Thursday, July 10, 2025

ತಾಲೂಕು ಕಛೇರಿ, ನಗರಸಭೆಯಲ್ಲಿ ಶಿವಶರಣ, ವಚನಕಾರ ಹಡಪದ ಅಪ್ಪಣ್ಣ ಜನ್ಮದಿನ ಆಚರಣೆ

ಭದ್ರಾವತಿ ತಾಲೂಕು ದಂಡಾಧಿಕಾರಿ, ತಹಸೀಲ್ದಾರ್‌ರವರ ಕಛೇರಿಯಲ್ಲಿ  ಶಿವಶರಣ, ವಚನಕಾರ ಹಡಪದ ಅಪ್ಪಣ್ಣರವರ ಜನ್ಮದಿನ ಆಚರಿಸಲಾಯಿತು. 
    ಭದ್ರಾವತಿ: ತಾಲೂಕು ದಂಡಾಧಿಕಾರಿ, ತಹಸೀಲ್ದಾರ್‌ರವರ ಕಛೇರಿ ಹಾಗು ನಗರಸಭೆ ಕಛೇರಿಯಲ್ಲಿ ಗುರುವಾರ ಶಿವಶರಣ, ವಚನಕಾರ ಹಡಪದ ಅಪ್ಪಣ್ಣರವರ ಜನ್ಮದಿನ ಆಚರಿಸಲಾಯಿತು. 
    ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಕಾರ್ಯಕ್ರಮದಲ್ಲಿ ತಹಸೀಲ್ದಾರ್-೨ ಮಂಜಾನಾಯ್ಕರವರು ಹಡಪದ ಅಪ್ಪಣ್ಣರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸ್ಮರಿಸುವ ಮೂಲಕ ಜನ್ಮದಿನ ಆಚರಿಸಲಾಯಿತು.
ಉಪ ತಹಸೀಲ್ದಾರ್ ರಾಜ್ ಅರಸ್, ಸಮಾಜದ ಅಧ್ಯಕ್ಷ ಲಕ್ಷ್ಮೀಪತಿ, ಸಮಾಜ ಬಾಂಧವರು ಮತ್ತು ತಾಲೂಕು ಕಛೇರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವರ್ಗದವರು ಪಾಲ್ಗೊಂಡಿದ್ದರು. 


ಭದ್ರಾವತಿ ನಗರಸಭೆ ಕಛೇರಿಯಲ್ಲಿ ಗುರುವಾರ ಶಿವಶರಣ, ವಚನಕಾರ ಹಡಪದ ಅಪ್ಪಣ್ಣರವರ ಜನ್ಮದಿನ ಆಚರಿಸಲಾಯಿತು. 
    ನಗರಸಭೆ ಕಛೇರಿ: 
    ನಗರಸಭೆ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಶಿವಶರಣ, ವಚನಕಾರ ಹಡಪದ ಅಪ್ಪಣ್ಣರವರ ಜನ್ಮದಿನ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸ್ಮರಿಸಿದರು. 
    ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಹಡಪದ ಅಪ್ಪಣ್ಣನವರ ಕುರಿತು ಮಾತನಾಡಿದರು. ನಗರಸಭೆ ಸದಸ್ಯರು, ಅಭಿಯಂತರ ಶಿವಪ್ರಸಾದ್, ಪರಿಸರ ಅಭಿಯಂತರ ಪ್ರಭಾಕರ್, ಕಂದಾಯಾಧಿಕಾರಿ ರಮೇಶ್, ಲೆಕ್ಕಾಧಿಕಾರಿ ಗಿರಿಧರ್ ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. 

