Wednesday, April 30, 2025

ಮೇ.೧ರಂದು ಇಎಸ್‌ಐ ಚಿಕಿತ್ಸಾಲಯದಲ್ಲಿ ಕಾರ್ಮಿಕರ ದಿನಾಚರಣೆ


    ಭದ್ರಾವತಿ : ಶಿವಮೊಗ್ಗ ಜಿಲ್ಲಾ ಇಎಸ್‌ಐ ವಿಮಾದಾರರ ಹಾಗು ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮೇ.೧ರಂದು ಕಾರ್ಮಿಕರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. 
    ನಗರದ ಜನ್ನಾಪುರ ಇಎಸ್‌ಐ ಚಿಕಿತ್ಸಾಲಯ(ಬಂಟರ ಭವನ)ದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಕಾರ್ಮಿಕರ ದಿನಾಚರಣೆ ನಡೆಯಲಿದ್ದು, ಶಿವಮೊಗ್ಗ ಜಿಲ್ಲಾ ಇಎಸ್‌ಐ ವಿಮಾದಾರರ ಹಾಗು ಇತರೆ ಕಾರ್ಮಿಕ ಕ್ಷೇಮಾಭಿವೃದ್ಧಿ ಸಂಘದ ರಾಜಾಸಾಬ್ ಎಚ್. ನಂದಿಹಳ್ಳಿಯವರು ಅಧ್ಯಕ್ಷತೆವಹಿಸಲಿದ್ದಾರೆ. 
    ನಿವೃತ್ತ ಆಡಳಿತ ವಿಮಾ ವೈದ್ಯಾಧಿಕಾರಿ ಡಾ. ಎಚ್.ಆರ್ ವಿಜಯಮೂರ್ತಿ, ವಿಮಾ ವೈದ್ಯಾಧಿಕಾರಿ ಡಾ. ಈಶ್ವರಪ್ಪ, ನಗರದ ನಯನ ಕಣ್ಣಿನ ಆಸ್ಪತ್ರೆ ವೈದ್ಯ ಡಾ. ಕುಮಾರ್, ನಿವೃತ್ತ ಕಾರ್ಮಿಕ ಅಧಿಕಾರಿ ವಿಶ್ವನಾಥ್ ಮತ್ತು ಇಎಸ್‌ಐಸಿ ಸ್ಥಳೀಯ ಕಛೇರಿ ವ್ಯವಸ್ಥಾಪಕಿ ಮಂಜುಳಾ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 
    ಕಾರ್ಮಿಕ ದಿನಾಚರಣೆ ಅಂಗವಾಗಿ ನೂತನವಾಗಿ ರಚನೆಯಾಗಿರುವ ವಿಭಾಗದ ಸಂಘದ ಕಾರ್ಯಕರ್ತರ ಪದಗ್ರಹಣ ಹಾಗು ಇಎಸ್‌ಐ ಕಾರ್ಮಿಕರಿಗೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಕಾರ್ಮಿಕರ ದಿನಾಚರಣೆ ಅಂಗವಾಗಿ ಉಚಿತ ಸಸಿಗಳ ವಿತರಣೆ


    ಭದ್ರಾವತಿ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಕಾರ್ಮಿಕರ ದಿನಾಚರಣೆ ಅಂಗವಾಗಿ ಮೇ.೧ರಂದು ಸಾರ್ವಜನಿಕರಿಗೆ ಉಚಿತ ಸಸಿಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 
    ಕಾರ್ಖಾನೆ ಮುಖ್ಯದ್ವಾರದ ಬಳಿ ಹೈಬ್ರಿಡ್ ನುಗ್ಗೆ, ಪಪ್ಪಾಯಿ, ತುಳಸಿ ಮತ್ತು ಹೊಂಗೆ ಸಸಿಗಳನ್ನು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆವರೆಗೆ ವಿತರಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕ ಸಂಪರ್ಕ ಇಲಾಖೆ ಕೋರಿದೆ. 

೧೨ನೇ ಶತಮಾನದಲ್ಲಿ ಕ್ರಾಂತಿಕಾರಿ ಸಮಾಜ ನಿರ್ಮಾಣ : ಬಸವಣ್ಣನವರ ಆದರ್ಶಗಳು ಸರ್ವ ಕಾಲಕ್ಕೂ ಬೆಳಕು

ಶ್ರೀ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಸಾಹಿತಿ, ಚಿಂತಕ ಚಟ್ನಳ್ಳಿ ಮಹೇಶ್ 

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ಮತು ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ  ಹಳೇನಗರದ ಕನಕಮಂಟಪದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ : ೧೨ನೇ ಶತಮಾನದಲ್ಲಿ ಶರಣರು ರೂಪಿಸಿದ ಸಮಾಜ ನಿಜಕ್ಕೂ ಕ್ರಾಂತಿಕಾರಿ ಸಮಾಜವಾಗಿದ್ದು, ಜಗಜ್ಯೋತಿ ಬಸವಣ್ಣನವರ ಆದರ್ಶಗಳು ಸರ್ವ ಕಾಲಕ್ಕೂ ಬೆಳಕಾಗಿವೆ ಎಂದು ಸಾಹಿತಿ, ಚಿಂತಕ ಚಟ್ನಳ್ಳಿ ಮಹೇಶ್ ಹೇಳಿದರು. 
    ಅವರು ಬುಧವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ಮತು ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಹಳೇನಗರದ ಕನಕಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ಆಧುನಿಕತೆಯ ಸ್ಪರ್ಶವಿಲ್ಲದ, ಅಸಮಾನತೆಯಿಂದ ಕೂಡಿರುವ ಕಾಲಘಟ್ಟದಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಕ್ರಾಂತಿಕಾರಿ ಸುಧಾರಣೆ ತಂದವರು ೧೨ನೇ ಶತಮಾನದ ಶರಣರು. ಬಸವಣ್ಣನವರ ಒಂದೊಂದು ವಚನಗಳಲ್ಲೂ ಅದ್ಭುತವಾದ ಪರಿಕಲ್ಪನೆಗಳಿವೆ. ನುಡಿ ಮತ್ತು ನಡೆ ಎರಡನ್ನೂ ಒಂದಾಗಿಸಿಕೊಂಡು ಸಮಸಮಾಜ ನಿರ್ಮಾಣ ಮಾಡಿದರು. ಜ್ಞಾನಕ್ಕೆ ಹೆಚ್ಚಿನ ಗೌರವ ನೀಡಿ ದಾಸೋಹ ಮತ್ತು ಕಾಯಕದ ಮಹತ್ವ ಸಮಾಜಕ್ಕೆ ತಿಳಿಸಿಕೊಟ್ಟಿದ್ದಾರೆ. ಇಂತಹ ಮಹಾನ್ ನಾಯಕನ ಜನ್ಮದಿನ ಕೇವಲ ಒಂದು ದಿನಕ್ಕೆ ಸೀಮಿತವಲ್ಲ ಎಂದರು. 
    ಮುಂದಿನ ದಿನಗಳಲ್ಲಿ ಸರ್ಕಾರ ಬಸವಣ್ಣನವರ ಜನ್ಮದಿನ ಇನ್ನೂ ವಿಶೇಷವಾಗಿ ಆಚರಿಸಬೇಕು. ಅವರ ಜನ್ಮದಿನದಂದು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ವಿಚಾರಗೋಷ್ಠಿ, ವಚನ ಗಾಯನ ಸ್ಪರ್ಧೆ, ರಸಪ್ರಶ್ನೆ ಸೇರಿದಂತೆ ವಿಶೇಷ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಬಸವಣ್ಣನವರ ವಿಚಾರಧಾರೆಗಳನ್ನು ತಿಳಿಸುವ ಕಾರ್ಯ ಕೈಗೊಳ್ಳಬೇಕೆಂದು ಶಾಸಕರ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು. 
    ಬಸವಮಂಟಪದ ಸುಮಾ ಸುನೀಲ್ ಮಾತನಾಡಿ, ವಿಶ್ವ ಗುರು ಬಸವಣ್ಣನವರು ಜಗತ್ತಿನ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಜಗತ್ತಿನಲ್ಲಿ ಮಹಿಳೆಯರಿಗೆ ಮೊಟ್ಟಮೊದಲು ಸಮಾನತೆ ನೀಡಿದವರು, ಸಮಾಜದ ಅತ್ಯಂತ ಕೆಳಗಿನ, ಶೋಷಿತ, ಅಸ್ಪೃಶ್ಯ ಸಮುದಾಯದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದು ಉನ್ನತ ಸ್ಥಾನಮಾನಗಳನ್ನು ನೀಡಿ ಗೌರವಿಸಿದ ಮೊಟ್ಟ ಮೊದಲ ವ್ಯಕ್ತಿ ಎಂದರೆ ಬಸವಣ್ಣನವರು. ಜ್ಞಾನಕ್ಕೆ ಮೊದಲ ಆದ್ಯತೆ ನೀಡಿದವರು, ಕಾಯಕ ಹಾಗು ದಾಸೋಹದ ಪರಿಕಲ್ಪನೆ ಮೂಡಿಸಿದವರು ಬಸವಣ್ಣನವರು. ಇಂತಹ ಮಹಾನ್ ವ್ಯಕ್ತಿಯ ಜನ್ಮದಿನ ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ. ಬಸವಣ್ಣವರ ಬದುಕು ಹಾಗು ಆದರ್ಶತನ ನಾವೆಲ್ಲರೂ ರೂಢಿಸಿಕೊಂಡಾಗ ಅವರ ಜನ್ಮದಿನ ಸಾರ್ಥಕಗೊಳ್ಳುತ್ತದೆ ಎಂದರು.  
    ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಸೀಲ್ದಾರ್ ಪರುಸಪ್ಪ ಕುರುಬರ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಸದಸ್ಯರಾದ ವಿ ಕದಿರೇಶ್, ಬಿ.ಕೆ ಮೋಹನ್, ಲತಾ ಚಂದ್ರಶೇಖರ್, ಚನ್ನಪ್ಪ, ಬಸವರಾಜ ಬಿ. ಆನೇಕೊಪ್ಪ, ಅನುಪಮ ಚನ್ನೇಶ್, ಐ.ವಿ ಸಂತೋಷ್ ಕುಮಾರ್, ಹನುಮಂತಪ್ಪ, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ತಾಲೂಕು ವೀರಶೈವ ಸಮಾಜ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ (ಗ್ರಾಮಾಂತರ) ಅಧ್ಯಕ್ಷೆ ಸಾಕಮ್ಮ ಮಹೇಶ್, ಸೂಡಾ ಸದಸ್ಯ ಎಚ್. ರವಿಕುಮಾರ್, ಕುವೆಂಪು ವಿವಿ. ಸಿಂಡಿಕೇಟ್ ಸದಸ್ಯ ಎಂ. ಶಿವಕುಮಾರ್, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರಾದ ಬಿ.ಎನ್ ರಾಜು, ಶಿವುಪಾಟೀಲ್, ಎಸ್. ಮಂಜುನಾಥ್, ಯಲ್ಲಪ್ಪ, ಶಿವಬಸಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಅಕ್ಕನ ಬಳಗದ ಸದಸ್ಯರು ಪ್ರಾರ್ಥಿಸಿದರು. ಸಿದ್ದಾರ್ಥ ಅಂಧರ ಕೇಂದ್ರದ ಕಲಾವಿದರು ನಾಡಗೀತೆ ಹಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. 
    ಇದಕ್ಕೂ ಮೊದಲು ನಗರದ ಬಿ.ಎಚ್ ರಸ್ತೆ, ಅಂಬೇಡ್ಕರ್ ವೃತ್ತದಿಂದ ವಿಶ್ವ ಗುರು ಬಸವಣ್ಣನವರ ಭಾವಚಿತ್ರ ಹಾಗು ಡಾ.ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ತಂಡ ಸೇರಿದಂತೆ ಇನ್ನಿತರ ಕಲಾತಂಡಗಳೊಂದಿಗೆ ಕನಕಮಂಟಪದವರೆಗೂ ಮೆರವಣಿಗೆ ನಡೆಸಲಾಯಿತು. 
 

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ಮತು ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಬುಧವಾರ ಶ್ರೀ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು. 


Tuesday, April 29, 2025

ವಿವಿಧ ಮಹಿಳಾ ಸಂಘಟನೆಗಳಿಂದ ಪೆಹಲ್ಗಾಮ್ ಘಟನೆ ಖಂಡಿಸಿ ಪ್ರತಿಭಟನೆ : ಮನವಿ

ಭದ್ರಾವತಿ ನಗರದ ವಿವಿಧ ಮಹಿಳಾ ಸಂಘಟನೆಗಳಿಂದ ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಅಮಾಯಕ ಪ್ರವಾಸಿಗರ ಕಗ್ಗೊಲೆಯನ್ನು ಖಂಡಿಸಿ ಮಂಗಳವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಮಂಜಾನಾಯ್ಕರವರಿಗೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ : ನಗರದ ವಿವಿಧ ಮಹಿಳಾ ಸಂಘಟನೆಗಳಿಂದ ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಅಮಾಯಕ ಪ್ರವಾಸಿಗರ ಕಗ್ಗೊಲೆಯನ್ನು ಖಂಡಿಸಿ ಮಂಗಳವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಮಂಜಾನಾಯ್ಕರವರಿಗೆ ಮನವಿ ಸಲ್ಲಿಸಲಾಯಿತು. 
    ಇದೊಂದು ಅತ್ಯಂತ ಹೇಯ ಕೃತ್ಯವಾಗಿದೆ. ಅಮಾಯಕ ಪ್ರವಾಸಿಗರ ಮೇಲೆ ಉಗ್ರವಾದಿಗಳ ಕೃತ್ಯ ಎಂದೂ ಊಹಿಸಲು ಅಸಾಧ್ಯ. ನಮ್ಮಲ್ಲಿ ಜಾತಿ ಜಾತಿಗಳ ನಡುವೆ ಒಗ್ಗಟ್ಟು ಇಲ್ಲದಿರುವುದು ಇಂತಹ ಕೃತ್ಯ ನಡೆಸಲು ನೆರವಾಗುತ್ತದೆ. ಮಂದಿನ ದಿನಗಳಲ್ಲಿ ಇಂತಹ ಕೃತ್ಯಗಳಿಗೆ ಕೇಂದ್ರ ಸರಕಾರ ಯಾವುದೇ ಮುಲಾಜಿಲ್ಲದೆ ಅಂತ್ಯ ಹಾಡಬೇಕೆಂದು ಆಗ್ರಹಿಸಲಾಯಿತು. 
  ನಮ್ಮ ದೇಶದ ಒಳಗೆ ಇದ್ದು ಹೊರಗಿನ ಉಗ್ರವಾದಿಗಳಿಗೆ ನೆರವು ನೀಡಿ ಸಹಾಯ ಮಾಡುವವರನ್ನು ಹುಡುಕಿ ಅಂತ್ಯ ಹಾಡಬೇಕು. ಇನ್ನು ಮುಂದೆ ಉಗ್ರವಾದಿಗಳಿಗೆ ಯಾರೂ ಸಹ ಸಹಾಯ ಮಾಡಲು ಹೆದರುವಂತಹ ಪರಿಸ್ಥಿತಿ ನಿರ್ಮಾಣ ಮಾಡಬೇಕು. ಗಡಿಯಲ್ಲಿ ಸೇನಾ ಭದ್ರತೆಯನ್ನು ಹೆಚ್ಚಿಸುವ ಮೂಲಕ ಉಗ್ರರು ದೇಶದ ಒಳಗೆ ನುಸುಳುವುದನ್ನು ತಡೆಯಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಯಿತು.  
  ವಿವಿಧ ಮಹಿಳಾ ಸಂಘಟನೆಗಳ ಪ್ರಮುಖರಾದ ರೂಪಾರಾವ್, ಆರ್.ಎಸ್ ಶೋಭಾ, ಯಶೋಧ, ನಾಗರತ್ನ, ಶೋಭಾ, ಶಾರದಾ, ಮಲ್ಲಿಕಾಂಬ, ವಾಣಿಶ್ರೀ, ಸ್ವಪ್ನ ಸೇರಿದಂತೆ ಇತರರು ಸಭೆಯನ್ನುದ್ದೇಶಿಸಿ ಮಾತನಾಡಿದರು. 
    ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ವೀರಶೈವ ಲಿಂಗಾಯಿತ ಮಹಿಳಾ ಸಮಾಜ, ಕದಳಿ ವೇದಿಕೆ, ಶಾಶ್ಚತಿ ಮಹಿಳಾ ಸಮಾಜ, ಮಹಿಳಾ ಸೇವಾ ಸಮಾಜ ಮತ್ತು ಕಸ್ತೂರಬಾ ವುಮೆನ್ಸ್ ಅಸೋಸಿಯೇಷನ್ ಪದಾಧಿಕಾರಿಗಳು, ಸದಸ್ಯರು ಹಾಗು ನಿರ್ಮಲಾ ಆಸ್ಪತ್ರೆ ವಿದ್ಯಾರ್ಥಿನಿಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
    ಇದಕ್ಕೂ ಮೊದಲು ರಂಗಪ್ಪ ವೃತ್ತದಲ್ಲಿ ರಸ್ತೆ ತಡೆಯೊಂದಿಗೆ ಮಾನವ ಸರಪಳಿ ನಿರ್ಮಿಸಿ ನಂತರ ತಾಲೂಕು ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. 

