Tuesday, February 18, 2025

ಫೆ.೨೦ರಂದು ವಾಣಿಜ್ಯ ಮತ್ತು ನಿರ್ವಹಣೆ ವೇದಿಕೆ ಉದ್ಘಾಟನೆ

    ಭದ್ರಾವತಿ : ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಫೆ.೨೦ರಂದು ಬೆಳಿಗ್ಗೆ ೧೧ ಗಂಟೆಗೆ ವಾಣಿಜ್ಯ ಮತ್ತು ನಿರ್ವಹಣೆ ವೇದಿಕೆ ಉದ್ಘಾಟನೆ ನಡೆಯಲಿದೆ. 
    ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣೆ ವಿಭಾಗದ ವತಿಯಿಂದ ಐಕ್ಯೂಎಸಿ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಕಾರ್ಯಕ್ರಮ ಕುವೆಂಪು ವಿ.ವಿ ವಾಣಿಜ್ಯ ಶಾಸ್ತ್ರ ವಿಭಾಗದ ಡೀನ್, ಹಿರಿಯ ಪ್ರಾಧ್ಯಾಪಕ ಪ್ರೊ. ಆರ್. ಹಿರೇಮಣಿ ನಾಯ್ಕ್ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ಐಕ್ಯೂಎಸಿ  ಸಂಯೋಜಕ ಸಹಾಯಕ ಪ್ರಾಧ್ಯಾಪಕ ಎಂ. ಮಹಮದ್ ನಜೀಬ್, ವಾಣಿಜ್ಯ ಶಾಸ್ರ್ತ ವಿಭಾಗದ ಮುಖ್ಯಸ್ಥ ಆರ್. ಮಂಜಪ್ಪ, ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಟಿ.ಜಿ ಉಮಾ, ವೇದಿಕೆ ಸಂಯೋಜಕ, ಸಹಾಯಕ ಪ್ರಾಧ್ಯಾಪಕ ವಿ.ಬಿ ಚಿರಂಜೀವಿ, ಆರ್. ವೆಂಕಟೇಶ್, ಬಿ.ಜಿ ಅಕ್ಷತಾ, ಕೆ. ಶಂಕರ್ ಯಾದವ್, ಎಚ್.ಎನ್ ಸುಷ್ಮ ಮತ್ತು ಎಸ್. ಶಾಂತಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ಎಸ್. ಹೊಸಳ್ಳೇರ್ ಅಧ್ಯಕ್ಷತೆ ವಹಿಸಲಿದ್ದಾರೆ. 

