ಸೋಮವಾರ, ಸೆಪ್ಟೆಂಬರ್ 8, 2025

ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನ : ವಿವಿಧ ಸೇವಾ ಕಾರ್ಯಗಳು



ಭದ್ರಾವತಿಯಲ್ಲಿ ಈದ್ ಮಿಲಾದ್ ಹಬ್ಬ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಚನ್ನಗಿರಿ ರಸ್ತೆಯ ಹೊಳೆಹೊನ್ನೂರು ವೃತ್ತದಲ್ಲಿ ಉಸ್ಮಾನಿಯಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜೆಬಿಟಿ ಬಾಬು ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ರಕ್ತದಾನ ಶಿಬಿರ ಹಾಗು ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ತಹಸೀಲ್ದಾರ್ ಪರುಸಪ್ಪ ಕುರುಬರ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ರಿಯಾಜ್, ಸದಸ್ಯ ಬಿ.ಎಂ.ಮಂಜುನಾಥ್, ಖದೀರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಭದ್ರಾವತಿ : ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನ ಆಚರಣೆ ಸಂಭ್ರಮದ ಹಿನ್ನಲೆಯಲ್ಲಿ ಸೋಮವಾರ ಒಂದೆಡೆ ಮರ್ಕಜೀ ಇದಾರ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮತ್ತೊಂದೆಡೆ ಮುಸ್ಲಿಂ ಸಮುದಾಯದ ವಿವಿಧ ಸಂಘಟನೆಗಳಿಂದ ಸಾಮಾಜಿಕ ಸೇವಾ ಕಾರ್ಯಗಳು ನೆರವೇರಿದವು. 
    ಮೆರವಣಿಗೆ ಆರಂಭಕ್ಕೂ ಮೊದಲು ನಗರದ ಚನ್ನಗಿರಿ ರಸ್ತೆಯ ಹೊಳೆಹೊನ್ನೂರು ವೃತ್ತದಲ್ಲಿ ಉಸ್ಮಾನಿಯಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜೆಬಿಟಿ ಬಾಬು ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ರಕ್ತದಾನ ಶಿಬಿರ ಹಾಗು ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. 
    ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ವಿ. ಕದಿರೇಶ್, ತಹಸೀಲ್ದಾರ್ ಪರುಸಪ್ಪ ಕುರುಬರ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ರಿಯಾಜ್, ಸದಸ್ಯ ಬಿ.ಎಂ.ಮಂಜುನಾಥ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಖದೀರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಇದೆ ಸಂದರ್ಭದಲ್ಲಿ ಬಡಮಹಿಳೆಯರಿಗೆ ಸೀರೆ ಮತ್ತು ರವಿಕೆ ವಿತರಿಸಲಾಯಿತು. ಸತ್ಯ ಚಿತ್ರಮಂದಿರ ಬಳಿ ಆಜಾಮ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಅನ್ನದಾನ, ಸಿಹಿ ಜಿಲೇಬಿ, ತಂಪು ಪಾನೀಯ ವಿತರಣೆ, ರಂಗಪ್ಪ ವೃತ್ತದಲ್ಲಿ ನಗರಸಭಾ ಸದಸ್ಯ ಬಿ.ಎಂ ಮಂಜುನಾಥ್ ನೇತೃತ್ವದಲ್ಲಿ ಟೀಕು ಬಾಯ್ಸ್ ವತಿಯಿಂದ ತಂಪು ಪಾನೀಯ ವಿತರಣೆ ನಡೆಯಿತು. 
    ಡಾ. ರಾಜಕುಮಾರ್ ರಸ್ತೆ ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸೊಸೈಟಿ (ಟಿಎಪಿಸಿಎಂಎಸ್) ಮುಂಭಾಗದಲ್ಲಿ ದೇಶಭಕ್ತ ಟಿಪ್ಪು ಕಮಿಟಿಯಿಂದ ಅಧ್ಯಕ್ಷ ಮಹಬೂಬ್, ಇಮ್ರಾನ್, ಖಲೀಂ ಮುಂತಾದವರು ಸಿಹಿ ಪಾನೀಯ ಮತ್ತು ಅನ್ನ ಸಂತರ್ಪಣೆ ನೆರವೇರಿಸಿ ಸಂಭ್ರಮಿಸಿದರು.

