Thursday, January 23, 2025

ಅಕ್ರಮವಾಗಿ ಸಮುದಾಯ ಭವನ ನಿರ್ಮಾಣ : ಜ.೨೬ರಂದು ಶಾಸಕರಿಗೆ ಸ್ಥಳೀಯರಿಂದ ಮನವಿ

ಸಮುದಾಯ ಭವನ ವಶಕ್ಕೆ ಪಡೆಯಿರಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ 

ಭದ್ರಾವತಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಫಿಲ್ಟರ್‌ಶೆಡ್ ನಾಗರೀಕರ ಹಿತರಕ್ಷಣಾ ಸಮಿತಿಯ ಪ್ರಮುಖರು, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಮಾತನಾಡಿದರು. 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಜನ್ನಾಪುರ, ಫಿಲ್ಟರ್‌ಶೆಡ್‌ನಲ್ಲಿರುವ ಸರ್ಕಾರಿ ಗೋಮಾಳದ ಜಾಗದಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳು ೩೦*೮೦ ಅಡಿ ಅಳತೆಯ ಜಾಗದಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಿರುವ ಸಮುದಾಯ ಭವನ ತಾಲೂಕು ಆಡಳಿತ ವಹಿಸಿಕೊಂಡು ಜನ್ನಾಪುರದ ಸ್ಥಳೀಯ ನಾಗರೀಕರಿಗೆ ಶುಭ ಸಮಾರಂಭಗಳು ಹಾಗೂ ಇತರೆ ಸಣ್ಣಪುಟ್ಟ ಕಾರ್ಯಕ್ರಮ ರಿಯಾಯಿತಿ ದರದಲ್ಲಿ ನಡೆಸಲು ಅವಕಾಶ ಮಾಡಿಕೊಡುವುದರ ಜೊತೆಗೆ ಅಕ್ರಮವಾಗಿ ಸಮುದಾಯ ಭವನವ ನಿರ್ಮಿಸಿರುವವರ ವಿರುದ್ಧ ಹಾಗೂ ಈ ಅಕ್ರಮಕ್ಕೆ ಕುಮ್ಮಕ್ಕು ನೀಡಿರುವ ನಗರಸಭೆ ಹಾಗೂ ತಾಲೂಕು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಜ.೨೬ರಂದು ಕನಕಮಂಟಪ ಮೈದಾನದಲ್ಲಿ ಶಾಸಕರಿಗೆ ಸ್ಥಳೀಯ ನಿವಾಸಿಗಳೊಂದಿಗೆ ಮನವಿ ಮಾಡಲಾಗುವುದು ಎಂದು ಫಿಲ್ಟರ್‌ಶೆಡ್ ನಿವಾಸಿ, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ತಿಳಿಸಿದರು. 
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕರ ಶಾಸಕರ ಮತ್ತು ಸಂಸದರ ಅನುದಾನಗಳನ್ನು ಪಡೆದುಕೊಂಡು ಮೂರು ಅಂತಸ್ತಿನ ಸಮುದಾಯ ಭವನವನ್ನು ನಿರ್ಮಿಸಿ ಖಾಸಗಿ ಸಮುದಾಯ ಭವನದ ರೀತಿ ಮಾರ್ಪಾಡು ಮಾಡಿಕೊಳ್ಳುತ್ತಿರುವುದನ್ನು ಖಂಡಿಸಿ, ಕಳೆದ ಒಂದು ವರ್ಷದಿಂದ ಫಿಲ್ಟರ್‌ಶೆಡ್ ನಾಗರೀಕರ ಹಿತರಕ್ಷಣಾ ಸಮಿತಿಯಿಂದ ಹೋರಾಟ ಮಾಡುತ್ತಿದ್ದು, ಇಲ್ಲಿಯವರೆಗೂ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಬಾಹಿರವಾಗಿ ಸಮುದಾಯಭವನ ನಿರ್ಮಿಸಿರುವವರ ವಿರುದ್ಧ ಕ್ರಮ ತೆಗೆದುಕೊಂಡಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
