
ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡವರಿಗೆ ಬೀಳ್ಕೊಡುಗೆ, ಹೊಸದಾಗಿ ಆಗಮಿಸಿದವರಿಗೆ ಸ್ವಾಗತಿಸಿ ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ: ರೋಗಿಗಳ ಸೇವೆ ಸಲ್ಲಿಸುತ್ತಿರುವ ವೈದ್ಯರು ಮತ್ತು ವಿವಿಧ ಇಲಾಖೆಗಳ ನೌಕರರಿಗೆ ಸಂಘವು ಬೆನ್ನೆಲುಬಾಗಿ ನಿಂತು ಗುರುತಿಸುವ ಕಾರ್ಯ ಮಾಡುತ್ತಿದೆ ಎಂದು ಆರೋಗ್ಯ ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಅಧ್ಯಕ್ಷೆ ಕೆ. ಸುಶೀಲಾಬಾಯಿ ಹೇಳಿದರು.
ಅವರು ಹಳೇನಗರದ ಸಾರ್ವಜನಿಕ ಆಸ್ಪತ್ರೆಯ ತಾಲೂಕು ವೈದ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದಿಂದ ರಾಷ್ಟ್ರೀಯ ವೈದ್ಯರ, ಶುಶ್ರೂಷಕರ, ಲಿಪಿಕ, ಪ್ರಯೋಗ ಶಾಲೆ, ತಾಂತ್ರಿಕ ಅಧಿಕಾರಿಗಳ, ಆರೋಗ್ಯ ನಿರೀಕ್ಷಕರ ಮತ್ತು ನೌಕರರ ದಿನಾಚರಣೆ ಹಾಗೂ ವರ್ಗಾವಣೆಗೊಂಡ ವೈದ್ಯ ಸಿಬ್ಬಂದಿಗಳಿಗೆ ಬೀಳ್ಕೊಡುಗೆ ಮತ್ತು ನೂತನವಾಗಿ ಆಗಮಿಸಿದವರಿಗೆ ಸ್ವಾಗತಿಸುವ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿ, ಆಸ್ಪತ್ರೆಯಲ್ಲಿ ಶ್ರಮಿಸುತ್ತಿರುವ ಸಿಬ್ಬಂದಿ, ನೌಕರರಿಗೆ ಉತ್ತೇಜನ ನೀಡುವ ಕಾರ್ಯ ಸಂಘ ಮುನ್ನಡೆಸಿಕೊಂಡು ಬರುತ್ತಿದೆ ಎಂದರು.
ಸಂಘದ ಗೌರವಾಧ್ಯಕ್ಷ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವುದೇ ಸಂಘ-ಸಂಸ್ಥೆಗಳಿಗೆ ಸಂಘಟನೆಯೇ ಶಕ್ತಿ ಎಂಬುದನ್ನು ಯಾರೂ ಮರೆಯಬಾರದು. ಸಂಘಟನೆ ಬಲವಾಗಿದ್ದರೆ ಎಂತಹ ಕ್ಲಿಷ್ಟ ಪರಿಸ್ಥಿತಿಯನ್ನೂ ನಿಭಾಯಿಸಬಹುದು. ಅಂತಹ ಕಾರ್ಯ ನಮ್ಮ ಸಂಘ ಮಾಡಿಕೊಂಡು ಬರುತ್ತಿದೆ. ಮುಂದೆಯೂ ಸಹ ಎಲ್ಲರ ಸಹಕಾರ ಮುಖ್ಯವಾಗಿದೆ ಎಂದರು.
ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪ ಮಾತನಾಡಿ, ನೌಕರರು ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕು. ಜೊತೆಗೆ ಸಂಘದ ಕಾರ್ಯಕ್ರಮಗಳು ನಿರಂತರವಾಗಿ ಮುನ್ನಡೆಯುವ ಮೂಲಕ ನೌಕರರ ಹಿತರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದರು.
ಸಂಘದ ಪದಾಧಿಕಾರಿಗಳಾದ ಲೋಕೇಶ್, ಶ್ರೀನಿವಾಸ್ ಬಾಗೋಡಿ, ಡಾ. ಅಚ್ಚುತ್, ಡಾ. ಎಚ್.ಎಸ್ ಗಿರೀಶ್, ಇ.ಎ ಅಹಮದ್ ಖಾನ್, ಶೀಲಾಮೇರಿ, ನಾಗರತ್ನ, ಹರೀಶ್, ಪ್ರಶಾಂತ್, ಆನಂದಮೂರ್ತಿ, ಉಮೇಶ್, ನಾಗರಾಜ್, ಧನಂಜಯ್ ಕಟವಾಕರ್ ಸೇರಿದಂತೆ ವಿವಿಧ ವೃಂದದ ಪದಾಧಿಕಾರಿಗಳು, ನೌಕರರು ಉಪಸ್ಥಿತರಿದ್ದರು.