ಈದ್ ಮಿಲಾದ್ ಸಂಭ್ರಮಾಚರಣೆ : ಬೃಹತ್ ಮೆರವಣಿಗೆ, ಸಾಮೂಹಿಕ ಪ್ರಾರ್ಥನೆ

ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನ ಶುಕ್ರವಾರ ಭದ್ರಾವತಿ ನಗರದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗಿತ್ತು. ಇದರ ಅಂಗವಾಗಿ ಸೋಮವಾರ ಮರ್ಕಜೀ ಇದಾರ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು. 
    ಭದ್ರಾವತಿ: ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನ ಶುಕ್ರವಾರ ನಗರದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗಿತ್ತು. ಇದರ ಅಂಗವಾಗಿ ಸೋಮವಾರ ಮರ್ಕಜೀ ಇದಾರ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು. 
    ನಗರದ ಹೊಳೆಹೊನ್ನೂರು ವೃತ್ತದಿಂದ ಆರಂಭಗೊಂಡ ಬೃಹತ್ ಮೆರವಣಿಗೆಯಲ್ಲಿ ಆಕರ್ಷಕವಾದ ಮೆಕ್ಕಾ-ಮದೀನಾ ಮಾದರಿಗಳು ಕಂಗೊಳಿಸಿದವು. ಈ ನಡುವೆ ಮುಸ್ಲಿಂ ಸಮುದಾಯದ ಯುವಕರು ಹಸಿರು ಧ್ವಜಗಳನ್ನು ಹಿಡಿದು ಸಂಭ್ರಮಿಸಿದರು. ನಗರದ ವಿವಿಧ ಮಸೀದಿಗಳಿಂದ ಆಗಮಿಸಿದ್ದ ಧರ್ಮ ಗುರುಗಳು ಕುರಾನ್ ಧರ್ಮ ಸಂದೇಶಗಳನ್ನು ವಾಚಿಸುವ ಮೂಲಕ ಹಬ್ಬದ ಮಹತ್ವ ಸಾರಿದರು. ಈ ನಡುವೆ ಮೆರವಣಿಗೆಗೆ ಪೂರ್ವಭಾವಿಯಾಗಿ ನಗರದ ಪ್ರಮುಖ ವೃತ್ತಗಳಲ್ಲಿ ಹಸಿರು ದ್ವಾರಗಳ ನಿರ್ಮಾಣ, ಪ್ರಮುಖ ರಸ್ತೆಗಳಲ್ಲಿ ಹಸಿರು ಧ್ವಜಾ, ಹಸಿರು ಬಂಟಿಂಗ್ಸ್‌ಗಳು ರಾರಾರಾಜಿಸುತ್ತಿದ್ದವು. 
    ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ನಗರದ ವಿವಿಧ ಮಸೀದಿಗಳ ಮುಖಂಡರ ನೇತೃತ್ವದಲ್ಲಿ ಆಯಾ ಭಾಗದ ಮುಸ್ಲಿಂ ಸಮುದಾಯದವರು ಒಂದೆಡೆ ಗುಂಪು ಗುಂಪಾಗಿ ಸೇರಿದ್ದರು. ಇದರಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಜನಸಂದಣಿ ಕಂಡು ಬಂದಿತು. ವಾಹನಗಳ ಸುಗಮ ಸಂಚಾರದಲ್ಲಿ ಅಸ್ತವ್ಯಸ್ತವಾಗಿತ್ತು. ಸಂಚಾರಿ ಪೊಲೀಸರು ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿಕೊಡಲು ಹರಸಹಾಸ ಪಡುವಂತಾಯಿತು. 