ಮಕ್ಕಳನ್ನು ಕ್ರಿಯಾತ್ಮಕ ಚಟುವಟಿಕೆಗಳೊಂದಿಗೆ ಆಧ್ಯಾತ್ಮಿಕವಾಗಿ ಬೆಳೆಸಿ : ಸ್ಟೀವನ್ ಡೇಸಾ

ಧರ್ಮೋಪದೇಶ ತರಗತಿಯ ಸಮಾರೋಪ ಸಮಾರಂಭ 

ಭದ್ರಾವತಿ ಹಳೇನಗರ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ಪುಣ್ಯಕ್ಷೇತ್ರದ ಪ್ರಾವಿಡೆನ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಧರ್ಮೋಪದೇಶ ತರಗತಿಗಳ ಸಮಾರೋಪ ಸಮಾರಂಭದಲ್ಲಿ ಧರ್ಮೋಪದೇಶ ಶಿಕ್ಷಕಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.  
    ಭದ್ರಾವತಿ : ಮಕ್ಕಳನ್ನು ಕ್ರಿಯಾತ್ಮಕ ಚಟುವಟಿಕೆಗಳೊಂದಿಗೆ ಆಧ್ಯಾತ್ಮಿಕವಾಗಿ ಬೆಳೆಸುವುದು ಅತಿ ಅವಶ್ಯಕ ಎಂದು ಹಳೇನಗರ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ಪುಣ್ಯಕ್ಷೇತ್ರದ ಧರ್ಮಗುರು ಸ್ಟೀವನ್ ಡೇಸಾ ಹೇಳಿದರು. 
    ಅವರು ಪುಣ್ಯಕ್ಷೇತ್ರದ ಪ್ರಾವಿಡೆನ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಧರ್ಮೋಪದೇಶ ತರಗತಿಗಳ ಸಮಾರೋಪ ಸಮಾರಂಭದ ನೇತೃತ್ವವಹಿಸಿ ಮಾತನಾಡಿದರು. ಮಕ್ಕಳು ಏನೇ ಕಲಿತರು ದಯೆ, ಕರುಣೆ, ಮಮಕಾರ, ಪ್ರೀತಿ, ತಾಳ್ಮೆ, ಕುಟುಂಬದೊಂದಿಗೆ ಹೊಂದಿಕೊಂಡು ಹೋಗುವುದು ಮತ್ತು ಇತರರಿಗೆ ಸಹಾಯ ಮಾಡುವ ಗುಣಗಳು ಧರ್ಮೋಪದೇಶ ತರಗತಿಯಲ್ಲಿ ಮಕ್ಕಳು ಪಡೆಯುತ್ತಾರೆ ಎಂದರು.  
    ಧರ್ಮೋಪದೇಶ ಹೇಳಿಕೊಡುವ ಧರ್ಮ ಕೇಂದ್ರದ ಶಿಕ್ಷಕಿಯರು ಯಾವುದೇ ಸಂಭಾವನೆ ಇಲ್ಲದೆ ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಧರ್ಮ ಕೇಂದ್ರದ ಮಕ್ಕಳಿಗೆ ಧರ್ಮೋಪದೇಶ ಬೋಧಿಸುವುದರೊಂದಿಗೆ ತಮ್ಮ ನಿಸ್ವಾರ್ಥ ಸೇವೆಯನ್ನು ಧರ್ಮ ಕೇಂದ್ರಕ್ಕೆ ಸಲ್ಲಿಸುತ್ತಿದ್ದಾರೆ. ಇವರ ಸೇವೆ ಶ್ಲಾಘನೀಯ ಮತ್ತು ಮೆಚ್ಚುವಂಥದ್ದು ಎಂದು ತಿಳಿಸಿದರು.
    ಪ್ರಸ್ತುತ ಮುಂಬೈನ ಧರ್ಮ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಗುರುಗಳಾದ ಫಾದರ್ ಅಶ್ವಿಲ್ ಡಯಾಸ್, ನಿರ್ಮಲ ಆಸ್ಪತ್ರೆಯ ಸುಪಿರಿಯರ್ ಸಿಸ್ಟರ್ ವಿಲ್ಮಾ, ಧರ್ಮೋಪದೇಶ ತರಗತಿಗಳ ನಿರ್ದೇಶಕಿ ಸಿಸ್ಟರ್ ತೆರೇಸಾ, ಸಿಸ್ಟರ್ ಶೋಭಾನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
  ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು. ನಂತರ ೨೦೨೪-೨೫ನೇ ಸಾಲಿನಲ್ಲಿ ವಾರಕ್ಕೊಮ್ಮೆ ನಡೆದ ಧರ್ಮೋಪದೇಶ ತರಗತಿಯಲ್ಲಿ ಶೇ. ೭೫ ರಷ್ಟು ಹಾಜರಿ ಪಡೆದ ಮಕ್ಕಳಿಗೆ ಹಾಗೂ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ಮಕ್ಕಳಿಗೆ ಬಹುಮಾನ ವಿತರಣೆ ವಿತರಿಸಲಾಯಿತು.  ಧರ್ಮೋಪದೇಶ ಶಿಕ್ಷಕಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.  ಪೋಷಕರು, ಮಕ್ಕಳು ಪಾಲ್ಗೊಂಡಿದ್ದರು.  ಪ್ರಿಯ ನಿರೂಪಿಸಿ ಜೋಶುವ ಥಾಮಸ್ ಸ್ವಾಗತಿಸಿದರು. ಕುಮಾರ್ ಜೆಸ್ಟಿನ್ ವಂದಿಸಿದರು.

ಫೆ.೧೯ರಂದು ಅಂಬೇಡ್ಕರ್‌ರವರ ೧೨ ಅಡಿ ಎತ್ತರದ ಕಂಚಿನ ಪ್ರತಿಮೆಗೆ ಹಾಲಿನ ಅಭಿಷೇಕ, ಬೃಹತ್ ಮಾಲಾರ್ಪಣೆ

ಅಂಬೇಡ್ಕರ್‌ರವರ ೧೨ ಅಡಿ ಎತ್ತರದ ಕಂಚಿನ ಪ್ರತಿಮೆ
    ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ, ಅಂಬೇಡ್ಕರ್ ವೃತ್ತದಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಪುತ್ಥಳಿಗೆ ಕರ್ನಾಟಕ ರಾಜ್ಯ ಚಾಣುಕ್ಯ ಸೇನೆ ವತಿಯಿಂದ ಫೆ. ೧೯ರಂದು ಹಾಲಿನ ಅಭಿಷೇಕ ಮತ್ತು ಬೃಹತ್ ಮಾಲಾರ್ಪಣೆ ನಡೆಯಲಿದೆ. 
    ನಗರಸಭೆ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ೧೨ ಅಡಿ ಎತ್ತರದ ಡಾ. ಬಿ.ಆರ್ ಅಂಬೇಡ್ಕರ್‌ರವರ ನೂತನ ಕಂಚಿನ ಪ್ರತಿಮೆ ಜ.೨೬ರಂದು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟನೆಗೊಳಿಸಿದ್ದರು. ಈ ಹಿಂದೆ ಪ್ರತಿಷ್ಠಾಪಿಸಲಾಗಿದ್ದ ಮೂರ್ತಿ ಬದಲಿಗೆ ಹೊಸದಾಗಿ ಅಂಬೇಡ್ಕರ್ ನೈಜತೆ ಹೋಲುವ ಪ್ರತಿಮೆ ಪ್ರತಿಷ್ಠಾಪಿಸುವಂತೆ ಪ್ರಗತಿಪರ ಹಾಗು ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಹೋರಾಟಗಾರರ ಬಹಳ ವರ್ಷಗಳ ಬೇಡಿಕೆಗೆ ಸ್ಪಂದಿಸಿ ನೂತನ ಪ್ರತಿಮೆ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. 
    ಬೆಳಿಗ್ಗೆ ೧೧ ಗಂಟೆಗೆ ನಡೆಯಲಿರುವ ಹಾಲಿನ ಅಭಿಷೇಕ ಮತ್ತು ಬೃಹತ್ ಮಾಲಾರ್ಪಣೆ ಕಾರ್ಯಕ್ರಮಕ್ಕೆ ಕ್ಷೇತ್ರದ ಸಮಸ್ತ ನಾಗರೀಕರು ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸುವಂತೆ ಕರ್ನಾಟಕ ರಾಜ್ಯ ಚಾಣುಕ್ಯ ಸೇನೆ ರಾಜ್ಯಾಧ್ಯಕ್ಷ ನಾರಾಯಣ ಐಹೊಳೆ ಕೋರಿದ್ದಾರೆ. 

