ಶನಿವಾರ, ಆಗಸ್ಟ್ 30, 2025

೨ನೇ ವರ್ಷದ ವಿನಾಯಕ ಮಹೋತ್ಸವ : ೩೧ರಂದು ವಿಸರ್ಜನೆ

ಭದ್ರಾವತಿ ನಗರದ ಭಾವಸಾರ ಯುವಕ ಮಂಡಳಿ ವತಿಯಿಂದ ೨ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸಲಾಗುತ್ತಿದ್ದು, ಆ.೩೧ರ ಭಾನುವಾರ ವಿನಾಯಕ ಮೂರ್ತಿ ವಿಸರ್ಜನೆ ನಡೆಯಲಿದೆ. 
    ಭದ್ರಾವತಿ: ನಗರದ ಭಾವಸಾರ ಯುವಕ ಮಂಡಳಿ ವತಿಯಿಂದ ೨ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸಲಾಗುತ್ತಿದ್ದು, ಆ.೩೧ರ ಭಾನುವಾರ ವಿನಾಯಕ ಮೂರ್ತಿ ವಿಸರ್ಜನೆ ನಡೆಯಲಿದೆ. 
    ಭೂತಗುಡಿಯ ಶ್ರೀ ಕೃಷ್ಣ ರುಕ್ಮಿಣಿ ದೇವಸ್ಥಾನದಲ್ಲಿ ಸುಮಾರು ೫ ಅಡಿ ಎತ್ತರದ ಆಕರ್ಷಕವಾದ ಗೋಕುಲ ಕೃಷ್ಣ ಗಣಪತಿ ಪ್ರತಿಷ್ಠಾಪಿಸಲಾಗಿದೆ. ಯುವಕ ಮಂಡಳಿ ಕಳೆದ ಬಾರಿ ಮೊದಲನೇ ವರ್ಷದ ವಿನಾಯಕ ಮಹೋತ್ಸವ ಅದ್ದೂರಿಯಾಗಿ ಆಚರಿಸಿದ್ದು, ಈ ಬಾರಿ ಸಹ ಅದ್ದೂರಿ ಆಚರಣೆ ನಡೆಯುತ್ತಿದ್ದು, ವಿಸರ್ಜನೆಗೂ ಮೊದಲು ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಅನ್ನಸಂತರ್ಪಣೆ ನಂತರ ಕಲಾ ತಂಡಗಳೊಂದಿಗೆ ರಾಜಬೀದಿ ಉತ್ಸವ ನಡೆಯಲಿದೆ. ಸಂಜೆ ಭದ್ರಾ ನದಿಯಲ್ಲಿ ಮೂರ್ತಿ ವಿಸರ್ಜನೆ ನಡೆಯಲಿದೆ. ಭಕ್ತದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಬಿ. ಮಂಜುನಾಥ್ ನಿಧನ

ಬಿ. ಮಂಜುನಾಥ್
    ಭದ್ರಾವತಿ : ಬೆಂಗಳೂರಿನ ಕರಣ್ ಎಚ್.ಆರ್ ಅಕಾಡೆಮಿ ತರಬೇತಿ ಕೇಂದ್ರದ ತರಬೇತಿದಾರ, ಮೂಲತಃ ನಗರದ ಬಿ. ಮಂಜುನಾಥ್(೪೩) ನಿಧನ ಹೊಂದಿದರು. 
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ನಗರದ ಬೈಪಸ್ ರಸ್ತೆ ಮಿಲ್ಟ್ರಿಕ್ಯಾಂಪ್ ಹಿಂದೂ ರುದ್ರಭೂಮಿಯಲ್ಲಿ ಶನಿವಾರ ಸಂಜೆ ನೆರವೇರಿತು. 
    ಮಂಜುನಾಥ್‌ರವರು ಬೆಂಗಳೂರಿನಲ್ಲಿ ಕರಣ್ ಎಚ್.ಆರ್ ಅಕಾಡೆಮಿ ತರಬೇತಿ ಆರಂಭಿಸುವ ಮೂಲಕ ಸಾವಿರಾರು ಮಂದಿ ನಿರುದ್ಯೋಗಿಗಳಿಗೆ ಅವರ ವಿದ್ಯಾಭ್ಯಾಸಕ್ಕೆ ತಕ್ಕಂತೆ ತರಬೇತಿ ನೀಡಿ ಅವರಿಗೆ ಉದ್ಯೋಗ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. 
    ಮಂಜುನಾಥ್ ನಗರದ ವಿದ್ಯಾಮಂದಿರ ಶಾಲೆ ನಿವೃತ್ತ ಶಿಕ್ಷಕ ದಿವಂಗತ ಹುಲಿಗೆಮ್ಮನವರ ಪುತ್ರರಾಗಿದ್ದು, ಅಲ್ಲದೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕ ಶ್ರೀನಿವಾಸ್‌ರವರ ಸಹೋದರ(ತಮ್ಮ)ರಾಗಿದ್ದಾರೆ. ಇವರ ನಿಧನಕ್ಕೆ ಕಾರ್ಮಿಕ ಮುಖಂಡ ಐಸಾಕ್ ಲಿಂಕನ್, ಸಂಚಾರಿ ಪೊಲೀಸ್ ಠಾಣೆ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಸೇರಿದಂತೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ. 

೫೫ನೇ ವರ್ಷದ ವಿನಾಯಕ ಮಹೋತ್ಸವ : ಸತ್ಯನಾರಾಯಣ ಪೂಜೆ, ಹೋಮ, ಅನ್ನಸಂತರ್ಪಣೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಗಣೇಶ್ ಕಾಲೋನಿ ಜಿ.ಸಿ ಬಾಯ್ಸ್ ಯುವಕರ ಸಂಘದ ವತಿಯಿಂದ ೫೫ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸಲಾಗುತ್ತಿದ್ದು, ಶನಿವಾರ ಬೆಳಿಗ್ಗೆ ಸತ್ಯನಾರಾಯಣ ಪೂಜೆ, ಹೋಮ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು. 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಜನ್ನಾಪುರ ಗಣೇಶ್ ಕಾಲೋನಿ ಜಿ.ಸಿ ಬಾಯ್ಸ್ ಯುವಕರ ಸಂಘದ ವತಿಯಿಂದ ೫೫ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸಲಾಗುತ್ತಿದ್ದು, ಶನಿವಾರ ಬೆಳಿಗ್ಗೆ ಸತ್ಯನಾರಾಯಣ ಪೂಜೆ, ಹೋಮ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು. 
    ನ್ಯಾಯಬೆಲೆ ಅಂಗಡಿ ವಿತರಕರಾದ ಸಚ್ಚಿದಾನಂದ-ಎ.ಎಸ್ ಪದ್ಮಾವತಿ ದಂಪತಿ ಸತ್ಯನಾರಾಯಣ ಪೂಜೆ, ಹೋಮ ಧಾರ್ಮಿಕ ಆಚರಣೆ ನೆರವೇರಿಸಿದರು. ಗಣೇಶ್ ಕಾಲೋನಿ, ವಿದ್ಯಾಮಂದಿರ, ಹಾಲಪ್ಪ ಶೆಡ್, ಕಿತ್ತೂರುರಾಣಿ ಚನ್ನಮ್ಮ ಬಡಾವಣೆ(ಕೆ.ಸಿ ಬ್ಲಾಕ್), ಎನ್‌ಟಿಬಿ ಬಡಾವಣೆ ಸೇರಿದಂತೆ ಜನ್ನಾಪುರ ಸುತ್ತಮುತ್ತಲಿನ ನಿವಾಸಿಗಳು ಪಾಲ್ಗೊಂಡಿದ್ದರು.  ಸ್ಥಳೀಯ ಯುವಕರು ಒಗ್ಗಟ್ಟಾಗಿ ನಿರಂತರವಾಗಿ ವಿನಾಯಕ ಮಹೋತ್ಸವ ಆಚರಿಸಿಕೊಂಡು ಬರುತ್ತಿದ್ದು, ೩೧ರ ಭಾನುವಾರ ವಿವಿಧ ಕಲಾತಂಡಗಳೊಂದಿಗೆ ಉತ್ಸವ ಮೆರವಣಿಗೆ ಮೂಲಕ ವಿನಾಯಕ ಮೂರ್ತಿ ವಿಸರ್ಜನೆ ನಡೆಯಲಿದೆ.

