕೊರೆಗಾವ್ ವಿಜಯೋತ್ಸವ ಆಚರಣೆ ಹಿನ್ನಲೆಯಲ್ಲಿ ಬುಧವಾರ ನಗರದ ಬಿ.ಎಚ್ ರಸ್ತೆ, ಅಂಬೇಡ್ಕರ್ ವೃತ್ತದಲ್ಲಿ ನಿರ್ಮಿಸಲಾಗಿರುವ ವಿಜಯೋತ್ಸವ ಸ್ತಂಭ ಮಾದರಿಯನ್ನು ಉದ್ಘಾಟಿಸಿ ಮಾತನಾಡಿದರು. 
    ಅಸ್ಪೃಷ್ಯರ ಸ್ವಾಭಿಮಾನ ಹಾಗು ಕೊರೆಗಾವ್ ವಿಜಯೋತ್ಸವದ ಸಂಕೇತವಾಗಿರುವ ಸ್ತಂಭದ ಮಾದರಿ ಇತಿಹಾಸದಲ್ಲಿ ಮುಚ್ಚಿಹೋಗಿರುವ ಘಟನೆಯನ್ನು ಜನರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಸಹಕಾರಿಯಾಗಿದೆ ಎಂದರು. 
    ಇದಕ್ಕೂ ಮೊದಲು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗು ಕೊರೆಗಾವ್ ಯುದ್ಧದ ವೀರರಿಗೆ ಪುಷ್ಪ ನಮನದೊಂದಿಗೆ ಗೌರವ ಸಲ್ಲಿಸಲಾಯಿತು. 
    ಸಮಿತಿ ಪ್ರಮುಖರಾದ ಸುರೇಶ್, ಎಂ. ಶಿವಕುಮಾರ್, ಧರ್ಮರಾಜ್, ಮಹೇಶ್ ಛಲವಾದಿ, ಜಗದೀಶ್, ಕೃಷ್ಣ ಛಲವಾದಿ, ಪುಟ್ಟರಾಜ್, ಕಾಚಗೊಂಡನಹಳ್ಳಿ ನಾಗರಾಜ್, ಸಿರಿಯೂರು ಜಯಪ್ಪ, ರಾಜಶೇಖರ್, ಕಾರ್ತಿಕ್ ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು. 

ಶ್ರೀ ಮಾರಿಯಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ : ಕಣ್ಮನ ಸೆಳೆದ ಶ್ರೀ ಲಕ್ಷ್ಮೀ ಅಲಂಕಾರ

ಭದ್ರಾವತಿ ನಗರದ ಬಿ.ಎಚ್ ರಸ್ತೆ, ಮೀನುಗಾರರ ಬೀದಿಯಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಅಮ್ಮನವರಿಗೆ ಪ್ರತಿ ವರ್ಷದಂತೆ ಈ ಬಾರಿ ಸಹ ವೈಭವದ ಶ್ರೀ ಲಕ್ಷ್ಮೀ ಅಲಂಕಾರ ಕೈಗೊಳ್ಳಲಾಗಿತ್ತು. 
    ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಮೀನುಗಾರರ ಬೀದಿಯಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಪ್ರತಿ ವರ್ಷದಂತೆ ಈ ಬಾರಿ ಸಹ ಪೊಂಗಲ್ ಹಾಗು ಸಹಸ್ರಾರು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು. 
    ಮಂಗಳವಾರ ರಾತ್ರಿ ಭದ್ರಾ ನದಿಯಿಂದ ಶಕ್ತಿ ಕರಗ ತರುವುದು ಮತ್ತು ಅಗ್ನಿಕುಂಡ ತ್ರಿಶೂಲ ಮುದ್ರೆಯೊಂದಿಗೆ ದೇವಸ್ಥಾನಕ್ಕೆ ಬಂದು ಸೇರುವ ಕಾರ್ಯಕ್ರಮ ನಡೆಯಿತು. 