    ಸರ್ಕಾರದ ಜಾಗಗಳಲ್ಲಿ ಸಮುದಾಯ ಭವನ ಅಥವಾ ಇನ್ನಿತರೆ ಯಾವುದೇ ಕಟ್ಟಡಗಳನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ಸಂಬಂಧಪಟ್ಟ ತಾಲೂಕು ಆಡಳಿತ, ಕೊಳಚೆ ಮಂಡಳಿ(ಸ್ಲಂ ಬೋರ್ಡ್), ನಗರಸಭೆ ವತಿಯಿಂದ ಅನುಮತಿ ಪತ್ರ ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಅಲ್ಲದೆ ಶಾಸಕರ ಮತ್ತು ಸಂಸದರ ಅನುದಾನ ಸಾರ್ವಜನಿಕರ ಉದ್ದೇಶಕ್ಕಾಗಿ ಪಡೆಯುವ ಸಂದರ್ಭದಲ್ಲಿ ಟ್ರಸ್ಟ್ ನೊಂದಣಿಯಾಗಿರಬೇಕು. ನಿರ್ಮಾಣವಾಗುತ್ತಿರುವ ಜಾಗಕ್ಕೆ ಖಾತೆಯಾಗಿರಬೇಕು. ಇವುಗಳಲ್ಲಿ ಯಾವುದೂ ಆಗದೇ ಸಮುದಾಯಭವನ ನಿರ್ಮಾಣ ಮಾಡಿರುವವರು ೨೦೧೯-೨೦೨೦ರಲ್ಲಿ ಸಂಸದರ ಹಾಗೂ ಶಾಸಕರ ಅನುದಾನ ಪಡೆದುಕೊಂಡಿರುತ್ತಾರೆ. ೨೦೨೨-೨೦೨೩ರಲ್ಲಿ ಟ್ರಸ್ಟ್ ನೊಂದಣಿ ಮಾಡಿಕೊಂಡಿರುತ್ತಾರೆ. ನಗರಸಭೆವತಿಯಿಂದ ೨೦೨೪ ಫೆಬ್ರವರಿಯಲ್ಲಿ ಅಂತರಘಟ್ಟಮ್ಮ ದೇವಸ್ಥಾನದ ಹೆಸರಿನಲ್ಲಿ ಸಂಬಂಧಪಟ್ಟ ಜಾಗಕ್ಕೆ ಖಾತೆ ಮಾಡಿಸಿಕೊಂಡಿರುತ್ತಾರೆ. ಇವೆಲ್ಲವೂ ಕೂಡ ಒಂದಕ್ಕೊಂದು ಸಂಬಂಧವಿಲ್ಲದೆ ಇರುವುದರಿಂದ ಸಂಬಂಧಪಟ್ಟವರ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವಂತೆ ಹಲವು ಬಾರಿ ಮನವಿ ಮಾಡಿದ್ದು, ಆದರೆ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು. 
    ಪ್ರತಿಕಾಗೋಷ್ಠಿಯಲ್ಲಿ ಸ್ಥಳೀಯ ಪ್ರಮುಖರಾದ ಬಿ.ಜಿ ಉಮೇಶ್, ಸವಿತಾ ಉಮೇಶ್, ಸತೀಶ್ ಪೂಜಾರಿ, ಮಹಾದೇವಿ, ದಿವ್ಯಶ್ರೀ, ಗೋಪಾಲ್‌ರಾವ್, ಶಶಿಧರ್, ಜಯಲಕ್ಷ್ಮೀ, ಮಹಾಲಕ್ಷ್ಮಿ, ಸಣ್ಣಮ್ಮ, ಪಾರ್ವತಿಬಾಯಿ, ಜಯಂತಿ, ನಾಗೋಜಿರಾವ್, ಪರಮೇಶ್ವರ್, ಇಂದ್ರಮ್ಮ, ಕುಮಾರ್ ರಾವ್, ಮೋಹನ್‌ಕುಮಾರ್, ಉಮೇಶ್, ಶಿವಶಂಕರ್, ಲಕ್ಷ್ಮಿಬಾಯಿ, ಸುಭದ್ರಬಾಯಿ, ಜಯಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜಮೀನಿಗೆ ವಿದ್ಯುತ್ ಪೂರೈಸಿಕೊಳ್ಳುವ ವಿಚಾರದಲ್ಲಿ ಜಗಳ : ಗ್ರಾ.ಪಂ. ಮಾಜಿ ಸದಸ್ಯ ಮೃತ

