ಭದ್ರಾವತಿ: ಕಾರ್ಮಿಕರಿಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್‌ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಸೋಮವಾರ ಕಾರ್ಮಿಕರ ಸಮುದಾಯ ಭವನ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಮನವಿಯಲ್ಲಿ ವಿಧಾನಸಭಾ ಕ್ಷೇತ್ರವು ರಾಜ್ಯದಲ್ಲಿಯೇ ವಿಶೇಷವಾಗಿರುವ ಕಾರ್ಮಿಕ ನಗರವಾಗಿದೆ. ಇಲ್ಲಿ ವಿ.ಐ.ಎಸ್.ಎಲ್. ಮತ್ತು ಎಂ.ಪಿ.ಎಂ. ಕಾರ್ಖಾನೆಗಳು ಉತ್ತುಂಗದಲ್ಲಿ ನಡೆಯುತ್ತಿದ್ದು, ಆದರೆ ಕಾರಣಾಂತರದಿಂದ ಈಗಾಗಲೇ ಕಾರ್ಖಾನೆ ಸ್ಥಗಿತಗೊಂಡಿದೆ. ವಿಐಎಸ್‌ಎಲ್ ಕಾರ್ಖಾನೆ ಮುಚ್ಚು ಬೀತಿ ಎದುರಾಗಿದೆ. ಆನೇಕ ಕಾರ್ಮಿಕರು, ಯುವಕರು, ಮಹಿಳೆಯರು ಕ್ಷೇತ್ರದಲ್ಲಿ ಉದ್ಯೋಗವಿಲ್ಲದೇ ಹೊರ ಜಿಲ್ಲೆಗಳಿಗೆ ಮತ್ತು ಹೊರ ರಾಜ್ಯಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಾರ್ಮಿಕರ, ಮಹಿಳೆಯರ ಮತ್ತು ಯುವಕರ ಜೀವನವು ದುಸ್ಥರವಾಗಿದೆ. ಇವರುಗಳ ಜೀವನ ಉತ್ತಮವಾಗಿ ಸಾಗಿಸಲು ಮತ್ತು ವಲಸೆ ಹೋಗುವುದುನ್ನು ತಡೆಗಟ್ಟಲು ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಕೋರಲಾಗಿದೆ.
ನಗರದ ವಿಮಾ ಚಿಕಿತ್ಸಾಲಯದ ವೈದ್ಯಕೀಯ ವಿಭಾಗದಲ್ಲಿ ೪ ವೈದ್ಯರ ಅವಶ್ಯಕತೆ ಇದ್ದು, ಇದರಲ್ಲಿ ೨ ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಹೆಚ್ಚುವರಿ ೪ ವೈದ್ಯರನ್ನು ನಿಯೋಜಿಸುವುದು. ಸ್ಟಾಫ್ ನರ್ಸ್ ೨, ಕಂಪ್ಯೂಟರ್ ಆಪರೇಟರ್ ೨, ಫಾರ್ಮಸಿ ಅಧಿಕಾರಿ ೨ ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ನಿಯೋಜಿಸುವುದು. ಯು.ಪಿ.ಎಸ್ ದುಸ್ಥಿತಿಯಲ್ಲಿದ್ದು ಹೊಸ ಯು.ಪಿ.ಎಸ್. ಮಂಜೂರು ಮಾಡುವುದು. ತಾಲೂಕಿನಲ್ಲಿ ಸವಿತಾ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಿಗೆ ಕುಶಲತೆಯ ಸಾಮಾಗ್ರಿ ಕಿಟ್ ನೀಡುವುದು. ಕಾರ್ಮಿಕರಿಗೆ ಆಸ್ಪತ್ರೆಯಲ್ಲಿಯೇ ವೈದ್ಯಕೀಯ ವೆಚ್ಚ ನೀಡುವುದು. ಬೇರೆ ಕಾರ್ಮಿಕರಿಗೆ ನೀಡುವಂತೆ ಕಟ್ಟಡ ಕಾರ್ಮಿಕರಿಗೂ ಇ.ಎಸ್.ಐ. ಸೌಲಭ್ಯ ನೀಡುವಂತೆ ಕೋರಲಾಗಿದೆ.
ಕೌಶಲ್ಯ ಕಿಟ್‌ಗಳಲ್ಲಿ ಆಧುನಿಕ ಯಂತ್ರೋಪಕರಣಗಳು ಹಾಗೂ ಉತ್ತಮ ಗುಣಮಟ್ಟದ ಉಪಕರಣಗಳನ್ನು ನೀಡುವುದು. ಅಪಘಾತ ವಿಮೆ, ವಿದ್ಯಾರ್ಥಿ ವೇತನ ಶೀಘ್ರದಲ್ಲಿ ಬಿಡುಗಡೆ ಮಾಡಲು ಕ್ರಮ ವಹಿಸುವುದು. ಕಟ್ಟಡ ಕಾರ್ಮಿಕರಿಗೆ ಉಚಿತ ಹೊಸ ನಿವೇಶನ ನೀಡುವುದು. ಕಟ್ಟಡ ಕಾರ್ಮಿಕರ ವಸತಿ ದುರಸ್ಥಿಗೆ ರು. ೩ ಲಕ್ಷ ಸಹಾಯಧನ ನೀಡುವುದು. ಕಾರ್ಮಿಕರ ಶವಸಂಸ್ಕಾರ ಸಹಾಯ ಧನ ರು. ೧ ಲಕ್ಷಕ್ಕೆ ಹೆಚ್ಚಿಸುವುದು. ಕರ್ನಾಟಕ ರಾಜ್ಯದಲ್ಲಿಯೇ ಪ್ರತಿಷ್ಠಿತ ಐ.ಟಿ.ಐ. ಮತ್ತು ಡಿಪ್ಲೋಮಾ ಕಾಲೋಜು ಕ್ಷೇತ್ರದಲ್ಲಿದ್ದು ಇಲ್ಲಿಯ ಸಂಪನ್ಮೂಲ ಕಟ್ಟಡ ಹಾಗೂ ಆಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು ಕಟ್ಟಡ ಕಾರ್ಮಿಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವುದು. ಕಟ್ಟಡ ಕಾರ್ಮಿಕರಿಗೆ ತರಬೇತಿ ಸಮಯದಲ್ಲಿ ಅವರಿಗೆ ನೀಡುವ ಗೌರವಧನ ಹೆಚ್ಚಿಸುವುದು. ಬೀದಿಬದಿ ವ್ಯಾಪರಸ್ಥರಿಗೆ ತಳ್ಳುವ ಗಾಡಿ ಹಾಗೂ ಪೆಟ್ಟಿಗೆ ಅಂಗಡಿಗಳನ್ನು ಖರೀದಿಸಲು ಆರ್ಥಿಕ ಸಹಾಯಧನ ರು.೨ ಲಕ್ಷ ನೀಡುವುದು. ಕಟ್ಟದ ಕಾರ್ಮಿಕರಿಗೆ ದ್ವಿಚಕ್ರವಾಹನ ಖರೀದಿಸಲು ಸಹಾಯಧನ ನೀಡುವುದು ಹಾಗು ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ಪಾಸ್ ಸೌಲಭ್ಯ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಗಿದೆ.