ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಮನವಿ

ಭದ್ರಾವತಿ ನಗರದ ವೀರಶೈವ ಸಭಾಭವನದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಭದ್ರಾವತಿ ಉಪವಿಭಾಗದ ವತಿಯಿಂದ ಶನಿವಾರ `ಮನೆ-ಮನೆಗೆ ಪೊಲೀಸ್-೨೦೨೫' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಮಾತನಾಡಿದರು.
ಭದ್ರಾವತಿ: ನಾಗರಿಕರು ಮತ್ತು ಪೊಲೀಸರ ನಡುವಿನ ಬಾಂಧವ್ಯ ಗಟ್ಟಿಗೊಳಿಸುವ ಮೂಲಕ ಸ್ನೇಹಿಮಯಿಯನ್ನಾಗಿಸುವ ಉದ್ದೇಶದಿಂದ ಶಿವಮೊಗ್ಗ ಪೊಲೀಸ್ ವತಿಯಿಂದ ನೂತನವಾಗಿ `ಮನೆ-ಮನೆಗೆ ಪೊಲೀಸ್-೨೦೨೫' ಕಾರ್ಯಕ್ರಮ ರೂಪಿಸಲಾಗಿದ್ದು, ಇದರ ಸದುಪಯೋಗಪಡೆದುಕೊಳ್ಳುವಂತೆ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಮನವಿ ಮಾಡಿದರು.
ಅವರು ಶನಿವಾರ ನಗರದ ವೀರಶೈವ ಸಭಾಭವನದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಭದ್ರಾವತಿ ಉಪವಿಭಾಗದ ವತಿಯಿಂದ ಏರ್ಪಡಿಸಲಾಗಿದ್ದ `ಮನೆ-ಮನೆಗೆ ಪೊಲೀಸ್-೨೦೨೫' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕರೊಂದಿಗೆ ಪೊಲೀಸ್ ಇಲಾಖೆ ಉತ್ತಮ ಹಾಗೂ ಸ್ನೇಹಪರ ಸಂಬಂಧವನ್ನು ಬೆಸೆದು ಸೌಹಾರ್ದ ಸಮಾಜ ನಿರ್ಮಿ ಸುವ ಉದ್ದೇಶಹೊಂದಿದೆ. ಪೊಲೀಸರು ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಸ್ಪಂದಿಸಬೇಕು ಹಾಗೂ ಜನರು ಕೂಡ ಪೊಲೀಸರೊಂದಿಗೆ ಸಹಕರಿಸಬೇಕು ಎಂದರು.
ಈ ಹಿಂದೆ ಬೀಟ್ ಮತ್ತು ಸಬ್ ಬೀಟ್ ವ್ಯವಸ್ಥೆ ಜಾರಿಯಲ್ಲಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದಿನ ಮೈಕ್ರೊ ಲೆವೆಲ್ ಕಾರ್ಯಕ್ರಮ ಇದಾಗಿದೆ. ಪೊಲೀಸ್ ಇಲಾಖೆಗೆ ಸಂಬಂಧಿಸಿದ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವುದರಿಂದ ಪೊಲೀಸರು ಮತ್ತು ಜನರಲ್ಲಿ ಅರಿವು ಮೂಡುತ್ತದೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಯಿಂದ ಜನರಲ್ಲಿ ಸುರಕ್ಷತಾ ಭಾವ ಸೃಷ್ಟಿಯಾಗುತ್ತದೆ. ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ ವೇಳೆ ಏನೇ ಸಮಸ್ಯೆ ಇದ್ದರೂ ಮುಕ್ತವಾಗಿ ತಿಳಿಸಬೇಕು. ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಉತ್ತಮ ಸಂಬಂಧ ಹೊಂದಬೇಕೆಂದು ಸಲಹೆ ನೀಡಿದರು.