ಮೃತಪಟ್ಟಿರುವ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಾಂತಕುಮಾರ್ 
    ಭದ್ರಾವತಿ: ಜಮೀನಿಗೆ ವಿದ್ಯುತ್ ಪರಿವರ್ತಕ(ಟ್ರಾನ್ಸ್ ಫಾರ್ಮಾರ್)ದಿಂದ ವಿದ್ಯುತ್ ಪೂರೈಸಿಕೊಳ್ಳುವ ವಿಚಾರದಲ್ಲಿ ಅಕ್ಕಪಕ್ಕದ ಜಮೀನಿನವರ ನಡುವೆ ಜಗಳ ನಡೆದು ವಿಕೋಪಕ್ಕೆ ತಿರುಗಿ ಹಲ್ಲೆ ನಡೆದಿರುವ ಪರಿಣಾಮ ಗ್ರಾಮ ಪಂಚಾಯಿತಿ ಮಾಜಿ ಸದಸ್ಯನೋರ್ವ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. 
    ದೊಡ್ಡೇರಿ ಗ್ರಾಮದ ನಿವಾಸಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಾಂತಕುಮಾರ(೩೫) ಮೃತಪಟ್ಟಿರುವ ವ್ಯಕ್ತಿಯಾಗಿದ್ದು,  ಘಟನೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಧುರವರ ಪತಿ ಲೇಪಾಕ್ಷಿ (೪೦), ಅತೀಶ್, ಅಭಿಲಾಷ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಇವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಇಬ್ಬರಿಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
    ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ೧೦ ಜನರ ವಿರುದ್ದ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
    ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಉಪಾಧೀಕ್ಷಕ ಕೆ.ಆರ್ ನಾಗರಾಜು, ಗ್ರಾಮಾಂತರ ಠಾಣೆ ನಿರೀಕ್ಷಕ ಜಗದೀಶ್ ಹಂಚಿನಾಳ್, ಪೇಪರ್‌ಟೌನ್ ಠಾಣೆ ನಿರೀಕ್ಷಕಿ ನಾಗಮ್ಮ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಘಟನೆ ವಿವರ: 
    ಮೃತಪಟ್ಟಿರುವ ಶಾಂತಕುಮಾರ್ ಹಾಗೂ ಲೇಪಾಕ್ಷಿ ಈ ಎರಡು ಕುಟುಂಬಸ್ಥರ ಜಮೀನು ಅಕ್ಕಪಕ್ಕದಲ್ಲಿವೆ. ಶಾಂತಕುಮಾರ್ ಅವರ ಜಮೀನಿನಲ್ಲಿ ವಿದ್ಯುತ್ ಪರಿವರ್ತಕವಿದ್ದು,  ಈ ಪರಿವರ್ತಕದ ಮೂಲಕ ಲೇಪಾಕ್ಷಿ ಕುಟುಂಬದ ಜಮೀನಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಪರಿವರ್ತಕ ಹಾಳಾಗಿದ್ದು, ಈ ವಿಚಾರದಲ್ಲಿ ಸಂಜೆ ಜಮೀನಿನಲ್ಲಿಯೇ ಗಲಾಟೆಯಾಗಿದ್ದು, ಕೈ ಕೈ ಮಿಲಾವಣೆಯಾಗಿದೆ. ತದನಂತರ ಎಮ್ಮೆದೊಡ್ಡಿ ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆ ಸಮೀಪ ಎರಡೂ ಗುಂಪುಗಳ ನಡುವೆ ಮಾರಾಮಾರಿಯಾಗಿದೆ. ಇದು ವಿಕೋಪಕ್ಕೆ ತಿರುಗಿ ಮಚ್ಚಿನಿಂದ ಶಾಂತಕುಮಾರ್ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಶಾಂತಕುಮಾರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅಸುನೀಗಿದ್ದಾರೆ.
    ತದನಂತರ ಲೇಪಾಕ್ಷಿ ಮನೆಗೆ ಬೆಂಕಿ ಹಚ್ಚಲು ಯತ್ನಿಸಲಾಗಿದೆ. ಮನೆಗೆ ಹೊತ್ತಿದ್ದ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಎರಡು ಬೈಕ್‌ಗಳನ್ನು ಜಖಂಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
    ಘಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಪಹರೆ ಹಾಕಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿಯೇ ಬೀಡುಬಿಟ್ಟಿದ್ದಾರೆ.

ಅಂಬೇಡ್ಕರ್ ಭವನ ಸಹ ಉದ್ಘಾಟಿಸಿ, ಕಾಗೋಡು ತಿಮ್ಮಪ್ಪರಿಗೆ ಭಾರತ ರತ್ನ ನೀಡಿ

ಜ.೨೬ರಂದು ಡಿವೈಎಸ್ಪಿ ಕಛೇರಿ ಮುಂಭಾಗ ಪ್ರತಿಭಟನಾ ಧರಣಿ ಸತ್ಯಾಗ್ರಹ : ಬಿ.ಎನ್ ರಾಜು

ಭದ್ರಾವತಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿದರು. 
    ಭದ್ರಾವತಿ : ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಪ್ರತಿಷ್ಠಾಪಿಸಲಾಗಿರುವ ನೂತನ ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ ಜೊತೆಗೆ ಮುಕ್ತಾಯ ಹಂತದಲ್ಲಿರುವ ಅಂಬೇಡ್ಕರ್ ಭವನ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಉದ್ಘಾಟಿಸಬೇಕೆಂದು ಹಾಗು ಸಮಾಜವಾದಿ ನಾಯಕ, ಹಿರಿಯ ಮುತ್ಸದ್ದಿ ಕಾಗೋಡು ತಿಮ್ಮಪ್ಪನವರಿಗೆ ಕೇಂದ್ರ ಸರ್ಕಾರ ಭಾರತರತ್ನ ಪ್ರಶಸ್ತಿ ನೀಡಬೇಕೆಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಆಗ್ರಹಿಸಿದರು. 
    ಈ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ್‌ರವರು ೩೬ ಪದವಿ ಪಡೆದ ಪ್ರಪಂಚದಲ್ಲಿಯೇ ಮಹಾಜ್ಞಾನಿಯಾಗಿದ್ದಾರೆ. ಅಲ್ಲದೆ ಪ್ರಪಂಚದ ವಿವಿಧ ದೇಶಗಳಲ್ಲಿ ಅತಿ ಹೆಚ್ಚು ಗೌರವಕ್ಕೆ ಪಾತ್ರರಾಗಿದ್ದು,  ದಲಿತ ಚಳುವಳಿಗಳು ಹುಟ್ಟಿದ ನಗರದಲ್ಲಿ ಇವರ ಹೆಸರಿನಲ್ಲಿ ಸುಸಜ್ಜಿತವಾದ ಭವನ ನಿರ್ಮಿಸಬೇಕೆಂದು ಕಳೆದ ಸುಮಾರು ೩೦ ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದ ಪರಿಣಾಮ ೨೦೧೮ರಲ್ಲಿ ಭವನದ ಕಾಮಗಾರಿ ಆರಂಭಿಸಿದ್ದು, ಆದರೆ ಇದುವರೆಗೂ ಕಾಮಗಾರಿಯನ್ನು ಪೂರೈಸದೆ ನಿರ್ಲಕ್ಷ್ಯವಹಿಸಿರುವುದು ಖಂಡನೀಯ ಎಂದರು. 
    ನಗರಸಭೆ ಸಭಾಂಗಣದಲ್ಲಿ ಜ.