ಭಾನುವಾರ, ಸೆಪ್ಟೆಂಬರ್ 21, 2025

ಶ್ರೀ ಮರುಳಸಿದ್ದೇಶ್ವರ ಸ್ವಾಮಿ ಗದ್ದಿಗೆ ಮಠದಲ್ಲಿ ನಾಡಹಬ್ಬ ಶರನ್ನವರಾತ್ರಿ ದಸರಾ ಮಹೋತ್ಸವ 

ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮರುಳಸಿದ್ದೇಶ್ವರ ಜನಕಲ್ಯಾಣ ಧಾರ್ಮಿಕ ಟ್ರಸ್ಟ್ ಗೌರವಾಧ್ಯಕ್ಷರಾದ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. 
    ಭದ್ರಾವತಿ : ಜೇಡಿಕಟ್ಟೆ, ಹೊಸೂರು ಶ್ರೀ ಮರುಳಸಿದ್ದೇಶ್ವರ ಜನಕಲ್ಯಾಣ ಧಾರ್ಮಿಕ ಟ್ರಸ್ಟ್ ವತಿಯಿಂದ ಸೆ. ೨೨ ರಿಂದ ಅ.೨ರವರೆಗೆ ೯ನೇ ವರ್ಷದ ನಾಡಹಬ್ಬ ಶರನ್ನವರಾತ್ರಿ ದಸರಾ ಮಹೋತ್ಸವ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಗೌರವಾಧ್ಯಕ್ಷರಾದ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. 
    ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷ ಸಹ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ಗದ್ದಿಗೆ ಮಠದಲ್ಲಿ ನಾಡಹಬ್ಬ ಶರನ್ನವರಾತ್ರಿ ದಸರಾ ಮಹೋತ್ಸವ ಪ್ರಯುಕ್ತ ಪ್ರತಿದಿನ ಸಂಜೆ ೬.೩೦ ರಿಂದ ಭಕ್ತಿ ಗೀತೆಗಳ ಗಾಯನ ಮತ್ತು ಭಜನೆ, ನಂತರ ರಾತ್ರಿ ೮.೩೦ ರಿಂದ ೯ರವರೆಗೆ ವಿಶೇಷ ಅಲಂಕಾರ ಮತ್ತು ಪೂಜೆ ಮಹಾಮಂಗಳಾರತಿ ಹಾಗು ಪ್ರಸಾದ ವಿನಿಯೋಗ ಜರುಗಲಿದೆ. 
    ಸೆ.೩೦ರ ಮಂಗಳವಾರ ಗ್ರಾಮ ದೇವತೆ ಶ್ರೀ ಕರಿಯಮ್ಮ ದೇವಿ ದೇವಾಲಯದ ಹತ್ತಿರ ದುರ್ಗಾಷ್ಠಿಮಿಯಂದು ದುರ್ಗಾಹೋಮ ನಂತರ ಮಧ್ಯಾಹ್ನ ೧೨.೩೦ಕ್ಕೆ ಪೂರ್ಣಾಹುತಿ ಮತ್ತು  ಪ್ರಸಾದ ವಿನಿಯೋಗ ನಡೆಯಲಿದೆ. ಅ.೨ರ ಗುರುವಾರ ಬೆಳಿಗ್ಗೆ ೬.೩೦ಕ್ಕೆ ಎಲ್ಲಾ ದೇವರುಗಳಿಗೆ ವಿಶೇಷ ಪೂಜೆ ನಂತರ ೧೧ ಗಂಟೆಗೆ ಮಂಗಳವಾದ್ಯ, ವೀರಗಾಸೆ, ಡೊಳ್ಳು ಕುಣಿತದೊಂದಿಗೆ ಪ್ರಮುಖ ರಾಜಬೀದಿ ಉತ್ಸವ ಮೆರವಣಿಗೆ ನಡೆಯಲಿದೆ. ಸಂಜೆ ೫ ಗಂಟೆಗೆ ಶ್ರೀ ಚೌಡೇಶ್ವರಿ ದೇವಿಯ ಪೂಜೆಯೊಂದಿಗೆ ಶಕ್ತಿದೇವತೆ ಶ್ರೀ ಕರಿಯಮ್ಮದೇವಿ ದೇವಾಲಯದ ಬನ್ನಿ ಮಂಟಪದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ  ಆಗಮಿಸಿ ಶರನ್ನವರಾತ್ರಿ ದಸರಾ ಮಹೋತ್ಸವ ಯಶಸ್ವಿಗೊಳಿಸುವಂತೆ ಕೋರಿದರು. 
    ಶ್ರೀ ಮರುಳಸಿದ್ದೇಶ್ವರ ಜನಕಲ್ಯಾಣ ಧಾರ್ಮಿಕ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ಪ್ರಮುಖರಾದ ವಾಗೀಶ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

