ಭದ್ರಾವತಿ ನ್ಯೂಟೌನ್ ಸೆಂಟ್ ಚಾರ್ಲ್ಸ್ ಆವರಣದಲ್ಲಿ ಕರುಣಾ ಸೇವಾ ಕೇಂದ್ರದ ವತಿಯಿಂದ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಸಂಘದ ಪರಿಕಲ್ಪನೆಯ ಬಗ್ಗೆ ಮಾಹಿತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ: ಸ್ವಸಹಾಯ ಸಂಘಗಳ ಮಹಿಳೆಯರು ಸಬಲೀಕರಣಗೊಳ್ಳುವ ಮೂಲಕ ಕುಟುಂಬದ ಆಸರೆಯಾಗಬೇಕು ಹೊರತು ದುರಾಸೆಗಳಿಂದ ಸಂಕಷ್ಟಗಳಿಗೆ ಒಳಗಾಗಬಾರದು ಎಂದು ನಗರದ ಕರುಣಾ ಸೇವಾ ಕೇಂದ್ರದ ಮುಖ್ಯಸ್ಥೆ ಸಿಸ್ಟರ್ ಹೆಲೆನ್ ಮೋರಸ್ ಹೇಳಿದರು.
ನಗರದ ನ್ಯೂಟೌನ್ ಸೆಂಟ್ ಚಾರ್ಲ್ಸ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರುಣಾ ಸೇವಾ ಕೇಂದ್ರದ ವತಿಯಿಂದ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಸಂಘದ ಪರಿಕಲ್ಪನೆಯ ಬಗ್ಗೆ ಮಾಹಿತಿ ಕಾರ್ಯಗಾರದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಮಹಿಳೆಯರು ದುರಾಸೆ ಹಾಗು ಅಮಿಷಗಳಿಂದ ಸ್ವಸಹಾಯ ಸಂಘಗಳ ಸದಸ್ಯರಾಗಬಾರದು. ದುರಾಸೆ ಹಾಗು ಅಮಿಷಗಳು ಮಹಿಳೆಯರ ವಿನಾಶಕ್ಕೆ ಕಾರಣವಾಗಲಿವೆ. ಇತ್ತೀಚಿನ ದಿನಗಳಲ್ಲಿ ಹಲವು ಮಹಿಳೆಯರು ಹಣವನ್ನು ಸಕಾರಾತ್ಮಕವಾಗಿ ಉಪಯೋಗಿಸಿಕೊಂಡು ಜೀವನದ ಮೌಲ್ಯಗಳನ್ನು ತನ್ನದಾಗಿಸಿಕೊಂಡು ಯಶಸ್ವಿನ ದಾರಿಯಲ್ಲಿ ಮುಂದುವರೆದಿದ್ದಾರೆ ಎಂದರು.
ಸಮುದ್ರದ ಬಂದರುಗಳಲ್ಲಿ ಲೈಟ್ ಹೌಸ್‌ಗಳನ್ನು ನಿರ್ಮಿಸಿರುತ್ತಾರೆ. ಸಮುದ್ರದಲ್ಲಿ ದಾರಿ ತಪ್ಪಿದ ನಾವಿಕರಿಗೆ ಈ ಲೈಟ್ ಹೌಸ್‌ಗಳು ದಾರಿದೀಪಗಳಾಗಿವೆ. ಇದೆ ರೀತಿ ಸ್ವಸಹಾಯ ಸಂಘಗಳು ಜೀವನಕ್ಕೆ ದಾರಿ ದೀಪವಾಗಿರಲಿ. ಅಲ್ಲದೆ ಸ್ವಸಹಾಯ ಸಂಘಗಳಿಂದ ಇಡೀ ಕುಟುಂಬ ಸಂತೋಷ, ತೃಪ್ತಿ ಸಮಾಧಾನವನ್ನು ಅನುಭವಿಸಿ ಉತ್ತಮ ಜೀವನ ಕಂಡುಕೊಳ್ಳುವಂತಾಗಬೇಕೆಂದರು.
ಮಹಿಳೆಯರು ಹಲವು ಸ್ವಸಹಾಯ ಸಂಘಗಳಲ್ಲಿ ಸದಸ್ಯತ್ವ ಹೊಂದುವ ಬದಲು ಒಂದೇ ಸ್ವಸಹಾಯ ಸಂಘದಲ್ಲಿ ತೊಡಗಿಸಿಕೊಂಡು ಉತ್ತಮ ಸಾಧನೆಯಲ್ಲಿ ತೊಡಗಬೇಕೆಂದರು. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ೧೩ ಸ್ವಸಹಾಯ ಸಂಘಗಳಲ್ಲಿ ಒಟ್ಟು ೧೨೦ ಮಹಿಳೆಯರು ಸದಸ್ಯತ್ವ ಪಡೆದುಕೊಂಡಿದ್ದಾರೆ.
ಕರುಣಾ ಸೇವಾ ಕೇಂದ್ರದ ಸಿಸ್ಟರ್ ಪ್ರಭ, ಒಕ್ಕೂಟದ ಸದಸ್ಯರಾದ ರೇಷ್ಮ, ಕಾರ್ಯಕರ್ತರಾದ ಸಾವಿತ್ರಿ. ಧನಲಕ್ಷ್ಮಿ ಹಾಗೂ ಕಾವ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.