ಸಾಹಿತ್ಯ ಭವನಕ್ಕೆ ಒಂದು ತಿಂಗಳ ಗೌರವ ಧನ ನೀಡಿ ಕನ್ನಡ ಸೇವೆಗೆ ಕೈಜೋಡಿಸಿ : ಮನವಿ

ಭದ್ರಾವತಿ ಕನ್ನಡ ಭವನಕ್ಕಾಗಿ ನಗರಸಭೆಯ ಸದಸ್ಯರ ಒಂದು ತಿಂಗಳ ಗೌರವ ಧನ ನೀಡುವಂತೆ ಕಟ್ಟಡ ಸಮಿತಿ ಅಧ್ಯಕ್ಷೆ ಡಾ: ವಿಜಯಾ ದೇವಿ ಮತ್ತಿತರರು ನಗರಸಭಾ ಸದಸ್ಯ ಬಿ.ಕೆ.ಮೋಹನ್ ಮತ್ತು ಪೌರಾಯುಕ್ತ ಪ್ರಕಾಶ್ ಎಂ.ಚೆನ್ನಪ್ಪ ನವರ್ ಅವರಿಗೆ ಮನವಿ ಸಲ್ಲಿಸಿದರು. 
    ಭದ್ರಾವತಿ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ನೂತನ ಕನ್ನಡ ಸಾಹಿತ್ಯ ಭವನಕ್ಕೆ ನಗರಸಭೆ ಸದಸ್ಯರು ತಮ್ಮ ಒಂದು ತಿಂಗಳ ಗೌರವಧನ ನೀಡುವಂತೆ ಗುರುವಾರ ಭವನ ನಿರ್ಮಾಣ ಸಮಿತಿ ಅಧ್ಯಕ್ಷೆ, ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. 
    ಮನವಿ ಸಲ್ಲಿಸಿದ ನಂತರ ಮಾತನಾಡಿದ ಡಾ. ವಿಜಯದೇವಿ, ಸುಮಾರು ೩೦ ವರ್ಷಗಳ ಹಿಂದೆ ಅಂದಿನ ಪುರಸಭೆ ವತಿಯಿಂದ ಸಿದ್ದಾಪುರ ಎನ್‌ಟಿಬಿ ಬಡಾವಣೆಯಲ್ಲಿ ನೀಡಿರುವ ನಿವೇಶನದಲ್ಲಿ ಇದೀಗ ನೂತನ ಭವನ ನಿರ್ಮಾಣಗೊಳ್ಳುತ್ತಿದೆ. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಭವನ ನಿರ್ಮಾಣಕ್ಕೆ ಹೆಚ್ಚಿನ ಸಹಕಾರ ನೀಡುತ್ತಿದ್ದು, ಸುಸಜ್ಜಿತವಾದ ಭವನ ನಿರ್ಮಿಸುವ ಗುರಿ ಹೊಂದಿದ್ದಾರೆ. ಈ ಹಿಂದೆ ಶಾಸಕರು ಸಭೆ ನಡೆಸಿ ನಗರಸಭೆ ಸದಸ್ಯರು ತಮ್ಮ ಒಂದು ತಿಂಗಳ ಗೌರವಧನ ಭವನ ನಿರ್ಮಾಣಕ್ಕೆ ನೀಡುವಂತೆ ಮನವಿ ಮಾಡಿದ್ದರು. ಸದಸ್ಯರು ತಮ್ಮ ಒಂದು ತಿಂಗಳ ಗೌರವಧನ ನೀಡುವ ಮೂಲಕ ಕನ್ನಡ ಸೇವೆಗೆ ಕೈಜೋಡಿಸಬೇಕೆಂದರು. 
    ಹಿರಿಯ ಸದಸ್ಯ  ಬಿ.ಕೆ.ಮೋಹನ್ ಮಾತನಾಡಿ, ನುಡಿದಂತೆ ನಡೆಯುವ ಶಾಸಕರು ಹಾಗು ಕುಟುಂಬ ವರ್ಗದವರು ಕನ್ನಡ ಸೇವೆಗಾಗಿ ಸದಾ ಸಿದ್ದವಾಗಿದ್ದೇವೆ. ನಗರಸಭೆ ಎಲ್ಲಾ ಸದಸ್ಯರು ತಮ್ಮ ಒಂದು ತಿಂಗಳ ಗೌರವಧನ ನೀಡುವ ವಿಶ್ವಾಸವಿದೆ ಎಂದರು. 
    ಪೌರಾಯುಕ್ತ ಪ್ರಕಾಶ್ ಎಂ.ಚನ್ನಪ್ಪನವರ್ ಮತ್ತು ಬಿ.ಕೆ ಮೋಹನ್ ಮನವಿ ಸ್ವೀಕರಿಸಿದರು. ನಗರಸಭೆ ಸದಸ್ಯರಾದ ಶೃತಿ ವಸಂತ ಕುಮಾರ್,  ಬಷೀರ್ ಆಹಮದ್, ಕಟ್ಟಡ ಸಮಿತಿ ಕಾರ್ಯದರ್ಶಿ ಎಸ್.ಎಂ.ಸುಧಾಮಣಿ ಕೃತಜ್ಞತೆ ಸಲ್ಲಿಸಿದರು. ಪರಿಷತ್ ಪ್ರಮುಖರಾದ ನಾಗೋಜಿರಾವ್, ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಮುಂಗಾರು ಮಳೆಯಿಂದ ನಗರಸಭೆ ವಾರ್ಡ್‌ಗಳಲ್ಲಿ ಸಮಸ್ಯೆಗಳು ಉಲ್ಬಣ

