![](https://blogger.googleusercontent.com/img/a/AVvXsEjGA2gepcUSaZmw1kLfMA_kItUUiMLZjXfskDZEV3O22NpciSssKJS7qMwjU8V_BiGrKgHXPR0VYNBAwqe8bmS9oxOPqDV5B76esms8uePZ1cRCIdxCGyGuuopifOAFuVza-ylYDA1HU7V6dVD-yj2dCpxeaQMLCRYN1AAHZJC5xIRNGzljUwh99i-ndplR=w400-h276-rw)
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಭದ್ರಾವತಿ ತಾಲೂಕು ಘಟಕ, ಎಸ್‌ಎವಿ ಶಾಲೆಗಳು ಮತ್ತು ಕಾಲೇಜು, ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಗುರುವಾರ ನ್ಯೂಟೌನ್ ಆದಿಚುಂಚನಗಿರಿ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ೧೧ನೇ ಮಕ್ಕಳ ಸಾಹಿತ್ಯ ಸಮ್ಮೇಳನ ನ್ಯೂಟೌನ್ ಅದಿಚುಂಚನಗಿರಿ ವಿದ್ಯಾಸಂಸ್ಥೆ ಪ್ರೌಢಶಾಲೆ ವಿದ್ಯಾರ್ಥಿ ಮನಿಷ್ ಪಿ ಯಾದವ್ ಉದ್ಘಾಟಿಸಿದರು.
ಭದ್ರಾವತಿ : ನಮ್ಮ ನಾಡು, ನುಡಿ ಉಳಿವಿಗೆ ನಾವುಗಳು ಬದ್ಧರಾಗಬೇಕು. ನಮ್ಮ ನಿರ್ಲಕ್ಷ್ಯದಿಂದ ನಮ್ಮ ಕನ್ನಡ ತಾಯಿ ಎಂದಿಗೂ ಸಾಯುವಂತಾಗಬಾರದು ಎಂದು ನಗರದ ನ್ಯೂಟೌನ್ ಅದಿಚುಂಚನಗಿರಿ ವಿದ್ಯಾಸಂಸ್ಥೆ ಪ್ರೌಢಶಾಲೆ ವಿದ್ಯಾರ್ಥಿ ಮನಿಷ್ ಪಿ ಯಾದವ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕ, ಎಸ್‌ಎವಿ ಶಾಲೆಗಳು ಮತ್ತು ಕಾಲೇಜು, ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಗುರುವಾರ ನ್ಯೂಟೌನ್ ಆದಿಚುಂಚನಗಿರಿ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ೧೧ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ನಾಡು, ನುಡಿಯನ್ನು ಕನ್ನಡ ತಾಯಿಯ ಮಕ್ಕಳಾದ ನಾವುಗಳು ಉಳಿಸಿ ಬೆಳೆಸಬೇಕು. ಈ ನಮ್ಮ ಕನ್ನಡ ನಾಡು ಶೈವ, ವೈಷ್ಣವ, ಜೈನ, ಬೌದ್ಧ, ಇಸ್ಲಾಂ, ಕ್ರೈಸ್ತ ಸೇರಿ ಹಲವಾರು ಧರ್ಮಗಳಿಗೆ ಆಶ್ರಯ ನೀಡಿದೆ. ಪಂಪ, ರನ್ನ, ಬಸವಾದಿ ಶರಣರು, ದಾಸಶ್ರೇಷ್ಠರು, ಹರಿಹರ, ರಾಘವಾಂಕ, ಕುವೆಂಪು, ಬೇಂದ್ರೆ, ಜಿ.ಎಸ್ ಶಿವರುದ್ರಪ್ಪ, ಚಿನ್ನವೀರ ಕಣವಿ ಸೇರಿದಂತೆ ಸಾವಿರಾರು ಕವಿಗಳು, ಸಾಹಿತಿಗಳು ಕನ್ನಡ ಭಾಷೆಯನ್ನು ಸಮೃದ್ಧಿಗೊಳಿಸಿದ್ದಾರೆ ಎಂದರು.
ತಮಿಳು ಭಾಷೆಯು ದ್ರಾವಿಡ ಭಾಷೆಯಿಂದ ಬೇರ್ಪಟ್ಟ ಸಮಯದಲ್ಲಿಯೇ ಕನ್ನಡವೂ ಕೂಡ ಆಡುಭಾಷೆಯಾಗಿ ಬೇರ್ಪಟ್ಟು ೫ನೇ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಸಾಕಷ್ಟು ಅಭಿವೃದ್ಧಿ ಹೊಂದಿತ್ತು ಎಂದರು.
ಗಂಗ, ಕದಂಬ, ಚಾಲುಕ್ಯ, ಹೊಯ್ಸಳರು ಈ ಮುಂತಾದ ರಾಜವಂಶದವರು ಕನ್ನಡನಾಡಿನಲ್ಲಿ ಅಳ್ವಿಕೆ ನಡೆಸಿ, ರಾಷ್ಟ್ರದಲ್ಲಿ ಇತಿಹಾಸದಲ್ಲಿ ತಮ್ಮ ಕೀರ್ತಿಗಾಥೆಯನ್ನು ಸುವರ್ಣಾಕ್ಷರಗಳಿಂದ ದಾಖಲಿಸಿದ್ದಾರೆ. ಬೇಲೂರು, ಹಳೆಬೀಡು, ಹಂಪಿ, ಬಾದಾಮಿ ಸೇರಿ ಇನ್ನಿತರ ಸ್ಥಳಗಳು ನಮ್ಮ ಇತಿಹಾಸ, ಪರಂಪರೆಗೆ ಸಾಕ್ಷಿಯಾಗಿವೆ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷೆ ನಗರದ ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಜಿ.ಲಿಖಿತಾ ಮಾತನಾಡಿ, ನಾವು ಜ್ಞಾನಕ್ಕಾಗಿ, ತಿಳಿವಳಿಕೆಗಾಗಿ, ವ್ಯವಹಾರಕ್ಕೆ ಯಾವುದೇ ಭಾಷೆಯನ್ನು ಕಲಿತರೂ ನಮ್ಮ ಆಡುಭಾಷೆ ಕನ್ನಡವಾಗಿರಬೇಕು, ಮಾತೃಭಾಷೆಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದರು.
ಜಿಲ್ಲೆಯು ಸಾಂಸ್ಕೃತಿಕ, ಸಾಹಿತ್ಯಿಕವಾಗಿಯೂ ಮಂಚೂಣಿಯಲ್ಲಿದೆ. ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಕುವೆಂಪು ಹಾಗೂ ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ನಮ್ಮ ಜಿಲ್ಲೆಯವರೇ ಎಂಬುದು ನಮ್ಮ ಹೆಮ್ಮೆ. ೮ ಜ್ಞಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟ ಈ ಸುಂದರವಾದ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಹೊಣೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ಸಾಹಿತ್ಯ ಎಲ್ಲರಿಗೂ ಒಲಿಯುವುದಿಲ್ಲ. ಸಾಹಿತ್ಯದ ಓದು ಹಾಗೂ ಅರಿವಿನ ಪ್ರಜ್ಞೆ ಇದ್ದವರಿಗೆ ಮಾತ್ರ ಒಲಿಯುತ್ತದೆ. ಸಾಹಿತ್ಯವನ್ನು ಬಿತ್ತುವ ಕೆಲಸವನ್ನು ಕಸಾಪ ಕಾವ್ಯ, ಕಮ್ಮಟ, ಸಮ್ಮೇಳನಗಳು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ಮೂಲಕ ಮಾಡುತ್ತಿದೆ. ಪ್ರತಿಭೆ ಯಾರ ಸ್ವತ್ತೂ ಅಲ್ಲ. ಪ್ರತಿಭೆಯನ್ನು ಹೊರತೆಗೆಯುವ ಕೆಲಸ ನಾವೆಲ್ಲರೂ ಒಟ್ಟಾಗಿ ಮಾಡಬೇಕು. ಯುನೆಸ್ಕೋ ವರದಿಯಂತೆ ದೇಶದಲ್ಲಿ ೮ ಸಾವಿರ ಭಾಷೆಗಳಿದ್ದು, ಎಲ್ಲವೂ ಉಳಿಯಬೇಕು. ಯಾವುದೂ ಸಾಯಬಾರದು ಎಂದರು.
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಎಂ.ಎಸ್.ಸುಧಾಮಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕಸಾಪ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಜಯ್ಯ, ಉದ್ಯಮಿ ಬಿ.ಕೆ. ಜಗನ್ನಾಥ್, ಶಾಲಾ ಮುಖ್ಯಶಿಕ್ಷಕಿ ಕೋಮಲಾ, ಕೋಗಲೂರು ತಿಪ್ಪೇಸ್ವಾಮಿ, ಎಂ.ಆರ್. ರೇವಣಪ್ಪ, ಶಿಕ್ಷಕಿ ಗೀತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಕವಿಗೋಷ್ಠಿ, ಕಥಾಗೋಷ್ಠಿ ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತು ಗೋಷ್ಠಿಗಳು ಜರುಗಿದವು.