೨೧ರಂದು ನಡೆದ ಸಭೆಯಲ್ಲಿ ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಪ್ರತಿಷ್ಠಾಪಿಸಲಾಗಿರುವ ನೂತನ ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ ಮುಂದಿನ ೧ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಆಹ್ವಾನಿಸಿ ನೆರವೇರಿಸುವಂತೆ ಸಂಘ-ಸಂಸ್ಥೆಗಳ ಮುಖಂಡರು ಒತ್ತಾಯಿಸಿದ ಮೇರೆಗೆ ಶಾಸಕರು ಒಪ್ಪಿಗೆ ಸೂಚಿಸಿದ್ದು, ಇದೆ ಸಂದಭದಲ್ಲಿ ಅಂಬೇಡ್ಕರ್ ಭವನ ಕಾಮಗಾರಿಯನ್ನು ತ್ವರಿತವಾಗಿ ಕೈಗೊಂಡು ಪ್ರತಿಮೆ ಉದ್ಘಾಟನೆ ಜೊತೆಗೆ ಭವನ ಸಹ ಉದ್ಘಾಟಿಸಬೇಕೆಂದು ಆಗ್ರಹಿಸಿದರು. 
    ಕಾಗೋಡು ತಿಮ್ಮಪ್ಪರಿಗೆ ಭಾರತರತ್ನ ನೀಡಲಿ: 
    ದೇಶಕಂಡ ಅತ್ಯುತ್ತಮ ರಾಜಕಾರಣಿ, ಸಮಾಜವಾದಿ ಮತ್ತು ಕಾಗೋಡು ಚಳುವಳಿ ನಾಯಕ ಕಾಗೋಡು ತಿಮ್ಮಪ್ಪನವರಿಗೆ ಕೇಂದ್ರ ಸರ್ಕಾರ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಒತ್ತಾಯಿಸಿದರು. 
    ೯೪ಸಿ ಮತ್ತು ೯೪ಸಿಸಿ ಯೋಜನೆಯಲ್ಲಿ ಬಡವರಿಗೆ ನಿವೇಶನಗಳ ರೂವಾರಿ, ಬಗರ್‌ಹುಕುಂ ಮತ್ತು ಅರಣ್ಯ ಜಮೀನುಗಳ ಲಕ್ಷಾಂತರ ಬಡವರಿಗೆ ಆಶ್ರಯದಾತ, ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಮತ್ತು ಇತರೆ ಇಲಾಖೆಗಳನ್ನು ಪ್ರಮಾಣಿಕವಾಗಿ ನಡೆಸಿದ ಪ್ರಜ್ಞಾವಂತ ರಾಜಕಾರಣಿ ಕಾಗೋಡುತಿಮ್ಮಪ್ಪ. ೨೦೧೩ರಲ್ಲಿ ಕರ್ನಾಟಕ ಸರ್ಕಾರದ ವಿಧಾನಸಭಾ ಅಧ್ಯಕ್ಷರಾಗಿ ದೇಶದಲ್ಲಿಯೇ ಕ್ರಾಂತಿಕಾರಿ ಸ್ಪೀಕರ್ ಎಂದು ಹೆಸರು ವಾಸಿಯಾದ ಸರಳ ಸಜ್ಜನಿಕೆಯ ಮಾನವೀಯ ಮೌಲ್ಯದ ನುರಿತ ರಾಜಕಾರಣಿ ಕಾಗೋಡು ತಿಮ್ಮಪ್ಪ. ಇವರಿಗೆ ಕುವೆಂಪು ವಿಶ್ವವಿದ್ಯಾಲಯ ಹಾಗು ಕೆಳದಿ ಶಿವಪ್ಪನಾಯ್ಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ನೀಡಿವೆ. ಈ ಹಿನ್ನಲೆಯಲ್ಲಿ ಈ ಎರಡು ವಿಶ್ವವಿದ್ಯಾಲಯಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 
    ಕಾಗೋಡು ತಿಮ್ಮಪ್ಪರಿಗೆ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿಯವರು ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗಿದೆ. ಈ ನಡುವೆ ಸಂಸದ ಬಿ.ವೈ ರಾಘವೇಂದ್ರರವರು ಸಹ ಕೇಂದ್ರ ಸರ್ಕಾರಕ್ಕೆ  ಮನವಿ ಮಾಡಬೇಕೆಂದು ಒತ್ತಾಯಿಸುತ್ತೇವೆ ಎಂದರು. 