    ಹೊಳೆಹೊನ್ನೂರು ವೃತ್ತದಿಂದ ಆರಂಭಗೊಂಡ ಮೆರವಣಿಗೆ ರಂಗಪ್ಪ ವೃತ್ತ, ಮಾಧವಚಾರ್ ವೃತ್ತ ಮೂಲಕ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯಲ್ಲಿ ಸಾಗಿ ಸಯ್ಯದ್ ಸಾದತ್ ದರ್ಗಾದಲ್ಲಿ ಅಂತ್ಯಗೊಂಡಿತು. ನಂತರ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. 
    ಮೆರವಣಿಗೆಯಲ್ಲಿ ಮರ್ಕಜೀ ಇದಾರ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಅಯೂಬ್ ಖಾನ್, ಪದಾಧಿಕಾರಿಗಳಾದ ದಿಲ್ದಾರ್, ಆಬಿದ್ ಆಲಿ, ಫಾರೂಖ್, ಸಿ.ಎಂ ಖಾದರ್, ಮುಖಂಡರಾದ ಸಿ.ಎಂ ಸಾಧಿಕ್, ಮಹಮ್ಮದ್ ಸನಾವುಲ್ಲಾ, ಕರಿಯಪ್ಪ, ತ್ಯಾಗರಾಜ್, ತರುಣ್, ಮೈಲಾರಪ್ಪ, ಜೆಬಿಟಿ ಬಾಬು, ಸಯ್ಯದ್ ರಿಯಾಜ್, ಇಮ್ರಾನ್, ಖಲೀಮುಲ್ಲಾ, ಭಾಷಾ, ಶಬ್ಬೀರ್, ಮುಸ್ತಾಫಾ, ಮುಸ್ತಾಖ್, ನಗರಸಭೆ ಉಪಾಧ್ಯಕ್ಷ  ಮಣಿ ಎಎನ್‌ಎಸ್, ಸದಸ್ಯರಾದ ಬಿ.ಕೆ ಮೋಹನ್, ವಿ. ಕದಿರೇಶ್, ಬಿ.ಟಿ ನಾಗರಾಜ್, ಬಿ.ಎಸ್ ಗಣೇಶ್, ಬಿ.ಎಂ ಮಂಜುನಾಥ್ ಸೇರಿದಂತೆ ವಿವಿಧ ಧರ್ಮಗಳ, ವಿವಿಧ ಸಂಘ-ಸಂಸ್ಥೆಗಳ, ರಾಜಕೀಯಗಳ ಪಕ್ಷಗಳ ಮುಖಂಡರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡು ಮೆರವಣಿಗೆಯಲ್ಲಿ ಸೌಹಾರ್ದತೆ ಮೆರೆದರು.
  ಉಪವಿಭಾಗಾಧಿಕಾರಿ ಸತ್ಯನಾರಾಯಣ್, ತಹಸೀಲ್ದಾರ್ ಪರುಸಪ್ಪ ಕುರುಬರ, ನಗರಸಭೆ ಪೌರಾಯುಕ್ತ ಕೆ.ಎನ್ ಹೇಮಂತ್, ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.  
ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಬೃಹತ್ ಮೆರವಣಿಗೆ ನಡೆಯಿತು. ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿಡಿಯೋ ಚಿತ್ರೀಕರಣ ಛಾಯಾಗ್ರಾಹಕರು, ದ್ರೋಣ್ ನಿರ್ವಾಹಕರನ್ನು ಬಂದೋಬಸ್‌ಗೆ ಬಳಸಿಕೊಳ್ಳಲಾಗಿತ್ತು. 