ಫೆ.೨೦ರಂದು ಬೆಳಿಗ್ಗೆ ರೈತರಿಂದ ಪ್ರತಿಭಟನೆ

ಎಸ್. ಕುಮಾರ್ 
    ಭದ್ರಾವತಿ : ತಾಲೂಕಿನ ಬೆಳ್ಳಿಗೆರೆ, ಉದಯನಗರ ಮತ್ತು ಬದನೆಹಾಳ್ ಗ್ರಾಮಗಳ ಹೊಳೆಹೊನ್ನೂರು ಹೋಬಳಿ ರೈತರ ಹಿತ ರಕ್ಷಣಾ ಸಮಿತಿ ವತಿಯಿಂದ ಅರಣ್ಯ ಮತ್ತು ಕಂದಾಯ ಇಲಾಖೆಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ ಫೆ. ೨೦ರಂದು ಬೆಳಿಗ್ಗೆ ೧೧ ಗಂಟೆಗೆ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 
    ರೈತರು ಕಳೆದ ಸುಮಾರು ೬೫-೭೦ ವರ್ಷಗಳಿಂದ ಸಾಗುವಳಿ ಪತ್ರ ಪಡೆದು ಪಹಣಿ ಮತ್ತು ಇತರೆ ಎಲ್ಲಾ ದಾಖಲೆಗಳನ್ನು ಹೊಂದಿದ್ದರೂ ಸಹ ರೈತರ ಜಮೀನುಗಳಿಂದ ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಇದಕ್ಕೂ ಮೊದಲು ಬೆಳಿಗ್ಗೆ ೧೦.೩೦ಕ್ಕೆ ರಂಗಪ್ಪ ವೃತ್ತದಿಂದ ತಾಲೂಕು ಕಛೇರಿವರೆಗೂ ಪಾದಯಾತ್ರೆ ನಡೆಯಲಿದೆ. ರೈತರ ಹೋರಾಟಕ್ಕೆ ಬ್ಲಾಕ್ ಕಾಂಗ್ರೆಸ್ ಬೆಂಬಲ ಸೂಚಿಸಿದ್ದು, ಜನಪ್ರತಿನಿಧಿಗಳು, ಪಕ್ಷದ ಎಲ್ಲಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್ ಕೋರಿದ್ದಾರೆ. 