    ಜಾತಿ ನಿಂದನೆ ಪ್ರಕರಣ ಡಿ.೨೬ರಂದು ಪ್ರತಿಭಟನೆ : 
    ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿನ ಪರಿಶಿಷ್ಟ ಜಾತಿಗೆ ಸೇರಿದವರ ಜಮೀನಿನಲ್ಲಿ ಅಕ್ರಮವಾಗ ಪ್ರವೇಶಿಸಿ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದ ಪೊಲೀಸ್ ಉಪಾಧೀಕ್ಷಕರ ನಿರ್ಲಕ್ಷ್ಯತನ ಹಾಗು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿರ್ಯೋವರ ದುರ್ವರ್ತನೆ ಖಂಡಿಸಿ ಕಛೇರಿ  ಮುಂಭಾಗ ಜ.೨೬ರಂದು ಬೆಳಿಗ್ಗೆ ೧೧ ಗಂಟೆಗೆ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು. 
ಗ್ರಾಮದ ಸರ್ವೆ ನಂ. ೩೭/೧, ೩೭/೬ರಲ್ಲಿ ೧ ಎಕರೆ ೨೦ ಗುಂಟೆ ಹೊಂದಿರುವ ಪರಿಶಿಷ್ಟ ಜಾತಿಗೆ ಸೇರಿದ ನಾಗರತ್ನಮ್ಮ ಎಂಬುವರ ಜಮೀನಿನಲ್ಲಿ ಮೇಲ್ಜಾತಿಗೆ ಸೇರಿದ ಒಂದು ಕುಟುಂಬಸ್ಥರು ವಿನಾಕಾರಣ ನಾಗರತ್ನಮ್ಮನವರ ಜಮೀನಿಗೆ ಅಕ್ರಮವಾಗಿ ಪ್ರದೇಶಿಸಿ ಜಾತಿ ನಿಂದನೆ ಕೊಲೆ ಬೆದರಿಕೆ ಹಾಕುತ್ತಿದ್ದು, ಈ ಸಂಬಂಧ ಅಗತ್ಯ ಸಾಕ್ಷಿ ಸಮೇತ ಒಟ್ಟು ೩ ಬಾರಿ ದೂರು ದಾಖಲಿಸಲಾಗಿದೆ. ಆದರೆ ಪೊಲೀಸರು ಸರಿಯಾಗಿ ಪ್ರಕರಣ ದಾಖಲಿಸಿಕೊಳ್ಳದೆ ದೂರುದಾರರ ವಿರುದ್ಧವಾಗಿ ವರ್ತಿಸುತ್ತಿದ್ದು, ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ನೀಡದೆ ತಪ್ಪಿತಸ್ಥರಿಗೆ ನೆರವಾಗುತ್ತಿದ್ದಾರೆಂದು ದೂರಿದರು. 
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಪೊಲೀಸ್ ಉಪಾಧೀಕ್ಷಕರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿರುವುದು ಖಂಡನೀಯ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದರು. 
    ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಪ್ರಮುಖರು ಹಾಗು ಲಕ್ಷ್ಮೀಪುರ ಗ್ರಾಮಸ್ಥರು ಉಪಸ್ಥಿತರಿದ್ದರು.   

