Tuesday, May 13, 2025

ಸಿ.ಬಿ.ಎಸ್.ಇ ೧೦ನೇ ತರಗತಿ ಪರೀಕ್ಷೆ : ಶ್ರೀ ಸತ್ಯ ಸಾಯಿ ಜ್ಞಾನಪೀಠ ಶಾಲೆಗೆ ಶೇ.೧೦೦ರಷ್ಟು ಫಲಿತಾಂಶ

ಎ. ಅನನ್ಯ 


ಜಿ.ಎನ್ ಭುವನ
    ಭದ್ರಾವತಿ: ೨೦೨೪-೨೫ನೇ ಶೈಕ್ಷಣಿಕ ಸಾಲಿನ ಸಿ.ಬಿ.ಎಸ್.ಇ  ೧೦ನೇ ತರಗತಿ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ನಗರದ ನ್ಯೂಟೌನ್ ಶ್ರೀ ಸತ್ಯ ಸಾಯಿ ಜ್ಞಾನಪೀಠ-ಸಿ.ಬಿ.ಎಸ್.ಇ ಶಾಲೆ ಶೇ.೧೦೦ರಷ್ಟು ಫಲಿತಾಂಶ ಪಡೆದುಕೊಂಡಿದೆ. .
    ಈ ಬಾರಿ ಪರೀಕ್ಷೆಗೆ ಶಾಲೆಯ ಒಟ್ಟು ೨೯ ವಿದ್ಯಾರ್ಥಿಗಳು ಹಾಜರಿದ್ದು, ಈ ಪೈಕಿ ೧೨ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್) ಹಾಗು  ೧೫ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಮತ್ತು  ೨ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. 


ಎಸ್. ಹಿಮೇಶ್


ಆರ್. ದರ್ಶನ್ 
    ವಿದ್ಯಾರ್ಥಿನಿ ಎ. ಅನನ್ಯ ಶೇ.೯೦, ಜಿ.ಎನ್ ಭುವನ ಶೇ.೮೯, ಎಸ್. ಹಿಮೇಶ್ ಶೇ.೮೮, ಆರ್. ದರ್ಶನ್ ಶೇ.೮೭.೬ ಹಾಗು ಎಂ. ದಿಯಾ ಶೇ.೮೭.೨ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾಗಿದ್ದಾರೆ. 
    ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತಾಧಿಕಾರಿ ಡಿ. ಪ್ರಭಾಕರ್ ಬೀರಯ್ಯ, ಜಂಟಿ ಆಡಳಿತಾಧಿಕಾರಿ ಸೌಮ್ಯ ರೂಪ ಮತ್ತು ಪ್ರಾಂಶುಪಾಲರು ಹಾಗೂ ಶಿಕ್ಷಕ ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿರುತ್ತಾರೆ.