ಮತ್ತಿಘಟ್ಟ ಗ್ರಾಮಕ್ಕೆ ಪ್ರತಿದಿನ ಒಂದು ಗಂಟೆ ಕುಡಿಯುವ ನೀರು ಸರಬರಾಜು ಮಾಡಿ

ತಡಸ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹ 

ಪ್ರತಿದಿನ ಒಂದು ಗಂಟೆ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಒತ್ತಾಯಿಸಿ ಭದ್ರಾವತಿ ತಾಲೂಕಿನ ಮತ್ತಿಘಟ್ಟ ಗ್ರಾಮಸ್ಥರು ಸೋಮವಾರ ತಡಸ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದರು. 
    ಭದ್ರಾವತಿ : ಪ್ರತಿದಿನ ಒಂದು ಗಂಟೆ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಒತ್ತಾಯಿಸಿ ತಾಲೂಕಿನ ಮತ್ತಿಘಟ್ಟ ಗ್ರಾಮಸ್ಥರು ಸೋಮವಾರ ತಡಸ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
    ಅಂಬೇಡ್ಕರ್ ವೈಚಾರಿಕಾ ವೇದಿಕೆ ಕರ್ನಾಟಕ (ಎವೈವಿಕೆ) ಸಂಘಟನೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮತ್ತಿಘಟ್ಟ ಗ್ರಾಮಸ್ಥರು ಪ್ರತಿದಿನ ಒಂದು ಗಂಟೆ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
    ಎವೈವಿಕೆ ತಾಲೂಕು ಸಂಚಾಲಕ ಪಿ. ಮೂರ್ತಿ ಮಾತನಾಡಿ, ಈ ಗ್ರಾಮದಲ್ಲಿ ೭ ರಿಂದ ೮ ವಿವಿಧ ಸಮುದಾಯಗಳಿಗೆ ಸೇರಿದ ಬೀದಿಗಳಿದ್ದು. ದಿನಕ್ಕೆ ಒಂದು ಬೀದಿಗೆ ಸರದಿಯಂತೆ ವಾರದಲ್ಲಿ ಒಂದು ದಿನ ನೀರು ಸರಬರಾಜು ಮಾಡಲಾಗುತ್ತಿದೆ. ಜನರು ಆ ನೀರನ್ನು ೬-೭ ದಿನ ಶೇಖರಿಸಿಟ್ಟುಕೊಂಡು ಕುಡಿಯುತ್ತಿದ್ದಾರೆ. ಈ ರೀತಿ ವಾರಗಟ್ಟಲೆ ಶೇಖರಿಸಿಟ್ಟುಕೊಂಡು ನೀರನ್ನು ಕುಡಿಯುವುದರಿಂದ ಜನರು ಅನೇಕ ರೋಗ-ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದಾಗಿ ಡೆಂಗ್ಯೂ, ಮಲೇರಿಯಾ. ಚಿಕನ್-ಗುನ್ಯಾದಂತಹ ರೋಗಗಳು ಗ್ರಾಮದಲ್ಲಿ ಜನರಿಗೆ ಹರಡುತ್ತಿವೆ. ಕೂಡಲೇ ಈ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು. 
  ಗ್ರಾಮದ ಮುಖಂಡ ಮುನಿರಾಜು ಮಾತನಾಡಿ, ನಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಇದೆ. ಆದರೆ ಸರಬರಾಜು ಮಾಡುವ ವ್ಯವಸ್ಥೆ ಸರಿ ಇಲ್ಲ. ಪಂಚಾಯಿತಿ ಅಧಿಕಾರಿಗಳು ಈ ಕುರಿತು ಗಮನಹರಿಸುತ್ತಿಲ್ಲ. ಗ್ರಾಮದ ನೀರುಗಂಟಿ ನಿರ್ಲಕ್ಷದಿಂದ ವರ್ತಿಸುತ್ತಿದ್ದಾರೆ. ಗ್ರಾಮದ ಎಲ್ಲಾ ಬೀದಿಗಳಿಗೂ ಪ್ರತಿದಿನ ಒಂದು ಬೀದಿಗೆ ಅರ್ಧ ಗಂಟೆಯಂತೆ ನೀರುಗಂಟಿ ನೀರು ಸರಬರಾಜು ಮಾಡಿದರೆ ಜನರಿಗೆ ಅನುಕೂಲವಾಗಲಿದೆ ಎಂದು ಒತ್ತಾಯಿಸಿದರು.
    ತಡಸ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನವಿ ಸ್ವೀಕರಿಸಿ ಮಾತನಾಡಿ, ಮತ್ತಿಘಟ್ಟ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಸಮಸ್ಯೆ ಇರುವುದು ನನ್ನ ಗಮನಕ್ಕೆ ಬಂದಿಲ್ಲ. ನಾನು ಇಲ್ಲಿಗೆ ವರ್ಗಾವಣೆಯಾಗಿ ಬಂದು ಎರಡು ತಿಂಗಳಾಯಿತು.  ತಕ್ಷಣ ಮತ್ತಿಘಟ್ಟ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. 
    ಪ್ರತಿಭಟನೆಯಲ್ಲಿ ಮುಖಂಡರಾದ ಚಂದ್ರಪ್ಪ, ರಮೇಶ್, ರವಿಕುಮಾರ್, ರಂಗರಾವ್, ವೆಂಕಟೇಶ್, ದಯಾನಂದ. ಸಂಜಯ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. 
 
 ಮತ್ತಿಘಟ್ಟ ಗ್ರಾಮದಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಗ್ರಾಮದಲ್ಲಿರುವ ಎರಡು ಬೋರ್ವೆಲ್‌ಗಳಲ್ಲಿ ಅಂತರ್ಜಲ ತುಂಬಿದೆ. ನೀರಿನ ಸಂಗ್ರಹಕ್ಕೆ ಟ್ಯಾಂಕ್ ವ್ಯವಸ್ಥೆ ಕೂಡ ಇದೆ. ಅಲ್ಲದೆ  ಗ್ರಾಮದ ಸಮೀಪದಲ್ಲಿಯೇ ಉಕ್ಕಿ ಹರಿಯುತ್ತಿರುವ ಭದ್ರಾನದಿಯೂ ಇದೆ. ಆದರೂ ಮತಿಘಟ್ಟ ಗ್ರಾಮದ ಜನರಿಗೆ ಕುಡಿಯುವ ಶುದ್ದ ನೀರಿನ ವ್ಯವಸ್ಥೆ ಇಲ್ಲ. ಪಂಚಾಯಿತಿ ಅಧಿಕಾರಿಗಳು ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು.
                                   -ಪಿ. ಮೂರ್ತಿ, ಎವೈವಿಕೆ ತಾಲೂಕು ಸಂಚಾಲಕ. 

ಭಾನುವಾರ, ಸೆಪ್ಟೆಂಬರ್ 7, 2025

ಬ್ರಹ್ಮಶ್ರೀ ನಾರಾಯಣಗುರುಗಳ ಆದರ್ಶತನ ಮುಂದಿನ ಪೀಳಿಗೆಗೂ ಸಾಗಲಿ : ಎಸ್.ಎಚ್ ರವಿಕುಮಾರ್

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ನಾರಾಯಣಗುರು ವಿಚಾರ ವೇದಿಕೆ, ಈಡಿಗ ಸಮಾಜದ ೨೬ ಪಂಗಡಗಳು ಮತ್ತು ಆರ್ಯ ಈಡಿಗ ಮಹಿಳಾ ಸಮಾಜ, ಕೇರಳ ಸಮಾಜ, ಈಡಿಗ ಸಮಾಜ ಹಾಗು ಬಿಲ್ಲವ ಸಮಾಜ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ  ಹಮ್ಮಿಕೊಳ್ಳಲಾಗಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ ೧೭೧ನೇ ಜಯಂತಿ ಕಾರ್ಯಕ್ರಮದಲ್ಲಿ ಶಿವಮೊಗ್ಗ ಕಸ್ತೂರಿಬಾ ಬಾಲಕಿಯರ ಕಾಲೇಜಿನ ಹಿರಿಯ ಉಪನ್ಯಾಸಕ ಎಸ್.ಎಚ್ ರವಿಕುಮಾರ್ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ : ಮೌಡ್ಯ, ಕಂದಾಚಾರಗಳಿಂದ ಮುಕ್ತವಾದ, ಸರ್ವಸಮಾನತೆಯಿಂದ ಕೂಡಿರುವ ಸಮಾಜ ನಿರ್ಮಾಣವಾಗಬೇಕೆಂಬ ಆಶಯ ಬ್ರಹ್ಮಶ್ರೀ ನಾರಾಯಣಗುರುಗಳು ಹೊಂದಿದ್ದರು. ಇಂತಹ ಆದರ್ಶ ವ್ಯಕ್ತಿಯ ಆದರ್ಶತನಗಳು ಮುಂದಿನ ಪೀಳಿಗೆಗೂ ಸಾಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಗಮನ ಹರಿಸಬೇಕಾಗಿದೆ ಎಂದು ಶಿವಮೊಗ್ಗ ಕಸ್ತೂರಿಬಾ ಬಾಲಕಿಯರ ಕಾಲೇಜಿನ ಹಿರಿಯ ಉಪನ್ಯಾಸಕ ಎಸ್.ಎಚ್ ರವಿಕುಮಾರ್ ಹೇಳಿದರು. 
    ಅವರು ಭಾನುವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ನಾರಾಯಣಗುರು ವಿಚಾರ ವೇದಿಕೆ, ಈಡಿಗ ಸಮಾಜದ ೨೬ ಪಂಗಡಗಳು ಮತ್ತು ಆರ್ಯ ಈಡಿಗ ಮಹಿಳಾ ಸಮಾಜ, ಕೇರಳ ಸಮಾಜ, ಈಡಿಗ ಸಮಾಜ ಹಾಗು ಬಿಲ್ಲವ ಸಮಾಜ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ ೧೭೧ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು.
    ಜನರಲ್ಲಿನ ಮೌಢ ಕಂದಾಚಾರಗಳನ್ನು ಹೋಗಲಾಡಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣದ ಮೂಲಕ ಉದ್ಯೋಗ, ಆರ್ಥಿಕವಾಗಿ ಸದೃಡರಾಗಲು ಸಾಧ್ಯವಾಗುತ್ತದೆ. ಜಾತ್ಯಾತೀತ ಮನೋಭಾವ  ಬೆಳೆಸಿಕೊಂಡು ಸಾಮರಸ್ಯದಿಂದ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ಚಿಂತನೆಗಳನ್ನು ಹೊಂದಿದ್ದ ನಾರಾಯಣ ಗುರುಗಳ ಹಲವಾರು ಅಂಶಗಳು ಅಂಬೇಡ್ಕರ್‌ರವರು ರಚಿಸಿದ ಸಂವಿಧಾನದಲ್ಲಿ ಕಾಣಬಹುದಾಗಿದೆ ಎಂದರು.
    ಸಮಾಜ ಸುಧಾರಕರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸವಾಗಲು ಸರ್ಕಾರ ಜಯಂತಿಗಳನ್ನು  ಆಚರಿಸುತ್ತಿದೆ. ಆದರೆ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾದ ಯುವಕರುಗಳೇ ಕಾರ್ಯಕ್ರಮದಲ್ಲಿ ಭಾಗವಹಿಸದಿರುವುದು ದೊಡ್ಡ ದುರಂತ. ಡಾ. ಬಿ.ಆರ್ ಅಂಬೇಡ್ಕರ್, ಜಗಜ್ಯೋತಿ ಬಸವಣ್ಣ, ನಾರಾಯಣಗುರುಗಳಂತಹ ಮಹನೀಯರು ಒಂದೇ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಇವರು ಎಲ್ಲಾ ಸಮುದಾಯಗಳ, ಸಮಾಜದ ಉದ್ದಾರಕರು. ಇಂತಹ ಮಹನೀಯರ ಜಯಂತಿಗಳಿಗೆ ಎಲ್ಲಾ ಸಮುದಾಯದ ಜನರು ಸೇರಬೇಕು. ಅವರ ತತ್ವ ಆದರ್ಶಗಳನ್ನು ತಿಳಿದುಕೊಂಡು ಇನ್ನಿತರರಿಗೆ ತಿಳಿಸುವ ಕೆಲಸ ಆದಾಗ ಮಾತ್ರ ಅವರ ಅನುಯಾಯಿಗಳಾಗಲು ಸಾಧ್ಯವಾಗುತ್ತದೆ ಎಂದರು. 
    ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ನಾರಾಯಣಗುರುಗಳ ತತ್ವ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕಾಗಿದೆ. ಈಡಿಗ ಸಮುದಾಯಕ್ಕೆ ಕ್ಷೇತ್ರದ ಶಾಸಕರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಹಾಗೂ ವಿಧಾನಸಭೆ ಮಾಜಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರು ನಾರಾಯಣ ಗುರುಗಳ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರ ಪರಿಣಾಮವಾಗಿಯೇ ಜಾತ್ಯಾತೀತ ಮನೋಭಾವದ ಅತ್ಯುತ್ತಮ ಜನನಾಯಕರು ಎನಿಸಿಕೊಂಡರು ಎಂದರು.
    ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್, ಶ್ರೀ ನಾರಾಯಣಗುರು ವಿಚಾರ ವೇದಿಕೆ ತಾಲೂಕು ಅಧ್ಯಕ್ಷ ಎನ್. ನಟರಾಜ್, ಗೌರವಾಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ತಹಸೀಲ್ದಾರ್ ಗ್ರೇಡ್-೨ ಮಂಜಾನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಸಂಪನ್ಮೂಲ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಇ.ಬಿ ಗಣೇಶ್,  ಕೇರಳ ಸಮಾಜದ ಅಧ್ಯಕ್ಷ ಗಂಗಾಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ವೇಲಾಂಗಣಿ ಆರೋಗ್ಯ ಮಾತೆಯ ಭವ್ಯ ತೇರಿನ ಮೆರವಣಿಗೆ

ಭದ್ರಾವತಿ ಹಳೇನಗರ ವ್ಯಾಪ್ತಿಯ ಗಾಂಧಿನಗರದ ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಅಲಂಕೃತ ಭವ್ಯ ತೇರಿನ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. 
    ಭದ್ರಾವತಿ: ಹಳೇನಗರ ವ್ಯಾಪ್ತಿಯ ಗಾಂಧಿನಗರದ ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಅಲಂಕೃತ ಭವ್ಯ ತೇರಿನ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. 
    ಕಾಗದನಗರ ಸಂತ ಕಾರ್ಮಿಕರ ದೇವಾಲಯದ ಧರ್ಮಗುರು ಫಾದರ್ ಡೊಮಿನಿಕ್ ಕ್ರಿಸ್ತರಾಜ್ ತೇರಿನ ಮೆರವಣಿಗೆಗೆ ಚಾಲನೆ ನೀಡಿದರು. ಗಾಂಧಿನಗರ, ಸಂತೆ ಮೈದಾನ ರಸ್ತೆ, ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ತರೀಕೆರೆ ರಸ್ತೆ, ಗಾಂಧಿವೃತ್ತ ಮಾರ್ಗವಾಗಿ ದೇವಾಲಯಕ್ಕೆ ಹಿಂದಿರುಗಲಾಯಿತು. ಭಕ್ತರು ಮೇಣದಬತ್ತಿಗಳನ್ನು ಹಿಡಿದು ಪ್ರಾರ್ಥಿಸುತ್ತಾ ಮೆರವಣಿಗೆಯಲ್ಲಿ ಸಾಗಿಸಿದರು.
    ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದ ಧರ್ಮಗುರು ಫಾದರ್ ಸ್ಟೀವನ್ ಡೇಸಾ, ಧರ್ಮಭಗಿನಿಯರು, ಭಕ್ತಾಧಿಗಳು ಪಾಲ್ಗೊಂಡಿದ್ದರು.

ಯಶಸ್ವಿಯಾಗಿ ಜರುಗಿದ ೮ನೇ ವರ್ಷದ ಚಾತುರ್ಮಾಸ ವ್ರತ ಪೂಜಾನುಷ್ಠಾನದ ಸೀಮೊಲಂಘನ ಕಾರ್ಯಕ್ರಮ

ಶತಶ್ರೀ ಶಂಕರಾತ್ಮಾನಂದ ಸರಸ್ವತಿ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಧಾರ್ಮಿಕ ಸಭೆ 

ಭದ್ರಾವತಿ ಹಳೇನಗರದ ಶ್ರೀ ಕಾಳಿಕಾಂಬ ಸೇವಾ ಸಮಿತಿ ಹಾಗು ಶ್ರೀ ವಿಶ್ವಕರ್ಮ ಸಮಾಜದ ವತಿಯಿಂದ ಶ್ರೀ ಸಾವಿತ್ರೀ ಪೀಠಾಧೀಶ್ವರ ಜಗದ್ಗುರು ಅಷ್ಟೋತ್ತರ ಶತಶ್ರೀ ಶಂಕರಾತ್ಮಾನಂದ ಸರಸ್ವತಿ ಮಹಾಸ್ವಾಮಿಗಳವರ ೮ನೇ ವರ್ಷದ ಚಾತುರ್ಮಾಸ ವ್ರತ ಪೂಜಾನುಷ್ಠಾನದ ಸೀಮೊಲಂಘನ ಕಾರ್ಯಕ್ರಮ ಭಾನುವಾರ ಹಳೇನಗರದ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಯಶಸ್ವಿಯಾಗಿ ಜರುಗಿತು. ಧಾರ್ಮಿಕ ಸಭೆಯ ದಿವ್ಯಸಾನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. 
    ಭದ್ರಾವತಿ : ಹಳೇನಗರದ ಶ್ರೀ ಕಾಳಿಕಾಂಬ ಸೇವಾ ಸಮಿತಿ ಹಾಗು ಶ್ರೀ ವಿಶ್ವಕರ್ಮ ಸಮಾಜದ ವತಿಯಿಂದ ಶ್ರೀ ಸಾವಿತ್ರೀ ಪೀಠಾಧೀಶ್ವರ ಜಗದ್ಗುರು ಅಷ್ಟೋತ್ತರ ಶತಶ್ರೀ ಶಂಕರಾತ್ಮಾನಂದ ಸರಸ್ವತಿ ಮಹಾಸ್ವಾಮಿಗಳವರ ೮ನೇ ವರ್ಷದ ಚಾತುರ್ಮಾಸ ವ್ರತ ಪೂಜಾನುಷ್ಠಾನದ ಸೀಮೊಲಂಘನ ಕಾರ್ಯಕ್ರಮ ಭಾನುವಾರ ಹಳೇನಗರದ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಯಶಸ್ವಿಯಾಗಿ ಜರುಗಿತು. 
    ವಡ್ಡನಹಾಳ್ ಶ್ರೀ ಮಠದ ಗುರುಕುಟೀರದಿಂದ ಬೆಳಿಗ್ಗೆ ಹೊರಟ ಶ್ರೀಗಳು ಭದ್ರಾನದಿಯಲ್ಲಿ ತೀರ್ಥಸ್ನಾನ ನೆರವೇರಿಸಿ ಶ್ರೀ ಕಾಳಿಕಾಂಬ ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು. ನಂತರ ಭಕ್ತರಿಂದ ಶ್ರೀಗಳ ಪಾದಪೂಜೆ ನೆರವೇರಿತು. 
ಶ್ರೀ ಕಾಳಿಕಾಂಬ ದೇವಸ್ಥಾನದ ಆವರಣದಲ್ಲಿ ಜರುಗಿದ ಧಾರ್ಮಿಕ ಸಭೆಯ ದಿವ್ಯಸಾನಿಧ್ಯವಹಿಸಿದ್ದ ಶ್ರೀಗಳು ಚಾತುರ್ಮಾಸ ವ್ರತ ಧಾರ್ಮಿಕ ಆಚರಣೆಯ ಮಹತ್ವ ತಿಳಿಸಿದರು.  ಶ್ರೀ ಕಾಳಿಕಾಂಬ ಸೇವಾ ಸಮಿತಿ ಹಾಗು ಶ್ರೀ ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಿ.ಕೆ ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು.  
    ವಡ್ಡನಹಾಳ್ ಶ್ರೀ ಮಠದ ಅಧ್ಯಕ್ಷ ಟಿ. ಮಹೇಂದ್ರಚಾರ್, ಶ್ರೀ ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಬಿ.ಎಲ್ ನಾಗರಾಜ, ಕಾರ್ಯಾಧ್ಯಕ್ಷ ಸಿ. ರಾಮಾಚಾರಿ, ಶ್ರೀ ಗಾಯಿತ್ರಿ ವಿಶ್ವಕರ್ಮ ಮಹಿಳಾ ಮಂಡಳಿ ಗೌರವಾಧ್ಯಕ್ಷೆ ಭಾಗ್ಯಮ್ಮ ಶಾಂತಾಚಾರ್, ಅಧ್ಯಕ್ಷೆ ಲಕ್ಷ್ಮೀದೇವಮ್ಮ ಕೃಷ್ಣಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮೊದಲು ಭಕ್ತರು ಶ್ರೀಗಳನ್ನು ಅದ್ದೂರಿಯಾಗಿ ಸ್ವಾಗಸಿದರು. 

ಅಂಧರ ಕೇಂದ್ರದಲ್ಲಿ ೫ನೇ ವರ್ಷದ ವಿನಾಯಕ ಮಹೋತ್ಸವ : ಸತ್ಯನಾರಾಯಣ ಪೂಜೆ



ಭದ್ರಾವತಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಪ್ರತಿಷ್ಠಾಪಿಸಲಾಗಿರುವ ೫ನೇ ವರ್ಷದ ವಿನಾಯಕ ಮಹೋತ್ಸವದ ಅಂಗವಾಗಿ ಭಾನುವಾರ ಸತ್ಯನಾರಾಯಣ ಪೂಜೆ ನೆರವೇರಿಸಲಾಯಿತು. 
    ಭದ್ರಾವತಿ : ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಪ್ರತಿಷ್ಠಾಪಿಸಲಾಗಿರುವ ೫ನೇ ವರ್ಷದ ವಿನಾಯಕ ಮಹೋತ್ಸವದ ಅಂಗವಾಗಿ ಭಾನುವಾರ ಸತ್ಯನಾರಾಯಣ ಪೂಜೆ ನೆರವೇರಿಸಲಾಯಿತು. 
    ಸಿದ್ದಾರ್ಥ ಅಂಧರ ಕೇಂದ್ರದ ವಿಕಲಚೇತನರೊಂದಿಗೆ ಸ್ಥಳೀಯರಾದ ತರುಣ್ ಮತ್ತು ಸ್ನೇಹಿತರು ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಕಾರ್ಯದಲ್ಲಿ ನೆರವಾಗುತ್ತಿರುವುದು ವಿಶೇಷವಾಗಿದೆ. ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ರಾಷ್ಟ್ರೀಯ ಹಬ್ಬ ಹಾಗು ನಾಡಹಬ್ಬಗಳ ಜೊತೆಗೆ ಎಲ್ಲಾ ಧರ್ಮದ ಪ್ರತಿಯೊಂದು ಹಬ್ಬ ಹರಿದಿನಗಳನ್ನು ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. 
ವಿನಾಯಕ ಮಹೋತ್ಸವ ಆಚರಣೆಯೊಂದಿಗೆ ವಿಕಲಚೇತನರಲ್ಲೂ ಸಂಘಟನೆ ಮಹತ್ವ ಹಾಗು ಧಾರ್ಮಿಕ ಆಚರಣೆಯ ಮೌಲ್ಯಗಳನ್ನು ತಿಳಿಸಿಕೊಡುವ ಪ್ರಯತ್ನ ಕೈಗೊಳ್ಳಲಾಗುತ್ತಿದೆ. ಒಂದೆಡೆ ಸಂಭ್ರಮ, ಮತ್ತೊಂದೆಡೆ ವಿಕಲಚೇತನರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವಲ್ಲಿ ಸಹ ವಿನಾಯಕ ಮಹೋತ್ಸವ ಸಹಕಾರಿಯಾಗಿದೆ. 
    ಈ ಬಾರಿ ವಿಶೇಷವಾಗಿ ಸ್ಥಳೀಯರಾದ ಶಿವಕುಮಾರ್ ಮತ್ತು ಎಸ್. ಭರತ್ ಕುಟುಂಬಸ್ಥರು ಸತ್ಯನಾರಾಯಣ ಪೂಜೆ ನೆರವೇರಿಸುವ ಮೂಲಕ ಆಚರಣೆಗೆ ಮತ್ತುಷ್ಟು ವೈಭವ ತಂದು ಕೊಟ್ಟಿದ್ದಾರೆ. ಅರ್ಚಕ ಪ್ರದೀಪ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ನೆರವೇರಿದವು. 
    ಈ ಬಾರಿ ಉಗ್ರ ನರಸಿಂಹನ ಪ್ರತಿ ರೂಪವಾಗಿ ಅಕರ್ಷಕ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಈ ಮೂರ್ತಿಯನ್ನು ಸಿದ್ದಾರೂಢನಗರ ಶಿಲ್ಪ ಕಲಾವಿದರು ನಿರ್ಮಿಸಿದ್ದಾರೆ. ಮೂರ್ತಿ ಸುಮಾರು ೮ ಅಡಿ ಎತ್ತರವಿದ್ದು, ಸೆ.೨೨ರಂದು ಜನ್ನಾಪುರ-ಸಿದ್ದಾಪುರ ಕೆರೆಯಲ್ಲಿ ವಿಸರ್ಜನೆಗೊಳ್ಳಲಿದೆ.