Monday, February 17, 2025

ಬಂಜಾರ ಸಮಾಜಕ್ಕೂ ಸ್ವಂತ ಕಟ್ಟಡ ಹೊಂದುವ ಆಶಯ : ಬಿ.ಕೆ ಶಿವಕುಮಾರ್

ಭದ್ರಾವತಿ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಪಂಚಾಯಿತಿ, ನಗರಸಭೆ ಹಾಗು ತಾಲೂಕು ಬಂಜಾರ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸಂತ ಸೇವಾಲಾಲ್ ಜಯಂತಿ ಆಯೋಜಿಸಲಾಗಿತ್ತು.  
    ಭದ್ರಾವತಿ : ಕ್ಷೇತ್ರದಲ್ಲಿ ಬಂಜಾರ ಸಮಾಜ ತಮ್ಮದೇ ಆದ ಸ್ವಂತ ಕಟ್ಟಡ ಹೊಂದುವ ಮೂಲಕ ಇತರೆ ಸಮಾಜದವರೊಂದಿಗೆ ಸರಿ ಸಮಾನವಾಗಿ ಮುನ್ನಡೆಯಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್ ಹೇಳಿದರು.  
     ಶನಿವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಪಂಚಾಯಿತಿ, ನಗರಸಭೆ ಹಾಗು ತಾಲೂಕು ಬಂಜಾರ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
     ಪ್ರತಿಯೊಬ್ಬರಿಗೂ ತನ್ನದೇ ಆದ ಸೂರು ಇರಬೇಕೆಂಬ ಮಹಾದಾಸೆ ಇರುತ್ತದೆ. ಅದೇ ರೀತಿ ಬಂಜಾರ ಸಮಾಜಕ್ಕೂ ಸಹ ಒಂದು ಕಟ್ಟಡದ ಅಗತ್ಯವಿದೆ. ಸಮಾಜಕ್ಕೆ ನಿವೇಶನ ಕಲ್ಪಿಸಿಕೊಡುವಲ್ಲಿ ಶಾಸಕರ ಪ್ರಯತ್ನ ಹೆಚ್ಚಿನದ್ದಾಗಿದ್ದು, ಅಲ್ಲದೆ ಸ್ವಂತ ಕಟ್ಟಡ ಹೊಂದಲು ಸರ್ಕಾರದಿಂದ ೨ ಕೋ. ರು. ಅನುದಾನ ಸಹ ಬಿಡುಗಡೆಯಾಗಲಿದೆ. ಮುಂದಿನ ದಿನಗಳಲ್ಲಿ ಸಮಾಜದವರು ಇನ್ನೂ ಹೆಚ್ಚಿನ ರೀತಿಯಲ್ಲಿ ಒಗ್ಗಟ್ಟಾಗಿ ಕಟ್ಟಡ ನಿರ್ಮಿಸಲು ಮುಂದಾಗಬೇಕೆಂದರು. 
    ಯಾವುದೇ ಕೆಲಸ ಅಸಾಧ್ಯವಲ್ಲ. ಗುರಿ ಮುಟ್ಟುವ ವಿಶ್ವಾಸ ಪ್ರತಿಯೊಬ್ಬರಲ್ಲೂ ಇರಬೇಕು. ದೊಡ್ಡ ಸಮಾಜವಿರಲಿ, ಸಣ್ಣ ಸಮಾಜವಿರಲಿ ಆಗ ಮಾತ್ರ ಗುರಿ ಮುಟ್ಟಲು ಸಾಧ್ಯ. ಸಮಾಜಕ್ಕೆ ಸ್ವಂತ ಕಟ್ಟಡವಿದ್ದಲ್ಲಿ ಹೆಚ್ಚಿನ ಅನುಕೂಲವಾಗಲಿದೆ. ಸಮಾಜದ ಪ್ರತಿಯೊಬ್ಬರೂ ಸಹ ಅದರ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು. 
     ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ಪ್ರೇಮ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಪಾರ್ವತಿ ಬಾಯಿ, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಮುಖಂಡರಾದ  ಜುಂಜ್ಯಾನಾಯ್ಕ, ಕೋಕಿಲ ಬಾಯಿ, ಟಿ. ವೆಂಕಟೇಶ್, ದಶರಥಗಿರಿ, ಉಪತಹಸೀಲ್ದಾರ್ ಮಂಜಾನಾಯ್ಕ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  

ಶಿಕ್ಷಣ ನಿಯಮ ಉಲ್ಲಂಘಿಸಿ ಕೆಲಸಕ್ಕೆ ನೇಮಿಸಿಕೊಂಡು ವಂಚನೆ

ಬಿಇಓ ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ : ಕ್ರಮ ಕೈಗೊಳ್ಳುವ ಭರವಸೆ  

ಶಿಕ್ಷಣ ನಿಯಮಗಳನ್ನು ಉಲ್ಲಂಘಿಸಿ ಕೆಲಸಕ್ಕೆ ನೇಮಿಸಿಕೊಂಡಿರುವವರಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಆಗ್ರಹಿಸಿ ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಭದ್ರಾವತಿ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪರಿಗೆ ಮನವಿ ಸಲ್ಲಿಸಲಾಯಿತು.  
       ಭದ್ರಾವತಿ : ಶಿಕ್ಷಣ ನಿಯಮಗಳನ್ನು ಉಲ್ಲಂಘಿಸಿ ಕೆಲಸಕ್ಕೆ ನೇಮಿಸಿಕೊಂಡಿರುವವರಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಆಗ್ರಹಿಸಿ ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಯಿತು. 
    ನಗರದ ನ್ಯೂಟೌನ್ ಸೆಂಟ್ ಚಾರ್ಲ್ಸ್ ಹೈಸ್ಕೂಲ್‌ನಲ್ಲಿ ನೆಪಮಾತ್ರಕ್ಕೆ ಶಿಕ್ಷಣ ಸಂಸ್ಥೆಯಲ್ಲಿ ಕೆಲಸಕ್ಕೆ ನೇಮಿಸಿಕೊಂಡು ನಂತರ ಅವರನ್ನು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಶಿಕ್ಷಣ ನಿಯಮಗಳನ್ನು ಉಲ್ಲಂಘಿಸಿರುವ ಜೊತೆಗೆ ಅವರಿಗೆ ನ್ಯಾಯ ಬದ್ಧವಾಗಿ ಸಿಗಬೇಕಾದ ಸೌಲಭ್ಯದಿಂದ ವಂಚಿಸಲಾಗುತ್ತಿದೆ ಎಂದು ಆರೋಪಿಸಲಾಯಿತು. 
    ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ಸದಸ್ಯರಾದ ವಿನ್ನಿ ಡಿಸೋಜಾ ಕೋಂ ಲಿಗೋರಿಯಾ ಎಂಬುವರು ಕಳೆದ ೧೭ ವರ್ಷಗಳಿಂದ ಸೆಂಟ್ ಚಾರ್ಲ್ಸ್ ಹೈಸ್ಕೂಲ್ ಸಮ್ಮುಖದಲ್ಲಿರುವ ಕರುಣ ಸೇವಾ ಕೇಂದ್ರ ಮತ್ತು ಕರುಣ ಮಹಿಳಾ ಮಂಡಳಿಗಳ ಒಕ್ಕೂಟದಲ್ಲಿ ಕೆಲಸ ನಿರ್ವಹಿಸಿಕೊಂಡು ಬಂದಿದ್ದಾರೆ. ಇವರ ಪಿ.ಎಫ್ ಹಣ ಹೈಸ್ಕೂಲ್ ಮತ್ತು ಸೊಸೈಟಿ ಆಫ್ ದ ಸಿಸ್ಟರ್ ಆಫ್ ಎಸ್.ಟಿ ಚಾರ್ಲ್ಸ್ ಹೆಸರಿನಲ್ಲಿ ಶಿವಮೊಗ್ಗದ ಪಿ.ಎಫ್ ಕಛೇರಿಯಲ್ಲಿರುವ ಖಾತೆಗೆ ಜಮಾ ಮಾಡಲಾಗಿದೆ. ಅಲ್ಲದೆ ಇವರ ವೇತನ ಪ್ರತಿ ತಿಂಗಳು ಇವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಆದರೆ ಕಳೆದ ೫ ವರ್ಷಗಳಿಂದ ಸಿಸ್ಟರ್ ಹೆಲೆನ್ ಮೊರಾಸ್‌ರವರು ಇವರಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದು, ಮೂಡುಬಿದರೆಯಲ್ಲಿರುವ ಇವರ ಸ್ವಂತ ಮನೆಯಲ್ಲಿ ಮನೆ ಕೆಲಸ ಮಾಡುವಂತೆ ಪೀಡಿಸುತ್ತಿದ್ದು, ಇದಕ್ಕೆ ಒಪ್ಪದ ಹಿನ್ನಲೆಯಲ್ಲಿ ಇವರ ವಿರುದ್ಧ ಸ್ವಸಹಾಯ ಸಂಘಗಳ ಸದಸ್ಯರಿಗೆ ಸುಳ್ಳು ಸುದ್ದಿಗಳನ್ನು ಹರಡುವ ಜೊತೆಗೆ ೧೦ ವರ್ಷಗಳವರೆಗೆ ನಿರಂತರವಾಗಿ ಇವರ ಪಿ.ಎಫ್ ಹಣ ಪಾವತಿಸಿದರೆ ೬೦ ವರ್ಷಗಳ ನಂತರ ಪ್ರತಿ ತಿಂಗಳು ೨ ರಿಂದ ೩ ಸಾವಿರ ರು. ಪಿಂಚಣಿ ಬರುತ್ತದೆ ಎಂಬ ಸಂಕಟದಿಂದ ಇವರ ಜೊತೆಗೆ ಶಿವಮೊಗ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ೧೦ ರಿಂದ ೧೨ ಜನರನ್ನು ಸಹ ಅರ್ಧದಲ್ಲಿಯೇ ಕೆಲಸದಿಂದ ತೆಗೆದು ಹಾಕಿದ್ದಾರೆಂದು ದೂರಲಾಯಿತು.  
    ಈ ನಡುವೆ ವಿನ್ನಿ ಡಿಸೋಜಾರವರು ಸ್ಕೂಲ್ ಅಥವಾ ಸೇವಾ ಕೇಂದ್ರ ಅಥವಾ ಮಹಿಳಾ ಮಂಡಳಿಗಳ ಒಕ್ಕೂಟದಲ್ಲಿ ಯಾವುದೇ ಕೆಲಸ ನಿರ್ವಹಿಸಿರುವುದಿಲ್ಲ. ಈ ಹಿನ್ನಲೆಯಲ್ಲಿ ಇವರಿಗೆ ಯಾವುದೇ ವೇತನವಾಗಲಿ, ಪಿ.ಎಫ್ ಹಣವಾಗಲಿ ಪಾವತಿಸಿರುವುದಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೆಂಟ್ ಚಾರ್ಲ್ಸ್ ಹೈಸ್ಕೂಲ್ ಸುಳ್ಳು ಮಾಹಿತಿ ನೀಡಿರುವುದನ್ನು ಸಮಿತಿ ವತಿಯಿಂದ ಖಂಡಿಸಲಾಯಿತು. 
    ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಪಿ.ಎಫ್ ಕಛೇರಿಯಿಂದ ಮಾಹಿತಿ ಪಡೆದುಕೊಂಡು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. 
    ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದರು. ವಿನ್ನಿ ಡಿಸೋಜಾ, ಮೇರಿಯಮ್ಮ ಮತ್ತು ಗ್ರೇಸಿ ಹಾಗು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಸೇರಿದಂತೆ ಇನ್ನಿತರರು ಪ್ರಾಲ್ಗೊಂಡಿದ್ದರು. 

