Friday, January 3, 2025

೭೦ ವರ್ಷ ಮೇಲ್ಪಟ್ಟವರಿಗೆ ಉಚಿತ ಆರೋಗ್ಯ ಸೌಲಭ್ಯ ನೋಂದಣಿ


    ಭದ್ರಾವತಿ: ಭಾರತೀಯ ಜನತಾ ಪಕ್ಷದ ತಾಲೂಕು ಮಂಡಲದ ಮಾಜಿ ಅಧ್ಯಕ್ಷರಾದ ಜಿ. ಆನಂದಕುಮಾರ್(ನಗರ ಘಟಕ) ಮತ್ತು ಮಂಗೋಟೆ ರುದ್ರೇಶ್(ಗ್ರಾಮಾಂತರ ಘಟಕ) ನೇತೃತ್ವದಲ್ಲಿ ಜ.೫ರ ಭಾನುವಾರ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಆರೋಗ್ಯ ಸೌಲಭ್ಯ ನೋಂದಣಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 
    ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆ ಇದಾಗಿದ್ದು, ಈ ಯೋಜನೆಯಡಿ ೭೦ ವರ್ಷ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರಿಗೆ ೫ ಲಕ್ಷ ರು.ಗಳವರೆಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೌಲಭ್ಯ ಒದಗಿಸಲಾಗುವುದು. 
    ಈ ಯೋಜನೆಯನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸುವ ಉದ್ದೇಶದಿಂದ ಸಂಸದ ಬಿ.ವೈ ರಾಘವೇಂದ್ರರವರು ಜಿಲ್ಲೆಯಾದ್ಯಂತ ಅಭಿಯಾನ ಕೈಗೊಂಡಿದ್ದು, ಇದಕ್ಕೆ ಪೂರಕವಾಗುವಂತೆ ನಗರದಲ್ಲಿ ಜಿ. ಆನಂದಕುಮಾರ್ ಮತ್ತು ಮಂಗೋಟೆ ರುದ್ರೇಶ್‌ರವರ ನೇತೃತ್ವದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಹೊಸಮನೆ ಮುಖ್ಯ ರಸ್ತೆ(ಸಂತೆ ಮೈದಾನದ ಎದುರು) ಜಿ. ಆನಂದಕುಮಾರ್‌ರವರ ಬಿಜೆಪಿ ಕಛೇರಿಯಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆವರೆಗೆ ಅಭಿಯಾನ ನಡೆಯಲಿದೆ. 
    ಬಿಪಿಎಲ್ ಅಥವಾ ಎಪಿಎಲ್ ಪಡಿತರ ಚೀಟಿ ಹೊಂದಿರುವವರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗೆ ಮೊ: ಸಂಖ್ಯೆ ೯೮೪೫೭೯೧೯೯೪ ಅಥವಾ ೯೦೧೯೫೬೪೧೮೮ ಕರೆ ಮಾಡಬಹುದಾಗಿದೆ. 

ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಸಮಾರಂಭ : ಶಿಕ್ಷಕರಿಗೆ ಪರಿಪೂರ್ಣತೆ ಅಗತ್ಯ

