ತಪ್ಪಿತಸ್ಥ ಅರಣ್ಯ ಇಲಾಖೆ ಸಿಬ್ಬಂದಿಗಳು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ : ಶಿವಕುಮಾರ್ ಆಗ್ರಹ
ಅರಣ್ಯ ಇಲಾಖೆ ಸಿಬ್ಬಂದಿಗಳು ಭದ್ರಾವತಿ ತಾಲೂಕಿನ ಶಿವಪುರ ಗ್ರಾಮದ ಭದ್ರಾ ನಾಲೆಯಲ್ಲಿ ಮೃತಪಟ್ಟ ಕಾಡುಕೋಣದ ದೇಹ ಜೆಸಿಬಿ ಯಂತ್ರ ಬಳಸಿ ತುಂಡು ಮಾಡಿ ಭದ್ರಾ ನದಿ ಕಾಲುವೆಗೆ ಎಸೆದಿರುವುದು.
ಭದ್ರಾವತಿ: ಮೃತಪಟ್ಟ ಕಾಡುಕೋಣದ ಮರಣೋತ್ತರ ಪರೀಕ್ಷೆ ನಡೆಸದೆ ಹಾಗು ಮೃತದೇಹ ತುಂಡು ಮಾಡಿ ಭದ್ರಾ ನದಿ ಕಾಲುವೆಗೆ ಎಸೆದು ಅರಣ್ಯ ಇಲಾಖೆ ಸಿಬ್ಬಂದಿಗಳು ನಿರ್ಲಕ್ಷ್ಯತನದಿಂದ ವರ್ತಿಸಿದ್ದಾರೆ. ಈ ಸಂಬಂಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಾಮಾಜಿಕ ಕಾರ್ಯಕರ್ತ ಶಿವಕುಮಾರ್ ಆಗ್ರಹಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ತಾಲೂಕಿನ ಶಿವಪುರ ಗ್ರಾಮದ ಭದ್ರಾ ನಾಲೆಯಲ್ಲಿ ಮೃತಪಟ್ಟ ಕಾಡುಕೋಣದ ದೇಹ ಜೆಸಿಬಿ ಯಂತ್ರ ಬಳಸಿ ತುಂಡು ಮಾಡಿ ಮೇ.೬ರಂದು ಬೆಳಗ್ಗೆ ೮ ಗಂಟೆ ಸಮಯದಲ್ಲಿ ಕಾಲುವೆಯಿಂದ ಎಸೆದಿದ್ದು, ಇದನ್ನು ಸ್ಥಳೀಯರು ಗಮನಿಸಿ ಚಿತ್ರೀಕರಿಸಿಕೊಂಡಿದ್ದಾರೆ. ಮೇ.೭ರಂದು ಮಧ್ಯಾಹ್ನ೩ ಗಂಟೆ ಸಮಯದಲ್ಲಿ ಚಿತ್ರೀಕರಿಸಿಕೊಂಡಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದನ್ನು ಗಮನಿಸಿದ ಸಿಬ್ಬಂದಿಗಳು ತಕ್ಷಣ ಸಂಜೆ ೫ ಗಂಟೆ ಸಮಯದಲ್ಲಿ ನೀರಿನಲ್ಲಿ ಸುಮಾರು ೮ ಕಿ.ಮೀ ದೂರ ತೇಲಿಕೊಂಡು ಬಂದು ಕೆಂಚಮ್ಮನಹಳ್ಳಿ ನಾಲೆ ಸೇತುವೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ತುಂಡು ಮಾಡಿದ್ದ ದೇಹಗಳನ್ನು ಪುನಃ ಜೆಸಿಬಿ ಯಂತ್ರ ಬಳಸಿ ಹೊರ ತೆಗೆದಿದ್ದಾರೆಂದು ಶಿವಕುಮಾರ್ ಆರೋಪಿಸಿದ್ದಾರೆ.
ಅಲ್ಲದೆ ನಾಲೆ ಸೇತುವೆಯಿಂದ ಹೊರ ತೆಗೆದ ತುಂಡು ಮಾಡಿದ್ದ ದೇಹಗಳನ್ನು ಅಂತರಗಂಗೆ ಪಶು ವೈದ್ಯರನ್ನು ಕರೆಸಿ ಮರಣೋತ್ತರ ಪರೀಕ್ಷೆ ನಡೆಸಿ ತರಾತುರಿಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಅನುಪಸ್ಥಿತಿಯಲ್ಲಿ ಉಕ್ಕುಂದ ಗ್ರಾಮದ ಸ್ಮಶಾನದಲ್ಲಿ ಸುಟ್ಟು ಹಾಕಿದ್ದಾರೆ. ಇದು ವನ್ಯಜೀವಿ ಕಾಯ್ದೆ ಉಲ್ಲಂಘನೆಯಾಗಿದೆ. ಅಲ್ಲದೆ ಮೃತದೇಹ ತುಂಡು ಮಾಡಿ ಕಾಲುವೆಗೆ ಎಸೆದಿರುವುದರಿಂದ ಕಾಡುಕೋಣದ ಸಾವಿಗೆ ನಿಖರವಾದ ಕಾರಣ ಮರಣೋತ್ತರ ಪರೀಕ್ಷೆಯಿಂದ ತಿಳಿದು ಬರುವುದಿಲ್ಲ ಎಂದು ಶಿವಕುಮಾರ್ ದೂರಿದ್ದಾರೆ.
ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳು ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಆದೇಶಿಸುವ ಮೂಲಕ ತಪ್ಪಿತಸ್ಥ ಸಿಬ್ಬಂದಿಗಳು ಹಾಗು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.