Sunday, February 16, 2025

ಪ್ಯಾರಾ ಅಥ್ಲೆಟಿಕ್ಸ್ : ರಾಷ್ಟ್ರಮಟ್ಟಕ್ಕೆ ಎಂ.ಜಿ ಅಭಿಜಿತ್ ಆಯ್ಕೆ

ಎಂ.ಜಿ ಅಭಿಜಿತ್  
    ಭದ್ರಾವತಿ: ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದ ವಿಕಲಚೇತನ ಎಂ.ಜಿ ಅಭಿಜಿತ್ ೨೩ನೇ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. 
    ಚೆನ್ನೈ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಫೆ.೧೭ ರಿಂದ ೨೦ರವರೆಗೆ ಕ್ರೀಡಾಕೂಟ ನಡೆಯಲಿದ್ದು, ಅಭಿಜಿತ್ ೧೦೦ ಮೀಟರ್ ಹಾಗು ೪೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. 
    ಅಭಿಜಿತ್ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು. ಇವರಿಗೆ ಸಿದ್ದಾರ್ಥ ಅಂಧರ ಕೇಂದ್ರ  ಅಧ್ಯಕ್ಷ ಶಿವಬಸಪ್ಪ, ಆಡಳಿತಾಧಿಕಾರಿ ಶಾರದ ಶಿವಬಸಪ್ಪ ಮತ್ತು ಕಾರ್ಯದರ್ಶಿ ಎಂ. ಗುರುಮೂರ್ತಿ ಅಭಿನಂದಿಸಿದ್ದಾರೆ.