ಭದ್ರಾವತಿ ನಗರದ ಅಂಬೇಡ್ಕರ್ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಗರಸಭೆ ವಾರ್ಡ್ ನಂ.೯ರ ಭದ್ರಾ ಕಾಲೋನಿ ಭದ್ರಾ ಪ್ರೌಢಶಾಲೆಯಲ್ಲಿ ನಡೆಯಿತು.
    ಭದ್ರಾವತಿ : ನಗರದ ಅಂಬೇಡ್ಕರ್ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಗರಸಭೆ ವಾರ್ಡ್ ನಂ.೯ರ ಭದ್ರಾ ಕಾಲೋನಿ ಭದ್ರಾ ಪ್ರೌಢಶಾಲೆಯಲ್ಲಿ ನಡೆಯಿತು.
     ಶಾಲೆಯ ಮುಖ್ಯ ಶಿಕ್ಷಕ ಸಿ.ಎಸ್ ನಾಗರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹ ಶಿಕ್ಷಕ ಶಿವ್ಯಾನಾಯ್ಕ ಮಾತನಾಡಿ, ಜೀವನದಲ್ಲಿ ಶಿಕ್ಷಕರು ಶಿಸ್ತನ್ನು ಕಾಪಾಡಿಕೊಳ್ಳಬೇಕು ಸಮಯ ಪಾಲನೆ ಮಾಡಿಕೊಳ್ಳಬೇಕು. ಮಕ್ಕಳಿಗೆ ಒಂದು ಗಂಟೆ ಬೋಧಿಸಲು ನಾವು ಮೂರು ಗಂಟೆಗಳ ಕಲಿಕೆ ಮಾಡಬೇಕಾದ ಅಗತ್ಯತೆ ಇದೆ. ಎಲ್ಲಾ ವಿಷಯಗಳಲ್ಲೂ ಪರಿಪೂರ್ಣತೆ ಹೊಂದಬೇಕು. ಆಗ ಮಾತ್ರ ಉತ್ತಮ ಶಿಕ್ಷಕರಾಗಿ ಹೊರಹೊಮ್ಮಲು ಸಾಧ್ಯ ಎಂದರು. 
    ಶಿಕ್ಷಕ ಶ್ರೀನಿವಾಸ್ ಜಾಜೂರ್ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತಾ  ಹೊಸ ವರುಷದಲ್ಲಿ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಜೀವನದ ಗುರಿ ಮುಟ್ಟುವ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾಗಿದೆ ಎಂದರು. 
    ಶಿವಕುಮಾರ್ ಹೊನ್ನತ್ತಿ, ಶಶಿಕುಮಾರ್, ಬಾಲು ಹಾಗು ವಿದ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. 

ಪ್ರತಿ ಶುಕ್ರವಾರ ಸಹಸ್ರಾರು ಭಕ್ತರಿಂದ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ಅಮ್ಮನವರ ದರ್ಶನ

 ಭದ್ರಾವತಿ ಬಿ.ಎಚ್ ರಸ್ತೆ, ಲೋಯರ್ ಹುತ್ತಾದಲ್ಲಿರುವ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ.   
 * ಅನಂತಕುಮಾರ್ 
    ಭದ್ರಾವತಿ: ಪ್ರತಿಯೊಂದು ದೇವಾಲಯಕ್ಕೂ ಒಂದೊಂದು ರೀತಿಯ ವಿಶೇಷತೆ ಇರುತ್ತದೆ. ನಗರದ ಬಿ.ಎಚ್ ರಸ್ತೆ, ಲೋಯರ್ ಹುತ್ತಾದಲ್ಲಿರುವ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ ಸಹ ಒಂದು ವಿಶೇಷತೆಯನ್ನು ಹೊಂದಿದೆ. ಪ್ರತಿ ದಿನ ನೂರಾರು ಭಕ್ತರು ಆಗಮಿಸುತ್ತಿದ್ದು, ಅಲ್ಲದೆ ಪ್ರತಿ ಶುಕ್ರವಾರ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯ ನೆರವೇರಿಸಿಕೊಂಡು ಬರಲಾಗುತ್ತಿದೆ. 
    ಶಕ್ತಿ ದೇವತೆ ಆರಾಧನೆ ಪ್ರಾಚೀನ ಕಾಲದಿಂದಲೂ ನಡೆದು ಕೊಂಡು ಬರುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಉದ್ಯೋಗ ನಿಮಿತ್ತ ನಗರಕ್ಕೆ ೧೯೮೭ರಲ್ಲಿ ಆಗಮಿಸಿದ ಶಿವರಾಮ ಮತ್ತು ಹೇಮಾ ದಂಪತಿ ಲೋಯರ್ ಹುತ್ತಾದಲ್ಲಿ ನೆಲೆಸಿ ಶ್ರದ್ಧಾ ಭಕ್ತಿಯಿಂದ ಶ್ರೀ ದೇವಿಯನ್ನು ಆರಾಧಿಸಿಕೊಂಡು ಬರುವ ಜೊತೆಗೆ ಸ್ಥಳೀಯ ಭಕ್ತರು ಹಾಗು ದಾನಿಗಳ ನೆರವಿನೊಂದಿಗೆ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿಕೊಂಡು ಬಂದ ಪರಿಣಾಮ ಒಂದು ಬೃಹತ್ ದೇವಸ್ಥಾನ ರೂಪುಕೊಳ್ಳಲು ಕಾರಣವಾಗಿದೆ ಎಂಬುದು ವಿಶೇಷ. 
    ಆರಂಭದಲ್ಲಿ ಶಿವರಾಮ ಮತ್ತು ಹೇಮಾರವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನವರಾತ್ರಿ ಉತ್ಸವ ಮತ್ತು ಪ್ರತಿ ಹುಣ್ಣಿಮೆಯಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಮಾಡುವ ಮೂಲಕ ಸುತ್ತಮುತ್ತಲ ಜನರಲ್ಲಿ ಭಕ್ತಿ ಭಾವನೆ ಬೆಳೆಸುವಲ್ಲಿ ಯಶಸ್ವಿಯಾದರು. ಮೊದಲ ಬಾರಿಗೆ ೧೯೮೮ರಲ್ಲಿ ನವರಾತ್ರಿಯ ಸಪ್ತಮಿಯಂದು ಶ್ರೀ ಚಂಡಿಕಾಯಾಗ ಆರಂಭಿಸಲಾಯಿತು. ಕಳೆದ ೩೫ವರ್ಷಗಳಿಂದ ನಿರಂತರವಾಗಿ ಶ್ರೀ ಚಂಡಿಕಾಯಾಗ ನಡೆಸಿಕೊಂಡು ಬರುತ್ತಿರುವುದು ಈ ದೇವಸ್ಥಾನದ ಮತ್ತೊಂದು ಹೆಗ್ಗಳಿಕೆಯಾಗಿದೆ. 


ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ಅಮ್ಮನವರು
    ಭಕ್ತರ ಇಷ್ಟಾರ್ಥಗಳು ನೆರವೇರಿಸುವ ಶಕ್ತಿದೇವತೆಯ ಮಹಿಮೆಯಿಂದ ಈ ದೇವಸ್ಥಾನ ಸಹ ರೂಪುಗೊಂಡು ಜು.೩೧, ೧೯೯೪ರಲ್ಲಿ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿದೇವಿ ಮೂರ್ತಿ ಪ್ರತಿಷ್ಠಾಪನೆ ಸಹ ನೆರವೇರಿತು. ನಂತರ ದಿನಗಳಲ್ಲಿ ಶ್ರೀ ಗಣಪತಿ ಮತ್ತು ಶ್ರೀ ಸುಬ್ರಮಣ್ಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಪ್ರಸ್ತುತ ಈ ದೇವಸ್ಥಾನ ಬೃಹದಾಕಾರವಾಗಿ ಬೆಳೆದು ನಿಂತಿದೆ. 
    ಇದುವರೆಗೂ ಈ ದೇವಸ್ಥಾನದಲ್ಲಿ ೪ಕ್ಕೂ ಹೆಚ್ಚು ಬಾರಿ ಶತ ಚಂಡಿಕಾ ಯಾಗವನ್ನು ನಡೆಸಲಾಗಿದೆ. ವರ್ಷದಿಂದ ವರ್ಷಕ್ಕೆ ಉತ್ಸವ ಸೇರಿದಂತೆ ಧಾರ್ಮಿಕ ಆಚರಣೆಗಳು ವಿಜೃಂಭಣೆಯಿಂದ ನಡೆಸಲಾಗುತ್ತಿದೆ. ಪ್ರತಿ ಶುಕ್ರವಾರ ಅನ್ನ ದಾಸೋಹ ನಡೆಸಲಾಗುತ್ತಿದೆ. ಅಲ್ಲದೆ ಪ್ರತಿವರ್ಷ ಕುಂಭಾಭಿಷೇಕ, ಧನುರ್ಮಾಸದಲ್ಲಿ ಲಕ್ಷ ಪುಷ್ಪಾರ್ಚನೆ, ಕಾರ್ತಿಕ ಮಾಸದಲ್ಲಿ ದೀಪೋತ್ಸವ, ಸುಬ್ರಹ್ಮಣ್ಯ ಷಷ್ಠಿ, ಸಂಕಷ್ಟವ್ರತ ಮತ್ತು ಹುಣ್ಣಿಮೆಯಂದು ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿವೆ. 
    ಈ ದೇವಸ್ಥಾನ ಇನ್ನಿಷ್ಟು ಅಭಿವೃದ್ಧಿ ಹೊಂದಲಿ, ನಾಡಿನ ಪ್ರಸಿದ್ದ ಪುಣ್ಯ ಕ್ಷೇತ್ರಗಳ ಸಾಲಿನಲ್ಲಿ ಒಂದಾಗಲಿ ಎಂಬುದು ಈ ದೇವಸ್ಥಾನ ಭಕ್ತರ ಆಶಯವಾಗಿದೆ. 
    ಮೂಲ ಸೌಕರ್ಯ ಹೆಚ್ಚಿನ ಗಮನ ನೀಡಲಿ: 
    ಈ ದೇವಸ್ಥಾನ ನಗರಸಭೆ ವಾರ್ಡ್ ನಂ.೨ರ ವ್ಯಾಪ್ತಿಯಲ್ಲಿ ಬರುತ್ತಿದ್ದು, ನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವ ಪ್ರಮುಖ ಬಿ.ಎಚ್ ರಸ್ತೆಗೆ ಸಮೀಪದಲ್ಲಿದೆ. ದೇವಸ್ಥಾನ ಸುತ್ತಮುತ್ತ ಜನವಸತಿಗಳಿದ್ದು, ಕಿರಿದಾದ ರಸ್ತೆಯಲ್ಲಿರುವ ಈ ದೇವಸ್ಥಾನಕ್ಕೆ ಹೆಚ್ಚಿನ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವ ನಿಟ್ಟಿನಲ್ಲಿ ನಗರಸಭೆ ಆಡಳಿತ ಗಮನ ಹರಿಸಬೇಕಾಗಿದೆ. ವಾಹನಗಳ ನಿಲುಗಡೆಗೆ ಸೂಕ್ತ ಕ್ರಮ ಕೈಗೊಳ್ಳುವ ಜೊತೆಗೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂಬುದು ಭಕ್ತರ ಬೇಡಿಕೆಯಾಗಿದೆ. 