Wednesday, January 22, 2025

ಕಾಗೋಡು ತಿಮ್ಮಪ್ಪರಿಗೆ ಡಾಕ್ಟರೇಟ್ ಪದವಿ : ಸನ್ಮಾನ, ಗೌರವ

ಮಾನವ ಹಕ್ಕುಗಳ ಹೋರಾಟ ಸಮಿತಿಯಿಂದ ಸಂಭ್ರಮ 

ಕುವೆಂಪು ವಿಶ್ವ ವಿದ್ಯಾಲಯದಿಂದ ಬುಧವಾರ ಗೌರವ ಡಾಕ್ಟರೇಟ್ ಪದವಿ ಪಡೆದ ಹಿರಿಯ ರಾಜಕೀಯ ಮುತ್ಸದ್ದಿ, ಸಮಾಜವಾದಿ ನಾಯಕ, ವಿಧಾನಸಭೆ ಮಾಜಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ಭದ್ರಾವತಿ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ಕುವೆಂಪು ವಿಶ್ವ ವಿದ್ಯಾಲಯದಿಂದ ಬುಧವಾರ ಗೌರವ ಡಾಕ್ಟರೇಟ್ ಪದವಿ ಪಡೆದ ಹಿರಿಯ ರಾಜಕೀಯ ಮುತ್ಸದ್ದಿ, ಸಮಾಜವಾದಿ ನಾಯಕ, ವಿಧಾನಸಭೆ ಮಾಜಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಸಮಿತಿ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವದಲ್ಲಿ ಸಮಿತಿ ಪದಾಧಿಕಾರಿಗಳು, ಪ್ರಮುಖರು ಕುವೆಂಪು ವಿಶ್ವ ವಿದ್ಯಾಲಯಕ್ಕೆ ತೆರಳಿ ಕಾಗೋಡು ತಿಮ್ಮಪ್ಪನವರೊಂದಿಗೆ ಸಂಭ್ರಮ ಹಂಚಿಕೊಂಡರು. 
    ಕಳೆದ ಕೆಲವು ತಿಂಗಳುಗಳಿಂದ ಸಮಿತಿ ವತಿಯಿಂದ ಕಾಗೋಡು ತಿಮ್ಮಪ್ಪನವರಿಗೆ ಕರ್ನಾಟಕ ರತ್ನ ಸೇರಿದಂತೆ ಗೌರವಪೂರ್ವಕವಾಗಿ ಉನ್ನತ ಪ್ರಶಸ್ತಿಗಳನ್ನು ನೀಡಿ ಗೌರವಿಸುವಂತೆ ಜಿಲ್ಲಾಧಿಕಾರಿಗಳ ಕಛೇರಿ ಹಾಗು ಸಾಗರದಲ್ಲಿರುವ ಕಾಗೋಡು ತಿಮ್ಮಪ್ಪನವರ ನಿವಾಸದವರೆಗೂ ಪಾದಯಾತ್ರೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. 
    ಅಲ್ಲದೆ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯಂದು ಸಮಿತಿ ವತಿಯಿಂದ ವಿಶ್ವ ಮಾನವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇದೀಗ ಕುವೆಂಪು ವಿಶ್ವ ವಿದ್ಯಾಲಯ ಕಾಗೋಡು ತಿಮ್ಮಪ್ಪನವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿರುವುದು ಸಂಭ್ರಮವನ್ನುಂಟು ಮಾಡಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂಬುದು ಸಮಿತಿ ಒತ್ತಾಯವಾಗಿದೆ. 

ಜಾಯ್ ಶರ್ಲಿಗೆ ಕುವಿವಿ ಚಿನ್ನದ ಪದಕ

ಭದ್ರಾವತಿ ನಗರ ಜನ್ನಾಪುರ ನಿವಾಸಿ ಜಾಯ್ ಶರ್ಲಿಯವರು ಕುವೆಂಪು ವಿಶ್ವ ವಿದ್ಯಾಲಯದ ವಿಜ್ಞಾನ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. 
    ಭದ್ರಾವತಿ : ನಗರ ಜನ್ನಾಪುರ ನಿವಾಸಿ ಜಾಯ್ ಶರ್ಲಿಯವರು ಕುವೆಂಪು ವಿಶ್ವ ವಿದ್ಯಾಲಯದ ವಿಜ್ಞಾನ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. 
    ಕುವೆಂಪು ವಿಶ್ವವಿದ್ಯಾಲಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ೩೪ನೇ ಘಟಿಕೋತ್ಸವದಲ್ಲಿ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ರವರು ಚಿನ್ನದ ಪದಕ ಜಾಯ್ ಶರ್ಲಿಯವರಿಗೆ ಪ್ರಧಾನ ಮಾಡಿದರು. ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ನಿವೃತ್ತ ಕುಲಪತಿ ಪ್ರೊ. ರಾಮ್ ರಾಮಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಚಿನ್ನದ ಪದಕ ಪಡೆದ ಜಾಯ್ ಶರ್ಲಿಯವರನ್ನು ತಾಲೂಕಿನ ಮಾವಿನಕೆರೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಜಯಶ್ರೀ ಗಂಗಾಧರನ್ ಸೇರಿದಂತೆ ಇನ್ನಿತರ ಗಣ್ಯರು ಅಭಿನಂದಿಸಿದ್ದಾರೆ. 