ಭದ್ರಾವತಿ ನಗರದ ಬಿ.ಎಚ್ ರಸ್ತೆ, ಮೀನುಗಾರರ ಬೀದಿಯಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ತಿರುಪತಿ ಶ್ರೀ ವೆಂಕಟೇಶ್ವರಸ್ವಾಮಿ ಹಾಗು ಪದ್ಮಾವತಿ ಅಮ್ಮನವರನ್ನು ಕಬ್ಬಿನ ಜೊಲ್ಲೆ, ಬಾಳೆ ಗೊನೆಗಳಿಂದ ಅಲಂಕೃತಗೊಳಿಸಲಾಗಿದ್ದು, ಭಕ್ತರನ್ನು ಆಕರ್ಷಿಸಿಸಿತು
    ಬೆಳಗಿನ ಜಾವ ಪೊಂಗಲ್, ನಂತರ ಮಧ್ಯಾಹ್ನ ಸುಮಾರು ೩.೩೦ರವರೆಗೂ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು. ನಂತರ ಸಂಜೆ ೪ ಗಂಟೆಗೆ  ಶ್ರೀ ಮಾರಿಯಮ್ಮ ದೇವಿಯ ರಾಜಬೀದಿ ಉತ್ಸವ ಮತ್ತು ಮಹಾಮಂಗಳಾರತಿಯೊಂದಿಗೆ ಪೂಜೆ ಜರುಗಿತು. 
    ಅಮ್ಮನವರಿಗೆ ವೈಭವದ ಶ್ರೀ ಲಕ್ಷ್ಮೀ ಅಲಂಕಾರ: 
    ಈ ಬಾರಿ ಅಮ್ಮನವರಿಗೆ ೧೦೦, ೫೦, ೨೦ ಹಾಗು ೧೦ ರು. ಮುಖ ಬೆಲೆಯ ನೋಟುಗಳಿಂದ ಮತ್ತು ಚಿನ್ನಾಭರಣಗಳಿಂದ ವೈಭವದ ಶ್ರೀ ಲಕ್ಷ್ಮೀ ಅಲಂಕಾರ ಕೈಗೊಳ್ಳಲಾಗಿದ್ದು, ಅಮ್ಮನವರ ಅಲಂಕಾರ ಭಕ್ತರ ಕಣ್ಮನ ಸೆಳೆಯಿತು. 
    ಅಲ್ಲದೆ ದೇವಸ್ಥಾನದ ಹೊರಭಾಗದಲ್ಲಿ ತಿರುಪತಿ ಶ್ರೀ ವೆಂಕಟೇಶ್ವರಸ್ವಾಮಿ ಹಾಗು ಪದ್ಮಾವತಿ ಅಮ್ಮನವರನ್ನು ಕಬ್ಬಿನ ಜೊಲ್ಲೆ, ಬಾಳೆ ಗೊನೆಗಳಿಂದ ಅಲಂಕೃತಗೊಳಿಸಲಾಗಿದ್ದು, ಭಕ್ತರನ್ನು ಆಕರ್ಷಿಸಿಸಿತು. ಅಲ್ಲದೆ ಬಹುತೇಕ ಭಕ್ತರು ಶ್ರೀ ವೆಂಕಟೇಶ್ವರಸ್ವಾಮಿ ಹಾಗು ಪದ್ಮಾವತಿ ಅಮ್ಮನವರ ಮುಂದೆ ನಿಂತು ಮೊಬೈಲ್‌ಗಳಲ್ಲಿ ಪೋಟೋ ಕ್ಲಿಕಿಸಿಕೊಂಡು ಸಂಭ್ರಮಿಸಿದರು. 
    ಶ್ರೀ ಮಾರಿಯಮ್ಮ ದೇವಾಲಯ ಕಮಿಟಿ ಅಧ್ಯಕ್ಷ, ಉದ್ಯಮಿ ಎ. ಮಾಧು ನೇತೃತ್ವದಲ್ಲಿ ಜಾತ್ರಾಮಹೋತ್ಸವ ನೆರವೇರಿತು. ನಗರದ ವಿವಿಧೆಡೆಗಳಿಂದ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.   
 

ಭದ್ರಾವತಿ ನಗರದ ಬಿ.ಎಚ್ ರಸ್ತೆ, ಮೀನುಗಾರರ ಬೀದಿಯಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಸಹಸ್ರಾರು ಮಂದಿಗೆ ಅನ್ನಸಂತರ್ಪಣೆ ನೆರವೇರಿತು. 