ಶುಕ್ರವಾರ, ಆಗಸ್ಟ್ 29, 2025

ಗಣಪತಿ ಮೂರ್ತಿ ವಿಸರ್ಜನೆ : ಮೆರವಣಿಗೆಯಲ್ಲಿ ಯುವಕರ ಸಂಭ್ರಮ

ಭದ್ರಾವತಿ ನಗರದ ಜನ್ನಾಪುರ ಜಯಶ್ರೀ ವೃತ್ತದ ಸರ್ಕಾರಿ ಶಾಲೆ ಮುಂಭಾಗ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಶುಕ್ರವಾರ ವಿಸರ್ಜಿಸಲಾಯಿತು. 
    ಭದ್ರಾವತಿ: ನಗರದ ಜನ್ನಾಪುರ ಜಯಶ್ರೀ ವೃತ್ತದ ಸರ್ಕಾರಿ ಶಾಲೆ ಮುಂಭಾಗ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಶುಕ್ರವಾರ ವಿಸರ್ಜಿಸಲಾಯಿತು. 
    ಸುಮಾರು ೬ ಅಡಿ ಎತ್ತರದ ಆಕರ್ಷಕ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ೩ ದಿನಗಳ ಕಾಲ ಆರಾಧಿಸಿ ಸಂಜೆ ಕಲಾತಂಡಗಳೊಂದಿಗೆ ಜನ್ನಾಪರ ಪ್ರಮುಖ ರಸ್ತೆಗಳಲ್ಲಿ ಗಣಪತಿ ಮೂರ್ತಿ ಮೆರವಣಿಗೆ ನಡೆಸಲಾಯಿತು. ಯುವಕರು ಕಲಾತಂಡಗಳ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ರಾತ್ರಿ ಜನ್ನಾಪುರ ಕೆರೆಯಲ್ಲಿ ಮೂರ್ತಿ ವಿಸರ್ಜನೆ ನಡೆಯಿತು.

೯ ದಿನಗಳ ವೆಲಾಂಗಣಿ ಆರೋಗ್ಯ ಮಾತೆ ವಾರ್ಷಿಕ ಮಹೋತ್ಸವಕ್ಕೆ ಚಾಲನೆ




ಭದ್ರಾವತಿ ಗಾಂಧಿನಗರದ ವೆಲಾಂಗಣಿ ಆರೋಗ್ಯ ಮಾತೆ ದೇವಾಲಯದ ೪೧ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಸೆರಾವೋರವರು ಮಾತೆಯ ಧ್ವಜಾರೋಹಣ ನೆರವೇರಿಸುವ ಮೂಲಕ ಅದ್ದೂರಿ ಚಾಲನೆ ನೀಡಿದರು. 
    ಭದ್ರಾವತಿ : ಇಲ್ಲಿನ ಗಾಂಧಿನಗರದ ವೆಲಾಂಗಣಿ ಆರೋಗ್ಯ ಮಾತೆ ದೇವಾಲಯದ ೪೧ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಸೆರಾವೋರವರು ಮಾತೆಯ ಧ್ವಜಾರೋಹಣ ನೆರವೇರಿಸುವ ಮೂಲಕ ಅದ್ದೂರಿ ಚಾಲನೆ ನೀಡಿದರು. 
    ಬ್ಯಾಂಡ್‌ಸೆಟ್ ತಂಡದೊಂದಿಗೆ ದೇವಾಲಯದ ಆವರಣಕ್ಕೆ ಮಾತೆಯ ಧ್ವಜವನ್ನು ಮೆರವಣಿಗೆ ಮೂಲಕ ತರಲಾಯಿತು. ದೇವಾಲಯದ ಮುಖ್ಯದ್ವಾರದ  ಮುಂಭಾಗ ನೂತನವಾಗಿ ಧ್ವಜಸ್ಥಂಭ ನಿರ್ಮಿಸಲಾಗಿದ್ದು, ಅದರ ಉದ್ಘಾಟನೆ ಕಾರ್ಯವನ್ನು ಸಹ ನೆರವೇರಿಸಲಾಯಿತು. 
    ಸೆ.೮ ರಂದು ನಡೆಯಲಿರುವ ಮಾತೆಯ ಮಹೋತ್ಸವದ ಅಂಗವಾಗಿ ೯ ದಿನಗಳು ಧಾರ್ಮಿಕ ಆಚರಣೆಗಳು ನಡೆಯಲಿದ್ದು, ದೇವಾಲಯವನ್ನು ತಳಿರು, ತೋರಣಗಳಿಂದ ಅಲಂಕರಿಸಲಾಗಿದೆ. 
    ದೇವಾಲಯದ ಧರ್ಮಗುರು ಫಾದರ್ ಸ್ಟೀವನ್ ಡೇಸಾ, ಶಿವಮೊಗ್ಗ ಧರ್ಮ ಕ್ಷೇತ್ರದ ಯುವಜನ ನಿರ್ದೇಶಕರಾದ ಫಾದರ್ ಫ್ರಾಂಕ್ಲಿನ್, ಫಾದರ್ ಸಂತೋಷ್ ಪೆರೇರ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹಾಗು ಸುತ್ತಮುತ್ತಲ ಧರ್ಮ ಕೇಂದ್ರದ ಗುರುಗಳು, ಧರ್ಮಭಗಿನಿಯರು, ಗಾಯನ ಮಂಡಳಿ ಹಾಗೂ ಧರ್ಮ ಕೇಂದ್ರದ ಭಕ್ತರು ಉಪಸ್ಥಿತರಿದ್ದರು.

ಜಿ.ಸಿ ಬಾಯ್ಸ್ ಯುವಕರ ಸಂಘದಿಂದ ವಿನಾಯಕ ಮಹೋತ್ಸವ : ಆ.೩೦ರಂದು ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಗಣೇಶ್ ಕಾಲೋನಿ ಜಿ.ಸಿ ಬಾಯ್ಸ್ ಯುವಕರ ಸಂಘದ ವತಿಯಿಂದ ೫೫ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸಲಾಗುತ್ತಿದ್ದು, ಈ ಬಾರಿ ನವಿಲಿನ ಮೇಲೆ ಕುಳಿತ ಆಕರ್ಷಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಜನ್ನಾಪುರ ಗಣೇಶ್ ಕಾಲೋನಿ ಜಿ.ಸಿ ಬಾಯ್ಸ್ ಯುವಕರ ಸಂಘದ ವತಿಯಿಂದ ೫೫ನೇ ವರ್ಷದ ವಿನಾಯಕ ಮಹೋತ್ಸವ ಆಚರಿಸಲಾಗುತ್ತಿದ್ದು, ಆ.೩೧ರ ಭಾನುವಾರ ಮೂರ್ತಿ ವಿಸರ್ಜನೆ ನಡೆಯಲಿದೆ. 
    ಸ್ಥಳೀಯ ಯುವಕರು ಒಗ್ಗಟ್ಟಾಗಿ ನಿರಂತರವಾಗಿ ವಿನಾಯಕ ಮಹೋತ್ಸವ ಆಚರಿಸಿಕೊಂಡು ಬರುತ್ತಿದ್ದು, ಈ ಬಾರಿ ನವಿಲಿನ ಮೇಲೆ ಕುಳಿತ ಆಕರ್ಷಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. 
    ಆ.೩೦ರ ಶನಿವಾರ ಬೆಳಿಗ್ಗೆ ಸತ್ಯನಾರಾಯಣ ಪೂಜೆ ಮತ್ತು ಮಧ್ಯಾಹ್ನ ೧೨ ಗಂಟೆಗೆ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ೩೧ರ ಭಾನುವಾರ ವಿವಿಧ ಕಲಾತಂಡಗಳೊಂದಿಗೆ ಉತ್ಸವ ಮೆರವಣಿಗೆ ಮೂಲಕ ವಿನಾಯಕ ಮೂರ್ತಿ ವಿಸರ್ಜನೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.  

ರಮೇಶ್ ನಿಧನ

ರಮೇಶ್ 
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಸುರಗಿತೋಪು, ೪ನೇ ಕ್ರಾಸ್ ನಿವಾಸಿ ಹಾಗು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಅಭಿಮಾನಿ ರಮೇಶ್(೫೫) ಶುಕ್ರವಾರ ನಿಧನ ಹೊಂದಿದ್ದಾರೆ. 
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಕಳೆದ ೩ ದಿನಗಳ ಹಿಂದೆ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ರಸ್ತೆಯಲ್ಲಿ ತೀವ್ರ ಅಸ್ವಸ್ಥಗೊಂಡು ಬಿದ್ದಿದ್ದ ಇವರನ್ನು ಬೆಳಗಿನ ಜಾವ ರಸ್ತೆಯಲ್ಲಿ ವಾಯು ವಿಹಾರಕ್ಕೆ ಬರುವವರು ಕಂಡು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. 
    ರಮೇಶ್ ಸುರಗಿತೋಪಿನಲ್ಲಿ ಒಬ್ಬರೇ ವಾಸವಿದ್ದು, ಪತ್ನಿ ಮತ್ತು ಮಕ್ಕಳು ದಾವಣಗೆರೆ ವಾಸವಿದ್ದಾರೆ. ಜೆಪಿಎಸ್ ಕಾಲೋನಿ ಮೆಸ್ಕಾಂ ಕಛೇರಿ ಆವರಣದ ಉದ್ಯಾನವನದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.  
    ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಅಭಿಮಾನಿಯಾಗಿದ್ದ ಇವರ ನಿಧನಕ್ಕೆ ಜೆಡಿಎಸ್ ಯುವ ಮುಖಂಡ ಎಂ.ಎ ಅಜಿತ್, ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ಆಡಳಿತ ಮಂಡಳಿ ಹಾಗು ಸುರಗಿತೋಪು ನಿವಾಸಿಗಳು ಸಂತಾಪ ಸೂಚಿಸಿದ್ದಾರೆ.