ಕೊರೆಗಾವ್ ಯುದ್ಧ ಇಂದಿನ ಸಮಾಜಕ್ಕೂ ಸ್ಪೂರ್ತಿದಾಯಕ : ಚಿನ್ನಯ್ಯ

ಭದ್ರಾವತಿ ನ್ಯೂಟೌನ್, ಉಂಬ್ಳೆಬೈಲ್ ರಸ್ತೆ, ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹೊಲಯ-ಮಾದಿಗರ ಸಮನ್ವಯ ಸಮಿತಿ ವತಿಯಿಂದ ೨೦೭ನೇ ವರ್ಷದ ಭೀಮಾ ಕೊರೆಗಾವ್ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ : ಸಂವಿಧಾನ ಶಿಲ್ಪಿ, ಡಾ. ಬಿ.ಆರ್. ಅಂಬೇಡ್ಕರ್‌ರವರ ಬದುಕಿನಲ್ಲಿ ಮುಖ್ಯ ಪ್ರೇರಣೆ ನೀಡಿದ ಕೊರೆಗಾವ್ ಯುದ್ಧ ದೇಶದ ಇತಿಹಾಸದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಂದಿನ ಸಮಾಜಕ್ಕೂ ಈ ಯುದ್ಧ ಸ್ಪೂರ್ತಿದಾಯಕವಾಗಿದ್ದು, ನಾವೆಲ್ಲರೂ ಜಾಗೃತರಾಗಬೇಕಾಗಿದೆ ಎಂದು ದಲಿತ ಮುಖಂಡ ಚಿನ್ನಯ್ಯ ಹೇಳಿದರು. 
    ಅವರು ನಗರದ ನ್ಯೂಟೌನ್, ಉಂಬ್ಳೆಬೈಲ್ ರಸ್ತೆ, ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹೊಲಯ-ಮಾದಿಗರ ಸಮನ್ವಯ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೨೦೭ನೇ ವರ್ಷದ ಭೀಮಾ ಕೊರೆಗಾವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ಅಸ್ಪೃಶ್ಯತೆಯ ವಿರುದ್ಧ ಬಂಡೆದ್ದು ವಿಜಯ ಸಾಧಿಸಿದ ಮಹಾರ್ ಯೋಧರ ಶೌರ್ಯದ ದಿನವನ್ನು ನಾವೆಲ್ಲರೂ ನೆನಪು ಮಾಡಿಕೊಳ್ಳುವ ಜೊತೆಗೆ ಅಸ್ಪೃಶ್ಯತೆಯ ಅಂದಿನ ಸಮಾಜವನ್ನು ಯಾರಿಂದಲೂ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಈ ಯುದ್ಧದ ಪ್ರೇರಣೆಯಿಂದ ಶೋಷಿತ ಸಮಾಜದ ಪರವಾಗಿ ಧ್ವನಿಯಾಗಿ ನಿಲ್ಲುವ ಮೂಲಕ ನಮ್ಮೆಲ್ಲರಿಗೂ ಬೆಳಕಾಗಿದ್ದು, ಇವರ ಆದರ್ಶತನ, ಚಿಂತನೆಗಳನ್ನು ಅಳವಡಿಸಿಕೊಂಡು ಮುನ್ನಡೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. 
    ದಲಿತ ಮುಖಂಡ, ನಿವೃತ್ತ ಪ್ರಾಂಶುಪಾಲ ಶಿವಬಸಪ್ಪ ಮಾತನಾಡಿ, ಈ ಯುದ್ಧ ಭಾರತದ ಇತಿಹಾಸದ ಪುಟದಲ್ಲಿ ಎಂದಿಗೂ ಅಚ್ಚಳಿಯದೆ ಉಳಿಯಬೇಕಾಗಿತ್ತು. ದುರಂತವೆಂದರೆ ಆಗಿನ ಕಾಲದ ಬ್ರಾಹ್ಮಣಶಾಹಿ ವ್ಯವಸ್ಥೆ ಈ ಘನಘೋರ ಹೋರಾಟವನ್ನು ಇತಿಹಾಸದ ಪುಟದಲ್ಲಿ ದಾಖಲಿಸದೆ ದಲಿತರಿಗೆ ಮೋಸ ಮಾಡಿದೆ ಎಂದರು. 
    ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಇಂಗ್ಲೆಂಡಿನಲ್ಲಿ ವ್ಯಾಸಾಂಗ ಮಾಡುವಾಗ ಆಂಗ್ಲ ಇತಿಹಾಸಕಾರರು ದಾಖಲಿಸಿದ ಮಾಹಿತಿಯನ್ನು ಆಧರಿಸಿ ಮಹಾರಾಷ್ಟ್ರದ ಭೀಮಾ ತೀರದ ಕೊರೆಗಾಮ್ ಸ್ಥಳದಲ್ಲಿ  ಹುತಾತ್ಮ ಮಹರ್ ಸೈನಿಕರ ಸ್ಮರಣಾರ್ಥ ಬ್ರಿಟಿಷರು ನಿರ್ಮಿಸಿದ್ದ ಸ್ಮಾರಕವನ್ನು ಗುರುತಿಸಿ, ಇಡೀ ಜಗತ್ತಿಗೆ ಈ ಯುದ್ಧದ ಮಹತ್ವ ಸಾರಿದರು. ಹಾಗಾಗಿ ದಲಿತರು ಗುಲಾಮರಲ್ಲ, ಸ್ವಾಭಿಮಾನಿ ವೀರರು ಎಂಬ ಸತ್ಯವನ್ನು ನಾವು ಅರಿತುಕೊಳ್ಳಬೇಕಿದೆ ಎಂದರು. 
    ಹೊಲಯ-ಮಾದಿಗರ ಸಮನ್ವಯ ಸಮಿತಿ ಮುಖಂಡ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ನಗರಸಭೆ ಸದಸ್ಯ ಚನ್ನಪ್ಪ, ದಲಿತ ಮುಖಂಡರಾದ ಭಾನುಪ್ರಸಾದ್, ನಿತ್ಯಾನಂದ, ಧರ್ಮರಾಜ್,  ಜಗದೀಶ್, ಕೃಷ್ಣ ಛಲವಾದಿ, ಪುಟ್ಟರಾಜ್, ಕುಬೇಂದ್ರಪ್ಪ, ಎಸ್ ಉಮಾ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಮಹೇಶ್ ಛಲವಾದಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದಲಿತ ಮುಖಂಡ ಸತ್ಯ ಭದ್ರಾವತಿ ಬುದ್ಧ ಪ್ರಾರ್ಥನೆ ನೆರವೇರಿಸಿದರು. ಇದಕ್ಕೂ ಮೊದಲು ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. 