Tuesday, December 31, 2024

ಪ್ರಾಮಾಣಿಕತೆ ಜೊತೆಗೆ ನಿಸ್ವಾರ್ಥ ಮನೋಭಾವ ಬೆಳೆಸಿಕೊಳ್ಳಿ : ಶಂಕರ್ ಅಶ್ವಥ್

ಭದ್ರಾವತಿ ನಗರದ ಅಪ್ಪರ್ ಹುತ್ತಾ ಅನನ್ಯ ಪ್ರೌಢಶಾಲೆ ವಾರ್ಷಿಕೋತ್ಸವ `ಅನನ್ಯೋತ್ಸವ' ಕಾರ್ಯಕ್ರಮದಲ್ಲಿ ಹಿರಿಯ ಚಲನಚಿತ್ರ ಶಂಕರ್ ಅಶ್ವಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ವಿದ್ಯಾರ್ಥಿಗಳು ಪ್ರಾಮಾಣಿಕತೆ ಮೈಗೂಡಿಸಿಕೊಳ್ಳುವ ಜೊತೆಗೆ ನಿಸ್ವಾರ್ಥತೆ ಮನೋಭಾವ ಬೆಳೆಸಿಕೊಳ್ಳಬೇಕು. ಆ ಮೂಲಕ ಭವಿಷ್ಯದಲ್ಲಿ ಸಮಾಜದ ಸೇವೆಯಲ್ಲಿ ತಮ್ಮ ಕೊಡುಗೆಯನ್ನು ನೀಡಬೇಕೆಂದು ಹಿರಿಯ ಚಲನಚಿತ್ರ ಶಂಕರ್ ಅಶ್ವಥ್ ಹೇಳಿದರು. 
    ನಗರದ ಅಪ್ಪರ್ ಹುತ್ತಾ ಅನನ್ಯ ಪ್ರೌಢಶಾಲೆ ವಾರ್ಷಿಕೋತ್ಸವ `ಅನನ್ಯೋತ್ಸವ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಅವರೇ ರಚಿಸಿ, ನಿರ್ದೇಶಿಸಿದ `ನಮ್ಮ ಮೇಷ್ಟ್ರು' ಎಂಬ ಚಲನಚಿತ್ರದ ಕಥೆಯನ್ನು ಹೇಳುವ ಮೂಲಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವಿನ ಬಾಂದವ್ಯದ ಬಗ್ಗೆ ತಿಳಿಸಿದರು. 
    ಶಂಕರ್ ಅಶ್ವಥ್ ಅವರನ್ನು ಅನನ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಡಾ. ಕೆ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. 
  ರಾಧಿಕಾ ಮತ್ತು ಸುಪ್ರಿಯ ಕಾರ್ಯಕ್ರಮ ನಿರೂಪಿಸಿ, ಟ್ರಸ್ಟ್ ಕಾರ್ಯದರ್ಶಿ ಬಿ.ಎಸ್ ಅನಿಲ್‌ಕುಮಾರ್ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಕೆ. ಕಲ್ಲೇಶ್ ಕುಮಾರ್ ಶಾಲಾ ವಾರ್ಷಿಕ ವರದಿ ಮಂಡಿಸಿದರು. 
    ಕಳೆದ ವರ್ಷ ಉತ್ತಮ ಅಂಕ ಪಡೆದ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪಾರಿತೋಷಕ ನೀಡುವ ಮೂಲಕ ಅಭಿನಂದಿಸಲಾಯಿತು. ಶಾಲೆಯಲ್ಲಿ ವ್ಯಾಸಂಗ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.                   
     ಆರ್. ಸುನಿತಾ ಹಾಗೂ ಎ. ತನುಜಾ ವಿದ್ಯಾರ್ಥಿಗಳ ಬಹುಮಾನ ವಿತರಣೆ ಹಾಗೂ ಪೋಷಕರ  ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆ ಮೇಲೆ ಸಂಸ್ಥೆಯ ಟ್ರಸ್ಟಿಗಳಾದ ಜಿ. ಸುರೇಶ್ ಕುಮಾರ್  ಹಾಗೂ ಎಸ್.ಎನ್ ಭಾಗ್ಯಲಕ್ಷ್ಮಿ  ಉಪಸ್ಥಿತರಿದ್ದರು. ಟ್ರಸ್ಟ್ ಉಪಾಧ್ಯಕ್ಷ ಕೆ.ಪಿ ಹರೀಶ್ ಕುಮಾರ್ ವಂದಿಸಿದರು.  ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ನೃತ್ಯ  ಹಾಗೂ ನಾಟಕ ಪ್ರದರ್ಶನ ನಡೆಸಿಕೊಟ್ಟರು. 

ಮಹಿಳೆ ಮಕ್ಕಳಿಗೆ ಉತ್ತಮ ಸಂಸ್ಕಾರ ಹೇಳಿ ಕೊಡುವ ಚೈತನ್ಯ ಹೊಂದಿದ್ದಾಳೆ : ಡಾ. ಧನಂಜಯ ಸರ್ಜಿ

ಭದ್ರಾವತಿ ಹಳೇನಗರದ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದ ಶ್ರೀ ಮಾತಾ ಬನಶಂಕರಿ ಸಭಾಂಗಣದಲ್ಲಿ ನಡೆದ ತಾಲೂಕು ವೀರಶೈವ ಲಿಂಗಾಯಿತ ಮಹಿಳಾ ಸಮಾಜದ ೬ನೇ ವಾರ್ಷಿಕೋತ್ಸವ ಮತ್ತು ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ವಿಧಾನ ಪರಿಷತ್ ಸದಸ್ಯ, ವೈದ್ಯ ಡಾ. ಧನಂಜಯ ಸರ್ಜಿ ಉಧ್ಘಾಟಿಸಿದರು. 
    ಭದ್ರಾವತಿ : ಇಂದು ಮಹಿಳೆಯರು ಪುರುಷರಷ್ಟೇ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಸರಿಸಮಾನವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮನೆಯ ಹೊರಗೆ ಪರುಷರು ದುಡಿದರೆ ಮಹಿಳೆಯರು ಮನೆಯಲ್ಲಿ ಸಂಸಾರ ನಿಭಾಯಿಸುವುದಲ್ಲದೆ ಮಕ್ಕಳಿಗೆ ಉತ್ತಮ ಸಂಸ್ಕಾರ ಹೇಳಿ ಕೊಡುವ ಚೈತನ್ಯ ಹೊಂದಿದ್ದಾಳೆ ಎಂದು ವಿಧಾನ ಪರಿಷತ್ ಸದಸ್ಯ, ವೈದ್ಯ ಡಾ. ಧನಂಜಯ ಸರ್ಜಿ ಹೇಳಿದರು.
    ಅವರು ಹಳೇನಗರದ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದ ಶ್ರೀ ಮಾತಾ ಬನಶಂಕರಿ ಸಭಾಂಗಣದಲ್ಲಿ ನಡೆದ ತಾಲೂಕು ವೀರಶೈವ ಲಿಂಗಾಯಿತ ಮಹಿಳಾ ಸಮಾಜದ ೬ನೇ ವಾರ್ಷಿಕೋತ್ಸವ ಮತ್ತು ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ಉಧ್ಘಾಟಿಸಿ ಮಾತನಾಡಿದರು.
    ಮಹಿಳಾ ಸಮಾಜ ಸಮಾಜಮುಖಿಯಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುವ  ಮೂಲಕ ಮಹಿಳೆಯರ ಸರ್ವತೋಮುಖ ಅಭಿವೃಧ್ಧಿ ಹಾಗು ಅವರ ಪ್ರತಿಭೆಗಳ ಅನಾವರಣಕ್ಕೆ ಸರಿಯಾದ ವೇದಿಕೆ ಕಲ್ಪಿಸಬೇಕು ಎಂದರು. 
    ಮುಖಂಡ ಕೂಡ್ಲಿಗೆರೆ ಹಾಲೇಶ್ ಮಾತನಾಡಿ, ಸಮಾಜ ಕೇವಲ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ ಗ್ರಾಮಾಂತರ ಪ್ರದೇಶದ ಮಹಿಳೆಯರನ್ನು ಸಹ ಒಳಗೊಂಡು ಸಂಘಟನೆ ಮತ್ತಷ್ಟು  ಬಲಿಷ್ಟಗೊಳಿಸಬೇಕು ಎಂದರು.      
    ಆರ್.ಎಸ್ ಶೋಭಾ ಅಧ್ಯಕ್ಷತೆ ವಹಿಸಿದ್ದರು. ನಿಯೋಜಿತ ಅಧ್ಯಕ್ಷೆ ನಾಗರತ್ನ ವಾಗೀಶ್ ಕೋಠಿ, ಪ್ರಧಾನ ಕಾರ್ಯದರ್ಶಿ ಕುಸುಮಾ ತೀರ್ಥಯ್ಯ, ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್. ಮಹೇಶ್ ಕುಮಾರ್, ತಾಲೂಕು ವೀರಶೈವ ಲಿಂಗಾಯಿತ ಮಹಿಳಾ ಸಮಾಜದ ಗೌರವಾಧ್ಯಕ್ಷೆ ಗೌರಮ್ಮ ಶಂಕರಯ್ಯ, ಯಶೋಧ ವೀರಭದ್ರಪ್ಪ, ಮಧು ಪರಮೇಶ್, ಕೆ.ಎಚ್.ತೀರ್ಥಯ್ಯ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ವಾರ್ಷಿಕೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾಗಳನ್ನು ವಿತರಿಸಲಾಯಿತು. ಕವಿತಾ ಅಶೋಕ್, ಮಮತ ಪ್ರಕಾಶ್ ಪ್ರಾರ್ಥಿಸಿ. ಗೀತಾ ಡಾ.ಬೆಂಗಳೂರಿ ಸ್ವಾಗತಿಸಿದರು. ಉಷಾ ವೀರಶೇಖರ್ ವಂದಿಸಿದರು. ಯಶೋಧ ಡಾ.ವೀರಭದ್ರಪ್ಪ ಕಾರ್ಯಕ್ರಮ ನಿರೂಪಿಸಿದರು.  

ದೃಷ್ಟಿ ಜೈಸ್ವಾಲ್ ಐಎಎಸ್ ೨ ದಿನ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಣೆ : ಅಭಿನಂದನೆ

ಭದ್ರಾವತಿ ನಗರಸಭೆಯಲ್ಲಿ ೭ ದಿನಗಳ ಕಾಲ ಪೌರಾಯುಕ್ತರ ಹುದ್ದೆಗೆ ಪರೀಕ್ಷಾರ್ಥ ಕರ್ತವ್ಯಕ್ಕೆ ನಿಯೋಜಿನೆ ಮಾಡಲಾಗಿದ್ದ ಉತ್ತರ ಪ್ರದೇಶ ಮೂಲದ ದೃಷ್ಟಿ ಜೈಸ್ವಾಲ್ ಐಎಎಸ್ ಅವರನ್ನು ನಗರಸಭೆ ವತಿಯಿಂದ ಅಭಿನಂದಿಸಲಾಯಿತು. 
    ಭದ್ರಾವತಿ: ನಗರಸಭೆಯಲ್ಲಿ ೭ ದಿನಗಳ ಕಾಲ ಪೌರಾಯುಕ್ತರ ಹುದ್ದೆಗೆ ಪರೀಕ್ಷಾರ್ಥ ಕರ್ತವ್ಯಕ್ಕೆ ನಿಯೋಜಿನೆ ಮಾಡಲಾಗಿದ್ದ ಉತ್ತರ ಪ್ರದೇಶ ಮೂಲದ ದೃಷ್ಟಿ ಜೈಸ್ವಾಲ್ ಐಎಎಸ್ ಅವರನ್ನು ನಗರಸಭೆ ವತಿಯಿಂದ ಅಭಿನಂದಿಸಲಾಯಿತು. 
    ಮಂಗಳವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ದೃಷ್ಟಿ ಜೈಸ್ವಾಲ್ ಅವರನ್ನು ಪರಿಚಯಿಸುವ ಮೂಲಕ ೭ ದಿನಗಳ ಕರ್ತವ್ಯದ ಅವಧಿಯಲ್ಲಿ ರಜಾ ಅವಧಿ ಕಳೆದ ೨ ದಿನ ಮಾತ್ರ ದೃಷ್ಟಿ ಜೈಸ್ವಾಲ್ ಕರ್ತವ್ಯ ನಿರ್ವಹಿಸಿದ್ದು, ಈ ಸಂದರ್ಭದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ವೀಕ್ಷಿಸಿದ್ದಾರೆ. ನಗರಸಭೆ ವಿವಿಧ ವಿಭಾಗಗಳ ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆದು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎಂದರು. 
    ನಗರಸಭೆ ಸದಸ್ಯರಾದ ಟಿಪ್ಪುಸುಲ್ತಾನ್, ಚನ್ನಪ್ಪ, ಲತಾ ಚಂದ್ರಶೇಖರ್, ಬಿ.ಟಿ ನಾಗರಾಜ್, ಅನುಸುಧಾ ಮೋಹನ್ ಪಳನಿ ಸೇರಿದಂತೆ ಇನ್ನಿತರರು ಮಾತನಾಡಿದರು. ನಗರಸಭೆ ಅಧ್ಯಕ್ಷ ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್ ಮತ್ತು ನಗರ ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್ ಉಪಸ್ಥಿತರಿದ್ದರು. ನಗರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.  

ಜ.೧ರಂದು ಭೀಮಾ ಕೊರೆಗಾವ್ ವಿಜಯೋತ್ಸವ

 

    ಭದ್ರಾವತಿ: ಜನವರಿ ೧, ಜಗತ್ತಿಗೆ ಹೊಸ ವರ್ಷದ ಸಂಭ್ರಮಾಚಾರಣೆಯಾದರೆ ಶೋಷಿತರ ಪಾಲಿಗೆ ಇದು ಅಸ್ಪೃಶ್ಯತೆಯ ವಿರುದ್ಧ ಬಂಡೆದ್ದು ವಿಜಯ ಸಾಧಿಸಿದ ಮಹಾರ್ ಯೋಧರ ಶೌರ್ಯದ ದಿನ. ಬಾಬಾ ಸಾಹೇಬ ಡಾ. ಬಿ.ಆರ್. ಅಂಬೇಡ್ಕರ್‌ರವರ ಬದುಕಿನಲ್ಲಿ ಮುಖ್ಯ ಪ್ರೇರಣೆ ನೀಡಿದ ಈ ದಿನವು ನಮ್ಮೆಲ್ಲರ ಪಾಲಿಗೆ ವಿಜಯೋತ್ಸವದ ದಿನವಾಗಿದೆ. ಈ ಹಿನ್ನಲೆಯಲ್ಲಿ ನಗರದಲ್ಲಿ ಹೊಲಯ-ಮಾದಿಗರ ಸಮನ್ವಯ ಸಮಿತಿ ವತಿಯಿಂದ ಜ.೧ರ ಬುಧವಾರ ಸಂಜೆ ೫.೩೦ಕ್ಕೆ  ನ್ಯೂಟೌನ್, ಉಂಬ್ಳೆಬೈಲ್ ರಸ್ತೆ, ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ೨೦೭ನೇ ವರ್ಷದ ಭೀಮಾ ಕೊರೆಗಾವ್ ವಿಜಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಮುಖಂಡ ಸುರೇಶ್ ಹೇಳಿದರು. 
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ರಿ.ಶ. ೧೮೦೦ರ ಸಂದರ್ಭದಲ್ಲಿ ಮಹರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿದ್ದ ಪೇಶ್ವೆಗಳು ಮನು ಸಂವಿಧಾನವನ್ನು ಜಾರಿಗೆ ತರುವ ಮೂಲಕ ಅಸ್ಪೃಷ್ಯದ ಜೀವನವನ್ನು ಕಠೋರವಾಗಿಸಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಊರೊಳಗೆ ಸತ್ತ ದನಗಳನ್ನು ಹೊತ್ತುಕೊಂಡು ಹೋಗಿ ಮಾಂಸವನ್ನು ತಿನ್ನಬೇಕಾಗಿತ್ತು, ಅವರಿಗೆ ವಿದ್ಯೆ ಕಲಿಯುವ ಹಕ್ಕನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಚಿನ್ನ ಅಥವಾ ಬೆಳ್ಳಿಯ ಆಭರಣ ತೊಡುವಂತಿರಲಿಲ್ಲ. ಅಸ್ಪೃಶ್ಯ ಹೆಣ್ಣು ಮಕ್ಕಳ ಮೇಲೆ ನಿರಂತರ ಅತ್ಯಾಚಾರಗಳನ್ನು ನಡೆಸಲಾಗುತ್ತಿತ್ತು. ಸಾರ್ವಜನಿಕ ಕೆರೆಗಳನ್ನು ಬಳಸದಂತೆ ನಿರ್ಬಂಧ ಹೇರಲಾಗಿತ್ತು. ತಮ್ಮ ಮೇಲೆ ಈ ರೀತಿಯ ಅಮಾನುಷ ಕೃತ್ಯಗಳನ್ನು ನಡೆಸುತ್ತಿದ್ದ ಪೇಶ್ವೆಗಳ ದೌರ್ಜನ್ಯ ದಬ್ಬಾಳಿಕೆಯಿಂದ ರೋಸಿ ಹೋಗಿದ್ದ ಅಸ್ಪಷ್ಯರು ತಮ್ಮ ಜನಾಂಗದ ಮುಕ್ತಿಗಾಗಿ ಹಾತೊರೆಯುತ್ತಿದ್ದರು ಎಂದರು. 
    ಇದೇ ಸಂದರ್ಭದಲ್ಲಿ ಉತ್ತರಭಾರತದಲ್ಲಿ ಅಧಿಪತ್ಯ ಸ್ಥಾಪಿಸಿದ್ದ ಬ್ರಿಟಿಷರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮಹಾರ್ ವೀರ ಸಿದ್ಧನಾಕನ ನೇತೃತ್ವದಲ್ಲಿ ಮಾತುಕತೆ ನಡೆಸಿ ತಮ್ಮನ್ನು ಬೆಂಬಲಿಸಿದರೆ ಅಸ್ಪೃಷ್ಟರ ಎಲ್ಲಾ ದೌರ್ಜನ್ಯ ದಬ್ಬಾಳಿಕೆಗೆ ಅಂತ್ಯ ಹಾಡುತ್ತೇವೆ ಹಾಗೂ ಮಕ್ಕಳಿಗೆ ವಿದ್ಯಾಭ್ಯಾಸ ಕಲ್ಪಿಸುವ ಭರವಸೆ ನೀಡಿದರು. ಅಸ್ಪೃಷ್ಯ ಆಚರಣೆಯಿಂದ ನೊಂದು ಬೆಂದಿದ್ದ ವೀರ ಮಹಾರ್ ಜನಾಂಜದ ೫೦೦ ಜನ ಯುವ ಯೋಧರು ಯುದ್ಧ ತರಬೇತಿಯೊಂದಿಗೆ ೧೮೧೮ರ ಜನವರಿ ೧ ರಂದು ಬ್ರಿಟಿಷ್ ಕ್ಯಾಪ್ಟನ್ ಎಸ್.ಎಸ್. ಸಂಡನ್ ನೇತೃತ್ವದಲ್ಲಿ ಭೀಮಾ ನದಿಯ ತೀರದಲ್ಲಿ ಕೊರೆಗಾವ್ ಎಂಬ ಸ್ಥಳದಲ್ಲಿ ಸುಮಾರು ೨೮೦೦೦ ಸೈನಿಕರಿದ್ದ ಬ್ರಾಹ್ಮಣ ಪೇಶ್ವೆಗಳ ಮೇಲೆ ಯುದ್ಧ ಸಾರಿ ಸುಮಾರು ೫೦೦೦ಕ್ಕೂ ಹೆಚ್ಚಿನ ಪೇಶ್ವೆ ಸೈನಿಕರನ್ನು ಕೊಂದು ರಾಜ್ಯವನ್ನು ವಶಪಡಿಸಿಕೊಳ್ಳುವ ಮೂಲಕ ತಮ್ಮ ಮೇಲಿನ ಅಸ್ಪೃಷ್ಯತಾ ಆಚರಣೆಗೆ ಅಂತ್ಯ ಹಾಡಿದರು. ಈ ಸಂದರ್ಭದಲ್ಲಿ ಸುಮಾರು ೨೨ ಜನ ವೀರ ಮಹಾರ್ ಯೋಧರು ಬಲಿದಾನವಾಗುವ ಮೂಲಕ ನಮ್ಮ ಸಮುದಾಯವೇ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದಾರೆ ಎಂದರು. 