ಹಾಜರಿರಬೇಕಿದ್ದ ಅಧಿಕಾರಿಗಳೇ ಇಲ್ಲದ ಕಾರಣ ಸಾಮಾನ್ಯಸಭೆ ಮುಂದೂಡಿಕೆ  

ಭದ್ರಾವತಿ ನಗರಸಭೆ ಸಾಮಾನ್ಯ ಸಭೆ ಗುರುವಾರ ಪ್ರಮುಖ ಅಧಿಕಾರಿಗಳು ಸಭೆಗೆ ಬಾರದ ಹಿನ್ನಲೆಯಲ್ಲಿ ಮುಂದೂಡಿಕೆಯಾಗಿದ್ದು, ಸಭೆ ಆರಂಭಗೊಳ್ಳುವ ಮೊದಲು ಸದಸ್ಯರು ಕೆಲವು ವಿಚಾರಗಳ ಕುರಿತು ಚರ್ಚಿಸಿದರು.
    ಭದ್ರಾವತಿ: ಮುಂಗಾರು ಮಳೆಯಿಂದ ನಗರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದು, ಪ್ರಮುಖ ರಸ್ತೆಗಳು, ಚರಂಡಿಗಳು ಹಾಳಾಗಿದ್ದು, ಅಲ್ಲದೆ ಮನೆಗಳು ಶಿಥಿಲಗೊಂಡು ಹಾನಿಗೊಳಗಾಗಿವೆ. ವಾರ್ಡ್‌ಗಳಲ್ಲಿ ಸಮಸ್ಯೆಗಳು ಉಲ್ಬಣಗೊಳ್ಳುತ್ತಿದ್ದು, ಸದಸ್ಯರು ನಿವಾಸಿಗಳ ಹಿಡಿ ಶಾಪಕ್ಕೆ ಗುರಿಯಾಗುತ್ತಿದ್ದಾರೆ. ಮುಂಗಾರು ಮಳೆ  ಆರಂಭಗೊಂಡ ನಂತರ ನಡೆಯುತ್ತಿರುವ ಮೊದಲ ಸಾಮಾನ್ಯ ಸಭೆಗೆ ಹಾಜರಿರಬೇಕಿದ್ದ ತಹಸೀಲ್ದಾರ್ ಸೇರಿದಂತೆ ಪ್ರಮುಖ ಇಲಾಖೆಗಳ ಹಿರಿಯ ಅಧಿಕಾರಿಗಳೇ ಇಲ್ಲದಿರುವುದು ಗುರುವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ಅಲ್ಲದೆ ಇದೆ ಕಾರಣಕ್ಕೆ ಸಭೆ ಮುಂದೂಡುವಂತಾಯಿತು. 
    ನಗರಸಭೆ ಸಭಾಂಗಣದಲ್ಲಿ ಬೆಳಿಗ್ಗೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಸಭೆಯಲ್ಲಿ ಮಾತನಾಡಿದ ಹಿರಿಯ ಸದಸ್ಯ ಬಿ.ಕೆ ಮೋಹನ್, ೨೮ ಸರ್ಕಾರಿ ಇಲಾಖೆಗಳಿಗೆ ಸಾಮಾನ್ಯಸಭೆಗೆ ಆಗಮಿಸುವಂತೆ ತಿಳುವಳಿಕೆ ಪತ್ರ ತಲುಪಿಸಲಾಗಿದ್ದರೂ ಸಹ ಪ್ರಮುಖ ಇಲಾಖೆಗಳ ಜವಾಬ್ದಾರಿ ಸ್ಥಾನ ಹೊಂದಿರುವ ಹಿರಿಯ ಅಧಿಕಾರಿಗಳು ಗೈರು ಹಾಜರಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಅಲ್ಲದೆ ಕೆಲವು ಕಚೇರಿಯ ಅಧಿಕಾರಿಗಳು ಸಭೆಗೆ ಪ್ರತಿ ಬಾರಿಯೂ ಆಗಮಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸಭೆ ಮುಂದೂಡುವಂತೆ ಆಗ್ರಹಿಸಿದರು. 
    ನಗರದ ಪ್ರಮುಖ ರಸ್ತೆಗಳು ಗುಂಡಿಗಳಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಮಸ್ಯೆ ಪರಿಹರಿಸಬೇಕಾದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಸಭೆಗೆ ಗೈರು ಹಾಜರಾಗಿದ್ದಾರೆ. ಇದೀಗ ಸಭೆ ನಡೆಸುವುದು ಬೇಡ. ಅಧಿಕಾರಿಗಳು ಬರಲಿ ಎಂದು ಬಿ.ಕೆ ಮೋಹನ್ ಪಟ್ಟು ಹಿಡಿದಾಗ ಆಯುಕ್ತರು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ನಗರಸಭೆ ಸಭೆಗೆ ಆಗಮಿಸುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.