ಜ.೫ರಂದು ದತ್ತಿ, ಪುಸ್ತಕ ಬಿಡುಗಡೆ ಕಾರ್ಯಕ್ರಮ

    ಭದ್ರಾವತಿ : ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜ.೫ರಂದು ನ್ಯೂಟೌನ್ ರೋಟರಿಕ್ಲಬ್ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ದತ್ತಿ ಹಾಗು ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 
    ಕೆ.ಬಿ ತಮ್ಮಯ್ಯಗೌಡ ಮತ್ತು ಅಕ್ಕಾಣಿಯಮ್ಮ ದತ್ತಿ ಕಾರ್ಯಕ್ರಮದಲ್ಲಿ `ಕುವೆಂಪು ಸಾಹಿತ್ಯದಲ್ಲಿ ವೈಜಾರಿಕತೆ' ವಿಷಯ ಮಂಡನೆ ನಡೆಯಲಿದೆ. ಅಲ್ಲದೆ ಕೋಡ್ಲು ಯಜ್ಞಯ್ಯರವರು ರಚಿಸಿರುವ `ಸತ್ಯಕ್ಕೆ ಸಾವಿಲ್ಲ' ಕಥಾ ಸಂಕಲನ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ.  
    ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ, ದತ್ತಿ ದಾನಿಗಳಾದ ಕೋಡ್ಲು ಯಜ್ಞಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. 
    ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜಿನ ಸಾಹಿತಿ, ಪ್ರಾಧ್ಯಾಪಕರಾದ ಡಾ. ಮೇಟಿ ಮಲ್ಲಿಕಾರ್ಜುನ ಉಪನ್ಯಾಸ ನೀಡಲಿದ್ದು, ಎಸ್‌ಎವಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಹರಿಣಾಕ್ಷಿ, ಪತ್ರ ಸಂಸ್ಕೃತಿ ಸಂಸ್ಥಾಪಕ ಹೊಸಹಳ್ಳಿ ದಾಳೇಗೌಡ, ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಉಪಾಧ್ಯಾಯ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಮತ್ತು ಕರ್ನಾಟಕ ಜಾನಪದ ಪರಿಷತ್ ಎಂ.ಆರ್ ರೇವಣಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.

Thursday, January 2, 2025

ಎಚ್. ರವಿಕುಮಾರ್‌ಗೆ ಸೇವಾರತ್ನ ಪ್ರಶಸ್ತಿ

ಭದ್ರಾವತಿ ನಗರದ ಯುವ ಮುಖಂಡ, ಕಾರ್ಮಿಕ ಹೋರಾಟಗಾರ ಎಚ್. ರವಿಕುಮಾರ್‌ರವರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ
    ಭದ್ರಾವತಿ : ನಗರದ ಯುವ ಮುಖಂಡ, ಕಾರ್ಮಿಕ ಹೋರಾಟಗಾರ ಎಚ್. ರವಿಕುಮಾರ್‌ರವರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
    ಈ ಹಿಂದೆ ನಗರದ ಮೈಸೂರು ಕಾಗದ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿದ್ದು, ಹಲವಾರು ಕಾರ್ಮಿಕ ಹೋರಾಟಗಳ ನೇತೃತ್ವ ವಹಿಸಿದ್ದರು. ನಂತರ ರಾಜಕೀಯವಾಗಿ ಗುರುತಿಸಿಕೊಂಡು ಹಲವಾರು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಪ್ರಸ್ತುತ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದು, ಇವರ ಸೇವೆಯನ್ನು ಗುರುತಿಸಿ ಹಳೇನಗರದ ಸಂಚಿಯ ಹೊನ್ನಮ್ಮ ಬಾಲಕಿಯರ ಪದವಿಪೂರ್ವ ಕಾಲೇಜಿನ ವತಿಯಿಂದ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
    ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಸಿದ್ದಲಿಂಗಮೂರ್ತಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
 

ಪೇಜಾವರ ಶ್ರೀಗಳ ೫ನೇ ಆರಾಧನೆ ಮಹೋತ್ಸವ

ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವಾರ ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಐದನೇ ಆರಾಧನೆ ಮಹೋತ್ಸವ ಜರುಗಿತು. 
    ಭದ್ರಾವತಿ : ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವಾರ ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಐದನೇ ಆರಾಧನೆ ಮಹೋತ್ಸವ ಜರುಗಿತು. 
    ಶ್ರೀ ಮಠದಲ್ಲಿ ಬೆಳಗ್ಗೆ ಪಂಚಾಮೃತ ಅಭಿಷೇಕ ಹಾಗೂ ಪವಮಾನ ಹೋಮ ನಡೆಯಿತು. ನಂತರ ಪೇಜಾವರ ಶ್ರೀಗಳ ಭಾವಚಿತ್ರದೊಂದಿಗೆ ಮೂರು ಪ್ರದಕ್ಷಿಣೆ ಜರುಗಿತು. ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನೆರವೇರಿತು. 
    ವೇ||ಬ್ರ|| ಶ್ರೀ ಗೋಪಾಲಚಾರ್, ಶ್ರೀ ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳಿಧರ ತಂತ್ರಿ, ಉಪಾಧ್ಯಕ್ಷರಾದ ಸುಮಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ್, ಖಜಾಂಚಿ ನಿರಂಜನಚಾರ್, ಸತ್ಯನಾರಾಯಣಚಾರ್, ಮಾಧುರಾವ್, ಶುಭ ಗುರುರಾಜ್, ಮಾಧ್ವ ಮಂಡಳಿ ಅಧ್ಯಕ್ಷ ಜಯತೀರ್ಥ, ಕೆ.ಎಸ್ ಸುಧೀಂದ್ರ, ವಿದ್ಯಾನಂದನಾಯಕ,  ಪ್ರಶಾಂತ್,  ಪ್ರಮೋದ್ ಕುಮಾರ್ ಹಾಗೂ ಪವನ್ ಕುಮಾರ್ ಉಡುಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.