ಭದ್ರಾವತಿಯಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಉಮೇಶ್ ನೇತೃತ್ವದಲ್ಲಿ ಬೆಂಗಳೂರಿನ ಹಿರಿಯ ವಕೀಲರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಭದ್ರಾವತಿ: ಬೆಂಗಳೂರಿನಲ್ಲಿ ವಕೀಲರ ಪರಿಷತ್ ಸಹ ಅಧ್ಯಕ್ಷ, ಹಿರಿಯ ನ್ಯಾಯವಾದಿ ಸದಾಶಿವರೆಡ್ಡಿ ಅವರ ಮೇಲೆ ನಡೆದ ಹಲ್ಲೆ ಮತ್ತು ಕಚೇರಿ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿ ರಾಜ್ಯ ವಕೀಲರ ಪರಿಷತ್ ಕರೆ ಮೇರೆಗೆ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ಬೆಂಬಲಿಸಿ ನಗರದಲ್ಲಿ ತಾಲೂಕು ವಕೀಲರ ಸಂಘದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಉಮೇಶ್ ಮಾತನಾಡಿ, ನ್ಯಾಯವಾದಿಗಳ ಮೇಲಿನ ಹಲ್ಲೆ, ಜೀವಹಾನಿ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಅದರಲ್ಲೂ ನ್ಯಾಯಾಲಯದ ಆವರಣದಲ್ಲಿ ಹಲ್ಲೆ ಮಾಡಿರುವುದು ವಿಷಾದನೀಯ ಸಂಗತಿಯಾಗಿದೆ. ಇದರಿಂದ ವೃತ್ತಿನಿರತರಿಗೆ ಜೀವ ಭದ್ರತೆ ಇಲ್ಲದಂತಾಗಿದೆ. ಸರ್ಕಾರ ತಕ್ಷಣ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯವಾದಿಗಳ ಸಂರಕ್ಷಣೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಹಿರಿಯ ನ್ಯಾಯವಾದಿ ಸದಾಶಿವ ರೆಡ್ಡಿ ಅವರ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಆರಂಭದಲ್ಲಿ ನ್ಯಾಯವಾದಿಗಳಿಂದ ಕೈ ತೋಳಿಗೆ ಕೆಂಪು ಪಟ್ಟಿಕಟ್ಟಿಕೊಂಡು ನ್ಯಾಯಾಲಯದ ಆವರಣದಿಂದ ಘೋಷಣೆ ಕೂಗುತ್ತಾ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಅಂತಿಮವಾಗಿ ಉಪ ತಹಸೀಲ್ದಾರ್ ಮಂಜಾನಾಯ್ಕ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ನಾಗರಾಜ, ಕಾರ್ಯದರ್ಶಿ ರಾಜೇಶ್, ಸಹಕಾರ್ಯದರ್ಶಿ ಹರೀಶ್ ಬರ್ಗೆ, ಪ್ರಮುಖರಾದ ಆದರ್ಶ, ಹೇಮಾ, ಪವನ್ ಸೇರಿದಂತೆ ಸಂಘದ ಬಹುತೇಕ ಸದಸ್ಯರು ಪಾಲ್ಗೊಂಡಿದ್ದರು.