೪ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಇಂದಿರಾ ಮೈಲಾರ ಚೆಟ್ಟಿಯಾರ್ ಮಾತನಾಡಿ, ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿ ಮತ್ತು ಆಡಳಿತ ಸ್ನೇಹಿಯಾಗಿಸಲು ಸರ್ಕಾರ ಮುಂದಾಗಿದೆ. ಗೃಹ ಇಲಾಖೆ ಮತ್ತು ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು. ಪೊಲೀಸ್ ವ್ಯವಸ್ಥೆ ಬಗ್ಗೆ ಜನರಲ್ಲಿ ಇರುವ ಹೆದರಿಕೆ ತೊಲಗಬೇಕು. ಈ ಯೋಜನೆಯಡಿ ಸ್ಥಳೀಯ ಪೊಲೀಸ್ ಸಿಬ್ಬಂದಿಗಳು ಮನೆ ಮನೆಗೆ ಬಂದು ಜನರೊಂದಿಗೆ ಸಂವಾದ ನಡೆಸುವುದು ಸ್ವಾಗತಾರ್ಹ. ಮನೆಗಳಿಗೆ ಭೇಟಿ ನೀಡುವ ವೇಳೆ ಸಮವಸ್ತ್ರ ಧರಿಸದಿದ್ದರೆ ಉತ್ತಮ. ಹಾಗೂ ಮಕ್ಕಳೊಂದಿಗೆ ಸ್ನೇಹದಿಂದ ಮಾತನಾಡಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಲಹೆ ನೀಡಿದ ಅವರು ಜನರ ಮಾತನ್ನು ತಾಳ್ಮೆಯಿಂದ ಆಲಿಸಿ, ಸ್ಪಂದಿಸಬೇಕೆಂದರು.
ಪೊಲೀಸ್ ಉಪ ಅಧೀಕ್ಷಕ ಕೆ.ಆರ್ ನಾಗರಾಜ್ ಮಾತನಾಡಿ, ಜನರ ಸಮಸ್ಯೆಗಳನ್ನು ಅರಿತು ಸ್ಪಂದಿಸಲು ಇಲಾಖೆ ಈ ಹಿಂದೆ ನಗರ ಪ್ರದೇಶದಲ್ಲಿ ಮೊಹಲ್ಲಾ ಸಭೆ, ಗ್ರಾಮಗಳಲ್ಲಿ ಬೀಟ್ ವ್ಯವಸ್ಥೆ ರೂಪಿಸಿಕೊಂಡಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ `ಮನೆ-ಮನೆಗೆ ಪೊಲೀಸ್' ವ್ಯವಸ್ಥೆ ಜಾರಿಗೆ ತಂದಿದೆ. ೫೦-೬೦ ಮನೆಗಳ ಸಮೂಹ ರಚಿಸಿ, ಪ್ರತಿ ಬೀಟ್ ಪೊಲೀಸ್‌ಗೆ ಆಯಾ ಜವಾಬ್ದಾರಿ ನೀಡಿ, ಸಾರ್ವಜನಿಕರೊಂದಿಗೆ ಸಂವಾದ ಮಾಡಲಾಗುತ್ತದೆ. ಓಣಿ-ಓಣಿಗೆ ಪೊಲೀಸರು ಬಂದು ಮಾತನಾಡುತ್ತಾರೆ. ಸಮಸ್ಯೆಗಳಿದ್ದರೆ ಠಾಣಾ ವ್ಯಾಪ್ತಿ, ಉಪವಿಭಾಗ ಹೀಗೆ ವಿವಿಧ ಹಂತಗಳಲ್ಲಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಮುಖ್ಯವಾಗಿ ಭದ್ರತೆ, ಸುರಕ್ಷತೆ, ಅಪರಾಧಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಪ್ರತಿ ತಿಂಗಳ ೨ನೇ ಶನಿವಾರದಂದು ಆಯಾ ಠಾಣಾ ವ್ಯಾಪ್ತಿಗಳಲ್ಲಿನ ಸಾರ್ವಜನಿಕ ಸಂಪರ್ಕ ಸಭೆ ನಡೆಸಲಾಗುವುದು ಎಂದರು.
ಪೊಲೀಸ್ ನಗರ ವೃತ್ತ ನಿರೀಕ್ಷ ಶ್ರೀಶೈಲಕುಮಾರ್, ಗ್ರಾಮಾಂತರ ವೃತ್ತ ನಿರೀಕ್ಷಕ ಜಗದೀಶ್ ಹಂಚಿನಾಳ, ಹೊಳೆಹೊನ್ನೂರು ವೃತ್ತ ನಿರೀಕ್ಷಕ ಶಿವಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ `ಮನೆ-ಮನೆಗೆ ಪೊಲೀಸ್-೨೦೨೫' ಕಾರ್ಯಕ್ರಮ ಕುರಿತಾದ ಕರಪತ್ರ, ಬೀಟ್ ಬುಕ್ ಬಿಡುಗಡೆ ಮಾಡಲಾಯಿತು. ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಸ್ಥಳೀಯರು, ಪೊಲೀಸ್ ಇಲಾಖೆ ವಿವಿಧ ಠಾಣೆಗಳ ಠಾಣಾಧಿಕಾರಿಗಳು, ಸಿಬ್ಬಂದಿಗಳು ಹಾಗು ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳುಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.