ಶ್ರೀ ಶಾರದಾ ಶರನ್ನವರಾತ್ರೋತ್ಸವ : ಪ್ರಸೂತಿಕಾ ಅಲಂಕಾರ

ಭದ್ರಾವತಿ ಸಿದ್ಧಾರೂಢ ನಗರದ ಶ್ರೀ ಶೃಂಗೇರಿ ಶಂಕರಮಠದಲ್ಲಿ ೨೫ನೇ ವರ್ಷದ ಶ್ರೀ ಶಾರದಾ ಶರನ್ನವರಾತ್ರೋತ್ಸವ ಪ್ರತಿ ವರ್ಷದಂತೆ ಈ ಬಾರಿಯೂ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಭಾನುವಾರ ಅಮ್ಮನವರಿಗೆ ಜಗತ್ ಪ್ರಸೂತಿಕಾ ಅಲಂಕಾರ ಕೈಗೊಳ್ಳಲಾಗಿತ್ತು. 
    ಭದ್ರಾವತಿ: ಸಿದ್ಧಾರೂಢ ನಗರದ ಶ್ರೀ ಶೃಂಗೇರಿ ಶಂಕರಮಠದಲ್ಲಿ ೨೫ನೇ ವರ್ಷದ ಶ್ರೀ ಶಾರದಾ ಶರನ್ನವರಾತ್ರೋತ್ಸವ ಪ್ರತಿ ವರ್ಷದಂತೆ ಈ ಬಾರಿಯೂ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಭಾನುವಾರ ಅಮ್ಮನವರಿಗೆ ಜಗತ್ ಪ್ರಸೂತಿಕಾ ಅಲಂಕಾರ ಕೈಗೊಳ್ಳಲಾಗಿತ್ತು. 
    ಪ್ರತಿ ವರ್ಷ ಮಹಾಲಯ ಅಮಾವಾಸ್ಯೆ ದಿನದಂದು ಶರನ್ನವರಾತ್ರೋತ್ಸವಕ್ಕೆ ಚಾಲನೆ ನೀಡುವುದು ಇಲ್ಲಿ ವಿಶೇಷವಾಗಿದೆ. ಭಕ್ತರು ಅಮ್ಮನವರ ದರ್ಶನ ಪಡೆದು ಕಣ್ತುಂಬಿಕೊಂಡರು. ಸೆ.೨೨ರಂದು ಸಹಸ್ರಮೋದಕ ಶ್ರೀ ಮಹಾಗಣಪತಿ ಹೋಮ ಹಾಗೂ ಸೆ.೩೦ರಿಂದ ಅ.೨ರವರೆಗೆ ಪ್ರತಿನಿತ್ಯ ಬೆಳಿಗ್ಗೆ ಶ್ರೀ ಚಂಡಿಕಾಹೋಮ, ಪ್ರತಿದಿನ ಸಂಜೆ ಅಮ್ಮನವರಿಗೆ ವಿಶೇಷ ಅಲಂಕಾರ, ಶ್ರೀ ಲಲಿತಾ ಸಹಸ್ರನಾಮ ಪಾರಾಯಣ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಶ್ರೀ ಶೃಂಗೇರಿ ಗುರುಗಳ ಆಶೀರ್ವಾದದೊಂದಿಗೆ ಏರ್ಪಡಿಸಲಾಗಿದೆ. 

ಸಹಕಾರ ಸಂಘದಲ್ಲಿ ಸದಸ್ಯರ ಸಹಕಾರವಿದ್ದರೆ ಮಾತ್ರ ಸಹಕಾರ ಸಂಘಗಳ ಬೆಳವಣಿಗೆ ಸಾಧ್ಯ : ಜಿ.ಟಿ ಬಸವರಾಜ್

ಭದ್ರಾವತಿ ಹಳೇನಗರದ ಶ್ರೀ ಭಗೀರಥ ಸಮುದಾಯ ಭವನದಲ್ಲಿ ಜರುಗಿದ ಮಾಡೆಲ್ ಹೌಸಿಂಗ್ ಸೊಸೈಟಿ ೨೦೨೪-೨೫ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ಅಧ್ಯಕ್ಷ ಜಿ.ಟಿ ಬಸವರಾಜ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ: ಸಹಕಾರ ಸಂಘದಲ್ಲಿ ಸದಸ್ಯರ ಸಹಕಾರವಿದ್ದರೆ ಮಾತ್ರ ಸಹಕಾರ ಸಂಘಗಳ ಬೆಳವಣಿಗೆ ಸಾಧ್ಯವಾಗುತ್ತದೆ. ಎಲ್ಲರ ಸಹಕಾರದ ಹಾದಿಯಲ್ಲಿ ಸಾಗಿರುವ ಆಡಳಿತ ಮಂಡಳಿಯಿಂದ ಲಾಭಾಂಶಗಳಿಸುವಂತಾಗಿದೆ. ಈ ಹಿನ್ನಲೆಯಲ್ಲಿ ಸದಸ್ಯರಿಗೆ ಶೇ. ೧೦ ಡಿವಿಡೆಂಡ್ ನೀಡುವುದಾಗಿ ನಗರದ ಮಾಡೆಲ್ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಿ.ಟಿ.ಬಸವರಾಜ್ ಹೇಳಿದರು.
    ಅವರು ಹಳೇನಗರದ ಶ್ರೀ ಭಗೀರಥ ಸಮುದಾಯ ಭವನದಲ್ಲಿ ೨೦೨೪-೨೫ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
    ಸದಸ್ಯರಿಗೆ ಅ.೧೫ರಿಂದ ಡಿವಿಡೆಂಡ್ ನೀಡಲಾಗುವುದು. ಮುಂದಿನ ದಿನಗಳಲ್ಲೂ ಇದೆ ರೀತಿ ಸಹಕಾರ ನೀಡುವಂತೆ ಕೋರಿದರು. ಸಭೆ ಆರಂಭದಲ್ಲಿ ಸೊಸೈಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ನಿಧನ ಹೊಂದಿರುವ ಎನ್. ಕೃಷ್ಣಮೂರ್ತಿ ಮತ್ತು ಆಡಳಿತ ಮಂಡಳಿಯ ಟಿ.ಎನ್ ರಮೇಶ್ ಸೇರಿದಂತೆ ಇನ್ನಿತರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.  
    ನಿರ್ದೇಶಕ ಎಂ.ಎಸ್ ಸತೀಶ್ ವಾರ್ಷಿಕ ವರದಿ ವಾಚಿಸಿದರು. ಉಪಾಧ್ಯಕ್ಷ ನರಸಿಂಹಸ್ವಾಮಿ ಲೆಕ್ಕಪತ್ರ ಮಂಡಿಸಿದರು. ಹಿರಿಯ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಸದಸ್ಯರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. 
    ಆಡಳಿತ ಮಂಡಳಿ ನಿರ್ದೇಶಕರಾದ ನರಸಿಂಹಸ್ವಾಮಿ, ವಿಶ್ವನಾಥಕೋಠಿ, ಕೆ.ಎನ್ ಭೈರಪ್ಪಗೌಡ, ಬಿ.ಪಿ ಶಂಕರ್, ಸಣ್ಣಯ್ಯ, ಎಂ. ನಾಗರಾಜ್, ರಮೇಶ್, ಸಿ.ಆರ್ ಶಿವರಾಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಎಂ. ಚಾರ್ವಿಕ ಪ್ರಾರ್ಥಿಸಿ, ಬಿ.ಪಿ ಶಂಕರ್ ಸ್ವಾಗತಿಸಿದರು. ಶಂಕರ್ ನಿರೂಪಿಸಿದರು.

ಶನಿವಾರ, ಸೆಪ್ಟೆಂಬರ್ 20, 2025

ಬಿಸಿಎಂ ಇಲಾಖೆ ನಿವೃತ್ತ ನೌಕರ ದುರ್ಗಾಭೋವಿ ನಿಧನ

ದುರ್ಗಾಭೋವಿ 
    ಭದ್ರಾವತಿ : ನಗರಸಭೆ ವ್ಯಾಪ್ತಿ ಹೊಸಮನೆ ಭೋವಿಕಾಲೋನಿ ನಿವಾಸಿ, ಬಿಸಿಎಂ ಇಲಾಖೆ ನಿವೃತ್ತ ನೌಕರ ದುರ್ಗಾಭೋವಿ(೬೪) ಶುಕ್ರವಾರ ರಾತ್ರಿ ನಿಧನರಾದರು. 
    ಇವರಿಗೆ ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಭೋವಿ ಕಾಲೋನಿ ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರ ಅಂತ್ಯಕ್ರಿಯೆ ಶನಿವಾರ ಸಂಜೆ ಹೊಳೆಹೊನ್ನೂರು ರಸ್ತೆ, ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು, ಭೋವಿ ಸಮಾಜದ ಮುಖಂಡರು ಸಂತಾಪ ಸೂಚಿಸಿದ್ದಾರೆ. 

ನಗರದ ಶ್ರೀ ಶೃಂಗೇರಿ ಶಂಕರಮಠದಲ್ಲಿ ೨೫ನೇ ವರ್ಷದ ಶ್ರೀ ಶಾರದಾ ಶರನ್ನವರಾತ್ರೋತ್ಸವ


ಭದ್ರಾವತಿ : ಸಿದ್ಧಾರೂಢ ನಗರದ ಶ್ರೀ ಶೃಂಗೇರಿ ಶಂಕರಮಠದಲ್ಲಿ ಸೆ.೨೧ರಿಂದ ಅ.೨ರವರೆಗೆ ೨೫ನೇ ವರ್ಷದ ಶ್ರೀ ಶಾರದಾ ಶರನ್ನವರಾತ್ರೋತ್ಸವ ಪ್ರತಿ ವರ್ಷದಂತೆ ಈ ಬಾರಿಯೂ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. 
ಸೆ.೨೨ರಂದು ಸಹಸ್ರಮೋದಕ ಶ್ರೀ ಮಹಾಗಣಪತಿ ಹೋಮ ಹಾಗೂ ಸೆ.೩೦ರಿಂದ ಅ.೨ರವರೆಗೆ ಪ್ರತಿನಿತ್ಯ ಬೆಳಿಗ್ಗೆ ಶ್ರೀ ಚಂಡಿಕಾಹೋಮ, ಪ್ರತಿದಿನ ಸಂಜೆ ಅಮ್ಮನವರಿಗೆ ವಿಶೇಷ ಅಲಂಕಾರ, ಶ್ರೀ ಲಲಿತಾ ಸಹಸ್ರನಾಮ ಪಾರಾಯಣ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಶ್ರೀ ಶೃಂಗೇರಿ ಗುರುಗಳ ಆಶೀರ್ವಾದದೊಂದಿಗೆ ಏರ್ಪಡಿಸಲಾಗಿದೆ. 
ಭಕ್ತರು ಪ್ರತಿ ವರ್ಷದಂತೆ ಈ ಬಾರಿ ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಧರ್ಮಾಧಿಕಾರಿ ಕೆ.ಆರ್. ಸುಬ್ಬರಾವ್ ವಿನಂತಿಸಿಕೊಂಡಿದ್ದಾರೆ.

ಎಚ್.ವಿ ಶಿವರುದ್ರಪ್ಪರಿಗೆ ದಸರಾ ಉದ್ಘಾಟನೆಗೆ ಅಧಿಕೃತ ಆಹ್ವಾನ

ಈ ಬಾರಿ ಭದ್ರಾವತಿ ನಗರಸಭೆಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆಗೆ ಸೆ.೨೨ರ ಸೋಮವಾರ ಬೆಳಿಗ್ಗೆ ೧೦.೩೦ಕ್ಕೆ ಚಾಲನೆ ನೀಡಲಿರುವ ನಗರದ ಹಿರಿಯ ಸಮಾಜ ಸೇವಕ ಹೆಬ್ಬಂಡಿ ವೀರಪ್ಪ ಶಿವರುದ್ರಪ್ಪ ಅವರನ್ನು ನಾಡಹಬ್ಬ ದಸರಾ ಆಚರಣಾ ಸಮಿತಿ ವತಿಯಿಂದ ಅಧಿಕೃತವಾಗಿ ಆಹ್ವಾನಿಸಲಾಯಿತು. 
    ಭದ್ರಾವತಿ : ಈ ಬಾರಿ ನಗರಸಭೆಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆಗೆ ಸೆ.೨೨ರ ಸೋಮವಾರ ಬೆಳಿಗ್ಗೆ ೧೦.೩೦ಕ್ಕೆ ಚಾಲನೆ ನೀಡಲಿರುವ ನಗರದ ಹಿರಿಯ ಸಮಾಜ ಸೇವಕ ಹೆಬ್ಬಂಡಿ ವೀರಪ್ಪ ಶಿವರುದ್ರಪ್ಪ ಅವರನ್ನು ನಾಡಹಬ್ಬ ದಸರಾ ಆಚರಣಾ ಸಮಿತಿ ವತಿಯಿಂದ ಅಧಿಕೃತವಾಗಿ ಆಹ್ವಾನಿಸಲಾಯಿತು. 
    ನಗರದ ಲೋಯರ್ ಹುತ್ತಾ ಸಹ್ಯಾದ್ರಿ ಬಡವಾವಣೆಯಲ್ಲಿರುವ ಎಚ್.ವಿ ಶಿವರುದ್ರಪ್ಪರವರ ನಿವಾಸಕ್ಕೆ ತೆರಳಿ ಅವರನ್ನು ಸನ್ಮಾನಿಸುವ ಮೂಲಕ ಆಹ್ವಾನ ಪತ್ರಿಕೆ ನೀಡಲಾಯಿತು. ಆಹ್ವಾನ ಸ್ವೀಕರಿಸಿದ ಶಿವರುದ್ರಪ್ಪ ಸಂತಸ ವ್ಯಕ್ತಪಡಿಸುವ ಮೂಲಕ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ನಾಡಹಬ್ಬ ದಸರಾ ಆಚರಣಾ ಸಮಿತಿಗೆ ಕೃತಜ್ಞತೆ ಸಲ್ಲಿಸಿದರು. 
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೌರಾಯುಕ್ತ ಎನ್.ಕೆ ಹೇಮಂತ್, ಸದಸ್ಯೆ ಅನಿತಾ ಮಲ್ಲೇಶ್, ಲೆಕ್ಕಾಧಿಕಾರಿ ಗಿರಿರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಪರುಸಪ್ಪ ಕುರುಬರ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್ ಸೇರಿದಂತೆ ಇನ್ನಿತರರನ್ನು ಸಹ ನಾಡಹಬ್ಬ ದಸರಾ ಆಚರಣೆಗೆ ಆಹ್ವಾನಿಸಲಆವರಣದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಿದ್ದಾರೆ. 