    ತಾಲೂಕಿನಾದ್ಯಂತ ಹೆಚ್ಚಿನ ಮಳೆ ಸುರಿಯುತ್ತಿರುವ ಕಾರಣ ನದಿ ಪಾತ್ರದ ಮನೆಗಳು ಸೇರಿದಂತೆ ನಗರಸಭೆ ವ್ಯಾಪ್ತಿಯ ಅನೇಕ ಮನೆಗಳಿಗೆ ಹಾನಿಯಾಗುತ್ತಿದೆ.  ಆದರೆ ಇದಕ್ಕೆ ಪರಿಹಾರ ಸೂಚಿಸಬೇಕಾಗಿರುವ ತಹಶೀಲ್ದಾರ್‌ರವರು ಸಭೆಗೆ ಗೈರು ಹಾಜರಾಗಿರುವ ಕಾರಣ ಮಾಹಿತಿಯನ್ನು ಯಾರ ಬಳಿ ಪಡೆಯಬೇಕು ಎಂದು ಚನ್ನಪ್ಪ ಹಾಗೂ ಟಿಪ್ಪುಸುಲ್ತಾನ್ ಸೇರಿದಂತೆ ಹಲವು ಸದಸ್ಯರು ಪ್ರಶ್ನಿಸಿದರು. ಅಲ್ಲದೆ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಇದುವರೆಗೂ ಯಾವುದೇ ಸಬೆsಗಳಿಗೆ ಹಾಜರಾಗದೆ ನಿರ್ಲಕ್ಷ್ಯ ತಾಳಿರುವುದನ್ನು ತೀವ್ರವಾಗಿ ಖಂಡಿಸಿದರು. 
    ತಹಶೀಲ್ದಾರ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಹೈವೇ)ದ ಇಂಜಿನಿಯರ್ ಸೇರಿದಂತೆ ಗೈರು ಹಾಜರಾಗಿರುವ ಪ್ರಮುಖ ಇಲಾಖೆಗಳ ಅಧಿಕಾರಿಗಳನ್ನು ಸಭೆಗೆ ಕರೆಸಬೇಕು. ಅಧಿಕಾರಿಗಳು ಬರುವವರೆಗೂ ಸಾಮಾನ್ಯ ಸಭೆಯನ್ನು ಮುಂದೂಡಬೇಕೆಂದು ಆಡಳಿತ ಪಕ್ಷದವರು ಸೇರಿದಂತೆ ಪಕ್ಷಭೇದ ಮರೆತು ಎಲ್ಲಾ ಸದಸ್ಯರು ಆಗ್ರಹಿಸಿ ಸಭೆಯಿಂದ ಹೊರ ನಡೆದರು.
    ಸಭೆ ಆರಂಭಕ್ಕೂ ಮೊದಲು ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಸ್ಮಶಾನದ ಜಾಗವನ್ನು ಪಡೆದಾಗ ರಸ್ತೆ ಒತ್ತುವರಿ ಸಂದರ್ಭದಲ್ಲಿ ಸ್ಮಶಾನದ ಜಾಗದಲ್ಲಿದ್ದ ಗೇಟ್ ತೆರವುಗೊಳಿಸಲಾಗಿದ್ದು,  ಆದರೆ ಇದುವರೆಗೂ ಗೇಟ್ ಅಳವಡಿಸಿದ ಕಾರಣ ಸ್ಮಶಾನವು ಆಕ್ರಮ ದಂಧೆಗಳ ತಾಣವಾಗುತ್ತಿದೆ ಎಂದು ಸದಸ್ಯ ಉದಯ್ ಕುಮಾರ್ ಆರೋಪಿಸಿ, ಕೂಡಲೇ ಗೇಟ್ ಅಳವಡಿಸಿ ಸಮಸ್ಯೆಯನ್ನು ಸರಿಪಡಿಸಿ ಕೊಡಬೇಕೆಂದು ಒತ್ತಾಯಿಸಿದರು.
ನಗರದ ರುದ್ರಭೂಮಿ ಕಾವಲುಗಾರರ ಬಗ್ಗೆ ವಿಷಯ ಸ್ತಾಪಿಸಿ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಸ್ಮಶಾನಗಳಲ್ಲಿ ಕಳ್ಳತನಗಳು ಆಗುತ್ತಿವೆ. ಅದನ್ನು ತಡೆಗಟ್ಟಲು ನಗರಸಭೆಯಿಂದ ಯಾವುದೇ  ಕ್ರಮ  ಕೈಗೊಂಡಿಲ್ಲ ಎಂದು ಆರೋಪಿಸಿದರು. ಕಾವಲುಗಾರರಿಗೆ ವೇತನ ನೀಡಲು ಯಾವ ಸದಸ್ಯರ ವಿರೋದsವಿಲ್ಲ. ಆದರೆ ಸ್ಮಶಾನದಲ್ಲಿನ ಕಳ್ಳತನ ಎಲ್ಲಾ ಸದಸ್ಯರಿಗೂ ಬೇಸರವಿದೆ ಎಂದರು. 
ಪರಿಸರ ಅಭಿಯಂತರ ಪ್ರಭಾಕರ್ ಮಾತನಾಡಿ, ರಾತ್ರಿಯಲ್ಲಿ ಶವ ಸುಡುವ ಪ್ಲೇಟ್‌ಗಳನ್ನು ಕಳ್ಳತನ ಮಾಡುತ್ತಿದ್ದಾರೆ ಎಂದು ಸಭೆಗೆ ತಿಳಿಸಿದರು. ಕೂಡಲೇ ನಗರಸಭೆ ವ್ಯಾಪ್ತಿಯ ಎಲ್ಲಾ ರುದ್ರಭೂಮಿಗಳಲ್ಲಿ ಸಿ.ಸಿ ಕ್ಯಾಮರಗಳನ್ನು ಅಳವಡಿಸಿ ಎಂದು ಬಿ.ಕೆ ಮೋಹನ್ ಸಲಹೆ ವ್ಯಕ್ತಪಡಿಸಿದರು. 
ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್,  ಸ್ಥಾಯಿಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೊಲೀಸ್ ನಗರವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್ ಉಪಸ್ಥಿತರಿದ್ದರು.

ನಗರದ ವಿವಿಧೆಡೆ ವಿಜೃಂಭಣೆಯಿಂದ ಜರುಗಿದ ಗುರುಪೂರ್ಣಿಮೆ

ಭದ್ರಾವತಿ ನ್ಯೂಟೌನ್ ಶ್ರೀ ಶಿವ ಸಾಯಿ ಕೃಪಾ ಧಾಮದ ಶಿರಡಿ ಸಾಯಿ ಬಾಬಾರವರ ಮಂದಿರದಲ್ಲಿ ಗುರುಪೂರ್ಣಿಮೆ ಅಂಗವಾಗಿ ಶಿರಡಿ ಸಾಯಿ ಬಾಬಾರವರಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಬೆಳಿಗ್ಗೆ ೭ ರಿಂದ ಭಕ್ತರಿಗೆ ದರ್ಶನ ಹಾಗು ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. 
    ಭದ್ರಾವತಿ: ಅಷಾಢ ಮಾಸದ ಪ್ರಮುಖ ಆಚರಣೆಗಳಲ್ಲಿ ಒಂದಾದ ಗುರುಪೂರ್ಣಿಮೆ ಗುರುವಾರ ನಗರದ ವಿವಿಧೆಡೆ ವಿಜೃಂಭಣೆಯಿಂದ ಜರುಗಿತು.  
    ನ್ಯೂಟೌನ್ ಶ್ರೀ ಶಿವ ಸಾಯಿ ಕೃಪಾ ಧಾಮದ ಶಿರಡಿ ಸಾಯಿ ಬಾಬಾರವರ ಮಂದಿರದಲ್ಲಿ ಗುರುಪೂರ್ಣಿಮೆ ಅಂಗವಾಗಿ ಶಿರಡಿ ಸಾಯಿ ಬಾಬಾರವರಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಬೆಳಿಗ್ಗೆ ೭ ರಿಂದ ಭಕ್ತರಿಗೆ ದರ್ಶನ ಹಾಗು ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. 
    ಅಲ್ಲದೆ ಶ್ರೀ ಶಿವ ಸಾಯಿ ಕೃಪಾ ಧಾಮದಲ್ಲಿರುವ ಎಲ್ಲಾ ದೇವರುಗಳಿಗೂ ಅಲಂಕಾರದೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರದಲ್ಲಿ ಬೆಳಿಗ್ಗೆ ಓಂಕಾರ, ಸುಪ್ರಭಾತ, ನಗರ ಸಂಕೀರ್ತನೆ, ಬಾಲವಿಕಾಸ ಮಕ್ಕಳಿಂದ ಗುರುಪಾದ ಪೂಜೆ, ಶ್ರೀ ಸಾಯಿ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಮಂಗಳಾರತಿ, ಮಹಾನಾರಾಯಣ ಸೇವೆ, ಸಂಜೆ ವೇದಪಠಣ, ಶ್ರೀ ಸಾಯಿ ಪಾದುಕ ಅಷ್ಟೋತ್ತರ ಪಠಣ, ಭಜನೆ, ಚಿಂತನೆ ಮತ್ತು  ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆ ನೆರವೇರಿದವು. 


ಭದ್ರಾವತಿ ನ್ಯೂಟೌನ್ ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರದಲ್ಲಿ ಬೆಳಿಗ್ಗೆ ಓಂಕಾರ, ಸುಪ್ರಭಾತ, ನಗರ ಸಂಕೀರ್ತನೆ, ಬಾಲವಿಕಾಸ ಮಕ್ಕಳಿಂದ ಗುರುಪಾದ ಪೂಜೆ, ಶ್ರೀ ಸಾಯಿ ಸತ್ಯನಾರಾಯಣ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. 
    ನ್ಯೂಟೌನ್, ಸುರಗಿತೋಪು, ಕಾಗದನಗರ, ಜೆಪಿಎಸ್ ಕಾಲೋನಿ, ವಿದ್ಯಾಮಂದಿರ, ಹುಡ್ಕೋಕಾಲೋನಿ, ಬಾಲಭಾರತಿ, ಆಂಜನೇಯ ಅಗ್ರಹಾರ, ವಿದ್ಯಾಮಂದಿರ, ಗಣೇಶ್ ಕಾಲೋನಿ, ಜನ್ನಾಪುರ, ಹುತ್ತಾ ಕಾಲೋನಿ ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಆಗಮಿಸಿದ್ದರು. 
    ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಗುರುಪೂರ್ಣಿಮೆ: 
    ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಗುರುಪೂರ್ಣಿಮೆ ವಿಜೃಂಭಣೆಯಿಂದ ಜರುಗಿತು. ರಾಯರ ಬೃಂದಾವನಕ್ಕೆ ವಿಶೇಷ ಅಲಂಕಾರ, ಅಭಿಷೇಕ, ವಿಶೇಷ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. 


ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಗುರುಪೂರ್ಣಿಮೆ ವಿಜೃಂಭಣೆಯಿಂದ ಜರುಗಿತು. ರಾಯರ ಬೃಂದಾವನಕ್ಕೆ ವಿಶೇಷ ಅಲಂಕಾರ, ಅಭಿಷೇಕ, ವಿಶೇಷ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. 
    ಶ್ರೀ ಗುರುರಾಜ ಸೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು, ಮಠದ ಪ್ರಧಾನ ಅರ್ಚಕರು, ಸೇವಾಕರ್ತರು ಉಪಸ್ಥಿತರಿದ್ದರು. ಸಿದ್ಧಾರೂಢನಗರ, ಹಳೇನಗರ, ಹೊಸಮನೆ ಸೇರಿದಂತೆ ನಗರದ ವಿವಿಧೆಡೆಗಳಿಂದ ಭಕ್ತರು ಪಾಲ್ಗೊಂಡಿದ್ದರು. 

Wednesday, July 9, 2025

ಜು.೧೦ಕ್ಕೆ ಶ್ರೀ ಶಿವ ಸಾಯಿ ಕೃಪಾ ಧಾಮದಲ್ಲಿ ಗುರುಪೂರ್ಣಿಮೆ

    ಭದ್ರಾವತಿ: ನಗರದ ನ್ಯೂಟೌನ್ ಶ್ರೀ ಶಿವ ಸಾಯಿ ಕೃಪಾ ಧಾಮದ ಶಿರಡಿ ಮಂದಿರದಲ್ಲಿ ಜು.೧೦ರ ಗುರುವಾರ ಗುರುಪೂರ್ಣಿಮೆ ಹಮ್ಮಿಕೊಳ್ಳಲಾಗಿದೆ. 
    ಗುರುಪೂರ್ಣಿಮೆ ಅಂಗವಾಗಿ ಶಿರಡಿ ಸಾಯಿ ಬಾಬಾರವರಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿದ್ದು, ಬೆಳಿಗ್ಗೆ ೭ ರಿಂದ ರಾತ್ರಿ ೧೦ ಗಂಟೆವರೆಗೆ ಭಕ್ತರಿಗೆ ದರ್ಶನ ಹಾಗು ಪ್ರಸಾದ ವ್ಯವಸ್ಥೆ ಇರುತ್ತದೆ. 
    ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರದಲ್ಲಿ ಬೆಳಿಗ್ಗೆ ೫.೩೦ಕ್ಕೆ ಓಂಕಾರ, ಸುಪ್ರಭಾತ, ನಗರ ಸಂಕೀರ್ತನೆ, ೯.೩೦ಕ್ಕೆ ಬಾಲವಿಕಾಸ ಮಕ್ಕಳಿಂದ ಗುರುಪಾದ ಪೂಜೆ, ೧೦.೩೦ಕ್ಕೆ ಶ್ರೀ ಸಾಯಿ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ೧೨ಕ್ಕೆ ಮಹಾಮಂಗಳಾರತಿ, ೧೨.೩೦ಕ್ಕೆ ಮಹಾನಾರಾಯಣ ಸೇವೆ, ಸಂಜೆ ೫.೪೫ಕ್ಕೆ ವೇದಪಠಣ, ೬.೧೫ಕ್ಕೆ ಶ್ರೀ ಸಾಯಿ ಪಾದುಕ ಅಷ್ಟೋತ್ತರ ಪಠಣ, ೬.೩೦ರಿಂದ ಭಜನೆ, ೭.೧೫ಕ್ಕೆ ಚಿಂತನೆ ಮತ್ತು ೭.೩೦ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗವಿರುತ್ತದೆ. 
    ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಶ್ರೀ ಶಿವ ಸಾಯಿ ಕೃಪಾ ಧಾಮ ಟ್ರಸ್ಟ್ ಮತ್ತು ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಕೋರಿದ್ದಾರೆ.  

ಭಾರತ್ ಬಂದ್‌ಗೆ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘ ಬೆಂಬಲ

``ಕಾರ್ಮಿಕ ವಿರೋಧಿ, ರೈತ ವಿರೋಧಿ, ಕಾರ್ಪೊರೇಟ್‌ಪರ" ನೀತಿಗಳನ್ನು ಖಂಡಿಸಿ ಪ್ರತಿಭಟನೆ 

ಕೇಂದ್ರ ಸರ್ಕಾರದ "ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ಕಾರ್ಪೊರೇಟ್‌ಪರ" ನೀತಿಗಳನ್ನು ಖಂಡಿಸಿ ಬುಧವಾರ ದೇಶಾದ್ಯಂತ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್ ಬಂದ್‌ಗೆ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ (ವಿಐಎಸ್‌ಎಲ್) ಕಾರ್ಖಾನೆ ಗುತ್ತಿಗೆ ಕಾರ್ಮಿಕರ ಸಂಘ ಸಹ ಬೆಂಬಲ ವ್ಯಕ್ತಪಡಿಸಿ ಕಾರ್ಖಾನೆ ಮುಂಭಾಗ ತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿತು. 
    ಭದ್ರಾವತಿ: ಕೇಂದ್ರ ಸರ್ಕಾರದ "ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ಕಾರ್ಪೊರೇಟ್‌ಪರ" ನೀತಿಗಳನ್ನು ಖಂಡಿಸಿ ಬುಧವಾರ ದೇಶಾದ್ಯಂತ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್ ಬಂದ್‌ಗೆ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ (ವಿಐಎಸ್‌ಎಲ್) ಕಾರ್ಖಾನೆ ಗುತ್ತಿಗೆ ಕಾರ್ಮಿಕರ ಸಂಘ ಸಹ ಬೆಂಬಲ ವ್ಯಕ್ತಪಡಿಸಿ ಕಾರ್ಖಾನೆ ಮುಂಭಾಗ ತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿತು. 
    ಕಳೆದ ಸುಮಾರು ೩೦ ತಿಂಗಳಿನಿಂದ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಹಿಂಪಡೆಯುವಂತೆ, ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಹಾಗು ಗುತ್ತಿಗೆ ಕಾರ್ಮಿಕರಿಗೆ ತಿಂಗಳ ಪೂರ್ತಿ ಉದ್ಯೋಗ ಕಲ್ಪಿಸಿಕೊಡುವಂತೆ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ತೀವ್ರವಾಗಿ ಖಂಡಿದರು. 
    ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯುಸಿ ಸಂಘಟನೆ ಶಿವಮೊಗ್ಗ ಜಿಲ್ಲಾ ಸಂಚಾಲಕ ಎಂ. ನಾರಾಯಣ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಂತರಾಮುರವರು,  ಈಗಾಗಲೇ ಹಲವು ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುವ ಮೂಲಕ ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ಧೋರಣೆ ಮುಂದುವರಿಸಿದೆ. ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ ವಿಶ್ವೇಶ್ವರಾಯನವರ ದೂರ ದೃಷ್ಟಿ ಹಾಗು ಪರಿಶ್ರಮದಿಂದ ಸ್ಥಾಪಿತವಾದ ವಿಐಎಸ್‌ಎಲ್ ಕಾರ್ಖಾನೆಗೆ ಮೊದಲು ಬಂಡವಾಳ ಹೂಡಬೇಕು. ಗುತ್ತಿಗೆ ಕಾರ್ಮಿಕರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.
    ಕಾರ್ಮಿಕರ ಹಕ್ಕುಗಳಿಂದ ಹಿಡಿದು ಹಣದುಬ್ಬರದಂತಹ ಸಾಮಾನ್ಯ ಜನರ ಜೀವನದ ಸಮಸ್ಯೆಗಳವರೆಗೂ ಕಾರ್ಮಿಕ ವಿರೋಧಿ ನೀತಿಗಳು ವಿಸ್ತರಿಸಿವೆ. ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಕಾರ್ಮಿಕ ಸಂಘಟನೆಗಳು ಒತ್ತಾಯಿಸಿವೆ. ಈ ಹೊಸ ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸಿ, ಉದ್ಯೋಗದಾತರಿಗೆ(ಕಾರ್ಪೊರೇಟ್‌ಗಳಿಗೆ) ಹೆಚ್ಚಿನ ಅನುಕೂಲ ಮಾಡಿಕೊಡುತ್ತವೆ ಎಂದು ಆರೋಪಿಸಿದರು.
    ವಾರಕ್ಕೆ ೭೦-೯೦ ಗಂಟೆಗಳಷ್ಟು ಕೆಲಸದ ಸಮಯವನ್ನು ಜಾರಿಗೆ ತರುವ ಯಾವುದೇ ಪ್ರಯತ್ನವನ್ನು ಕಾರ್ಮಿಕರ ಆರೋಗ್ಯ ಮತ್ತು ವೈಯಕ್ತಿಕ ಜೀವನದ ದೃಷ್ಟಿಯಿಂದ ಬಲವಾಗಿ ವಿರೋಧಿಸಲಾಯಿತು. 
    ಅಸಂಘಟಿತ, ಗುತ್ತಿಗೆ ಮತ್ತು ವಿವಿಧ ಯೋಜನೆಗಳಡಿ ಕೆಲಸ ಮಾಡುವವರಿಗೆ ಮಾಸಿಕ ಪ್ರಸ್ತುತದ ಜೀವನ ವೆಚ್ಚಕ್ಕೆ ಅನುಗುಣವಾಗಿ ೨೬,೦೦೦ ರಾಷ್ಟ್ರೀಯ ಕನಿಷ್ಠ ವೇತನ ನಿಗದಿಪಡಿಸುವಂತೆ ಆಗ್ರಹಿಸಿದರು.
    ಈ ಮುಷ್ಕರಕ್ಕೆ ಹತ್ತು ಪ್ರಮುಖ ಕೇಂದ್ರ ಕಾರ್ಮಿಕ ಸಂಘಟನೆಗಳ ವೇದಿಕೆ ಮತ್ತು ಬಹುತೇಕ ಎಲ್ಲಾ ಸ್ವತಂತ್ರ ಅಖಿಲ ಭಾರತ ವಲಯ ಒಕ್ಕೂಟಗಳು/ಸಂಘಟನೆಗಳು ಒಟ್ಟಾಗಿ ಕರೆ ನೀಡಿವೆ. ಇದರ ಜೊತೆಗೆ, ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕೃಷಿ ಕಾರ್ಮಿಕರ ಒಕ್ಕೂಟಗಳು ಸಹ ಸಂಪೂರ್ಣ ಬೆಂಬಲ ಘೋಷಿಸಿವೆ. ಈ ಮುಷ್ಕರವು ಸರ್ಕಾರಕ್ಕೆ ಬಲವಾದ ಸಂದೇಶ ರವಾನಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದರು. 
    ಪ್ರತಿಭಟನೆಯಲ್ಲಿ ವಿಐಎಸ್‌ಎಲ್ ಗುತ್ತಿಗೆ ಕರ್ಮಿಕರ ಸಂಘದ ಅಧ್ಯಕ್ಷ ಎಚ್.ಜಿ ಸುರೇಶ್, ಪ್ರಧಾನ ಕಾರ್ಯದರ್ಶಿ ಪಿ. ರಾಕೇಶ್, ಉಪಾಧ್ಯಕ್ಷರಾದ ಆರ್. ಮಂಜುನಾಥ್, ಎನ್. ಶ್ರೀನಿವಾಸ್, ಸಹ ಕಾರ್ಯದರ್ಶಿಗಳಾದ ಅಂತೋಣಿ ದಾಸ್, ಎನ್.ಬಿ ಮಂಜುನಾಥ್, ಎಚ್.ಡಿ ತ್ಯಾಗರಾಜ್, ಖಜಾಂಚಿ ಜಿ. ಆನಂದ ಹಾಗು ಕಾರ್ಯಕಾರಿ ಸಮಿತಿ ಸದಸ್ಯರು, ಎಐಟಿಯುಸಿ ಸಂಘಟನೆ ಪ್ರಮುಖರಾದ ಐಸಾಕ್, ಕುಮಾರಸ್ವಾಮಿ ಸೇರಿದಂತೆ ಕಾರ್ಮಿಕ ಮುಖಂಡರು, ಗುತ್ತಿಗೆ ಕಾರ್ಮಿಕರು ಪಾಲ್ಗೊಂಡಿದ್ದರು. 