ಕೂಡ್ಲಿಗೆರೆ ಟಿವಿಎಸ್ ಫಾರಂನಲ್ಲಿ ಚಿರತೆ ಸಿಸಿ ಕ್ಯಾಮೆರಾದಲ್ಲಿ ಸೆರೆ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮ ಸಮೀಪದ ಎಪಿಎಂಸಿ ಮಾಜಿ ಸದಸ್ಯೆ ಟಿ.ವಿ ಸುಜಾತರವರ ಟಿವಿಎಸ್ ಫಾರಂ ತೋಟದ ಮನೆಯಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ದೃಶ್ಯ ಸೋಮವಾರ ರಾತ್ರಿ ಕಂಡು ಬಂದಿದೆ.
    ಭದ್ರಾವತಿ: ತಾಲೂಕಿನ ಕೂಡ್ಲಿಗೆರೆ ಗ್ರಾಮ ಸಮೀಪದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಮಾಜಿ ಸದಸ್ಯೆ ಟಿ.ವಿ ಸುಜಾತ ಅವರ ಟಿವಿಎಸ್ ಫಾರಂ ತೋಟದ ಮನೆಯಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ದೃಶ್ಯ ಸೋಮವಾರ ರಾತ್ರಿ ಕಂಡು ಬಂದಿದೆ.
    ರಾತ್ರಿ ೯.೩೦ರ ಸಮಯದಲ್ಲಿ ಅವರ ಸಾಕು ನಾಯಿಗಳು ಬೊಗಳಿದ ಕಾರಣ ಮನೆಯೊಳಗಿನಿಂದ ಬಾಗಿಲ ಬಳಿ ನಿಂತು ಗಮನಿಸಿದಾಗ ಮನೆಯ ಜಗಲಿಕಟ್ಟೆಯ ಮೇಲಿಂದ ಚಿರತೆ ಹಾದು ಹೋಗುವುದನ್ನು ಕಂಡು ಭಯಭೀತರಾಗಿದ್ದಾರೆ.      ಸುಜಾತರವರು ಕೋಡಿಹಳ್ಳಿ ಸತೀಶ್, ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜಣ್ಣ ಅವರಿಗೆ ಮಾಹಿತಿ ನೀಡಿ ಅವರನ್ನು ಕರೆಸಿ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಚಿರತೆ ನಾಯಿಗಳ ಬೇಟೆಗೆ ಮೂರ್‍ನಾಲ್ಕು ಬಾರಿ ಮನೆ ಸುತ್ತಾ ಓಡಾಡಿರುವ ದೃಶ್ಯ ಕಂಡು ಬಂದಿದೆ.
    ಅಲ್ಲದೆ ಕಳೆದ ಏ.೧೫ರ ಮಂಗಳವಾರ ಸಹ ಬಂದು ಹೋಗಿದೆ. ಎರಡು ನಾಯಿಗಳು ಮತ್ತು ಒಂದು ಬೆಕ್ಕು ನಾಪತ್ತೆಯಾಗಿದೆ. ಸಿಸಿ ಕ್ಯಾಮರಾದಲ್ಲಿ ನಾಯಿವೊಂದನ್ನು ಹಿಡಿದು ಓಡುವ ದೃಶ್ಯ ಕಂಡು ಬಂದಿದೆ. ವಿಷಯ ತಿಳಿದ ಅರಣ್ಯ ಇಲಾಖೆಯವರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಮನೆಯವರಿಗೆ ಚಿರತೆ ಸೆರೆ ಹಿಡಿಯಲು ಬೋನ್ ಇಡುವುದಾಗಿ ಹಾಗು ಯಾವುದಕ್ಕೂ ಮುಂಜಾಗ್ರತೆ ವಹಿಸುವಂತೆ ತಿಳಿಸಿದ್ದಾರೆಂದು ತಿಳಿದು ಬಂದಿದೆ. 

ಕನ್ನಡದ ತೇರು ಎಳೆಯಲು ಶಕ್ತಿಮೀರಿ ಶ್ರಮಿಸುವೆ

ತಾಲೂಕು ಕಸಾಪ ನೂತನ ಅಧ್ಯಕ್ಷರಾಗಿ ಎಂಪಿಎಂ ಹೆಚ್.ತಿಮ್ಮಪ್ಪ ಅಧಿಕಾರ ಸ್ವೀಕಾರ


ಭದ್ರಾವತಿ ತಾಲೂಕು ಕಸಾಪ ನೂತನ ಅಧ್ಯಕ್ಷರಾಗಿ ಎಂಪಿಎಂ ಹೆಚ್.ತಿಮ್ಮಪ್ಪ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಅಧ್ಯಕ್ಷ ಕೂಡ್ಲುಯಜ್ಞಯ್ಯ ಕಸಾಪ ಬಾವುಟ ಹಸ್ತಾಂತರಿಸಿದರು.
    ಭದ್ರಾವತಿ:  ಕನ್ನಡದ ತೇರು ಎಳೆಯಲು ಸದಾಕಾಲ ಶ್ರಮಿಸುತ್ತಿದ್ದು, ಪ್ರಸ್ತುತ ಜವಾಬ್ದಾರಿ ಹೆಚ್ಚಿರುವುದರಿಂದ ಮತ್ತಷ್ಟು ಆಸಕ್ತಿ ವಹಿಸಿ ಕನ್ನಡದ ಸೇವೆ ಮಾಡುವುದಾಗಿ ಎಂಪಿಎಂ ಕಾರ್ಖಾನೆ ನಿವೃತ್ತ ಕಾರ್ಮಿಕ ಮುಖಂಡ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಎಚ್ ತಿಮ್ಮಪ್ಪ ಭರವಸೆ ವ್ಯಕ್ತಪಡಿಸಿದರು.  
    ಅವರು ನ್ಯೂಟೌನ್‌ನಲ್ಲಿರುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ನಡೆದ ಆಯವ್ಯಯ ಮಂಡನಾ ಸಭೆಯಲ್ಲಿ ನಿರ್ಗಮಿತ ಅಧ್ಯಕ್ಷ ಕೂಡ್ಲುಯಜ್ಞಯ್ಯ ಅವರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದರು.
  ೫ ವರ್ಷಗಳ ಅಧಿಕಾರದ ಅವಧಿಯನ್ನು ಒಡಂಬಡಿಕೆಯಂತೆ ಹಂಚಿಕೊಂಡಿದ್ದು, ೩ನೇ ಮತ್ತು ಕಡೇಯ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದೇನೆ. ಪರಿಷತ್‌ನಲ್ಲಿ ಹತ್ತಾರು ವರ್ಷಗಳಿಂದ ಸೇವೆ ಮಾಡಿಕೊಂಡು ಬಂದಿರುವ ನಾನು ಪ್ರಸ್ತುತ ಕಾರ್ಯದರ್ಶಿಯಾಗಿದ್ದು, ಇದೀಗ ಜಿಲ್ಲಾಧ್ಯಕ್ಷರು ನನ್ನನ್ನು ನೇಮಕಗೊಳಿಸಿದ್ದಾರೆ ಎಂದರು. 
    ಪ್ರಾಮಾಣಿಕವಾಗಿ ಯಾವುದೇ ಲೋಪದೋಷಗಳಿಲ್ಲದೆ ಎಲ್ಲರ ಸಹಕಾರ ಪಡೆದು ವಿಭಿನ್ನ ಕಾರ್ಯಕ್ರಮಗಳ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಪರಿಷತ್ ಕಾರ್ಯ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸಲಾಗುವುದು. ಕನ್ನಡದ ಕೆಲಸಗಳಿಗೆ ಎಲ್ಲರ ಸಹಕಾರ ಬೇಕಾಗಿದೆ ಎಂದರು.
    ನಿರ್ಗಮಿತ ಅಧ್ಯಕ್ಷ ಕೂಡ್ಲುಯಜ್ಞಯ್ಯ ನೂತನ ಅಧ್ಯಕ್ಷರಿಗೆ ಕಸಾಪ ಬಾವುಟ ಹಸ್ತಾಂತರ ಮಾಡಿ ಮಾತನಾಡಿ, ನನ್ನ ಅಧಿಕಾರದ ಅವಧಿಯಲ್ಲಿ ಸರ್ವರೂ ನೀಡಿದ ಸಹಕಾರ ಅಮೂಲ್ಯವಾದದ್ದು. ಸದಾ ಕಾಲ ಪರಿಷತ್ ಕಾರ್ಯ ಚಟುವಟಿಕೆಗಳಿಗೆ ನನ್ನ ಬೆಂಬಲವಿರುತ್ತದೆ ಎಂದರು. 
    ಖಜಾಂಚಿ ಪ್ರಸನ್ನಕುಮಾರ್ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು. ತಿಮ್ಮಪ್ಪ ವರದಿ ಮಂಡಿಸಿದರು. ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಸ್ವಾಮಿ, ಹೊಳೆಹೊನ್ನೂರು ಹೋಬಳಿ ಅಧ್ಯಕ್ಷ ಚೆನ್ನಪ್ಪ, ಮುಖಂಡರುಗಳಾದ ನಾಗೋಜಿರಾವ್, ಪ್ರಶಾಂತ್, ಕಮಲಾಕರ್, ಎಂ.ಎಸ್.ಸುಧಾಮಣಿ, ತಿಪ್ಪಮ್ಮ, ಪ್ರಕಾಶ್ ನೂತನ ಅಧ್ಯಕ್ಷರಿಗೆ ಶುಭ ಕೋರಿದರು. ಕಾರ್ಯದರ್ಶಿ ಎಂ.ಇ.ಜಗದೀಶ್ ನಿರೂಪಿಸಿ, ಪ್ರಸನ್ನಕುಮಾರ್ ಸ್ವಾಗತಿಸಿ, ಮೋಹನ್ ವಂದಿಸಿದರು.

ದೇವಸ್ಥಾನಗಳಿಗೆ ಮಹತ್ವದ ಸ್ಥಾನಮಾನಗಳಿವೆ, ಪುಣ್ಯದ ಕಾರ್ಯಗಳಲ್ಲಿ ಕೈಜೋಡಿಸಿ : ಶ್ರೀ ಸಾಯಿನಾಥ ಸ್ವಾಮೀಜಿ

ಭದ್ರಾವತಿ ನ್ಯೂ ಕಾಲೋನಿ (ಹುಡ್‌ಯಾರ್ಡ್ ಶೆಡ್) ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ನೂತನ ಗೋಪುರ ಉದ್ಘಾಟನೆ ಹಾಗು ಕಲಶ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶಿವಮೊಗ್ಗ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿ ಪಾಲ್ಗೊಂಡು ಭಕ್ತರಿಗೆ ಆಶೀರ್ವಚನ ನೀಡಿದರು. 
ಭದ್ರಾವತಿ : ವೈದಿಕರ ನೆರವಿನೊಂದಿಗೆ ಧಾರ್ಮಿಕ ಆಚರಣೆಗಳ ಮೂಲಕ ಭಕ್ತರು ತಮ್ಮ ಇಸ್ಟಾರ್ಥಗಳನ್ನು ದೇವರ ಬಳಿ ಪ್ರಾರ್ಥಿಸಲು ದೇವಾಲಯಗಳು ಸಹಕಾರಿಯಾಗಿವೆ. ಈ ಹಿನ್ನಲೆಯಲ್ಲಿ ದೇವಸ್ಥಾನಗಳಿಗೆ ಮಹತ್ವದ ಸ್ಥಾನಮಾನಗಳಿವೆ ಎಂದು ಶಿವಮೊಗ್ಗ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿ ಹೇಳಿದರು. 
ಶ್ರೀಗಳು ಮಂಗಳವಾರ ನಗರದ ನ್ಯೂ ಕಾಲೋನಿ (ಹುಡ್‌ಯಾರ್ಡ್ ಶೆಡ್) ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ನೂತನ ಗೋಪುರ ಉದ್ಘಾಟನೆ ಹಾಗು ಕಲಶ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತರಿಗೆ ಆಶೀರ್ವಚನ ನೀಡಿದರು. 
ದೇವಸ್ಥಾನಗಳು ಪುಣ್ಯದ ಸ್ಥಳ, ದೇವರ ಆರಾಧನೆಯ ಸ್ಥಳ. ಇದನ್ನು ನಾವುಗಳು ಅರಿತು ಪುಣ್ಯದ ಕಾರ್ಯಗಳಲ್ಲಿ ಕೈಜೋಡಿಸಬೇಕು. ಇಂತಹ ಧಾರ್ಮಿಕ ಆಚರಣೆಗಳು ಹೆಚ್ಚಾಗಿ ನಡೆಯಬೇಕು ಎಂದರು. 


ಭದ್ರಾವತಿ ನ್ಯೂ ಕಾಲೋನಿ (ಹುಡ್‌ಯಾರ್ಡ್ ಶೆಡ್) ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ನೂತನ ಗೋಪುರ ಉದ್ಘಾಟನೆ ಹಾಗು ಕಲಶ ಪ್ರತಿಷ್ಠಾಪನೆ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. 
        ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಮುರುಗೇಶ್ ಸ್ವಾಮೀಜಿ ಉಪಸ್ಥಿತರಿದ್ದು, ಭಕ್ತರಿಗೆ ಆಶೀರ್ವದಿಸಿದರು. ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಪ್ರಾಂಶುಪಾಲರಾದ ಡಾ. ಹರಿಣಾಕ್ಷಿ, ದೇವಸ್ಥಾನ ಸೇವಾ ಸಮಿತಿ ಪದಾಧಿಕಾರಿಗಳು, ದಾನಿಗಳು, ಚುನಾಯಿತ ಪ್ರತಿನಿಧಿಗಳು, ಗಣ್ಯರು ಉಪಸ್ಥಿತರಿದ್ದರು.  
    ಗೋಪುರ ಉದ್ಘಾಟನೆ ಹಾಗು ಕಲಶ ಪ್ರತಿಷ್ಠಾಪನೆ ಅಂಗವಾಗಿ ಬೆಳಿಗ್ಗೆ ದೇವರಿಗೆ ಕಲಾತತ್ವ ಹೋಮ, ಅಭಿಷೇಕ, ಮಹಾಮಂಗಳಾರತಿ, ಶಿಖರ ಪ್ರತಿಷ್ಠೆ, ಅಧಿವಾಸ ಹೋಮ, ನವಕಲಶ ಸ್ಥಾಪನೆ ಕಾರ್ಯಕ್ರಮಗಳು ಜರುಗಿದವು.  
    ಸೇವಾಕರ್ತರು, ಸುರಗೀತೋಪು, ಜೆಪಿಎಸ್ ಕಾಲೋನಿ, ನ್ಯೂ ಕಾಲೋನಿ, ನ್ಯೂಟೌನ್, ಜನ್ನಾಪುರ, ಕಾಗದನಗರ, ಬಾಲಭಾರತಿ, ಬೆಣ್ಣೆಕೃಷ್ಣ ಸರ್ಕಲ್, ಆಂಜನೇಯ ಅಗ್ರಹಾರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳು ಪಾಲ್ಗೊಂಡಿದ್ದರು.