    ವೀರ ಯೋಧರ ಗೌರವಾರ್ಥ ಯುದ್ಧ ನಡೆದ ಜಾಗದಲ್ಲಿ ೬೫ ಅಡಿಯ ಎತ್ತರದ ಭವ್ಯ `ವಿಜಯ ಸ್ಥಂಭ' ನಿರ್ಮಿಸಿ ಆ ಸ್ಥಂಭದ ಮೇಲೆ ಅಮರ ವೀರರ ಹೆಸರನ್ನು ಕೆತ್ತಿಸಿದ್ದಾರೆ. ಅಸ್ಪೃಷ್ಯರ ಸ್ವಾಭಿಮಾನದ ಸಂಕೇತವಾದ ಈ ಘಟನೆಯು ನಮ್ಮೆಲ್ಲರಿಗೂ ಆತ್ಮ ಗೌರವನ್ನು ಎತ್ತಿ ಹಿಡಿಯುವ ದಿನವಾಗಿದೆ. ಇಂತಹ ಸ್ವಾಭಿಮಾನದ, ಆತ್ಮಗೌರವದ ದಿನವನ್ನು ಶೋಷಿತ ಸಮುದಾಯದವರು ನೆನಪಿಸಿಕೊಂಡು ಅಮರ ವೀರರ ಕೆಚ್ಚೆದೆಯ ಸ್ವಾಭಿಮಾನವನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಅವರ ತ್ಯಾಗ ಬಲಿದಾನದಿಂದ ಮನು ಸಂವಿದಾನಕ್ಕೆ ಪೆಟ್ಟು ಬಿದ್ದು ಅಸ್ಪೃಷ್ಯರಿಗೆ ವಿದ್ಯಾಭ್ಯಾಸ ನೀಡಲು, ಸೈನ್ಯಕ್ಕೆ ಸೇರಲು, ಸಾಮಾಜಿಕವಾಗಿ ಅಲ್ಪ ಪ್ರಮಾಣದಲ್ಲಿ ನಾಗರೀಕ ಬದುಕು ಕಾಣಲು ಸಾಧ್ಯವಾಗಿದೆ ಎಂದರು. 
    ಅಂದು ಅಸ್ಪೃಷ್ಯರು ಬ್ರಿಟಿಷರ ಪರವಾಗಿ ಯುದ್ಧ ಮಾಡಿದ್ದು ಅಭಿಮಾನ ಪಡುವ ಸಂಗತಿಯಲ್ಲದಿದ್ದರೂ ಅಸ್ಪಷ್ಟತೆಯಿಂದ ನೊಂದ ಜನಾಂಗಕ್ಕೆ ತಮ್ಮ ಮಕ್ಕಳ ಮುಂದಿನ ಭವಿಷ್ಯ, ಹೊಟ್ಟೆಗೆ ಅನ್ನ ದೊರಕಿಸಿಕೊಳ್ಳುವ ಸ್ವಾಭಿಮಾನದಿಂದ ಬದುಕುವ ಉದ್ದೇಶಕ್ಕೆ ತಮ್ಮ ಅಮೂಲ್ಯ ಜೀವವನ್ನು ಅರ್ಪಣೆ ಮಾಡಿದ ನಮ್ಮ ಹುತಾತ್ಮ ವೀರ ಯೋಧರಿಗೆ ನಾವೆಲ್ಲ ಗೌರವಿಸಬೇಕಾಗಿದೆ. ನಮ್ಮ ವೀರ ಯೋಧರ ಸ್ವಾಭಿಮಾನದ ಯುದ್ಧವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಬೇಕಾಗಿದೆ. ಶೋಷಿತರ ಸ್ವಾಭಿಮಾನಕ್ಕೆ ಪೆಟ್ಟು ಕೊಡುವ ಎಲ್ಲಾ ಶಕ್ತಿಗಳ ವಿರುದ್ದ ತಲೆ ಎತ್ತಿ ನಿಂತು ನಮ್ಮಲ್ಲಿರುವ ಸ್ವಾಭಿಮಾನದ ಜಾಗೃತಿಯನ್ನು ಪ್ರದರ್ಶಿಸಬೇಕಾಗಿದೆ. ನಮ್ಮ ಪೂರ್ವಜರ ಗತ ಇತಿಹಾಸವು ನಮ್ಮನ್ನು ವೀರ ಯೋಧರನ್ನಾಗಿಸಬೇಕಾಗಿದೆ. ಮನುವಾದಿಗಳ ಗುಲಾಮತನದಿಂದ ಹೊರ ಬಂದು ಬಾಬಾ ಸಾಹೇಬರ ವಿಚಾರ ಧಾರೆಗಳಿಂದ ಶೋಷಿತರ ವಿಮೋಚನೆಗಾಗಿರುವ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕಾಗಿದೆ ಎಂದರು. 
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶಿವಬಸಪ್ಪ, ಸತ್ಯ ಭದ್ರಾವತಿ, ಚಿನ್ನಯ್ಯ, ಶಿವಕುಮಾರ್, ಧರ್ಮರಾಜ್, ಮಹೇಶ್ ಛಲವಾದಿ, ಕುಬೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.