ಭಾರತ-ಪಾಕಿಸ್ತಾನ ಯುದ್ಧ ಮುಂದುವರೆಯಲಿ : ಭಯೋತ್ಪಾದನೆ ನಿರ್ಮೂಲನೆಯಾಗಲಿ

ನ್ಯಾಯವಾದಿ ಮಂಗೋಟೆ ರುದ್ರೇಶ್ 
    ಭದ್ರಾವತಿ: ಭಾರತ-ಪಾಕಿಸ್ತಾನ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲಬಾರದು. ಪಿಓಕೆ ನಮ್ಮ ದೇಶಕ್ಕೆ ಸೇರಬೇಕು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತೀಯ ಸೈನ್ಯ ಕೈಗೊಳ್ಳುತ್ತಿರುವ ನಿರ್ಧಾರಗಳು ಹಾಗು ನಡೆಸುತ್ತಿರುವ ಕಾರ್ಯಾಚರಣೆ ಸರಿಯಾಗಿದೆ ಎಂದು ನ್ಯಾಯವಾದಿ ಮಂಗೋಟೆ ರುದ್ರೇಶ್ ತಿಳಿಸಿದ್ದಾರೆ. 
    ನಗರದ ಹಿರಿಯ ಸಮಾಜವಾದಿ ನಾಯಕರು, ಪ್ರಸಿದ್ದ ನ್ಯಾಯವಾದಿಗಳಾಗಿ ಗುರುತಿಸಿಕೊಂಡಿದ್ದ ದಿವಂಗತ ಮಂಗೋಟೆ ಮುರುಗೆಪ್ಪನವರ ಪುತ್ರ, ನ್ಯಾಯವಾದಿ ಮಂಟೋಟೆ ರುದ್ರೇಶ್‌ರವರು ಭಾರತ-ಪಾಕಿಸ್ತಾನ ಯುದ್ಧ ಕುರಿತು ಸಾಮಾನ್ಯ ನಾಗರಿಕನಾಗಿ ಈ ಯುದ್ಧ ಮುಂದುವರೆಯಬೇಕೆಂದು ಬಯಸುತ್ತೇನೆ ಎಂದರು. 
    ಪಾಕಿಸ್ತಾನ ಭಯೋತ್ಪಾದಕರನ್ನು ರೂಪಿಸುವ ದೇಶವಾಗಿದ್ದು, ಪ್ರಪಂಚದಲ್ಲಿ ಭಯೋತ್ದಾದನೆ ಎಂದ ತಕ್ಷಣ ಮೊದಲಿಗೆ ಪ್ರಸ್ತಾಪಿಸುವ ಹೆಸರು ಪಾಕಿಸ್ತಾನವಾಗಿದೆ. ಈ ಹಿನ್ನಲೆಯಲ್ಲಿ ಭಯೋತ್ಪಾದನೆ ನಿರ್ಮೂಲನೆ ಮಾಡಬೇಕೆಂಬ ಆಶಯ ನನ್ನದಾಗಿದೆ. ಅಲ್ಲದೆ ಪಾಕಿಸ್ತಾನದ ವ್ಯಾಪ್ತಿಯಲ್ಲಿರುವ ಪಿಓಕೆ ನಮ್ಮ ದೇಶ ವಶಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಡೆಯುತ್ತಿರುವ ಯುದ್ಧದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಸೈನ್ಯ ಕೈಗೊಳ್ಳುವ ನಿರ್ಧಾರಗಳು ಹಾಗು ನಡೆಯುತ್ತಿರುವ ಕಾರ್ಯಾಚರಣೆಗೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ. ಅಲ್ಲದೆ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನದ ಮೇಲೆ ಯಾರಿಗೂ ಯಾವುದೇ ರೀತಿ ಅನುಕಂಪ ಬೇಡ. ದೇಶದ ಪ್ರತಿಯೊಬ್ಬರು ಒಂದೇ ನಿಟ್ಟಿನಲ್ಲಿ ಯೋಚಿಸಿ ಇಂತಹ ಕಾರ್ಯಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.  

ಬೈಪಾಸ್ ರಸ್ತೆ ಸಿದ್ದಾಪುರ ಮಾರ್ಗದಲ್ಲಿ ಶಿವಮೊಗ್ಗ-ಭದ್ರಾವತಿ ನಡುವಿನ ಸಂಚಾರಕ್ಕೆ ೪ ಬಸ್‌ಗಳ ವ್ಯವಸ್ಥೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಭದ್ರಾವತಿ ಘಟಕ, ನಗರ ಸಾರಿಗೆ ವಿಭಾಗದಿಂದ  ಬೈ ಪಾಸ್ ರಸ್ತೆ ಸಿದ್ದಾಪುರ ಮಾರ್ಗದಲ್ಲಿ ಶಿವಮೊಗ್ಗ-ಭದ್ರಾವತಿ ನಡುವಿನ ಸಂಚಾರಕ್ಕೆ ಅಧಿಕೃತವಾಗಿ ಹೊಸದಾಗಿ ೪ ಬಸ್‌ಗಳ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. 
    ಭದ್ರಾವತಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಭದ್ರಾವತಿ ಘಟಕ, ನಗರ ಸಾರಿಗೆ ವಿಭಾಗದಿಂದ  ಬೈ ಪಾಸ್ ರಸ್ತೆ ಸಿದ್ದಾಪುರ ಮಾರ್ಗದಲ್ಲಿ ಶಿವಮೊಗ್ಗ-ಭದ್ರಾವತಿ ನಡುವಿನ ಸಂಚಾರಕ್ಕೆ ಅಧಿಕೃತವಾಗಿ ಹೊಸದಾಗಿ ೪ ಬಸ್‌ಗಳ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. 
    ನಗರದ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಹಿನ್ನಲೆಯಲ್ಲಿ ಕಳೆದ ೩ ವರ್ಷಗಳಿಂದ ನಗರದ ಮುಖ್ಯ ಬಸ್ ನಿಲ್ದಾಣದಿಂದ ಉಂಬ್ಳೇಬೈಲ್ ರಸ್ತೆ, ಜಯಶ್ರೀ ವೃತ್ತ, ಮಿಲ್ಟ್ರಿಕ್ಯಾಂಪ್ ಕೃಷ್ಣಪ್ಪ ವೃತ್ತ ಮೂಲಕ ಸಿದ್ದಾಪುರ ಬೈಪಾಸ್ ಮಾರ್ಗವಾಗಿ ಜೇಡಿಕಟ್ಟೆಯಿಂದ ಶಿವಮೊಗ್ಗ-ಭದ್ರಾವತಿ ನಡುವೆ ಕೆಎಸ್‌ಆರ್‌ಟಿಸಿ ಬಸ್ಸುಗಳು ಸಂಚರಿಸುತ್ತಿದ್ದವು. ಇದರಿಂದ ಸಿದ್ದಾಪುರ, ಹುಡ್ಕೋ ಕಾಲೋನಿ,  ಕಾಗದನಗರ, ಮಿಲ್ಟ್ರಿಕ್ಯಾಂಪ್, ಬುಳ್ಳಾಪುರ, ನ್ಯೂಟೌನ್, ಆಂಜನೇಯ ಅಗ್ರಹಾರ, ವಿದ್ಯಾಮಂದಿರ, ಗಣೇಶ್ ಕಾಲೋನಿ, ಜನ್ನಾಪುರ ಸುತ್ತಮುತ್ತಲ ಪ್ರದೇಶದ ಸಾರ್ವಜನಿಕರಿಗೆ ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿತ್ತು.
    ಇತ್ತೀಚೆಗೆ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಕ್ತಾಯಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಿರುವುದರಿಂದ ಎಲ್ಲಾ ವಾಹನಗಳು ರೈಲ್ವೆ ಮೇಲ್ಸೇತುವೆ ಮೇಲೆ ಸಂಚರಿಸುತ್ತಿವೆ. ಇದರಿಂದ ಬೈಪಾಸ್ ರಸ್ತೆ ಸಿದ್ದಾಪುರ ಮಾರ್ಗದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿರುವ ಘಟಕದ ನಗರ ಸಾರಿಗೆ ವಿಭಾಗ ೪ ಬಸ್‌ಗಳ  ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದರ ಸದುಪಯೋಗಪಡೆದುಕೊಳ್ಳುವಂತೆ ಘಟಕದ ಅಧಿಕಾರಿಗಳು ಮನವಿ ಮಾಡಿದ್ದಾರೆ. 

Monday, May 12, 2025

ಯುದ್ಧಕ್ಕೆ ತೆರಳುತ್ತಾರೆಂದು ಮಾಜಿ ಸೈನಿಕರಿಗೆ ಹಣ ನೀಡಲು ಮುಂದಾದ ವ್ಯಕ್ತಿ

ದೇಶ, ಸೈನಿಕರ ಮೇಲಿನ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಿದ ಮಾಜಿ ಸೈನಿಕ ಫ್ರಾನ್ಸಿಸ್ 

 ವಿಶ್ವನಾಥ್ 
    ಭದ್ರಾವತಿ : ಪ್ರಸ್ತುತ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನಲೆಯಲ್ಲಿ ಅನಿವಾರ್ಯ ಸಂದರ್ಭದಲ್ಲಿ ಮಾಜಿ ಸೈನಿಕರನ್ನು ಯುದ್ಧಕ್ಕೆ ಆಹ್ವಾನಿಸಬಹುದು ಎಂಬ ಉದ್ದೇಶದೊಂದಿಗೆ ಅವರಿಗೆ ನೆರವಾಗಲು ಮಾಜಿ ಸೈನಿಕರೊಬ್ಬರಿಗೆ ವ್ಯಕ್ತಿಯೋರ್ವ ಸ್ವಯಂ ಪ್ರೇರಣೆಯಿಂದ ತನ್ನ ಬಳಿ ಜೇಬಿನಲ್ಲಿದ್ದ ಹಣ ನೀಡಲು ಮುಂದಾಗಿರುವ ಘಟನೆ ಬೆಳಕಿಗೆ ಬಂದಿದೆ. 
    ತಾಲೂಕಿನ ಮಾವಿನಕೆರೆ ಗ್ರಾಮದ ನಿವಾಸಿ ಎಲೆಕ್ಟ್ರಿಕಲ್ ಮತ್ತು ಫ್ಲಂಬರ್ ಕೆಲಸ ಮಾಡುವ ವಿಶ್ವನಾಥ್ ಎಂಬುವರು ಮಾಜಿ ಸೈನಿಕ, ಪ್ರಸ್ತುತ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಫ್ರಾನ್ಸಿಸ್ ಅವರಿಗೆ ಯುದ್ಧಕ್ಕೆ ಆಹ್ವಾನಿಸಿರಬಹುದು ಅವರಿಗೆ ಯುದ್ಧದ ಸಂದರ್ಭದಲ್ಲಿ ನೆರವಾಗಲಿ ಎಂಬ ದೇಶಾಭಿಮಾನದೊಂದಿಗೆ ತಮ್ಮ ಜೇಬಿನಲ್ಲಿದ್ದ ಸುಮಾರು ೫ ಸಾವಿರ ರು. ನಗದು ಹಣ ನೀಡಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಫ್ರಾನ್ಸಿಸ್ ಅವರು ನಮಗೆ ಇನ್ನೂ ಯಾವುದೇ ಆಹ್ವಾನ ಬಂದಿಲ್ಲ. ಹಣ ನಿಮ್ಮ ಬಳಿಯೇ ಇರಲಿ ಎಂದು ಹೇಳಿ ಮರಳಿಸಿದ್ದಾರೆ. 
    ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿರುವ ವಿಶ್ವನಾಥ್ ಅವರು ನಮ್ಮ ದೇಶದ ಸೈನಿಕರು ಪಿಓಕೆ ವಶಪಡಿಸಿಕೊಳ್ಳಬೇಕೆಂಬುದು ನನ್ನ ಆಸೆಯಾಗಿದೆ. ಸೈನಿಕರಿಗೆ ದೇಶದ ಪ್ರತಿಯೊಬ್ಬರು ಎಲ್ಲಾ ರೀತಿಯಿಂದಲೂ ನೆರವಾಗಬೇಕೆಂದರು. 
ಫ್ರಾನ್ಸಿಸ್ ಅವರು ಈ ಸಂಬಂಧ ಪ್ರತಿಕ್ರಿಯಿಸಿ ದೇಶ ಮತ್ತು ಸೈನಿಕರ ಮೇಲೆ ಇಟ್ಟಿರುವ ಅಭಿಮಾನಕ್ಕೆ ಚಿರಋಣಿಯಾಗಿದ್ದು, ವಿಶ್ವನಾಥ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಒಂದು ವೇಳೆ ನಮ್ಮನ್ನು ಯುದ್ಧಕ್ಕೆ ಆಹ್ವಾನಿಸಿದ್ದಲ್ಲಿ ಸ್ವಯಂ ಪ್ರೇರಣೆಯಿಂದ ತೆರಳುತ್ತೇನೆ ಎಂದರು. 

ಭಾರತಕ್ಕೆ ಪಿಓಕೆ ಸೇರಲಿ, ಯುದ್ಧಕ್ಕೆ ಆಹ್ವಾನಿಸಿದ್ದಲ್ಲಿ ತೆರಳಲು ಸಿದ್ದ : ಮಾಜಿ ಸೈನಿಕ ವೆಂಕಟಗಿರಿ