ರಾತ್ರಿ ವೇಳೆ ವೈದ್ಯರೊಬ್ಬರ ಮನೆಯ ಆವರಣಕ್ಕೆ ನುಗ್ಗಿದ್ದ ಮಂಕಿಕ್ಯಾಪ್ ಧರಿಸಿದ ಗುಂಪು

ಸಿದ್ದಾರೂಢನಗರದಲ್ಲಿ ಘಟನೆ, ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯ 

ಭದ್ರಾವತಿ ನಗರಸಭೆ ವ್ಯಾಪ್ತಿಯ ಪ್ರಮುಖ ಬಡಾವಣೆಗಳಲ್ಲಿ ಒಂದಾಗಿರುವ ಸಿದ್ದಾರೂಢನಗರದಲ್ಲಿ ರಾತ್ರಿ ವೇಳೆ ೭-೮ ಜನರ ಗುಂಪೊಂದು ಸಂಚರಿಸಿ ವೈದ್ಯರೊಬ್ಬರ ಮನೆಯ ಕಾಂಪೌಂಡ್ ಪ್ರವೇಶಿಸಿರುವ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯ ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಸಂಬಂಧ ಪೊಲೀಸಲು ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಪ್ರಮುಖ ಬಡಾವಣೆಗಳಲ್ಲಿ ಒಂದಾಗಿರುವ ಸಿದ್ದಾರೂಢನಗರದಲ್ಲಿ ರಾತ್ರಿ ವೇಳೆ ೭-೮ ಜನರ ಗುಂಪೊಂದು ಸಂಚರಿಸಿ ವೈದ್ಯರೊಬ್ಬರ ಮನೆಯ ಕಾಂಪೌಂಡ್ ಪ್ರವೇಶಿಸಿರುವ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯ ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಸಂಬಂಧ ಪೊಲೀಸಲು ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. 
    ಸಿದ್ದರೂಢನಗರದ ಪ್ರಸಿದ್ದ ವೈದ್ಯ ಡಾ. ಅಶ್ವತ್ಥ್‌ನಾರಾಯಣರವರ ಕ್ಲಿನಿಕ್ ಒಳಗೊಂಡಿರುವ ನಿವಾಸದ ಕಾಂಪೌಂಡ್ ಒಳಗೆ ರಾತ್ರಿ ವೇಳೆ ಮಂಕಿಕ್ಯಾಪ್ ಧರಿಸಿರುವ ಗುಂಪು ನುಗ್ಗಿದ್ದು, ಕೆಲವು ಸಮಯಗಳ ನಂತರ ಹಿಂದಿರುಗಿದೆ. ಈ ವೇಳೆಗೆ ಈ ಮಾರ್ಗದಲ್ಲಿ ಬೀಟ್ ಪೊಲೀಸರು ಸಹ ಸಂಚರಿಸಿದ್ದು, ಆದರೆ ಈ ಗುಂಪಿನ ಬಗ್ಗೆ ಯಾವುದೇ ಮಾಹಿತಿ ಅವರಿಗೆ ತಿಳಿದಿಲ್ಲ ಎನ್ನಲಾಗಿದೆ. 
    ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯ ವ್ಯಾಪಕವಾಗಿ ಹರಿದಾಡುತ್ತಿದ್ದು, ನಿವಾಸಿಗಳಲ್ಲಿ ಆತಂಕ ಉಂಟು ಮಾಡಿದೆ. ಈ ಹಿನ್ನಲೆಯಲ್ಲಿ ಮಾಹಿತಿ ತಿಳಿದ ಪೊಲೀಸರು ಡಾ. ಅಶ್ವಸ್ಥ್‌ನಾರಾಯಣರವರ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ೭-೮ ಜನರ ಗುಂಪು ಬಂದು ಹೋಗಿರುವುದು ತಿಳಿದು ಬಂದಿದೆ. ಆದರೆ ಈ ಗುಂಪಿನಿಂದ ನಿವಾಸಿಗಳಿಗೆ ಯಾವುದೇ ತೊಂದರೆಯಾಗಿಲ್ಲ. ಈ ಹಿನ್ನಲೆಯಲ್ಲಿ ಯಾರು ದೂರು ನೀಡಿಲ್ಲ. ಈ ಘಟನೆ ಕಳೆದ ೨ ದಿನಗಳ ಹಿಂದೆ ನಡೆದಿದೆ. ಆದರೆ ಈ ಘಟನೆ ಸಂಬಂಧ ಚೆಡ್ಡಿ ಗ್ಯಾಂಗ್ ಎಂದು ಸುಳ್ಳು ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಚಡ್ಡಿ ಗ್ಯಾಂಗ್ ಹಾಗು ಈ ಗುಂಪಿಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.