ಭಾರಿ ಗಾತ್ರದ ೧ ಕೆ.ಜಿ, ೮೦ ಗ್ರಾಂ. ತೂಕದ ತೆಂಗಿನ ಕಾಯಿ

ಭದ್ರಾವತಿ ನಗರದ ಭಂಡಾರಹಳ್ಳಿ ನಿವಾಸಿ, ಪ್ರಗತಿಪರ ಕೃಷಿಕ ಶ್ರೀಧರ್‌ರವರ ತೋಟದಲ್ಲಿನ ತೆಂಗಿನ ಕಾಯಿಯೊಂದು ಭಾರಿ ಗಾತ್ರದಲ್ಲಿದ್ದು, ೧ ಕೆ.ಜಿ, ೮೦ ಗ್ರಾಂ. ತೂಕ ಹೊಂದಿದೆ. 
    ಭದ್ರಾವತಿ: ನಗರದ ಭಂಡಾರಹಳ್ಳಿ ನಿವಾಸಿ, ಪ್ರಗತಿಪರ ಕೃಷಿಕ ಶ್ರೀಧರ್‌ರವರ ತೋಟದಲ್ಲಿನ ತೆಂಗಿನ ಕಾಯಿಯೊಂದು ಭಾರಿ ಗಾತ್ರದಲ್ಲಿದ್ದು, ೧ ಕೆ.ಜಿ, ೮೦ ಗ್ರಾಂ. ತೂಕ ಹೊಂದಿದೆ. 
    ಹಲವು ಕೃಷಿ ಪ್ರಯೋಗಗಳಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿರುವ ಶ್ರೀಧರ್‌ರವರು ತಮ್ಮ ತೋಟದಲ್ಲಿ ಬೆಳೆದಿರುವ ತೆಂಗಿನ ಮರದಿಂದ ಕಾಯಿ ಕಿತ್ತುಕೊಂಡು ಬಂದಿದ್ದು, ನಂತರ ಅದನ್ನು ಸುಲಿದಾಗ ಕಾಯಿ ಭಾರಿ ಗಾತ್ರದಲ್ಲಿರುವುದು ಕಂಡು ಬಂದಿದೆ. ತೂಕ ಹಾಕಿ ನೋಡಿದಾಗ ೧ ಕೆ.ಜಿ ೮೦ ಗ್ರಾಂ. ಇರುವುದು ಕಂಡು ಬಂದಿದೆ. 
    ಈ ಹಿನ್ನಲೆಯಲ್ಲಿ ಪತ್ರಿಕೆಗೆ ಮಾಹಿತಿ ನೀಡಿದ ಶ್ರೀಧರ್‌ರವರು, ಇದು ಅಪರೂಪದ ತೆಂಗಿನ ಕಾಯಿಯಾಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ. ನಮ್ಮ ತೋಟದಲ್ಲಿ ಈ ತೆಂಗಿನ ಕಾಯಿ ಕಂಡು ಬಂದಿರುವುದು ಸಂತಸ ತಂದಿದೆ ಎಂದರು.