ಮಾಜಿ ಸೈನಿಕ ವೆಂಕಟಗಿರಿ
    ಭದ್ರಾವತಿ: ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಯುದ್ಧ ಕೊನೆಯಾಗಬೇಕು. ನಮ್ಮ ದೇಶಕ್ಕೆ ಪಿಓಕೆ ಸೇರಬೇಕು. ಆಗ ಮಾತ್ರ ದೇಶದ ಗಡಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಮಾಜಿ ಸೈನಿಕ ವೆಂಕಟಗಿರಿ ತಿಳಿಸಿದ್ದಾರೆ. 
    ಸುಮಾರು ೧೭ ವರ್ಷ ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ವೆಂಕಟಗಿರಿಯವರು ದೇಶದ ಗಡಿ ಭಾಗದಲ್ಲಿ ನಿರಂತರವಾಗಿ ಅಹಿತಕರ ಘಟನೆಗಳು ನಡೆಯುತ್ತಿವೆ. ದೇಶದ ಸಂಸತ್ ಮೇಲಿನ ದಾಳಿ, ಕಾರ್ಗಿಲ್ ಯುದ್ದ, ಪುಲ್ವಾಮ ದಾಳಿ ಮತ್ತು ಅಮಾಯಕ ಪ್ರವಾಸಿಗರ ಮೇಲಿನ ದಾಳಿ ಎಲ್ಲದಕ್ಕೂ ಮುಖ್ಯ ಕಾರಣ ಪಿಓಕೆಯಾಗಿದೆ. ನಮ್ಮ ಭಾರತೀಯ ಸೈನ್ಯ ಪಿಓಕೆ ವಶಪಡಿಸಿಕೊಂಡು ದೇಶದ ಗಡಿಯಲ್ಲಿ ಹೆಚ್ಚಿನ ಭದ್ರತೆ ಕೈಗೊಂಡಲ್ಲಿ ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ಮರುಕಳುಹಿಸುವುದಿಲ್ಲ ಎಂದರು. 
    ಸೈನಿಕರಲ್ಲಿ ಯಾವುದೇ ಜಾತಿ, ಧರ್ಮ, ಪಕ್ಷ ಭೇದಭಾವವಿಲ್ಲ. ಸೈನಿಕರ ಗುರಿ ಒಂದೇ ಆಗಿದ್ದು, ಸಂಕಷ್ಟದ ಸಮಯದಲ್ಲಿ ದೇಶವನ್ನು ರಕ್ಷಿಸುವುದಾಗಿದೆ. ನಮ್ಮನ್ನು ಯುದ್ಧಕ್ಕೆ ಆಹ್ವಾನಿಸಿದ್ದಲ್ಲಿ ಸ್ವಯಂ ಪ್ರೇರಣೆಯಿಂದ ತೆರಳುವುದಾಗಿ ತಿಳಿಸಿದ್ದಾರೆ. 
    ತಾಲೂಕು ಮಾಜಿ ಸೈನಿಕರ ಸಂಘದ ಕಾರ್ಯದರ್ಶಿಯಾಗಿರುವ ವೆಂಕಟಗಿರಿಯವರು ಈಗಾಗಲೇ ಸಂಘದ ವತಿಯಿಂದ ಯುದ್ಧಕ್ಕೆ ಆಹ್ವಾನಿಸಿದ್ದಲ್ಲಿ ತಾಲೂಕಿನ ಎಲ್ಲಾ ಮಾಜಿ ಸೈನಿಕರು ಸ್ವಯಂ ಪ್ರೇರಣೆಯಿಂದ ಬರುವುದಾಗಿ ರಕ್ಷಣಾ ಇಲಾಖೆಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. 

ವಿಜೃಂಭಣೆಯಿಂದ ಜರುಗಿದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ

ಭದ್ರಾವತಿ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ  ಸೋಮವಾರ ಸ್ವಾಮಿಯ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. 
    ಭದ್ರಾವತಿ : ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ  ಸೋಮವಾರ ಸ್ವಾಮಿಯ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. 
    ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ದೇವಸ್ಥಾನದ ಆವರಣದಲ್ಲಿ ಮಧ್ಯಾಹ್ನ ಸುಮಾರು ೧ ಗಂಟೆಗೆ ಸ್ವಾಮಿಯ ರಥೋತ್ಸವ ಆರಂಭಗೊಂಡಿತು. ಭಕ್ತರು ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಸ್ವಾಮಿಗೆ ಜೈಕಾರ ಹಾಕುವ ಮೂಲಕ ಸಂಭ್ರಮಿಸಿದರು. 
ಭಕ್ತರು ಉತ್ತುತ್ತೆ, ಬಾಳೆಹಣ್ಣು ಅಲಂಕೃತಗೊಂಡ ರಥದ ಕಳಸಕ್ಕೆ ಎಸೆದು ರಥ ಎಳೆಯುವ ಮೂಲಕ ಭಕ್ತಿ ಮೆರೆದರು. ವಿವಿಧ ಮಹಿಳಾ ಭಜನಾ ತಂಡಗಳಿಂದ ಭಜನೆ, ಮಂಗಳ ವಾದ್ಯ, ವಿಶೇಷವಾಗಿ ಮಹಿಳೆಯರಿಂದ ಚಂಡೇವಾದ್ಯ ನಡೆಯಿತು. ಈ ನಡುವೆ ಪವಾಡ ಎಂಬಂತೆ ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಗರುಡ ಪಕ್ಷಿ ಆಕಾಶದಲ್ಲಿ ಕಾಣಿಸಿಕೊಂಡು ಶುಭ ಘಳಿಗೆಗೆ ಮುನ್ನುಡಿ ಬರೆದಂತೆ ಕಂಡು ಬಂದಿತು. 
    ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಶ್ರೀ ರಂಗನಾಥಶರ್ಮ, ಸಹಾಯಕ ಅರ್ಚಕ ಶ್ರೀನಿವಾಸ್,  ಶಾಸಕ ಬಿ.ಕೆ ಸಂಗಮೇಶ್ವರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಸ್ಥಳೀಯ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಜಿಲ್ಲಾ ಧಾರ್ಮಿಕ ಪರಿಷತ್ ನಿರ್ದೇಶಕ ಜಿ. ರಾಮಕಾಂತ್ ಹಾಗೂ ಎಸ್ ನರಸಿಂಹಾಚಾರ್, ರವಿ ಮಾಸ್ಟರ್, ಸುದರ್ಶನ್, ಸುಧೀಂದ್ರ,  ಶ್ರೀಧರ್, ಅಡುಗೆ ರಂಗಣ್ಣ, ಮಾರುತಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು. 

Sunday, May 11, 2025

ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಣೆ : ಕಾರ್ಯವೈಖರಿಗೆ ಜಿಲ್ಲಾ ರಕ್ಷಣಾಧಿಕಾರಿ ಪ್ರಶಂಸೆ


ಇಆರ್‌ಎಸ್‌ಎಸ್-೧೧೨ ವಾಹನದ  ಚಾಲಕ ಸಂತೋಷ್ ಕುಮಾರ್‌
ಭದ್ರಾವತಿ : ತಕ್ಷಣ ಕಾರ್ಯ ಪ್ರವೃತ್ತರಾಗಿ ಕರ್ತವ್ಯ ನಿಷ್ಠೆ ಮೆರೆಯುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನೋರ್ವನನ್ನು ರಕ್ಷಿಸುವಲ್ಲಿ ಇಆರ್‌ಎಸ್‌ಎಸ್-೧೧೨ ವಾಹನದ ಅಧಿಕಾರಿ ಹಾಗು ಸಿಬ್ಬಂದಿ ಯಶಸ್ವಿಯಾಗಿರುವ ಘಟನೆ ನಡೆದಿದೆ. 
ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ವೀರಾಪುರ ಗ್ರಾಮದ ಯುವಕನೋರ್ವ ಚಾಲಕ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿ ಮೇ.೭ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ವಿಷಯ ತಿಳಿದ ಯುವಕನ ತಾಯಿ ೧೧೨ ವಾಹನಕ್ಕೆ ತುರ್ತು ಕರೆ ಮಾಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಇಆರ್‌ಎಸ್‌ಎಸ್ ಅಧಿಕಾರಿ, ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ವಿನಯ್ ಕುಮಾರ್ ಹಾಗು ಚಾಲಕ ಸಂತೋಷ್ ಕುಮಾರ್‌ರವರು ತಕ್ಷಣ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ಆಗಮಿಸಿ ಆತ್ಮಹತ್ಯೆ ಯತ್ನ ತಡೆದು ಯುವಕನಿಗೆ ಧೈರ್ಯ ತುಂಬಿದ್ದಾರೆ.  


ಇಆರ್‌ಎಸ್‌ಎಸ್-೧೧೨ ವಾಹನದ ಅಧಿಕಾರಿ ವಿನಯ್ ಕುಮಾರ್ 
    ಇಆರ್‌ಎಸ್‌ಎಸ್-೧೧೨ ವಾಹನದ ಅಧಿಕಾರಿ ಹಾಗು ಸಿಬ್ಬಂದಿ ಕಾರ್ಯವೈಖರಿಗೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಪ್ರಶಂಸೆ ವ್ಯಕ್ತಪಡಿಸುವ ಮೂಲಕ ಅಭಿನಂದಿಸಿದ್ದಾರೆ.