ಪರಮೇಶ್ವರ್, ತಿಪ್ಪೇಸ್ವಾಮಿಗೆ ಸವಿತಾ ಸಮಾಜದಿಂದ ಸನ್ಮಾನ



ಶಿವಮೊಗ್ಗ ಜಿಲ್ಲಾ ಸವಿತಾ ಸಮಾಜದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಎಂ. ಪರಮೇಶ್ವರ್ ಮತ್ತು ಕೂಡ್ಲಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿರುವ ತಿಪ್ಪೇಸ್ವಾಮಿಯವರನ್ನು ಭದ್ರಾವತಿ ತಾಲೂಕು ಸವಿತಾ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.  
    ಭದ್ರಾವತಿ : ಶಿವಮೊಗ್ಗ ಜಿಲ್ಲಾ ಸವಿತಾ ಸಮಾಜದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಎಂ. ಪರಮೇಶ್ವರ್ ಮತ್ತು ಕೂಡ್ಲಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿರುವ ತಿಪ್ಪೇಸ್ವಾಮಿಯವರನ್ನು ತಾಲೂಕು ಸವಿತಾ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.   
    ಹಳೇನಗರದ ಸವಿತಾ ಸಮಾಜದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಎಂ. ಪರಮೇಶ್ವರ್ ಮತ್ತು ತಿಪ್ಪೇಸ್ವಾಮಿಯರನ್ನು ಸನ್ಮಾನಿಸಿ ಉತ್ತಮವಾಗಿ ಸೇವೆ ಸಲ್ಲಿಸುವ ಜೊತೆಗೆ ಸಮಾಜವನ್ನು ಮತ್ತಷ್ಟು ಸಂಘಟಿಸುವ ಮೂಲಕ ಏಳಿಗೆಗೆ ಶ್ರಮಿಸುವಂತೆ ಕೋರಲಾಗಿದೆ. 
      ಸಮಾಜದ ತಾಲೂಕು ಅಧ್ಯಕ್ಷ ವಿಶ್ವನಾಥ್, ಉಪಾಧ್ಯಕ್ಷ ಓಬಳೇಶ್, ಪ್ರಧಾನ ಕಾರ್ಯದರ್ಶಿ ರೆಡ್‌ಸನ್ ರಾಜು, ಸಹ ಕಾರ್ಯದರ್ಶಿ ಮಹೇಶ್ ಕುಮಾರ್, ಖಜಾಂಚಿ ನರಸಿಂಹಮೂರ್ತಿ, ಪ್ರಮುಖರಾದ ಶಿವಶಂಕರ್, ಗೋಪಿನಾಥ್, ಶಿವಪ್ರಸಾದ್, ವೆಂಕಟೇಶ್, ಗಣೇಶ್, ಸುರೇಶ್, ಜೋರಪ್ಪ, ಎಂಪೈರ್ ಲೋಕೇಶ್ ಸೇರಿದಂತೆ ಸೇರಿದಂತೆ ಸವಿತಾ ಸಮಾಜದ ಪದಾಧಿಕಾರಿಗಳು, ಹಿರಿಯರು, ಮುಖಂಡರು ಉಪಸ್ಥಿತರಿದ್ದರು.  

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಗ್ಯ ವಿಚಾರಿಸಿದ ಸಂಗಮೇಶ್ವರ್, ಶ್ರೀ ವಿನಯ್ ಗುರೂಜೀ

ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕರ್ನಾಟಕ ಗ್ರಾಮೀಣ ಮೂಲಕ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.  
    ಭದ್ರಾವತಿ : ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕರ್ನಾಟಕ ಗ್ರಾಮೀಣ ಮೂಲಕ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. 
    ಚಿಕ್ಕಮಗಳೂರು ಗೌರಿಗದ್ದೆ ಆಶ್ರಮದ ಶ್ರೀ ವಿನಯ್ ಗುರೂಜೀ ಮತ್ತು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಜೊತೆ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದರು. 
ಲಕ್ಷ್ಮೀ ಹೆಬ್ಬಾಳ್ಕರ್‌ರವರು ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಕುಟುಂಬ ಸಂಬಂಧಿ ಸಹ ಆಗಿದ್ದು, ಶೀಘ್ರ ಗುಣಮುಖರಾಗುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾರೆ.